ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಜೀವಕ್ಕೆ ಎರವಾಗುತ್ತಿದೆ ಜೀವಜಲ: ಓದುಗರ ಪ್ರತಿಕ್ರಿಯೆಗಳು

‘ಪ್ರಜಾವಾಣಿ’ಯಲ್ಲಿ ಭಾನುವಾರ (ಜುಲೈ 3) ‍ಪ್ರಕಟವಾದ ‘ಒಳನೋಟ’
Last Updated 3 ಜುಲೈ 2022, 12:38 IST
ಅಕ್ಷರ ಗಾತ್ರ

ಬೆಂಗಳೂರು: ‘ಜೀವಕ್ಕೆ ಎರವಾಗುತ್ತಿದೆ ಜೀವಜಲ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಜುಲೈ 3) ‍ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ‍್ರತಿಕ್ರಿಯೆಗಳು ಇಲ್ಲಿವೆ.

‘ನಂಬಿದ ಜಲವಾಯ್ತು ನಂಜು’

‘ಮನೆ ಮನೆಗೂ ಗಂಗೆ’ ಈ ಘೋಷಣೆ ಸರ್ಕಾರದ ಒಂದು ಪ್ರತಿಷ್ಠಿತ ಕಾರ್ಯಕ್ರಮ. ಆದರೆ ಶುದ್ಧ ಗಂಗೋದಕವನ್ನು ಮನೆಗಳಿಗೆ ಹರಿಸುವಲ್ಲಿ ನಿಷ್ಠೆ, ತಾತ್ಪರತೆ ಗಾಳಿಗೆ ತೂರಲಾಗಿದೆ. ಇಂದಿನ ರಾಜಕೀಯ ಕುರ್ಚಿಗಳ ಕಿತ್ತಾಟ, ತೊಳಲಾಟದಲ್ಲಿ ಉದ್ದೇಶವನ್ನೇ ಮರೆತು ಬಿಟ್ಟಿರಬೇಕು. ಸಾರ್ವಜನಿಕರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಿದ್ದರೆ ರಾಯಚೂರಿನ ಕೆಲ ದುರ್ದೈವಿಗಳು ಇನ್ನೂ ಬಾಳಿ ಬದುಕುತ್ತಿದ್ದರು.

ಕೆಲ ನಗರ, ಗ್ರಾಮಗಳಲ್ಲಿ ಎತ್ತರದ ನೀರಿನ ಮಳಿಗೆಗಳನ್ನು ಕಟ್ಟಿ ಗುರುತ್ವಾಕರ್ಷಣೆಯಿಂದ ನೀರನ್ನು ಮನೆ, ಮನೆಗೆ ತಲುಪಿಸುತ್ತಾರೆ. ಬೆಂಗಳೂರಿನಲ್ಲಿ ನೆಲಮಟ್ಟದ ದಾಸ್ತಾನು ಮಳಿಗೆಗಳಿಂದ ಪಂಪ್ ಮಾಡಿ ನೀರನ್ನು ಹರಿಸುತ್ತಾರೆ.

ಮುಚ್ಚದ ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ‌ಪಕ್ಷಿಗಳು, ಬಾವಲಿ, ಹೆಗ್ಗಣಗಳು ನೀರಿಗೆ ಬಿದ್ದು ಸಾಯುವುದು ಅಪರೂಪವೇನಲ್ಲ. ನೆಲಮಟ್ಟದ ಸಂಪು, ನೀರಿನ ಮಳಿಗೆಗಳಿಗೆ ಇಲಿ–ಹೆಗ್ಗಣವೇ ಅಲ್ಲ ಸತ್ತ ಬೆಕ್ಕು ನಾಯಿಗಳನ್ನು ತಂದು ಬಿಸಾಡುವ ನೀಚರಿದ್ದಾರೆ. ಹೆಣ ತೇಲಿದರೂ ತೇಲಬಹುದು. ಐದು ವರ್ಷಕ್ಕೊಮ್ಮೆಯಾದರೂ ಪರಿಶೀಲಿಸಿ ಶುಭ್ರಗೊಳಿಸದ ಬೇಜವಬ್ದಾರಿಯೇ ಈ ‌ಅನಾಹುತಕ್ಕೆ ಕಾರಣ. ಇಂದು ರಾಯಚೂರು, ನಾಳೆ ಬೆಂಗಳೂರು, ನಾಡಿದ್ದು ಮತ್ತೂಂದು ಊರು.

– ಟಿ.ಎಂ. ಶಿವಶಂಕರ್, ನಿವೃತ್ತ ಹಿರಿಯ ಜಲವಿಜ್ಞಾನಿ

***

'ಒಮ್ಮೆ ಹೋದ ಜೀವ ಮತ್ತೆ ಬಂದೀತೆ ?'

ಮನುಷ್ಯನಿಗೆ ಅತ್ಯವಶ್ಯಕವಾಗಿ ಬೇಕಾಗಿರುವುದು ನೀರು, ಆಹಾರ, ಬಟ್ಟೆ. ನೀರು ನೈಸರ್ಗಿಕವಾಗಿ ಸಿಗುವ ಜೀವಜಲ. ಅದನ್ನು ರಕ್ಷಿಸಿ ಸಮರ್ಪಕವಾಗಿ ಬಳಸಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಜನಗಳಿಗೆ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸುವ ಜವಾಬ್ದಾರಿ ಸರ್ಕಾರದ್ದು. ಕಾಲಕಾಲಕ್ಕೆ ಟ್ಯಾಂಕ್‌ಗಳ ಸ್ವಚ್ಛತೆ, ಪೈಪುಗಳಲ್ಲಿನ ಸೋರಿಕೆಯನ್ನು ಗಮನಿಸಿ ಜನರ ಜೀವವನ್ನು ಉಳಿಸಬೇಕು. ಅನಾಹುತ ಆದ ಮೇಲೆ ಗಮನಹರಿಸುವುದು ಹಾಸ್ಯಾಸ್ಪದ. ಒಮ್ಮೆ ಹೋದ ಜೀವ ಮತ್ತೆ ಬಂದೀತೆ ?.

- ಎಚ್. ತುಕಾರಾಂ, ಮಲ್ಲತ್ತಹಳ್ಳಿ, ಬೆಂಗಳೂರು

****

'ದೊಡ್ಡ ಅಪಾಯದ ಮನ್ಸೂಚನೆ ಇದ್ದಂತೆ'

ಪ್ರಸ್ತುತ ರಾಜ್ಯದ ಹಲವೆಡೆ ಕುಡಿಯುವ ನೀರಿನಲ್ಲಿ ಕಲುಷಿತ ರಾಸಾಯನಿಕ ಮಿಶ್ರಣದಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ರಾಜ್ಯದ ಕುಡಿಯುವ ಜೀವಜಲ ಮಾರಕವಾಗುತ್ತಿರುವುದು ದೊಡ್ಡ ಅಪಾಯದ ಮನ್ಸೂಚನೆ ಇದ್ದಂತೆ. ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯ ಜೊತೆಗೆ ಅವುಗಳ ಸಮರ್ಪಕ ನಿರ್ವಹಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.

– ಬೀರಪ್ಪ ಡಂಬಳಿ, ಬೆಳಗಾವಿ

****

‘ಶುದ್ಧ ಜಲದ ಸರಬರಾಜಿಗೆ ನಿಷ್ಠೆಯಿಂದ ಪ್ರಯತ್ನಿಸಿ’

ಜೀವಕ್ಕೆ ನೆರವಾಗಬೇಕಾದ ಜಲ ಕೆಲವರ ಕರ್ತವ್ಯ ಲೋಪದಿಂದಾಗಿ ಎರವಾಗುತ್ತಿರುವುದು ವಿಪರ್ಯಾಸ. ಪ್ರಚಾರಕ್ಕಾಗಿ ಸಮಾಜ ಸೇವೆ ಮಾಡುವುದೇ ಕೆಲವರ ಹವ್ಯಾಸವಾಗಿದೆ. ತಮ್ಮ ಕಾರ್ಯದಲ್ಲಿನ ನಿಷ್ಠೆಯೇ ನಿಜವಾದ ಸಮಾಜ ಸೇವೆ. ಶುದ್ಧಜಲದ ಸರಬರಾಜಿಗೆ ಸಂಬಂಧಿಸಿದವರು ನಿಷ್ಠೆ–ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಸಮಾಜಕ್ಕೆ ನೀಡುವ ಮಹತ್ತರ ಸೇವೆಯಂತೆ. ಸಾರ್ವಜನಿಕರ ತೆರಿಗೆಯಿಂದ ಪಡೆಯುವ ಹಣಕ್ಕೆ ಮನಸ್ಸಾಕ್ಷಿ ಒಪ್ಪುವ ನಿಷ್ಠೆ ಅಗತ್ಯ. ಸೀಮಿತ ಕೆಲಸ, ಜವಾಬ್ದಾರಿಯಿಂದ ನುಣುಚಿಕೊಳ್ಳುವುದನ್ನು ಬಿಟ್ಟು ಮುಂದಾಲೋಚನೆಯ ಶಾಶ್ವತ ಗುಣಮಟ್ಟದ ಕಾರ್ಯನಿರ್ವಹಣೆಯೇ ಎಲ್ಲದಕ್ಕೂ ಪರಿಹಾರವಾಗಬಲ್ಲದು.

– ಕೆ.ಎಂ. ನಾಗರಾಜು, ವಿಜಯನಗರ 1ನೇ ಹಂತ, ಮೈಸೂರು

****

‘ಗ್ರಾ.ಪಂ ಮಟ್ಟದಿಂದಲೇ ಶುದ್ಧ ಕುಡಿಯುವ ನೀರು ದೊರೆಯಲಿ’

ನೀರು ನಮ್ಮ ಶರೀರದ ಜೀವಕೋಶಗಳಲ್ಲಿ ಇರುವ ತ್ಯಾಜ್ಯಗಳನ್ನು ತೊಳೆದು ಹಾಕುತ್ತದೆ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹದ ತಾಪಮಾನವನ್ನು ಕಾಪಾಡುತ್ತದೆ. ನೀರು ಮೂತ್ರಪಿಂಡದಲ್ಲಿ ಕಲ್ಲಾಗಾದಂತೆ ಮತ್ತು ಮಲಬದ್ಧತೆ ಆಗದಂತೆ ತಡೆಯುತ್ತದೆ. ಆದರೆ ಇದೇ ನೀರಿಗೆ ತ್ಯಾಜ್ಯ ಸೇರಿಕೊಂಡರೇ ಹೇಗಾಗಬೇಡ. ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ನೀರು ಕೊಳೆ ಮಿಶ್ರಿತವಾಗಿದೆ.

ಕಲ್ಯಾಣ ಕರ್ನಾಟಕದ ಭಾಗದಲ್ಲಂತೂ ಫ್ಲೋರೈಡ್ ನೀರು ಒಂದೆಡೆಯಾದರೆ, ಇನ್ನೊಂದೆಡೆ ಕೊಳಕು ನೀರು. ಇಂತಹ ನೀರು ಕುಡಿಯುತ್ತಿರುವ ಕಾರಣ, ಜನರ ಮೂಳೆಗಳು ಸವೆಯುತ್ತಿವೆ. 30 ವರ್ಷ ಆಗುವಷ್ಟರಲ್ಲಿ ಮುಪ್ಪಿನಂತಾಗುತ್ತಾರೆ. ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುತ್ತಿವೆ.

ಗ್ರಾ.ಪಂ ಮಟ್ಟದಿಂದಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕಿದೆ. ಅದಕ್ಕಾಗಿ ಸರ್ಕಾರ ಸೂಕ್ತ ಯೋಜನೆ ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಿದೆ. ಆರೋಗ್ಯವನ್ನು ಸದೃಢವಾಗಿ ಇಡಬಲ್ಲ ನೀರು ನಮ್ಮ ಜೀವದ ಉಸಿರು ಎಂಬುದನ್ನು ಆಳುವ ಸರ್ಕಾರ ಮರೆಯಬಾರದು.

– ಗುರುರಾಜ ದೇಸಾಯಿ, ತಲ್ಲೂರು, ಯಲಬುರ್ಗಾ, ಕೊಪ್ಪಳ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT