ಬುಧವಾರ, ಮಾರ್ಚ್ 22, 2023
32 °C

ಅನುಭವ ಮಂಟಪ: ಮುಟ್ಟು ಎಂದರೆ ಮುಟ್ಟದಿರುವುದೇ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಋತುಸ್ರಾವವೆಂಬ ದೇಹದ ಸಹಜ ಪ್ರಕ್ರಿಯೆಯನ್ನು ಸಹಜ ಎಂದು ಪರಿಗಣಿಸಲು ನಮ್ಮ ಸಮಾಜ ಈಗಲೂ ಹಿಂದೇಟು ಹಾಕುತ್ತಿದೆ. ಮುಟ್ಟಿನ ಬಗ್ಗೆ ಇರುವ ಮೌಢ್ಯ ಕರಗುತ್ತಿದೆ ಎಂಬುದು ನಿಜ. ಆದರೆ, ಈ ಬಗ್ಗೆ ಪೂರ್ಣ ಆರೋಗ್ಯಕರ ದೃಷ್ಟಿಕೋನ ರೂಢಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಋತುಸ್ರಾವದ ವಿಚಾರವು  ಸ್ವಾತಂತ್ರ್ಯೋತ್ಸವ ಭಾಷಣದ ಭಾಗವಾದದ್ದು ಇದೇ ಮೊದಲು. ಮುಟ್ಟಿನ ಬಗೆಗಿನ ಕಳಂಕ ಕಳಚಲು ಪ್ರಧಾನಿ ಮಾತು ಪೂರಕವಾಗಲಿ

*****

ಎಲ್ಲೆಡೆಯೂ ಇದೆ ಕೀಳರಿಮೆ

ಮುಟ್ಟಿನ ರಜೆಯ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಕೆಲ ವರ್ಷಗಳ ಹಿಂದೆಯೂ ಈ ಚರ್ಚೆ ನಡೆದಿತ್ತು. ಇನ್ನು ಕೆಲ ವರ್ಷಗಳು ಕಳೆದು ಪುನಃ ಯಾವುದಾದರೂ ಕಂಪನಿ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದರೆ ಮತ್ತೆ ಕೆಲವು ದಿನ ಚರ್ಚೆ ನಡೆಯಬಹುದು. ಸರ್ಕಾರ ಮುಟ್ಟಿನ ರಜೆಯ ಬಗ್ಗೆ ನಿಯಮ ರೂಪಿಸುವವರೆಗೂ ಇಂತಹ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆ ಕಾನೂನು ಅಷ್ಟು ಸುಲಭದಲ್ಲಿ ಬರಬಹುದೇ?

ಮುಟ್ಟಿನ ಬಗ್ಗೆ ಶತಮಾನಗಳಿಂದ ಕೀಳರಿಮೆ ಬೆಳೆಸಿಕೊಂಡೇ ಬಂದಿರುವ ಸಮಾಜ ನಮ್ಮದು. ಇದಕ್ಕೆ ಯಾವ ಜಾತಿ, ಧರ್ಮವೂ ಹೊರತಲ್ಲ. ಈ ಆಧುನಿಕ ಕಾಲದಲ್ಲೂ ಸ್ಯಾನಿಟರಿ ಪ್ಯಾಡುಗಳನ್ನು ಏನೋ ಕೆಟ್ಟ ವಸ್ತುವಿನಂತೆ ಅಡಗಿಸಿಡುವ ಪರಿಸ್ಥಿತಿ ಬಹುತೇಕ ಮನೆಗಳಲ್ಲಿ ಇದೆ. ಟಿವಿ ಜಾಹೀರಾತುಗಳಲ್ಲಿ ಮುಟ್ಟಿನ ಕಲೆಯನ್ನು ನೀಲಿ ಬಣ್ಣದಲ್ಲಿ ತೋರಿಸುತ್ತಾರೆ. ಅಂಗಡಿಗಳಲ್ಲಿ ಪ್ಯಾಡ್ ಕೊಂಡರೆ ಅದನ್ನು ಪೇಪರ್‌ನಲ್ಲಿ ಸುತ್ತಿ ಕೊಡುತ್ತಾರೆ. ಯಾಕಿಷ್ಟು ಕೀಳರಿಮೆ?

ಮುಟ್ಟಾದ ಹೆಣ್ಣನ್ನು ಮನೆಯಿಂದ ಹೊರಗೆ ಕೂರಿಸುವ ಪದ್ಧತಿ ಮುಸ್ಲಿಂ ಸಮುದಾಯದಲ್ಲಿ ಇಲ್ಲದಿದ್ದರೂ ನಮಾಜು, ಉಪವಾಸ ವ್ರತ, ಕುರ್‌–ಆನ್‌ ಪಾರಾಯಣ ಮೊದಲಾದ ಧಾರ್ಮಿಕ ಆಚರಣೆಗಳಿಗೆ ನಿಷೇಧ ಇದೆ. ಮುಟ್ಟಾದರೆ ಅಶುದ್ಧವೆಂದು ಪರಿಗಣಿಸುವುದೇ ಇದಕ್ಕೆ ಕಾರಣ ಎನ್ನುತ್ತಾರೆ. ಈ ನಿಷೇಧವನ್ನು ತಿಂಗಳ ರಜೆ ಎಂದು ಹೇಳುವವರಿದ್ದಾರೆ. ಆದರೆ ಮನೆಯ ಯಾವ ಕೆಲಸಕ್ಕೂ ರಜೆಯಿಲ್ಲದೆ ಬರೀ ಧಾರ್ಮಿಕ ಆಚರಣೆಗಳಿಗೆ ಮಾತ್ರ ರಜೆ ನೀಡುವುದು ಯಾಕೆ? ಇದು ಹೆಣ್ಣಿನ ನೈಸರ್ಗಿಕ ಋತುಸ್ರಾವವನ್ನು ಕೀಳಾಗಿ ಪರಿಗಣಿಸಿ ಅವಳಲ್ಲಿ ಕೀಳರಿಮೆ ಮೂಡಿಸುವ ತಂತ್ರದ ಭಾಗ.

ಇನ್ನು ಕಚೇರಿಯಲ್ಲಿ ಕೆಲಸ ಮಾಡುವ ನನ್ನಂಥವರೇ ಸಹೋದ್ಯೋಗಿ ಗಂಡಸರ ಅಪಹಾಸ್ಯವನ್ನು ಕೇಳಬೇಕಾಗುತ್ತದೆ. ಹೀಗಿರುವಾಗ ಅಸಂಘಟಿತ ವಲಯದಲ್ಲಿರುವ ಮಹಿಳೆಯರ ಪಾಡೇನು? ಎಲ್ಲ ಮಹಿಳೆಯರ ನ್ಯಾಪ್‌ಕಿನ್ ಮತ್ತಿತರ ಅಗತ್ಯವನ್ನು ಪೂರೈಸುವ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಮುಟ್ಟಿನ ರಜೆಯ ಬಗ್ಗೆ ನಿಯಮ ರೂಪಿಸಬೇಕು. ಸಮಾಜದ ಪೂರ್ವಗ್ರಹಗಳನ್ನು ತೊಡೆದು ಹಾಕಲು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕು.

-ಶಾಹಿನಾ ಸುನೈಫ್

***

ಕಳಂಕದ ಕಲೆ ತೊಳೆದು ಹೋಗಲಿ

ಮುಟ್ಟು ಈಗ ಗುಟ್ಟಿನ ವಿಷಯವಾಗೇನೂ ಉಳಿದಿಲ್ಲ. ಮುಟ್ಟಿನ ಬಟ್ಟೆಯನ್ನು ಗಂಡಸರಿಗೆ ಕಾಣದ ಹಾಗೆ ಗೌಪ್ಯವಾಗಿ ಹಾವು ಹರಿಯುವ ಬೇಲಿಮೆಳೆಯಲ್ಲೋ, ಹಲ್ಲಿ ಸರಿಯುವ ಮೆಟ್ಟಿಲ ಸಂದಿನಲ್ಲೋ ಒಣಗಿಸಲು ಹರಸಾಹಸಪಡುತ್ತಿದ್ದ ಹೆಣ್ಣುಮಕ್ಕಳಿಗೀಗ ಅಣ್ಣನೋ ಅಪ್ಪನೋ ಅಥವಾ ಗಂಡನೋ ಸ್ಯಾನಿಟರಿ ಪ್ಯಾಡ್‌ ತಂದುಕೊಡುವ ಮಟ್ಟಿಗೆ ಈ ಕಾಲ ಸಹಜತೆಗೆ ಹೊರಳಿದೆ. ಗಂಡು ಮಕ್ಕಳು ತಾವು ಕಂಡು-ಕೇಳಿದ ಮುಟ್ಟಿನ ಕತೆಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಆದರೆ ಹೊರಳುವಿಕೆ ಈಗಷ್ಟೇ ಶುರುವಾಗಿದೆ, ಅದೂ ಬೆರಳೆಣಿಕೆಯ ಜನರಲ್ಲಿ ಮಾತ್ರ ಎಂಬುದನ್ನೂ ಮರೆಯುವಂತಿಲ್ಲ. ಮುಟ್ಟಿನ ರಕ್ತದ ಕಲೆಯನ್ನು ನೀರಿನಿಂದ ತೊಳೆದುಬಿಡಬಹುದು. ಆದರೆ, ಆ ವಿಚಾರದ ಸುತ್ತ ಅಂಟಿಕೊಂಡಿರುವ ಕಳಂಕವನ್ನು, ಈ ಉಪಖಂಡದ ಎಲ್ಲಾ ನದಿಗಳು ಹಗಲು-ರಾತ್ರಿ ವಿರಮಿಸದೇ ಹರಿದರೂ ಸಂಪೂರ್ಣ ತೊಳೆಯಲು ಸಾಧ್ಯವಿಲ್ಲವೇನೋ.

ಯಾವುದೇ ಧರ್ಮವಿರಲಿ, ಎಲ್ಲಾ ಕಟ್ಟಳೆಗಳ ವಾಹಕವಾಗಿ ಹೆಣ್ಣನ್ನೇ ಬಳಸುವ ತಂತ್ರ ಇಲ್ಲೂ ಬಳಕೆಯಾಗುತ್ತದೆ. ಮುಟ್ಟಿನ ಆಚರಣೆಗಳ ಬಗ್ಗೆ ಧ್ವನಿ ಎತ್ತಿ ನೋಡಿ, ಮೊದಲ ಪ್ರಬಲ ವಿರೋಧ ವ್ಯಕ್ತವಾಗುವುದು ಮಹಿಳೆಯರಿಂದಲೇ. ‘ಮುಟ್ಟುʼ ಎಂಬ ಕ್ರಿಯಾಪದವನ್ನು ‘ಮುಟ್ಟದಿರುವುದುʼ ಎಂಬ ವೈರುಧ್ಯದೊಂದಿಗೆ ಅರ್ಥೈಸಲಾಗಿದೆ.

ಬ್ರಾಹ್ಮಣ ಹೆಣ್ಣುಮಕ್ಕಳು ಮುಟ್ಟಾದ ಮೂರು ದಿನಗಳೂ ಪ್ರತ್ಯೇಕ ತಟ್ಟೆ-ಲೋಟ-ಚಾಪೆ ದಿಂಬುಗಳೊಂದಿಗೆ ಒಂದು ಕೋಣೆ ಸೇರಬೇಕಿತ್ತು. ಅವರಿಗೆ ಅನ್ನಾಹಾರ ಅಲ್ಲಿಗೇ ಸರಬರಾಜಾಗುತ್ತಿತ್ತು. ಮನೆಯ ಸದಸ್ಯರೊಂದಿಗೆ ಬೆರೆಯುವಂತಿಲ್ಲ. ಮಕ್ಕಳು ಅಪ್ಪಿ ತಪ್ಪಿ ಮುಟ್ಟಿಸಿಕೊಂಡರೆ ಅವರ ಬಟ್ಟೆಗಳನ್ನು ಕಳಚಿ ನೆನೆಸಬೇಕಿತ್ತು. ತೀರಾ ಹಾಲುಕುಡಿಯುವ ಮುಕ್ಕಳಾದರೆ ಬಟ್ಟೆ ಇಲ್ಲದೆಯೇ ಅವರನ್ನೂ ಇವರನ್ನೂ ಮುಟ್ಟಿಸಿಕೊಂಡು ಇರಬಹುದಿತ್ತು. ಈಗ, ಕಾಲ ಬದಲಾದಂತೆ, ದುಡಿಯುವ/ಕಲಿಯುವ ಹೆಣ್ಣುಮಕ್ಕಳು ಮೂರು ದಿನ ರಜೆಹಾಕಿ ಕೂರಲು ಸಾಧ್ಯವಿಲ್ಲದ್ದರಿಂದ ಪದ್ಧತಿಯಲ್ಲಿ ಸ್ವಲ್ಪ ಮಾರ್ಪಾಡು ಆಗಿದೆ; ಮನೆಯ ಹಜಾರ, ರೂಮು, ಡೈನಿಂಗ್‌ ಹಾಲ್‌ನವರೆಗೆ ಪ್ರವೇಶ ದೊರೆತಿದೆ. ಅಡುಗೆ ಕೋಣೆ ಮತ್ತು ದೇವರ ಕೋಣೆಗೆ ಎಂದಿನಂತೆ ನಿಷಿದ್ಧ. ಮನೆಯಲ್ಲಿ ಸಾಲಿಗ್ರಾಮ ಇಟ್ಟು ಪೂಜಿಸುವ ಕುಟುಂಬಗಳಲ್ಲಿ ಮಾತ್ರ ಈಗಲೂ ನಿಷೇಧಗಳ ಪಾಲನೆಯಲ್ಲಿ ಹೆಚ್ಚು ಕಟ್ಟುನಿಟ್ಟು ಇದೆ. 

ಕಾಡುಗೊಲ್ಲ ಬುಡಕಟ್ಟು ಸಮುದಾಯದಲ್ಲಿ, ಮುಟ್ಟಾದ ಹೆಣ್ಣುಮಕ್ಕಳನ್ನು ಮನೆಯಿಂದ ಮಾತ್ರವಲ್ಲ ಊರಿನಿಂದಲೇ ಆಚೆಗೆ ಅಂದರೆ ಹೊಲದಲ್ಲೋ ಮರದ ಕೆಳಗೋ ಪ್ರತ್ಯೇಕ ಇರಿಸಲಾಗುತ್ತದೆ. ತುಸು ಹೆಚ್ಚೇ ಕಾಳಜಿ ಬೇಕಿರುವ, ಬೆಚ್ಚಗೆ ಇರಬೇಕಾದ, ಪೌಷ್ಠಿಕ ಆಹಾರ ದೊರೆಯಬೇಕಾದ ಹೊತ್ತಿನಲ್ಲಿ ಹೆಣ್ಣುಮಕ್ಕಳು ಅಭದ್ರತೆ, ಅನಾದರದಲ್ಲಿ ಕೊರಗುವಂತಾಗುತ್ತದೆ. ವಿದ್ಯಾವಂತ ಯುವಜನರಿಂದಾಗಿ ಈ ಬಗ್ಗೆ ಅನೇಕ ಚರ್ಚೆಗಳು, ಪ್ರತಿರೋಧಗಳು ಸಮುದಾಯದ ಒಳಗಿನಿಂದಲೇ ಇತ್ತೀಚೆಗೆ ವ್ಯಕ್ತವಾಗುತ್ತಿವೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಹಲವು ಯೋಜನೆಗಳು, ಜಾಗೃತಿ ಕಾರ್ಯಕ್ರಮಗಳು ಸುಧಾರಣೆಯ ದಿಸೆಯಲ್ಲಿ ಕೆಲಸ ಮಾಡುತ್ತಿವೆ.

ಅನೇಕ ಕಡೆ ಗ್ರಾಮಹಬ್ಬ ನಡೆಯುವ ಹೊತ್ತಿನಲ್ಲಿ ದೇವರಿಗೆ ಬಲಿ ನೀಡಿದ ಮಾಂಸದೂಟದ ಸಂಭ್ರಮವಿರುತ್ತದೆ. ಊರಿನಲ್ಲಿ ಏನಾದರೂ ಸೂತಕವಾದರೆ ಹಬ್ಬ ಮುಂದೂಡಬೇಕಾಗುತ್ತದೆ. ಹಬ್ಬ ಮುಂದೂಡುವ ಅನಿವಾರ್ಯವನ್ನು ತಪ್ಪಿಸುವುದಕ್ಕಾಗಿ ಮುಟ್ಟಿನ ದಿನ ಹತ್ತಿರವಿರುವ ಹೆಣ್ಣುಮಕ್ಕಳನ್ನು ಬೇರೆ ಊರುಗಳಿಗೆ ಕಳಿಸಿಬಿಡಲಾಗುತ್ತದೆ.

ಹೊರಗೆ ಕೂರಿಸುವ ಕ್ರಿಯೆಯನ್ನು ಅವರ ದೇಹಕ್ಕೆ ನೀಡುವ ವಿಶ್ರಾಂತಿ ಎಂದೂ ಅದರಿಂದ ಅವರಿಗೆ ಒಳಿತೇ ಆಗುವುದು ಎಂದೂ ಹಲವರು ಸಮರ್ಥನೆಗಿಳಿಯುತ್ತಾರೆ. ಆದರೆ ಅಸೃಶ್ಯತೆ ಆಚರಣೆ ಯಾವ ನಾಗರಿಕ ಸಮುದಾಯಕ್ಕೂ ಶೋಭೆ ತರುವ ವಿಚಾರವಲ್ಲ. ತಮಗೆ ವಿಶ್ರಾಂತಿ ನೀಡಿದ್ದಾರೆ ಎಂಬುದರ ಬದಲು, ತಮ್ಮನ್ನು ಬೇರೆ ಇರಿಸಿದ್ದಾರೆ ಎಂಬುದು ಹೆಣ್ಣು ಮಕ್ಕಳನ್ನು ಖಿನ್ನತೆಗೆ ದೂಡುತ್ತದೆ. ಮಹಿಳೆಯರ ಮುಟ್ಟಿನ ದಿನಗಳ ಕಾಳಜಿ ತೋರುವ ಮಂದಿ ತಮ್ಮ ತಮ್ಮ ಕಛೇರಿಗಳಲ್ಲಿ ಮುಟ್ಟಿನ ರಜೆಯ ಜಾರಿಗೆ ಒತ್ತಾಯಿಸಲಿ. ಮನೆಯಲ್ಲಿ ಕೆಲಸವನ್ನು ಹಂಚಿಕೊಂಡು ಕಷ್ಟ-ಸುಖಕ್ಕೆ ಕಿವಿಗೊಡಲಿ.

-ದೀಪಾ ಗಿರೀಶ್

***

ಕಾಲದೊಂದಿಗೆ ಎಲ್ಲವೂ ಬದಲು

ಜೈನ ಧರ್ಮದ ಸಂಪ್ರದಾಯವು ಮುಟ್ಟನ್ನು ತೀರಾ ಅಪವಿತ್ರವೆಂದು ಪರಿಗಣಿಸಿಲ್ಲ; ಹಾಗಿದ್ದರೂ ಋತುಚಕ್ರದ ಅವಧಿಯಲ್ಲಿ ಕೆಲವು ಕಟ್ಟುಪಾಡುಗಳನ್ನು ಹಿಂದೆ ಪಾಲಿಸಬೇಕಿತ್ತು. ಕೆಲವೊಂದು ಕಟ್ಟುಪಾಡುಗಳು ಇಂದಿಗೂ ಇವೆ. ಆ ಆಚರಣೆಗಳು ಮನೆಗಷ್ಟೇ ಸೀಮಿತ. ಉದಾಹರಣೆಗೆ ಮುಟ್ಟಾಗಿರುವ ಹೆಣ್ಣು ಬಸದಿಗೆ ಭೇಟಿ ಕೊಡುವ೦ತಿಲ್ಲ ಅಥವಾ ಆ ಸ೦ದರ್ಭದಲ್ಲಿ ಜಪ, ಪೂಜೆ ಮಾಡುವಂತಿಲ್ಲ. ದೈವ–ಭೂತಗಳನ್ನು ಆರಾಧಿಸುವ, ಭೂತದ ಚಾವಡಿ ಇರುವ ಮನೆಗಳ ಹೆಣ್ಣು ಮಕ್ಕಳು ಮುಟ್ಟಾದರೆ, ಮೊದಲ ನಾಲ್ಕು ದಿನ ಮನೆಯವರಿಂದ ಪ್ರತ್ಯೇಕವಾಗಿ ಇರಬೇಕಾಗಿತ್ತು. 

ಹಾಗೆಯೇ ಐದನೇ ದಿನ ಸ್ನಾನ ಮಾಡಿದ ಬಳಿಕವೇ ಮನೆಗೆ ಪ್ರವೇಶಿಸಬೇಕಿತ್ತು. ಉಳಿದಂತೆ ಆಕೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಬೇರೆಯವರು ಮುಟ್ಟುವಂತಿರಲಿಲ್ಲ, ಒಂದು ವೇಳೆ ಮುಟ್ಟಿದರೂ ಅದನ್ನು ಬೂದಿಯಿಂದ ತೊಳೆದು ಶುಚಿಗೊಳಿಸುತ್ತಿದ್ದರು (ಉದಾಹರಣೆಗೆ ಸ್ನಾನದ ಮನೆಯಲ್ಲಿ ಉಪಯೋಗಿಸುತ್ತಿದ್ದ ಹಂಡೆ, ಚೊಂಬು ಇತ್ಯಾದಿ).

ಆಧುನಿಕ ಜಗತ್ತಿನಲ್ಲಿ ಮುಟ್ಟಿಗೆ ಸಂಬಂಧಿಸಿದ ಕಟ್ಟುಪಾಡುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ನನ್ನ ತಾಯಿಯ ಕಾಲದಲ್ಲಿಯೇ ಅದೆಷ್ಟೋ ಕಟ್ಟುಪಾಡುಗಳು ಸಡಿಲವಾಗಿದ್ದವು. ದೈವ-ಭೂತದ ಆರಾಧನೆ ಇಲ್ಲದ ಮನೆಗಳವರಿಗೆ ಅಷ್ಟೊಂದು ಕಟ್ಟುಪಾಡುಗಳು ಇರಲಿಲ್ಲ. ದೇವರ ಮನೆಯೊಂದನ್ನು ಬಿಟ್ಟು ಬೇರೆ ಎಲ್ಲಾ ಕಡೆಯೂ ಬೇರೆ ದಿನಗಳಂತೆಯೇ ಓಡಾಡಬಹುದಿತ್ತು.

ನನ್ನ ಮೇಲೆ ಯಾವುದೇ ಕಟ್ಟುಪಾಡು ಹೇರಿರಲಿಲ್ಲ. ಯಾಕೆಂದರೆ ನಮ್ಮ ಮನೆಯಲ್ಲಿ ದೈವ ಭೂತಗಳ ಚಾವಡಿ ಇರಲಿಲ್ಲ. ಮುಟ್ಟಾಗಿದ್ದರೆ, ನಮ್ಮ ಹಿರಿಯರ ಮನೆಯಲ್ಲಿ  ನಡೆಯುವ ಪೂಜೆ ಕಾರ್ಯಗಳಿಗೆ ಕರೆದುಕೊಂಡು ಹೋಗುತ್ತಿರಲಿಲ್ಲ.

ನಾನು ಮೊದಲ ಬಾರಿ ಮುಟ್ಟಾದಾಗ ಕಟ್ಟುಪಾಡಿಗಿಂತ ಶುಚಿತ್ವದ ಬಗ್ಗೆ ಹೇಳಿಕೊಟ್ಟಿದ್ದರು. ನನಗೆ ಅಜ್ಜಿಯೆಂದರೆ ತುಂಬಾ ಪ್ರೀತಿ. ಅವರ ಜತೆಗೆ ಮಲಗುವುದು ಇಷ್ಟ. ಆದರೆ, ಮುಟ್ಟಾದಾಗ ಅಜ್ಜಿಯ ಜೊತೆಗೆ ಮಲಗಲು ಬಿಡುತ್ತಿರಲಿಲ್ಲ. ಮುಟ್ಟಾದವರ ಪಕ್ಕ ಮಲಗಿದರೆ ತಮ್ಮ ಆರೋಗ್ಯ ಕೆಡುತ್ತದೆ ಎಂಬುದು ಅಜ್ಜಿಯ ನಂಬಿಕೆಯಾಗಿತ್ತು. ನಾನಂತೂ ಈ ವಿಷಯದಲ್ಲಿ ಸ್ವಲ್ಪ ಮೊಂಡು ಅಂತಾನೇ ಹೇಳಬಹುದು. ಹಾಗಾಗಿ ಮುಟ್ಟಾದಾಗ ಅಜ್ಜಿಗೆ ಹೇಳುವುದನ್ನೇ ನಿಲ್ಲಿಸಿಬಿಟ್ಟೆ. ಮುಟ್ಟಾದಾಗ ಅಜ್ಜಿಗೆ ಹೇಳದೇ ಅವರ ಪಕ್ಕ ಮಲಗಿದರೂ ಅವರಿಗೆ ಯಾವತ್ತೂ ಯಾವ ತೊಂದರೆಯೂ ಆಗಲಿಲ್ಲ. 

ನಮ್ಮಲ್ಲಿ ಈಗಲೂ ಬಸದಿಗೆ ಪ್ರವೇಶಿಸಲು ಅಥವಾ ಪೂಜೆಗಳನ್ನು ಮಾಡಲು ನಿಷೇಧವಿದೆ. ಗ್ರಾಮೀಣ ಭಾಗದಲ್ಲಿ ಕೆಲವೊಂದು ಸಂಪ್ರದಾಯಗಳನ್ನು ಪಾಲಿಸಲಾಗುತ್ತಿದೆ. ಕಾಲದೊಂದಿಗೆ ಎಲ್ಲವೂ ಬದಲಾಗುತ್ತಿದೆ.

-ಭವ್ಯಶ್ರೀ ಜೈನ್‌ 

***

ಕ್ರೈಸ್ತರಲ್ಲಿ ‘ಕ್ವಾರಂಟೈನ್‌’ ಇಲ್ಲ

ಹೆಣ್ಣುಮಗಳು ದೊಡ್ಡವಳಾದೊಡನೆ ಪ್ರತಿ ತಿಂಗಳು ಆ ದಿನಗಳು ಬಂದವೆಂದರೆ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡುವುದು ಒಂದು ಸಮಸ್ಯೆ. ಪ್ರಾಯ ಕಳೆದಂತೆ ಅಭ್ಯಾಸ ಬಲದಿಂದ ಹೇಗೋ ನಿಭಾಯಿಸುತ್ತೇವೆ. ಕೆಲವರಿಗೆ ಆರೋಗ್ಯ ಕೈಕೊಡುತ್ತದೆ. ಅದಕ್ಕೆ ಈಗ ಸೂಕ್ತ ವೈದ್ಯಕೀಯ ಚಿಕಿತ್ಸೆಯೂ ಉಂಟು. ಕ್ರೈಸ್ತ‌ ಸಮುದಾಯದಲ್ಲಿ ಮುಟ್ಟು ಎನ್ನುವುದು ಚರ್ಚೆಯ ವಿಷಯವೇ ಆಗಿರಲಿಲ್ಲ. ‘ಕ್ವಾರಂಟೈನ್‌’ ಆಗಬೇಕಾದ ಅಗತ್ಯವೂ ಇರಲಿಲ್ಲ. 

ಮುಟ್ಟಿನ ದಿನಗಳಲ್ಲಿ ಪ್ರಾರ್ಥನಾ ಮಂದಿರಗಳಿಗೆ ಹೋಗದಿರುವ ಪದ್ಧತಿ ಕೆಲವು ಸಮುದಾಯಗಳಲ್ಲಿದೆ. ನನ್ನ ಗೆಳತಿಯೊಬ್ಬಳು ಉತ್ತರ ಭಾರತದ ಯಾತ್ರೆ ಕೈಗೊಂಡಿದ್ದಳು. ಆಕೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರೂ ದೇವಾಲಯದ ದರ್ಶನಕ್ಕೆ ಹೋಗಿದ್ದಾಗಲೇ ಮುಟ್ಟಾಗಿದ್ದಳಂತೆ. ಹಾಗಂತ ತನಗೆ ಯಾವುದೇ ಅಪಾಯ ಆಗಲಿಲ್ಲ ಅಂತ ಆಕೆ ಹೇಳಿದ್ದಳು. ನೈಸರ್ಗಿಕವಾದ ಈ ಸಹಜ ಕ್ರಿಯೆಗೆ ಮೈಲಿಗೆ ಅಂತ ಹೆಸರು ಏಕೆ ಇಟ್ಟರೋ ಅರ್ಥವಾಗುತ್ತಿಲ್ಲ.

ಬೈಬಲ್‌ ಗ್ರಂಥದಲ್ಲಿ ಒಂದು ವಿವರಣೆ ಹೀಗಿದೆ: ‘ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಮಲಿನ ಮಾಡುವಂಥದು ಒಂದೂ ಇಲ್ಲ. ಆದರೆ, ಮನುಷ್ಯನೊಳಗಿನಿಂದ ಹೊರಡುವವೇ ಮನುಷ್ಯನನ್ನು ಮಲಿನ ಮಾಡುವಂಥವಾಗಿವೆ. ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದು ಅವನ ಹೃದಯದೊಳಗೆ ಸೇರದೆ, ಹೊಟ್ಟೆಯಲ್ಲಿ ಸೇರಿ ಬಹಿರ್ದೆಸೆಯಲ್ಲಿ ಹೋಗುವುದರಿಂದ ಅವನನ್ನು ಮಲಿನ ಮಾಡದು. ಒಳಗಿನಿಂದ ಅಂದರೆ ಮನುಷ್ಯನ ಮನಸ್ಸಿನೊಳಗಿನಿಂದ ಕೆಟ್ಟ ಆಲೋಚನೆ, ಕಳ್ಳತನ, ಕೊಲೆ, ಹಾದರ ಮೊದಲಾದವು ಹೊರಟು ಬರುತ್ತವೆ. ಮನುಷ್ಯನನ್ನು ಕೆಡಿಸುವಂಥವು ಇವೇ.’

-ಮೋಲಿ ಮಿರಾಂದಾ

***

‘ಮುಟ್ಟು ಮುಚ್ಚಿಡುವ ಸಂಗತಿಯಲ್ಲ’

ಮಹಿಳೆಯರನ್ನು ಬಾಧಿಸುವ ಹಲವು ಸಂಗತಿಗಳಲ್ಲಿ ಮುಟ್ಟು ಮುಖ್ಯವಾದದ್ದು. ಈ ಕುರಿತು ಮುಕ್ತವಾಗಿ ಮಾತನಾಡಲು ಮಹಿಳೆಯರು ಸಹ ಹಿಂಜರಿಯುತ್ತಾರೆ. ಮುಟ್ಟಿಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಡುವ ಪ್ರವೃತ್ತಿ ಇನ್ನೂ ಬದಲಾಗಿಲ್ಲ. ಈ ಕುರಿತು ಬಹಿರಂಗವಾಗಿ ಮಾತನಾಡಲು ಈಗಲೂ ಹಿಂಜರಿಕೆಯ ವಾತಾವರಣ ಇದೆ. ಶತಮಾನಗಳಿಂದಲೂ ಮುಟ್ಟಿನ ವಿಷಯವನ್ನು ಗೌಪ್ಯವಾಗಿಯೇ ಇಟ್ಟಿದ್ದೇವೆ. ಜಗತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರಿದಿದ್ದರೂ ಈಗಲೂ ಅನೇಕರಲ್ಲಿ ಮುಟ್ಟಿನ ಕುರಿತು ತಪ್ಪು ಗ್ರಹಿಕೆ ಇದೆ. ಇದೊಂದು ಸಹಜ ನೈಸರ್ಗಿಕ ಕ್ರಿಯೆ ಎಂಬ ಅರಿವು ಮೂಡಿಸುವ ಮೂಲಕ ಆ ತಪ್ಪು ಗ್ರಹಿಕೆ ಹೋಗಲಾಡಿಸಬೇಕಿದೆ. ಇದೊಂದು ಸಾರ್ವಜನಿಕ ಚರ್ಚೆಯ ವಿಷಯವಾಗಬೇಕು. ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು.

-ಜ್ಯೋತಿ ಹಿಟ್ನಾಳ, ಸಾಮಾಜಿಕ ಕಾರ್ಯಕರ್ತೆ, ‘ಮುಟ್ಟು ಏನಿದರ ಗುಟ್ಟು’ ಪುಸ್ತಕದ ಸಂಪಾದಕಿ

****

ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮಷೀನ್

ಸ್ಯಾನಿಟರಿ ನ್ಯಾಪ್‌ಕಿನ್‌‌ ವೆಂಡಿಂಗ್ ಮಷೀನ್‌ಗಳು ಜಗತ್ತಿನ ಬಹುತೇಕ ಕಡೆ ಬಳಕೆಯಲ್ಲಿ ಇವೆ. ಅಮೆರಿಕ, ಆಸ್ಟ್ರೇಲಿಯ ಮತ್ತು ಐರೋಪ್ಯ ದೇಶಗಳಲ್ಲಿ ಈ ಯಂತ್ರಗಳ ಬಳಕೆ ಗರಿಷ್ಠಮಟ್ಟದಲ್ಲಿ ಇದೆ. ಆದರೆ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಲ್ಲಿ ಈ ಯಂತ್ರಗಳ ಬಳಕೆ ಇತ್ತೀಚೆಗಷ್ಟೇ ಆರಂಭವಾಗಿದೆ

* ಗೋಡೆಗೆ ಅಳವಡಿಸುವ ಮತ್ತು ಮೇಜಿನ ಮೇಲೆ ಇರಿಸುವ ವೆಂಡಿಂಗ್‌ ಯಂತ್ರಗಳು ಬಳಕೆಯಲ್ಲಿವೆ

* 10–50 ನ್ಯಾಪ್‌ಕಿನ್‌‌ ಸಾಮರ್ಥ್ಯದ ಯಂತ್ರಗಳ ಬಳಕೆ ಹೆಚ್ಚು. 50–100 ಮತ್ತು ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಯಂತ್ರಗಳೂ ಬಳಕೆಯಲ್ಲಿವೆ

* ಶಾಲೆ–ಕಾಲೇಜುಗಳಲ್ಲಿ ಇಂತಹ ಯಂತ್ರಗಳನ್ನು ಗರಿಷ್ಠಮಟ್ಟದಲ್ಲಿ ಅಳವಡಿಸಲಾಗಿದೆ. ಉಳಿದಂತೆ ಮಾಲ್‌ಗಳು, ರಂಗಮಂದಿರಗಳು, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲೂ ಈ ಯಂತ್ರಗಳ ಬಳಕೆ ಇದೆ

* ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ದೇಶಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳು (ಸಿಎಸ್‌ಆರ್‌ ಅಡಿಯಲ್ಲಿ) ಈ ಯಂತ್ರಗಳನ್ನು ಅಳವಡಿಸಿದ್ದು, ಉಚಿತವಾಗಿ ನ್ಯಾಪ್‌ಕಿನ್‌‌ ವಿತರಿಸುತ್ತಿವೆ. ಮುಂದಿನ 15 ವರ್ಷಗಳಲ್ಲಿ ಈ ದೇಶಗಳಲ್ಲಿ ನ್ಯಾಪ್‌ಕಿನ್‌‌ ವಿತರಣಾ ಯಂತ್ರಗಳ ಮಾರುಕಟ್ಟೆ ಐದುಪಟ್ಟು ಬೆಳೆಯಬಹುದು ಎಂದು ನಿರೀಕ್ಷಿಸಲಾಗಿದೆ

ಎಲ್ಲೆಡೆ ಬೇಕು ವೆಂಡಿಂಗ್‌ ಮಷೀನ್‌

ಋತುಸ್ರಾವದ ವೇಳೆ ಬಾಲಕಿಯರು ಶಾಲೆ, ಕಾಲೇಜು ತಪ್ಪಿಸಿಕೊಳ್ಳದಂತೆ ಏನೇನು ಕ್ರಮ ಕೈಗೊಳ್ಳಬಹುದು ಎಂಬುದನ್ನು ಶಿಫಾರಸು ಮಾಡಲು ಕೇಂದ್ರ ಶಿಕ್ಷಣ ಸಲಹಾ ಮಂಡಳಿಯು (ಸಿಎಬಿಇ) ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯದ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ನೇತೃತ್ವದ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಕ ಮಾಡಿತ್ತು.

ದೇಶದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಸ್ಯಾನಿಟರಿ ಪ್ಯಾಡ್ ನೀಡುವ ‘ಸ್ಯಾನಿಟರಿ ನ್ಯಾಪ್‌ಕಿನ್‌ ವೆಂಡಿಂಗ್‌ ಮಷೀನ್’‌ ಅಳವಡಿಸುವಂತೆ ಈ ಸಮಿತಿ 2018ರಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

* ವಿಶ್ವವಿದ್ಯಾಲಯಗಳ ಆವರಣದಲ್ಲಿ ವೆಂಡಿಂಗ್‌ ಮಷೀನ್‌ ಮತ್ತು ಇನ್ಸಿನರೇಟರ್‌ (ದಹನ ಯಂತ್ರ)‌ ಅಳವಡಿಸುವಂತೆ 2017ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿತ್ತು 

* ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ಆವರಣಗಳಲ್ಲಿ ಉಚಿತವಾಗಿ ಪ್ಯಾಡ್‌ ಒದಗಿಸಲು ವೆಂಡಿಂಗ್‌ ಮಷೀನ್‌ ಅಳವಡಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿತ್ತು 

* ಬಳಸಿದ ಪ್ಯಾಡ್‌ಗಳ ವಿಲೇವಾರಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿತ್ತು. ವೆಂಡಿಂಗ್‌ ಮಷೀನ್‌ಗಳ ಜತೆಗೆ ಬಳಸಿದ ಪ್ಯಾಡ್‌ಗಳನ್ನು ವಿಲೇವಾರಿ ಮಾಡಲು ಪರಿಸರಸ್ನೇಹಿ ಇನ್ಸಿನರೇಟರ್ ಅಳವಡಿಸುವಂತೆ ಸಲಹೆ ಮಾಡಿತ್ತು

* ಇದಕ್ಕೂ ಮೊದಲೇ, ದೇಶದಲ್ಲಿಯೇ ಮೊದಲ ಬಾರಿಗೆ ಕೇರಳ ಸರ್ಕಾರವು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ 200 ವೆಂಡಿಂಗ್‌ ಮಷೀನ್‌ ಅಳವಡಿಸಿತ್ತು 

* ಅದರ ಬೆನ್ನಲ್ಲೇ ರಾಜಸ್ಥಾನ, ಒಡಿಶಾ ಸೇರಿದಂತೆ ಅನೇಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಶಾಲೆಗಳಲ್ಲಿ ವೆಂಡಿಂಗ್‌ ಮಷೀನ್‌ಗಳನ್ನು ಅಳವಡಿಸಿವೆ

* ಭಾರತದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಅದನ್ನು ಕೈಬಿಡುವಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ‘ಬ್ಲೀಡ್‌ ವಿದೌಟ್‌ ಫಿಯರ್‌, ಬ್ಲೀಡ್‌ ವಿದೌಟ್‌ ಟ್ಯಾಕ್ಸ್‌’ ಎಂಬ ಅಭಿಯಾನ ನಡೆಸಿವೆ  

ಜಗದಗಲ ನಂಬಿಕೆ ಚಿತ್ರವಿಚಿತ್ರ

ಮುಟ್ಟಿನ ಅವಧಿಯಲ್ಲಿ ಮಹಿಳೆಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವಂತಹ ನಂಬಿಕೆಗಳು ಜಗತ್ತಿನ ಎಲ್ಲಾ ಭಾಗಗಳಲ್ಲೂ ಇವೆ. ‘ಕ್ಲೂ’ ಎಂಬ ಸ್ವಯಂಸೇವಾ ಸಂಸ್ಥೆಯು ಇಂತಹ ನಂಬಿಕೆಗಳ ಬಗ್ಗೆ ಜಗತ್ತಿನಾದ್ಯಂತ ಸಮೀಕ್ಷೆ ನಡೆಸಿ, ಅಧ್ಯಯನ ವರದಿ ಬಿಡುಗಡೆ ಮಾಡಿದೆ. ಮುಟ್ಟಿಗೆ ಸಂಬಂಧಿಸಿದಂತೆ ಜಗತ್ತಿನ ಎಲ್ಲೆಡೆ, ಒಂದೇ ಸ್ವರೂಪದ ಕೆಲವು ನಂಬಿಕೆಗಳು ಇವೆ. ಆದರೆ ಎಲ್ಲೆಡೆಯೂ ಅಲ್ಲಿಗೇ ಸೀಮಿತವಾದ ನಂಬಿಕೆಗಳೂ ಇವೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.

ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಸ್ನಾನ ಮಾಡಬಾರದು ಎಂಬ ನಂಬಿಕೆ ಇದೆ. ಇದನ್ನು ಬಹುತೇಕ ಮಂದಿ ಪಾಲಿಸುವುದಿಲ್ಲ. ಆದರೆ, ‘ಇದನ್ನು ಪಾಲಿಸುತ್ತೇವೆ’ ಎಂದು ಸಮೀಕ್ಷೆಯಲ್ಲಿ ಹಲವರು ಒಪ್ಪಿಕೊಂಡಿದ್ದಾರೆ. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ತರಕಾರಿ ಸಲಾಡ್ ಮತ್ತು ಉಪ್ಪಿನಕಾಯಿ  ಸಿದ್ಧಪಡಿಸಿದರೆ ಅದು ಹಾಳಾಗುತ್ತದೆ ಎಂಬ ನಂಬಿಕೆ ಗಾಢವಾಗಿದೆ. ‘ಇದನ್ನು ಪಾಲಿಸುತ್ತೇವೆ’ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಹಲವು ಮಂದಿ ಹೇಳಿದ್ದಾರೆ. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಜಪಾನ್‌ನ ಜನಪ್ರಿಯ ತಿನಿಸು ‘ಸುಶಿ’ ತಯಾರಿಸಿದರೆ ಅದರ ರುಚಿ ಕೆಡುತ್ತದೆ ಎಂಬ ನಂಬಿಕೆ ಇದೆ. ಇದನ್ನು ಪಾಲಿಸುವವರ ಪ್ರಮಾಣವೂ ದೊಡ್ಡದು ಎಂದು ವರದಿಯಲ್ಲಿ ಹೇಳಲಾಗಿದೆ.

ಮುಟ್ಟಿನ ಅವಧಿಯಲ್ಲಿ ಬಿಸಿನೀರಿನ ಸ್ನಾನ ಮಾಡಿದರೆ, ರಕ್ತಸ್ರಾವ ಹೆಚ್ಚಾಗುತ್ತದೆ. ಹೀಗಾಗಿ ತಣ್ಣಿರಿನಲ್ಲೇ ಸ್ನಾನ ಮಾಡಬೇಕು ಎಂಬ ನಂಬಿಕೆ ಇಸ್ರೇಲ್‌ನಲ್ಲಿದೆ. ಇಸ್ರೇಲ್‌ನ ಗ್ರಾಮೀಣ ಪ್ರದೇಶಗಳಲ್ಲಿ ಇದು ಈಗಲೂ ಆಚರಣೆಯಲ್ಲಿದೆ. ಋತುಸ್ರಾವದ ದಿನಗಳಲ್ಲಿ ಸಸಿಗಳು ಮತ್ತು ಹೂವನ್ನು ಮಹಿಳೆಯರು ಸ್ಪರ್ಶಿಸಿದರೆ, ಅವು ಬಾಡಿಹೋಗುತ್ತವೆ ಎಂಬ ನಂಬಿಕೆ ರೊಮೇನಿಯದಲ್ಲಿ ಇದೆ. 

ಮೊದಲ ಮುಟ್ಟಿನ ರಕ್ತದಿಂದ ಮುಖ ತೊಳೆದರೆ, ಮುಖದ ಕಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಫಿಲಿಪ್ಪೀನ್ಸ್‌ನಲ್ಲಿದೆ. ಇದನ್ನು ಪಾಲಿಸುವವರೂ ಇದ್ದಾರೆ. ನ್ಯಾಪ್ಕಿನ್ ಅಥವಾ ಮುಟ್ಟಿನ ಬಟ್ಟೆಯನ್ನು ಬಿಸಾಡುವ ಮುನ್ನ ಶುಚಿ ಮಾಡಬೇಕು ಇಲ್ಲದಿದ್ದಲ್ಲಿ ದೆವ್ವಗಳ ಕಾಟ ಆರಂಭವಾಗುತ್ತದೆ ಎಂಬ ನಂಬಿಕೆ ಮಲೇಷ್ಯಾದಲ್ಲಿ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮುಟ್ಟಾಗಿರುವ ಮಹಿಳೆಯರು ಮಕ್ಕಳನ್ನು ಆಟವಾಡಿಸಿದರೆ, ಮುಟ್ಟಿದರೆ, ಮಕ್ಕಳಿಗೆ ಕಾಯಿಲೆ ಬರುತ್ತದೆ ಎಂಬ ನಂಬಿಕೆ ಬೊಲಿವಿಯದಲ್ಲಿ ಇದೆ. 

ಆಧಾರ: ಕ್ಲೂ ಎನ್‌ಜಿಒ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು