ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಅಬ್ಬರದ ದನಿ ಬೇಡ; ವಾಸ್ತವ ನೋಡಿ

ಅಕ್ಷರ ಗಾತ್ರ
ADVERTISEMENT
""
""

ಜಮೀನು ಉಳುಮೆ ಮಾಡುವವನಿಗೇ ಅದರ ಮಾಲೀಕತ್ವ ಸಿಗಬೇಕು ಎಂಬುದು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಂದ ಭೂಸುಧಾರಣೆ ಕಾನೂನಿನ ಉದ್ದೇಶ. ಇದರ ಜೊತೆಯಲ್ಲೇ ಜಮೀನಿನ ಮಾಲೀಕತ್ವಕ್ಕೆ 54 ಎಕರೆಗಳ ಮಿತಿ ಕೂಡ ಬಂತು. ಮಲೆನಾಡಿನ ಜಿಲ್ಲೆಗಳಲ್ಲಿ ಯಾವುದು ಕೃಷಿ ಜಮೀನು, ಯಾವುದು ಅತಿಕ್ರಮಣ ಮಾಡಿಕೊಂಡ ಜಮೀನು ಎಂಬುದರ ವರ್ಗೀಕರಣಇಂದಿಗೂ ಸರಿಯಾಗಿ ಇಲ್ಲ. ಜಮೀನು ಹೊಂದಿರುವವರಲ್ಲಿ ಶೇಕಡ 73.5ರಷ್ಟು ಜನ ಹತ್ತು ಎಕರೆಗಳಿಗಿಂತ ಕಡಿಮೆ ಜಮೀನು ಹೊಂದಿರುವವರು.‌

ಕೆ. ದಿವಾಕರ್

ಕೃಷಿ ಸೇರಿದಂತೆ ಯಾವುದೇ ವೃತ್ತಿಯು ಅದರಲ್ಲಿ ತೊಡಗಿಸಿಕೊಂಡವನಿಗೆ ಆರ್ಥಿಕವಾಗಿ ಲಾಭ ತಂದುಕೊಡುವಂತೆ ಇರಬೇಕು. ಸಣ್ಣ ಹಿಡುವಳಿದಾರ ಯಂತ್ರೋಪಕರಣಗಳ ವಿಚಾರದಲ್ಲಿ ಸ್ವಾವಲಂಬಿ ಆಗುವುದು ಕಷ್ಟ. ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕ್ರಾಂತಿಕಾರಿ, ನಿಜ. ಆದರೆ ಅದು ಬಂದು ಐದು ದಶಕ ‍ಪೂರ್ಣಗೊಳ್ಳುತ್ತಿದೆ.

ಈ ಕಾಯ್ದೆಗೆ ತಿದ್ದುಪಡಿ ಆಗುತ್ತಿರುವುದು ಇದೇ ಮೊದಲ ಬಾರಿ ಅಲ್ಲ. 39 ಬಾರಿ ಇದಕ್ಕೆ ತಿದ್ದುಪಡಿ ಆಗಿದೆ. ಇಷ್ಟೊಂದು ವಿರೋಧದ ಪ್ರತಿಕ್ರಿಯೆ ಹಿಂದೆ ಯಾವತ್ತೂ ಬಂದಿರಲಿಲ್ಲ. ಇಂದು ಸರ್ಕಾರದ ಕ್ರಮದ ವಿರುದ್ಧ ಮಾತನಾಡುತ್ತ ಇರುವವರೆಲ್ಲ ಜಮೀನಿನ ಜೊತೆ ನೇರ ಸಂಬಂಧ ಹೊಂದಿರುವವರಲ್ಲ. ನಾನು ಇಂದಿಗೂ ಕೃಷಿ ಕೆಲಸ ಮಾಡುತ್ತಿದ್ದೇನೆ. ಅದು ನನ್ನ ತಂದೆ–ತಾಯಿಯಿಂದ ಬಂದ ಜಮೀನು ಎಂಬ ನಂಟನ್ನು ಪಕ್ಕಕ್ಕಿಟ್ಟು ನೋಡಿದರೆ, ಅದು ನನಗೆ ಆರ್ಥಿಕವಾಗಿ ಲಾಭ ತಂದುಕೊಡುತ್ತಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ. ಯಾವುದೇ ಹೂಡಿಕೆಗೆ ಲಾಭ ಬರಬೇಕು. ಅಂಚೆ ಕಚೇರಿಯಲ್ಲಿ ₹ 100 ಇರಿಸಿದರೂ, ವರ್ಷಕ್ಕೆ ₹ 6 ಬಡ್ಡಿಯಾಗಿ ಸಿಗುತ್ತದೆ. ಹಾಗೆಯೇ, ಕೃಷಿಯಿಂದ ಅಷ್ಟಾದರೂ ಲಾಭ ಬರಬೇಕಲ್ಲ? ಆದರೆ ಅದು ಆಗುತ್ತಿಲ್ಲ.

ಇಂದು ಜಮೀನು ವಿಸ್ತರಣೆ ಮಾಡಲು ಆಗುತ್ತಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದು ಹಣ ಸಂಪಾದಿಸಿದವರಿಗೆ ವಾಪಸ್ ತಮ್ಮ ಊರಿಗೆ ತೆರಳಿ, ಜಮೀನು ಖರೀದಿಸಿ, ಕೃಷಿಯಲ್ಲಿ ತೊಡಗಿಸಿಕೊಳ್ಳಲು ಭೂಸುಧಾರಣಾ ಕಾಯ್ದೆಯ 79(ಎ) ಮತ್ತು 79(ಬಿ) ಸೆಕ್ಷನ್ನುಗಳು ದೊಡ್ಡ ಅಡ್ಡಿಯಾಗಿದೆ. ಈ ಸೆಕ್ಷನ್ನುಗಳು ಸರ್ಕಾರಿ ಶೋಷಣೆಗೆ ದೊಡ್ಡ ಅಸ್ತ್ರವಾಗಿಯೂ ಬಳಕೆಯಾಗುತ್ತಿವೆ. ಸಾಗರದ ನಿವೃತ್ತ ಸರ್ಕಾರಿ ನೌಕರರೊಬ್ಬರು ಜಮೀನು ಖರೀದಿಸಿದರು. ಆದರೆ, ಅವರು ಮೂಲತಃ ರೈತ ಕುಟುಂಬದವರಲ್ಲ ಎಂಬ ಕಾರಣಕ್ಕೆ ಅವರು ಖರೀದಿಸಿದ ಜಮೀನಿನ ಸೇಲ್‌ ಡೀಡ್‌ ರದ್ದು ಮಾಡಲಾಯಿತು. ಅವರು 21 ವರ್ಷಗಳಿಂದ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ. ಅವರು ಯಾವ ಕಾರ್ಪೊರೇಟ್ ವ್ಯಕ್ತಿಯೂ ಅಲ್ಲ. ಕೃಷಿಯ ಬಗ್ಗೆ ಅವರಿಗೆ ಪ್ರೀತಿ ಇತ್ತು, ಅಷ್ಟೇ.

ಕೃಷಿ ಜಮೀನನ್ನು ಖರೀದಿಸಲು ಕೃಷಿ ಹಿನ್ನೆಲೆ ಇಲ್ಲದವರಿಗೆ ಅವಕಾಶ ಕೊಟ್ಟರೆ, ಕಾರ್ಪೊರೇಟ್‌ ಸಂಸ್ಥೆಗಳು ತಕ್ಷಣ ಬಂದು ನೂರಾರು ಎಕರೆ ಖರೀದಿ ಮಾಡುತ್ತವೆ ಎಂಬ ಮಾತುಗಳಿಗೆ ಆಧಾರವಿಲ್ಲ. ಉದಾಹರಣೆಗೆ, ಶಿವಮೊಗ್ಗ ಜಿಲ್ಲೆಯಲ್ಲಿ 20 ಎಕರೆ ತೋಟ ಇರುವವನೇ ಕೋಟ್ಯಾಧೀಶ. ಅಲ್ಲಿ ನೂರಾರು ಎಕರೆ ಜಮೀನೇ ಇಲ್ಲ. ಸಣ್ಣ ಹಿಡುವಳಿಗಳು ಇರುವ, ಪಟ್ಟಣಗಳಿಂದ ದೂರದಲ್ಲಿ ಇರುವ ಊರುಗಳಿಗೆ ಯಾವ ಕಾರ್ಪೊರೇಟ್‌ ಸಂಸ್ಥೆಯೂ ಬರುವುದಿಲ್ಲ. ಅಲ್ಲಿಗೆ ಕೃಷಿ ಆಸಕ್ತಿ ಇರುವ ವ್ಯಕ್ತಿ ಮಾತ್ರ ಬರುತ್ತಾನೆ. ಆತ ಅಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ.

ಕೃಷಿ ಸಂಸ್ಕೃತಿ ಇರುವವ, ತನ್ನ ಮೂಲ ಬೇರು ಇರುವಲ್ಲಿ ಜಮೀನು ಖರೀದಿ ಮಾಡುತ್ತಾನೆ. ಮಲೆನಾಡಿನ ಶಿರಸಿ, ಸಾಗರ ಕಡೆಯ ವ್ಯಕ್ತಿ ಕಲಬುರ್ಗಿಯಲ್ಲಿ ಜಮೀನು ಖರೀದಿಸುವುದಿಲ್ಲ. ಆತ ತನ್ನೂರಿನಲ್ಲೇ ಜಮೀನು ಹುಡುಕುತ್ತಾನೆ. ಏಕೆಂದರೆ, ಆತ ಜಮೀನು ಹುಡುಕಾಡುವಾಗ ಸಾಂಸ್ಕೃತಿಕ ಸಂಬಂಧವನ್ನೂ ಅರಸುತ್ತಿರುತ್ತಾನೆ. ಹಾಗಾಗಿ, ಈಗಿನ ಪ್ರಸ್ತಾವಿತ ತಿದ್ದುಪಡಿಗಳನ್ನು ವಿರೋಧಿಸುವವರು ‘ಕಾರ್ಪೊರೇಟ್ ಗುಮ್ಮ’ನನ್ನು ತೋರಿಸುವ ಅಗತ್ಯವಿಲ್ಲ.

ಭೂಸುಧಾರಣೆ ಕಾನೂನು ಜಾರಿಗೆ ಬಂದ ನಂತರದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಬದಲಾವಣೆ ಆಗಿದೆ. ಭತ್ತ ಬೆಳೆಯುತ್ತಿದ್ದ ಜಾಗಗಳಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಬೆಳೆ ಬೆಳೆಯುವ ಪದ್ಧತಿಯಲ್ಲಿ ಬದಲಾವಣೆ ಆಗಿರುವಾಗ ಕೃಷಿ ಜಮೀನಿಗೆ ಸಂಬಂಧಿಸಿದ ಕಾನೂನು ಕೂಡ ಬದಲಾಗಬೇಕಲ್ಲವೇ? ಕೃಷಿಗೆ ಉತ್ತೇಜನ ನೀಡಬೇಕು ಎಂದಾದರೆ ಸಣ್ಣ ಹಿಡುವಳಿಗಳ ಖರೀದಿಗೆ ಪ್ರೋತ್ಸಾಹ ನೀಡಬೇಕು.

ಇದು ವರ್ಕ್‌ ಫ್ರಂ ಹೋಂ ಸಂಸ್ಕೃತಿಯ ಕಾಲಘಟ್ಟ. ಮಹಾನಗರಗಳಲ್ಲಿ ವಾಸ ಅಷ್ಟೊಂದು ಸುರಕ್ಷಿತ ಅಲ್ಲ ಎಂಬ ಭಾವನೆ ಕೋವಿಡ್‌–19 ಕಾರಣದಿಂದಾಗಿ ಕೆಲವರಲ್ಲಿ ಮೂಡಿದೆ. ನಗರೀಕರಣಕ್ಕೆ ವಿರುದ್ಧವಾಗಿ ಗ್ರಾಮೀಣೀಕರಣ ಪ್ರಕ್ರಿಯೆ ಕಾಣಿಸುತ್ತಿದೆ. ಇದಕ್ಕೆ ನಾವು ಒಂದು ರೂಪ ಕೊಡಬೇಕು. ಕೃಷಿ ಬಗ್ಗೆ ಆಸಕ್ತಿ ಇರುವ ವ್ಯಕ್ತಿಗೆ ಜಮೀನು ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ಶೋಷಣೆ ಇಲ್ಲದಂತೆ ಮಾಡಬೇಕು. ಯಾವುದೇ ಕಂದಾಯ ಇಲಾಖೆ ಕಚೇರಿ, ತಾಲ್ಲೂಕು ಕಚೇರಿ ರೈತಸ್ನೇಹಿ ಆಗಿಲ್ಲ. ಒಂದು ಪಾಸ್‌ಪೋರ್ಟ್‌ ಕೊಡುವಲ್ಲಿ ಇರುವ ಸುಲಲಿತ ವ್ಯವಸ್ಥೆಯೂ ಈ ಕಚೇರಿಗಳಲ್ಲಿ ಇಲ್ಲ. ನಾನು ಈ ತಿದ್ದುಪಡಿಯ ಪ‍ರ ಇದ್ದೇನೆ.

ಬೆಂಗಳೂರಿನಿಂದ 100 ಕಿ.ಮೀ. ಸುತ್ತಲಿನ ಪ್ರದೇಶಗಳಲ್ಲಿ ಇಂದು ಶೇಕಡ 10ರಷ್ಟು ಜನ ಮಾತ್ರ ಕೃಷಿ ಮಾಡುತ್ತಿರಬಹುದು.ಇದು 1974ರ ಸಂದರ್ಭದಲ್ಲಿ ಶೇಕಡ 77.67ರಷ್ಟಿತ್ತು ಎನ್ನುವುದನ್ನು ಗಮನಿಸಬೇಕು. ಎಲ್ಲ ನಗರ, ಪಟ್ಟಣಗಳ ಸುತ್ತಲೂ ಈ ರೀತಿಯ ಬದಲಾವಣೆ ಆಗಿದೆ. ಅದು ಒಂದಿಷ್ಟುಮಟ್ಟಿಗೆ ಸಹಜವೂ ಹೌದು. ನಗರ, ಪಟ್ಟಣಗಳ ಸುತ್ತ ರಿಯಲ್ ಎಸ್ಟೇಟ್ ಉದ್ಯಮ ಬೆಳೆಯುತ್ತದೆ. ಇದು ಸಹ್ಯ.

ರೈತ ಕೃಷಿ ಜಮೀನನ್ನು ಮಾರಾಟ ಮಾಡಿದಾಗ, ಆ ಜಮೀನಿನ ಬಳಕೆಯನ್ನು ಕೃಷಿ ಚಟುವಟಿಕೆಗಳಿಗೆ ಸೀಮಿತಗೊಳಿಸಬೇಕು. ಆದರೆ, ಬೇರೆಯವರಿಗೆ ಕೃಷಿ ಜಮೀನು ಖರೀದಿಸಲು ಅವಕಾಶವನ್ನೇ ನೀಡಬಾರದು ಎಂಬುದು ತಪ್ಪು. ಕೃಷಿಗೆ ಇಂದು ಹೊಸ ಜನಾಂಗ ಬರುತ್ತಿಲ್ಲ, ಸಣ್ಣ ಪ್ರಮಾಣದ ಕೃಷಿ ಜಮೀನನ್ನು ಅಕ್ಕಪಕ್ಕದ ರೈತರು ಖರೀದಿಸುತ್ತಿಲ್ಲ. ಹೀಗಿರುವಾಗ ಜಮೀನನ್ನು ಹಾಳುಬಿಡುವ ಬದಲು ಕೃಷಿಯಲ್ಲಿ ಆಸಕ್ತಿ ಇರುವ ಹೊಸ ತಲೆಮಾರಿನವರಿಗೆ ಖರೀದಿ ಮಾಡುವುದಕ್ಕೆ ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ. ಈಗಿನ ಪ್ರಸ್ತಾವಿತ ತಿದ್ದುಪಡಿ ವಿರುದ್ಧ ಎದ್ದಿರುವ ಅಪಸ್ವರಗಳು ಗ್ರಾಮೀಣ ಕೃಷಿಯ ಸತ್ಯಗಳಿಂದ ದೂರ ಇರುವವರ ಅಬ್ಬರದ ದ್ವನಿಯಂತೆ ಕೇಳಿಸುತ್ತಿವೆ.

- ಲೇಖಕ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲ

***

ಆಹಾರ ಬೆಳೆಯಲು ಭೂಮಿ ಉಳಿಯಲಿ

ಡಾ. ಕೇಶವ ಎಚ್. ಕೊರ್ಸೆ

ಕರ್ನಾಟಕ ಭೂಸುಧಾರಣಾ ಕಾಯ್ದೆ– 1974ರ 63, 79 (ಎ, ಬಿ, ಸಿ) ಹಾಗೂ 80ನೇ ಸೆಕ್ಷನ್‌ಗಳಿಗೆ ಸರ್ಕಾರ ತರಲು ಉದ್ದೇಶಿಸಿರುವ ತಿದ್ದುಪಡಿಯು ವ್ಯಾಪಕ ಚರ್ಚೆಗೆ ಒಳಗಾಗಿದೆ. ಇದರ ಫಲವೆಂಬಂತೆ, ಈ ತಿದ್ದುಪಡಿಯ ವ್ಯಾಪ್ತಿಯಿಂದ ನೀರಾವರಿ ಜಮೀನನ್ನು ಹೊರಗಿಡಲು ಸರ್ಕಾರ ಚಿಂತಿಸುತ್ತಿರುವುದು ಸ್ವಾಗತಾರ್ಹ. ಇದರ ಜೊತೆಗೆ, ಸುಸ್ಥಿರ ಕೃಷಿ ಮತ್ತು ರೈತರ ಹಿತಕ್ಕೆ ಅಗತ್ಯವಾದ ನೆಲ-ಜಲ ಹಾಗೂ ನೈಸರ್ಗಿಕ ಸಂಪನ್ಮೂಲಗಳ ವಿವೇಕಯುತ ನಿರ್ವಹಣೆಯ ಅಂಶಗಳೂ ಈ ತಿದ್ದುಪಡಿಯಲ್ಲಿ ಸೇರಬೇಕಿವೆ. ಅಂಥ ಪ್ರಮುಖ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಡಾ. ಕೇಶವ ಎಚ್. ಕೊರ್ಸೆ

ಕೃಷಿಭೂಮಿಯ ಆಡಳಿತ ನಿರ್ವಹಣೆ: ಕೃಷಿಭೂಮಿ ಖರೀದಿ ಹಾಗೂ ಪರಿವರ್ತನೆ ಸಂದರ್ಭಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯುವುದು ಕೂಡ ಈ ತಿದ್ದುಪಡಿಯ ಉದ್ದೇಶಗಳಲ್ಲೊಂದು ಎಂದು ಸರ್ಕಾರ ತಿಳಿಸಿದೆ. ಇದು ಒಳ್ಳೆಯದೇ. ಅದು ಸಾಧ್ಯವಾಗಬೇಕಾದರೆ, ಈ ತಿದ್ದುಪಡಿಯ ಜೊತೆಗೆ ಕೃಷಿಭೂಮಿಯ ವೈಜ್ಞಾನಿಕ ಸಮೀಕ್ಷೆ, ವರ್ಗೀಕರಣ, ಗಣಕೀಕರಣ ಸೇರಿದಂತೆ ಆಡಳಿತ ಸುಧಾರಣೆಯ ಹಲವು ಕ್ರಮಗಳನ್ನೂ ಸರ್ಕಾರ ಕೈಗೊಳ್ಳಬೇಕಿದೆ.

ಉದ್ಯಮಗಳಿಗೆ ನಿವೇಶನ: ಉದ್ಯಮ ಹಾಗೂ ಕೈಗಾರಿಕೆಗಳಿಗೆ ಬೇಕಾದ ನಿವೇಶನ ಸಿಗದಿರುವ ಸಮಸ್ಯೆಯೂ ಚರ್ಚೆಯ ಮುನ್ನೆಲೆಗೆ ಬಂದಿದೆ. ಕೈಗಾರಿಕೆಗಳು ಹಾಗೂ ಉದ್ದಿಮೆಗಳಿಗೆ, ಕೃಷಿಗೆ ಸೂಕ್ತವಲ್ಲದ ಒಣಭೂಮಿಯನ್ನು ಲಭ್ಯವಾಗಿಸುವ ನೀತಿ ಜಾರಿಗೆ ಬರಬೇಕು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಬಳಿ ಇರುವ ವಿಸ್ತಾರವಾದ ಭೂಮಿಯಲ್ಲಿ ಬಹುಪಾಲು ಇನ್ನೂ ಬಳಕೆಯಾಗದಿರಲು ಕಾರಣಗಳೇನು ಎಂಬು ದನ್ನೂ ಕಂಡುಕೊಳ್ಳಬೇಕಿದೆ. ಫಲವತ್ತಾದ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸದಂತೆ ಸೂಕ್ತ ನಿರ್ಬಂಧವೂ ಈ ತಿದ್ದುಪಡಿಯಲ್ಲಿ ಸೇರಬೇಕಿದೆ.

ಕಾನೂನುಬಾಹಿರ ಬಳಕೆಗೆ ತಡೆ: ಕೃಷಿ ಗಿಂತ ಹೆಚ್ಚು ಲಾಭ ತರುವ ಕ್ವಾರಿ, ವಾಣಿಜ್ಯ ಮಳಿಗೆಗಳು, ಇಟ್ಟಿಗೆ ಹಾಗೂ ಮರಳು ತಯಾರಿಕೆ ಇತ್ಯಾದಿಗಳಿಗೆ ಈಗಾಗಲೇ ಹಲವೆಡೆ ಕೃಷಿಭೂಮಿಯು ಅನಧಿಕೃತವಾಗಿ ಬಳಕೆಯಾಗುತ್ತಿದೆ. ಜೀವನೋಪಾಯಕ್ಕಾಗಿ ತುಂಡುಭೂಮಿಯನ್ನು ನೆಚ್ಚಿಕೊಂಡ ಸಣ್ಣ ಕೃಷಿಕರು ಇದಕ್ಕೆ ಮುಂದಾಗುವುದಿಲ್ಲ. ಬದಲಾಗಿ, ವಿಸ್ತಾರವಾದ ಭೂಒಡೆತನವಿರುವವರೇ ಇಂಥ ಉದ್ಯಮಗಳಿಗೆ ಕೈಹಾಕುತ್ತಾರೆ ಅಥವಾ ಇಂತಹ ಉದ್ದೇಶಗಳಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುತ್ತಾರೆ. ಇಂಥ ಉದ್ದೇಶಕ್ಕಾಗಿಯೇ ಕೃಷಿಭೂಮಿ ಕೊಳ್ಳುವವರಿಗೆ ಉದ್ದೇಶಿತ ತಿದ್ದುಪಡಿಯು ರಾಜಮಾರ್ಗ ಆಗಬಾರದಲ್ಲವೇ? ಈ ಬಗೆಯ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬಲ್ಲ ಕಠಿಣ ಕ್ರಮಗಳನ್ನೂ ತಿದ್ದುಪಡಿಯು ಒಳಗೊಳ್ಳಬೇಕು.

ಭೂಪರಿವರ್ತನೆಗೆ ಅವಕಾಶ ಸಲ್ಲ: ನಗರ-ಪಟ್ಟಣಗಳಷ್ಟೇ ಅಲ್ಲ, ಹೋಬಳಿ ಹಾಗೂ ಪಂಚಾಯಿತಿ ಕೇಂದ್ರಗಳಿಗೂ ಇಂದು ರಿಯಲ್ ಎಸ್ಟೇಟ್ ಸಂಸ್ಕೃತಿ ತಲುಪಿದೆ. ಹಣವುಳ್ಳವರು ವಿಸ್ತಾರವಾದ ಕೃಷಿ ಜಮೀನನ್ನು ಅಗ್ಗದ ಬೆಲೆಗೆ ಕೊಂಡು, ನಿವೇಶನವನ್ನಾಗಿ ಪರಿವರ್ತಿಸಿ ಮಾರುತ್ತಿರುವ ಸಂದರ್ಭಗಳು ಹೆಚ್ಚುತ್ತಿವೆ. ಉದ್ದೇಶಿತ ತಿದ್ದುಪಡಿಯು ಕೃಷಿಭೂಮಿಯನ್ನು ‘ಮುಕ್ತ ಮಾರುಕಟ್ಟೆ’ಯ ಸರಕನ್ನಾಗಿಸು ವುದರಿಂದ, ಸ್ವಾಭಾವಿಕವಾಗಿ ಕೃಷಿಭೂಮಿಯ ಬೆಲೆ ಏರತೊಡಗುತ್ತದೆ. ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಕನಿಷ್ಠ ಮುಂದಿನ ಮೂವತ್ತು ವರ್ಷಗಳಾದರೂ ಪರಿವರ್ತಿಸದಂತೆ ಷರತ್ತು ಹಾಕಬೇಕು.

ಕೃಷಿ ಉತ್ಪಾದನೆ ಹೆಚ್ಚಿಸುವ ಪರಿ: ಸರ್ಕಾರವು ಕೃಷಿ ಜಮೀನಿನ ಉತ್ಪಾದಕತೆ ಹೆಚ್ಚಿಸಲು ಚಿಂತಿಸುತ್ತಿರುವುದು ಒಳ್ಳೆಯದು. ಆದರೆ, ಇದು ಭೂಮಾಲೀಕತ್ವ ಬದಲಾವಣೆ ಯೊಂದರಿಂದಲೇ ಆಗುವ ಕಾರ್ಯವಲ್ಲ. ರೈತರಿಗೆ ಸಹಾಯಹಸ್ತ ನೀಡುವ ಅನೇಕ ಉಪಕ್ರಮಗಳಾಗಬೇಕಿವೆ. ರೈತರು ಸ್ವಾಭಿಮಾನ ದಿಂದಬದುಕಲು ಆರ್ಥಿಕ ಸಹಾಯವೂ ಸೇರಿದಂತೆಎಲ್ಲ ಸೌಲಭ್ಯ ನೀಡುತ್ತಿರುವ ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಹಾಗೂ ಭ್ರಷ್ಟಾ‌ಚಾರ ತಗ್ಗಿಸಬೇಕಾಗಿದೆ. ವಿದ್ಯುತ್, ಗ್ರಾಮೀಣ ರಸ್ತೆ, ಅಂತರ್ಜಾಲದಂಥ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ, ರೈತಯುವಕರು ಹಳ್ಳಿಗಳಿಗೆ ಹಿಂತಿರುಗುವ ವಾತಾವರಣ ರೂಪಿಸಬೇಕಿದೆ. ರೈತಾಪಿ ಉತ್ಪನ್ನಗಳಿಗೆ ಯೋಗ್ಯದರ ಹಾಗೂ ಗೋದಾಮು ವ್ಯವಸ್ಥೆ ಸೇರಿದಂತೆ, ಪಾರದರ್ಶಕ ಮಾರುಕಟ್ಟೆಯನ್ನು ನಿರ್ಮಿಸುವತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಕಾರ್ಯಶೀಲವಾಗಬೇಕಿವೆ. ಈ ಅರೋಗ್ಯ ಪೂರ್ಣ ‘ಕೃಷಿ-ಪರಿಸರ’ ನಿರ್ಮಾಣವು ಸರ್ಕಾರದ ಆದ್ಯತೆಯಾದರೆ ಮಾತ್ರ, ಕೃಷಿ ಉತ್ಪಾದಕತೆ ಹೆಚ್ಚೀತು.

ವಾಣಿಜ್ಯ ಕೃಷಿ ನಿಯಂತ್ರಣ: ಉದ್ದೇಶಿತ ತಿದ್ದುಪಡಿಯು ಕೃಷಿಭೂಮಿಯನ್ನು ಮುಕ್ತ ಮಾರುಕಟ್ಟೆಗೆ ಒಡ್ಡುವುದರಿಂದ, ಕೃಷಿಯೇತರ ಧನಿಕರೂ ಕೃಷಿಭೂಮಿ ಕೊಳ್ಳುವತ್ತ ಒಲವು ತೋರುವುದು ಸಹಜ. ಪಾರಂಪರಿಕ ಆಹಾರ ಬೆಳೆಗಳಿಗಿಂತ, ಹೆಚ್ಚು ಲಾಭ ತರಬಲ್ಲ ವಾಣಿಜ್ಯ ಬೆಳೆಗಳತ್ತ ಅವರ ಚಿತ್ತ ಹರಿಯುವ ಸಾಧ್ಯತೆಗಳು ಆಗ ಹೆಚ್ಚಬಹುದು. ಈಗಾಗಲೇ, ರಾಜ್ಯದ ಹಲವೆಡೆ ಸಮೃದ್ಧ ಕೃಷಿಭೂಮಿಯು ಧನಿಕ ರೈತರ ಕೈಯಲ್ಲಿ ಕಬ್ಬು, ಅಡಿಕೆ, ರಬ್ಬರ್, ಅಕೇಶಿಯಾ, ಮಾಂಜಿಯಂ, ಸಾಗುವಾನಿ ಬೆಳೆಗಳಿಗೆ ಪರಿವರ್ತಿತವಾಗುತ್ತಿದೆ. ಅಪಾರ ಅಂತರ್ಜಲ, ಕೃತಕ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸಿ ಬೆಳೆಸುವ ವಾಣಿಜ್ಯ ಬೆಳೆಗಳು ಆಹಾರ ಹಾಗೂ ಪರಿಸರ ಸುರಕ್ಷತೆಗೆ ಭಂಗ ತರಬಹುದು. ಆಗ, ದವಸ-ಧಾನ್ಯ, ತರಕಾರಿ, ಹಣ್ಣು-ಹಂಪಲುಗಳು, ಗಿಡಮೂಲಿಕೆಯಂಥ ಆಹಾರಬೆಳೆಗೆ ಪೆಟ್ಟು ಬೀಳುವುದು ಸಹಜ ತಾನೆ? ಆದ್ದರಿಂದ, ಫಲವತ್ತಾದ ಭಾಗಾಯತ ಹಾಗೂ ತರಿ ಜಮೀನನ್ನಾದರೂ ಆಹಾರಬೆಳೆಗಾಗಿ ಮೀಸಲಿರಿಸುವ ಷರತ್ತು ಈ ತಿದ್ದುಪಡಿಯಲ್ಲಿ ಸೇರಬೇಕಿದೆ.

ಕೃಷಿಯೇತರರಿಗೆ ಕೃಷಿ ಮಾಡುವ ಅವಕಾಶ: ಕೃಷಿಕರಲ್ಲದವರಿಗೂ ಕೃಷಿಭೂಮಿ ಖರೀದಿಸಲು ಅವಕಾಶ ನೀಡುವ ಉದ್ದೇಶ ಒಳ್ಳೆಯದು. ಆದರೆ, ಭೂಮಿ ಖರೀದಿಸುವುದೊಂದೇ ಇದಕ್ಕೆ ಅನಿವಾರ್ಯ ಆಗಬೇಕಿಲ್ಲ. ವಿಭಿನ್ನ ಕಾರಣಗಳಿಂದಾಗಿ ಕೃಷಿ ಮಾಡಲು ಸೋಲುತ್ತಿರುವ ಕೃಷಿಕರು, ತಮ್ಮ ಭೂಮಿಯನ್ನು ಆಸಕ್ತರೊಂದಿಗೆ ಹಂಚಿ ಕೊಳ್ಳಲು ಸಿದ್ಧರಿದ್ದಾರೆ. ಒಡಂಬಡಿಕೆಯ ಮೂಲಕ ಗುತ್ತಿಗೆ ಅಧಾರದಲ್ಲಿ ಭೂಮಿ ಪಡೆದು ಆಸಕ್ತರು ಕೃಷಿ ಮಾಡಬಹುದು. ಇದು ಮೂಲ ಹಾಗೂ ಹೊಸ ಕೃಷಿಕರಿಬ್ಬರಿಗೂ ಲಾಭದಾಯಕ. ಆದ್ದರಿಂದ, ಕೃಷಿಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಕೃಷಿಗೆ ನೀಡುವ ಅವಕಾಶ ನಿರ್ಮಿಸುವ ಕಾನೂನಿನ ಅಗತ್ಯವಿದೆ. ಈ ಅವಕಾಶವೂ ತಿದ್ದುಪಡಿಯಲ್ಲಿರಲಿ.

ಮಣ್ಣಿನ ಫಲವತ್ತತೆ, ನೀರಿನ ಲಭ್ಯತೆ ಹಾಗೂ ಪರಿಸರಸೂಕ್ಷ್ಮತೆ–ಈ ಮೂರನ್ನೂ ಆಧರಿಸಿ, ಸೂಕ್ತ ಭೂಬಳಕೆ ನೀತಿಯೊಂದು ಜಾರಿಯಾದರೆ ಮಾತ್ರ, ಭೂಸುಧಾರಣಾ ಕಾನೂನಿನ ಅಶಯಗಳು ನನಸಾದಾವು. ಇವೆಲ್ಲವುಗಳ ಕುರಿತು ಸರ್ಕಾರವು ಜನಾಭಿಪ್ರಾಯ ಪಡೆಯಬೇಕಿದೆ. ಅವನ್ನೆಲ್ಲ ವಿಧಾನಮಂಡಲದಲ್ಲಿ ಚರ್ಚಿಸಿ, ಉಭಯ ಸದನಗಳ ಅನುಮೋದನೆಯೊಂದಿಗೆ ಸೂಕ್ತ ತಿದ್ದುಪಡಿಗಳಿಗೆ ಸರ್ಕಾರ ಮುಂದಾಗಲಿ.

- ಲೇಖಕ ಸಂರಕ್ಷಣಾ ಜೀವಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT