ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ಮಗ್ಗ ನಂಬಿದವರು ನುಗ್ಗಾದರು! ಜರ್ಜರಿತರಾದ ಸಂಪ್ರದಾಯಸ್ಥರು–ಗೆದ್ದ ಭಿನ್ನರು

ಭಿನ್ನವಾಗಿ ಯೋಚಿಸಿದವರು ಮಾರುಕಟ್ಟೆಯಲ್ಲಿ ಗೆದ್ದರು
Published : 24 ಸೆಪ್ಟೆಂಬರ್ 2023, 0:31 IST
Last Updated : 24 ಸೆಪ್ಟೆಂಬರ್ 2023, 0:31 IST
ಫಾಲೋ ಮಾಡಿ
Comments

ಪ್ರಿಯದರ್ಶನ್ ನಿರ್ದೇಶನದಲ್ಲಿ 2008ರಲ್ಲಿ ತೆರೆಕಂಡ ಚಿತ್ರ ‘ಕಾಂಚೀವರಂ‘. ಪ್ರಕಾಶ್ ರೈ ನಟನೆಯ ಈ ಚಿತ್ರದ ಕೊನೆಯ ದೃಶ್ಯ ನೇಕಾರರ ಬದುಕನ್ನು ಕಟ್ಟಿಕೊಟ್ಟಿದೆ. ಸೀರೆ ಮಗ್ಗದಲ್ಲಿ ಕೆಲಸ ಮಾಡುವ ತಂದೆ, ನಿತ್ಯವೂ ಸ್ವಲ್ಪ ರೇಷ್ಮೆಯನ್ನು ಬಾಯಲ್ಲಿಟ್ಟುಕೊಂಡು ಮನೆಗೆ ಬಂದು ಮಗಳಿಗಾಗಿ ಕಾಂಚೀವರಂ ಸೀರೆ ನೇಯುತ್ತಿರುತ್ತಾನೆ. ದೌರ್ಜನ್ಯಕ್ಕೆ ಮಗಳ ಬಲಿಯಾಗುತ್ತದೆ. ಮಗಳ ಶವದ ಮೇಲೆ ತಾನು ನೇಯ್ದ ಅಪೂರ್ಣ ಸೀರೆಯನ್ನು ಹೊದಿಸುತ್ತಾನೆ. ಮುಖವನ್ನು ಮುಚ್ಚಿದರೆ ಕಾಲು ಕಾಣಿಸುತ್ತದೆ. ಕಾಲು ಮುಚ್ಚಲು ಸೀರೆ ಸರಿಸಿದರೆ ಮಗಳ ನಿಸ್ತೇಜ ಮುಖ ಕಾಣಿಸುತ್ತದೆ. ಅಲ್ಲಿಗೆ ಚಿತ್ರ ಕೊನೆಯಾಗುತ್ತದೆ.

ಚಿತ್ರದ ಕಥಾವಸ್ತು 1948ರದ್ದು. ಸ್ವದೇಶಿ ಚಳವಳಿ ಮೂಲಕ ದೇಶದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದ ನೇಕಾರಿಕೆಯನ್ನು ಬಹಳಷ್ಟು ಜನ ನೆಚ್ಚಿಕೊಂಡರೂ, ಅದರಿಂದ ಪೂರ್ಣ ಹೊಟ್ಟೆ ತುಂಬುತ್ತಿರಲಿಲ್ಲ. ಆತ್ಮನಿರ್ಭರದ ವಿಷಯವಾದ ಈ ವೃತ್ತಿಯನ್ನು ನೆಚ್ಚಿಕೊಂಡವರ ಇಂದಿನ ಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಕೈಮಗ್ಗ ಹೊಂದಿದವರು ವಿದ್ಯುತ್ ಮಗ್ಗ ಬಂದಾಗ ಒಂದಷ್ಟು ಹಿನ್ನಡೆ ಅನುಭವಿಸಿದರು. ಆದರೆ ಫ್ಯಾಷನ್ ಜಗತ್ತು ಬೇರೆಯದೇ ಹಾದಿಯಲ್ಲಿ ಹೊರಟಿರುವ ಕಾಲದಲ್ಲಿ ಸಾಂಪ್ರದಾಯಿಕ ಬಟ್ಟೆಗಳನ್ನು ತಯಾರಿಸುವ ವಿದ್ಯುತ್ ಮಗ್ಗಗಳು ಈಗ ನಷ್ಟದ ಹಾದಿಯಲ್ಲಿವೆ. ‌ಕೈಮಗ್ಗಗಳದ್ದು ಮತ್ತು ಅಲ್ಲಿ ಕೆಲಸ ಮಾಡುವ ಕಾರ್ಮಿಕರದ್ದಂತೂ ಶೋಚನೀಯ ಸ್ಥಿತಿ.

ಮೊದಲು ವರ್ಷಕ್ಕೊಮ್ಮೆ ದೀಪಾವಳಿ, ರಂಜಾನ್ ಅಥವಾ ಕ್ರಿಸ್ಮಸ್‌ ಸಂದರ್ಭದಲ್ಲಿ ಬಟ್ಟೆ ಖರೀದಿಸುವ ವಾಡಿಕೆ ಇತ್ತು. ಆದರೆ ಇಂದು ಬಟ್ಟೆ ಖರೀದಿಗೆ ಹಿಂದಿನಂತೆ ಹಬ್ಬಕ್ಕೇ ಕಾಯಬೇಕೆಂದೇನೂ ಇಲ್ಲ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಬದಲಾಗುವ ಫ್ಯಾಷನ್ ಜಗತ್ತಿನಲ್ಲಿ ಶತಕೋಟಿ ವಹಿವಾಟು ನಡೆಯುತ್ತದೆ. ಆದರೆ ಇದರ ಯಾವುದೇ ಲಾಭ ನಮ್ಮ ಮಗ್ಗಗಳಿಗೆ ಸಿಗುತ್ತಿಲ್ಲ ಎಂಬುದು ವಾಸ್ತವ. 

ಅಸಂಘಟಿತವಾಗಿದ್ದ ಮಗ್ಗಗಳು ನಷ್ಟದ ಹಾದಿಗೆ ಜಾರಿದಾಗ ಸಹಕಾರ ಸಂಸ್ಥೆಗಳು ಒಂದಷ್ಟು ಬಲ ನೀಡಿದವು. ಆದರೆ ಬೇಡಿಕೆಯ ಸಮಸ್ಯೆ ಎದುರಿಸುತ್ತಿರುವ ಈ ಮಗ್ಗಗಳಲ್ಲಿ ಹಲವು ಇಂದು ಬಾಗಿಲು ಮುಚ್ಚಿವೆ. ಗುಣಮಟ್ಟದ ಹತ್ತಿ ಉತ್ಪಾದನೆಯ ಜತೆಗೆ, ಗುಣಮಟ್ಟದ ಸೂಟ್ ಬಟ್ಟೆ ತಯಾರಿಸುತ್ತಿದ್ದ ಧಾರವಾಡ ತಾಲ್ಲೂಕಿನ ಉಪ್ಪಿನಬೆಟಗೇರಿಯ ಮಗ್ಗ, ಈಗ ಹಾಳು ಸುರಿಯುತ್ತಿದೆ. ಉಪ್ಪಿನಬೆಟಗೇರಿ ಕೋಟ್‌ ಎಂದೇ ದೆಹಲಿಯಲ್ಲಿ ಮಾರಾಟವಾಗುತ್ತಿದ್ದ ಇಲ್ಲಿನ ಬಟ್ಟೆಗೆ ಆಗಿನ ನೇತಾರರಿಂದಲೂ ಬೇಡಿಕೆ ಇತ್ತು. ಆದರೆ ಕಾಲಕ್ಕೆ ತಕ್ಕಂತೆ ಬದಲಾಗದ ಹಾಗೂ ಸಾಲದ ಸುಳಿಗೆ ಸಿಲುಕಿದ ಸಂಘ ಬಾಗಿಲು ಮುಚ್ಚಿದೆ.

ಸರ್ಕಾರದ ನೆರವು, ಸಾಲ ಸೌಲಭ್ಯದ ಹೊರತಾಗಿಯೂ ಹಳೆಯ ಮಾದರಿಯಲ್ಲೇ ವಸ್ತ್ರ ತಯಾರಿಸುವ ಮಗ್ಗಗಳು ಬೇಡಿಕೆಯ ಕೊರತೆಯನ್ನು ಎದುರಿಸುತ್ತಿವೆ. ಆದರೆ ಮತ್ತೊಂದೆಡೆ ಭಿನ್ನವಾಗಿ ಯೋಚಿಸಿ, ಆಧುನಿಕ ಶೈಲಿಗೆ ಹಾಗೂ ಬದಲಾಗುತ್ತಿರುವ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ವಸ್ತ್ರ ತಯಾರಿಸುತ್ತಿರುವ ರಾಜ್ಯದ ಕೆಲ ಭಾಗಗಳ ಮಗ್ಗಗಳು ದೇಶ, ವಿದೇಶಗಳಲ್ಲಿ ಮಾರುಕಟ್ಟೆ ಕಂಡುಕೊಂಡ ಉದಾಹರಣೆಗಳೂ ಇವೆ. ಬೆಳಗಾವಿಯ ವಡಗಾವಿ, ಶಿವಮೊಗ್ಗದ ಚರಕ, ಉಡುಪಿಯ ಸೀರೆ, ಮೊಳಕಾಲ್ಮೂರು ಸೀರೆಗಳು ದೇಶ ಹಾಗೂ ವಿದೇಶ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸಾಂಪ್ರದಾಯಿಕ ಶೈಲಿಯ ಮಗ್ಗ ನಂಬಿದವರು ಈಗಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಕಾರ್ಮಿಕರೊಬ್ಬರು ನೂಲುವ ಕಾಯಕದಲ್ಲಿ ತೊಡಗಿರುವುದು. ಬಿ.ಎಂ.ಕೇದಾರನಾಥ ಪ್ರಜಾವಾಣಿ ಚಿತ್ರ

ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಕಾರ್ಮಿಕರೊಬ್ಬರು ನೂಲುವ ಕಾಯಕದಲ್ಲಿ ತೊಡಗಿರುವುದು. ಬಿ.ಎಂ.ಕೇದಾರನಾಥ ಪ್ರಜಾವಾಣಿ ಚಿತ್ರ

ಮಗ್ಗದ ಉದ್ಯೋಗದಲ್ಲೂ ಮಧ್ಯವರ್ತಿಗಳ ಹಾವಳಿಯಿಂದಾಗಿ ನೇಯ್ಗೆ ನಂಬಿದವರಿಗೆ ಸಿಗುತ್ತಿರುವುದು ಬಿಡಿಗಾಸು ಮಾತ್ರ. 

‘ನಷ್ಟದ ಹಾದಿಯಲ್ಲಿರುವ ಮಗ್ಗಗಳಿಗೆ ಮಧ್ಯವರ್ತಿಗಳ ಕಾಟ ವಿಪರೀತವಾಗಿದೆ. ಕಚ್ಚಾವಸ್ತುಗಳನ್ನು ಖರೀದಿಸಿ ಅಭಾವ ಸೃಷ್ಟಿಸುವ ಇವರು, ದರ ಹೆಚ್ಚಳವಾದಾಗ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಂದು ಸೀರೆ ಮಾರುಕಟ್ಟೆಯಲ್ಲಿ ₹20ಸಾವಿರಕ್ಕೆ ಮಾರಾಟವಾದರೂ, ಅದನ್ನು ನೇಯುವವರಿಗೆ ಸಿಗುವುದು ₹800ರಿಂದ ₹1 ಸಾವಿರ ಮಾತ್ರ. ಮಗ್ಗದ ನಿರ್ವಹಣೆ ಹಾಗೂ ಇತರ ಖರ್ಚು ಕಳೆದರೆ ಸಿಗುವುದು ₹500ಕ್ಕಿಂತಲೂ ಕಡಿಮೆ’ ಎಂದು ಮಗ್ಗದ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು ಮಾಗಡಿಯ ಕೆಂಪೇಗೌಡ ಉತ್ಪಾದಕರ ಕಂಪನಿ ಅಧ್ಯಕ್ಷ ಎಂ.ಆರ್.ರಾಘವೇಂದ್ರ.

ಈ ಪರಿಸ್ಥಿತಿಯಿಂದಾಗಿ ರೇಷ್ಮೆ ನಾಡು ಎಂದೇ ಖ್ಯಾತಿ ಪಡೆದಿರುವ ರಾಮನಗರದಲ್ಲಿ ಮಗ್ಗ ನಂಬಿ ಬದುಕಿನ ಬಂಡಿ ಸಾಗದು ಅಂದುಕೊಂಡ ಎಷ್ಟೋ ಮಂದಿ ಮಗ್ಗದ ಕೋಣೆಗೆ ಬೀಗ ಜಡಿದಿದ್ದಾರೆ. ಬದುಕಿಗೆ ಬೇರೆ ಕೆಲಸಗಳನ್ನು ಆಶ್ರಯಿಸಿದ್ದಾರೆ. ಒಂದು ಕಾಲದಲ್ಲಿ ಕೈಮಗ್ಗಗಳಿಗೆ ಹೆಸರಾಗಿದ್ದ ಮಾಗಡಿ ತಾಲ್ಲೂಕಿನಲ್ಲೂ ಅವುಗಳ ಸಂಖ್ಯೆ ಬೆರಳೆಣಿಕೆಗೆ ತಲುಪಿದೆ. ಇರುವ ವಿದ್ಯುತ್ ಮಗ್ಗಗಳು ಏದುಸಿರು ಬಿಡುತ್ತಿವೆ.

ಉತ್ತರ ಕರ್ನಾಟಕದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಗ್ಗಗಳಿವೆ. ‌ನಾಲ್ಕು ದಶಕಗಳ ಹಿಂದೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ (ಗದಗ, ಧಾರವಾಡ, ಹಾವೇರಿ) 10 ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಇದ್ದವು. 33 ಸಾವಿರ ಕುಟುಂಬಗಳಿಗೆ ಇವು ಉದ್ಯೋಗ ಒದಗಿಸಿದ್ದವು. ಈಗ ಕೈಮಗ್ಗದಲ್ಲಿ 534 ಮತ್ತು ವಿದ್ಯುತ್‌ ಮಗ್ಗದಲ್ಲಿ 400 ನೇಕಾರರು ಇದ್ದಾರೆ. ಈ ಗುಡಿ ಕೈಗಾರಿಕೆಗಳು ನಶಿಸುವ ಸ್ಥಿತಿಯಲ್ಲಿವೆ.

ಗರಗ, ನವಲಗುಂದ, ಬೆಂಗೇರಿ, ಹೆಬ್ಬಳ್ಳಿ ಭಾಗದಲ್ಲಿ ಈಗಲೂ ಮಗ್ಗಗಳು ಇವೆ. ಈ ಭಾಗದಲ್ಲಿ ಮಗ್ಗ ನಂಬಿದವರ ಬದುಕು ಸಮಸ್ಯೆಗಳ ಸುಳಿಗೆ ಸಿಲುಕಿದೆ. ಈ ಕ್ಷೇತ್ರದಲ್ಲಿ ದುಡಿಯಲು ಒಲವು ತೋರುವವರು ಬೆರಳೆಣಿಕೆಯಷ್ಟೂ ಇಲ್ಲ. ಮಗ್ಗಗಳಲ್ಲಿ ಸಿಗುತ್ತಿರುವ ಕಡಿಮೆ ಕೂಲಿಯಿಂದಾಗಿ ಇವರು ಮಗ್ಗದ ಕೆಲಸವನ್ನೇ ಬಿಡುತ್ತಿದ್ದಾರೆ.

ದೇಶದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಮಗ್ಗಗಳಲ್ಲಿ ದುಡಿಯುವವರಿಗೆ ಪ್ರೋತ್ಸಾಹದಾಯಕ ಮಜೂರಿ ಇರಲಿಲ್ಲ. ಕಾಲ ಸರಿದಂತೆ ನಷ್ಟದ ಹಾದಿಗೆ ಇಳಿದ ಮಗ್ಗಗಳ ಪುನಶ್ಚೇತನ ಮತ್ತು ಕಾರ್ಮಿಕರನ್ನು ಸೆಳೆಯಲು 1990ರಲ್ಲಿ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೊದಲ ಬಾರಿಗೆ ನೂಲುವವರಿಗೆ ಪ್ರತಿ ಲಡಿಗೆ 10 ಪೈಸೆಯಂತೆ ಪ್ರೋತ್ಸಾಹಧನ ನೀಡಲು ಆರಂಭಿಸಲಾಯಿತು. ಆದರೆ ಈ ದರಪಟ್ಟಿ ಪರಿಷ್ಕರಣೆ ಮುಂದೆ ನಡೆದಿದ್ದು 2014ರಲ್ಲಿ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೂಲುವವರಿಗೆ ವರ್ಷದಲ್ಲಿ ಗರಿಷ್ಠ 150 ದಿನಗಳು ಮೀರದಂತೆ ಪ್ರತಿ ಲಡಿಗೆ ₹3, ನೇಕಾರರಿಗೆ ಪ್ರತಿ ಮೀಟರ್‌ಗೆ ₹7ರಂತೆ ಪ್ರೋತ್ಸಾಹಧನ (150 ದಿನ ಮೀರದಂತೆ) ನೀಡುತ್ತೇವೆ ಎಂದು ಘೋಷಿಸಲಾಯಿತು. ಇತರೆ ಕಸಬುದಾರರಿಗೆ (ರೀಲ್ ಸುತ್ತುವವರು ಹಾಗೂ ಇತರೆ) ವರ್ಷದಲ್ಲಿ 300 ದಿನ ಮೀರದಂತೆ ಪ್ರತಿ ದಿನಕ್ಕೆ ₹9.50 ಹಾಗೂ ಇತರೆ ಸಹಾಯಕರು ಹಾಗೂ ಕಾರ್ಯಕರ್ತರಿಗೆ ಉತ್ಪಾದನೆ ಮೇಲೆ ಶೇ 9ರಷ್ಟು ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಮಗ್ಗಗಳಿಂದ ಕೇಳಿ ಬರುತ್ತಿದೆ.

‘ಸರ್ಕಾರವು ನೇಕಾರರಿಗೆ ಪ್ರತಿ ಮೀಟರ್‌ಗೆ ನೀಡುವ ಪ್ರೋತ್ಸಾಹ ಧನವನ್ನು ₹ 10ಕ್ಕೆ ಹಾಗೂ ನೂಲುವವರಿಗೆ ₹ 2ಕ್ಕೆ ಹೆಚ್ಚಿಸಬೇಕು. ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮಗ್ಗ ಉದ್ಯಮ ಉಳಿಯುತ್ತದೆ’ ಎಂದೆನ್ನುತ್ತಾರೆ. ಧಾರವಾಡ ತಾಲ್ಲೂಕು ಗರಗ ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷ ಈಶ್ವರಪ‍್ಪ ಇಟಗಿ. 

ಇದು ಸಂಘದವರ ಮಾತಾದರೆ, ಮಗ್ಗದಲ್ಲಿ ದುಡಿಯುವವರದ್ದು ಬೇರೆಯದೇ ಸಂಕಷ್ಟ. ‘ಬೆಳಿಗ್ಗೆಯಿಂದ ಸಂಜೆವರೆಗೂ ಕೈ ಮಗ್ಗದಲ್ಲಿ ನೂಲು ತೆಗೆದರೆ ₹ 150ರಿಂದ ₹ 200 ಪಗಾರ ಸಿಗ್ತೈತಿ. ಹೊಲದ್ ಕೆಲಸಕ್ಕೆ ಹೋದ್ರಾ ₹ 300 ರಿಂದ ₹ 500ರವೆಗೆ ಕೂಲಿ ಕೊಡ್ತಾರಾ. ಹಿಂಗಾಗಿ, ಮಗ್ಗದ ಕೆಲಸ ಬಿಟ್ಟೇವಿ’ ಎಂದು ಗರಗ ಗ್ರಾಮದ ಮಲ್ಲಮ್ಮ ಶೆಟ್ಟಣ್ಣನವರ ಹೇಳುತ್ತಾರೆ.

ಕೋವಿಡ್‌ ಕಾಲದಲ್ಲಿ ನೇಕಾರರ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ನೇಯ್ದ ಸೀರೆಗಳನ್ನು ಕೊಳ್ಳುವವರಿಲ್ಲದೆ ಸಾಕಷ್ಟು ಸಂಕಷ್ಟ ಅನುಭವಿಸಿದರು. ಅಲ್ಲದೆ ಆ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ನೇಯ್ಗೆ ಮಾಡುವ ನೇಕಾರರು ಮಗ್ಗಗಳನ್ನೇ ಬಂದ್ ಮಾಡಿ ಬೇರೆ ಉದ್ಯೋಗ ಹುಡುಕಿಕೊಂಡರು. ಈಗಲೂ ವಿದ್ಯುತ್ ಮಗ್ಗಗಳ ನೇಕಾರರ ಸ್ಥಿತಿ ಸರಿ ಇಲ್ಲ ಎಂಬುದು ಮಗ್ಗದವರ ಅಳಲು.

ನೇಯ್ಗೆಯ ಬಲೆಯಲ್ಲಿ ಸಿಲುಕಿದ ನೇಕಾರರ ಬದುಕು

ಸೀರೆ, ಖಣದ ಬಟ್ಟೆ ಸಿದ್ಧಪಡಿಸುವಲ್ಲಿ ಹೆಸರುವಾಸಿಯಾದ ಬಾಗಲಕೋಟೆ ಜಿಲ್ಲೆಯ ಇಳಕಲ್‌ ಸೀರೆ, ಗುಳೇದಗುಡ್ಡದ ಖಣ, ರಬಕವಿ–ಬನಹಟ್ಟಿಯ ಕಾಟನ್‌ ಸೀರೆಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಆದರೆ, ಇವುಗಳನ್ನು ನೇಯುವ ನೇಕಾರರ ಬದುಕು ನೇಯ್ಗೆಯ ಬಲೆಯಲ್ಲಿ ಸಿಲುಕಿ, ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಇಳಕಲ್‌, ಹುನಗುಂದ, ರಬಕವಿ ಬನಹಟ್ಟಿ, ತೇರದಾಳ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ತಲೆತಲಾಂತರದಿಂದ ನೇಕಾರಿಕೆಯನ್ನು ಹಲವು ಕುಟುಂಬಗಳು ಮುಂದುವರೆಸಿಕೊಂಡು ಬಂದಿದ್ದರೆ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೊರತೆ, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಿಡಿತದಿಂದಾಗಿ ಹಲವು ಕುಟುಂಬದವರು ಬೇರೆ ಉದ್ಯೋಗ ಅರಸಿಕೊಂಡು ಹೋಗಿದ್ದಾರೆ.

2018ರ ಗಣತಿ ಪ್ರಕಾರ ಬಾಗಲಕೋಟೆ ಜಿಲ್ಲೆಯೊಂದರಲ್ಲೇ 6,154 ಕೈಮಗ್ಗ ಹಾಗೂ 17,729 ಪವರ್‌ ಲೂಮ್‌ಗಳಿವೆ. ಪವರ್ ಲೂಮ್‌ಗಳಿಗೆ ವಿದ್ಯುತ್‌ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್‌ ನಿರ್ಮಾಣದ ನಿರ್ಧಾರವಾಗಿತ್ತು. ಐದು ವರ್ಷಗಳ ಕಾಲ ಮತ್ತೊಂದು ಸರ್ಕಾರ ಬಂದು ಈಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಈಗಲಾದರೂ ಬೇಡಿಕೆ ಈಡೇರಲಿದೆಯೇ ಎಂಬ ನಿರೀಕ್ಷೆಯಲ್ಲಿ ಈ ಭಾಗದ ನೇಕಾರರು ಇದ್ದಾರೆ. 

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್‌ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈಗ ಅದರದ್ದು ಸದ್ದಿಲ್ಲ ಎನ್ನುವುದು ಮಗ್ಗ ನಂಬಿದವರ ಮಾತು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕು ರೇಷ್ಮೆ ಸೀರೆಗೆ ಪ್ರಸಿದ್ಧಿ ಪಡೆದಿದೆ. ಕಟ್ಟು ಸೀರೆ ಮೊಳಕಾಲ್ಮುರು ಖ್ಯಾತಿಗೆ ಮುಖ್ಯ ಕಾರಣ. ವಿಶೇಷ ವಿನ್ಯಾಸಕ್ಕಾಗಿ ಮೂರು ಲಾಳಿ ಬಳಸಿ (ಸೀರೆ ಮೇಲೆ ಯಾವುದೇ ರೀತಿಯ ಚಿತ್ತಾರ ರಚಿಸಲು ಮೂರು ಲಾಳಿ ಬಳಸಲಾಗುತ್ತದೆ) ಈ ಸೀರೆ ನೇಯ್ಗೆ ಮಾಡಲಾಗುತ್ತದೆ. ಕೈಮಗ್ಗದ ಈ ರೇಷ್ಮೆ ಸೀರೆಗೆ ರಾಜ್ಯದಲ್ಲಿಯೂ ಬೇಡಿಕೆ ಇದೆ. ಆದರೆ, ಇತ್ತೀಚೆಗೆ ಈ ಮಗ್ಗಗಳು ಒಂದೊಂದಾಗಿ ಮುಚ್ಚಿಹೋಗುತ್ತಿವೆ.

ಮೊಳಕಾಲ್ಮುರು ಪಟ್ಟಣ, ತೊರೆಕೊಲಮ್ಮನಹಳ್ಳಿ, ಕೊಂಡ್ಲಹಳ್ಳಿ, ಅಬ್ಬೇನಹಳ್ಳಿ, ಓಬಣ್ಣನಹಳ್ಳಿ ಸೇರಿ ಹಲವು ಗ್ರಾಮಗಳು ರೇಷ್ಮೆ ಸೀರೆಯ ಕೈಮಗ್ಗಗಳಿಗೆ ಹೆಸರಾಗಿದ್ದವು. ದಶಕಗಳ ಹಿಂದೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಾವಿರಕ್ಕೂ ಅಧಿಕ ಮಗ್ಗಗಳಿದ್ದವು. ಇವುಗಳ ಸಂಖ್ಯೆ ಈಗ ನೂರಕ್ಕೆ ಇಳಿದಿದೆ. ಸಂಕಷ್ಟ ನಿವಾರಣೆಗೆ ಸರ್ಕಾರದ ಎದುರು ಅಲವತ್ತುಕೊಂಡು ಸಾಕಾದ ನೇಕಾರರು ಕೈಮಗ್ಗದಿಂದ ವಿಮುಖರಾಗುತ್ತಿದ್ದಾರೆ.

ರಾಮನಗರದಲ್ಲಿರುವ ಜೈ ಭಾರತ್ ವೀವರ್ಸ್ ಕೋ ಆಪರೇಟಿವ್ ಸೊಸೈಟಿಯ ಘಟಕದಲ್ಲಿ ವಿದ್ಯುತ್ ಮಗ್ಗಗಳಿಂದ ರೇಷ್ಮೆ ಸೀರೆ ನೇಯುತ್ತಿರುವುದು ಪ್ರಜಾವಾಣಿ ಚಿತ್ರ: ಚಂದ್ರೇಗೌಡ

ರಾಮನಗರದಲ್ಲಿರುವ ಜೈ ಭಾರತ್ ವೀವರ್ಸ್ ಕೋ ಆಪರೇಟಿವ್ ಸೊಸೈಟಿಯ ಘಟಕದಲ್ಲಿ ವಿದ್ಯುತ್ ಮಗ್ಗಗಳಿಂದ ರೇಷ್ಮೆ ಸೀರೆ ನೇಯುತ್ತಿರುವುದು ಪ್ರಜಾವಾಣಿ ಚಿತ್ರ: ಚಂದ್ರೇಗೌಡ

ಮಗ್ಗಗಳಿಗೆ ಸಿಗದ ಗುಣಮಟ್ಟದ ಕಚ್ಚಾ ಸಾಮಗ್ರಿ

ಹೆಚ್ಚಾದ ಕಚ್ಚಾಮಾಲುಗಳ ದರ, ಕೂಲಿಕಾರರ ಸಮಸ್ಯೆ, ಮಾರುಕಟ್ಟೆ ಕೊರತೆಯಿಂದಾಗಿ ನೇಕಾರರು ಈಗಲೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಲಕ್ಷಾಂತರ ಕಿಮ್ಮತ್ತಿನ ನೇಯ್ದ ವಸ್ತುಗಳು ನೇಕಾರರ ಮನೆಯಲ್ಲಿ ಕೊಳೆಯುತ್ತಿವೆ. ಸರ್ಕಾರ ಕೂಡ ನೇಕಾರರ ಕಡೆ ಗಮನ ಕೊಟ್ಟಿಲ್ಲ. ಕೇವಲ ಹಾಳೆಗಳಲ್ಲಿ ಮಾತ್ರ ನೇಕಾರರ ಅಭಿವೃದ್ಧಿಯ ಮಾತುಗಳಿವೆ. ಆದರೆ ಅವುಗಳು ಜಾರಿಗೆ ಬಂದಿಲ್ಲ. ಕಾರಣ ನೇಕಾರರ ಕಷ್ಟವೂ ಕಡಿಮೆ ಆಗಿಲ್ಲ ಎಂಬುದು ಅವರ ಬೇಸರ.

ಇಷ್ಟು ಸಾಲದು ಎಂಬಂತೆ, ಕರ್ನಾಟಕ ಜವಳಿ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್‌ಡಿಸಿ)ದಿಂದ ಕೈಮಗ್ಗಗಳಿಗೆ ರೇಷ್ಮೆ ನೂಲು ಹಾಗೂ ಜರಿ ಪೂರೈಕೆಯನ್ನು ಸಾಕಾಲಕ್ಕೆ ನೀಡುತ್ತಿಲ್ಲ ಎಂಬ ಆರೋಪವೂ ಇದೆ. ಈಚಿನ ದಿನಗಳಲ್ಲಿ ಮುಖ್ಯ ಕಚ್ಚಾ ವಸ್ತುವಾಗಿರುವ ಮಸರಾಯಿ ಬೆಲೆ ಗಗನಕ್ಕೇರಿರುವುದು ನೇಕಾರಿಕೆಗೆ ದೊಡ್ಡ ಹೊಡೆತ ನೀಡಿದೆ.

ಆರು ತಿಂಗಳಿಗೊಮ್ಮೆ ಕಚ್ಚಾ ಸಮಾಗ್ರಿ ನೀಡಿದರೆ ಮಗ್ಗಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಚಿತ್ರದುರ್ಗದ ನೇಕಾರ ಪಿ.ಶ್ರೀನಿವಾಸುಲು.

ಕೈಮಗ್ಗಗಳಿಗೆ ಅಗತ್ಯವಿರುವ ರೇಷ್ಮೆ ನೂಲು, ಜರಿ ಸೇರಿ ಇತರ ಕಚ್ಚಾವಸ್ತುವನ್ನು ಕೆಎಚ್‌ಡಿಸಿ ಪೂರೈಕೆ ಮಾಡಬೇಕು. ಹೀಗೆ ನೀಡುವ ನೂಲಿನ ಗುಣಮಟ್ಟದ ಬಗ್ಗೆಯೂ ನೇಕಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಸಿ ನೂಲು ಪೂರೈಕೆಯಿಂದ ಗುಣಮಟ್ಟ ಕಾಯ್ದುಕೊಳ್ಳಲು ಕಷ್ಟವಾಗಿದೆ. ಮೊಳಕಾಲ್ಮುರಿನಲ್ಲಿ 400ಕ್ಕೂ ಅಧಿಕವಾಗಿದ್ದ ಕೆಎಚ್‌ಡಿಸಿ ಮಗ್ಗಗಳ ಪೈಕಿ ಶೇ 80ರಷ್ಟು ಬಾಗಿಲು ಮುಚ್ಚಿವೆ. ಅನೇಕರು ಖಾಸಗಿಯವರ ಬಳಿ ನೂಲು ತಂದು ಸೀರೆ ನೇಯುತ್ತಿದ್ದಾರೆ. ಇದಕ್ಕೆ ನೀಡಲಾಗುತ್ತಿರುವ ಕೂಲಿ ಹಣ ಸಾಕಾಗುತ್ತಿಲ್ಲ. ಹೀಗಾಗಿ ಬಹಳಷ್ಟು ಕಾರ್ಮಿಕರು ಹೊಟೇಲ್, ಬೀದಿ ಬದಿ ಅಂಗಡಿ ಕೆಲಸಕ್ಕೆ ಸೇರಿದರೆ, ಇನ್ನೂ ಕೆಲವರು ಬೆಂಗಳೂರಿಗೆ ಗುಳೆ ಹೋಗಿದ್ದಾರೆ ಎಂದು ಮೊಳಕಾಲ್ಮೂರು ಸುತ್ತಮುತ್ತಲಿನ ನೇಕಾರರು ಹೇಳುತ್ತಾರೆ.

ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಾವಿರಕ್ಕೂ ಅಧಿಕ ಕಂಬಳಿ ಮಗ್ಗಗಳಿದ್ದವು. ಮಾರುಕಟ್ಟೆ ಸಮಸ್ಯೆಯಿಂದ ಇತ್ತೀಚೆಗೆ ಈ ಮಗ್ಗಗಳು ನೆಲಕಚ್ಚುತ್ತಿವೆ. ಚಳಿಯಿಂದ ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ತರಹೇವಾರಿ ಬ್ಲಾಂಕೆಟ್‌ಗಳು ಬಂದಿರುವಾಗ ಮೈಚುಚ್ಚುವ ಕಂಬಳಿ ಬಯಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಗದ್ದೆ ತೋಟಗಳಿಗೆ ಮಳೆಗಾಲದಲ್ಲಿ ಕಂಬಳಿ ಕೊಪ್ಪೆ ಮಾಡಿ ಹೊದ್ದುಕೊಂಡು ಹೋಗುವ ಕಾಲವೊಂದಿತ್ತು. ಈಗ ಜಾಗವನ್ನು ಪ್ಲಾಸ್ಟಿಕ್ ಆವರಿಸಿದೆ. ಹೀಗಾಗಿ ಕಂಬಳಿಗಳು ಈಗ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಪರಿಸ್ಥಿತಿಯನ್ನು ವಿವರಿಸುತ್ತಾರೆ ಚಳ್ಳಕೆರೆ ತಾಲ್ಲೂಕಿನ ಓಬಳಾಪುರದ ನೇಕಾರ ಎಂ.ಪಾತಲಿಂಗಪ್ಪ.

ಸೂರತ್‌ ಸೀರೆ ಅಬ್ಬರಕ್ಕೆ ಮಂಕಾದ ದೊಡ್ಡಬಳ್ಳಾಪುರ ಸೀರೆ 

ಗುಜರಾತ್‌ನ ಸೂರತ್‌ ಶಟಲ್‌ಲೆಸ್‌ (ಲಾಳಿ ಇಲ್ಲದ) ವಿದ್ಯುತ್‌ ಮಗ್ಗಗಳ ಅಬ್ಬರಕ್ಕೆ ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಕೈಮಗ್ಗಗಳು ಸೋತು ಸುಣ್ಣವಾಗಿವೆ. ಸೂರತ್‌ ಸೀರೆಗಳ ಆಕರ್ಷಣೆಯಲ್ಲಿ ದೊಡ್ಡಬಳ್ಳಾಪುರದ ಕೈಮಗ್ಗದ ಸಾಂಪ್ರದಾಯಿಕ ಸೀರೆಗಳು ಮಾರುಕಟ್ಟೆಯಲ್ಲಿ  ಕಳೆದು ಹೋಗಿವೆ.

ಪ್ರತಿ ವರ್ಷ ಆಷಾಢಮಾಸದಲ್ಲಿ ಸೀರೆಗಳ ಮಾರಾಟ ಕುಸಿತವಾದರೆ ಮತ್ತೆ ಹಬ್ಬಗಳ ಸಾಲು ಪ್ರಾರಂಭವಾಗುವವರೆಗೂ ಸೀರೆಗಳಿಗೆ ಬೇಡಿಕೆ ಇಲ್ಲದಾಗುತಿತ್ತು. ಆದರೆ ಈಗ ಆಷಾಢ ಮುಕ್ತಾಯವಾದರೂ ವ್ಯಾಪಾರಸ್ಥರಿಂದ ಸೀರೆಗಳಿಗೆ ಬೇಡಿಕೆಯೇ ಬರುತ್ತಿಲ್ಲ. ಇದೇ ಸಂದರ್ಭದಲ್ಲಿ ಆರು ಕಾಲು ಮೀಟರಿನ ಒಂದು ಸೀರೆ ನೇಯಲು ನೀಡಲಾಗುತ್ತಿರುವ ಕೂಲಿ ಮಾತ್ರ ಕಡಿಮೆಯಾಗಿಲ್ಲ. ಕೋವಿಡ್‌-19 ಸಂದರ್ಭದ ನಂತರ ಇದೇ ಮೊದಲ ಬಾರಿಗೆ ನೇಕಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎನ್ನುತ್ತಾರೆ ನಗರದ ತೇರಿನಬೀದಿಯ ನೇಕಾರ ಲಕ್ಷ್ಮೀನಾರಾಯಣ.

ಸೂರತ್‌ನಲ್ಲಿ ಒಬ್ಬ ಕಾರ್ಮಿಕ 8 ತಾಸು ಕೆಲಸ, ತಿಂಗಳ ಲೆಕ್ಕದಲ್ಲಿ ಸಂಬಳ. ಕನಿಷ್ಠ 8 ರಿಂದ 10 (ಲಾಳಿ ಇಲ್ಲದ) ಮಗ್ಗಗಳನ್ನು ಏಕ ಕಾಲಕ್ಕೆ ನಡೆಸಲಾಗುತ್ತದೆ. ಹೀಗಾಗಿ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಅಲ್ಲಿನ ನೇಕಾರಿಗೆ ಸಾಧ್ಯವಾಗಿದೆ. ಇಲ್ಲಿನ ನೇಕಾರಿಗೆ ಉನ್ನತೀಕರ ಈಗ ಅನಿವಾರ್ಯವಾಗಿದೆ ಎನ್ನುವುದು ಮಗ್ಗದವರ ಮಾತು.

‘ಮಗ್ಗದವರು ಒಂದು ಅಂಗಿ ಹೊಲೆದರೆ ಅದಕ್ಕೆ ಸಿಗುವುದು ₹250. ಅದೇ ವಾಚ್‌ ಬೆಲ್ಟ್‌ ಅಥವಾ ಇನ್ಯಾವುದೇ ಉಪ ಉತ್ಪನ್ನಗಳನ್ನು ಆಧುನಿಕ ಮಾದರಿಯಲ್ಲಿ ಸಿದ್ಧಪಡಿಸಿದರೆ ₹1ಸಾವಿರ ಸಿಗುತ್ತದೆ. ಭಿನ್ನವಾಗಿ ಯೋಚಿಸದ ಹೊರತು ಯಶಸ್ಸು ಅಸಾಧ್ಯ’ ಎಂದು ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಹಿಂದೊಮ್ಮೆ ಹೇಳಿದ್ದರು. ಮಗ್ಗಗಳಲ್ಲೂ ಕಾಲ ಕಾಲಕ್ಕೆ ತಕ್ಕಂತೆ ಬದಲಾಗಿ, ಭಿನ್ನವಾಗಿ ಆಲೋಚಿಸಿ ಹೊಸತನ್ನು ನೀಡಿದ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಇಂಥ ನೇಕಾರರು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡ ಬಹಳಷ್ಟು ಉದಾಹರಣೆಗಳಿವೆ.

ರಾಜ್ಯದಲ್ಲಿಯೇ ‘ಕೈಮಗ್ಗ’ ಉದ್ಯಮ ಏರುಪೇರು ಅಧ್ಯಯನಕ್ಕೆ ಚಿಕ್ಕಬಳ್ಳಾಪುರ ಚಿಂತಾಮಣಿ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮ ಉತ್ತಮ ಆಕರವಾಗುತ್ತದೆ. ಮೊದಲು ಇಲ್ಲಿ 500 ಕೈಮಗ್ಗಗಳಿದ್ದವು. ಸದ್ಯ ಸುಮಾರು 100ರಿಂದ 120 ಕೈಮಗ್ಗಗಳು ಗ್ರಾಮದಲ್ಲಿವೆ.

‘ಕೈಮಗ್ಗ ನಡೆಸಲು ಇಡೀ ಕುಟುಂಬವೇ ಶ್ರಮಪಡಬೇಕು. ಆದಾಯವೂ ದೊಡ್ಡ ಪ್ರಮಾಣದಲ್ಲಿ ಇಲ್ಲ. ಇಲ್ಲಿ ಹಾಕುವ ಶ್ರಮವನ್ನು ಬೇರೆ ಕೆಲಸಗಳಿಗೆ ಹಾಕಿದರೆ ಉತ್ತಮ ಆದಾಯ ಗಳಿಸಬಹುದು. ಅಲ್ಲದೆ, ಸರ್ಕಾರ ಕೈಮಗ್ಗ ನಡೆಸುವವರಿಗೆ ವಿವಿಧ ಸೌಲಭ್ಯ ನೀಡುತ್ತಿದೆ. ಆದರೆ, ಇದು ಅರ್ಹರಿಗೆ ತಲುಪುತ್ತಿಲ್ಲ’ ಎನ್ನುತ್ತಾರೆ ತಿಮ್ಮಸಂದ್ರದ ರಮೇಶ್.

ಚಿಂತಾಮಣಿ ತಾಲ್ಲೂಕಿನ ನರನಕಲ್ಲು, ಕೋನಪ್ಪಲ್ಲಿ, ಮುದ್ದಲಹಳ್ಳಿ, ಮಾದರಕಲ್ಲು, ಶಿಡ್ಲಘಟ್ಟ ತಾಲ್ಲೂಕಿನ ಮಾದೇನಹಳ್ಳಿ, ಬಯ್ಯಪ್ಪನಹಳ್ಳಿ, ದೊಡ್ಡತೇಕಹಳ್ಳಿ, ಸುಗುಟೂರು, ವೆಂಕಟಾಪುರ, ನಾಗಮಂಗಲ, ಮಳಮಾಚನಹಳ್ಳಿ, ದೊಡ್ಡದಾಸರಹಳ್ಳಿ, ಚಿಕ್ಕದಾಸರಹಳ್ಳಿ, ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ, ನಲ್ಲರಾಳಪಲ್ಲಿ ಮತ್ತಿತರ ಗ್ರಾಮಗಳಲ್ಲಿ ಒಂದು ಸಮಯದಲ್ಲಿ ಉಚ್ಚ್ರಾಯವಾಗಿದ್ದ ಕೈಮಗ್ಗಗಳು ಈಗ ಅಲ್ಲೊಂದು ಇಲ್ಲೊಂದು ಎನ್ನುವಂತೆ ನಡೆಯುತ್ತಿವೆ. ಬೆಂಗಳೂರಿನಂತ ಮಹಾನಗರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದರೂ, ಇಲ್ಲಿನ ಬೇಡಿಕೆ ಸೃಷ್ಟಿಸಿಕೊಳ್ಳುವಲ್ಲಿ ಅವರು ವಿಫಲವಾಗಿವೆ.

ಮಗ್ಗಗಳ ಏಳುಬೀಳುಗಳ ಹಾದಿಯಲ್ಲಿ ಹೊಸತನಕ್ಕೆ ಹಾತೊರೆದವರು ಅಲ್ಲಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ದಶಕಗಳಿಂದ ಸಿದ್ಧಪಡಿಸಿಕೊಂಡು ಬರಲಾಗುತ್ತಿರುವ ವಸ್ತ್ರಗಳನ್ನೇ ನೇಯುವ ಬದಲು, ಹೊಸ ಆಲೋಚನೆಯೊಂದಿಗೆ ಕಡಿಮೆ ಖರ್ಚಿನಲ್ಲಿ ನೇಯುವ ವಾಚ್‌ನ ಬಟ್ಟೆ ಬೆಲ್ಟ್‌ ಅಥವಾ ಆಧುನಿಕ ಶೈಲಿಯ ಇನ್ಯಾವುದೇ ಫ್ಯಾಷನ್ ಪರಿಕರಗಳನ್ನು ಸಿದ್ಧಪಡಿಸಿ ಕಾಲದೊಂದಿಗೆ ಹೆಜ್ಜೆ ಹಾಕಿದರೆ ಮಗ್ಗಗಳು ಆರ್ಥಿಕತೆ ಲಾಭದ ಹಾದಿಯಲ್ಲಿ ಸಾಗಲಿವೆ ಎಂದು ಟೈಟನ್ ಪರಿಚಯಿಸಿದ ಖಾದಿ ವಾಚ್‌ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಆ ನಿಟ್ಟಿನಲ್ಲಿ ರಾಜ್ಯದ ಮಗ್ಗಗಳು ಹೊಸ ಆಲೋಚನೆಗೆ ಒಗ್ಗಿಕೊಂಡು ಇಂದಿನ ಜನಾಂಗದ ಬೇಡಿಕೆಗೆ ಪೂರಕ ವಸ್ತ್ರ, ಪರಿಕರಗಳನ್ನು ಸಿದ್ಧಪಡಿಸುವುದು ಅನಿವಾರ್ಯ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮೊಳಕಾಲ್ಮುರು ರೇಷ್ಮೆ ಸೀರೆ
ಮೊಳಕಾಲ್ಮುರು ರೇಷ್ಮೆ ಸೀರೆ

ಅಭಿಪ್ರಾಯಗಳು..

ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ನೇಕಾರರಿಗೂ ದೊರೆಯುವಂತಾಗಬೇಕು. ಆಗ ಮಾತ್ರ ಮಗ್ಗಗಳು ಉಳಿಯಲು ಸಾಧ್ಯ.

-ಚಂದ್ರಕಾಂತ ಶೇಖಾ ಅಧ್ಯಕ್ಷ ಬಾಗಲಕೋಟೆ ಜಿಲ್ಲಾ ನೇಕಾರರ ಒಕ್ಕೂಟ

ವಿದ್ಯುತ್ ಚಾಲಿತ ಮಗ್ಗಗಳಿಗೆ 20 ಎಚ್‌ಪಿ ವರೆಗೂ ಉಚಿತ ವಿದ್ಯುತ್ ನೀಡಬೇಕು. ₹10 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಮನೆ ನಿರ್ಮಾಣಕ್ಕೆ ನೆರವು ನೀಡುವ ಯೋಜನೆ ಪುನಃ ಆರಂಭಿಸಬೇಕು. -ವಿಷ್ಣು ಗೌಡರ ಅಧ್ಯಕ್ಷರು ಬಾಗಲಕೋಟೆ ಜಿಲ್ಲಾ ನೇಕಾರ ಸಹಕಾರ ಸಂಘಗಳ ಮಹಾಮಂಡಳ

ಮಾರುಕಟ್ಟೆಗೆ ಏನು ಬೇಕೊ ಅದನ್ನು ಕೊಡದೇ ಹಳೆಯದ್ದೇ ರೀತಿಯ ವಿನ್ಯಾಸದಲ್ಲಿ ಸೀರೆ ನೇಯುತ್ತಾ ಇದ್ದರೆ ನಷ್ಟದಲ್ಲಿರುತ್ತೇವೆ. ಸಂಪ್ರದಾಯದ ಜೊತೆಗೆ ಹೊಸತನ ಸ್ವಲ್ಪ ಸೇರಿಸಿಕೊಂಡರೆ ಗ್ರಾಹಕರಿಗೆ ಇಷ್ಟವಾಗುತ್ತದೆ.

– ಪದ್ಮಶ್ರೀ ವ್ಯವಸ್ಥಾಪಕಿ ಚರಕ ಸಂಸ್ಥೆ

ಮಾರುಕಟ್ಟೆ ಹುಡುಕಿಕೊಂಡ ಸ್ವದೇಶಿ ಮಗ್ಗಗಳು

ಬೆಳಗಾವಿ ವಡಗಾವಿಗೆ ಇಂದಿಗೂ ಇದೆ ಬೇಡಿಕೆ ಬೆಳಗಾವಿ ಜಿಲ್ಲೆಯಲ್ಲಿ ಸ್ಥಳೀಯ ಸಾಂಪ್ರದಾಯಿಕ ಶೈಲಿ ಬಳಸಿಕೊಂಡು ಸಿದ್ಧಪಡಿಸುವ ‘ವಡಗಾವಿ ಸೀರೆ’ಗಳಿಗೆ ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲೂ ಬೇಡಿಕೆ ಇದೆ. ವಡಗಾವಿ ಸೀರೆಗಳಗೆ 120 ವರ್ಷಗಳ ಇತಿಹಾಸವಿದೆ. ತಲೆಮಾರುಗಳಿಂದಲೂ ಬೆಳಗಾವಿಯ ವಡಗಾವಿ ಪ್ರದೇಶದ ನೇಕಾರರು ಈ ಮಾದರಿಯ ಸೀರೆಗಳನ್ನು ಸಿದ್ಧ‍ಪಡಿಸುವಲ್ಲಿ ನಿಪುಣರು.

ಆರಂಭದಲ್ಲಿ ಈ ಸೀರೆಗಳಿಗೆ ಮಹಾರಾಷ್ಟ್ರದ ಶಹಾಪುರದಲ್ಲಿ ದೊಡ್ಡ ಮಾರುಕಟ್ಟೆ ಇತ್ತು. ಅಲ್ಲಿನ ಮಾರವಾಡಿಗಳು ಇದನ್ನು ಖರೀದಿಸುತ್ತಿದ್ದುದರಿಂದ ಇದನ್ನು ಶಹಾಪುರಿ ಸೀರೆ ಎಂದೂ ಗುರುತಿಸಲಾಗುತ್ತದೆ.  ಕಂಚಿಯ ಸೀರೆಗಳ ವಿನ್ಯಾಸವನ್ನೇ ತಮ್ಮ ಮಗ್ಗಗಳಿಗೆ ಹೊಂದಿಸಿಕೊಳ್ಳುತ್ತ ಸಮಕಾಲೀನ ಟ್ರೆಂಡ್‌ ಜೊತೆಗೆ ಹೆಜ್ಜೆ ಹಾಕುತ್ತಿರುವ ಶಹಾಪುರಿ ಸೀರೆಗೆ ತನ್ನದೇ ಆದ ವಿನ್ಯಾಸ ಅಥವಾ ಸ್ವರೂಪ ಇಲ್ಲ.

ಸಣ್ಣ ಗೋಪುರದ ಅಂಚಿನಿಂದ ಆರಂಭಿಸಿ ಎಲ್ಲ ಬಗೆಯ ಅಂಚುಗಳೂ ಕಂಗೊಳಿಸುತ್ತವೆ. ಒಡಲಿನ ತುಂಬ ಜರಿಯಿರುವುದರಿಂದ ವಿಜ್ರಂಭಣೆಯ ಸೀರೆ ಇದು ಎಂದೆನಿಸುತ್ತದೆ. ದಿನ ಉಡಲು ಅನುವಾಗುವ ಈ ಸೀರೆಗಳು ಎಲ್ಲ ವರ್ಗದವರೂ ಆಸೆ ಪಡುತ್ತಾರೆ. ಕೂಲಿ ಕೆಲಸ ಮಾಡಿದರೂ ಹೊಲದಲ್ಲಿ ಗೇಯ್ಮೆ ಮಾಡಿದರೂ ಮದುವೆಯಂಥ ಸಮಾರಂಭಗಳಿಗೆ ಹೋದರೂ ಎಲ್ಲದಕ್ಕೂ ಸಲ್ಲುವ ಗುಣ ಇರುವ ಈ ಸೀರೆ ಈ ಭಾಗದ ಜನಜೀವನದಲ್ಲಿ ಹಾಸು ಹೊಕ್ಕಿದೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗುಳೇದಗುಡ್ಡದ ಖಣಗಳು ಮತ್ತು ಷಾಪುರಿ ಸೀರೆಗಳು ಅಲ್ಲಿಯ ಶ್ರಮಿಕ ವರ್ಗದ ಹೆಮ್ಮೆಯಾಗಿ ತಮ್ಮ ಅಸ್ತಿತ್ವ ಕಂಡುಕೊಂಡಿವೆ.

ತಯಾರಾಗುವ ವಡಗಾವಿ ಸೀರೆಗಳಲ್ಲಿ ಶೇ 50ರಷ್ಟು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾದರೆ ಮಲೇಷಿಯಾ ಬಾಂಗ್ಲಾದೇಶ ಶ್ರೀಲಂಕಾ ದೇಶಗಳಲ್ಲಿ ಈ ಸೀರೆಗಳಿಗೆ ಬೇಡಿಕೆ ಇದೆ. ನೆರೆಯ ಮಹಾರಾಷ್ಟ್ರ ಆಂಧ್ರ ತೆಲಂಗಾಣ ಕೇರಳ ತಮಿಳುನಾಡು ಗುಜರಾತ್‌ ವರೆಗೆ ಬೆಳಗಾವಿಯ ಈ ಸೀರೆಗೆ ಬೇಡಿಕೆ ಇದೆ.  ಯಶಸ್ಸು ಕಂಡ ಮಂಚಿ ಮಾರುತಿ ಮೊಳಕಾಲ್ಮುರು ರೇಷ್ಮೆ ಸೀರೆಯನ್ನು ಉದ್ಯಮವಾಗಿ ರೂಪಿಸುವತ್ತ ದೃಢವಾದ ಹೆಜ್ಜೆ ಇಡುತ್ತಿರುವುವರು ಮಂಚಿ ಮಾರುತಿ. 80ಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿರುವ ಇವರು ರಾಜ್ಯದ ವಿವಿಧೆಡೆಗೆ ರೇಷ್ಮೆ ಸೀರೆಗಳನ್ನು ಪೂರೈಸುತ್ತಿದ್ದಾರೆ. ನೇಕಾರರ ಕುಟುಂಬದಲ್ಲಿ ಜನಿಸಿದ ಮಾರುತಿ ರೇಷ್ಮೆ ಸೀರೆಯ ನೇಯ್ಗೆಯ ಕೌಶಲವನ್ನು ಚಿಕ್ಕಂದಿನಲ್ಲೇ ಕರಗತ ಮಾಡಿಕೊಂಡವರು.

7ನೇ ತರಗತಿಯ ಬಳಿಕ ಶಿಕ್ಷಣ ತೊರೆದು ನೇಕಾರಿಕೆ ವೃತ್ತಿ ಆರಂಭಿಸಿದರು. ಕಡಿಮೆ ಕೂಲಿಯ ಕಾರಣಕ್ಕೆ ನೇಕಾರಿಕೆಯಿಂದ ಎಲ್ಲರೂ ವಿಮುಖರಾಗುತ್ತಿದ್ದ ಕಾಲದಲ್ಲಿ ಹೆಚ್ಚು ಮಗ್ಗಗಳನ್ನು ತೆರೆದು ನೂರಾರು ಜನರಿಗೆ ಕೆಲಸ ನೀಡಿದ್ದಾರೆ. ಇದರೊಂದಿಗೆ ಉತ್ತಮ ಗುಣಮಟ್ಟದ ರೇಷ್ಮೆ ಬಳಕೆಯಿಂದ ಮೊಳಕಾಲ್ಮುರು ಬ್ರಾಂಡ್‌ಗೆ ಹೊಸತನ ನೀಡಿರುವ ಮಂಚಿ ಮಾರುತಿ ನೇಕಾರರಿಗೆ ಹೆಚ್ಚಿನ ಸಂಭಾವನೆ ನೀಡುತ್ತಿರುವುದರಿಂದ ಕುಶಲಕರ್ಮಿಗಳು ಇವರೊಂದಿಗೆ ಕೆಲಸ ಮಾಡುವ ಆಸಕ್ತಿ ಹೊಂದಿದ್ದಾರೆ.

ಜತೆಗೆ ಹೊರರಾಜ್ಯಗಳಲ್ಲೂ ಮೊಳಕಾಲ್ಮುರು ರೇಷ್ಮೆ ಸೀರೆಯ ಪ್ರಚಾರಕ್ಕೂ ಇವರು ವ್ಯಾಪಕ ಕ್ರಮ ಕೈಗೊಂಡಿರುವುದು ಇವರಿಗೆ ನೆರವಾಗಿದೆ. ಇವೆಲ್ಲದನ್ನೂ ಪರಿಗಣಿಸಿ ಕೇಂದ್ರ ಸರ್ಕಾರ ಇವರಿಗೆ ಪ್ರಶಸ್ತಿಯನ್ನೂ ನೀಡಿದೆ. ‘2014ರಲ್ಲಿ ನಾಲ್ಕು ಇದ್ದ ಮಗ್ಗಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಕೆಲಸಕ್ಕೆ ಅನುಗುಣವಾಗಿ ನೇಕಾರರಿಗೆ ಕೂಲಿ ನೀಡುತ್ತಿದ್ದೇನೆ. ಅನೇಕರು ಬೆಂಗಳೂರಿನಿಂದ ಊರಿಗೆ ಮರಳಿ ರೇಷ್ಮೆ ಸೀರೆ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಗ್ಗದಿಂದ ವಿಮುಖರಾಗಿ ಗುಳೆ ಹೋಗಿರುವ ಎಲ್ಲರನ್ನೂ ಮರಳಿ ನೇಕಾರಿಕೆಗೆ ತರಬೇಕು ಎಂಬ ಗುರಿ ಇದೆ’ ಎನ್ನುತ್ತಾರೆ ಮಂಚಿ ಮಾರುತಿ. 700ಕ್ಕೂ ಹೆಚ್ಚು ಜನರಿಗೆ ಸುಸ್ಥಿರ ಬದುಕು ಕೊಟ್ಟ ಚರಕ ಶಿವಮೊಗ್ಗ: ನೇಯ್ಗೆ ಕೈಮಗ್ಗ ಅಂದರೆ ನಷ್ಟದ ಬಾಬ್ತು. ನೇಕಾರಿಕೆಗೆ ಭವಿಷ್ಯವಿಲ್ಲ ಎಂಬ ಗೊಣಗಾಟದ ನಡುವೆಯೇ ಸಾಗರ ತಾಲ್ಲೂಕು ಹೆಗ್ಗೋಡಿನ ಚರಕ ಸಂಸ್ಥೆ ಕಳೆದ ಮೂರು ದಶಕಗಳಿಂದ ಕೈಮಗ್ಗಗಳ ಸದ್ದು ನಂಬಿಯೇ 700ಕ್ಕೂ ಹೆಚ್ಚು ಜನರಿಗೆ ಸುಸ್ಥಿರ ಬದುಕು ಕಟ್ಟಿಕೊಟ್ಟಿದೆ. ಅದೇ ಹಾದಿಯಲ್ಲಿ ಸಾಗುತ್ತಿದೆ. 90 ದಶಕದ ಆರಂಭದಲ್ಲಿ ಸಹಕಾರ ತತ್ವದಡಿ ಸಂಸ್ಥೆಯ ಕಟ್ಟಿ ಬೆಳೆಸಿದವರು ರಂಗಕರ್ಮಿ ಪ್ರಸನ್ನ ಹಾಗೂ ಗೆಳೆಯರು. ಕಾಲಕಾಲಕ್ಕೆ ಗ್ರಾಹಕರ ಒಲವು–ನಿಲುವುಗಳ ಅರ್ಥೈಸಿಕೊಂಡು ಕೈಮಗ್ಗದ ಉತ್ಪನ್ನಗಳಿಗೆ ನಾವಿನ್ಯದ ಸ್ಪರ್ಶ ನೀಡಿದ ಪರಿಣಾಮ ಚರಕ ಸಂಸ್ಥೆ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ’ಎತ್ತರಕ್ಕೆ ಬೆಳೆಯುವುದು ಬೇಡ. ಬದಲಿಗೆ ಎಲ್ಲರನ್ನೂ ಒಳಗೊಂಡು ಅಗಲಕ್ಕೆ ಬೆಳೆಯಬೇಕು‘ ಎಂಬುದೇ ನಮ್ಮ ಯಶಸ್ಸಿನ ಮಂತ್ರ ಎನ್ನುತ್ತಾರೆ ಚರಕ ಸಂಸ್ಥೆಯ ವ್ಯವಸ್ಥಾಪಕಿ ಡಿ.ಪದ್ಮಶ್ರೀ. ’ಉತ್ಪನ್ನಗಳಿಗೆ ನೈಸರ್ಗಿಕ ಬಣ್ಣ ಬಳಸುತ್ತಿದ್ದೇವೆ. ಇವೆಲ್ಲವೂ ಚರಕದ ವರ್ಚಸ್ಸು ಹೆಚ್ಚಿ ’ಬ್ರ್ಯಾಂಡ್‌‘ ಮೌಲ್ಯ ಸೃಷ್ಟಿಸಿವೆ. ಚರಕದಲ್ಲಿ ಸಿದ್ಧವಾದ ಉತ್ಪನ್ನಗಳನ್ನು ನಮ್ಮದೇ ’ದೇಸಿ‘ ಹೆಸರಿನ ಅಂಗಡಿಗಳಲ್ಲಿ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲ‘ ಎನ್ನುತ್ತಾರೆ. ಉಡುಪಿ ಸೀರೆಗೆ ಬಂತು ಮತ್ತೆ ಕಳೆ ಸಾಂಪ್ರದಾಯಿಕ ಕೈಮಗ್ಗಗಳಿಂದ ತಯಾರಾಗುವ ಕರಾವಳಿಯ ‘ಉಡುಪಿ ಸೀರೆ’ಗೆ ಮತ್ತೆ ಕಳೆ ಬಂದಿದೆ.

ಹಿಂದೆ ಮಾರುಕಟ್ಟೆಯ ಪೈಪೋಟಿಗೆ ಸಿಲುಕಿ ಬೇಡಿಕೆ ಕಳೆದುಕೊಂಡು ಬಣ್ಣ ಮಾಸಿದ್ದ ಉಡುಪಿ ಸೀರೆಗಳು ಈಗ ಹೊಸತನದೊಂದಿಗೆ ಮಿಂಚುತ್ತಿದ್ದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. 2018ರಲ್ಲಿ ಆರಂಭವಾದ ಕದಿಕೆ ಟ್ರಸ್ಟ್‌ ಉಡುಪಿ ಸೀರೆಗಳಿಗೆ ಪುನಶ್ಚೇತನ ನೀಡುವ ಹಾಗೂ ವಿನಾಶದ ಅಂಚಿಗೆ ತಲುಪಿರುವ ಕರಾವಳಿಯ ನೇಕಾರಿಕಾ ವೃತ್ತಿ ಉಳಿಸುವ ಕೆಲಸದಲ್ಲಿ ನಿರತವಾಗಿದೆ.  ಬೇಡಿಕೆ ಹಾಗೂ ಲಾಭವಿಲ್ಲದೆ ಅವನತಿಗೆ ಸಾಗುತ್ತಿದ್ದ ನೇಕಾರಿಕೆ ವೃತ್ತಿಯನ್ನು ಉಳಿಸಲು ಉಡುಪಿ ಸೀರೆಗಳನ್ನು ತಯಾರಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ತಾಳಿಪ್ಪಾಡಿ ನೇಕಾರರ ಸಂಘದೊಂದಿಗೆ ಕೈಜೋಡಿಸಿ ಅಲ್ಲಿನ ನೇಕಾರರು ತಯಾರಿಸಿದ ಸೀರೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿತು. ಸಾಗರದ ಹೆಗ್ಗೋಡಿನ ಚರಕ ಸಂಸ್ಥೆಯ ನೆರವಿನೊಂದಿಗೆ ಹಲವು ಮಾರಾಟ ಮೇಳಗಳನ್ನು ಆಯೋಜಿಸಿ ಉಡುಪಿ ಸೀರೆಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡಿತು.

‘ಆಕರ್ಷಕ ಲೋಗೋ ಹಾಗೂ ಸೀರೆಯ ಪ್ಯಾಕಿಂಗ್‌ ಮೇಲೆ ಉಡುಪಿ ಸೀರೆ ನೇಯ್ದ ನೇಕಾರರ ಫೋಟೊಗಳನ್ನು ಬಳಸಿದ ತಂತ್ರಗಾರಿಕೆ ಗ್ರಾಹಕರನ್ನು ಹೆಚ್ಚು ಸೆಳೆಯಿತು. ನೋಡ ನೋಡುತ್ತಿದ್ದಂತೆ ಉಡುಪಿ ಸೀರೆಗಳ ಬ್ರ್ಯಾಂಡ್‌ ಮೌಲ್ಯ ಹೆಚ್ಚಾಯಿತು. ಸೀರೆಗಳಿಗೆ ಉತ್ತಮ ಬೆಲೆಯೂ ಲಭ್ಯವಾಗಿ ನೇಕಾರರ ಆರ್ಥಿಕ ಮಟ್ಟ ಸುಧಾರಿಸಿತು. ಯುವಜನತೆಯನ್ನೂ ನೇಕಾರಿಕೆಯಲ್ಲಿ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ಸೀರೆಗಳು ಮಹಿಳೆಯರ ಜತೆಗೆ ಈಗ ಈ ಯುಗದ ಯುವತಿಯರನ್ನೂ ಸೆಳೆಯುತ್ತಿದೆ. ಸೀರೆ ತಯಾರಿಕೆಯಲ್ಲಿ ಬಳಸುವ ವಿಶಿಷ್ಟ ತಂತ್ರಗಾರಿಕೆ ಹಾಗೂ ವಿನ್ಯಾಸಕ್ಕಾಗಿ ಉಡುಪಿ ಸೀರೆಗಳಿಗೆ ಭೌಗೋಳಿಕ ಭಿನ್ನತೆ (ಜಿಐ) ಮಾನ್ಯತೆ ದೊರೆತಿದೆ.

ವಡಗಾವಿ ಸೀರೆಗಳು

ವಡಗಾವಿ ಸೀರೆಗಳು

ಇದರೊಂದಿಗೆ ಯಕ್ಷಗಾನದಲ್ಲಿ ಬಳಸುವ ಕಸೆ ಸೀರೆಯನ್ನು ಯುವತಿಯರು ಉಡಲು ಅನುಕೂಲವಾಗುವಂತೆ ಮಾರ್ಪಡಿಸಲಾಗಿದ್ದು ಉತ್ತಮ ಬೇಡಿಕೆ ವ್ಯಕ್ತವಾಗಿದೆ‘ ಎನ್ನುತ್ತಾರೆ ಮಮತಾ ರೈ. ಕಲ್ಲೂರು ರೇಷ್ಮೆ ಸೀರೆಗೆ ಬೇಡಿಕೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್‌.ಹೊಸಕೋಟೆಯಲ್ಲಿ ತಯಾರಾಗುವ ರೇಷ್ಮೆ ಸೀರೆಗಳಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಬೇಡಿಕೆ ಇದೆ. ನಾನಾ ಭಾಗದ ಜನರು ಇಲ್ಲಿಗೆ ಭೇಟಿ ನೀಡಿ ಸೀರೆ ಖರೀದಿ ಮಾಡುತ್ತಿದ್ದಾರೆ. ಆನ್‌ಲೈನ್‌ ಮೂಲಕವೂ ವ್ಯಾಪಾರ ನಡೆಯುತ್ತಿದೆ. ಜಿಲ್ಲೆಯಲ್ಲಿ 4800 ಕೈಮಗ್ಗ 5200 ವಿದ್ಯುತ್ ಮಗ್ಗಗಳು ಒಳಗೊಂಡಂತೆ ಒಟ್ಟು 10 ಸಾವಿರ ಮಗ್ಗಗಳಿವೆ. ಸುಮಾರು 600 ಕುಟುಂಬಗಳು ಇಂದಿಗೂ ಮಗ್ಗಗಳನ್ನು ನಂಬಿ ಜೀವನ ಸಾಗಿಸುತ್ತಿವೆ. ಗುಬ್ಬಿ ತಾಲ್ಲೂಕಿನ ಕಲ್ಲೂರು ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಭಾಗದಲ್ಲಿ ಕೈಮಗ್ಗ ಇನ್ನೂ ಚಾಲ್ತಿಯಲ್ಲಿವೆ. ತಿಪಟೂರು ಭಾಗದಲ್ಲಿ ವಿದ್ಯುತ್ ಮಗ್ಗಗಳಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಕೈಮಗ್ಗದಿಂದ ತಯಾರಿಸಿದ ಒಂದು ರೇಷ್ಮೆ ಸೀರೆಗೆ ₹6 ಸಾವಿರದಿಂದ ₹40 ಸಾವಿರದವರೆಗೆ ಬೆಲೆ ಇದೆ. ರೇಷ್ಮೆ ಬೆಲೆ ಆಧರಿಸಿ ಸೀರೆಗಳಿಗೆ ಬೆಲೆ ನಿಗದಿಯಾಗುತ್ತಿದೆ. ಹಬ್ಬದ ಸಮಯದಲ್ಲಿ ಮಾತ್ರ ಸೀರೆಗಳ ವ್ಯಾಪಾರ ಜೋರಾಗಿರುತ್ತದೆ. ಇತರ ದಿನಗಳಲ್ಲಿ ವ್ಯಾಪಾರವೇ ಇರುವುದಿಲ್ಲ.

ಮಗ್ಗದಾರರ ಬೇಡಿಕೆಗಳೇನು?

* ವಿದ್ಯುತ್‌ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಕೊಡಬೇಕು.

* ಶೂನ್ಯ ಬಡ್ಡಿದರದಲ್ಲಿ ಕಚ್ಚಾ ವಸ್ತುಗಳನ್ನು (ರೇಷ್ಮೆ ಪಾಲಿಸ್ಟರ್ ಹತ್ತಿ ಇತ್ಯಾದಿ) ಒದಗಿಸಬೇಕು.

* ನೇಕಾರರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ಒದಗಿಸಬೇಕು. ಈಗಾಗಲೇ ಪಡೆದಿರುವ ವೈಯಕ್ತಿಕ ಮತ್ತು ಸಂಘದ ಸಾಲ ಮನ್ನಾ ಮಾಡಬೇಕು.

* ಕಾರ್ಮಿಕರಿಗೆ ಇಎಸ್‌ಐ ರೂಪದಲ್ಲಿ ಆರೋಗ್ಯ ಸೇವೆ ನೀಡಬೇಕು.

* ನೇಕಾರರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು.

ಮಗ್ಗಗಳ ಉತ್ತೇಜನಕ್ಕೆ ಸರ್ಕಾರದ ಸೌಲಭ್ಯಗಳು

* ₹2 ಲಕ್ಷವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ * ಪವರ್ ಲೂಮ್‌ನವರು ₹35 ಲಕ್ಷ ಸಾಲ ತೆಗೆದುಕೊಳ್ಳಬಹುದು

* ಸಾಮಾನ್ಯ ವರ್ಗದವರಿಗೆ ಶೇ 50 ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ90ರಷ್ಟು ಸಬ್ಸಿಡಿ

* ಮುದ್ರಾ ಯೋಜನೆಯಡಿ ₹50 ಸಾವಿರ ಸಾಲವನ್ನು 191 ಜನ ಕೈಮಗ್ಗ ನೇಕಾರರು ಪಡೆದುಕೊಂಡಿದ್ದಾರೆ.

* ನೇಕಾರರ ಸಮ್ಮಾನ ಯೋಜನೆಯಡಿ 13 ಸಾವಿರ ಕೈಮಗ್ಗ ಪವರ್‌ ಲೂಮ್‌ 18 ಸಾವಿರ ಜನರಿಗೆ ತಲಾ ₹5 ಸಾವಿರವನ್ನು ಸರ್ಕಾರ ನೀಡಿದೆ

(ಪೂರಕ ಮಾಹಿತಿ: ಬಸವವರಾಜ ಹವಲ್ದಾರ್‌, ಬಿ.ಜೆ.ಧನ್ಯಪ್ರಸಾದ್‌, ಕೆ.ಎಂ. ಸತೀಶ ಬೆಳ್ಳಕ್ಕಿ, ಸಂತೋಷ ಈ. ಚಿನಗುಡಿ, ಡಿ.ಬಿ.ನಾಗರಾಜ್,  ಜಿ.ಎಚ್.ವೆಂಕಟೇಶ್, ಓದೇಶ ಸಕಲೇಶಪುರ, ಎಚ್. ಬಾಲಚಂದ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT