ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ| ಎಲ್ಲೆಲ್ಲಿ ಮರು ವರ್ಗೀಕರಣ?

Last Updated 7 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಪಂಜಾಬ್: ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಒಟ್ಟು ಹುದ್ದೆಗಳಲ್ಲಿ ಶೇ 50ರಷ್ಟನ್ನು ಬಾಲ್ಮಿಕಿ ಮತ್ತು ಮಝ್ಹಬಿ ಸಿಖ್ಖರಿಗೆ ನೀಡಲು ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯ್ದೆ, 2006ರ ಮೂಲಕ ನಿರ್ಧರಿಸಲಾಗಿತ್ತು. ಈ ಕಾಯ್ದೆ ಅಸಾಂವಿಧಾನಿಕ ಎಂದ ಹೈಕೋರ್ಟ್ ಒಳಮೀಸಲಾತಿಗೆ ಅನುಮತಿ ನೀಡಲಿಲ್ಲ. ರಾಜ್ಯ ಸರ್ಕಾರವು 2014ರಲ್ಲಿ ಈ ತೀರ್ಪನ್ನು ಪ್ರಶ್ನಿಸಿತು.

ಆಂಧ್ರಪ್ರದೇಶ: 2000ನೇ ಇಸ್ವಿಯಲ್ಲಿ ನ್ಯಾಯಮೂರ್ತಿ ರಾಮಚಂದ್ರರಾಜು ಆಯೋಗದ ಶಿಫಾರಸಿನಂತೆ ಒಳಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿತು. ಪರಿಶಿಷ್ಟ ಜಾತಿಯಲ್ಲಿ 57 ಜಾತಿಗಳ ಪ್ರತ್ಯೇಕ ಗುಂಪು ರಚಿಸಿ, ಎಸ್‌ಸಿಗೆ ನಿಗದಿಯಾಗಿದ್ದ ಶೇ 15ರಷ್ಟು ಮೀಸಲಾತಿಯನ್ನು ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ವಿಭಜಿಸಲಾಯಿತು. ಶಿಕ್ಷಣ ಮತ್ತು ಉದ್ಯೋಗಕ್ಕೆ ಇದು ಅನ್ವಯವಾಗುತ್ತದೆ. ಆದರೆ, ಈ ಕಾಯ್ದೆ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ 2005ರಲ್ಲಿ ತೀರ್ಪು ನೀಡಿತು. ರಾಜ್ಯಗಳು ಈ ರೀತಿ ಒಳಮೀಸಲಾತಿಯನ್ನು ನಿಗದಿಪಡಿಸುವಂತಿಲ್ಲ ಎಂದು ತಾಕೀತು ಮಾಡಿತು.

ಹರಿಯಾಣ: 1994ರಲ್ಲಿ ಅಂದಿನ ಮುಖ್ಯಮಂತ್ರಿ ಭಜನ್‌ಲಾಲ್ ಅವರು ಶಿಕ್ಷಣ ಹಾಗೂ ಉದ್ಯೋಗಕ್ಕೆ ಅನ್ವಯವಾಗುವಂತೆ ಎಸ್‌ಸಿ ಸಮುದಾಯದಲ್ಲಿ ಎರಡು ಗುಂಪುಗಳನ್ನು ಮಾಡಿ ಆದೇಶಿಸಿದ್ದರು. ‘ಬಿ’ ಗುಂಪಿನಲ್ಲಿ ಚಮ್ಮಾರರು, ಜಾಟಿಯಾ ಚಮ್ಮಾರರು, ರಾಹಗರ್, ರಾಯ್‌ಗರ್ಸ್, ರಾಮದಾಸಿಯಸ್ ಅಥವಾ ರವಿದಾಸಿಯಸ್ ಜಾತಿಗಳನ್ನು ಸೇರಿಸಲಾಗಿತ್ತು. ‘ಎ’ ಗುಂಪಿನಲ್ಲಿ ಎಸ್‌ಸಿಗೆ ಸೇರಿದ 36 ಜಾತಿಗಳನ್ನು ಸೇರಿಸಲಾಗಿತ್ತು. ಆದರೆ ಈ ಅಧಿಸೂಚನೆಯನ್ನು 2006ರ ಜುಲೈನಲ್ಲಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ವಜಾಗೊಳಿಸಿತ್ತು.

ತಮಿಳುನಾಡು: ಎಸ್‌ಸಿ ಮೀಸಲಾತಿಯೊಳಗೆ ಅರುಂಧತಿಯಾರ್ ಜಾತಿಗೆ ಒಳಮೀಸಲಾತಿ ನೀಡಬೇಕು ಎಂದು ಸಿಪಿಎಂ ಹಾಗೂ ಆದಿ ತಮಿಳರ್ ಪೆರೆವೈ ಪ್ರತಿಭಟನೆ ನಡೆಸಿದ್ದವು. ಆಗ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ರಚಿಸಿದ್ದ ನ್ಯಾಯಮೂರ್ತಿ ಎಂ.ಎಸ್. ಜನಾರ್ದನಂ ಆಯೋಗವು 2008 ನವೆಂಬರ್ 22 ರಂದು ವರದಿ ನೀಡಿತು. ‘ದಲಿತರ ಜನಸಂಖ್ಯೆಯಲ್ಲಿ ಅರುಂಧತಿಯಾರ್ ಸಮುದಾಯ ಶೇ 16ರಷ್ಟು ಪಾಲು ಹೊಂದಿದ್ದರೂ, ಜಾತಿ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿದೆ. ಅರುಂಧತಿಯಾರ್ ಸಮುದಾಯಕ್ಕೆ ಶೇ 3ರಷ್ಟು ಒಳಮೀಸಲಾತಿ ನೀಡಬೇಕು’ ಎಂದು ವರದಿ ಶಿಫಾರಸು ಮಾಡಿತ್ತು. ಕರುಣಾನಿಧಿ ಸರ್ಕಾರವು 2009ರ ಫೆಬ್ರುವರಿಯಲ್ಲಿ ಎಸ್‌ಸಿ ಸಮುದಾಯದ ಶೇ 18ರಷ್ಟು ಮೀಸಲಾತಿಯನ್ನು ವಿಭಜಿಸಿ ಒಳಮೀಸಲಾತಿ ಕಲ್ಪಿಸಿತ್ತು. ಇದನ್ನು ವಿರೋಧಿಸಿ ಕೆಲವು ದಲಿತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಕೋರ್ಟ್ ಮೆಟ್ಟಿಲೇರಿದ್ದವು.

ಕರ್ನಾಟಕ: ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗವು 2012ರಲ್ಲಿ ವರದಿ ನೀಡಿತ್ತು. ಪ್ರಸ್ತುತ ಎಸ್‌ಸಿಗೆ ಶೇ 15 (101 ಜಾತಿಗಳು), ಎಸ್‌ಟಿಗೆ (50 ಜಾತಿಗಳು) ಶೇ 3 ಹಾಗೂ ಒಬಿಸಿಗೆ (207 ಜಾತಿ) ಶೇ 32ರಷ್ಟು ಮೀಸಲಾತಿ ವಿಂಗಡಣೆಯಾಗಿದೆ.

ಎಸ್‌ಸಿಗೆ ಮೀಸಲಾಗಿರುವ ಶೇ 15ರಷ್ಟು ಮೀಸಲಾತಿಯ ಪೈಕಿ ಶೇ 6ರಷ್ಟನ್ನು ಎಸ್‌ಸಿ–ಎಡಗೈ ಹಾಗೂ ಶೇ 5ರಷ್ಟನ್ನು ಎಸ್‌ಸಿ–ಬಲಗೈ, ಶೇ 3ರಷ್ಟನ್ನು ಅಸ್ಪೃಶ್ಯರು ಹಾಗೂ ಪರಿಶಿಷ್ಟ ಜಾತಿಯ ಇತರರಿಗೆ ಶೇ 1ರಷ್ಟನ್ನು ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿತ್ತು. ವರದಿ ಇನ್ನೂ ಜಾರಿಗೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT