ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಹಲವು ವಿಶೇಷಗಳ ಗಣರಾಜ್ಯೋತ್ಸವ

Last Updated 26 ಜನವರಿ 2022, 19:31 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಡೆದಿರುವ 73ನೇ ಗಣರಾಜ್ಯೋತ್ಸವದ ಆಚರಣೆಯು ಹಲವು ವಿಶೇಷಗಳು ಮತ್ತು ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಕೋವಿಡ್‌ ಮಧ್ಯೆ ಕಡಿಮೆ ಮಂದಿ ಭಾಗಿಯಾಗಿದ್ದ ಈ ವರ್ಷದ ಆಚರಣೆಯು ಗಮನ ಸೆಳೆದಿದೆ

ಸ್ತಬ್ಧಚಿತ್ರಗಳ ಮೆರುಗು

ಈ ಬಾರಿಯ ಗಣರಾಜ್ಯೋತ್ಸವದಲ್ಲಿ 21 ಸ್ತಬ್ಧಚಿತ್ರಗಳು (ಟ್ಯಾಬ್ಲೊ) ಗಮನ ಸೆಳೆದವು. 12 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಹಾಗೂನಾಗರಿಕ ವಿಮಾನಯಾನ, ಕಾನೂನು ಮತ್ತು ನ್ಯಾಯ, ಜಲಶಕ್ತಿ, ಜವಳಿ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಸ್ತಬ್ಧಚಿತ್ರಗಳು ಪಥಸಂಚಲನ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.

ಕೇಂದ್ರದ ಲೋಕೋಪಯೋಗಿ ಇಲಾಖೆಯು ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮದಿನವನ್ನು ಇಟ್ಟುಕೊಂಡು ರೂಪಿಸಿದ್ದ ಸ್ತಬ್ಧಚಿತ್ರವು ಕಣ್ಮನ ಸೆಳೆಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯವು ಅರಬಿಂದೋ ಅವರ 150ನೇ ವರ್ಷವನ್ನು ಸ್ತಬ್ಧಚಿತ್ರದ ಮೂಲಕ ಸ್ಮರಿಸಿತು. ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಳಗೊಂಡ ವಿಷಯವನ್ನು ಸ್ತಬ್ಧಚಿತ್ರದ ಮೂಲಕ ಅನಾವರಣಗೊಳಿಸಿತು.ರಫೇಲ್‌ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್‌ ವಾಯುಪಡೆಯ ಸ್ತಬ್ಧಚಿತ್ರದಲ್ಲಿ ಭಾಗಿಯಾಗಿದ್ದರು.

ಕರ್ನಾಟಕದ ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ನೆನಪಿಸುವ ಟ್ಯಾಬ್ಲೊ ಈ ಬಾರಿಯ ವಿಶೇಷತೆಗಳಲ್ಲೊಂದು.ಬಿದರಿ ಕಲಾಕೃತಿ, ಕಿನ್ನಾಳ ಕಲಾವಸ್ತುಗಳು, ಕಂಚಿನ ಪ್ರತಿಮೆಗಳು, ಚನ್ನಪಟ್ಟಣದ ಆಟಿಕೆಗಳು, ಮರಗೆತ್ತನೆ, ಕುಂಬಾರಿಕೆ ಹೀಗೆ ಕರ್ನಾಟಕದ ಹಲವು ಕರಕುಶಲ ಕಲೆ ಹಾಗೂ ವಸ್ತುಗಳು ಕಣ್ಮನ ಸೆಳೆದವು.

ಮೇಘಾಲಯದ ಸ್ತಬ್ಧಚಿತ್ರವು ರಾಜ್ಯ ಉದಯವಾದ50 ವರ್ಷಗಳನ್ನು ನೆನಪಿಸಿತು. ಸಹಕಾರ ಸಂಘಗಳು ಮತ್ತು ಸ್ವ-ಸಹಾಯ ಗುಂಪುಗಳ ನೇತೃತ್ವ ವಹಿಸಿರುವಮಹಿಳೆಯರಿಗೆ ಗೌರವ ಸಲ್ಲಿಸಿತು. ಬಿದಿರಿನಿಂದ ಮಾಡಿದ್ದ ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಯಿತು. ಗುಜರಾತ್‌ನಲ್ಲಿ ನಡೆದ ಬುಡಕಟ್ಟು ಕ್ರಾಂತಿಯನ್ನು ಬಿಂಬಿಸುವ ಟ್ಯಾಬ್ಲೊವನ್ನು ಗುಜರಾತ್ ಪರಿಚಯಿಸಿತು.ಗೋವಾದ ಟ್ಯಾಬ್ಲೊ ವಿವಿಧ ಐತಿಹಾಸಿಕ ಮತ್ತು ನೈಸರ್ಗಿಕ ಆಕರ್ಷಣೆಗಳನ್ನು ಪ್ರದರ್ಶಿಸುವ ಯತ್ನ ಮಾಡಿತು.

‘ಹರಿಯಾಣವು ಕ್ರೀಡೆಯಲ್ಲಿ ಮೊದಲ ಸ್ಥಾನದಲ್ಲಿದೆ’ ಎಂಬುದನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಹರಿಯಾಣ ಸರ್ಕಾರ ಪ್ರದರ್ಶಿಸಿತು. ಇತರ ರಾಜ್ಯಗಳಿಗೆ ಹೋಲಿಸಿದರೆ, ಒಲಿಂಪಿಕ್ಸ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಿಯಾಣದ ಕ್ರೀಡಾಪಟುಗಳು ಅತಿಹೆಚ್ಚಿನ ಪದಕಗಳನ್ನು ಪಡೆದಿದ್ದಾರೆ ಎಂಬುದನ್ನು ಸ್ತಬ್ಧಚಿತ್ರ ಸೂಚಿಸಿತು. ಉತ್ತರಾಖಂಡದ ಪ್ರಗತಿಯನ್ನು ಸೂಚಿಸುವ ಸ್ತಬ್ಧಚಿತ್ರವು ಅನಾವರಣಗೊಂಡಿತು. ಸಂಪರ್ಕ ವೃದ್ಧಿ ಹಾಗೂ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯಲ್ಲಿ ಆಗಿರುವ ಬೆಳವಣಿಗೆಗಳನ್ನು ಬಿಂಬಿಸಲಾಯಿತು.

ಛತ್ತೀಸಗಡ ಸರ್ಕಾರವು ಗೋಧನ ಹೊಸ ಯೋಜನೆ ವಿಷಯವನ್ನು ಪ್ರಸ್ತುತಪಡಿಸಿತು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜ್ಯ ನೀಡಿದ ಅಪ್ರತಿಮ ಕೊಡುಗೆಯನ್ನು ಪಂಜಾಬ್‌ನ ಸ್ತಬ್ಧಚಿತ್ರ ಚಿತ್ರಸಿತು.

ವಿರಾಟ್ ನಿವೃತ್ತಿ

ರಾಷ್ಟ್ರಪತಿಯ ಬೆಂಗಾವಲು ಪಡೆಯ ಕಮಾಂಡಂಟ್ ಸವಾರಿಗೆ ಬಳಸಲಾಗುತ್ತಿದ್ದ ವಿರಾಟ್‌ ಎಂಬ ಕುದುರೆ ಬುಧವಾರ ನಿವೃತ್ತವಾಗಿದೆ. ಈವರೆಗೆ ಗಣರಾಜ್ಯೋತ್ಸವದ 13 ಮೆರವಣಿಗೆಗಳಲ್ಲಿ ವಿರಾಟ್ ಭಾಗಿಯಾಗಿತ್ತು. ಗಣರಾಜ್ಯೋತ್ಸವದ ಮೆರವಣಿಗೆಯ ನಂತರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿರಾಟ್‌ನನ್ನು ಬೀಳ್ಕೊಟ್ಟರು.

ಉತ್ತರಾಖಂಡದ ಟೋಪಿ, ಮಣಿಪುರದ ಶಲ್ಯ

ಪ್ರಧಾನಿ ನರೇಂದ್ರ ಮೋದಿ ಅವರು ತಾವು ಧರಿಸುವ ಬಟ್ಟೆ ಹಾಗೂ ವೇಷಭೂಷಣಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈ ಬಾರಿಯ ಗಣರಾಜ್ಯೋತ್ಸವದಲ್ಲೂ ಅವರು ತಮ್ಮ ವಸ್ತ್ರ ವಿನ್ಯಾಸದಿಂದ ಗಮನ ಸೆಳೆದಿದ್ದಾರೆ. 2014ರಿಂದಲೂ ಪ್ರತಿ ವರ್ಷ ಅವರು ತಲೆಗೆ ಮುಂಡಾಸು ಧರಿಸುತ್ತಿದ್ದರು. ಈ ಬಾರಿ ಅವರು ಉತ್ತರಾಖಂಡದ ಟೋಪಿಯನ್ನು ಧರಿಸಿದ್ದಾರೆ. ಟೋಪಿಯಲ್ಲಿ ಬ್ರಹ್ಮಕಮಲದ ಚಿತ್ರವಿದೆ.
ಇದು ಉತ್ತರಾಖಂಡದ ರಾಜ್ಯದ ಹೂವು.ಮೋದಿ ಅವರು ತಮ್ಮ ಕೊರಳ ಸುತ್ತ ಶಲ್ಯವನ್ನು ಧರಿಸಿದ್ದರು. ಈ ಶಲ್ಯ ಮಣಿಪುರದಿಂದ ಬಂದಿದೆ. ಇದನ್ನು ಬಿಳಿ, ಕಪ್ಪು ಮತ್ತು ಕೆಂಪು ಬಣ್ಣದ ನೂಲಿನಿಂದ ನೇಯಲಾಗಿದೆ. ಇದು ಮಣಿಪುರದ ಮೈತೆಯ್ ಬುಡಕಟ್ಟಿನ ಸಾಂಪ್ರದಾಯಿಕ ಶಲ್ಯ.

ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಫೆಬ್ರುವರಿ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಕಾರಣದಿಂದಲೇ ಅಲ್ಲಿನ ಟೋಪಿ ಮತ್ತು ಶಲ್ಯವನ್ನುಮೋದಿ ಧರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೇಳಿದ್ದಾರೆ.

ಗಣರಾಜ್ಯೋತ್ಸವ ಮೆರವಣಿಗೆಗೂ ಮುನ್ನ ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ಸಲ್ಲಿಸಿದ್ದರು.

ಪೌರ ಕಾರ್ಮಿಕರು, ರಿಕ್ಷಾ ಚಾಲಕರು ಅತಿಥಿಗಳು

ಕೋವಿಡ್‌ನ ಕಾರಣ ಗಣರಾಜ್ಯೋತ್ಸವದ ಮೆರವಣಿಗೆ ನೋಡಲು ಸೇರಿದ್ದವರ ಸಂಖ್ಯೆ ಬಹಳ ಕಡಿಮೆ ಇತ್ತು. ಕೋವಿಡ್‌ನ ಕಾರಣದಿಂದ 2021ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ವಿದೇಶಿ ಅತಿಥಿಯನ್ನು ಆಹ್ವಾನಿಸಿರಲಿಲ್ಲ. ಈ ಬಾರಿಯು ಕೋವಿಡ್‌ ಕಾರಣಕ್ಕೇ ವಿದೇಶಿ ಅತಿಥಿಯನ್ನು ಆಹ್ವಾನಿಸಿಲ್ಲ. ಆದರೆ, ಗಣರಾಜ್ಯೋತ್ಸವದ ಮೆರವಣಿಗೆಗೆ ಸ್ತಬ್ಧಚಿತ್ರಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದ ಕಾರ್ಮಿಕರು ಮತ್ತು ಕಲಾವಿರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಜತೆಗೆ ರಿಕ್ಷಾ ಚಾಲಕರು, ಪೌರ ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಅಂತರ ಕಾಯ್ದುಕೊಳ್ಳುವಿಕೆಯ ನಿಯಮಗಳಿಗೆ ಅನುಗುಣವಾಗಿ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. ಅತಿಥಿಗಳು ಮಾಸ್ಕ್ ಧರಿಸಿ ಗಣರಾಜ್ಯೋತ್ಸವದ ಆಚರಣೆಗೆ ಸಾಕ್ಷಿಯಾದರು. ಈ ಬಾರಿ 15 ವರ್ಷ ಮೇಲ್ಪಟ್ಟ ಮತ್ತು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದ ಮಕ್ಕಳಿಗೆ ಮಾತ್ರವೇ ಗಣರಾಜ್ಯೋತ್ಸವದ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು.

ಪ್ರತಿವರ್ಷ ಗಣರಾಜ್ಯೋತ್ಸವದ ವೀಕ್ಷಣೆಗೆ ರಾಜಪಥದಲ್ಲಿ 25,000 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ 5,000 ಜನರಿಗಷ್ಟೇ ಮೆರವಣಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. 5,000ದಲ್ಲಿ 4,000 ಮಂದಿ ಕಾರ್ಮಿಕ ಅತಿಥಿಗಳೇ ಇದ್ದರು. ಆದರೆ, ಭದ್ರತೆಗೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಸಂಖ್ಯೆ 26,000. ಅತಿಥಿಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಎಂದು ಮುದ್ರಿಸಲಾಗಿದ್ದ ಟೋಪಿಗಳನ್ನು ನೀಡಲಾಗಿತ್ತು.

ಬಾಂಗ್ಲಾ ವಿಮೋಚನೆಯ ನೆನಪು

ಭಾರತವು ಹೋರಾಡಿ, ಬಾಂಗ್ಲಾದೇಶ ಉದಯಕ್ಕೆ ಕಾರಣವಾದ 1971ರ ಬಾಂಗ್ಲಾ ವಿಮೋಚನಾ ಯುದ್ಧದ ನೆನಪಿನಲ್ಲಿ ಈ ವರ್ಷ ‘ಸ್ವರ್ಣ ವಿಜಯ ವರ್ಷ’ ಆಚರಿಸಲಾಗುತ್ತಿದೆ. ಪಾಕಿಸ್ತಾನದ ಮೇಲೆ ಸಾಧಿಸಲಾದ ಜಯದ ಸ್ಮರಣೆಗಾಗಿ ಭಾರತೀಯ ಸೇನೆಯು ರಾಜಪಥದಲ್ಲಿ ವಿಶೇಷ ಮೆರವಣಿಗೆ ನಡೆಸಿತು.

1971ರ ಯುದ್ಧದಲ್ಲಿ ಬಳಸಲಾಗಿದ್ದತಲಾ ಒಂದು ಪಿಟಿ–76 ಟ್ಯಾಂಕ್‌, ಸೆಂಚೂರಿಯನ್ ಟ್ಯಾಂಕ್‌, ಎರಡು ಎಂಬಿಟಿ ಅರ್ಜುನ್ ಎಂಕೆ–1 ಟ್ಯಾಂಕ್‌, ಒಟಿ–62 ಟೋಪಾಜ್ ಗುಂಡು ನಿರೋಧಕ ಸಮರ ವಾಹನ, ಒಂದು ಬಿಎಂಪಿ–1 ಸಮರ ವಾಹನ ಮತ್ತು ಎರಡು ಬಿಎಂಪಿ–2 ಸಮರ ವಾಹನಗಳನ್ನು ಒಳಗೊಂಡಿದ್ದ ಸೇನಾ ತುಕಡಿಯು ಮೆರವಣಿಗೆಯ ಆಕರ್ಷಣೆಯ ಕೇಂದ್ರವಾಗಿತ್ತು.

ಇದರ ಜತೆಯಲ್ಲಿಯೇ ಭಾರತೀಯ ಸೇನೆಯ ಮೂರೂ ಪಡೆಗಳ ವಿಶೇಷ ತುಕಡಿಗಳು ಮತ್ತು ಬೆಟಾಲಿಯನ್‌ಗಳ ಪ್ರತಿನಿಧಿಗಳು ಮೆರವಣಿಗೆ ನಡೆಸಿದರು. ಸದ್ಯ ಸೇನೆಯಲ್ಲಿ ಬಳಕೆಯಲ್ಲಿರುವ ಟ್ಯಾಂಕ್‌ಗಳು, ಕ್ಷಿಪಣಿ ಲಾಂಚರ್‌ಗಳು, ಫಿರಂಗಿಗಳು, ರೈಫಲ್‌ಗಳನ್ನು ಹೊತ್ತ ಸೈನಿಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಭಾರತೀಯ ಗಡಿ ಭದ್ರತಾ ಪಡೆಯ ಒಂಟೆಯ ತುಕಡಿಯು ಮೆರವಣಿಗೆಯ ಆಕರ್ಷಣೆಗಳಲ್ಲಿ ಒಂದಾಗಿತ್ತು.

ಸೇನಾ ಸಮವಸ್ತ್ರಗಳ ಪ್ರದರ್ಶನ

ಸ್ವಾತಂತ್ರ್ಯಾನಂತರ ಭಾರತೀಯ ಸೇನೆಯಲ್ಲಿ ಬಳಕೆಯಲ್ಲಿದ್ದ ಎಲ್ಲಾ ಸಮರ ಸಮವಸ್ತ್ರಗಳು ತೊಟ್ಟ ಸೈನಿಕರು ಗಣರಾಜ್ಯೋತ್ಸವದಲ್ಲಿ ಮೆರವಣಿಗೆ ನಡೆಸಿದರು. ಈ ವರ್ಷದ ಸೇನಾ ದಿನಾಚರಣೆಯ ದಿನದಿಂದ ಭಾರತೀಯ ಸೇನೆಯ ಸೈನಿಕರಿಗೆ ಹೊಸ ಸಮರ ಸಮವಸ್ತ್ರಗಳನ್ನು ನೀಡಲಾಗಿದೆ. ಹಂತ ಹಂತವಾಗಿ ಸೇನೆಯ 12 ಲಕ್ಷ ಸೈನಿಕರಿಗೂ ಈ ಸಮರ ಸಮವಸ್ತ್ರಗಳನ್ನು ನೀಡಲಾಗುತ್ತದೆ. ಈ ಬದಲಾವಣೆಯ ಸೂಚಕವಾಗಿ ಸೇನೆಯಲ್ಲಿ ಈ ಹಿಂದೆ ಬಳಕೆಯಲ್ಲಿದ್ದ ಎಲ್ಲಾ ಸಮವಸ್ತ್ರಗಳನ್ನು ಈ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗಿದೆ. ಜತೆಗೆ ಆ ಸಂದರ್ಭದಲ್ಲಿ ಬಳಕೆಯಲ್ಲಿದ್ದ ರೈಫಲ್‌ಗಳನ್ನೂ ಸೈನಿಕರು ಮೆರವಣಿಗೆಯಲ್ಲಿ ಪ್ರದರ್ಶಿಸಿದ್ದಾರೆ.

ತಲಾ 96 ಸೈನಿಕರಿದ್ದ ಆರು ತಂಡಗಳು ಈ ಮೆರವಣಿಗೆಯನ್ನು ನಡೆಸಿಕೊಟ್ಟವು. 1950ರಲ್ಲಿ ಬಳಕೆಯಲ್ಲಿದ್ದ ಸಮವಸ್ತ್ರವನ್ನು ತೊಟ್ಟು ರಜಪೂತ್ ರೆಜಿಮೆಂಟ್‌ ಮೆರವಣಿಗೆ ನಡೆಸಿತು. ಈ ತಂಡವು .303 ರೈಫಲ್‌ಗಳನ್ನು ಹೊತ್ತು ಪ್ರದರ್ಶನ ನೀಡಿತು.1960ರಲ್ಲಿ ಬಳಕೆಯಲ್ಲಿದ್ದ ಸಮವಸ್ತ್ರ ತೊಟ್ಟು ಮತ್ತು ಆಗ ಬಳಕೆಯಲ್ಲಿದ್ದ .303 ರೈಫಲ್‌ ಹೊತ್ತು ಅಸ್ಸಾಂ ರೆಜಿಮೆಂಟ್‌ ಮೆರವಣಿಗೆ ನಡೆಸಿತು.

1970ರ ಸಮವಸ್ತ್ರವನ್ನು ತೊಟ್ಟು ಮತ್ತು ಆಗ ಬಳಕೆಯಲ್ಲಿದ್ದ 7.62 ಎಂಎಂ ರೈಫಲ್‌ ಹೊತ್ತು ಜಮ್ಮು–ಕಾಶ್ಮೀರ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟ್ ಪ್ರದರ್ಶನ ನೀಡಿತು. ಈಗ ಬಳಕೆಯಲ್ಲಿರುವ ಸಮವಸ್ತ್ರ ತೊಟ್ಟು ಮತ್ತು 5.56 ಎಂಎಂ ಇನ್ಸಾಸ್ ರೈಫಲ್‌ ಹೊತ್ತು ಸಿಖ್ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟ್ ಮೆರವಣಿಗೆ ನಡೆಸಿತು.

ಪ್ಯಾರಾಶೂಟ್ ರೆಜಿಮೆಂಟ್‌ನ ಸದಸ್ಯರು ಹೊಸತಾಗಿ ನೀಡಲಾಗಿರುವ ಸಮರ ಸಮವಸ್ತ್ರವನ್ನು ತೊಟ್ಟು ಮತ್ತು ಟ್ಯಾವೋರ್ ರೈಫಲ್‌ ಹೊತ್ತು ಮೆರವಣಿಗೆ ನಡೆಸಿದರು.

ಫ್ಲೈಪಾಸ್ಟ್ ಪ್ರದರ್ಶನ

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಾಯುಪಡೆಯು ಕೆಲವು ಮೊದಲುಗಳಿಗೆ ಮುನ್ನುಡಿ ಬರೆಯಿತು. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ಅಂದರೆ, 75 ವಿಮಾನಗಳು ರಾಜಪಥದ ಆಗಸದಲ್ಲಿ ಪಥಸಂಚಲನ (ಫ್ಲೈಪಾಸ್ಟ್) ನಡೆಸಿದ್ದು ವಿಶೇಷ. ದೂರದರ್ಶನದ ಸಹಯೋಗದಲ್ಲಿ ವಾಯುಪಡೆಯುವ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಸಾಗುವ ವಿಡಿಯೊಗಳನ್ನು ನೇರ ಪ್ರಸಾರ ಮಾಡಿದ್ದು ಮತ್ತೊಂದು ವಿಶೇಷ. ಮೋಡದ ಮೇಲೆ ಹಾರಾಡುವ ಹಾಗೂ ಆಗಸದಲ್ಲಿ ವಿಮಾನಗಳು ಆಕರ್ಷಕ ವಿನ್ಯಾಸ ರಚಿಸುವ ವಿಡಿಯೊಗಳು ಬೃಹತ್ ಪರದೆಯ ಮೇಲೆ ನೇರಪ್ರಸಾರವಾಗಿದ್ದು ಜನರ ಗಮನ ಸೆಳೆಯಿತು.

ಇತ್ತೀಚೆಗೆ ವಾಯುಪಡೆಗೆ ಸೇರ್ಪಡೆಯಾಗಿರುವ ಐದು ರಫೇಲ್ ಯುದ್ಧವಿಮಾನಗಳು ವಾಯು ಕಸರತ್ತು ನಡೆಸಿದ್ದು ಈ ಬಾರಿಯ ವಿಶೇಷತೆಗಳಲ್ಲೊಂದು. ವಿಂಟೇಜ್ ಹಾಗೂ ಆಧುನಿಕ ವಿಮಾನಗಳೆರಡೂ ಭಾಗಿಯಾಗಿದ್ದವು. ವಾಯುಪಡೆಯ ಎಂಐ29ಕೆ, ಗಸ್ತು ವಿಮಾನವಾದ ಪಿ–8ಐ, ರಫೇಲ್, ಸುಖೋಯ್, ಜಾಗ್ವಾರ್‌ ವಿಮಾನಗಳು ಹಾಗೂ ಎಂಐ–17, ಸಾರಂಗ್, ಅಪಾಚೆ ಮೊದಲಾದವು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಿದವು. ವಿಮಾನಗಳು ಆಗಸದಲ್ಲಿ ತಿರಂಗಾ, ತಂಗೈಲ್, ಏಕಲವ್ಯ, ರುದ್ರ, ತ್ರಿಶೂಲ ಮೊದಲಾದ ವಿನ್ಯಾಸಗಳನ್ನು ನಿರ್ಮಿಸಿದವು. ಮೂರೂ ಪಡೆಗಳ ವಿಮಾನಗಳು ಭಾಗಿಯಾಗಿದ್ದವು.ಒಂದು ಡಕೋಟ್ ಹಾಗೂ ಎರಡು ಡಾರ್ನಿಯರ್ ವಿಮಾನಗಳು1971ರ ಯುದ್ಧದ ತಂಗೈಲ್ ಏರ್‌ಡ್ರಾಪ್ ಕಾರ್ಯಾಚರಣೆ ನೆನಪಿಸಿದವು. ಧ್ವಜ ವಿನ್ಯಾಸದ ಮೂಲಕ ಸೇನಾ ಕಸರತ್ತು ಶುರು ಮಾಡಲಾಗಿತ್ತು. ಕೊನೆಯಲ್ಲಿ 17 ಜಾಗ್ವಾರ್ ವಿಮಾನಗಳು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಅಮೃತ’ ವಿನ್ಯಾಸ ಮೂಡಿಸಿದವು.

485 ಕಲಾವಿದರಿಂದ ನೃತ್ಯ ಪ್ರದರ್ಶನ

15 ರಾಜ್ಯಗಳಿಗೆ ಸೇರಿದ 485 ನೃತ್ಯಪಟುಗಳ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಅತ್ಯದ್ಭುತ ನೃತ್ಯ ಪ್ರದರ್ಶನ ನೀಡಿದರು. ಶಾಸ್ತ್ರೀಯ, ಜನಪದ/ಬುಡಕಟ್ಟು, ಸಮಕಾಲೀನ ನೃತ್ಯ ಪ್ರಕಾರಗಳು ಮನಸೂರೆಗೊಂಡವು.ಬೃಹತ್ ರಂಗಪರಿಕರಗಳು, ಮುಖವಾಡಗಳು, ಬೊಂಬೆಗಳು ಮತ್ತು ದಿರಿಸುಗಳು ಸ್ವರಮೇಳದ ವೈಭವವನ್ನು ಹೆಚ್ಚಿಸಿದವು.

ಭಾರತದ ಸಂಗೀತವು ಏಕತೆ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸಿತು. ಸಾಂಪ್ರದಾಯಿಕ ಸಂಗೀತವು ಆಧುನಿಕತೆ ಸಂಗೀತವನ್ನು ಹೇಗೆ ಸಂಧಿಸುತ್ತದೆ, ಜಾನಪದವು ಸಮಕಾಲೀನವನ್ನು ಹೇಗೆ ಬೆಸೆಯುತ್ತದೆ ಎಂಬುದನ್ನು ಚಿತ್ರಿಸಲಾಯಿತು.ರಕ್ಷಣಾ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ಸ್ಪರ್ಧೆ ವಂದೇ ಭಾರತಂ-ನೃತ್ಯ ಉತ್ಸವದ ಆಧಾರದ ಮೇಲೆ ಇಲ್ಲಿ ಭಾಗವಹಿಸುವ ನೃತ್ಯಪಟುಗಳನ್ನು ಇದೇ ಮೊದಲ ಬಾರಿಗೆ ಆಯ್ಕೆ ಮಾಡಲಾಗಿತ್ತು.

ಆಧಾರ: ಪಿಟಿಐ, ಚಿತ್ರಗಳು: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT