ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ | ಕಮರುತ್ತಿದೆ ‘ಬಾಲ್ಯ’ದ ಬದುಕು

ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ; ಬೇಕಿದೆ ತಳಮಟ್ಟದಲ್ಲಿಯೇ ಕಟ್ಟುನಿಟ್ಟಿನ ಕ್ರಮ
ಪ್ರಮೋದ ಕುಲಕರ್ಣಿ
Published 10 ಆಗಸ್ಟ್ 2024, 23:30 IST
Last Updated 10 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಕೊಪ್ಪಳ: ‘ನಿನ್ನ ಮದುವೆ ನಿಶ್ಚಯಿಸಿದ್ದೇವೆ. ನಾಳೆಯೇ ಮುಹೂರ್ತ; ಬೇಗನೆ ತಯಾರಾಗು...’

ಪೋಷಕರು ಹಾಗೂ ಸಂಬಂಧಿಕರ ಈ ಮಾತು ಕೇಳಿದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಆ ಬಾಲಕಿ ಅಕ್ಷರಶಃ ಕಂಗಾಲಾಗಿದ್ದಳು. ಬಾಲ್ಯದ ದಿನಗಳ ಸಂಭ್ರಮ ಅನುಭವಿಸಿ, ಓದುವ ಕನಸು ಕಟ್ಟಿಕೊಂಡಿದ್ದ ಆಕೆಗೆ ಮದುವೆ ಎಂಬುದು ನುಂಗಲಾರದ ಹಾಗೂ ಉಗುಳಲಾರದ ತುತ್ತಿನಂತಾಗಿತ್ತು.

ಇದು 2009ರಲ್ಲಿ ನಡೆದ ಘಟನೆ. ಆ ಬಾಲಕಿಯ ಸಂಬಂಧಿಕನಾಗಿದ್ದ ಯುವಕನಿಗೆ ಬೇರೊಬ್ಬ ಯುವತಿ ಜೊತೆ ಮದುವೆ ನಿಗದಿಯಾಗಿತ್ತು. ಮನೆ ಸಿಂಗಾರ ಮಾಡಿ, ಊರ ಮಂದಿಗೆಲ್ಲ ಆಹ್ವಾನ ನೀಡಿ ಮದುವೆ ಕಾರ್ಯ ಜೋರಾಗಿ ನಡೆದಿತ್ತು. ನಿಶ್ಚಯ ಮಾಡಿದ್ದ ವಧು ಮುಹೂರ್ತದ ಹಿಂದಿನ ದಿನ ರಾತ್ರಿ ನಾಪತ್ತೆಯಾಗಿದ್ದಳು.

ಹುಡುಗನ ಕಡೆಯ ಪೋಷಕರಿಗೆ ಮದುವೆ ನಿಂತು ಹೋದರೆ ಸಮಾಜದಲ್ಲಿ ಅವಮಾನವಾಗುತ್ತದೆ, ಆಗಿರುವ ಆರ್ಥಿಕ ಹೊರೆ ನೀಗಿಸುವ ಶಕ್ತಿ ಮತ್ತೆ ಇಲ್ಲ ಎಂಬ ಕಾರಣಕ್ಕೆ ಯುವಕನ ಅಕ್ಕನ ಮಗಳನ್ನೇ ರಾತ್ರೋರಾತ್ರಿ ಮದುವೆಗೆ ತಯಾರು ಮಾಡಿದ್ದರು. ಹೀಗಾಗಿ ಆರನೇ ತರಗತಿ ಓದುತ್ತಿದ್ದ ಬಾಲಕಿಗೆ ದಿಢೀರ್‌ ಮದುವೆಯಾಯಿತು. ಹಿರಿಯರ ಮಾತು ಮೀರಲಾಗದೆ, ಭವಿಷ್ಯದ ಸಾಧನೆಯ ಕನಸು ಹೇಳಿಕೊಳ್ಳಲಾಗದೆ ಆ ಬಾಲಕಿ ಚಡಪಡಿಸಿ ದುಃಖ ನುಂಗುತ್ತಲೇ ಕೌಟುಂಬಿಕ ಪರಿಸ್ಥಿತಿಯ ‘ಬಲಿಪಶು’ವಾದಳು. ನಿಂತು ಹೋಗುತ್ತಿದ್ದ ಮದುವೆ ಕೊನೆ ಗಳಿಗೆಯಲ್ಲಿ ಉಳಿಯಿತು, ಕುಟುಂಬದ ಗೌರವಕ್ಕೂ ಚ್ಯುತಿ ಬರಲಿಲ್ಲ ಎನ್ನುವ ಸಮಾಧಾನ ಯುವಕನ ಪೋಷಕರದ್ದಾಗಿತ್ತು. ಆದರೆ, ಬಾಲಕಿಗೆ ಮಾತ್ರ ನಿತ್ಯ ಕಣ್ಣೀರು ಹಾಕುವ ದುಸ್ಥಿತಿ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ವಿದ್ಯಾರ್ಥಿನಿಯೊಬ್ಬಳದ್ದು ಮತ್ತೊಂದು ಕಥೆಯಿದು. ಆ ಬಾಲಕಿ ಓದಿನಲ್ಲಿಯೂ ಬುದ್ಧಿವಂತೆ. ಆದರೆ, ಬಾಲ್ಯವಿವಾಹದ ನಡೆದರೂ ಮನೆಯಿಂದ ತಪ್ಪಿಸಿಕೊಂಡು ಸರ್ಕಾರದ ರಕ್ಷಣೆಯಲ್ಲಿ ಉಳಿದುಕೊಂಡಿದ್ದಳು. ಈಗ 18 ವರ್ಷ ವಯಸ್ಸಾಗಿದ್ದರಿಂದ‌ ಮನೆಗೆ ವಾಪಸಾಗಿದ್ದಾಳೆ.

‘ಹರೆಯಕ್ಕೆ ಬಂದ ಹೆಣ್ಮಕ್ಳ ಮದ್ವಿ ಮಾಡಿಕೊಟ್ರ ನಮ್ಮ ಜವಾಬ್ದಾರಿ ಮುಗೀತು ಅಂತ ಭಾಳ್ ಮಂದಿ ಪಾಲಕರ ಭಾವಿಸ್ತಾರ. ನಮ್ಮಪ್ಪ, ಅವ್ವಾನು ಹಂಗ ಮಾಡಿದ್ರು. ಆದ್ರ ನಾ ತಪ್ಪಿಸಿಕೊಂಡ ಬಂದಿದ್ದಕ್ಕ ಪಿಯುಸಿಯಲ್ಲಿ ಸಾಧನೆ ಮಾಡಿದೆ. ಈಗ ಪದವಿ ಓದತಿದ್ದೀನಿ. ಪಿಯು ಮೊದಲ ವರ್ಷದಲ್ಲಿದ್ದಾಗಲೇ ಪಾಲಕರು ಒತ್ತಡ ಹೇರಿ ಮದುವೆ ಮಾಡಿಸಿದರು. ನನಗೆ ಓದಬೇಕೆಂಬ ಭಾರಿ ಆಸೆಯಿತ್ತು. ಹಾಗಾಗಿ ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಿದೆ.‌ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿ ಓದಿಸಿದ್ದರಿಂದ ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದೆ’ ಎಂದು ಹೇಳುತ್ತಿದ್ದ ವಿದ್ಯಾರ್ಥಿನಿಯ ಕಂಗಳಲ್ಲಿ ಬಾಲ್ಯವಿವಾಹದ ಕುಣಿಕೆಯಿಂದ ಪಾರಾದ ಖುಷಿಯಿತ್ತು.

ಬೆಳಗಾವಿ ಜಿಲ್ಲೆಯ ಇನ್ನೊಬ್ಬ ಬಾಲಕಿ ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಪಿಯುಸಿಗೆ ಪ್ರವೇಶ ಪಡೆಯಲು ಸಿದ್ಧತೆ ನಡೆಸುತ್ತಿದ್ದಳು. ಅಷ್ಟರೊಳಗೆ ಸಂಬಂಧಿಕರಲ್ಲೇ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದರು. ಕೆಲ ದಿನಗಳಲ್ಲೇ ಮದುವೆ ಮಾಡುವವರಿದ್ದರು. ಈ ಪ್ರಕರಣದಲ್ಲೂ ಮಕ್ಕಳ ಸಹಾಯವಾಣಿ ಆ ಬಾಲಕಿಯನ್ನು ರಕ್ಷಿಸಿತು.

ಇವು ಹಲವು ಬಾಲಕಿಯರ ಬದುಕಿನ ಬಾಲ್ಯದ ದುರಂತ ಕಥನಗಳು. ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು, ಯುನಿಸೆಫ್‌ ಹಾಗೂ ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಬಾಲ್ಯವಿವಾಹ ತಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೂ ಬಾಲ್ಯವಿವಾಹದ ಕೂಪಕ್ಕೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆ ಏರುತ್ತಲೇ ಇದೆ. ಇದರಲ್ಲಿ ಬಾಲಕಿಯರ ಪ್ರಮಾಣವೇ ಹೆಚ್ಚು. 

ರಾಜ್ಯದಲ್ಲಿ ಹಿಂದಿನ ಐದು ವರ್ಷಗಳ ಅಂಕಿ–ಅಂಶಗಳನ್ನು ತುಲನೆ ಮಾಡಿದರೆ 2023–24ರಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ದಾಖಲಾಗದ, ಈಗಲೂ ಗುಟ್ಟಾಗಿ ಉಳಿದ ಪ್ರಕರಣಗಳೂ ಬಹಳಷ್ಟಿವೆ. ಅವುಗಳಿಗೆ ಕುಟುಂಬದ ‘ರಕ್ಷಣಾ ಚೌಕಟ್ಟು’ ಕಾವಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 2,559 ದೂರುಗಳು ಬಂದಿದ್ದು, 1,840 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ನಿಯಮ ಮೀರಿ 719 ಮದುವೆಗಳು ನಡೆದಿದ್ದು, 637 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗಿವೆ. ಚಿತ್ರದುರ್ಗದಲ್ಲಿ ನಡೆದ 84 ಬಾಲ್ಯವಿವಾಹಗಳು ಆ ವರ್ಷದ ಅತಿ ಹೆಚ್ಚು ಪ್ರಕರಣಗಳಾಗಿವೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ ಮಂಡ್ಯ, ಹಾಸನ, ರಾಮನಗರದಲ್ಲಿ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ ಎನ್ನುತ್ತವೆ ಸರ್ಕಾರದ ಅಂಕಿ ಅಂಶಗಳು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಕೂಡ ಇದರಿಂದ ಹೊರತಲ್ಲ.

2020–21ರಲ್ಲಿ ಕೋವಿಡ್ ಕಾರಣದಿಂದ ಶಾಲೆ ‘ಲಾಕ್‌ಡೌನ್‌’ ಆಗಿತ್ತು. ಈ ಸಮಯದಲ್ಲಿಯೇ ರಾಜ್ಯದಲ್ಲಿ ಹೆಚ್ಚು ಬಾಲ್ಯವಿವಾಹ ಪ್ರಯತ್ನಗಳು ನಡೆದಿದ್ದು 3,007 ದೂರುಗಳು ಬಂದಿದ್ದವು. 2,711 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಹೀಗಿದ್ದರೂ 296 ಮದುವೆಗಳು ನಡೆದು ಹೋಗಿವೆ.

ಈ ಅಂಕಿ–ಅಂಶಗಳನ್ನು ಸಂಪೂರ್ಣವಾಗಿ ಒಪ್ಪದ ಹಾಗೂ ಹೆಸರು ಬಹಿರಂಗಪಡಿಸಲು ಬಯಸದ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಯೊಬ್ಬರು, ‘ಬಾಲ್ಯವಿವಾಹ ತಡೆಯುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸಂಪೂರ್ಣ ಜವಾಬ್ದಾರಿಯಾಗಿದೆ.
ಎರಡೂ ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಸಿಬ್ಬಂದಿ ಕೊರತೆ ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಅಡ್ಡಿಯಾಗುತ್ತಿದೆ. ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಎರಡೂ ಇಲಾಖೆಗಳ ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡಬೇಕು. ಎಲ್ಲ ಕಡೆ ಇದು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಹತ್ತಾರು ಕಾರಣ:

ಬಾಲ್ಯವಿವಾಹಕ್ಕೆ ಕಾರಣಗಳು ಕೂಡ ಅನೇಕ. ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಮನೆಯಲ್ಲಿರುವುದು ಅಪಾಯ ಎಂಬ ಪೋಷಕರ ಭಾವನೆ, ಜವಾಬ್ದಾರಿ ಬೇಗನೆ ಕಳೆದುಕೊಳ್ಳಬೇಕು ಎನ್ನುವುದು, ಕುಟುಂಬದ ಹಿರಿಯರ ಆಸೆ ನೆರವೇರಿಸಬೇಕು ಎನ್ನುವ ಹೆಬ್ಬಯಕೆ, ಮಕ್ಕಳ ಬಗ್ಗೆ ಪೋಷಕರಲ್ಲಿರುವ ನಿಷ್ಕಾಳಜಿ, ಮದುವೆ ವೆಚ್ಚ ಹೆಚ್ಚಾಗಿರುವುದು, ಸಾಮೂಹಿಕ ವಿವಾಹದಲ್ಲಿ ಬಾಲ್ಯವಿವಾಹ ನಿಯಂತ್ರಣಕ್ಕೆ ಕ್ರಮ ಅನುಸರಿಸದೇ ಇರುವುದು, ಬಾಲ್ಯವಿವಾಹ ಘೋರ ಅಪರಾಧ ಎಂಬ ತಿಳಿವಳಿಕೆ ಇಲ್ಲದಿರುವುದು ಮತ್ತು 2005ರ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಕಾನೂನಿನ ಬಗ್ಗೆ ಗೊತ್ತಿಲ್ಲದಿರುವುದು ಕೂಡ ಇಂಥ ವಿವಾಹಕ್ಕೆ ಕಾರಣವಾಗುತ್ತಿವೆ. ಬಹುತೇಕ ಕಡೆ ಮಕ್ಕಳ ಕಾವಲು ಸಮಿತಿ ಇಲ್ಲದಿರುವುದು ಲೋಪವಾಗಿದೆ.

ಬಡ ಕುಟುಂಬದಲ್ಲಿ ಮೂರ್ನಾಲ್ಕು ಹೆಣ್ಣುಮಕ್ಕಳು ಇದ್ದಾಗ ಪೋಷಣೆ ಮಾಡಲು ಸಾಧ್ಯವಾಗದೇ ಬಾಲ್ಯದಲ್ಲೇ ಮದುವೆ ಮಾಡಿಕೊಡಲಾಗುತ್ತಿದೆ. ವಯಸ್ಸಿಗೆ ಬಂದ ಮೇಲೆ ಹೆಣ್ಣುಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದರೆ ಬೇರೆ ಜಾತಿ, ಧರ್ಮದ ಹುಡುಗನ ‘ಪ್ರೇಮದ ಬಲೆ’ಗೆ ಸಿಲುಕಿ ಮನೆಯ ಮರ್ಯಾದೆ ಹಾಳಾಗಬಹುದು ಎಂಬ ಆತಂಕದಿಂದಲೂ ಪೋಷಕರು 16–17 ವಯಸ್ಸಿಗೇ ಹೆಣ್ಣುಮಕ್ಕಳನ್ನು ತಮ್ಮ ಪರಿಚಯಸ್ಥರು ಇಲ್ಲವೇ ಸಂಬಂಧಿಕರ ಮನೆಯ ಹುಡುಗನೊಂದಿಗೆ ಮದುವೆ ಮಾಡಿಸುತ್ತಿದ್ದಾರೆ. ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಂಥ ಸಾಮಾಜಿಕ ಸಮಸ್ಯೆಗಳೂ ಸಹ ಪೋಷಕರನ್ನು ಚಿಂತೆಗೀಡು ಮಾಡುತ್ತಿದೆ ಎನ್ನುವ ಮಾಹಿತಿಯಿದೆ.

ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)

ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)

ಬಾಲ್ಯವಿವಾಹದಿಂದ ಆಗುವ ಮಾನಸಿಕ ಹಾಗೂ ದೈಹಿಕ ಪರಿಣಾಮಗಳು ವ್ಯಾಪಕವಾಗಿದ್ದರೂ ಜನರಲ್ಲಿ ಅವುಗಳ ಅರಿವು ಕಡಿಮೆ ಇದೆ. ‘ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆಯಾಗುವುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಲ್ಲಿ ಅಪಾಯಕಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ತಾಯಿ, ಶಿಶು ಮರಣವಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಹುಟ್ಟುವ ಮಕ್ಕಳು ಅಪೌಷ್ಟಿಕತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಿಂದ ಖಿನ್ನತೆ, ಆತಂಕ, ಒತ್ತಡಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ಶಿಕ್ಷಣದಿಂದ ವಂಚಿತರಾಗಿ ಅನಕ್ಷರಸ್ಥರಾಗುವ ಸಾಧ್ಯತೆ ಹೆಚ್ಚು’ ಎಂದು ಬೀದರ್‌ ಜಿಲ್ಲೆ ಭಾಲ್ಕಿಯ ಸ್ತ್ರೀರೋಗ ತಜ್ಞೆ ಡಾ.ಶೈಲಜಾ ತಲವಾಡೆ ಆತಂಕ ವ್ಯಕ್ತಪಡಿಸುತ್ತಾರೆ.

‘ಬಾಲ್ಯವಿವಾಹವು ಬಾಲಕ ಹಾಗೂ ಬಾಲಕಿ ಇಬ್ಬರ ಮೇಲೂ ಪರಿಣಾಮ ಬೀರುತ್ತದೆಯಾದರೂ ವ್ಯಾಪಕತೆ ಬಾಲಕಿಯರ ಮೇಲೆಯೇ ಹೆಚ್ಚು. ಸಂಸಾರದ ಜಂಜಾಟಗಳನ್ನು ಎದುರಿಸಲಾಗದೇ ಅಧಿಕ ರಕ್ತದೊತ್ತಡ, ಅವಧಿ ಪೂರ್ವದಲ್ಲೇ ಮಕ್ಕಳು ಜನಿಸುವ ಸಾಧ್ಯತೆ ಇರುತ್ತದೆ’ ಎಂದರು.

‘11ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸವಾಗುತ್ತದೆ. ಬಾಲಕಿಯರಲ್ಲಿ ಋತುಚಕ್ರ ಆರಂಭವಾಗುವ ಸಮಯವದು. ಈ ವಯಸ್ಸಿನ ಮಕ್ಕಳಲ್ಲಿ ಸಾಮಾಜಿಕವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎನ್ನುವ ಹಂಬಲ ಶುರುವಾಗುತ್ತದೆ. ಇದರಿಂದ ಭವಿಷ್ಯದ ಅರಿವಿಲ್ಲದೆ ಹಲವಾರು ಮಂದಿ ಬಾಲ್ಯವಿವಾಹದ ಕೂಪಕ್ಕೆ ಬೀಳುತ್ತಾರೆ’ ಎಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್) ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ ಬಿಜ್ಜಳ ಎಚ್ಚರಿಸುವರು.

‘ದೈಹಿಕವಾಗಿ ಬೆಳವಣಿಗೆ ಸರಿಯಾಗಲು ಹದಿಹರೆಯದ ವಯಸ್ಸಿನ ಮಕ್ಕಳಿಗೆ ಪೌಷ್ಟಿಕಾಂಶಗಳ ಅಗತ್ಯತೆ ಹೆಚ್ಚಿರುತ್ತದೆ. ಲೈಂಗಿಕ ಸುರಕ್ಷತೆ ಅರಿವಿಲ್ಲದ ವಯಸ್ಸಿನಲ್ಲಿ ಮದುವೆಯ ಬಂಧನಕ್ಕೆ ಒಳಗಾದರೆ ಇನ್ನೊಬ್ಬರ ಆಸರೆಯಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಬಾಲಕಿಗೆ ಮುಟ್ಟು, ಗರ್ಭಕೋಶದ ಸಮಸ್ಯೆಗಳನ್ನು ಎದುರಿಸುವುದು, ದಾಂಪತ್ಯದ ಕ್ರಿಯೆಗಳ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಮಕ್ಕಳಿಗೆ ಪ್ರೌಢಶಾಲಾ ಹಂತದಿಂದಲೇ ಲೈಂಗಿಕ ಶಿಕ್ಷಣದ ಬಗ್ಗೆ ಮುಕ್ತವಾಗಿ ಹೇಳಿಕೊಡಬೇಕು. ಲೈಂಗಿಕ ಶಿಕ್ಷಣ ಮುಚ್ಚಿಟ್ಟಷ್ಟೂ ಮಕ್ಕಳಲ್ಲಿ ಕುತೂಹಲ ಜಾಸ್ತಿಯಾಗಿ ಸುಂದರ ಭವಿಷ್ಯ ಹಾಳುಮಾಡಿಕೊಳ್ಳುತ್ತಿರುವ ಘಟನೆಗಳು ನಮ್ಮ ಮುಂದಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಮುಳ್ಳಿನ ಬೇಲಿಗೆ ತಳ್ಳುತ್ತಿರುವ ಪೋಷಕರು
ಬಾಲ್ಯವಿವಾಹ ಪ್ರಕರಣಗಳಲ್ಲಿ ಅಧಿಕಾರಿಗಳ ಕೈಗೆ ಸಿಕ್ಕು ಬಿದ್ದರೆ ಬಾಲಕ, ಬಾಲಕಿಯ ಪೋಷಕರು, ಪುರೋಹಿತ, ಶಾಮಿಯಾನ ಸೌಲಭ್ಯ ಒದಗಿಸಿದ ಅಂಗಡಿಯ ಮಾಲೀಕ, ಸ್ಥಳ ನೀಡಿದವರು, ಸಾಕ್ಷಿಯಾದವರು, ಅಡುಗೆಯವರು ಹೀಗೆ ಪ್ರತಿಯೊಬ್ಬರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ. ಆದ್ದರಿಂದ ಇಂಥ ಪ್ರಕರಣಗಳನ್ನು ಪತ್ತೆ ಹೆಚ್ಚಲು ತೆರಳುವಾಗ ಅಧಿಕಾರಿಗಳು ಬಾಲ್ಯವಿವಾಹಕ್ಕೆ ಸಿದ್ಧವಾದ ಬಾಲಕ–ಬಾಲಕಿಯರ ಪೋಷಕರಿಂದ ಹಾಗೂ ಅವರ ಕುಟುಂಬದವರಿಂದ ಭಾರಿ ಪ್ರತಿರೋಧ ಎದುರಿಸಬೇಕಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಲಾಢ್ಯವಾಗಿರುವ ಕೆಲ ಸಮುದಾಯಗಳ ಮುಖಂಡರ ಒತ್ತಡ ಕೂಡ ಪ್ರಕರಣ ದಾಖಲಿಸದಂತೆ ಮಾಡುತ್ತಿದೆ.

‘ನಮ್ಮ ಮಕ್ಕಳು ಪ್ರೀತಿ, ಪ್ರೇಮದ ಆಕರ್ಷಣೆಗೆ ಒಳಗಾಗಿ ಮನೆ ಬಿಟ್ಟು ಓಡಿ ಹೋದರೆ ನಿಮ್ಮ ಸರ್ಕಾರ ಬಂದು ಹುಡುಕಿಕೊಡಲ್ಲ. ನಮ್ಮ ಮಕ್ಕಳು ಹಾದಿ ತಪ್ಪದಂತೆ ಹೇಗೆ ನೋಡಿಕೊಳ್ಳಬೇಕೆಂದು ಗೊತ್ತಿದೆ. ನೀವು ತಲೆ ಹಾಕಬೇಡಿ...’ ಎನ್ನುವ ಆಕ್ರೋಶಭರಿತ ಮಾತುಗಳನ್ನು ಬಾಲ್ಯವಿವಾಹ ತಡೆ ಸಮಿತಿಯ ತಂಡದವರು ಕೇಳಬೇಕಾಗುತ್ತದೆ.

‘ಗ್ರಾಮಾಂತರ ಪ್ರದೇಶದಲ್ಲಿ ಪ್ರೀತಿಸಿ ಓಡಿ ಹೋಗಿ ಮದುವೆಯಾಗುವ, ಕಾಣೆಯಾಗುವಂತ ಘಟನೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಬಾಲ್ಯವಿವಾಹ ತಡೆ ಕಾಯ್ದೆ, ಕಾನೂನು, ಶಿಕ್ಷೆಯ ಅರಿವಿದ್ದರೂ ತಮ್ಮ ಮಕ್ಕಳನ್ನು ಬಾಲ್ಯವಿವಾಹದ ಮುಳ್ಳಿನ ಬೇಲಿಯೊಳಗೆ ಶಿಕ್ಷಿತ ಪೋಷಕರು ತಳ್ಳುತ್ತಿದ್ದಾರೆ. ಅದಕ್ಕೆ ಅವರು ಮರ್ಯಾದೆಯ ಲೇಪನ ಹಚ್ಚುತ್ತಿದ್ದಾರೆ’ ಎನ್ನುತ್ತಾರೆ ಕಲಬುರಗಿಯ ಚೈಲ್ಡ್ ಲೈನ್ ನೋಡಲ್ ಕೇಂದ್ರದ ಜಿಲ್ಲಾ ಸಂಯೋಜಕ ಬಸವರಾಜ ತಂಗಳಿ.

‘ಬಾಲ್ಯವಿವಾಹದ ಮಾಹಿತಿ ಆಧರಿಸಿ ನಮ್ಮ ತಂಡದವರು ಹೋಗುವ ಮುನ್ನವೇ ಬಾಲಕಿಯ ಕೊರಳಲ್ಲಿನ ತಾಳಿ, ಕಾಲುಂಗರ ತೆಗೆದಿರಿಸಿ, ಎಲ್ಲಿ ಮದುವೆ ಮಾಡಿದ್ದೇವೆ ನೋಡಿ? ನಮ್ಮನ್ನು ಸಿಕ್ಕಿ ಹಾಕಿಸಲು ಬಂದಿದ್ದೀರಾ ಎಂದು ನಮ್ಮನ್ನೇ ದಬಾಯಿಸುತ್ತಾರೆ. ಬಾಲ್ಯವಿವಾಹದ ಬಗ್ಗೆ ಮಾಹಿತಿ ಇದ್ದರೂ ಸ್ಥಳೀಯ ಅಧಿಕಾರಿಗಳು ಕಿಂಚಿತ್ತೂ ಸಹಕರಿಸುವುದಿಲ್ಲ. ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾರೆ’ ಎಂದು ಅಲವತ್ತುಕೊಂಡರು.

ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಮತ್ತೊಬ್ಬ ಅಧಿಕಾರಿಯೊಬ್ಬರು, ‘ಬಾಲ್ಯವಿವಾಹ ತಡೆಗೆ ವಿವಿಧ ಇಲಾಖೆಗಳ ಸಾಮೂಹಿಕ ಹೊಣೆಗಾರಿಕೆ ಇದೆ. ಅದರಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಪಾತ್ರ ಮುಖ್ಯವಾಗುತ್ತದೆ. ಆದರೆ, ಅವರ್‍ಯಾರೂ ಕನಿಷ್ಠ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿಲ್ಲ. ಮುಖ್ಯ ಶಿಕ್ಷಕರಿಗೆ ಶಾಲೆಯ ನಿರ್ವಹಣೆ ಹೊಣೆ ಮತ್ತು ಹೆಚ್ಚುವರಿ ಕೆಲಸಗಳೇ ಭಾರವಾಗುತ್ತಿವೆ. ಮಾಹಿತಿ ಆಧರಿಸಿ ಮಕ್ಕಳ ರಕ್ಷಣೆಗೆಂದು ಹೋದಾಗ ಅಲ್ಲಿನ ಪಿಡಿಒ ಅವರು ಪಂಪ್‌ ಆಪರೇಟರ್, ಕ್ಲರ್ಕ್‌ ಅವರನ್ನು ಕಳುಹಿಸಿ ಕೈತೊಳೆದುಕೊಳ್ಳುತ್ತಾರೆ. ಊರಲ್ಲಿ ಆ ಕುಟುಂಬದ ದ್ವೇಷ ಕಟ್ಟಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಮುಂದೆ ಬರಲು ಹಿಂಜರಿಯುತ್ತಾರೆ’ ಎಂದು ಇಲಾಖೆಗಳ ನಡುವಿನ ಬಿರುಕು ಹೊರಹಾಕಿದರು.

ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಾಲ್ಯವಿವಾಹದ ಗಡಿಬಿಡಿ ಜೋರಿದೆ. ಬೆಳಗಾವಿ, ವಿಜಯಪುರ, ಬೀದರ್‌, ಬಳ್ಳಾರಿ ಹಾಗೂ ಚಾಮರಾಜನಗರದಂಥ ಗಡಿ ಜಿಲ್ಲೆಗಳಲ್ಲಿ ರಾಜ್ಯದ ಬಾಲಕಿ–ಬಾಲಕಿ ನೆರೆಯ ರಾಜ್ಯದಲ್ಲಿ ಮದುವೆಯಾಗುತ್ತಿದ್ದಾರೆ. ಇಂತಹ ಮದುವೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ‘ರಾಜ್ಯದ ಗಡಿಯ ಬೇಲಿ’ ದಾಟುವುದು ಕಷ್ಟವಾಗುತ್ತಿದೆ.

‘ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು, ಸಬ್‌ ಇನ್‌ಸ್ಪೆಕ್ಟರ್‌ಗಳು ಗ್ರಾಮಮಟ್ಟದಲ್ಲಿ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕಿದೆ. ಮೇಲಧಿಕಾರಿಗಳು ಈ ಬಗ್ಗೆ ಹೆಚ್ಚು ನಿಗಾವಹಿಸಬೇಕಿದೆ. ಶಾಲೆಗಳಲ್ಲಿ ಹೆಣ್ಣು ಮಕ್ಕಳು ನಿರಂತರ ಗೈರಾಗುತ್ತಿದ್ದರೆ ಶಿಕ್ಷಕರು ಗಮನಿಸಿ, ಪೋಷಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಕೆಲವು ಸಲ ವಿದ್ಯಾರ್ಥಿನಿಯರ ಕುರಿತ ಮಾಹಿತಿ ಶಿಕ್ಷಕರಿಂದಲೇ ಸಿಕ್ಕಿದೆ’ ಎಂದು ಮಂಡ್ಯದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಹೇಶ ಕೆ.ಎಂ. ಹೇಳಿದರು.

ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)
ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)
ಮುಂದೆಯೂ ಇದೆ ಬದುಕು:
ನಾನಾ ಕಾರಣಗಳಿಂದಾಗಿ ಬಾಲ್ಯವಿವಾಹಕ್ಕೆ ಬಲಿಪಶುವಾದ ಅನೇಕ ಬಾಲಕಿಯರು ಅದರ ಕುಣಿಕೆಯಿಂದ ಹೊರಬಂದು ಈಗ ಸುಂದರ ಬದುಕು ರೂಪಿಸಿಕೊಂಡವರು ನಮ್ಮ ನಡುವೆ ಇದ್ದಾರೆ. ರಾತ್ರೋ ರಾತ್ರಿ ಮದುವೆಗೆ ಸಿದ್ಧವಾಗಬೇಕಾದ ‘ಬಾಣಲೆ’ಗೆ ಬಿದ್ದಿದ್ದ ಯಲಬುರ್ಗಾ ತಾಲ್ಲೂಕಿನ ಯುವತಿ ತನ್ನದಲ್ಲದ ತಪ್ಪಿಗೆ ಯಾಕೆ ಬದುಕು ಹಾಳುಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಬಾಲ್ಯದಲ್ಲಿ ಎದುರಾಗಿದ್ದ ‘ಮಾಂಗಲ್ಯ’ದ ಸಂಕೋಲೆ ಕಿತ್ತು ಹಾಕಿ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಎಂ.ಕಾಂ ಮುಗಿಸಿ ಈಗ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಅವರಂತೆಯೇ ಬದುಕು ಕಟ್ಟಿಕೊಳ್ಳಲು ಬಾಲ್ಯವಿವಾಹದ ಕೆಂಡದೊಳಗೆ ಬಿದ್ದ ಎಲ್ಲ ಬಾಲಕಿಯರಿಗೂ ‘ಭಾಗ್ಯದ ಬಾಗಿಲು’ ಇದ್ದೇ ಇದೆ. ಪರಿಸ್ಥಿತಿ ಎದುರಿಸುವ ಛಾತಿಯೊಂದು ಜೊತೆಗಿದ್ದರೆ ಸಾಕು.
ಡಾ.ಶೈಲಜಾ ತಲವಾಡೆ
ಡಾ.ಶೈಲಜಾ ತಲವಾಡೆ
ಬಾಲ್ಯ ವಿವಾಹಕ್ಕೆ ಒಳಗಾಗುವ ಬಾಲಕಿಯರಿಗೆ ಕೆಲವೊಮ್ಮೆ ಬಾಣಂತಿ, ಶಿಶುವಿನ ಸಾವು ಸಂಭವಿಸುವ ಪ್ರಮಾಣವೂ ಅಧಿಕವಾಗಿರುತ್ತದೆ. ಜನಿಸುವ ಮಕ್ಕಳ ತೂಕ ಕಡಿಮೆಯಾಗಿ ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ.
ಡಾ.ಶೈಲಜಾ ತಲವಾಡೆ, ಸ್ತ್ರೀರೋಗ ತಜ್ಞೆ, ಬೀದರ್‌ ಜಿಲ್ಲೆ
ಲಕ್ಷ್ಮಿ ಹೆಬ್ಬಾಳಕರ್
ಲಕ್ಷ್ಮಿ ಹೆಬ್ಬಾಳಕರ್
ಬಾಲ್ಯವಿವಾಹ ಹೆಚ್ಚಾಗಲು ನಮ್ಮ ಇಲಾಖೆಯಲ್ಲಿನ ದೋಷಗಳಷ್ಟೇ ಕಾರಣವಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಎಲ್ಲರ ಸಹಕಾರದಿಂದ ಇದನ್ನು ತಡೆಯಬೇಕಿದೆ. ಬಾಲಕಿಯರು ಗರ್ಭಿಣಿಯಾಗುವುದನ್ನು ಹಾಗೂ ಬಾಲ್ಯವಿವಾಹವನ್ನು ಬೇರು ಮಟ್ಟದಿಂದ ಹೋಗಲಾಡಿಸಲು ಕ್ರಮ ವಹಿಸುತ್ತೇವೆ.
ಲಕ್ಷ್ಮಿ ಹೆಬ್ಬಾಳಕರ್‌, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಮಕ್ಕಳ ಕಾವಲು ಸಮಿತಿ’ ರಚಿಸಬೇಕು. ಶಾಲಾ ಶಿಕ್ಷಕರು ಎನ್‌ಜಿಒಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ 20ರಿಂದ 22 ಜನರ ಸಮಿತಿ ರಚಿಸಬೇಕು. ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೇ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಪ್ರತಿ ತಿಂಗಳು ಸಭೆ ನಡೆಸಿ ಬಾಲ್ಯ ವಿವಾಹ ತಡೆಯಬೇಕು.
ವೆಂಕಟೇಶ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ಬಸವರಾಜ ಸಂಪಳ್ಳಿ, ಸಿದ್ದು ಆರ್‌.ಜೆ. ಹಳ್ಳಿ, ಬಾಲಕೃಷ್ಣ ಪಿ.ಎಚ್‌., ಇಮಾಮಸಾಬ್‌ ಗೂಡೂನವರ, ಮಲ್ಲಿಕಾರ್ಜುನ ನಾಲವಾರ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT