ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಅರೆರೆ, ಷೇರುಪೇಟೆಯಲ್ಲಿ ‘ಸಮಾಜ ಸೇವೆ’!

Last Updated 24 ಜುಲೈ 2020, 20:30 IST
ಅಕ್ಷರ ಗಾತ್ರ
ADVERTISEMENT
""

‘ಸಾಮಾಜಿಕ ಷೇರು ವಿನಿಮಯ’ (ಎಸ್‌ಎಸ್‌ಇ) ವ್ಯವಸ್ಥೆಯನ್ನು ಆರಂಭಿಸುವ ಕುರಿತು 2019ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವ ಭಾರತವು, ನಿಯಮದ ಪ್ರಕಾರ, ‘ಸುಸ್ಥಿರ ಷೇರು ವಿನಿಮಯ’ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸಲು ಭಾರತವು ₹75 ಲಕ್ಷ ಕೋಟಿ (1 ಟ್ರಿಲಿಯನ್ ಯುಎಸ್‌ಡಿ) ವ್ಯಯಿಸಬೇಕಿದೆ ಎಂದು ಅಂದಾಜು ಮಾಡಲಾಗಿದೆ. ಸರ್ಕಾರ, ಸಾರ್ವಜನಿಕ ವಲಯ ಹಾಗೂ ಎನ್‌ಜಿಒ ವ್ಯಯಿಸಬಹುದಾದ ಒಟ್ಟು ಸಾಮರ್ಥ್ಯ₹33 ಲಕ್ಷ ಕೋಟಿ. ಕಡಿಮೆ ಬಿದ್ದಿರುವ ₹42 ಲಕ್ಷ ಕೋಟಿಯನ್ನು ಕ್ರೋಡೀಕರಿಸಲು ಖಾಸಗಿ ಬಂಡವಾಳವೇ ಆಧಾರ. ಅಷ್ಟೊಂದು ಬೃಹತ್‌ ಪ್ರಮಾಣದ ಬಂಡವಾಳವನ್ನು ಎಸ್‌ಎಸ್‌ಇ ಆಕರ್ಷಿಸಲಿದೆ ಎಂದು ನಂಬಲಾಗಿದೆ. ಈ ಹೊಸ ಪರಿಕಲ್ಪನೆಯ ಮೇಲೊಂದು ನೋಟ ಇಲ್ಲಿದೆ...

ಯಾರೇ ಆಗಲಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲ ಉದ್ದೇಶವೇ ಲಾಭ ಮಾಡಲಿಕ್ಕಲ್ಲವೇ? ಉದ್ಯಮದ ಕುರಿತ ಸಾಮಾನ್ಯ ಗ್ರಹಿಕೆ ಕೂಡ ಇದೇ ಆಗಿದೆ. ಅದಕ್ಕಾಗಿ ಷೇರು ವಿನಿಮಯ ಕೇಂದ್ರದಲ್ಲಿ ಕಂಪನಿಯ ಹೆಸರನ್ನು ನೋಂದಾಯಿಸಿ, ಸಾರ್ವಜನಿಕರಿಂದ ಸಂಪನ್ಮೂಲ ಕ್ರೋಡೀಕರಣ ಮಾಡುವುದು ರೂಢಿ. ಬಂಡವಾಳ ಹೂಡಿಕೆದಾರರಿಗೆ, ಅವರ ಹೂಡಿಕೆಗೆ ಪ್ರತಿಯಾಗಿ ಲಾಭಾಂಶ ಹೋಗುತ್ತದೆ. ಹೀಗೆ ಬಂಡವಾಳ ಕ್ರೋಡೀಕರಣ ಮಾಡುವ ಕಂಪನಿಗಳು ತನ್ನ ನಿಯಂತ್ರಣದಲ್ಲಿದ್ದು, ಅವುಗಳ ವ್ಯವಹಾರ ಪಾರದರ್ಶಕವಾಗಿದೆ ಎಂಬುದನ್ನು ನಿಯಂತ್ರಣ ಮಂಡಳಿಯು ಖಾತರಿ ಪಡಿಸುತ್ತದೆ. ಷೇರು ವಿನಿಮಯ ಮಾರುಕಟ್ಟೆ ಜನ್ಮತಾಳಿದ ಬಗೆ ಇದು.

ಸಾಮಾಜಿಕ ಷೇರು ವಿನಿಮಯವು ಇದಕ್ಕಿಂತ ತುಸು ಭಿನ್ನ. ಮುಖ್ಯ ವ್ಯತ್ಯಾಸ ಏನೆಂದರೆ, ಈ ವಿಧದ ಕಂಪನಿಗಳಲ್ಲಿ ಯಾವುದೇ ವ್ಯಕ್ತಿಗೆ ಲಾಭ ಮಾಡಿಕೊಡುವ ಉದ್ದೇಶ ಇರುವುದಿಲ್ಲ. ಅದರ ಬದಲು ಸಾಮಾಜಿಕ ಹಿತ ಕಾಯುವುದೇ ಮುಖ್ಯ ಗುರಿಯಾಗಿರುತ್ತದೆ. ಆದರೆ, ಈ ಕಂಪನಿಗಳು ಸಹ ಸಾಮಾನ್ಯ ಕಂಪನಿಗಳಂತೆಯೇ ನಿಯಂತ್ರಣ ವ್ಯವಸ್ಥೆಗೆ ಒಳಪಟ್ಟಿರುತ್ತವೆ.

ಈ ಕಂಪನಿಗಳು ಲಾಭ ಗಳಿಸುತ್ತಿದ್ದರೆ ಪಾರದರ್ಶಕವಾಗಿಅದನ್ನು ಬಹಿರಂಗಪಡಿಸುತ್ತವೆ ಮತ್ತು ಹೂಡಿಕೆದಾರರ ಆಸಕ್ತಿಯನ್ನು ಸಹ ರಕ್ಷಿಸುತ್ತವೆ. ಹೂಡಿಕೆದಾರರು, ಇತರ ಹೂಡಿಕೆಗಳಲ್ಲಿ ಸಿಗುವಷ್ಟೇ ಆದಾಯವನ್ನು ಇಲ್ಲಿಯೂ ನಿರೀಕ್ಷಿಸಬಹುದು. ಆದರೆ, ಈ ಕಂಪನಿಗಳ ಮೂಲ ಉದ್ದೇಶ ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿಯೇ ಆಗಿರುತ್ತದೆ.

ಲಾಭದ ಬೆನ್ನಹಿಂದೆ ಬಿದ್ದು ಭೂಮಿಯ ಸುರಕ್ಷತೆಯನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದಿದ್ದ ಕಂಪನಿಗಳ ಮೇಲೆ ಇತ್ತೀಚೆಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಡೆದುಕೊಳ್ಳುವಂತೆ ಒತ್ತಡ ಹೆಚ್ಚುತ್ತಾ ಬಂದಿದೆ. ಹೂಡಿಕೆದಾರರು ಈಗ ಲಾಭವನ್ನು ಮಾತ್ರವಲ್ಲ, ಕಂಪನಿಯು ಹೊಂದಿರುವ ಪರಿಸರ ಹಾಗೂ ಸಾಮಾಜಿಕ ಬಾಧ್ಯತೆ ಮತ್ತು ಅದರ ಆಡಳಿತ – ಎಲ್ಲವನ್ನೂ ನೋಡಲಾರಂಭಿಸಿದ್ದಾರೆ. ಇದನ್ನೇ ಇಎಸ್‌ಜಿ (ಆರ್ಥಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ) ಚಿಂತನೆ ಎಂದು ಕರೆಯಲಾಗಿದೆ. ವ್ಯಾವಹಾರಿಕ ಜಗತ್ತಿನಲ್ಲಿ ಇದನ್ನು ಟ್ರಿಪಲ್ ಬಾಟಮ್ ಲೈನ್ - ಜನ, ಭೂಮಿ ಮತ್ತು ಲಾಭ – ಎಂದು ಹೆಸರಿಸಲಾಗಿದೆ.

ಉದ್ಯಮ ರಂಗದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ವಿಶ್ವಸಂಸ್ಥೆಯು 2009ರಲ್ಲಿ ಕೊಟ್ಟ ಪರಿಕಲ್ಪನೆಯೇ ಸಾಮಾಜಿಕ ಷೇರು ವಿನಿಮಯ. ಲಾಭವನ್ನು ಮಾಡುವ ಜತೆಗೆ ಸಮಾಜದ ಒಳಿತಿಗಾಗಿ ಕಂಪನಿ ಏನು ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅದು ಸೂಚಿಸಿದೆ. ಖಾಸಗಿ ವ್ಯಕ್ತಿಗಳು ಮಾಡಿಕೊಳ್ಳುವ ಲಾಭವು ಸಾಮಾಜಿಕ ಲಾಭದೊಂದಿಗೆ ಸಮ್ಮಿಳಿತವಾಗುವ ಪರಿಕಲ್ಪನೆ ಬೆಳೆದಿದೆ.

ಸೆಬಿಯ ಕಾರ್ಯಪಡೆ ಹಾಗೂ ಅದರ ವರದಿ

lಎಸ್ಎಸ್‌ಸಿ ಸ್ಥಾಪನೆ ಕುರಿತ ನಿಯಮಗಳನ್ನು ಅಂತಿಮಗೊಳಿಸಲು ‘ಸೆಬಿ’ಯು ಒಂದು ಕಾರ್ಯಪಡೆಯನ್ನು ಕಟ್ಟಿದೆ. ಈ ಹಿಂದೆ ಎಸ್‌ಬಿಐ ಹಾಗೂ ಟಾಟಾ ಗ್ರೂಪ್‌ ಜತೆ ಇದ್ದ ಇಶಾಂತ್ ಹುಸೇನ್ ಅವರು ತಂಡದ ನೇತೃತ್ವ ವಹಿಸಿದ್ದಾರೆ. ಬಹುತೇಕ ಎಲ್ಲ ಸದಸ್ಯರು ಹಣಕಾಸಿನ ಜಗತ್ತಿನ ಒಡನಾಡಿಗಳು. ಒಬ್ಬ ಸದಸ್ಯ ಮಾತ್ರ ನಾಗರಿಕ ಸಮಾಜ/ಎನ್‌ಜಿಒ ಅನ್ನು ಪ್ರತಿನಿಧಿಸುತ್ತಿದ್ದಾರೆ

lವರದಿಯಲ್ಲಿ ‘ಸಾಮಾಜಿಕ ಉದ್ಯಮ’ದ ಅರ್ಥೈಸುವಿಕೆಯನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸದೇ ಕೈಬಿಡಲಾಗಿದೆ. ಇದರಿಂದ ಗೊಂದಲ ಉಂಟಾಗಲಿದೆ

lವರದಿಯು ಬಂಡವಾಳ ಹೂಡಿಕೆದಾರರು ಹಾಗೂ ಅವರ ಆದಾಯವನ್ನಷ್ಟೇ ಕೇಂದ್ರೀಕರಿಸುತ್ತದೆ. ಹೂಡಿದ ಬಂಡವಾಳ ವಾಪಸ್‌ ಪಡೆಯುವುದನ್ನು ಖಾತ್ರಿಪಡಿಸುತ್ತದೆ. ಪ್ರಸ್ತುತ ಪ್ರಸ್ತಾಪಿಸಲಾದ ಹೂಡಿಕೆ ಅಂಶಗಳು ಸಾಕಷ್ಟು ಸಂಕೀರ್ಣವಾಗಿವೆ. ಹಣಕಾಸು ವಲಯದ ತಜ್ಞರನ್ನು ಹೊರತುಪಡಿಸಿ ಇತರರು ಇದನ್ನು ಬಳಸುವುದು ಕಷ್ಟ

lಪ್ರಸ್ತುತ ಸ್ವರೂಪದಲ್ಲಿ ವರದಿ ಜಾರಿಗೊಳಿಸಿದರೆ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಎನ್‌ಜಿಒಗಳು ಮುಚ್ಚಲು ದಾರಿಯಾಗುವ ಆತಂಕವಿದೆ

lವರದಿಯಲ್ಲಿರುವ ಅಂಶಗಳ ಜಾರಿಯಿಂದ ದೇಶದ ಸಾಮಾಜಿಕ ವಲಯದ ಚಿತ್ರಣ ಬದಲಾಯಿಸುವುದಷ್ಟೇ ಅಲ್ಲದೇ, ‘ಸೇವೆ’ ಎಂಬ ‍ಪರಿಕಲ್ಪನೆಯನ್ನೇ ಅಪಾಯಕ್ಕೆ ನೂಕುತ್ತದೆ. ಸಾಮಾಜಿಕ ಅಭಿವೃದ್ಧಿ ಎಂಬುದು ಪೂರ್ಣಪ್ರಮಾಣದ ವ್ಯವಹಾರದಂತಾಗಿ, ಹೂಡಿಕೆ ಮಾಡುವ ಸಂಸ್ಥೆಗಳು ಲಾಭ ಗಳಿಸಬಹುದು. ಇದು ಮಾನವ ಅಭಿವೃದ್ಧಿ ಎಂಬ ಭಾರತೀಯ ಆಲೋಚನಾ ಕ್ರಮವನ್ನೇ ದೂರವಿರಿಸುವ ಯತ್ನವಾಗಲಿದೆ

lಸಾಮಾಜಿಕ ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರವನ್ನು ಸೆಬಿ ಗೌಣವಾಗಿ ಕಂಡಿದೆ. ದೇಶದಲ್ಲಿ ನಡೆಯುವ ಎಲ್ಲ ಅಭಿವೃದ್ಧಿ ಕೆಲಸಗಳ ಮೇಲೆ ನಿಯಂತ್ರಣ ಸಾಧಿ ಸುವ, ಮೇಲುಸ್ತುವಾರಿ ನೋಡಿಕೊಳ್ಳುವ ಕೆಲಸವನ್ನು ಸರ್ಕಾರ ಮುಂದುವರಿಸುವ ಅಗತ್ಯವಿದೆ. ಈ ಎಲ್ಲವನ್ನೂ ಖಾಸಗಿಗೆ ವಹಿಸಿಕೊಡುವುದು ದೇಶದ ಹಿತಾಸಕ್ತಿಯಿಂದ ಒಪ್ಪತಕ್ಕ ನಿರ್ಧಾರವಲ್ಲ

ಇಲ್ಲಿವೆ ಕೆಲವು ಮಾದರಿಗಳು...

ಅಮೆರಿಕ

ಅಮೆರಿಕದಲ್ಲಿ 2012ರಲ್ಲಿ ಎಸ್‌ಎಸ್‌ಇ ಸ್ಥಾಪಿಸಲಾಯಿತು. ಆರಂಭದಲ್ಲಿ 12 ಕಂಪನಿಗಳಷ್ಟೇ ಎಸ್‌ಎಸ್‌ಇಯಲ್ಲಿ ನೋಂದಣಿ ಮಾಡಿಕೊಂಡವು. ನಂತರದ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಸೇರಿಕೊಂಡವು. ಅಮೆರಿಕದ ಎಸ್‌ಎಸ್‌ಇಯು ಕಠಿಣ ನಿಯಮಗಳನ್ನು ಹೊಂದಿದೆ. ಇಲ್ಲಿ ನೋಂದಣಿ ಮಾಡಿಕೊಂಡಿರುವ ಕಂಪನಿಗಳು ಲಾಭದ ಕಡೆ ಗಮನ ಕೇಂದ್ರೀಕರಿಸಿವೆ. ಅದೇ ದೊಡ್ಡ ಸಮಸ್ಯೆಯಾಗಿದೆ.

ಕೆನಡಾ

2013ರಲ್ಲಿ ಕಾರ್ಯಾರಂಭ. ಇಲ್ಲಿನ ನಿಯಮಗಳು ಸಾಮಾಜಿಕ ಪರಿಣಾಮ ಮತ್ತು ಆರ್ಥಿಕ ಲಾಭದ ಮಧ್ಯೆ ಸಮತೋಲನ ಸಾಧಿಸಿದೆ. 2018ರಲ್ಲಿ ಅಮೆರಿಕದ ಮಾರುಕಟ್ಟೆಗೂ ಕಾರ್ಯವ್ಯಾಪ್ತಿ ವಿಸ್ತರಣೆ. ಸಾಮಾಜಿಕ ಪರಿಣಾಮಕ್ಕೆ ಆದ್ಯತೆ ನೀಡಿದರೂ, ಆರ್ಥಿಕ ಲಾಭವನ್ನೂ ಕಡೆಗಣಿಸದೇ ಇರುವ ಕಾರಣ ಯಶಸ್ವಿ ಮಾದರಿ ಎನಿಸಿದೆ.

ಬ್ರೆಜಿಲ್‌

2003ರಲ್ಲಿ ಕಾರ್ಯಾರಂಭ ಮಾಡಿತು. ಈ ಎಸ್‌ಎಸ್‌ಇಯು ಸಾಮಾಜಿಕ ಪರಿಣಾಮದ ಮೇಲೆ ಮಾತ್ರ ಗಮನ ಕೇಂದ್ರೀಕರಿಸುತ್ತದೆ. ಆರ್ಥಿಕ ಲಾಭವನ್ನು ಬದಿಗಿರಿಸಲಾಗಿದೆ. ಎಸ್‌ಎಸ್‌ಇಯಲ್ಲಿ ನೋಂದಣಿ ಮಾಡಿಕೊಳ್ಳಲು ಎನ್‌ಜಿಒಗಳು ಕಠಿಣ ನಿಯಮಗಳನ್ನು ಪಾಲಿಸಬೇಕು. ಆರ್ಥಿಕ ಲಾಭವನ್ನು ಕಡೆಗಣಿಸಿದ್ದರೂ ಇದೊಂದು ಯಶಸ್ವಿ ಮಾದರಿಯಾಗಿದೆ.

ಸಿಂಗಪುರ

ಇದೊಂದು ಯಶಸ್ವಿ ಮಾದರಿ ಎನಿಸಿದೆ. ಸಾಮಾಜಿಕ ಪರಿಣಾಮಗಳ ಬಗ್ಗೆ ನಿಯತಕಾಲಿಕವಾಗಿ ವರದಿ ನೀಡಬೇಕು. ಸಾಮಾಜಿಕ ಉದ್ಯಮಗಳು ಬಾಂಡ್‌ ಮೂಲಕ ಹಣ ಕ್ರೋಡೀಕರಿಸಲು ಅವಕಾಶ ನೀಡಲಾಗಿದೆ. ಈ ಬಾಂಡ್‌ಗಳ ಮೇಲೆ ಅತ್ಯಂತ ಕಡಿಮೆ ಪ್ರಮಾಣದ ಬಡ್ಡಿ ನೀಡಬೇಕಿದೆ. ಕ್ರೌಡ್‌ಸೋರ್ಸಿಂಗ್‌ಗೆ ಅವಕಾಶ ನೀಡಲಾಗಿದೆ. ದೊಡ್ಡಮಟ್ಟದ ಹೂಡಿಕೆದಾರರಿಗೆ ಆದ್ಯತೆ ನೀಡಲಾಗುತ್ತದೆ. ಸಣ್ಣ ಹೂಡಿಕೆದಾರರಿಗೆ ಅವಕಾಶ ಇಲ್ಲದಿರುವುದು ಒಂದು ಕೊರತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT