ಬುಧವಾರ, ಮೇ 25, 2022
27 °C

ಆಳ–ಅಗಲ: ಜೇಮ್ಸ್‌ ವೆಬ್‌ ದೂರದರ್ಶಕ ಬಾಹ್ಯಾಕಾಶಕ್ಕೆ ಭೂತಕನ್ನಡಿ

ಜಯಸಿಂಹ ಆರ್‌., ಅಮೃತ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

ವಿಶ್ವದ ಈವರೆಗಿನ ಅತ್ಯಂತ ದೊಡ್ಡ ದೂರದರ್ಶಕ, ‘ಜೇಮ್ಸ್‌ ವೆಬ್‌’ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಅಂತಿಮ ಹಂತದ ಸಿದ್ಧತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇದೇ 22ರಂದು ಈ ದೂರದರ್ಶಕವನ್ನು ಹೊತ್ತ ಏರಿಯನ್–5 ನೌಕೆಯು ಬಾಹ್ಯಾಕಾಶದತ್ತ ಪ್ರಯಾಣ ಅರಂಭಿಸಲಿದೆ.

‘ಜೇಮ್ಸ್‌ ವೆಬ್‌ ದೂರದರ್ಶಕವು ಕಕ್ಷೆ ಸೇರಿ, ತನ್ನ ಫಲಕಗಳನ್ನು ಅರಳಿಸಿ, ನಮ್ಮ ಸೌರಮಂಡಲದಾಚೆಗೆ ತನ್ನ ದರ್ಪಣಗಳನ್ನು ತೆರೆದುಕೊಂಡು ನಿಲ್ಲಲಿದೆ. ನಾವು ಬಾಹ್ಯಾಕಾಶವನ್ನು ನೋಡುವ ಬಗೆಯನ್ನೇ ಬದಲಿಸುವಂತಹ ವಿಚಾರಗಳನ್ನು ಈ ದೂರದರ್ಶಕವು ಭೂಮಿಗೆ ಕಳುಹಿಸಿ ಕೊಡಲಿದೆ. ಜಗತ್ತು ಹೇಗಿತ್ತು ಎಂಬುದನ್ನು ದೂರದರ್ಶಕಗಳು ತೋರಿಸುತ್ತವೆಯೇ ಹೊರತು, ಈಗ ಹೇಗಿದೆ ಎಂಬುದನ್ನಲ್ಲ. ಹೀಗಾಗಿ ನಮ್ಮ ವಿಶ್ವದ ಇತಿಹಾಸವನ್ನು ಈ ಹಿಂದೆ ನೋಡಿರದೇ ಇರುವ ರೀತಿಯಲ್ಲಿ ನೋಡಲು ಈ ದೂರದರ್ಶಕವು ಅನುವು ಮಾಡಿಕೊಡುತ್ತದೆ. ನಾವು ಈವರೆಗೆ ನೋಡಿರುವ ಗೆಲಾಕ್ಸಿಗಳಿಗಿಂತಲೂ ಬಹುದೂರವಿರುವ ಗೆಲಾಕ್ಸಿಗಳನ್ನು ಈ ದೂರದರ್ಶಕವು ನಮಗೆ ತೋರಿಸುತ್ತದೆ’ ಎಂದು ನಾಸಾ ವಿವರಿಸಿದೆ.

ಈಗಿನ ಅತ್ಯಂತ ದೊಡ್ಡ ದೂರದರ್ಶಕ ಎನಿಸಿರುವ ಹಬಲ್ ದೂರದರ್ಶಕಕ್ಕಿಂತ ಹಲವು ಪಟ್ಟು ದೂರದಲ್ಲಿನ ಅರ್ಥಾತ್ ಹಿಂದಿನ ಬಾಹ್ಯಾಕಾಶ ವಿದ್ಯಮಾನಗಳನ್ನು ಅಥವಾ ವಿಶ್ವದ ಭೂತಕಾಲದ ವಿದ್ಯಮಾನಗಳನ್ನು ಜೇಮ್ಸ್‌ ವೆಬ್‌ ನಮ್ಮ ಎದುರು ತೆರೆದಿಡಲಿದೆ. ವಿಶ್ವವು ಹೇಗೆ ಉಗಮವಾಯಿತು ಎಂಬುದನ್ನು ಅರಿತುಕೊಳ್ಳುವಲ್ಲಿ, ಮನುಷ್ಯನನ್ನು ಮತ್ತಷ್ಟು ಮುಂದಕ್ಕೆ (ಇತಿಹಾಸದಲ್ಲಿ ಹಿಂದಕ್ಕೆ) ಕರೆದುಕೊಂಡು ಹೋಗುವ ಸಾಮರ್ಥ್ಯ ಈ ಜೇಮ್ಸ್‌ ವೆಬ್ ದೂರದರ್ಶಕಕ್ಕೆ ಇದೆ.

ಭೂಮಿಯ ನೆರಳಿನಲ್ಲಿ ಸೂರ್ಯನ ಸುತ್ತುವ ವೆಬ್
ಜೇಮ್ಸ್‌ ವೆಬ್ ದೂರದರ್ಶಕವನ್ನು ಭೂಮಿಯ ಕಕ್ಷೆಯಾಚೆಗಿನ ‘ಲ್ಯಾಂಗ್ರೇಜ್‌ ಪಾಯಿಂಟ್‌’ನಲ್ಲಿ ಇರಿಸಲಾಗುತ್ತದೆ. ಜೇಮ್ಸ್‌ ವೆಬ್ ಸದಾ ಭೂಮಿಯ ನೆರಳಿನಲ್ಲಿ ಇರುತ್ತದೆ. ಈ ದೂರದರ್ಶಕದ ಚಲನೆ ವೇಳೆ ಬೇಕಾಗುವ ಶಕ್ತಿಯನ್ನು ಕಡಿಮೆ ಮಾಡಲು ಲ್ಯಾಂಗ್ರೇಜ್ ಪಾಯಿಂಟ್‌ನಲ್ಲಿ ಇರಿಸಲಾಗುತ್ತದೆ. ಸೂರ್ಯನನ್ನು ಭೂಮಿ ಸುತ್ತುತ್ತದೆ. ಹೀಗೆ ಸುತ್ತುವಾಗ ಭೂಮಿಯ ಹಿಂದೆ, ಸುರಕ್ಷಿತ ಅಂತರದಲ್ಲಿ ಈ ದೂರದರ್ಶಕವೂ ಸೂರ್ಯನನ್ನು ಸುತ್ತುವಂತೆ ಸಂಯೋಜನೆ ಮಾಡಲಾಗಿರುತ್ತದೆ. ಈ ಸಂಯೋಜನೆಯನ್ನೇ ಲ್ಯಾಂಗ್ರೇಜ್‌ ಪಾಯಿಂಟ್ ಎನ್ನಲಾಗುತ್ತದೆ.

ಈ ಸಂಯೋಜನೆಯಲ್ಲಿ ಸೂರ್ಯ ಮತ್ತು ದೂರದರ್ಶಕದ ನಡುವೆ ಭೂಮಿ ಇರುತ್ತದೆ. ಸೂರ್ಯ, ಭೂಮಿ ಮತ್ತು ದೂರದರ್ಶಕವು ಒಂದೇ ಸರಳರೇಖೆಯಲ್ಲಿ ಇರುತ್ತವೆ. ಈ ಸಂಯೋಜನೆಯಲ್ಲಿ ಭೂಮಿಯ ನೆರಳಿನ ಪ್ರದೇಶದಲ್ಲಿ ಸೂರ್ಯನ ಗುರುತ್ವ ಬಲ ಸ್ವಲ್ಪ ಕಡಿಮೆ ಇರುತ್ತದೆ. ಹೀಗಾಗಿ ಸೂರ್ಯನ ಗುರುತ್ವ ಬಲವನ್ನು ತಪ್ಪಿಸಿಕೊಂಡು, ಸೂರ್ಯನನ್ನು ಸುತ್ತಲು ಈ ದೂರದರ್ಶಕವು ಹೆಚ್ಚಿನ ಶಕ್ತಿ ವ್ಯಯ ಮಾಡಬೇಕಾಗುವುದಿಲ್ಲ. ಈ ಕಾರಣದಿಂದ ಲ್ಯಾಂಗ್ರೇಜ್‌ ಪಾಯಿಂಟ್‌ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ವೆಬ್ ದೂರದರ್ಶಕವನ್ನು ಸೂರ್ಯನಿಗೆ ಬೆನ್ನುಮಾಡಿ ಇರುವಂತೆ ಸಂಯೋಜನೆ ಮಾಡಲಾಗುತ್ತದೆ. ನಮ್ಮ ಸೌರಮಂಡಲದ ಆಚೆಗಿನ ವಿಶ್ವವನ್ನು ವೀಕ್ಷಿಸಬೇಕಿರುವ ಕಾರಣ, ದೂರದರ್ಶಕವನ್ನು ಸೂರ್ಯನಿಗೆ ಬೆನ್ನುಮಾಡಿ ಇರಿಸಲಾಗುತ್ತದೆ. ದೂರದರ್ಶಕದ ದರ್ಪಣಗಳು ನಮ್ಮ ಸೌರಮಮಂಡಲದಾಚೆ ಮುಖಮಾಡಿರುತ್ತವೆ.

ಈ ದೂರದರ್ಶಕವು ಇನ್ಫ್ರಾರೆಡ್‌ ಕಿರಣಗಳನ್ನು ಗ್ರಹಿಸಿ, ಪರಿವೀಕ್ಷಣೆ ಕೆಲಸ ಮಾಡುತ್ತದೆ. ಸೂರ್ಯನ ಬೆಳಕು ದೂರದರ್ಶಕದ ಬೆನ್ನಿನ ಮೇಲೆ ನೇರವಾಗಿ ಬಿದ್ದರೆ, ಅತ್ಯಂತ ಸೂಕ್ಷ್ಮ ಇನ್ಫ್ರಾರೆಡ್‌ ಕಿರಣಗಳನ್ನು ಗ್ರಹಿಸುವುದು ಕಷ್ಟವಾಗುತ್ತದೆ. ದೂರದರ್ಶಕವು ಸದಾ ಭೂಮಿಯ ನೆರಳಿನಲ್ಲಿ ಇರುವಂತೆ ಸಂಯೋಜನೆ ಮಾಡಿರುವುದಕ್ಕೆ ಸೂರ್ಯನ ಬೆಳಕು ನೇರವಾಗಿ ದೂರದರ್ಶಕದ ಮೇಲೆ ಬೀಳುವುದನ್ನು ತಪ್ಪಿಸುವ ಉದ್ದೇಶವೂ ಇದೆ. 

ಬಾಹ್ಯಾಕಾಶಕ್ಕೆ ಅತಿದೊಡ್ಡ ದರ್ಪಣ
ಜೇಮ್ಸ್ ವೆಬ್ ದೂರದರ್ಶಕವನ್ನು ಬಿಚ್ಚಿದರೆ, ಒಂದು ಟೆನ್ನಿಸ್ ಮೈದಾನದಷ್ಟು ವಿಸ್ತಾರವಾಗಿ ಕಾಣುತ್ತದೆ. ಆದರೆ ಇದೇ ಗಾತ್ರದಲ್ಲಿ ಉಡಾವಣೆ ಮಾಡುವ ಯಾವುದೇ ರಾಕೆಟ್‌ಗಳು ಸದ್ಯಕ್ಕೆ ಲಭ್ಯವಿಲ್ಲ. ಈ ದೂರದರ್ಶಕವನ್ನು ‘ಏರಿಯನ್ 5’ ಎಂಬ ರಾಕೆಟ್‌ನ ಒಳಗೆ ಮಡಚಿಟ್ಟು ಉಡಾವಣೆ ಮಾಡಿ, ಬಾಹ್ಯಾಕಾಶದಲ್ಲಿ ಹಂತಹಂತವಾಗಿ ಅದು ಬಿಚ್ಚಿಕೊಳ್ಳುವಂತೆ ಯೋಜಿಸಲಾಗಿದೆ.

ಸೂರ್ಯಶಾಖದಿಂದ ರಕ್ಷಣೆ ನೀಡುವ ‘ಸನ್‌ಶೀಲ್ಡ್‌’ ಈ ದೂರದರ್ಶಕದ ಪ್ರಮುಖ ಅಂಗ. ಇದರ ಪ್ರಮುಖ ದರ್ಪಣವು 270 ಚದರ ಅಡಿ ವಿಸ್ತೀರ್ಣದ್ದು. ಇದನ್ನು ರಾಕೆಟ್‌ನಲ್ಲಿ ಕೂರಿಸಲು ಆಗದು. ಹೀಗಾಗಿ ಇದನ್ನು 18 ಷಡ್ಭುಜದ ಚಿಕ್ಕ ಭಾಗಗಳಾಗಿ ವಿಭಾಗಿಸಲಾಗಿದೆ. ಉಡಾವಣೆ ಬಳಿಕ ಈ ಎಲ್ಲವೂ ಕೂಡಿಕೊಂಡು ಒಂದೇ ದರ್ಪಣವಾಗಿ ಕೆಲಸ ಮಾಡಲಿವೆ. ಇದು ಬಾಹ್ಯಾಕಾಶಕ್ಕೆ ಕಳುಹಿಸುತ್ತಿರುವ ಅತಿದೊಡ್ಡ ದರ್ಪಣ ಎನಿಸಿದೆ. ಎರಡನೇ ದರ್ಪಣವು 2.4 ಅಡಿ ವ್ಯಾಸ ಹೊಂದಿದೆ. 

ಅತ್ಯಾಧುನಿಕ ಉಪಕರಣಗಳ ಸಂಗ್ರಹ
ಈವರೆಗೆ ತಯಾರಿಸದ ಅತ್ಯಾಧುನಿಕ ದೂರದರ್ಶಕವನ್ನು ವಿನ್ಯಾಸಗೊಳಿಸುವುದು ವಿಜ್ಞಾನಿಗಳ ಉದ್ದೇಶವಾಗಿತ್ತು. ಅತ್ಯಂತ ಕಡಿಮೆ ತಂಪು ವಾತಾವರಣದಲ್ಲಿ ಕೆಲಸ ಮಾಡಬಲ್ಲ, ಹಗುರವಾದ ರಚನೆ ಇದಾಗಿದ್ದು, ಅತಿಸೂಕ್ಷ್ಮ ಇನ್‌ಫ್ರಾರೆಡ್ ಬೆಳಕನ್ನು ಪತ್ತೆಹಚ್ಚುವ ಉಪಕರಣಗಳನ್ನು ಅಳವಡಿಸಲಾಗಿದೆ. ಸನ್‌ಶೀಲ್ಡ್‌ ಐದು ಪದರಗಳನ್ನು ಹೊಂದಿದ್ದು, ಪ್ರತಿಯೊಂದು ಪದರವೂ ಭಿನ್ನ ಗಾತ್ರ ಹೊಂದಿವೆ. ಬಿಸಿಲು ಅಥವಾ ಬೆಳಕು ನೇರವಾಗಿ ತಲುಪದಂತೆ ತಡೆಯುವುದು ಇದರ ಉದ್ದೇಶ. ದೂರದರ್ಶಕದ ಒಂದು ಬದಿ ಅತಿ ತಂಪಾಗಿದ್ದರೆ, ಮತ್ತೊಂದು ಬದಿ ಅತಿ ಬಿಸಿಯಿರುತ್ತದೆ. ಈ ಎರಡೂ ಸ್ಥಿತಿಗಳನ್ನು ನಿರ್ವಹಿಸಲು ಐದು ಪದರಗಳ ವಿನ್ಯಾಸ ಮಾಡಲಾಗಿದೆ. 

ಮನುಷ್ಯನ ಕೂದಲಿನಷ್ಟು ದಪ್ಪ ಗಾತ್ರದ, ಸಾವಿರಾರು ಕಿಂಡಿಗಳಿಂದ ಕೂಡಿರುವ ‘ಮೈಕ್ರೊಷಟರ್’ ಎಂಬ ಉಪಕರಣವು ಏಕಕಾಲದಲ್ಲಿ ಸಾವಿರಾರು ಕಣಗಳ/ವಸ್ತುಗಳ ತರಂಗಾಂತರ ಮತ್ತು ಆವರ್ತನಗಳನ್ನು ಮಾಪನ ಮಾಡುತ್ತದೆ. ‘ಕ್ರಯೊಕೂಲರ್’ ಎಂಬ ಮತ್ತೊಂದು ಉಪಕರಣವು ಇನ್‌ಫ್ರಾರೆಡ್‌ ಬೆಳಕು ಪತ್ತೆಚ್ಚುವ ಸಾಧನಗಳನ್ನು ನಿರಂತರವಾಗಿ ತಂಪುಗೊಳಿಸುತ್ತದೆ.   

ಸಾವಿರಾರು ಮೈಲಿ ದೂರದ ಪಯಣ
ಉಡಾವಣೆಗೊಂಡ ಬಳಿಕ ಸಾವಿರಾರು ಮೈಲಿ ಪ್ರಯಾಣ ಮಾಡಿ, ‘ಎಲ್‌2’ ಎಂಬ ನಿಗದಿತ ಕಕ್ಷೆಯನ್ನು ದೂರದರ್ಶಕ ತಲುಪಬೇಕಿದೆ. ಈ ಹಾದಿಯಲ್ಲಿ ಹಲವು ಪ್ರಕ್ರಿಯೆಗಳು ಜರುಗಲು ಕೆಲವು ವಾರಗಳೇ ಬೇಕು. ವೈಜ್ಞಾನಿಕ ಉಪಕರಣಗಳ ಕಾರ್ಯಾಚರಣೆ ಆರಂಭವಾಗುವುದಕ್ಕೂ ಮುನ್ನ ಅದನ್ನು ಮೈನಸ್ 380 ಡಿಗ್ರಿ ಫ್ಯಾರನ್‌ಹೀಟ್‌ಗೆ ತಣಿಸುವುದು ಮುಖ್ಯವಾದ ಕೆಲಸ. ಮುಖ್ಯ ದರ್ಪಣವು ಬಿಚ್ಚಿಕೊಂಡು, ಅದರ 18 ಭಾಗಗಳು ಏಕ ದರ್ಪಣವಾಗಿ ಸಂಯೋಜನೆಗೊಂಡು ಕೆಲಸ ಮಾಡುವಂತೆ ಸಿದ್ಧಪಡಿಸಬೇಕು. ರಾಕೆಟ್ ಉಡಾವಣೆಯಾದ ಬಳಿಕ, ದೂರದರ್ಶಕವು ಕಾರ್ಯಾಚರಣೆ ಆರಂಭಿಸಲು ಆರು ತಿಂಗಳು ಬೇಕು. 

ಕೆಲಸ ಹೇಗೆ
ದೂರದರ್ಶಕದಲ್ಲಿ ಅಳವಡಿಸಿರುವ ವಿವಿಧ ಕ್ಯಾಮರಾ ಕಣ್ಣುಗಳು ಇನ್‌ಫ್ರಾರೆಡ್‌ ಬೆಳಕಿನ ಕಿರಣಗಳನ್ನು ಚಿತ್ರ ಸೆರೆಹಿಡಿಯುತ್ತವೆ. ಅಧ್ಯಯನಕ್ಕಾಗಿ, ಸ್ಪೆಕ್ಟ್ರೋಗ್ರಾಫ್‌ ಮೂಲಕ ಈ ಬೆಳಕನ್ನು ವಿವಿಧ ಬಣ್ಣಗಳಾಗಿ ವಿಭಾಗಿಸಲಾಗುತ್ತದೆ. ಈ ಇನ್‌ಫ್ರಾರೆಡ್ ಬೆಳಕಿನ ಕಿರಣವನ್ನು ಆಧರಿಸಿ, ಸಮೀಪದ ಆಕಾಶಕಾಯಗಳ ಉಗಮದ ಅಧ್ಯಯನ ಮಾಡಲಾಗುತ್ತದೆ.

ಜೇಮ್ಸ್ ವೆಬ್ ಯಾರು
ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಮಾಜಿ ಆಡಳಿತಾಧಿಕಾರಿ ಜೇಮ್ಸ್ ವೆಬ್ ಅವರ ಹೆಸರನ್ನು ಅವರ ಗೌರವಾರ್ಥವಾಗಿ ಈ ಬೃಹತ್ ದೂರದರ್ಶಕಕ್ಕೆ ಇರಿಸಲಾಗಿದೆ. ಅಪೋಲೊ ನೌಕೆ ಉಡಾವಣೆ ಹಾಗೂ ಕಾರ್ಯಾಚರಣೆಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. 

ಯಶಸ್ವಿ ದೂರದರ್ಶಕ ‘ಹಬಲ್’
1990ರಲ್ಲಿ ನಾಸಾ ಉಡ್ಡಯನ ಮಾಡಿದ್ದ ‘ಹಬಲ್’ ದೂರದರ್ಶಕವು ಬಾಹ್ಯಾಕಾಶದ ಬಗ್ಗೆ ಇದ್ದ ಜ್ಞಾನವನ್ನು ಇನ್ನಷ್ಟು ವಿಸ್ತರಿಸಿತು. ಸೌರ ವ್ಯವಸ್ಥೆ, ಧೂಮಕೇತು ಹಾಗೂ ಗ್ರಹಗಳ ಬಗ್ಗೆ ಅರಿಯಲು ವಿಜ್ಞಾನಿಗಳಿಗೆ ನೆರವಾಯಿತು. ಗ್ರಹಗಳು ಹಾಗೂ ಗ್ಯಾಲಕ್ಸಿ ಹುಟ್ಟಿದ್ದು ಹೇಗೆ ಎಂದು ತಿಳಿದುಕೊಳ್ಳುವಲ್ಲಿ ನೆರವಾಯಿತು. ಕೋಟ್ಯಂತರ ನಕ್ಷತ್ರಗಳನ್ನು ಹೊಂದಿರುವ, ಅಲ್ಲಿವರೆಗೆ ಕಾಣಿಸದಿದ್ದ ಗ್ಯಾಲಕ್ಸಿಗಳ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿತು. ಹಬಲ್‌ನ ಚಿತ್ರಗಳನ್ನು ಆಧರಿಸಿಯೇ, ವಿಶ್ವವು 140 ಕೋಟಿ ವರ್ಷ ಹಳೆಯದು ಎಂದು ಅಂದಾಜು ಮಾಡಲು ಸಾಧ್ಯವಾಯಿತು. 

ಪ್ಲುಟೊ ಆಕಾಶಕಾಯದ ಸುತ್ತಲಿದ್ದ ಉಪಗ್ರಹಗಳನ್ನು ಮೊದಲಿಗೆ ಗುರುತಿಸಿದ್ದು ಇದೇ ಹಬಲ್. ಕಪ್ಪುಕುಳಿಗಳನ್ನು ಹಬಲ್ ಪತ್ತೆಮಾಡಿತು. ಕಪ್ಪುಕುಳಿಗಳು ಬೆಳಕನ್ನೂ ಒಳಗೊಂಡಂತೆ, ತಮ್ಮ ಸುತ್ತಲಿನ ಎಲ್ಲವನ್ನೂ ಕಬಳಿಸುತ್ತವೆ ಎಂದು ಗೊತ್ತಾಯಿತು. ದೊಡ್ಡ ನಕ್ಷತ್ರಗಳು ಸ್ಫೋಟ ವಿದ್ಯಮಾನದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿತ್ತು. ಈ ಹಬಲ್‌ನ ಯಶಸ್ಸಿನ ಉತ್ತರಾಧಿಕಾರಿಯಾಗಿ ಜೇಮ್ಸ್ ವೆಬ್ ಕಾರ್ಯಾಚರಣೆಗೆ ಇಳಿಯಲು ಸಜ್ಜಾಗಿದೆ. ಹಬಲ್‌ ಅನ್ನು ಮೀರಿಸಿದ ಹೆಚ್ಚಿನ ಹೊಳಹುಗಳು ಸಿಗುವ ಭಾರಿ ನಿರೀಕ್ಷೆಯಿದೆ. 

ವರದಿ: ಜಯಸಿಂಹ ಆರ್‌., ಅಮೃತ್‌ಕಿರಣ್‌ ಬಿ.ಎಂ

ಆಧಾರ ಮತ್ತು ಚಿತ್ರಕೃಪೆ: ನಾಸಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು