ಬುಧವಾರ, ಜೂನ್ 29, 2022
24 °C

ಆಳ-ಅಗಲ: ಉಕ್ರೇನ್ ಸಂಘರ್ಷ- ಜಗತ್ತಿಗೂ ಸಂಕಟ, ಭಾರತಕ್ಕೂ ಸಂಕಷ್ಟ ಹೇಗೆ?

ಜಯಸಿಂಹ ಆರ್., ಅಮೃತ್‌ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಉಕ್ರೇನ್‌ನಲ್ಲಿನ ದಶಕದ ಅವಧಿಯ ಆಂತರಿಕ ಕಲಹವು ಈಗ ಜಾಗತಿಕ ಸಂಘರ್ಷವಾಗುವ ಹಂತಕ್ಕೆ ಬಂದಿದೆ. ಉಕ್ರೇನ್ ಮೇಲೆ ದಾಳಿ ನಡೆಸಲು, ರಷ್ಯಾ ಲಕ್ಷಾಂತರ ಸೈನಿಕರನ್ನು ಗಡಿಯಲ್ಲಿ ಜಮೆ ಮಾಡಿದೆ. ಮತ್ತೊಂದೆಡೆ ನ್ಯಾಟೊ ಮತ್ತು ಅಮೆರಿಕದ ಪಡೆಗಳು ಉಕ್ರೇನ್‌ ರಕ್ಷಣೆಗೆ ಮುಂದಾಗಿವೆ. ವಿಶ್ವದ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಉಕ್ರೇನ್‌ನಲ್ಲಿ ನಡೆಯುವ ಯಾವುದೇ ಸಂಘರ್ಷವು ಭಾರತದ ಮೇಲೂ ಪರಿಣಾಮ ಬೀರುವ ಅಪಾಯವಿದೆ

ಯುದ್ಧದ ಭೀತಿಯಲ್ಲಿ ಉಕ್ರೇನ್‌

ಇರಾಕ್, ಸಿರಿಯಾ, ಅಫ್ಗಾನಿಸ್ತಾನದ ಬಳಿಕ ಜಗತ್ತು ಮತ್ತೊಂದು ಯುದ್ಧವನ್ನು ಕಾಣುವ ದಿನಗಳು ಹತ್ತಿರದಲ್ಲಿವೆ. ರಷ್ಯಾ ಹಾಗೂ ಉಕ್ರೇನ್ ನಡುವಿನ ದಶಕಗಳ ಅಂತಃಕಲಹ ಇದೀಗ ಪೂರ್ಣ ಸ್ವರೂಪದ ಯುದ್ಧವಾಗಿ ಮಾರ್ಪಾಡಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಉಕ್ರೇನ್ ಭವಿಷ್ಯದ ರಣರಂಗವಾಗುವ ಎಲ್ಲ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 

1991ರಲ್ಲಿ ಸೋವಿಯತ್ ಒಕ್ಕೂಟ ಪತನವಾದ ಬಳಿಕ, ತನ್ನ ಜೊತೆ ಗಡಿ ಹಂಚಿಕೊಂಡಿರುವ ಉಕ್ರೇನ್ ಮೇಲೆ ರಷ್ಯಾ ಕಣ್ಣಿಟ್ಟಿತ್ತು. 2014ರಲ್ಲಿ ಉಕ್ರೇನ್‌ನ ಭಾಗ ವಾಗಿದ್ದ ಕ್ರಿಮಿಯಾವನ್ನು ಸೇರ್ಪಡೆ ಮಾಡಿಕೊಂಡ ಬಳಿಕ, ರಷ್ಯಾ ಹಾಗೂ ಉಕ್ರೇನ್ ನಡುವಣ ಸಂಘರ್ಷವು ಕಾವು ಪಡೆಯಿತು. ಉಕ್ರೇನ್ ಪೂರ್ವಭಾಗದ ಕೆಲವು ಕೈಗಾರಿಕಾ ಪ್ರದೇಶಗಳನ್ನೂ ತನ್ನ ನಿಯಂತ್ರಣಕ್ಕೆ ತೆಗೆದು ಕೊಂಡಿತ್ತು. ಅಂದಿನಿಂದ ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಹಾಗೂ ಉಕ್ರೇನ್ ಸೇನೆಯ ನಡುವೆ ಗಡಿಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಲ್ಲಿಯವರೆಗೆ ಈ ಸಂಘರ್ಷದಲ್ಲಿ 14,000 ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

2014ರಲ್ಲಿ 298 ಜನರು ಪ್ರಯಾಣಿಸುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್ ವಿಮಾನವು ಉಕ್ರೇನ್ ವಾಯುಪ್ರದೇಶದಲ್ಲಿ ಪತನವಾದ ಬಳಿಕ ಇದು ಅಂತರರಾಷ್ಟ್ರೀಯ ಸಂಘರ್ಷವಾಗಿ ಮಾರ್ಪಾಡಾಯಿತು. ರಷ್ಯಾ ನಿರ್ಮಿತ ಕ್ಷಿಪಣಿಯಿಂದ ವಿಮಾನವನ್ನು ಹೊಡೆಯಲಾಗಿದೆ ಎಂದು ತನಿಖಾ ವರದಿ ತಿಳಿಸಿತ್ತು.

ರಷ್ಯಾ ಬೆಂಬಲಿತ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯನುಕೊವಿಚ್ ಅವರು ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸಷನ್) ಸಂಘಟನೆಗೆ ಉಕ್ರೇನ್ ಸೇರ್ಪಡೆ ಯಾಗಲು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಐರೋಪ್ಯ ಒಕ್ಕೂಟ ಇರಿಸಿದ್ದ ಪ್ರಸ್ತಾವವನ್ನು ಅವರು ತಿರಸ್ಕರಿಸಿದ್ದರು. ವಿಕ್ಟರ್ ನಿರ್ಧಾರವನ್ನು ವಿರೋಧಿಸಿ ಜನರು ಸಾಮೂಹಿಕವಾಗಿ ಪ್ರತಿಭಟನೆ ನಡೆಸಿದ್ದರು. ಇದರ ಫಲವಾಗಿ ವಿಕ್ಟರ್ ದೇಶದಿಂದ ಪಲಾಯನ ಮಾಡಬೇಕಾಯಿತು. 

ಅಮೆರಿಕ ಹಾಗೂ ಯುರೋಪ್‌ನ ಬಹುತೇಕ ದೇಶಗಳು ನ್ಯಾಟೊ ಸದಸ್ಯ ದೇಶಗಳಗಾಗಿವೆ. ಆದರೆ, ಉಕ್ರೇನ್ ಒಳಗೊಂಡಂತೆ ಪೂರ್ವ ಯುರೋಪ್‌ ಪ್ರದೇಶದಲ್ಲಿ ನ್ಯಾಟೊ ಅಸ್ತಿತ್ವವನ್ನು ರಷ್ಯಾ ವಿರೋಧಿಸುತ್ತಿದೆ. ಭವಿಷ್ಯದಲ್ಲಿ ರಷ್ಯಾದ ಆಕ್ರಮಣವನ್ನು ತಡೆಯುವ ಉದ್ದೇಶದಿಂದ ನ್ಯಾಟೊ ಸದಸ್ಯ ದೇಶಗಳಾದ ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಪೋಲೆಂಡ್‌ಗಳಲ್ಲಿ ಸೇನಾಪಡೆ ನಿಯೋಜಿಸಲು ನ್ಯಾಟೊ ತೀರ್ಮಾನಿಸಿತ್ತು. ಈ ಬೆಳವಣಿಗೆಗಳು ರಷ್ಯಾವನ್ನು ಕೆರಳಿಸಿದವು. 2014ರಿಂದ ಇಲ್ಲಿಯವರೆಗೆ ಉಕ್ರೇನ್‌ ಗುರಿಯಾಗಿಸಿ ರಷ್ಯಾ ನೂರಾರು ಸೈಬರ್ ದಾಳಿಗಳನ್ನು ನಡೆಸಿದೆ. 

2018ರಲ್ಲಿ ರಷ್ಯಾದ ಅಧಿಕಾರಿಗಳೂ ಸೇರಿದಂತೆ 21 ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತು. ಉಕ್ರೇನ್‌ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳ ಮಾರಾಟವನ್ನು ಅಮೆರಿಕ ಅನುಮೋದಿಸಿತು. ಇದು ಸಂಘರ್ಷ ಪ್ರಾರಂಭವಾದ ನಂತರದ ಮೊದಲ ಶಸ್ತ್ರಾಸ್ತ್ರ ಮಾರಾಟವಾಗಿದೆ. 2018ರಲ್ಲಿ ಉಕ್ರೇನ್ ದೇಶವು ನ್ಯಾಟೊ ಒಕ್ಕೂಟವನ್ನು ಸೇರಿತು. ಇದರ ಬೆನ್ನಲ್ಲೇ ಪಶ್ಚಿಮ ಉಕ್ರೇನ್‌ನಲ್ಲಿ ಬೃಹತ್ ಸೇನಾ ಕಸರತ್ತು ನಡೆಯಿತು. ಇವೆಲ್ಲವೂ ಸಂಘರ್ಷವನ್ನು ಹೆಚ್ಚಿಸಿದವು.

ಅವಕಾಶಗಳು ಹಾಗೂ ಆತಂಕಗಳು

ತನ್ನ ದೇಶದ ಭಾಷೆ ಹಾಗೂ ಸಂಸ್ಕತಿಯನ್ನು ಹಂಚಿಕೊಂಡಿರುವ ಭೂ ಭಾಗಗಳು ತನಗೆ ಸೇರಬೇಕು ಎಂಬುದು ರಷ್ಯಾದ ಪ್ರತಿಪಾದನೆ. ಉಕ್ರೇನ್‌ ಸಹಜವಾಗಿ ತನ್ನದು ಎನ್ನುವುದು ಪುಟಿನ್ ನಿಲುವು. ಪೂರ್ವ ಯುರೋಪ್‌ನಲ್ಲಿ ನ್ಯಾಟೊ ಅಸ್ತಿತ್ವದಿಂದ ತನ್ನ ಪ್ರಾದೇಶಿಕ ಭದ್ರತೆಗೆ ಅಪಾಯವಿದೆ ಎಂಬುದು ಪುಟಿನ್ ಅವರ ಆತಂಕ. ಇತ್ತೀಚೆಗೆ ಉಕ್ರೇನ್ ಸಹ ನ್ಯಾಟೊ ಸದಸ್ಯ ದೇಶವಾಗಿರುವುದು ಅವರನ್ನು ಕೆರಳಿಸಿದೆ. ರಷ್ಯಾ ಜೊತೆ ಗಡಿ ಹಂಚಿಕೊಂಡಿರುವ ಉಕ್ರೇನ್‌ನಲ್ಲಿ ನ್ಯಾಟೊ ಪಡೆಗಳು ಬೀಡುಬಿಟ್ಟರೆ, ಮುಂದೆ ರಷ್ಯಾಗೆ ಅಪಾಯವಾಗಲಿದೆ ಎಂಬುದು ಅವರ ಈ ಆತಂಕಕ್ಕೆ ಕಾರಣ. ಉಕ್ರೇನ್ ಅನ್ನು ತನ್ನ ಕಾರ್ಯತಂತ್ರದ ಪ್ರಮುಖ ಪಾಲುದಾರ ಎಂದು ಅಮೆರಿಕ ಭಾವಿಸಿರುವುದು ರಷ್ಯಾಗೆ ಇನ್ನಷ್ಟು ಭೀತಿ ಮೂಡಿಸಿದೆ. 

ರಷ್ಯಾದ ಅತಿಕ್ರಮಣ ಹುನ್ನಾರವನ್ನು ತಡೆಯುವುದು ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳ ಉದ್ದೇಶ. ಕ್ರಿಮಿಯಾ, ಜಾರ್ಜಿಯಾವನ್ನು ವಶಪಡಿಸಿಕೊಂಡಂತೆ, ಉಕ್ರೇನ್ ಅನ್ನೂ ರಷ್ಯಾ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಅದಕ್ಕೆ ಅವಕಾಶ ಮಾಡಿಕೊಡದಿರಲು ನ್ಯಾಟೊ ಸದಸ್ಯ ದೇಶಗಳು ನಿರ್ಧರಿಸಿವೆ. ರಷ್ಯಾದ ಮೇಲೆ ಸೇನಾ ಕಣ್ಗಾವಲು ಹಾಕಲು ಉಕ್ರೇನ್‌ನ ವಾಯುನೆಲೆ ಸಾಕಷ್ಟು ನೆರವಾಗುತ್ತವೆ. ಭವಿಷ್ಯದಲ್ಲಿ ರಷ್ಯಾ ಮೇಲೆ ಯುದ್ಧ ಎದುರಾದಲ್ಲಿ, ಉಕ್ರೇನ್ ಅನ್ನು ನೆಲೆಯಾಗಿಸಿಕೊಂಡು ದಾಳಿ ನಡೆಸಲು ಸುಲಭವಾಗುತ್ತದೆ ಎನ್ನಲಾಗಿದೆ. ಅಮೆರಿಕ ಹಾಗೂ ಯುರೋಪ್‌ನ ಮಾರುಕಟ್ಟೆ ವಿಸ್ತರಣೆಗೆ ಉಕ್ರೇನ್ ನೆರವಾಗಬಹುದು ಎಂಬುದು ಇನ್ನೊಂದು ಲೆಕ್ಕಾಚಾರ. 

ಉಕ್ರೇನ್ ದೇಶವು ಅತಿಹೆಚ್ಚಾದ ಫಲವತ್ತಾದ ಕೃಷಿ ಭೂಮಿಗೆ ಹೆಸರಾಗಿದೆ. ಹೀಗಾಗಿ ಉಕ್ರೇನ್‌ ಅನ್ನು ಯುರೋಪ್‌ನ ಅನ್ನದ ಬಟ್ಟಲು ಎಂದೇ ಕರೆಯಲಾಗುತ್ತದೆ. ಇಲ್ಲಿನ ಕಪ್ಪುಮಣ್ಣಿನಲ್ಲಿ ಬೆಳೆಯುವ ಸೂರ್ಯಕಾಂತಿ, ಸೋಯಾಬೀನ್ಸ್ ಹಾಗೂ ಎಣ್ಣೆಬೀಜಗಳು ಹೆಸರುವಾಸಿ. ಇವುಗಳ ರಫ್ತಿನಲ್ಲಿ ಉಕ್ರೇನ್ ಜಾಗತಿಕ ನಾಯಕ ಎನಿಸಿಕೊಂಡಿದೆ. ಕೃಷಿಯಿಂದ ಸಮೃದ್ಧವಾಗಿರುವ ಉಕ್ರೇನ್, ರಷ್ಯಾದ ಜೊತೆಗಿದ್ದರೆ ದೊಡ್ಡ ಬಲ ಎಂಬುದು ಅದರ ವಾದ. ಇಲ್ಲಿನ ಬಂದರುಗಳು ವ್ಯಾಪಾರ ವಹಿವಾಟಿಗೆ ಹೇಳಿಮಾಡಿಸಿದ ಜಾಗದಲ್ಲಿರುವುದೂ ಪ್ರಮುಖ ಅಂಶವಾಗಿದೆ.

ಭಾರತಕ್ಕೂ ಸಂಕಷ್ಟ

ಉಕ್ರೇನ್‌ನಲ್ಲಿನ ಆಂತರಿಕ ಸಂಘರ್ಷ ಮತ್ತು ಬೇರೆ ದೇಶಗಳ ಅತಿಕ್ರಮಣವು ಭಾರತದ ಮೇಲೂ ಭಾರಿ ಪರಿಣಾಮ ಬೀರುವ ಅಪಾಯವಿದೆ. ಭಾರತಕ್ಕೆ ಅತಿಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಸೇನಾ ಸಲಕರಣೆಗಳನ್ನು ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಉಕ್ರೇನ್‌ ಎರಡನೇ ಸ್ಥಾನದಲ್ಲಿದೆ. ಭಾರತೀಯ ಸೇನೆಯ ಮೂರೂ ಪಡೆಗಳು ಹಲವು ವಾಹನಗಳು, ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳಿಗಾಗಿ ಉಕ್ರೇನ್‌ ಅನ್ನು ಅವಲಂಬಿಸಿದೆ. ಉಕ್ರೇನ್‌ನಲ್ಲಿನ ಯಾವುದೇ ರೀತಿಯ ಸಂಘರ್ಷವು ಭಾರತದ ಈ ಅವಲಂಬನೆಯನ್ನು ಬಾಧಿಸುತ್ತದೆ. ಈ ಕಾರಣದಿಂದ ಉಕ್ರೇನ್‌ನಲ್ಲಿನ ಬೆಳವಣಿಗೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ.

1991ರಲ್ಲಿ ಸೋವಿಯತ್‌ ಒಕ್ಕೂಟದ ಪತನದ ಜತೆಗೆ ಉಕ್ರೇನ್ ಉದಯವಾಯಿತು. ಉಕ್ರೇನ್‌ ಅನ್ನು ಒಂದು ರಾಷ್ಟ್ರ ಎಂದು ಒಪ್ಪಿಕೊಂಡ ಮೊದಲ ದೇಶ ಭಾರತ. ಉಕ್ರೇನ್‌ನಲ್ಲಿ ರಾಯಭಾರ ಕಚೇರಿಯನ್ನು ಆರಂಭಿಸಿದ ಮೊದಲ ದೇಶವೂ ಭಾರತವೇ ಆಗಿದೆ. ಸೋವಿಯತ್‌ ಅವಧಿಯಿಂದಲೂ ಉಕ್ರೇನ್‌ನೊಂದಿಗೆ ಭಾರತವು ಉತ್ತಮ ಸಂಬಂಧ ಹೊಂದಿದೆ. ಸೋವಿಯತ್‌ ಪತನದ ನಂತರ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಇದಕ್ಕೆ, ಶಸ್ತ್ರಾಸ್ತ್ರಗಳು ಮತ್ತು ಸೇನಾ ಸಲಕರಣೆಗಳಿಗಾಗಿ ಉಕ್ರೇನ್‌ ಮೇಲಿನ ಅವಲಂಬನೆಯೇ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸೋವಿಯತ್‌ ರಷ್ಯಾದ ಎಕೆ 47 ಸರಣಿಯ ರೈಫಲ್‌ಗಳು ವಿಶ್ವದ ಹಲವು ಸೇನೆಗಳಲ್ಲಿ ಬಳಕೆಯಲ್ಲಿವೆ. ಇದಕ್ಕೆ ಭಾರತವೂ ಹೊರತಲ್ಲ. ಈ ರೈಫಲ್‌ ತಯಾರಿಕೆಯಲ್ಲಿ ಬಳಸುವ ಹಲವು ಬಿಡಿಭಾಗಗಳು, ಈ ರೈಫಲ್‌ನಲ್ಲಿ ಬಳಸುವ ಗುಂಡುಗಳ ತಯಾರಿಕೆಯಲ್ಲಿನ ಕಚ್ಚಾ ವಸ್ತುಗಳನ್ನು ಉಕ್ರೇನ್‌ ಪೂರೈಸಬೇಕು. ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಬಳಕೆಯಲ್ಲಿರುವ ಈ ರೈಫಲ್‌ಗಳ ನಿರ್ವಹಣೆ ಮತ್ತು ಮೇಲ್ದರ್ಜೆಗೆ ಏರಿಸುವ ಒಪ್ಪಂದಕ್ಕೆ 2021ರ ಫೆಬ್ರುವರಿ ಯಲ್ಲಿ ಭಾರತ ಮತ್ತು ಉಕ್ರೇನ್ ಸಹಿ ಹಾಕಿವೆ. ನಿರ್ವಹಣೆ ಮತ್ತು ಮೇಲ್ದರ್ಜೆಗೆ ಏರಿಸುವ ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಉಕ್ರೇನ್‌ನಲ್ಲಿ ಸಂಘರ್ಷ ತೀವ್ರವಾದರೆ ಈ ಕಾರ್ಯಕ್ಕೆ ತೊಡಕಾಗುತ್ತದೆ. ಚೀನಾ ಜತೆಗೆ ಗಡಿ ಸಂಘರ್ಷ ತೀವ್ರವಾಗಿರುವ ಈ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳು ಸನ್ನದ್ಧವಾಗಿ ಇಲ್ಲದೇ ಇರುವುದು ಅತ್ಯಂತ ಅಪಾಯಕಾರಿ ಸ್ಥಿತಿ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತವು ₹18,699 ಕೋಟಿ ವೆಚ್ಚದಲ್ಲಿ ರಷ್ಯಾದಿಂದ ಯುದ್ಧನೌಕೆಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಯುದ್ಧನೌಕೆಗಳಿಗೆ ಅಗತ್ಯವಿರುವ ಎಂಜಿನ್‌ಗಳನ್ನು ಉಕ್ರೇನ್ ಪೂರೈಸಿದೆ. ಇನ್ನೂ ಹಲವು ಎಂಜಿನ್‌ಗಳು ಪೂರೈಕೆಯಾಗಬೇಕಿವೆ. ಎಂಜಿನ್ ಪೂರೈಕೆಯಲ್ಲಿ ವ್ಯತ್ಯಯವಾದರೆ, ನೌಕೆ ನಿರ್ಮಾಣ ವಿಳಂಬವಾಗುತ್ತದೆ. ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯವನ್ನು ಮುರಿಯುವ ಉದ್ದೇಶದಿಂದ ಭಾರತವು ಯುದ್ಧನೌಕೆಗಳನ್ನು ಹೆಚ್ಚಿಸುವ ಯೋಜನೆ ಹಾಕಿಕೊಂಡಿದೆ. ಆ ಯೋಜನೆಯ ಭಾಗವಾಗಿರುವ ರಷ್ಯಾದ ಯುದ್ಧನೌಕೆಗಳ ಪೂರೈಕೆ ವಿಳಂಬವಾದರೆ, ಅದು ದೇಶದ ಭದ್ರತೆಗೆ ದೊಡ್ಡ ತೊಡಕಾಗಲಿದೆ. ಹೀಗಾಗಿ ಉಕ್ರೇನ್‌ನಲ್ಲಿ ಸಂಘರ್ಷ ತೀವ್ರವಾಗದಂತೆ ಎಚ್ಚರಿಕೆ ವಹಿಸುವ ಹೊಣೆ ಭಾರತದ ಮೇಲೂ ಇದೆ ಎಂದು ತಜ್ಞರು ಹೇಳಿದ್ದಾರೆ.

ಆದರೆ, ಉಕ್ರೇನ್‌ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತವು ಯಾವ ನಿಲುವನ್ನೂ ತೆಗೆದುಕೊಳ್ಳದ ಸ್ಥಿತಿಯಲ್ಲಿದೆ. ಉಕ್ರೇನ್‌ನಲ್ಲಿ ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳ ಮಧ್ಯೆ ಸಂಘರ್ಷ ನಡೆಯುವ ಸಾಧ್ಯತೆ ಇರುವ ಕಾರಣ, ಎರಡೂ ಬಣಗಳನ್ನು ಬೆಂಬಲಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಈ ಸಂಘರ್ಷದಲ್ಲಿ ರಷ್ಯಾವನ್ನು ಭಾರತ ಬೆಂಬಲಿಸಿದರೆ, ಅಮೆರಿಕದ ಕೆಂಗಣ್ಣಿಗೆ ಮತ್ತು ಆ ಮೂಲಕ ಆರ್ಥಿಕ ನಿರ್ಬಂಧಕ್ಕೆ ಗುರಿಯಾಗುವ ಅಪಾಯವಿದೆ. ಅದೇ ರೀತಿ ಅಮೆರಿಕವನ್ನು ಬೆಂಬಲಿಸಿದರೆ, ರಷ್ಯಾದ ಜತೆಗೆ ಭಾರತದ ಸಂಬಂಧ ಹಳಸುವ ಅಪಾಯವಿದೆ. ಹೀಗಾಗಿ ಈ ವಿಚಾರದಲ್ಲಿ ಭಾರತ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದು ಅತ್ಯಂತ ಮಹತ್ವದ ಅಂಶವಾಗಿದೆ. ಆದರೆ ಇದರಲ್ಲಿ ವಿಳಂಬ ಮಾಡುವುದೂ ಸರಿಯಲ್ಲ ಎಂದು ತಜ್ಞರು ಅಭಿಪ್ರಾಯ
ಪಟ್ಟಿದ್ದಾರೆ.

ಜಾಗತಿಕ ಪರಿಣಾಮಗಳು

ಉಕ್ರೇನ್‌ನಲ್ಲಿ ಸಂಘರ್ಷ ತೀವ್ರವಾದರೆ ಅದು ಜಾಗತಿಕ ಮಟ್ಟದಲ್ಲೂ ಭಾರಿ ಪರಿಣಾಮ ಬೀರುವ ಅಪಾಯಗಳಿವೆ ಎನ್ನಲಾಗಿದೆ. ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಮತ್ತು ರಷ್ಯಾದ ಸೇನೆಯು, ವಿಶ್ವದ ಹಲವೆಡೆ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಜತೆಗೆ ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡುತ್ತಿವೆ. ಅವುಗಳಲ್ಲಿ ಸಿರಿಯಾ ಮುಖ್ಯವಾದುದು. ಉಕ್ರೇನ್‌ನಲ್ಲಿನ ಸಂಘರ್ಷದಿಂದ ಈ ಕಾರ್ಯಾಚರಣೆಯಲ್ಲಿನ ಸಮನ್ವಯಕ್ಕೆ ಧಕ್ಕೆಯಾಗುವ ಅಪಾಯವಿದೆ. ಶಾಂತಿಪಾಲನಾ ಪಡೆಗಳಿಗೆ ಮದ್ದುಗುಂಡುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಅಪಾಯವೂ ಇದೆ ಎನ್ನಲಾಗಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆಧಾರ: ದಿ ಗಾರ್ಡಿಯನ್, ಬಿಬಿಸಿ, ರಾಯಿಟರ್ಸ್‌, ಎಎಫ್‌ಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು