ಸೋಮವಾರ, ಏಪ್ರಿಲ್ 6, 2020
19 °C
ಈಗಿರುವ 20 ವಾರಗಳಿಂದ 24 ವಾರಗಳಿಗೆ ಬದಲಿಸಲು ಕೇಂದ್ರ ಸಂಪುಟ ಒಪ್ಪಿಗೆ l ಬಜೆಟ್‌ ಅಧಿವೇಶನದಲ್ಲಿ ಮಸೂದೆ ಮಂಡನೆ

Explainer| ವೈದ್ಯಕೀಯ ಗರ್ಭಪಾತ ಅವಧಿಯ ಮಿತಿ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 ವರ್ಷಗಳಷ್ಟು ಹಳೆಯದಾದ ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿಗೆ ಕೇಂದ್ರ ಮುಂದಾಗಿದೆ. ಆರು ತಿಂಗಳು ಅಥವಾ 24 ವಾರದ ಗರ್ಭಾವಸ್ಥೆಯ ಮಹಿಳೆಯರು ಕಾನೂನಾತ್ಮಕವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಪ್ರಸ್ತಾವಿತ ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ. ಇದು ಅತ್ಯಾಚಾರ ಸಂತ್ರಸ್ತರಿಗೆ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ. ವೈದ್ಯಕೀಯ ವಿಜ್ಞಾನ ಪ್ರಗತಿ ಹೊಂದಿದ್ದು, ಮಹಿಳೆಯ ಸಂತಾನೋತ್ಪತ್ತಿಯ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದೂ ತಿಳಿಸಿದೆ. ದೇಶದ ಗರ್ಭಪಾತ ಕಾನೂನುಗಳ ಸುತ್ತ ಒಂದು ನೋಟ ಇಲ್ಲಿದೆ

ನವದೆಹಲಿ: ವೈದ್ಯಕೀಯ ಗರ್ಭಪಾತದ ಗರಿಷ್ಠ ಅವಧಿಯ ಮಿತಿಯನ್ನು ಈಗಿರುವ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 

‘ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಅಮೆಂಡ್‌ಮೆಂಟ್ ಬಿಲ್–2020’ ಮುಂಬರುವ ಅಧಿವೇಶನ
ದಲ್ಲಿ ಮಂಡನೆಯಾಗಲಿದೆ. ಈ ಮಸೂದೆಯ ಮೂಲಕ ‘1971ರ ವೈದ್ಯಕೀಯ ಗರ್ಭಪಾತ ಕಾಯ್ದೆ’ಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. 

ಮಸೂದೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ‘ಸಂಪುಟದ ಈ ತೀರ್ಮಾನವು ಸುರಕ್ಷಿತ ಗರ್ಭಪಾತ ಹಾಗೂ ಮಹಿಳೆಯರಿಗೆ ಸಂತಾನೋತ್ಪತ್ತಿಯ ಹಕ್ಕುಗಳನ್ನು ಖಚಿತಪಡಿಸುತ್ತದೆ’ ಎಂದು ಹೇಳಿದರು. ಸರ್ಕಾರದ ಈ ಕ್ರಮದಿಂದ ಗರ್ಭಾವಸ್ಥೆಯಲ್ಲಿ ಮರಣದ ಪ್ರಮಾಣವೂ ತಗ್ಗಲಿದೆ ಎಂದರು. 

‘ಗರ್ಭಪಾತದ ಗರಿಷ್ಠ ಅವಧಿಯನ್ನು 24 ವಾರಗಳಿಗೆ ವಿಸ್ತರಿಸಿರುವುದರಿಂದ ಅತ್ಯಾಚಾರ ಸಂತ್ರಸ್ತರು, ಅಂಗವಿಕಲ ಬಾಲಕಿಯರು ಮತ್ತು ಅಪ್ರಾಪ್ತ ವಯಸ್ಸಿನವರಿಗೆ ನೆರವಾಗಲಿದೆ. ಇವರಿಗೆ ತಾವು ಗರ್ಭ ಧರಿಸಿರುವ ವಿಷಯ ಆರಂಭದಲ್ಲಿ ತಿಳಿದಿರುವುದಿಲ್ಲ. ಸಾಕಷ್ಟು ಪ್ರಕರಣಗಳಲ್ಲಿ ಬಾಲಕಿಯರು ಗರ್ಭ ಧರಿಸಿರುವುದು ಐದನೇ ತಿಂಗಳವರೆಗೂ ಅರಿವಿಗೆ ಬಂದಿರುವುದಿಲ್ಲ. ವಿಷಯ ತಿಳಿದ ಬಳಿಕ ಕೋರ್ಟ್‌ ಮೊರೆ ಹೋಗುತ್ತಾರೆ. ಹೀಗಾಗಿ ಅವಧಿ ವಿಸ್ತರಣೆಯು ಪ್ರಗತಿಪರ ಸುಧಾರಣಾ ಕ್ರಮ’ ಎಂದು ಮಿತಿ ಏರಿಕೆಯನ್ನು ಸಮರ್ಥಿಸಿಕೊಂಡರು. 

20–24 ವಾರದೊಳಗಿನ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಲು ಒಬ್ಬ ಸರ್ಕಾರಿ ವೈದ್ಯ ಸೇರಿ ಇಬ್ಬರು ವೈದ್ಯರ ಅನುಮತಿ ಅಗತ್ಯ. ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯ ಹೆಸರು ಹಾಗೂ ಇತರೆ ಮಾಹಿತಿಗಳನ್ನು ಗೋಪ್ಯವಾಗಿ ಇಡಲಾಗುತ್ತದೆ ಎಂದು ತಿದ್ದುಪಡಿ ಮಸೂದೆ ಉಲ್ಲೇಖಿಸುತ್ತದೆ.

ಅತ್ಯಾಚಾರ ಸಂತ್ರಸ್ತೆಯರಿಗೆ ಹೆಚ್ಚು ಅನುಕೂಲ

ಈ ಮಸೂದೆ ಜಾರಿಯಾದರೆ ಅತ್ಯಾಚಾರ ಸಂಸತ್ರಸ್ತೆಯರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯರು ಗರ್ಭಾವಸ್ಥೆಯ 27ನೇ ವಾರದ ಒಳಗೆ ಗರ್ಭಪಾತ ಮಾಡಿಸಿಕೊಳ್ಳಬಹುದು ಮತ್ತು ಅತ್ಯಾಚಾರ ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸದೆ, ಗರ್ಭಪಾತಕ್ಕೆ ಅವಕಾಶ ನೀಡಬಹುದು ಎಂಬ ಅಂಶಗಳು 2018ರ ತಿದ್ದುಪಡಿ ಮಸೂದೆಯಲ್ಲಿ ಇದ್ದವು. ಸರ್ಕಾರವು ಈ ಅಂಶಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನು ಸಚಿವರ ಹೇಳಿಕೆ ಪುಷ್ಟೀಕರಿಸುತ್ತದೆ.

ಅತ್ಯಾಚಾರ ಪ್ರಕರಣಗಳಲ್ಲಿ ಎಷ್ಟೋ ಬಾರಿ, ಸಂತ್ರಸ್ತೆಯು ಗರ್ಭವತಿಯಾಗಿರುವುದು ಪತ್ತೆಯಾಗುವುದು ತಡವಾಗಿರುತ್ತದೆ. ಆಗ ಸಂತ್ರಸ್ತೆಯು ನ್ಯಾಯಾಲಯದ ಮೊರೆ ಹೋಗಿ, ಗರ್ಭಪಾತಕ್ಕೆ ಅನುಮತಿ ಕೋರಬೇಕಿತ್ತು. ಇಂತಹ ಹಲವು ಪ್ರಕರಣಗಳಲ್ಲಿ ರಾಜ್ಯ ಹೈಕೋರ್ಟ್‌ಗಳು, ಗರ್ಭಪಾತಕ್ಕೆ ಅನುಮತಿ ನಿರಾಕರಿಸಿವೆ. ಆಗ ಅತ್ಯಾಚಾರ ಸಂತ್ರಸ್ತರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿ, ಅನುಮತಿ ಪಡೆದ ಹಲವು ನಿದರ್ಶನಗಳಿವೆ.

ಈ ಹಿಂದೆ ಅತ್ಯಾಚಾರ ಸಂತ್ರಸ್ತೆಯೊಬ್ಬರಿಗೆ, ಗರ್ಭಾವಸ್ಥೆಯ 24ನೇ ವಾರದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಆದರೆ ಇದಕ್ಕೂ ಮುನ್ನ ವೈದ್ಯಕೀಯ ಮಂಡಳಿಯ ಸದಸ್ಯರು, ಗರ್ಭಪಾತದ ಅನಿವಾರ್ಯತೆಯನ್ನು ದೃಢಪಡಿಸಬೇಕು ಎಂದು ಹೇಳಿತ್ತು. ‘ಭ್ರೂಣದ ಆರೋಗ್ಯದಲ್ಲಿ ಸಮಸ್ಯೆ ಇದೆ. ಹೀಗಾಗಿ ಗರ್ಭಾವಸ್ಥೆ ಮುಂದುವರಿದರೆ, ಅತ್ಯಾಚಾರ ಸಂತ್ರಸ್ತೆಯ ಮಾನಸಿಕ ಆರೋಗ್ಯ ಹದಗೆಡುತ್ತದೆ. ಆಕೆಯ ಜೀವಕ್ಕೂ ಅಪಾಯವಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶ ನೀಡಬೇಕು’ ಎಂದು ಮಂಡಳಿಯು ಶಿಫಾರಸು ಮಾಡಿತ್ತು. ಮಂಡಳಿಯ ಶಿಫಾರಸಿನ ಆಧಾರದಲ್ಲಿ, 24ನೇ ವಾರದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು.

ಮತ್ತೊಂದು ಪ್ರಕರಣದಲ್ಲಿ ಗುಜರಾತ್‌ನ ಅತ್ಯಾಚಾರ ಸಂತ್ರಸ್ತೆಯಾದ 14 ವರ್ಷದ ಬಾಲಕಿ ಗರ್ಭವತಿಯಾಗಿದ್ದಳು. ಗರ್ಭವತಿಯಾಗಿರುವುದು ಪತ್ತೆಯಾಗುವಷ್ಟರಲ್ಲಿ 20 ವಾರಗಳು ಕಳೆದಿದ್ದವು. ಗರ್ಭಪಾತಕ್ಕೆ ಅನುಮತಿ ನೀಡಲು ಗುಜರಾತ್ ಹೈಕೋರ್ಟ್‌ ನಿರಾಕರಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಈ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್‌, ವೈದ್ಯಕೀಯ ಮಂಡಳಿಯ ಶಿಫಾರಸಿನ ಮೇರೆಗೆ ತೀರ್ಪು ನೀಡಿತ್ತು. ಗರ್ಭಪಾತಕ್ಕೆ ಅನುಮತಿ ದೊರೆತಾಗ ಅತ್ಯಾಚಾರ ಸಂತ್ರಸ್ತೆಯ ಗರ್ಭಾವಸ್ಥೆಯ ಅವಧಿ 25 ವಾರಗಳಾಗಿದ್ದವು.

ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ, ಈ ಕಾನೂನು ಪ್ರಕ್ರಿಯೆಗಳು ಇಲ್ಲವಾಗುತ್ತವೆ. ಅತ್ಯಾಚಾರ ಸಂತ್ರಸ್ತೆಯರು ನ್ಯಾಯಾಲಯದ ಮೊರೆ ಹೋಗದೆಯೇ, ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ದೊರೆಯಲಿದೆ. ಅತ್ಯಾಚಾರದಿಂದ ಗಾಸಿಗೊಂಡಿರುವ ಸಂತ್ರಸ್ತೆಯು, ಮತ್ತಷ್ಟು ಕಾನೂನು ಪ್ರಕ್ರಿಯೆಗಳ ಮೊರೆ ಹೋಗುವುದು ತಪ್ಪಲಿದೆ.

ತಿದ್ದುಪಡಿ ಮಸೂದೆ ಏನು ಹೇಳುತ್ತದೆ?

1971ರ ವೈದ್ಯಕೀಯ ಗರ್ಭಪಾತ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ 2018ರಲ್ಲಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ‘ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ–2018’ ಅನ್ನು ಮಂಡಿಸಿತ್ತು. ಆದರೆ, ಈ ಮಸೂದೆಗೆ ಲೋಕಸಭೆಯ ಅನುಮೋದನೆ ದೊರೆತಿರಲಿಲ್ಲ. ಈ ತಿದ್ದುಪಡಿ ಮಸೂದೆಯಲ್ಲೇ ಕೆಲವು ಬದಲಾವಣೆ ಮಾಡಿ, ಕರಡು ಮಸೂದೆಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ತಿಳಿಸಿತ್ತು. 2018ರ ಮಸೂದೆಗೂ, ಈಗ ಮಂಡಿಸಲಿರುವ ಮಸೂದೆಗೂ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದು ಮೂಲಗಳು ಹೇಳಿವೆ. ಆಗಿನ ಮಸೂದೆಯ ಅಂಶಗಳನ್ನೇ ನೂತನ ಮಸೂದೆಯಲ್ಲೂ ಉಳಿಸಿಕೊಳ್ಳಲಾಗಿದೆಯೇ ಎಂಬುದು ದೃಢಪಟ್ಟಿಲ್ಲ.

 

ಕಾನೂನುಗಳ ಹಾದಿ...

l ಗರ್ಭಾವಸ್ಥೆಯ 20 ವಾರಗಳ ಒಳಗೆ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂಬ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಬೇಕು

l ಅತ್ಯಾಚಾರ ಸಂತ್ರಸ್ತೆಯು ಗರ್ಭವತಿಯಾಗಿದ್ದರೆ, ಗರ್ಭಾವಸ್ಥೆಯ 27ನೇ ವಾರದವರೆಗೂ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದೆ (ಅತ್ಯಾಚಾರ ಸಂಸತ್ರಸ್ತೆಯು ವಯಸ್ಸನ್ನು ಪರಿಗಣಿಸದೆ)

l ತಾಯಿಯ ಜೀವ ಮತ್ತು ಭ್ರೂಣಕ್ಕೆ ಅಪಾಯವಿದೆ ಎಂದು ತಜ್ಞ ವೈದ್ಯರ ತಂಡವು ದೃಢಪಡಿಸಿದರೆ ಗರ್ಭಪಾತ ಮಾಡಿಸಿಕೊಳ್ಳಬಹುದು

l ಕೇಂದ್ರ ಸರ್ಕಾರದ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಗರ್ಭಪಾತ ನಡೆಸಬೇಕು

1860, ಅ.6: ಗರ್ಭಪಾತವನ್ನು ಅಪರಾಧ ಎಂದು ಭಾರತೀಯ ದಂಡ ಸಂಹಿತೆ ಸೆಕ್ಷನ್ 312 ಉಲ್ಲೇಖ

1966, ಡಿ. 30: ಗರ್ಭಪಾತ ಮತ್ತು ಸಂತಾನೋತ್ಪತ್ತಿ ಕಾನೂನುಗಳಿಗೆ ತಿದ್ದುಪಡಿ ಅಗತ್ಯ ಎಂದು ಶಾಂತಿಲಾಲ್ ಶಾ ಸಮಿತಿ ಶಿಫಾರಸು

1971, ಆ.10: ಗರ್ಭಪಾತವನ್ನು ಕಾನೂನಾತ್ಮಕಗೊಳಿಸುವ ವೈದ್ಯಕೀಯ ಗರ್ಭಪಾತ ಕಾಯ್ದೆ (ಎಂಟಿಪಿ) ಜಾರಿ

2002, ಡಿ.18: ಎಂಟಿಪಿ ಕಾಯ್ದೆಗೆ ತಿದ್ದುಪಡಿ; ಅನಧಿಕೃತ ಗರ್ಭಪಾತ ಪ್ರಕರಣಗಳಿಗೆ ಮೂಗುದಾರ ಹಾಕುವ ನಿಯಮ ಸೇರ್ಪಡೆ

2014, ಅ.29: ಗರ್ಭಪಾತದ ಗರಿಷ್ಠ ಮಿತಿಯನ್ನು 24 ವಾರಗಳಿಗೆ ವಿಸ್ತರಿಸಲು ರಾಷ್ಟ್ರೀಯ ಮಹಿಳಾ ಆಯೋಗ ಮಾಡಿದ ಶಿಫಾರಸು ಆಧರಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಂಟಿಪಿ ಕಾಯ್ದೆ ತಿದ್ದುಪಡಿ ಪ್ರಸ್ತಾವ

2014, ನ. 6: ಮಸೂದೆಯ ಕೆಲ ಅಂಶಗಳಿಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ (ಐಎಂಎ) ತೀವ್ರ ವಿರೋಧ

2017, ಆ.4: ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ಹೆಚ್ಚಿಸುವ ಪ್ರಸ್ತಾವದ ‘ಎಂಟಿಪಿ ತಿದ್ದುಪಡಿ ಮಸೂದೆ 2017’ ರಾಜ್ಯಸಭೆಯಲ್ಲಿ ಮಂಡನೆ

2018, ಜ.22: ಮಸೂದೆ ಲೋಕಸಭೆಯಲ್ಲಿ ಮಂಡನೆ. ಮಹಿಳೆಯು ಅತ್ಯಾಚಾರ ಸಂತ್ರಸ್ತೆಯಾಗಿದ್ದಲ್ಲಿ, ಗರ್ಭಪಾತದ ಗರಿಷ್ಠ ಅವಧಿಯನ್ನು 27 ವಾರಗಳಿಗೆ ವಿಸ್ತರಿಸುವ ಹೊಸ ಪ್ರಸ್ತಾವ ಸೇರ್ಪಡೆ

2018, ಡಿ.28: ‘ಮಹಿಳೆಯರ ಲೈಂಗಿಕತೆ, ಸಂತಾನೋತ್ಪತ್ತಿ ಹಾಗೂ ಮುಟ್ಟಿನ ಹಕ್ಕುಗಳ ಮಸೂದೆ’ ಮಂಡಿಸಿದ ಶಶಿ ತರೂರ್

2019, ಮೇ 29: ತಿದ್ದುಪಡಿ ಮಸೂದೆಯ ಸೆಕ್ಷನ್ 3 (2)(2) ಸಂವಿಧಾನದ 14 ಮತ್ತು 21ನೇ ಕಲಂಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

2019, ಮೇ 28: ತಾಯಿ ಅಥವಾ ಭ್ರೂಣದ ಆರೋಗ್ಯಕ್ಕೆ ಅಪಾಯ ಇದ್ದಲ್ಲಿ ಗರ್ಭಪಾದ ಅವಧಿಯನ್ನು 4–6 ವಾರ ವಿಸ್ತರಿಸುವಂತೆ ಕೋರಿದ್ದ ಅರ್ಜಿ ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್

2019, ಏ.24: ಗರ್ಭಪಾತದ ಗರಿಷ್ಠ ಅವಧಿ ವಿಸ್ತರಣೆ ಸಂಬಂಧ ತುರ್ತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

2019, ಆ.2: ತಿದ್ದುಪಡಿ ಮಸೂದೆಯನ್ನು ಅಂತರ್ ಸಚಿವಾಲಯ ಚರ್ಚೆಗೆ ಕಳುಹಿಸಲಾಗಿದೆ ಎಂದು ಕೇಂದ್ರದಿಂದ ಅಫಿಡವಿಟ್ ಸಲ್ಲಿಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು