ಬುಧವಾರ, ಜೂನ್ 16, 2021
22 °C
ಪೋಸ್ಟ್‌, ಖಾತೆ ಸ್ಥಗಿತ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇ?

ಆಳ–ಅಗಲ: ಸಾಮಾಜಿಕ ಮಾಧ್ಯಮದ ಕಣ್ಣಾಮುಚ್ಚಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ವರ್ಷದ ಫೆಬ್ರುವರಿ ತಿಂಗಳ ಮೊದಲ ದಿನ, ಟ್ವಿಟರ್‌ ಸಂಸ್ಥೆಯು ಸುಮಾರು 250 ಖಾತೆಗಳನ್ನು ದಿಢೀರ್‌ ಸ್ಥಗಿತಗೊಳಿಸಿತು. ಈ ಖಾತೆಗಳೆಲ್ಲವೂ ರೈತ ಹೋರಾಟದಲ್ಲಿ ತೊಡಗಿದ್ದವರು ಮತ್ತು ಹೋರಾಟಕ್ಕೆ ಬೆಂಬಲ ನೀಡಿದ ಸಂಸ್ಥೆಗಳದ್ದಾಗಿದ್ದವು. ಸರ್ಕಾರದ ಸೂಚನೆಯ ಮೇರೆಗೆ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಪುಕಾರು ಎದ್ದಿತು. ಒಂದೆರಡು ಗಂಟೆಗಳಲ್ಲಿ ಎಲ್ಲಾ ಖಾತೆಗಳು ಪುನಃ ತೆರೆದುಕೊಂಡವು.

ಈ ಘಟನೆ ಜಾಗತಿಕ ಮಟ್ಟದಲ್ಲಿ ಗಮನಸೆಳೆಯಿತು. ‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ’ ಎಂಬ ಆರೋಪಗಳೆದ್ದವು. ಆದರೆ, ಇದು ಅಂಥ ಮೊದಲ ಅಥವಾ ಕೊನೆಯ ಘಟನೆಯೇನಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳ ಬಗ್ಗೆ ಸರ್ಕಾರ ಹಾಗೂ ಫೇಸ್‌ಬುಕ್‌, ಟ್ವಿಟರ್‌ನಂಥ ಸೇವಾ ಸಂಸ್ಥೆಗಳ ನಡುವೆ ತೀವ್ರ ಜಟಾಪಟಿ ನಡೆದ ಉದಾಹರಣೆಗಳಿವೆ. ಇಂಥ ಜಟಾಪಟಿ ಭಾರತಕ್ಕೆ ಮಾತ್ರ ಸೀಮಿತವಲ್ಲ ಎಂಬುದೂ ಅಷ್ಟೇ ಸತ್ಯ.

ಫೆಬ್ರುವರಿಯಲ್ಲಿ ಸ್ಥಗಿತಗೊಂಡವುಗಳಲ್ಲಿ ಹೋರಾಟಗಾರ್ತಿ ಹಂಸರಾಜ್‌ ಮೀನಾ, ರಾಜಕೀಯ ಟೀಕಾಕಾರ ಸಂಜುಕ್ತಾ ಬಸು, ಸಿಪಿಎಂ ನಾಯಕ ಮಹಮ್ಮದ್‌ ಸಲೀಂ, ಹೋರಾಟಕ್ಕೆ ಬೆಂಬಲ ನೀಡುವ ಕಿಸಾನ್‌ ಏಕತಾ ಮೋರ್ಚಾ, ಟ್ರ್ಯಾಕ್ಟರ್‌2ಟ್ವಿಟರ್‌ ಸಂಸ್ಥೆಗಳ ಖಾತೆಗಳೂ ಸೇರಿದ್ದವು. ‘ಆಕ್ಷೇಪಾರ್ಹ ಟ್ವೀಟ್‌ ಅನ್ನು ಮಾತ್ರ ತೆಗೆಯುವ ಬದಲು ಖಾತೆಯನ್ನೇ ಸ್ಥಗಿತಗೊಳಿಸಿದ್ದು ಆತಂಕದ ವಿಚಾರ’ ಎಂದು ಹೋರಾಟಗಾರರು ಹೇಳಿದ್ದರು.

ದ್ವೇಷ ಸಂದೇಶ ಪ್ರಸರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಫೇಸ್‌ಬುಕ್‌ ಸಂಸ್ಥೆಯ ಮಧ್ಯೆ ಇತ್ತೀಚೆಗೆ ಜಟಾಪಟಿ ನಡೆದಿತ್ತು. ಈ ವಿಚಾರವಾಗಿ ಭಾರತದಲ್ಲಿ ಫೇಸ್‌ಬುಕ್‌ ಭಾರಿ ಟೀಕೆಗೂ ಒಳಗಾಗಿದೆ. ಮ್ಯಾನ್ಮಾರ್‌ನಲ್ಲಿ ದ್ವೇಷ ಸಂದೇಶಗಳ ವಿರುದ್ಧ ಸಂಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿಂದೆ ಆರೋಪಿಸಲಾಗಿತ್ತು. ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲೂ ಈ ಸಂಸ್ಥೆಯು ದ್ವೇಷ ಸಂದೇಶಗಳ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಈಚೆಗೆ ಅಂಥದ್ದೇ ಇನ್ನೊಂದು ಘಟನೆ ನಡೆದಿದೆ. ಕೋವಿಡ್‌–19 ಪಿಡುಗು ನಿರ್ವಹಣೆಯ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದ 100ಕ್ಕೂ ಹೆಚ್ಚು ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಟ್ವಿಟರ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸಂಸ್ಥೆಗೆ ಸೂಚನೆ ನೀಡಿದೆ. ಇದರ ವಿರುದ್ಧವೂ ವ್ಯಾಪಕ ಟೀಕೆಗಳು ಎದ್ದಿವೆ.

‘ಕೊರೊನಾಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವ, ಶವಗಳ ಚಿತ್ರಗಳನ್ನು ಹಾಕಿ ಜನರಲ್ಲಿ ಆತಂಕ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಖಾತೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಈ ಖಾತೆಗಳು ಭಾರತದಲ್ಲಷ್ಟೇ ಸ್ಥಗಿತಗೊಂಡಿವೆ’ ಎಂದು ಟ್ವಿಟರ್‌ ಸಂಸ್ಥೆ ಹೇಳಿದೆ.

‘ಟೀಕೆಗಳನ್ನು ನಾವು ಗೌರವಿಸುತ್ತೇವೆ. ಪ್ರಧಾನಿಯನ್ನು ಬೇಕಿದ್ದರೂ ನೀವು ಟೀಕಿಸಿಬಹುದು. ಆದರೆ ದ್ವೇಷ ಹಬ್ಬಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಈಚೆಗೆ ಸಂಸತ್ತಿನಲ್ಲಿ ಹೇಳಿದ್ದರು. ‘ಅಮೆರಿಕದ ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿ ನಡೆಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಾಗ ಸರ್ಕಾರದ ಬೆಂಬಲಕ್ಕೆ ನಿಂತಿದ್ದ ಟ್ವಿಟರ್‌ ಸಂಸ್ಥೆಯು ಭಾರತದ ಕೆಂಪುಕೋಟೆಯಲ್ಲಿ ರೈತ ಹೋರಾಟಗಾರರು ದಾಂದಲೆ ನಡೆಸಿದಾಗ ಸರ್ಕಾರದ ವಿರುದ್ಧ ನಿಂತಿದ್ದೇಕೆ’ ಎಂದು ಅವರು ಪ್ರಶ್ನಿಸಿದ್ದರು.

ಸರ್ಕಾರದ ಕೈಯಲ್ಲಿ ಮೂಗುದಾರ
17ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್‌ಗೆ ಏಪ್ರಿಲ್ ಕೊನೆಯ ವಾರದಲ್ಲಿ ಸೂಚನೆ ನೀಡಿತ್ತು. ಈ ಪ್ರಕಾರ ಆ ಟ್ವೀಟ್‌ಗಳನ್ನು ಟ್ವಿಟರ್ ಅಳಿಸಿತ್ತು. ‘ಸುಳ್ಳು ಸುದ್ದಿಗಳನ್ನು ಹಂಚಿಕೊಂಡ ಕಾರಣಕ್ಕೆ ಈ ಟ್ವೀಟ್‌ಗಳನ್ನು ಅಳಿಸಲು ಸೂಚನೆ ನೀಡಿದ್ದೆವು’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ವಿವರಣೆ ನೀಡಿತ್ತು. ಟ್ವಿಟರ್ ಸಹ ಇದನ್ನು ದೃಢಪಡಿಸಿತ್ತು.

ದೇಶದಲ್ಲಿ ಕೋವಿಡ್‌-19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರೂ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮುಂದುವರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿ #resignpm ಹ್ಯಾಷ್‌ಟ್ಯಾಗ್‌ನಲ್ಲಿ ಮಾಡಲಾಗಿದ್ದ ಟ್ವೀಟ್‌ಗಳು ಸ್ಥಗಿತವಾಗಿದ್ದವು. ಈ ಹ್ಯಾಷ್‌ಟ್ಯಾಗ್‌ನಲ್ಲಿದ್ದ ಟ್ವೀಟ್‌ಗಳನ್ನು ಸ್ಥಗಿತಗೊಳಿಸಲು ಸಚಿವಾಲಯವು ಸೂಚನೆ ನೀಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಟ್ವೀಟ್‌ಗಳನ್ನು ಮಾಡಿದ್ದವರು ಸಹ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಟ್ವೀಟ್‌ಗಳು ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳನ್ನು ಸ್ಥಗಿತಗೊಳಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಸೂಚನೆ ನೀಡುವ ಅಧಿಕಾರ ಭಾರತ ಸರ್ಕಾರಕ್ಕೆ ಇದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ 69 ಎ ಸೆಕ್ಷನ್‌, ಕೇಂದ್ರ ಸರ್ಕಾರಕ್ಕೆ ಈ ಅಧಿಕಾರವನ್ನು ಕೊಡುತ್ತದೆ. ಈ ಸೆಕ್ಷನ್ ಅಡಿ ಕೇಂದ್ರ ಸರ್ಕಾರ ನೀಡುವ ಸೂಚನೆಯನ್ನು ಸಾಮಾಜಿಕ ಜಾಲತಾಣಗಳು ಕಡ್ಡಾಯವಾಗಿ ಪಾಲಿಸಲೇಬೇಕು. ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದ ರೈತರ ಟ್ವೀಟ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರವು ಇದೇ ಸೆಕ್ಷನ್ ಅಡಿ ಸೂಚನೆ ನೀಡಿತ್ತು.


ಟ್ವೀಟ್ ಅನ್ನು ರಿಪೋರ್ಟ್ ಮಾಡುವ ವೇಳೆ ಈ ಮೇಲಿನ ಕಾರಣಗಳನ್ನು ಆಯ್ಕೆ ಮಾಡಿದರೆ, ಆ ಟ್ವೀಟ್ ತ್ವರಿತವಾಗಿ ಸ್ಥಗಿತವಾಗುತ್ತದೆ. ಫೇಸ್‌ಬುಕ್‌ನಲ್ಲಿ ಕೂಡ ಪೋಸ್ಟ್‌ಗಳನ್ನು ರಿಪೋರ್ಟ್ ಮಾಡುವಾಗ ಇಂತಹದ್ದೇ ಆಯ್ಕೆಗಳು ದೊರೆಯುತ್ತವೆ.

ದುರ್ಬಳಕೆ ಸಾಧ್ಯವಿರುವ ‘ರಿಪೋರ್ಟ್’ ಅವಕಾಶ
ಏಪ್ರಿಲ್ ಕೊನೆಯ ವಾರದಲ್ಲಿ #resignpm ಹ್ಯಾಷ್‌ಟ್ಯಾಗ್‌ನಲ್ಲಿ ಪೋಸ್ಟ್‌ ಮಾಡಿದ್ದ ಹಲವರ ಫೇಸ್‌ಬುಕ್‌ ಪೋಸ್ಟ್‌ಗಳು ಸ್ಥಗಿತವಾಗಿದ್ದವು. ದೇಶದಾದ್ಯಂತ ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರವು, ‘ಈ ಪೋಸ್ಟ್‌ಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿತ್ತು. ‘ಈ ಸಂಬಂಧ ಭಾರತ ಸರ್ಕಾರದಿಂದ ಯಾವುದೇ ಸೂಚನೆ ಅಥವಾ ಆದೇಶ ಬಂದಿಲ್ಲ. ನಮ್ಮದೇ ಸ್ವಯಂಚಾಲಿತ ವ್ಯವಸ್ಥೆ ಈ ಪೋಸ್ಟ್‌ಗಳನ್ನು ಸ್ಥಗಿತಗೊಳಿಸಿದೆ. ತಾಂತ್ರಿಕ ಕಾರಣದಿಂದ ಮತ್ತು ತಪ್ಪಿನಿಂದ ಹೀಗಾಗಿದೆ. ಇದನ್ನು ಸರಿಪಡಿಸಿದ್ದೇವೆ’ ಎಂದು ಫೇಸ್‌ಬುಕ್ ಸಹ ಸ್ಪಷ್ಟನೆ ನೀಡಿತ್ತು. ಈ ಪೋಸ್ಟ್‌ಗಳ ಸ್ಥಗಿತವನ್ನು ರದ್ದು ಮಾಡಿತ್ತು. 

ಒಬ್ಬರು ಮಾಡಿದ ಟ್ವೀಟ್‌ ಮತ್ತು ಫೇಸ್‌ಬುಕ್ ಪೋಸ್ಟ್‌ ಬಗ್ಗೆ ಬೇರೊಬ್ಬ ಬಳಕೆದಾರರು ‘ಅದು ಆಕ್ಷೇಪಾರ್ಹ’ ಎಂದು ಪ್ರತಿಕ್ರಿಯೆ ನೀಡುವ (ರಿಪೋರ್ಟ್‌) ವ್ಯವಸ್ಥೆ ಇದೆ. ಈ ಟ್ವೀಟ್‌ ಅಥವಾ ಪೋಸ್ಟ್‌ ಸರಿ ಇಲ್ಲ, ಇದರಲ್ಲಿರುವ ಮಾಹಿತಿ ಸರಿ ಇಲ್ಲ ಅಥವಾ ಸುಳ್ಳು ಸುದ್ದಿ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತದೆ ಅಥವಾ ದ್ವೇಷನ್ನು ಹರಡುತ್ತದೆ ಎಂದು ರಿಪೋರ್ಟ್‌ ಕೊಡಬಹುದು.

ಇಂತಹ ರಿಪೋರ್ಟ್‌ಗಳನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನ ತಂಡಗಳು ಪರಿಶೀಲಿಸುತ್ತವೆ. ಬಹುತೇಕ ಸಂದರ್ಭದಲ್ಲಿ ಸ್ವಯಂಚಾಲಿತ ತಂತ್ರಾಂಶವು ಈ ಪರಿಶೀಲನಾ ಕಾರ್ಯ ನಡೆಸುತ್ತದೆ. ಹೀಗೆ ಒಂದೇ ಟ್ವೀಟ್ ಅಥವಾ ಪೋಸ್ಟ್‌ಗೆ ಸಂಬಂಧಿಸಿ ಹಲವು ರಿಪೋರ್ಟ್‌ಗಳು ಸಲ್ಲಿಕೆಯಾದರೆ, ಆ ಟ್ವೀಟ್‌ ಅಥವಾ ಪೋಸ್ಟ್‌ ಸ್ವಯಂಚಾಲಿತವಾಗಿ ಸ್ಥಗಿತವಾಗುತ್ತದೆ. ಪೋಸ್ಟ್ ಅಥವಾ ಖಾತೆಗಳನ್ನು ಸ್ಥಗಿತಗೊಳಿಸಲು ಸಾವಿರಾರು ಬಾರಿ ರಿಪೋರ್ಟ್‌ ಸಲ್ಲಿಸಬೇಕಿಲ್ಲ. ಏಕಕಾಲದಲ್ಲಿ ಐದಾರು ಜನ ರಿಪೋರ್ಟ್‌ ಸಲ್ಲಿಸಿದರೂ ಸಾಮಾಜಿಕ ಜಾಲತಾಣಗಳು ಈ ಕ್ರಮ ತೆಗೆದುಕೊಳ್ಳುತ್ತವೆ.

ಗಣ್ಯರು ಮತ್ತು ಪರಿಶೀಲಿಸಿದ ಖಾತೆ (ವೆರಿಫೈಡ್‌ ಅಕೌಂಟ್‌) ಹೊಂದಿರುವವರು ಒಮ್ಮೆ ಮಾತ್ರ ಹೀಗೆ ರಿಪೋರ್ಟ್‌ ನೀಡಿದರೂ, ಸಂಬಂಧಿತ ಪೋಸ್ಟ್/ಟ್ವೀಟ್ ಅಥವಾ ಖಾತೆಗಳು ಸ್ಥಗಿತವಾಗುತ್ತವೆ. ಹೀಗೆ ರಿಪೋರ್ಟ್‌ ಮಾಡುವವರು ಯಾರು ಎಂಬುದನ್ನು ಟ್ವಿಟರ್ ಆಗಲಿ, ಫೇಸ್‌ಬುಕ್ ಆಗಲೀ ಬಹಿರಂಗಪಡಿಸುವುದಿಲ್ಲ. ಹೀಗಾಗಿ ರಿಪೋರ್ಟ್‌ ಸಲ್ಲಿಸಿದವರು ಯಾರು ಎಂಬುದು ಗೊತ್ತಾಗುವುದಿಲ್ಲ. ‘ಆಕ್ಷೇಪಾರ್ಹ’ ಎನ್ನಲಾದ ಟ್ವೀಟ್‌/ಪೋಸ್ಟ್‌/ಖಾತೆಗಳು ಸ್ಥಗಿತವಾಗುತ್ತವೆ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ ಟ್ವೀಟ್‌ ಅಥವಾ ಪೋಸ್ಟ್‌ ಅಥವಾ ಖಾತೆಗಳೇ ಭಾರತದಲ್ಲಿ ಇಂತಹ ರಿಪೋರ್ಟ್‌ ಕಾರಣಕ್ಕೆ ಹೆಚ್ಚು ಸ್ಥಗಿತವಾಗಿವೆ ಎಂದು ಹೇಳಲಾಗುತ್ತಿದೆ. 

ಮಲಯಾಳ ಕವಿ ಸಚ್ಚಿದಾನಂದನ್ ಅವರು ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ವಿರೋಧಿಸಿ ಪೋಸ್ಟ್‌ ಮಾಡಿದ್ದ ವಿಡಿಯೊವನ್ನು ಫೇಸ್‌ಬುಕ್ ಭಾನುವಾರ ಸ್ಥಗಿತಗೊಳಿಸಿತ್ತು. ಈ ಬಗ್ಗೆ ಸಚ್ಚಿದಾನಂದನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರವು, ‘ಸಚ್ಚಿದಾನಂದನ್ ಅವರ ಪೋಸ್ಟ್‌ ಅನ್ನು ಸ್ಥಗಿತಗೊಳಿಸುವಂತೆ ನಾವು ಸೂಚನೆ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿತ್ತು.

‘ಸಚ್ಚಿದಾನಂದನ್ ಅವರ ಪೋಸ್ಟ್ ಅಪಾಯಕಾರಿ ಎಂದು ಯಾರೋ ರಿಪೋರ್ಟ್‌ ಸಲ್ಲಿಸಿದ್ದಾರೆ. ಹೀಗಾಗಿ ಅವರ ಪೋಸ್ಟ್‌ ಸ್ಥಗಿತವಾಗಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಬಿಜೆಪಿ ಐಟಿ ವಿಭಾಗವೇ ಈ ಕೆಲಸ ಮಾಡುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಯಂ ಪ್ರೇರಿತ ಸ್ಥಗಿತ
ಸರ್ಕಾರದ ಆದೇಶ ಇಲ್ಲದೇ ಇದ್ದರೂ ಟ್ವೀಟ್‌ಗಳು, ಪೋಸ್ಟ್‌ಗಳು ಮತ್ತು ಖಾತೆಗಳನ್ನು ಸ್ಥಗಿತಗೊಳಿಸಲು ಟ್ವಿಟರ್ ಮತ್ತು ಫೇಸ್‌ಬುಕ್‌ಗಳು ತಮ್ಮದೇ ವ್ಯವಸ್ಥೆಯನ್ನು ಹೊಂದಿವೆ. ದ್ವೇಷವನ್ನು ಹರಡುವ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಲಾಗುವುದು ಎಂದು ಟ್ವಿಟರ್ ಮತ್ತು ಫೇಸ್‌ಬುಕ್‌ ಘೋಷಿಸಿಕೊಂಡಿವೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಸಿದವರ ಮೇಲೆ ಗೋದ್ರಾ ದಾಳಿಯಂತಹ ದಾಳಿ ನಡೆಸಬೇಕು ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಖಾತೆಯನ್ನು ಟ್ವಿಟರ್ ಶಾಶ್ವತವಾಗಿ ಸ್ಥಗಿತಗೊಳಿಸಿದೆ. ‘ಕೋವಿಡ್‌ ಒಂದು ಸಣ್ಣ ಜ್ವರವಷ್ಟೆ’ ಎಂದು ಕಂಗನಾ ಅವರು ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್‌ ಮಾಡಿದ್ದರು. ಈ ವಿಡಿಯೊವನ್ನು ಇನ್‌ಸ್ಟಾಗ್ರಾಂ ಸ್ಥಗಿತಗೊಳಿಸಿದೆ.

ಆಧಾರ: ಪಿಟಿಐ, ಫೇಸ್‌ಬುಕ್‌ ಸಮುದಾಯ ಮಾನದಂಡಗಳು, ಟ್ವಿಟರ್ ಸೇಫ್ಟಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು