ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಸಿಹಿಯ ಹಿಂದಿನ ಕಹಿಸತ್ಯ

Last Updated 7 ಡಿಸೆಂಬರ್ 2020, 4:20 IST
ಅಕ್ಷರ ಗಾತ್ರ
ADVERTISEMENT
"ಸಗಣಿ ರಾಶಿ ಒಟ್ಟು ಮಾಡುವಲ್ಲಿ ನಿರತರಾಗಿರುವ ಮಕ್ಕಳು"
""
"ರೊಟ್ಟಿ ಬುತ್ತಿ"

ರಾಜ್ಯದ ಕಬ್ಬು ಕಟಾವಿಗೆ ಮಹಾರಾಷ್ಟ್ರದಿಂದ ಪ್ರತಿ ವರ್ಷ ಸಾವಿರಾರು ಕಾರ್ಮಿಕರು ಬರುತ್ತಾರೆ. ಇಂಥ ಕುಟುಂಬಗಳ ಲಕ್ಷಾಂತರ ಮಕ್ಕಳು ಶಿಕ್ಷಣ, ಆರೋಗ್ಯ, ರಕ್ಷಣೆ ಇಲ್ಲದೇ ಇಲ್ಲಿ ಬಾಳ್ವೆ ನಡೆಸುತ್ತಾರೆ. ಕಾರ್ಖಾನೆಯ ಮಾಲಿಕರೇ ಸರ್ಕಾರದ ದಣಿಗಳಾದ ರಾಜ್ಯದಲ್ಲಿ ಕಬ್ಬಿನ ನೆಲೆಯ ಕಾರ್ಮಿಕರ ಕುಟುಂಬದ ಕರುಣಾಜನಕ ಕತೆ, ಕಣ್ಣಿಗೆ ಕಾಣದಷ್ಟು ವ್ಯವಸ್ಥೆ ಕುರುಡಾಗಿದ್ದಾದರೂ ಏಕೆ?

ಕಾರ್ಖಾನೆ ಮಗ್ಗುಲಲ್ಲಿ ಕಂದಮ್ಮಗಳ ಕರುಣಕತೆ

- ಶಿವಾನಂದ ಕಳವೆ

ಕರ್ನಾಟಕದಲ್ಲಿ ಬೀದರ್‌ನಿಂದ ಮೈಸೂರಿನವರೆಗೆ 40 ರಿಂದ 50 ಸಕ್ಕರೆ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಯಲ್ಲಿ ಪ್ರತಿ ವರ್ಷ ಕಬ್ಬು ಬೆಳೆಯುತ್ತಾರೆ. ಕಬ್ಬು ಬೆಳೆಯುವವರು ನಾವಾದರೂ, ಕಟಾವು ಮಾಡಲು ಮಹಾರಾಷ್ಟ್ರದ ಭೀಡ್‌, ನಾಂದೇಡ್, ತಲಕಣಿ, ಉಸ್ಮನಾಬಾದ್, ಜತ್, ಯಾವತ್ಮಲ್‌ ಮುಂತಾದ ಪ್ರದೇಶಗಳಿಂದ ಪ್ರತಿ ವರ್ಷ ಸಾವಿರಾರು ಕಾರ್ಮಿಕರು ಬರುತ್ತಿದ್ದಾರೆ. ಹೀಗೆ ಬರುತ್ತಿರುವುದು ಇಂದು ನಿನ್ನೆಯಿಂದಲ್ಲ 40-50 ವರ್ಷಗಳಿಂದ. ಈ ಕಾರ್ಮಿಕರನ್ನು ಕರೆತರಲು ಮಧ್ಯವರ್ತಿಗಳಿದ್ದಾರೆ. ಇವರು ಮಹಾರಾಷ್ಟ್ರದ ಮಳೆ ಆಶ್ರಿತ ಕೃಷಿ ನೆಲೆಯ ಹಳ್ಳಿಗಳನ್ನು ಸುತ್ತಾಡಿ ಮುಂಗಡ ಹಣ ನೀಡಿ ರಾಜ್ಯಕ್ಕೆ ಕಾರ್ಮಿಕರನ್ನು ಕರೆತರುತ್ತಾರೆ. ಕೆಲಸ ಹುಡುಕಿ ತರುವ ಮಕದ್ದಮ್ (ಕಾರ್ಮಿಕರ ಮುಖಂಡ), ಕಬ್ಬು ಕಡಿಯುವ ಕಬ್ಬಿನಗ್ಯಾಂಗ್ (ಗಬಾಳಿಗರು/ ಕಾರ್ಮಿಕರು) ಸಕ್ರಿಯವಾಗದಿದ್ದರೆ ರಾಜ್ಯದಲ್ಲಿ ಕಬ್ಬು ಕಟಾವು ಕಷ್ಟ.

ಕಬ್ಬಿನ ಕೃಷಿ ಲೆಕ್ಕದಲ್ಲಿ ಕೂಲಿ ಗಣತಿ: ಕಬ್ಬು ಕಟಾವಿಗೆ ವರ್ಷಕ್ಕೆ ಎಷ್ಟು ಕಾರ್ಮಿಕರು ಬರುತ್ತಾರೆ? ಇದನ್ನು ಕಾರ್ಖಾನೆಯವರು ಹೇಳುವುದಿಲ್ಲ, ಕೂಲಿಗಳ ದಿಬ್ಬಣ ತಂದ ಗುತ್ತಿಗೆದಾರರಿಗೆ ನೆನಪಿಲ್ಲ. ಕಾರ್ಮಿಕರು ಲೆಕ್ಕಕ್ಕೂ ಸಿಗುವುದಿಲ್ಲ. ಒಂದು ಸರ್ಕಾರಿ ಲೆಕ್ಕದ ಪ್ರಕಾರ ರಾಜ್ಯದಲ್ಲಿ ಏಳು ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬಿನ ಬೆಳೆಯಿದೆ. ಇನ್ನೂ ಹೆಚ್ಚು ಇರಲಿಕ್ಕೂ ಸಾಕು. ಒಂದು ಸಾಮಾನ್ಯ ಲೆಕ್ಕದ ಪ್ರಕಾರ ಒಂದು ಕಾರ್ಖಾನೆ ನಡೆಯಲು ಸುತ್ತಲಿನ 25-30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕು. ರಾಜ್ಯದಲ್ಲಿ ನಿತ್ಯ ಆರರಿಂದ ಹತ್ತು ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯದ ಸುಮಾರು 45ರಿಂದ 50 ಕಾರ್ಖಾನೆಗಳು ಸಕ್ರಿಯವಾಗಿವೆ. ಬೆಳೆಯ ಶೇ 90ರಷ್ಟು ಕಟಾವು ಕೂಲಿಗಳಿಂದ ನಡೆಯುತ್ತದೆ. ಈ ಕೂಲಿಗಳಲ್ಲಿ ವಿಜಯಪುರ, ಕಲಬುರ್ಗಿಯ ಲಮಾಣಿಗರು ಕೆಲವರಾದರೆ, ಉಳಿದಂತೆ ಬಹುತೇಕರು ನೆರೆಯ ಮಹಾರಾಷ್ಟ್ರದವರು.

ಒಂದು ದಿನಕ್ಕೆ ಎಂಟು ಕಾರ್ಮಿಕರು ಒಂದು ಟ್ರ್ಯಾಕ್ಟರ್ ಲೋಡ್ ಕಬ್ಬು ಕಡಿಯುತ್ತಾರೆ. 15ರಿಂದ 55 ವರ್ಷ ವಯಸ್ಸಿನ ಮಹಿಳೆಯರು, ಪುರುಷರು ಈ ಕಾರ್ಯದಲ್ಲಿರುತ್ತಾರೆ. ಇದೇ ಕಾರಣಕ್ಕೆ ಸಂಸಾರ ಸಹಿತವಾಗಿ ವಲಸೆ ಬಂದಿರುತ್ತಾರೆ. ಎಳೆ ಶಿಶು, ಬಾಣಂತಿ, ಗರ್ಭಿಣಿಯರೂ ಸೇರಿದಂತೆ ಕಾರ್ಖಾನೆಯ ಸುತ್ತ 10ರಿಂದ 15 ಸಾವಿರ ವಲಸೆ ಕೂಲಿಕಾರರ ಆವಾಸವಿರುತ್ತದೆ. ಕಬ್ಬಿನ ಗರಿಗಳ ಪುಟ್ಟ ತಾತ್ಕಾಲಿಕ ಗುಡಿಸಲಲ್ಲಿ ಎಂಟು ತಿಂಗಳು ಠಿಕಾಣಿ. ಪ್ರತಿ ದಂಪತಿ ಜೊತೆ ಎರಡು ಮೂರು ಮಕ್ಕಳಿರುತ್ತವೆ. ಇವರೆಲ್ಲ ಮೂರರಿಂದ ಎಂಟು ವರ್ಷದವರು. ಒಂದು ಟನ್ ಕಬ್ಬು ಕಟಾವಿಗೆ ₹450 ರಿಂದ ₹600 ಕೂಲಿ. ಗಂಡ–ಹೆಂಡತಿಯ ಒಂದು ಜೋಡಿ ಮುಂಜಾನೆ ನಾಲ್ಕೈದು ಗಂಟೆಗೆ ಕೆಲಸಕ್ಕೆ ಹೋದರೆ ದಿನಕ್ಕೆ ಎರಡು ಮೂರು ಟನ್ ಕಟಾವು ಮಾಡುತ್ತಾರೆ. ಒಂದರಿಂದ ಒಂದೂವರೆ ಸಾವಿರ ಆದಾಯ. ದುಡಿಮೆಯೇನೋ ಚೆನ್ನಾಗಿದೆ. ಆದರೆ ಬಾಣಂತಿಯರು, ತುಂಬು ಗರ್ಭಿಣಿಯರಿಗೂ ಇಲ್ಲಿ ವಿಶ್ರಾಂತಿಯಿಲ್ಲ. ಮೈಕೊರೆಯುವ ಕಬ್ಬಿನ ಚುಂಗಿನ ನಡುವೆ ಬಾಳ್ವೆ.

ರೊಟ್ಟಿ ಬುತ್ತಿ

ಕಾರ್ಮಿಕ ಮಕ್ಕಳ ಪರಿಸ್ಥಿತಿ ಅರಿಯಲು ಐದು ವರ್ಷಗಳ ಹಿಂದೆ ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ಸುತ್ತಾಡಿದ್ದೆ. ಪ್ರತಿ ಕಾರ್ಖಾನೆ ವ್ಯಾಪ್ತಿಯಲ್ಲಿ ಕಾರ್ಮಿಕರ ಸಾವಿರಾರು ಗುಡಿಸಲುಗಳಿರುವುದನ್ನು ಗಮನಿಸಿದ್ದೇನೆ. ಅವರ‍್ಯಾರಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಾಲಯ ವ್ಯವಸ್ಥೆಯಿಲ್ಲ. ಹೀಗಾಗಿ ಹೆಣ್ಣು–ಗಂಡು ಬೇಧವಿಲ್ಲದೇ ಶೌಚಬಾಧೆ ತೀರಿಸಲು ನೆರೆಯ ಹೊಲಕ್ಕೆ ಹೋಗುತ್ತಾರೆ. ಇದರಿಂದ ಆ ಹೊಲಗಳ ರೈತರು ಹಾಗೂ ಕಾರ್ಖಾನೆ ನಡುವೆ ಸಂಡಾಸು ವಿಷಯಕ್ಕೆ ನಿತ್ಯ ಸಂಘರ್ಷ. ಕಾರ್ಮಿಕರು, ಮಕ್ಕಳು ಹೊಲಕ್ಕೆ ಹೋಗಿ ಹೊಲಸು ಮಾಡದಂತೆ ಕಾರ್ಖಾನೆಯವರೇ ಹೊಲ ಕಾಯಲು ಸೆಕ್ಯುರಿಟಿ ಗಾರ್ಡ್‌ಗಳ ನೇಮಿಸಿದ್ದಿದೆ! ಗುಡಿಸಲು ಪಕ್ಕದಲ್ಲಿಯೇ ಸೀರೆಯ ಮರೆ ಕಟ್ಟಿಕೊಂಡು ಮಹಿಳೆಯರು ಮಲವಿಸರ್ಜನೆಗೆ ಹೋಗುವ ದುಃಸ್ಥಿತಿಯಿದೆ. ಕಬ್ಬಿನ ಹಸಿರೆಲೆಗಳನ್ನು ಮೇವಾಗಿ ಬಳಸುತ್ತ ದನಕರು ಸಾಕುವುದು ಕುಟುಂಬದ ಉಪಕಸುಬು. ಶಾಲೆಗೆ ಹೋಗ ಬೇಕಾದ ಮಕ್ಕಳು ಜಾನುವಾರು ಸಾಕಣೆಯಲ್ಲಿ ಕಾಲ ಕಳೆಯುತ್ತವೆ. ಸಗಣಿ ತೊಪ್ಪೆಗಳನ್ನು ಎತ್ತಿ ಪುಟ್ಟ ಪುಟ್ಟ ರಾಶಿ ಮಾಡುತ್ತವೆ. ₹50 ರಿಂದ ₹ 60ಕ್ಕೆ ಒಂದು ರಾಶಿಯಂತೆ ಮಾರುತ್ತಾರೆ. ಮೂರು ನಾಲ್ಕು ವರ್ಷದ ಬಾಲೆಯರು ಗುಡಿಸಲು ಸುತ್ತ ಸಗಣಿ ಸಂಗ್ರಹದಲ್ಲಿ ನಿರತರಾಗುತ್ತಾರೆ.

ಕಾನೂನು ನಿದ್ದೆ ಹೋಗಿದೆ

ಒಂದು ಕಾರ್ಖಾನೆಗೆ ಕಬ್ಬು ಕಟಾವಿಗೆ ದುಡಿಯುವ ಕಾರ್ಮಿಕರ ಗುಡಿಸಲುಗಳಲ್ಲಿ, ಕನಿಷ್ಠ 10ರಿಂದ 12 ಸಾವಿರ ಕಾರ್ಮಿಕ ಮಕ್ಕಳಿರಬಹುದು. ಮರಾಠಿ ಮಾತಾಡುವ ಇವರಿಗೆ ಸ್ಥಳೀಯರ ಒಡನಾಟ ಕಟಾವು ಕೆಲಸಕ್ಕೆ ಮಾತ್ರ ಸೀಮಿತ. ಅಸಂಘಟಿತ ಕಾರ್ಮಿಕರಾದ ಕಾರಣ, ಮಕ್ಕಳ ಆರೋಗ್ಯ ಸಮಸ್ಯೆ ಯಾರ ಗಮನಕ್ಕೂ ಬರುವದಿಲ್ಲ. ಸಾವಿರಾರು ಮಕ್ಕಳು ಶಿಕ್ಷಣ ವಂಚಿತರಾಗಿದ್ದರೂ ಸೂಕ್ತ ವ್ಯವಸ್ಥೆಕಲ್ಪಿಸುವ ಪ್ರಯತ್ನ ನಡೆಯುತ್ತಿಲ್ಲ. ಟೆಂಟ್ಶಾಲೆಗಳು ನೆಪಕ್ಕೆ ಶುರುವಾಗಿ ದಾಖಲೆಗೆ ಸೀಮಿತವಾಗಿವೆ.

ಸಗಣಿ ರಾಶಿ ಒಟ್ಟು ಮಾಡುವಲ್ಲಿ ನಿರತರಾಗಿರುವ ಮಕ್ಕಳು

ದಿನಕ್ಕೆ ಸಾವಿರಾರು ರೂಪಾಯಿಯ ದುಡಿಯುವ ಕುಟುಂಬಗಳು ತಮ್ಮದೇ ಹಸುಗೂಸುಗಳ ಸುರಕ್ಷತೆಗೆ ಗಮನಹರಿ ಸುತ್ತಿಲ್ಲ. ವಲಸೆ ಜನರಾದ ಕಾರಣ ಆರೋಗ್ಯದ ಅರಿವು ನೀಡುವಲ್ಲೂ ನಿರ್ಲಕ್ಷಿಸಲಾಗಿದೆ. ಸಕ್ಕರೆ ಸಿಹಿ ಮೆಲ್ಲುವವರ ಮಧ್ಯೆ ಹಲವು ಕಹಿ ಸತ್ಯಗಳು ಮರೆಯಾಗಿವೆ. ಕಡ್ಡಾಯ ಶಿಕ್ಷಣ, ಮಾನವಹಕ್ಕು, ಸಂವಿಧಾನದ ಮೂಲಭೂತ ಹಕ್ಕು ಸೇರಿದಂತೆ ಹಲವು ಕಾರ್ಮಿಕ ಕಾಯ್ದೆಗಳಿದ್ದರೂ, ಅವೆಲ್ಲ ಕಾರ್ಮಿಕರ ಗುಡಿಸಲುಗಳಲ್ಲಿ ನಿದ್ದೆ ಹೋಗಿವೆ.

ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆದರೂ ಬಳ್ಳಾರಿ ಜಾಲಿ ಕಂಟಿಯ ಮರೆಗಳಲ್ಲಿ ಎಲ್ಲ ಮುಗಿದು ಹೋಗುತ್ತದೆ. ಎಂಟು ತಿಂಗಳು ಇಲ್ಲಿರುವ ಲಕ್ಷಾಂತರ ಮಕ್ಕಳ ಆರೋಗ್ಯ, ಶಿಕ್ಷಣ ಜಾಗೃತಿಗಾಗಿ ಟೆಂಟ್ ಶಾಲೆಯಷ್ಟೇ ಅಲ್ಲದೇ, ಓದುವುದಕ್ಕೆ ಕಾಯಂ ವ್ಯವಸ್ಥೆಯನ್ನು ಕಾರ್ಖಾನೆಗಳೇ ಮಾಡಬಹುದು. ಆದರೆ ಮುಗ್ಧ ಮಕ್ಕಳನ್ನು ಹುಳುಗಳಂತೆ ಬದುಕಲು ಬಿಟ್ಟವರು, ನಾಡಿನ ನೇತಾರರಾಗುತ್ತಿರುವುದಕ್ಕೆ ಏನು ಹೇಳೋಣ?

***

ವಿಪ್ಲವಗಳ ಎದುರಿಸುವ ಹೊತ್ತು!

- ವೆಂಕಟೇಶ್ ಜಿ.ಎಚ್.

ಬಾಗಲಕೋಟೆ: ಗಟ್ಟಿ ಗಂಡಸರು ಇದ್ದರೆ ಮಾತ್ರ ಗ್ಯಾಂಗ್‌ನ (ತಂಡ) ಹೆಣ್ಣುಮಕ್ಕಳು ಕಟಾವು ಮುಗಿಸಿ ಸುರಕ್ಷಿತವಾಗಿ ಊರಿಗೆ ಮರಳುತ್ತಾರೆ. ಇಲ್ಲದಿದ್ದರೆ ಕಬ್ಬು ಸಾಗಣೆಯ ಟ್ರ್ಯಾಕ್ಟರ್, ಲಾರಿ ಚಾಲಕರು, ಹೊಲದ ಮಾಲೀಕರು, ಸ್ಥಳೀಯ ಕಾರ್ಮಿಕರೇ ಅವರನ್ನು ಜಲ್ಲೆಯಂತೆ ಮುಕ್ಕಿಬಿಡುತ್ತಾರೆ. ಇದು ಪ್ರತಿ ವರ್ಷ ಕಬ್ಬು ಕಡಿಯಲು ಜಿಲ್ಲೆಗೆ ಬರುವ ಹೆಣ್ಣುಮಕ್ಕಳ ಬಗ್ಗೆ ಸ್ಥಳೀಯವಾಗಿರುವ ಮಾತು.

ಜಿಲ್ಲೆಯಲ್ಲಿರುವ 11 ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ಹೊಲಗಳಿಗೆ ಕಬ್ಬು ಕಡಿಯಲು ಪ್ರತಿ ವರ್ಷ 70 ಸಾವಿರಕ್ಕೂ ಹೆಚ್ಚು ಕಾರ್ಮಿಕರು ತಂಡ ಕಟ್ಟಿಕೊಂಡು ಬರುತ್ತಾರೆ. ಅವರಲ್ಲಿ ಅರ್ಧದಷ್ಟು ಹೆಣ್ಣುಮಕ್ಕಳೇ ಇರುತ್ತಾರೆ. ಥರಗುಟ್ಟವ ಚಳಿಯಲ್ಲಿ ನಾಲ್ಕೈದು ತಿಂಗಳು ಹೊಲದಲ್ಲೇ ವಾಸ.

ರಾಜಿ ಪಂಚಾಯ್ತಿಯೇ ಹೆಚ್ಚು

ಕಬ್ಬಿನ ಗ್ಯಾಂಗ್‌ಗಳಲ್ಲಿನ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಬಹುತೇಕ ರಾಜಿ ಪಂಚಾಯ್ತಿಯಲ್ಲೇ ಮುಗಿಯುತ್ತವೆ. ದೌರ್ಜನ್ಯ ಎಸಗಿದವರು ಸ್ಥಳೀಯರು. ಹಣವಂತರು ಇಲ್ಲವೇ ಪ್ರಭಾವಿಗಳು. ಈ ಅಂಶಗಳೇ ಪೊಲೀಸ್ ಠಾಣೆಗಳನ್ನು ಪಂಚಾಯ್ತಿ ಕಟ್ಟೆಗಳಾಗಿಸುತ್ತವೆ. ಗ್ಯಾಂಗ್ ಕರೆತಂದ ಮಧ್ಯವರ್ತಿಯನ್ನೇ ಮನವೊಲಿಕೆಗೆ ಬಳಸುತ್ತಾರೆ. ಒಂದಷ್ಟು ಹಣ ಕೊಡಿಸಿ ಕೈತೊಳೆದುಕೊಳ್ಳುತ್ತಾರೆ.

2003ರಲ್ಲಿ ಜಮಖಂಡಿ ತಾಲ್ಲೂಕಿನ ಜೆಂಬಗಿ ಬಿ.ಕೆ. ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಮಹಾರಾಷ್ಟ್ರದ ಕಬ್ಬಿನ ಗ್ಯಾಂಗ್‌ ಸದಸ್ಯರು ದನಿ ಎತ್ತಿದ್ದರು. ಗ್ರಾಮೀಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ ದೌರ್ಜನ್ಯ ನಡೆದ ಸ್ಥಳ ಸಾವಳಗಿ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಅವರನ್ನು ವಾಪಸ್ ಕಳುಹಿಸಲಾಗಿತ್ತು. ಆ ಪ್ರಕರಣ ಕೂಡ ರಾಜಿಯಲ್ಲಿ ಮುಕ್ತಾಯಗೊಂಡಿತ್ತು.

ಭೀಡ್‌ ಜಿಲ್ಲೆಯವರೆಂದರೆ ಭಯ..

ಮಹಾರಾಷ್ಟ್ರದ ಭೀಡ್ ಜಿಲ್ಲೆಯವರ ಬಗ್ಗೆ ಸ್ಥಳೀಯರಿಗೆ ಭಯ. ಯಾರೂ ಅವರನ್ನು ಕೆಣಕುವ ಸಾಹಸ ಮಾಡುವುದಿಲ್ಲ. ಹೆಣ್ಣು–ಗಂಡು ಭೇದವಿಲ್ಲದೇ ಸ್ವಯಂ ರಕ್ಷಣೆಗೆ ಹತಾರಗಳನ್ನು ಇಟ್ಟುಕೊಂಡು ತಿರುಗುತ್ತಾರೆ. ತಮ್ಮವರಿಗೆ ಎಲ್ಲೇ ತೊಂದರೆಯಾದರೂ ಅಲ್ಲಿಗೆ ತೆರಳಿ ಒಗ್ಗಟ್ಟಿನಿಂದ ಪ್ರತಿರೋಧ ತೋರುತ್ತಾರೆ. ‘ನಮ್ಮ ಹೆಣ್ಣುಮಕ್ಕಳಿಗೆ ತೊಂದರೆಯಾದಲ್ಲಿ ನಾವು ಕಾರ್ಖಾನೆಯ ಆಡಳಿತ ಮಂಡಳಿಯನ್ನೇ ಸಂಪರ್ಕಿಸುತ್ತೇವೆ. ಅವರಿಂದ ಮೊದಲೇ ಸುರಕ್ಷತೆಯ ಖಾತರಿ ಪಡೆದೇ ಇಲ್ಲಿಗೆ ಬಂದಿರುತ್ತೇವೆ’ ಎಂದು ಭೀಡ್ ಜಿಲ್ಲೆಯ ಭೋಗಲ್‌ವಾಡಿ ಗ್ರಾಮದ ಗ್ಯಾಂಗ್‌ ಮುಖ್ಯಸ್ಥ ಹನುಮಂತ ಜಿ. ಮುಂಡೆ ಹೇಳುತ್ತಾರೆ.

***

₹20ಕ್ಕಾಗಿ ಬಾಲಕಿ ಕೊಲೆ ನಡೆದಿತ್ತು!

ಬೆಳಗಾವಿ: ₹ 20ಕ್ಕಾಗಿ ನಾಲ್ಕು ವರ್ಷದ ಬಾಲಕಿಯನ್ನು ಮಹಿಳೆಯೊಬ್ಬರು ಬಾವಿಗೆ ನೂಕಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಹೊರವಲಯದ ತೋಟದ ಬಳಿ ಇದೇ ವರ್ಷದ ಮೇ 13ರಂದು ನಡೆದಿತ್ತು. ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಕಬ್ಬು ಕಡಿಯುವ ತಂಡದ ಜತೆ ಪೋಷಕರೊಂದಿಗೆ ಬಾಲಕಿ ಬಂದಿದ್ದಳು. ಕಬ್ಬು ಕಟಾವು ಮುಗಿದು, ಊರಿಗೆ ವಾಪಸ್ ಹೊರಡುವ ವೇಳೆ ಕೋವಿಡ್–19 ಲಾಕ್‌ಡೌನ್‌ ಘೋಷಣೆಯಾಯಿತು. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣಕ್ಕೆ ಅವರು ಜಾಗನೂರು ಗ್ರಾಮದಲ್ಲೇ ಉಳಿದಿದ್ದರು. ಈ ವೇಳೆ ಅಂಗಡಿಗೆ ಸಾಮಗ್ರಿ ತರಲು ಹಣದೊಂದಿಗೆ ಹೋಗುತ್ತಿದ್ದ ಬಾಲಕಿಯನ್ನು ಮಹಿಳೆಯೊಬ್ಬರು ಬಾವಿಗೆ ತಳ್ಳಿದ್ದರು.

***

‘ಭದ್ರತೆ ಖಾತ್ರಿಯಾದ ಬಳಿಕವೇ ಅನುಮತಿ ನೀಡಿ’

- ಸದಾಶಿವ ಎಂ.ಎಸ್

ಕಾರವಾರ: ‘ಮಂಡ್ಯದ ಕಬ್ಬಿನ ಗದ್ದೆಯಲ್ಲಿ ನಡೆದ ರೀತಿಯ ಘಟನೆಗಳು ಹಳಿಯಾಳದಲ್ಲಿ ಈವರೆಗೆ ನಡೆದಿಲ್ಲ ಎಂಬ ಸಮಾಧಾನವಿದೆ. ಆದರೆ, ಇಲ್ಲಿನ ಕಾರ್ಮಿಕರಿಗೂ ಯಾವುದೇ ಸುರಕ್ಷತೆ ಇಲ್ಲದ ಕಾರಣ ಮುಂದೆ ಅಂತಹ ಕೃತ್ಯಗಳು ಆಗಲಾರದು ಎಂದು ಹೇಗೆ ಹೇಳಲು ಸಾಧ್ಯ?’

ಸಿ.ಐ.ಟಿ.ಯು ಮುಖಂಡ, ದಾಂಡೇಲಿಯ ಡಿ.ಸ್ಯಾಮ್ಸನ್ ಅವರ ಪ್ರಶ್ನೆಯಿದು. ‘ಕಾರ್ಮಿಕರ ಸುರಕ್ಷತೆಗೆ ಶೆಡ್ ಅಥವಾ ಗುಡಿಸಲಿನಂತಹ ಸೌಕರ್ಯವನ್ನು ಖಾತ್ರಿ ಪಡಿಸಿಕೊಂಡೇ ಕಬ್ಬು ಕಟಾವಿಗೆ ಅನುಮತಿ ನೀಡುವ ಪದ್ಧತಿ ಜಾರಿಗೆ ಬರಬೇಕು’ ಎನ್ನುವುದು ಅವರ ಒತ್ತಾಯ.‌

‘ಕಾರ್ಮಿಕರನ್ನು ಕರೆತರಲು ಲಕ್ಷಾಂತರ ರೂಪಾಯಿ ಹಣ ಪಡೆವ ಗುತ್ತಿಗೆದಾರರು, ಕಾರ್ಮಿಕರಿಗೆ ನೀಡುವ ವೇತನ, ಸೌಲಭ್ಯಗಳು ಮತ್ತು ರಕ್ಷಣೆ ನೀಡುವುದನ್ನು ಕಡ್ಡಾಯಗೊಳಿಸುವಂತಹ ನಿಯಮಗಳು ಬೇಕು’ ಎಂದು ಅವರು ಹೇಳುತ್ತಾರೆ. ‘ಕಬ್ಬು ಕಟಾವಿಗೆ ಬರುವ ಕಾರ್ಮಿಕರ ಬಗ್ಗೆ, ಗುತ್ತಿಗೆದಾರರು ಕನಿಷ್ಠ ಕಾಳಜಿಯನ್ನೂ ವಹಿಸುವುದಿಲ್ಲ. ಅಪಾಯಕ್ಕೆ ಒಡ್ಡಿಕೊಂಡಿರುವ ಕಾರ್ಮಿಕರ ರಕ್ಷಣೆ ಅಗತ್ಯ’ ಎಂದು ಆಗ್ರಹಿಸುತ್ತಾರೆ.

***

ಬೆನ್ನಿಗಂಟಿದ ಅಪಾಯ: ಅರಣ್ಯರೋದನವಾದ ಕಾರ್ಮಿಕರ ಸಂಕಷ್ಟ

- ಎಂ.ಎನ್‌.ಯೋಗೇಶ್‌‌

ಮಂಡ್ಯ: ಆ ಗಂಡ–ಹೆಂಡತಿಗೆ ದಿನಕ್ಕೆ 4 ಟನ್‌ ಕಬ್ಬು ಕಡಿಯಬೇಕು ಎಂಬ ಧಾವಂತ. ಗದ್ದೆಯಲ್ಲೇ ಆಟವಾಡಿಕೊಂಡಿದ್ದ ಮಗಳಿಗೆ ವಿಷಪೂರಿತ ಹಾವು ಕಚ್ಚಿ, ಸ್ಥಳದಲ್ಲೇ ಅಸುನೀಗಿರುವ ವಿಷಯ ಗೊತ್ತೇ ಇರಲಿಲ್ಲ. ಕೊನೆಗೆ, ಕಾರ್ಖಾನೆ ಸಿಬ್ಬಂದಿ ಆ ದಂಪತಿಗೆ ಕೇವಲ ₹ 30 ಸಾವಿರ ಕೊಟ್ಟು ಕೈತೊಳೆದುಕೊಂಡರು. ಆ ಘಟನೆ ನಡೆದಾಗ ಕಬ್ಬು ಕಡಿಯುವವರ ಕಷ್ಟವನ್ನು ಯಾರೂ ಕೇಳಲಿಲ್ಲ.

ಯುವಕನೊಬ್ಬ ಕಬ್ಬು ಕಡಿಯುವ ಭರದಲ್ಲಿ ತನ್ನ ಕೈಬೆರಳನ್ನೇ ಕತ್ತರಿಸಿಕೊಂಡಿದ್ದ. ಒಂದಷ್ಟು ಹಣ ಕೊಟ್ಟು ಸಾಗಹಾಕಿದ್ದು ಬಿಟ್ಟರೆ ಕಾರ್ಮಿಕರ ಸಂಕಷ್ಟ ಆಲಿಸಲಿಲ್ಲ.

ದಣಿದ ಜೀವಗಳು ಉಂಡು, ಮಲಗಿದಾಗ ಬಿರುಗಾಳಿ ಮಳೆಗೆ ಬೃಹತ್‌ ಮರವೊಂದು ಗುಡಿಸಲಿನ ಮೇಲೆ ಉರುಳಿ ಬಿದ್ದಿತ್ತು. ಕೊಂಬೆಗಳ ನಡುವೆ ಸಿಲುಕಿದವರಿಗೆ ಗಂಭೀರ ಗಾಯಗಳಾಗಿದ್ದವು. ಆಗಲೂ ಅವರ ಕಷ್ಟ ಯಾರಿಗೂ ಬೇಕಿರಲಿಲ್ಲ.

ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಬಳಿಯ ಹೊಲದಲ್ಲಿ ಭಾನುವಾರ ಕಬ್ಬು ಕಟಾವಿನಲ್ಲಿ ತೊಡಗಿದ್ದ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಮಾದಲಗಾಂವ್‌ನ ತಂಡ -–ಪ್ರಜಾವಾಣಿ ಚಿತ್ರ: ಇಂದ್ರಕುಮಾರ ದಸ್ತೇನವರ

ಮದ್ದೂರು ತಾಲ್ಲೂಕು ಹುರುಗಲವಾಡಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಡಿ.2ರಂದು 12 ವರ್ಷದ ಬಾಲಕಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ನಂತರ, ಕಬ್ಬು ಕಡಿಯಲು ಬರುವ ಕಾರ್ಮಿಕರ ಸಂಕಷ್ಟಗಳು ಪೊಲೀಸರಿಗೆ, ಅಧಿಕಾರಿಗಳಿಗೆ ಹಾಗೂ ಆಡಳಿತ ನಡೆಸುವವರಿಗೆ ತಿಳಿಯತೊಡಗಿವೆ.

ಆ ಘಟನೆ ನಂತರ, ಪೊಲೀಸರು ಕಬ್ಬಿನ ಗದ್ದೆಗೆ ತೆರಳಿ ‘ಕಾರ್ಮಿಕರ ಜನಗಣತಿ’ ಶುರುಮಾಡಿ, ಅವರಿಗೆ ಭದ್ರತೆ ಒದಗಿಸುವ ಮಾತನಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಆರೋಗ್ಯ ವಿಮೆ ಮಾಡಿಸಿಕೊಡಲು ಮುಂದಾಗಿದೆ. ಇದಕ್ಕಾಗಿ ಕಾರ್ಮಿಕ ಕುಟುಂಬಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಕ್ಕಳ, ಮಹಿಳಾ ಆಯೋಗದ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಇಂಥ ಬದಲಾವಣೆಗಾಗಿ ಒಂದು ಜೀವ ಹೋಗಬೇಕಾಯಿತಲ್ಲಾ..?

ಸಂಕಷ್ಟದಲ್ಲಿ ಕಾರ್ಮಿಕರ ಕುಟುಂಬಗಳು..

ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಈ ವರ್ಷ 10 ಸಾವಿರಕ್ಕೂ ಹೆಚ್ಚು ಕಬ್ಬು ಕಡಿಯುವ ಕಾರ್ಮಿಕರು ಬಂದಿದ್ದಾರೆ. ಅವರಲ್ಲಿ ಶೇ 80ರಷ್ಟು ಮಂದಿ ಬಳ್ಳಾರಿ ಜಿಲ್ಲೆಯ ತಾಂಡಾವಾಸಿಗಳು. ಇವರೆಲ್ಲ ನಿತ್ಯವೂ ಅಪಾಯದೊಂದಿಗೆ ಬದುಕುತ್ತಾರೆ. ನಾಲೆ, ಕೆರೆ, ಕಟ್ಟೆಗಳ ಪಕ್ಕದಲ್ಲೇ ಗುಡಿಸಲು ಹಾಕಿ ಜೀವನ ಮಾಡುತ್ತಾರೆ. ಹಾವು, ಚೇಳಿನಂತಹ ವಿಷಜಂತುಗಳಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳುವ ಭಯ ಒಂದೆಡೆಯಾದರೆ, ತಮ್ಮ ಜೊತೆ ಬಂದಿರುವ ಮಕ್ಕಳು, ಹೆಣ್ಣುಮಕ್ಕಳ ಮಾನ, ಜೀವನ ಕಾಪಾಡಿಕೊಳ್ಳುವ ಸವಾಲು ಇನ್ನೊಂದೆಡೆ. ಟೆಂಟ್‌ನಲ್ಲಿ ವಿದ್ಯುತ್‌ ಇಲ್ಲ. ಮಹಿಳೆಯರುಸ್ನಾನ ಮಾಡುವುದಕ್ಕೆ ಕತ್ತಲಾಗುವುದನ್ನೇ ಕಾಯುತ್ತಾರೆ. ಶೌಚಾಲಯದ್ದು ಮತ್ತೊಂದು ಕರುಣಾಜನಕ ಕಥೆ.

ಹಸಿವು ನೀಗಿಸಿಕೊಳ್ಳಲು ಬರುವ ಈ ಕಾರ್ಮಿಕರ ಗುಡಿಸಲಿಗೂ ಕನ್ನ ಹಾಕುವ ಸ್ಥಳೀಯ ದುಷ್ಕರ್ಮಿಗಳಿದ್ದಾರೆ. ಬೀಗ ಇಲ್ಲದ ಗುಡಿಸಲಿಗೆ ನುಗ್ಗಿ ಟ್ರಂಕ್‌ ಒಡೆದ ಪ್ರಕರಣಗಳಿಗೆ ಕೊರತೆ ಇಲ್ಲ. ‘ರಾತ್ರಿಯ ವೇಳೆ ಗುಡಿಸಲಿನ ಟಾರ್ಪಲ್‌ ಕೊಯ್ದು ಮೊಬೈಲ್ ಕಳ್ಳತನ ಮಾಡುತ್ತಾರೆ. ಪುಡಿಗಾಸು ಇಟ್ಟುಕೊಳ್ಳಲೂ ಭಯವಾಗುತ್ತದೆ’ ಎಂದು ಕಾರ್ಮಿಕ ನಾರಾಯಣ ನೋವು ವ್ಯಕ್ತಪಡಿಸಿದರು.

***
ಠಾಣಾವಾರು ಗಣತಿ

ಮಂಡ್ಯ ಜಿಲ್ಲೆಯಾದ್ಯಂತ ಪೊಲೀಸ್‌ಠಾಣೆವಾರು ಕಾರ್ಮಿಕರ ಗಣತಿ ಮಾಡಿ, ಪಟ್ಟಿ ಸಿದ್ಧಪಡಿಸಿ ಅದನ್ನು ಕಾರ್ಮಿಕ ಇಲಾಖೆ, ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗುತ್ತದೆ. ಕಬ್ಬು ಕಡಿಯುವವರು, ಆಲೆಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ

- ಕೆ.ಪರಶುರಾಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT