ಶನಿವಾರ, ಸೆಪ್ಟೆಂಬರ್ 19, 2020
23 °C

ಆಳ–ಅಗಲ | ಟೇಬಲ್‌ ಟಾಪ್‌ ರನ್‌ವೇ ಅಪಾಯಕ್ಕೆ ಆಹ್ವಾನವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಯಿಕ್ಕೋಡ್‌ನಲ್ಲಿ ನಡೆದ ವಿಮಾನ ಅಪಘಾತಕ್ಕೆ ಆ ವಿಮಾನ ನಿಲ್ದಾಣದ ರನ್‌ವೇಯ ‘ಟೇಬಲ್‌ ಟಾಪ್‌’ ರಚನೆಯೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. 2010ರಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ 158 ಜನರು ಮೃತಪಟ್ಟಿದ್ದರು. ಮಂಗಳೂರು ವಿಮಾಣ ನಿಲ್ದಾಣವೂ ಟೇಬಲ್‌ ಟಾಪ್‌ ರನ್‌ವೇಯನ್ನು ಹೊಂದಿದೆ. ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿಯೂ ಇಂತಹುದೇ ರನ್‌ವೇ ಇದೆ. ಪರ್ವತ ಪ್ರದೇಶಗಳನ್ನು ಹೊಂದಿರುವ ದೇಶಗಳು ಮತ್ತು ದ್ವೀಪ ರಾಷ್ಟ್ರಗಳಲ್ಲಿ ಟೇಬಲ್‌ ಟಾಪ್‌ ರನ್‌ವೇ ಹೊಂದಿರುವ ಹಲವು ವಿಮಾನ ನಿಲ್ದಾಣಗಳಿವೆ. ಹವಾಮಾನವು ವಿಮಾನ ಇಳಿಸಲು ಪರಿಪೂರ್ಣ ಎನಿಸುವ ಹಾಗೆ ಇದ್ದರೂ ಇಂತಹ ರನ್‌ವೇಗಳಲ್ಲಿ ವಿಮಾನಗಳನ್ನು ಇಳಿಸುವುದು ಅತ್ಯಂತ ಕ್ಲಿಷ್ಟಕರ. ಇಂತಹ ರನ್‌ವೇಗಳಲ್ಲಿ ಅಪಾಯದ ಹಾದಿ ಸದಾ ತೆರೆದೇ ಇರುತ್ತದೆ ಎಂದು ವಾಯುಯಾನ ತಜ್ಞರು ಹೇಳುತ್ತಾರೆ.

ಬೆಟ್ಟವೊಂದನ್ನು ಕಡಿದು ಸಮತಟ್ಟುಗೊಳಿಸಿ ನಿರ್ಮಿಸುವ ರನ್‌ವೇಯನ್ನು ಟೇಬಲ್‌ ಟಾಪ್‌ ರನ್‌ವೇ ಎನ್ನುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ರನ್‌ವೇಯ ಆರಂಭ ಮತ್ತು ಕೊನೆಯ ಭಾಗದಲ್ಲಿ ಆಳವಾದ ಕಣಿವೆ ಇರುತ್ತದೆ. ಕೋಯಿಕ್ಕೋಡ್‌ ವಿಮಾನ ನಿಲ್ದಾಣದ ರನ್‌ವೇಯ ಆರಂಭ ಮತ್ತು ಕೊನೆಯ ಭಾಗಗಳಲ್ಲಿ ಕಡಿದಾದ ಇಳಿಜಾರು ಇದೆ. ವಿಮಾನವು ರನ್‌ವೇಯನ್ನು ದಾಟಿ ಮುಂದೆ ಹೋದರೆ ಎಂಬ ಕಾರಣಕ್ಕೆ ರನ್‌ವೇಯ ನಂತರ ‘ಸುರಕ್ಷಿತ ಪ್ರದೇಶ’ವನ್ನು ಇರಿಸಲಾಗಿದೆ. ಆದರೆ, ಇದರ ಉದ್ದ 240 ಮೀಟರ್ ಮಾತ್ರ. ಅತ್ಯಂತ ವೇಗದಲ್ಲಿ ಧಾವಿಸುವ ವಿಮಾನವು ನಿಯಂತ್ರಣಕ್ಕೆ ಬರಲು ಇದು ಸಾಕಾಗುವುದಿಲ್ಲ. ವಿಮಾನವು ನೇರವಾಗಿ ಕಮರಿಗೆ ಹೋಗುತ್ತದೆ ಮತ್ತು ಅದು ದುರಂತಕ್ಕೆ ಕಾರಣವಾಗುತ್ತದೆ. ಪೈಲಟ್‌ ಕಡೆಯಿಂದಾಗುವ ಲೋಪ ಅಥವಾ ತಾಂತ್ರಿಕ ಸಮಸ್ಯೆಗಳು ಅಪಘಾತಕ್ಕೆ ಕಾರಣ ಆಗಬಹುದು. ಕೋಯಿಕ್ಕೋಡ್‌ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ನಡೆದ ಅಪಘಾತಗಳು ಇದಕ್ಕೆ ಉದಾಹರಣೆ. 

ಮಲಪ್ಪುರ ಜಿಲ್ಲೆಯ ಕರಿಪ್ಪುರ ಎಂಬ ಗುಡ್ಡ ಪ್ರದೇಶದಲ್ಲಿ ಕೋಯಿಕ್ಕೋಡ್‌ ವಿಮಾನ ನಿಲ್ದಾಣ ಇದೆ. ಬೇರೆ ಕಡೆ ಸ್ಥಳದ ತೀವ್ರ ಅಭಾವದ ಕಾರಣ ರಾಜ್ಯ ಸರ್ಕಾರವು ಈ ಪ್ರದೇಶವನ್ನು ವಿಮಾನ ನಿಲ್ದಾಣಕ್ಕೆ ಆಯ್ಕೆ ಮಾಡಿಕೊಂಡಿತ್ತು. ರನ್‌ವೇಯನ್ನು ವಿಸ್ತರಿಸಲು ಕೂಡ ಅಲ್ಲಿ ಸ್ಥಳದ ಅಭಾವ ಇತ್ತು. ಅಗಲ ದೇಹದ ಅಂತರರಾಷ್ಟ್ರೀಯ ವಿಮಾನಗಳು ಈ ನಿಲ್ದಾಣದಲ್ಲಿ ಇಳಿಯುವುದು ಸಾಧ್ಯವೇ ಇಲ್ಲ ಎಂದಾದಾಗ ರನ್‌ವೇಯನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಲಾಗಿತ್ತು. ವಿಮಾನಯಾನ ಮಹಾ ನಿರ್ದೇಶನಾಲಯವು ಇದಕ್ಕೆ ಅನುಮೋದನೆಯನ್ನೂ ನೀಡಿತ್ತು. ಟೇಬಲ್‌ ಟಾಪ್‌ ವಿಮಾನ ನಿಲ್ದಾಣಗಳಲ್ಲಿ ರನ್‌ವೇಯ ಮುಂದೆ, ರನ್‌ವೇಯನ್ನು ದಾಟಿ ಬರುವ ವಿಮಾನದ ವೇಗ ತಗ್ಗಿಸುವ ಕೃತಕ ವ್ಯವಸ್ಥೆ ಇರಬೇಕು ಎಂಬುದು ಕಡ್ಡಾಯ ನಿಯಮ. ಆದರೆ, ಇಂತಹ ವ್ಯವಸ್ಥೆಯೂ ಕೋಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಇಲ್ಲ. 

ಹವಾಮಾನವು ಪರಿಪೂರ್ಣವಾಗಿದ್ದು, ಶುಭ್ರ ಬೆಳಕು ಇದ್ದರೂ ಟೇಬಲ್‌ ಟಾಪ್‌ ರನ್‌ವೇಯಲ್ಲಿ ವಿಮಾನ ಇಳಿಸುವುದು ಸುಲಭವಲ್ಲ. ಅತ್ಯಂತ ಅನುಭವಿ ಪೈಲಟ್‌ಗಳು ಮಾತ್ರ ಇಂತಹ ನಿಲ್ದಾಣಗಳಲ್ಲಿ ವಿಮಾನ ಇಳಿಸಬಹುದು. ಪೈಲಟ್‌ ಕಡೆಯಿಂದ ಆಗಬಹುದಾದ ಯಾವುದೇ ಲೋಪಕ್ಕೆ ಇಲ್ಲಿ ಅವಕಾಶವೇ ಇಲ್ಲ. ಜತೆಗೆ, ಕಣಿವೆಯ ಎರಡೂ ಭಾಗಗಳಿಂದ ಬರುವ ಗಾಳಿ, ಹಿಂಭಾಗದಿಂದ ವಿಮಾನವನ್ನು ಮುಂದಕ್ಕೆ ನೂಕುವ ಗಾಳಿ, ಮುಂಭಾಗದಿಂದ ವಿಮಾನಕ್ಕೆ ಎದುರಾಗಿ ಬರುವ ಗಾಳಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಪೈಲಟ್‌ ವಿಮಾನವನ್ನು ಇಳಿಸಬೇಕಾಗುತ್ತದೆ. ರನ್‌ವೇ ಎಲ್ಲಿ ಕೊನೆಯಾಗುತ್ತದೆ ಎಂಬುದು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹಾಗಾಗಿ, ಇದನ್ನು ಕೂಡ ಪೈಲಟ್‌ ಅಂದಾಜು ಮಾಡಬೇಕಾಗುತ್ತದೆ.

ರನ್‌ವೇಯ ಉದ್ದವು ಸಾಮಾನ್ಯ ರನ್‌ವೇಗಳಿಗಿಂತ ಕಡಿಮೆ ಇರುವುದರಿಂದ ವಿಮಾನದ ವೇಗವನ್ನು ತ್ವರಿತವಾಗಿ ಕಡಿತ ಮಾಡುವುದು ಇಲ್ಲಿ ನಿರ್ಣಾಯಕ. ಕೋಯಿಕ್ಕೋಡ್‌ ನಿಲ್ದಾಣದ ರನ್‌ವೇಯ ಆರಂಭದಿಂದ ಸುಮಾರು ಸಾವಿರ ಮೀಟರ್‌ ದೂರದಲ್ಲಿ ವಿಮಾನವು ನೆಲಸ್ಪರ್ಶಿಸಿತ್ತು. ಹಾಗಾಗಿ, ವಿಮಾನದ ವೇಗ ಕಡಿತ ಮಾಡಲು ಇದ್ದ ಅವಕಾಶವೇ ಕಡಿಮೆಯಾಗಿತ್ತು. ಎದುರುಗಡೆಯಿಂದ ಬರುತ್ತಿದ್ದ ಗಾಳಿಯ ವೇಗವೂ ಕಮ್ಮಿ ಇತ್ತು. 

ಪೈಲಟ್‌ನಲ್ಲಿ ಭ್ರಮೆ ಸೃಷ್ಟಿ ಟೇಬಲ್‌ ಟಾಪ್‌ ರನ್‌ವೇಗಳ ಇನ್ನೊಂದು ಸಮಸ್ಯೆ. ರನ್‌ವೇ ಉದ್ದಕ್ಕೂ ಇದೆ ಎಂದು ಪೈಲಟ್‌ಗೆ ಭಾಸವಾಗುತ್ತದೆ. ಈ ಭ್ರಮೆಯ ಬಗ್ಗೆ ಪೈಲಟ್‌ಗೆ ಸರಿಯಾದ ತಿಳಿವಳಿಕೆ ಇರಬೇಕು. ಇಲ್ಲವಾದರೆ, ವಿಮಾನವು ಕಣಿವೆಯತ್ತ ಸಾಗುವ ಅಪಾಯ ಸದಾ ಇದ್ದೇ ಇರುತ್ತದೆ.


ಕೋಯಿಕ್ಕೋಡ್‌ ವಿಮಾನ ನಿಲ್ದಾಣ

ರಚನಾ ಲೋಪಗಳ ನಿರ್ಲಕ್ಷ್ಯ: ಅಪಘಾತಕ್ಕೆ ಪೈಲಟ್‌ ಲೋಪ ಕಾರಣ ಎಂದು ಹೇಳುವ ಮೂಲಕ ಟೇಬಲ್‌ ಟಾಪ್‌ ವಿಮಾನ ನಿಲ್ದಾಣಗಳ ರಚನೆಯಲ್ಲಿಯೇ ಇರುವ ದೋಷಗಳನ್ನು ನಿರ್ಲಕ್ಷಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಅಪಾಯದ ಬಗ್ಗೆ 2000ನೇ ಇಸವಿಯಿಂದಲೇ ಮತ್ತೆ ಮತ್ತೆ ನೀಡಿದ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಸ್ವಯಂ ಸೇವಾ ಸಂಸ್ಥೆ ಎನ್‌ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ (ಇಎಸ್‌ಜಿ) ಹೇಳುತ್ತಿದೆ. 

ಪೈಲಟ್‌ ಲೋಪವೇ ಕೋಯಿಕ್ಕೋಡ್‌ ವಿಮಾನ ದುರಂತಕ್ಕೆ ಕಾರಣ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮುಖ್ಯಸ್ಥರು ಹೇಳಿದ್ದಾರೆ. ವಾಯುಯಾನ ಸುರಕ್ಷತಾ ಪರಿಣತರೂ ಇದನ್ನು ಒಪ್ಪುತ್ತಾರೆ. ಆದರೆ, ಕೋಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿ ಲೋಪಗಳಿವೆ ಎಂಬುದರತ್ತಲೂ ಅವರು ಬೊಟ್ಟು ಮಾಡುತ್ತಾರೆ. 

ಮಂಗಳೂರು ವಿಮಾನ ನಿಲ್ದಾಣದ ಎರಡನೇ ರನ್‌ವೇ ನಿರ್ಮಾಣದ ವಿರುದ್ಧ ಇಎಸ್‌ಜಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದೆ. ‘ನಿಲುಗಡೆಗೆ ಬೇಕಿರುವ ಕನಿಷ್ಠ ಪ್ರದೇಶ’ ಇಲ್ಲಿ ಇಲ್ಲ ಎಂಬುದು ಇಎಸ್‌ಜಿಯ ದೂರು. 

ವಿಮಾನವು ಹಾರಾಟಕ್ಕೆ ಅಣಿಯಾಗಿ ಮುಂದಕ್ಕೆ ಸಾಗಿದ ಬಳಿಕ ತಾಂತ್ರಿಕ ತೊಂದರೆ ಕಾಣಿಸಿಕೊಂಡು ತುರ್ತಾಗಿ ನಿಲ್ಲಬೇಕು ಎಂದಾದರೆ ಅದಕ್ಕೆ ಬೇಕಿರುವ ಪ್ರದೇಶವನ್ನು ಮೀಸಲು ಇರಿಸಿರಬೇಕು ಎಂಬುದು ಅಂತರರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಘಟನೆಯ ನಿಯಮ. ಮಂಗಳೂರು ನಿಲ್ದಾಣದ ರನ್‌ವೇಯ ಉದ್ದ 2,400 ಮೀಟರ್‌. ರನ್‌ವೇಯ ಎರಡೂ ಭಾಗಗಳಲ್ಲಿ ಲಭ್ಯವಿರುವ ಪ್ರದೇಶವನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಿದರೂ ದೊರೆಯುವುದು ತಲಾ 300 ಮೀಟರ್‌ ಪ್ರದೇಶ ಮಾತ್ರ. ಅಂತರರಾಷ್ಟ್ರೀಯ ಮಾನದಂಡಕ್ಕಿಂತ ಇದು ಅತ್ಯಂತ ಕಡಿಮೆ ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ. ಇವೇ ಅಂಶಗಳು ಕೋಯಿಕ್ಕೋಡ್‌ ವಿಮಾನ ನಿಲ್ದಾಣಕ್ಕೂ ಅನ್ವಯ.

ಅಕ್ವಾಪ್ಲೇನಿಂಗ್‌ ಆಗಿರುವ ಸಾಧ್ಯತೆ 
ಕೋಯಿಕ್ಕೋಡ್‌ ವಿಮಾನ ನಿಲ್ದಾಣದ ರನ್‌ವೇಯಲ್ಲಿ ವಿಮಾನ ಲ್ಯಾಂಡ್‌ ಆಗುವ ವೇಳೆ ಅಕ್ವಾಪ್ಲೇನಿಂಗ್‌ ಆಗಿದೆ ಎಂದು ಪ್ರಾಥಮಿಕ ತನಿಖೆ ವೇಳೆ ಹೇಳಲಾಗಿದೆ. ಸಪಾಟಾದ ನೆಲೆದ ಮೇಲೆ ನೀರು ನಿಂತಿದ್ದಾಗ ಅದರ ಮೇಲೆ ಯಾವುದೇ ವಾಹನ ಚಲಿಸಿದಾಗ ಅಕ್ವಾಪ್ಲೇನಿಂಗ್ ಸಂಭವಿಸುತ್ತದೆ.

ದೊಡ್ಡ ವಿಮಾನ ನಿಷೇಧ
ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅಗಲದೇಹದ ವಿಮಾನಗಳ ಕಾರ್ಯಾಚರಣೆಯನ್ನು ನಿಷೇಧಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಆದೇಶ ಹೊರಡಸಿದೆ. ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಅಪಘಾತದ ನಂತರ ಈ ನಿರ್ಧಾರಕ್ಕೆ ಡಿಜಿಸಿಎ ಬಂದಿದೆ. ಅಲ್ಲದೆ ಅತಿಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿರುವ ವಿಮಾನ ನಿಲ್ದಾಣಗಳ ಸುರಕ್ಷತಾ ಪರಿಶೀಲನೆ ನಡೆಸುವುದಾಗಿ ಹೇಳಿದೆ.


ಶಿಮ್ಲಾ ವಿಮಾನ ನಿಲ್ದಾಣ

ಭಾರತದಲ್ಲಿ ಎಲ್ಲೆಲ್ಲಿ ಇವೆ...

1 ಶಿಮ್ಲಾ ವಿಮಾನ ನಿಲ್ದಾಣ, ಜುಬರಾತಿ: ಸಮುದ್ರಮಟ್ಟಕ್ಕಿಂತ 2,196 ಮೀಟರ್‌ ಎತ್ತರದಲ್ಲಿರುವ ಶಿಮ್ಲಾದ ಜುಬರಾತಿಯ ವಿಮಾನ ನಿಲ್ದಾಣ ದೇಶದ ಅತ್ಯಂತ ಅಪಾಯಕಾರಿ ಟೇಬಲ್‌ ಟಾಪ್‌ ವಿಮಾನ ನಿಲ್ದಾಣ. ಇಲ್ಲಿಯ ರನ್‌ವೇ ಉದ್ದ ಕೇವಲ 1,158 ಮೀಟರ್‌. ಸುತ್ತಲೂ ಇರುವ ಖಾಸಗಿ ಮತ್ತು ಅರಣ್ಯ ಪ್ರದೇಶದಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೀಗಾಗಿ ರನ್‌ ವೇ ವಿಸ್ತರಣೆ ಸಾಧ್ಯವಾಗಿಲ್ಲ. ಕನಿಷ್ಠ 1,500 ಮೀಟರ್ ‌ ಉದ್ದದ ರನ್‌ ವೇ ಕಡ್ಡಾಯ. ಹಾಗಾಗಿ ಸದ್ಯ 40 ಸೀಟು ಸಾಮರ್ಥ್ಯದ ಪುಟ್ಟ ವಿಮಾನಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ

2 ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಕರ್ನಾಟಕದ ಕಡಲ ತೀರದಲ್ಲಿರುವ ಮಂಗಳೂರಿನಿಂದ 13 ಕಿ.ಮೀ ದೂರದ ಬಜ್ಪೆಯಲ್ಲಿ ಈ ವಿಮಾನ ನಿಲ್ದಾಣವಿದೆ. ಇದು ಕರ್ನಾಟಕದ ಏಕೈಕ ‘ಟೇಬಲ್‌ ಟಾಪ್‌’ ವಿಮಾನ ನಿಲ್ದಾಣ. ರಾಜ್ಯದಲ್ಲಿ ಎರಡು ಕಾಂಕ್ರೀಟ್‌ ರನ್‌ವೇ ಹೊಂದಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ದಶಕಗಳ ಹಿಂದೆ (2010, ಮೇ 22 ರಂದು) ಸಂಭವಿಸಿದ ವಿಮಾನ ಅಪಘಾತದಲ್ಲಿ 158 ಜನರು ಸಾವನ್ನಪ್ಪಿದ್ದರು. ಈ ದುರಂತದ ನಂತರ ಟೇಬಲ್‌ ಟಾಪ್‌ ವಿಮಾನ ನಿಲ್ದಾಣಗಳ ಸುರಕ್ಷತೆ ಬಗ್ಗೆ ದೇಶದಲ್ಲಿ ಚರ್ಚೆ ಆರಂಭವಾಗಿತ್ತು.

3 ಕೋಯಿಕ್ಕೋಡ್ ಅಂತರರಾಷ್ಟ್ರೀಯ‌ ವಿಮಾನ ನಿಲ್ದಾಣ: ಕೇರಳದ ಮಲಪ್ಪುರ ಜಿಲ್ಲೆಯ ಕರಿಪ್ಪುರದಲ್ಲಿರುವ ಕೋಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಈ ಮೊದಲು ತಲಾ 2,860 ಮೀಟರ್‌ ಉದ್ದದ ಎರಡು ರನ್‌ವೇಗಳಿದ್ದವು. ‘ರನ್‌ ವೇ ಎಂಡ್‌ ಸೇಫ್ಟಿ ಏರಿಯಾ (ಆರ್‌ಇಎಸ್‌ಎ)’ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಎರಡೂ ರನ್‌ವೇಗಳ ಉದ್ದವನ್ನು 2,700 ಮೀಟರ್‌ಗಳಿಗೆ ಕಡಿತಗೊಳಿಸಲಾಯಿತು.

4 ಲೆಂಗ್‌ಪುಯಿ ವಿಮಾನ ನಿಲ್ದಾಣ, ಮಿಜೋರಾಂ: ಮಿಜೋರಾಂ ರಾಜಧಾನಿ ಐಜ್ವಾಲ್‌ನಿಂದ 32 ಕಿ.ಮೀ ದೂರದಲ್ಲಿರುವ ಲೆಂಗ್‌ಪುಯಿ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. 2,500 ಮೀಟರ್‌ ಉದ್ದ ಮತ್ತು 45 ಮೀಟರ್‌ ಅಗಲದ ರನ್‌ ವೇ ಹೊಂದಿದೆ. ಐಎಸ್‌ಎಲ್‌, ರನ್‌ವೇ ದೀಪ, ಅಧಿಕ ಸಾಮರ್ಥ್ಯದ ಡಾಪ್ಲರ್ ವ್ಯವಸ್ಥೆ ಸೇರಿದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಏರ್‌ಬಸ್‌ ಎ320 ಬೋಯಿಂಗ್‌ನಂತಹ ಪ್ರಯಾಣಿಕರ ದೊಡ್ಡ ವಿಮಾನ ಸಂಚರಿಸಲು ಈ ವಿಮಾನ ನಿಲ್ದಾಣ ಸುರಕ್ಷಿತವಾಗಿದೆ.

5 ಪಾಕ್ಯಾಂಗ್‌ ವಿಮಾನ ನಿಲ್ದಾಣ, ಸಿಕ್ಕಿಂ: ಸಿಕ್ಕಿಂನ ಗ್ಯಾಂಗ್‌ಟಾಕ್‌ನಿಂದ 31 ಕಿ.ಮೀ ದೂರದಲ್ಲಿದೆ. 201 ಎಕರೆಯಲ್ಲಿ ಹರಡಿಕೊಂಡಿದೆ. ಸಮುದ್ರಮಟ್ಟದಿಂದ 4,646 ಅಡಿ ಎತ್ತರದಲ್ಲಿದ್ದು, 1.75 ಕಿ.ಮೀ ಉದ್ದ ಮತ್ತು 30 ಮೀಟರ್ ಅಗಲದ ರನ್‌ವೇ ಹೊಂದಿದೆ.‌ ಪ್ರತಿಕೂಲ ಹವಾಮಾನ ಮತ್ತು ತಾಂತ್ರಿಕ ಸಮಸ್ಯೆ ಕಾರಣಗಳನ್ನು ಮುಂದೊಡ್ಡಿ ಕೆಲವು ವಿಮಾನಗಳು ಹಾರಾಟ ಸ್ಥಗಿತಗೊಳಿಸಿವೆ. ದಶಕದ ಹಿಂದೆ 15 ಪ್ರಯಾಣಿಕರನ್ನು ಹೊತ್ತಿದ್ದ ಪುಟ್ಟ ವಿಮಾನ ರನ್‌ವೇ ನಿಂದ ಜಾರಿ ಕಣಿವೆಗೆ ಬಿದ್ದಿತ್ತು. ಯಾವುದೇ ಸಾವು–ನೋವುಗಳಾಗಿರಲಿಲ್ಲ.

ಗೋಖಲೆ ಸಮಿತಿ ಸುರಕ್ಷತಾ ಶಿಫಾರಸು ಏನಾದವು? 
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ತಾಂತ್ರಿಕ ದಾಖಲೆಗಳಲ್ಲಿ ‘ಟೇಬಲ್‌ ಟಾಪ್‌’ ವಿಮಾನ ನಿಲ್ದಾಣಗಳ ಬಗ್ಗೆ ಪ್ರಸ್ತಾಪ ಇಲ್ಲ. 2010ರಲ್ಲಿ ಸಂಭವಿಸಿದ ಮಂಗಳೂರು ವಿಮಾನ ದುರಂತದ ನಂತರ ಭಾರತೀಯ ವಾಯುದಳದ ನಿವೃತ್ತ ಏರ್‌ ಮಾರ್ಷಲ್ ಬಿ.ಎನ್‌. ಗೋಖಲೆ ನೇತೃತ್ವದ ತಜ್ಞರ ಸಮಿತಿಯು ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ 191 ಪುಟಗಳ ಶಿಫಾರಸು ವರದಿ ಸಲ್ಲಿಸಿತ್ತು. ‌

*ರನ್‌ವೇ ಕೊನೆಯಲ್ಲಿ ಇಳಿಜಾರು ಪ್ರದೇಶಗಳು ಇಲ್ಲದಂತೆ ಎಚ್ಚರಿಕೆ ವಹಿಸಬೇಕು

*ಸೇನಾ ವಾಯುನೆಲೆಗಳಲ್ಲಿರುವಂತೆ ಎಲ್ಲ ನಿಲ್ದಾಣಗಳಲ್ಲಿಯೂ ಗ್ರೌಂಡ್‌ ಆರೆಸ್ಟಿಂಗ್‌ ಸಿಸ್ಟಮ್‌ ಅಳವಡಿಸಬೇಕು

*ವಿಮಾನಗಳ ಲ್ಯಾಂಡಿಂಗ್‌ ವೇಳೆ ಪೈಲಟ್‌ಗಳನ್ನು ಎಚ್ಚರಿಸಲು ವಿಷ್ಯುವಲ್‌ ರೆಫರೆನ್ಸ್‌ ಸಿಸ್ಟಮ್‌ ಅಳವಡಿಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು