ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಆಧಾರ್‌ ದತ್ತಾಂಶ ರಕ್ಷಣೆ ಮತ್ತೆ ಮೂಡಿದೆ ದಿಗಿಲು

Last Updated 31 ಮೇ 2022, 5:19 IST
ಅಕ್ಷರ ಗಾತ್ರ

ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಆಧಾರ್‌ ಪ್ರತಿಯನ್ನು ಹಂಚಿಕೊಳ್ಳುವ ವಿಚಾರದಲ್ಲಿ ಎರಡೇ ದಿನದಲ್ಲಿ ನಿಲುವು ಬದಲಾಯಿಸಿಕೊಂಡು ಸುದ್ದಿಯಲ್ಲಿದೆ. ಆಧಾರ್‌ ಪ‍್ರತಿಯನ್ನು ಎಲ್ಲ ಸಂಸ್ಥೆಗಳಿಗೆ ನೀಡಬೇಡಿ, ಅದು ದುರುಪಯೋಗವಾಗುವ ಅಪಾಯ ಇದೆ ಎಂದು ಯುಐಡಿಎಐ ಶುಕ್ರವಾರ ಎಚ್ಚರಿಸಿತ್ತು. ಆದರೆ, ಈ ಎಚ್ಚರಿಕೆಯನ್ನು ಯುಐಡಿಎಐ ಭಾನುವಾರ ಹಿಂದಕ್ಕೆ ಪಡೆದಿದೆ. ಮೊದಲು ನೀಡಿದ್ದ ಎಚ್ಚರಿಕೆಯು ತ‍ಪ್ಪು ಗ್ರಹಿಕೆಗೆ ಕಾರಣವಾಗಬಹುದು ಎಂಬುದು ಎಚ್ಚರಿಕೆಯನ್ನು ಹಿಂದಕ್ಕೆ ಪಡೆಯಲು ಕಾರಣ ಎಂದು ಹೇಳಿದೆ.

ಯುಐಡಿಎಐನ ಕ್ರಮವು ಆಧಾರ್‌ ದತ್ತಾಂಶದ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಭಾರತದಲ್ಲಿ ಸಶಕ್ತ ಮತ್ತು ಪರಿಣಾಮಕಾರಿಯಾದ ವೈಯಕ್ತಿಕ ದತ್ತಾಂಶ ರಕ್ಷಣಾ ವ್ಯವಸ್ಥೆಯಾಗಲಿ ಕಾಯ್ದೆಯಾಗಲಿ ಇಲ್ಲ. ಹಾಗಿದ್ದರೂ ದೇಶದ ಬಹುತೇಕ ಎಲ್ಲ ಜನರ ದತ್ತಾಂಶವನ್ನು ಯುಐಡಿಎಐ ಸಂಗ್ರಹಿಸಿದೆ. ದತ್ತಾಂಶದ ಸುರಕ್ಷತೆಯ ಕುರಿತು ಆಧಾರ್‌ ಅನುಷ್ಠಾನಗೊಳ್ಳುವ ಮೊದಲೇ ದೇಶದಲ್ಲಿಭಾರಿ ಚರ್ಚೆ ನಡೆದಿತ್ತು. ಖಾಸಗಿತನದ ಹಕ್ಕಿನ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದರು.

ಆದಾಯ ತೆರಿಗೆ ಇಲಾಖೆಯ ಕಾಯಂ ಖಾತೆ ಸಂಖ್ಯೆಯ (ಪ್ಯಾನ್‌) ಜತೆಗೆ ಆಧಾರ್‌ ಸಂಖ್ಯೆಯ ಜೋಡಣೆ ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್‌ ಖಾತೆ, ದೂರವಾಣಿ ಸಂಖ್ಯೆಯ ಜತೆಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವವನ್ನೂ ಸರ್ಕಾರ ಹೊಂದಿತ್ತು. ಆದರೆ, ಇದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಮತದಾರರ ಗುರುತು ಚೀಟಿಯ ಜತೆಗೆ ಆಧಾರ್‌ ಜೋಡಣೆಯ ಬಗೆಗಿನ ಚರ್ಚೆ ಈಗ ಕಾವು ಪಡೆದುಕೊಂಡಿದೆ.

ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸುವುದರಿಂದ ಹಿಡಿದು ಪ್ರತಿಯೊಂದಕ್ಕೂ ಆಧಾರ್‌ ಪ್ರತಿಯನ್ನು ಕೇಳುವ ಪರಿಪಾಟ ಇದೆ. ಪೇಮೆಂಟ್ಸ್‌ ಬ್ಯಾಂಕ್‌ಗಳಿಗೂ ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆವೈಸಿ) ದಾಖಲೆಯಾಗಿ ಆಧಾರ್‌ ಅನ್ನು ಕೇಳಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮತ್ತು ಪ್ಯಾನ್‌ಗೆ ಮಾತ್ರ ಆಧಾರ್‌ ಕಡ್ಡಾಯ. ಗುರುತಿನ ದಾಖಲೆಯಾಗಿ ಇತರೆಡೆಯೂ ಆಧಾರ್‌ ನೀಡಬಹುದು. ಆಧಾರ್‌ ದತ್ತಾಂಶ ಅತ್ಯಂತ ಸುರಕ್ಷಿತ ಎಂದು ಯುಎಡಿಎಐ ಹೇಳಿಕೊಂಡು ಬಂದಿದೆ. ಆದರೆ, ಶುಕ್ರವಾರದ ಎಚ್ಚರಿಕೆಯು ಜನರಲ್ಲಿ ಕಳವಳ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆತಂಕ ತೋಡಿಕೊಂಡಿದ್ದಾರೆ.

‘ಆಧಾರ್‌ ದತ್ತಾಂಶದ ಬಹುದೊಡ್ಡ ಕಳ್ಳತನ ನಡೆದಿರುವ ಕಾರಣಕ್ಕೆ ಸರ್ಕಾರ ಎಚ್ಚರಿಕೆ ನೀಡಿರಬೇಕು. ಸರ್ಕಾರವು ತನ್ನ ಅತ್ಯಂತ ದೊಡ್ಡ ಮತ್ತು ಅತ್ಯಂತ ನೆಚ್ಚಿನ ಯೋಜನೆಯ ಬಗ್ಗೆ ಇಂತಹ ಎಚ್ಚರಿಕೆ ನೀಡುವುದನ್ನು ಊಹಿಸಿಕೊಳ್ಳಲೇ ಆಗದು’ ಎಂದು ಆರ್‌. ಬಾಲಕೃಷ್ಣನ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

‘ಪ್ರತಿಯೊಂದು ಸೇವೆಗೂ ಆಧಾರ್‌ ಅನ್ನು ಕಡ್ಡಾಯ ಮಾಡಿದ ಬಳಿಕ, ಯಾವುದೇ ಸಂಸ್ಥೆಯ ಜತೆಗೆ ಆಧಾರ್ ಪ್ರತಿ ಹಂಚಿಕೊಳ್ಳಬೇಡಿ, ಅದು ದುರುಪ‍ಯೋಗ ಆಗಬಹುದು ಎಂದು ಸರ್ಕಾರ ಹೇಳಿದೆ. ನಂದನ್ ನಿಲೇಕಣಿ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ’ ಎಂದು ಸಮೀರ್‌ ರಾಯ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

‘ಹೋಟೆಲ್‌ ರಿಸೆಪ್ಶನ್‌ನಿಂದ ಹಿಡಿದು ಆಸ್ಪತ್ರೆವರೆಗೆ ಎಲ್ಲರೂ ಆಧಾರ್‌ ಕೇಳುತ್ತಿದ್ದಾಗ ಯುಐಡಿಎಐ ನಿದ್ದೆ ಮಾಡುತ್ತಿತ್ತು. ಕಾರ್ಡ್‌ನ ಭದ್ರತೆಯ ವಿಚಾರದಲ್ಲಿ ಬಹುದೊಡ್ಡ ರಾಜಿ ಮಾಡಿಕೊಳ್ಳಲಾಗಿದೆ ಮತ್ತು ಕಾರ್ಡ್‌ ಈಗ ನಿರುಪಯುಕ್ತ ಎಂಬುದನ್ನು ಒಪ್ಪಿಕೊಳ್ಳಬೇಕು’ ಎಂದು ಮಿಹಿರಾ ಸೂದ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

ದತ್ತಾಂಶ ರಕ್ಷಣೆ ವ್ಯವಸ್ಥೆಯೇ ಇಲ್ಲ

ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ–2019 ಅನ್ನು ಲೋಕಸಭೆಯಲ್ಲಿ 2019ರ ಡಿಸೆಂಬರ್‌ನಲ್ಲಿ ಮಂಡಿಸಲಾಗಿದೆ. ಪೌರರ ವೈಯಕ್ತಿಕ ದತ್ತಾಂಶಗಳಿಗೆ ರಕ್ಷಣೆ ಕೊಡುವುದು ಮತ್ತು ದತ್ತಾಂಶ ರಕ್ಷಣಾ ಪ್ರಾಧಿಕಾರ ರಚಿಸುವುದು ಮಸೂದೆಯಲ್ಲಿದ್ದ ಮುಖ್ಯ ವಿಚಾರಗಳು. ಪರಿಶೀಲನೆಗೆ ಒಳಪಡಿಸುವುದಕ್ಕಾಗಿ ಮಸೂದೆಯನ್ನು ‍ಪಿ.ಪಿ.ಚೌಧರಿ ನೇತೃತ್ವದ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) 2019ರ ಡಿಸೆಂಬರ್‌ನಲ್ಲಿ ಒಪ್ಪಿಸಲಾಯಿತು. ಎರಡು ವರ್ಷಗಳ ವಿಸ್ತೃತ ಚರ್ಚೆಯ ಬಳಿಕ ಸಮಿತಿಯು 2021ರ ಡಿಸೆಂಬರ್‌ 16ರಂದು ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದೆ.ಜಂಟಿ ಸಂಸದೀಯ ಸಮಿತಿಯು ಹಲವು ಶಿಫಾರಸುಗಳನ್ನು ಮಾಡಿದೆ.

ಮಸೂದೆಯ ವ್ಯಾಪ್ತಿಯು ವಿಸ್ತಾರವಾಗಿದೆ. ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ದತ್ತಾಂಶ ರಕ್ಷಣೆಯೂ ಈ ಮಸೂದೆಯ ವ್ಯಾಪ್ತಿಯಲ್ಲಿಯೇ ಬರುವುದರಿಂದ ಮಸೂದೆಯ ಹೆಸರನ್ನು ‘ದತ್ತಾಂಶ ರಕ್ಷಣೆ ಮಸೂದೆ’ ಎಂದು ಬದಲಾಯಿಸಬೇಕು ಎಂಬುದು ಸಮಿತಿಯ ಶಿಫಾರಸುಗಳಲ್ಲಿ ಒಂದಾಗಿದೆ.

ಅಧಿಸೂಚನೆಯ ಬಳಿಕ, ಕಾಯ್ದೆಯ ಅನುಷ್ಠಾನಕ್ಕೆ ಕಾಲಮಿತಿಯನ್ನು ಹಾಕಿಕೊಂಡಿಲ್ಲ ಎಂಬುದನ್ನು ಸಮಿತಿಯು ಗುರುತಿಸಿದೆ. ಕಾಯ್ದೆಯನ್ನು ಹಂತ ಹಂತವಾಗಿ ಜಾರಿಗೆ ತರಬೇಕು. ಕಾಯ್ದೆಯ ವಿವಿಧ ಅಂಶಗಳ ಅನುಷ್ಠಾನ ಆತುರಾತುರವಾಗಿ ಆಗಬಾರದು. ಹಾಗಂತ, ಅತ್ಯಂತ ದೀರ್ಘ ಸಮಯವನ್ನೂ ತೆಗೆದುಕೊಳ್ಳಬಾರದು ಎಂಬುದು ಸಮಿತಿಯ ಶಿಫಾರಸುಗಳಲ್ಲಿ ಒಂದು.

ಆದರೆ, ಸಮಿತಿಯ ವರದಿ ಸಲ್ಲಿಕೆಯಾಗಿ ಐದು ತಿಂಗಳು ಕಳೆದರೂ ಮಸೂದೆಯನ್ನು ಅಂಗೀಕರಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬದಲಿಗೆ, ಈ ಮಸೂದೆಯನ್ನೇ ಕೈ ಬಿಟ್ಟು ಹೊಸ ಮಸೂದೆ ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಮಸೂದೆಯು ಭಾರತದ ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಕ್ಕೆ ಹಾನಿಕಾರಕ ಆಗಬಹುದು ಎಂಬುದು ಮಸೂದೆಯನ್ನು ಕೈಬಿಡುವ ಚಿಂತನೆಗೆ ಕಾರಣ ಎನ್ನಲಾಗಿದೆ.

‘ಇದು ಜೆಪಿಸಿ ಕರಡು ಮಸೂದೆ ಆಗಿರುವುದರಿಂದ ಅದನ್ನು ಸಂಪೂರ್ಣವಾಗಿ ಬದಲಾಯಿಸಲು ಅವಕಾಶ ಇಲ್ಲ. ಹಾಗಾಗಿ, ಈಗಿನ ವಾಸ್ತವಕ್ಕೆ ಅನುಗುಣವಾಗಿ ಹೊಸ ಮಸೂದೆ ರೂಪಿಸುವುದೇ ಸೂಕ್ತ’ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.

ಹಾಗಾಗಿ, ದತ್ತಾಂಶ ರಕ್ಷಣಾ ಮಸೂದೆ ಸದ್ಯಕ್ಕೆ ಜಾರಿಗೆ ಬರುವ ಸಾಧ್ಯತೆ ಇಲ್ಲ.

ದತ್ತಾಂಶ ರಕ್ಷಣೆ ತೊಡಕು

ಬಯೊಮೆಟ್ರಿಕ್ ಸೇರಿದಂತೆ ಆಧಾರ್ ಕಾರ್ಡ್‌ದಾರರ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸಲು 2016ರ ಆಧಾರ್ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. 2018ರಲ್ಲಿ ಅದಕ್ಕೆ ಕೆಲವೊಂದು ತಿದ್ದುಪಡಿಗಳನ್ನೂ ತರಲಾಗಿದೆ. ಆದರೆ, ಕಾಯ್ದೆಯಲ್ಲಿ ಖಾಸಗಿತನವನ್ನು ರಕ್ಷಿಸಬಲ್ಲ ಅಂಶಗಳ ಕೊರತೆಯಿದೆ ಎಂಬ ಆರೋಪವಿದೆ.ಆಧಾರ್ ಮೂಲಕ ಸಂಗ್ರಹಿಸಲಾದ ಬಯೊಮೆಟ್ರಿಕ್ ದತ್ತಾಂಶಗಳ ಸುರಕ್ಷತೆ ಹಾಗೂ ಖಾಸಗಿತನ ಉಲ್ಲಂಘನೆ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದ್ದರೂ, ಆಧಾರ್ ಕಾಯ್ದೆಯನ್ನು 2016ರಲ್ಲಿ ಜಾರಿಗೆ ತರಲಾಗಿತ್ತು. ಆದರೆ ಇದಕ್ಕೂ ಮುನ್ನ ಜಾರಿಗೆ ಬಂದ ಮಾಹಿತಿ ತಂತ್ರಜ್ಞಾನ (ಐಟಿ)ಕಾಯ್ದೆ–2000ದಲ್ಲಿರುವ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ಕೆಲವು ನಿಯಮಗಳು ಮತ್ತು ಆಧಾರ್ ಕಾಯ್ದೆಯ ನಿಯಮಗಳ ನಡುವೆ ವಿರೋಧಾಭಾಸವಿದೆ.

ಐಟಿ ಕಾಯ್ದೆಯ 5(4)ನೇ ನಿಯಮದ ಪ್ರಕಾರ, ಯಾವ ಉದ್ದೇಶಕ್ಕೆ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಲಾಗಿದೆಯೋ, ಆ ಉದ್ದೇಶ ಈಡೇರುವ ಸಮಯದವರೆಗೆ ಮಾತ್ರ ಅದನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ ಆಧಾರ್ ಕಾಯ್ದೆಯು ಈ ವಿಚಾರದಲ್ಲಿ ಮೌನ ವಹಿಸಿದೆ. ಸಂಸ್ಥೆಗಳು ಎಷ್ಟು ದಿನಗಳವರೆಗೆ ವೈಯಕ್ತಿಕ ಮಾಹಿತಿಗಳನ್ನು ಇಟ್ಟುಕೊಳ್ಳಬಹುದು ಎಂಬುದನ್ನು ಕಾಯ್ದೆಯಲ್ಲಿ ಉಲ್ಲೇಖಿಸಿಲ್ಲ. ಸಂಗ್ರಹಿಸಲಾದ ದತ್ತಾಂಶವನ್ನು ಉದ್ದೇಶ ಈಡೇರಿದ ಬಳಿಕ ನಾಶಪಡಿಸಬೇಕು ಎಂದು ಐಟಿ ಕಾಯ್ದೆ ಹೇಳುತ್ತದೆ. ಆದರೆ ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಿದ ಈ ಮಾಹಿತಿಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು.

ಆಧಾರ್ ಬಳಕೆದಾರರ ಮಾಹಿತಿಯನ್ನು ಬಳಸಿಕೊಳ್ಳಲು ಇಚ್ಛಿಸುವ ಕಂಪನಿಯು ಹೆಸರು, ವಿಳಾಸ, ಉದ್ದೇಶವನ್ನು ನೀಡಬೇಕು ಎಂದು ಐಟಿ ಕಾಯ್ದೆಯ ನಿಯಮ 5(3) ಉಲ್ಲೇಖಿಸುತ್ತದೆ. ಆದರೆ ಆಧಾರ್ ಕಾಯ್ದೆಯು ಈ ಬಗ್ಗೆ ಮೌನವಾಗಿದೆ.ಕಾನೂನುಬದ್ಧ ಉದ್ದೇಶಕ್ಕೆ ಹಾಗೂ ಉದ್ದೇಶದ ಈಡೇರಿಕೆಗೆ ಅತ್ಯಗತ್ಯ ಎಂದಾದಲ್ಲಿ ಮಾತ್ರವೇ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಲು ಐಟಿ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಆದರೆ ಆಧಾರ್ ಕಾಯ್ದೆಯ 3(1) ನಿಯಮವು, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಬಯೊಮೆಟ್ರಿಕ್ ಮಾಹಿತಿಯನ್ನು ನೀಡಿ ಆಧಾರ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ತಿಳಿಸುತ್ತದೆ.

ಯಾವ ಉದ್ದೇಶಕ್ಕೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂಬ ವಿಚಾರವನ್ನು ಸಂಬಂಧಪಟ್ಟವರಿಗೆ ಬರಹ ಅಥವಾ ಫ್ಯಾಕ್ಸ್ ಮೂಲಕ ನೀಡಬೇಕು ಎಂದು ಐಟಿ ಕಾಯ್ದೆ ಪ್ರತಿಪಾದಿಸುತ್ತದೆ. ಆದರೆ ಸಂಬಂಧಿಸಿದ ವ್ಯಕ್ತಿಗೆ ಸಂಸ್ಥೆಯು ಮಾಹಿತಿ ನೀಡಬೇಕು ಎಂದುಆಧಾರ್ ಕಾಯ್ದೆಯ ಸೆಕ್ಷನ್ 8 ಹೇಳುತ್ತದಾದರೂ, ಅದು ಬರಹ ಅಥವಾ ಇನ್ನಾವ ಸ್ವರೂಪದಲ್ಲಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ.

ವ್ಯಕ್ತಿಗಳಿಂದ ಸಂಗ್ರಹಿಸಿದ ಖಾಸಗಿ ಮಾಹಿತಿಯನ್ನು ನಿರ್ವಹಣೆ ಮಾಡುವಲ್ಲಿ ಸಂಸ್ಥೆಯು ವಿಫಲವಾದರೆ ಅಥವಾ ಮಾಹಿತಿಯನ್ನು ಸೋರಿಕೆ ಮಾಡಿದರೆ, ಐದು ಕೋಟಿ ರೂಪಾಯಿಗೆ ಮೀರದಂತೆ ದಂಡ ವಿಧಿಸಬಹುದು ಎಂದು ಐಟಿ ಕಾಯ್ದೆ ಹೇಳುತ್ತದೆ. ಆಧಾರ್ ಕಾಯ್ದೆಯಲ್ಲಿ ದಂಡ ವಿಧಿಸುವ ಹಾಗೂ ಶಿಕ್ಷೆ ವಿಧಿಸುವ ಬಗ್ಗೆ ಉಲ್ಲೇಖವಿದೆ. ಆದರೆ, ವ್ಯಕ್ತಿಗೆ ಆಗಿರುವ ಹಾನಿಯ ಪ್ರಮಾಣದ ಬಗ್ಗೆ ಆಧಾರ್ ಕಾಯ್ದೆ ಮಾತನಾಡುವುದಿಲ್ಲ.

ಐಟಿ ಕಾಯ್ದೆಯ ಪ್ರಕಾರ, ಯಾವ ಉದ್ದೇಶಕ್ಕೆ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆಯೋ, ಅದೇ ಉದ್ದೇಶಕ್ಕೆ ಮಾತ್ರ ದತ್ತಾಂಶಗಳನ್ನು ಬಳಸಿಕೊಳ್ಳಬೇಕು. ಆದರೆ ಆಧಾರ್ ಕಾಯ್ದೆಯ 57ನೇಸೆಕ್ಷನ್‌ನಲ್ಲಿ ಈ ನಿಯಮ ಉಲ್ಲಂಘನೆಯಾಗಿತ್ತು. ಆಧಾರ್‌ನಡಿ ಸಂಗ್ರಹಿಸಿದ ವೈಯಕ್ತಿಕ ದತ್ತಾಂಶಗಳನ್ನು ಸರ್ಕಾರ ಅಥವಾ ಇತರರು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಿದ್ದ ಈ ಸೆಕ್ಷನ್ ಅನ್ನು ನಂತರ ಕೈಬಿಡಲಾಗಿದೆ.

ಇ–ಕೆವೈಸಿಯಲ್ಲಿ ಆಧಾರ್ ದುರ್ಬಳಕೆ?

ಆಧಾರ್ ಮಾಹಿತಿಯು ಇ–ಕೆವೈಸಿ ಹೆಸರಿನಲ್ಲಿ ದುರ್ಬಳಕೆಯಾದ ಕೆಲವು ನಿದರ್ಶನಗಳು ಇವೆ. 2017ರಲ್ಲಿಏರ್‌ಟೆಲ್ ದೂರಸಂಪರ್ಕ ಕಂಪನಿಯು 31 ಲಕ್ಷ ಗ್ರಾಹಕರ ₹190 ಕೋಟಿ ಎಲ್‌ಪಿಜಿ ಸಬ್ಸಿಡಿ ಹಣವನ್ನು ಏರ್‌ಟೆಲ್ ಪೇಮೆಂಟ್ಸ್‌ ಬ್ಯಾಂಕ್‌ಗೆ ವರ್ಗಾಯಿಸಿತ್ತು. ಗ್ರಾಹಕರ ಬ್ಯಾಂಕ್ ಖಾತೆಗೆ ಹೋಗಬೇಕಾದ ಹಣವು, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ಗೆ ಹೋಗಿದ್ದು ಗ್ರಾಹಕರಲ್ಲಿ ಅಚ್ಚರಿ ಮೂಡಿಸಿತ್ತು. ಏರ್‌ಟೆಲ್ ಸಿಮ್ ಬಳಕೆದಾರರ ಆಧಾರ್ ಮಾಹಿತಿಯನ್ನು ಕೆವೈಸಿ ಮೂಲಕ ಸಂಗ್ರಹಿಸಿದ್ದ ಸಂಸ್ಥೆಯು, ಗ್ರಾಹಕರ ಗಮನಕ್ಕೆ ತಾರದೇ, ಅವರ ಹೆಸರಿನಲ್ಲಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಖಾತೆ ತೆರೆದಿತ್ತು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ, ಏರ್‌ಟೆಲ್ ಪೇಮೆಂಟ್ಸ್‌ ಬ್ಯಾಂಕ್‌ಗೆ ನೀಡಿದ್ದ ಇ–ಕೆವೈಸಿ ಪರವಾನಗಿಯನ್ನು ಯುಐಡಿಎಐ ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಜೊತೆಗೆ ₹2.5 ಕೋಟಿ ದಂಡವನ್ನೂ ವಿಧಿಸಿತ್ತು.

ಮತದಾರರ ಪಟ್ಟಿಯಲ್ಲಿ ಹೆಸರು ಕಣ್ಮರೆ

ಆಧಾರ್ ಜೊತೆ ಮತದಾರರ ಗುರುತಿನ ಚೀಟಿಗಳನ್ನು ಸಂಯೋಜಿಸುವ ವಿಚಾರವು, ಆಧಾರ್ ಬಳಕೆದಾರರ ದತ್ತಾಂಶ ಸೋರಿಕೆ ಬಗ್ಗೆ ಆತಂಕ ಹುಟ್ಟುಹಾಕಿತ್ತು. 2015ರಲ್ಲಿ ದೇಶದಾದ್ಯಂತ ಸುಮಾರು 30 ಕೋಟಿ ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಜೊತೆ ಸಂಯೋಜಿಸಲಾಗಿತ್ತು. 2018ರಲ್ಲಿ ಚುನಾವಣೆಯಲ್ಲಿ ಇದರ ಪರಿಣಾಮ ಕಂಡುಬಂದಿತ್ತು. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸುಮಾರು 55 ಲಕ್ಷ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿತ್ತಾದರೂ, ಆಧಾರ್ ದತ್ತಾಂಶವನ್ನು ಜೋಡಣೆ ಮಾಡಿದ್ದರಿಂದ ಹೀಗಾಗಿದೆ ಎಂದು ಆರೋಪಿಸಲಾಗಿತ್ತು.

ಯಾವುದಕ್ಕೆ ಆಧಾರ್ ಕಡ್ಡಾಯ?

ಗರೀಬ್ ಕಲ್ಯಾಣ್, ಸಬ್ಸಿಡಿ ರೂಪದಲ್ಲಿ ಆಹಾರ ಧಾನ್ಯ ಪಡೆಯಲು, ಬೆಳೆ ವಿಮೆ ಸೇರಿದಂತೆ ಸರ್ಕಾರದ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಲಾಭ ಪಡೆದುಕೊಳ್ಳುವ ಫಲಾನುಭವಿಗಳಿಗೆ ಆಧಾರ್ ಗುರುತಿನ ಪತ್ರವನ್ನು ಕಡ್ಡಾಯ ಮಾಡಲಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್‌ಗೆ ಆಧಾರ್ ಜೊತೆ ಜೋಡಿಸಬೇಕು ಎಂಬ ನಿಯಮ ಮಾಡಲಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಡ್ಡಾಯವಲ್ಲ. ಖಾಸಗಿ ಕಂಪನಿಗಳು, ಶಾಲಾ ದಾಖಲಾತಿ, ಪ್ರವೇಶ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯ ಅಲ್ಲ.

ಆಧಾರ: ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆ 2019 ಕುರಿತ ಜಂಟಿ ಸಂಸದೀಯ ಸಮಿತಿ ವರದಿ, ಆಧಾರ್ ಕಾಯ್ದೆ 2016, ಐಟಿ ಕಾಯ್ದೆ 2000, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT