ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ‘ಕೊಲ್ಲುವ ಪರವಾನಗಿ’ ವಿರುದ್ಧ ಮತ್ತೆ ಕೂಗು

ಸೇನೆಗೆ ವಿಶೇಷಾಧಿಕಾರ ನೀಡುವ ಕಾಯ್ದೆ ರದ್ದತಿಗೆ ಆಗ್ರಹ
Last Updated 6 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ವಾಪಸ್ ಪಡೆಯಬೇಕು ಎಂಬ ಕೂಗು,ನಾಗಾಲ್ಯಾಂಡ್‌ನಲ್ಲಿ ಸೈನಿಕರ ಗುಂಡಿಗೆ 14 ನಾಗರಿಕರು ಬಲಿಯಾದ ನಂತರ ಮತ್ತೆ ಮುನ್ನೆಲೆಗೆ ಬಂದಿದೆ. ಸೇನೆಗೆ ವಿಶೇಷಾಧಿಕಾರವನ್ನು ನೀಡುವ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958’ ಅನ್ನು (ಆಫ್‌ಸ್ಪ) ರದ್ದುಪಡಿಸಬೇಕು ಎಂದು ನಾಗಾಲ್ಯಾಂಡ್‌, ಮಣಿಪುರದ ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ. ಆಫ್‌ಸ್ಪ ರದ್ದುಗೊಳಿಸಿ ಎಂದು ಈಶಾನ್ಯ ಭಾರತದ ರಾಜ್ಯಗಳ ಜನರು ಮತ್ತೆ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.

1958ರ ಮೇನಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಸೇನೆಗೆ ವಿಶೇಷಾಧಿಕಾರ ನೀಡಲಾಗಿತ್ತು. ನಂತರದ ಕೆಲವೇ ತಿಂಗಳಲ್ಲಿ ಸಂಸತ್ತಿನಲ್ಲಿ ಸಂಬಂಧಿತ ಮಸೂದೆಯನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು. ಕಾಯ್ದೆ ತರುತ್ತಿರುವುದರ ಕಾರಣ ಮತ್ತು ಅಗತ್ಯವನ್ನು ಕಾಯ್ದೆಯ ಪೀಠಿಕೆಯಲ್ಲಿ ವಿವರಿಸಲಾಗಿದೆ.

‘ಈಶಾನ್ಯ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗಲಭೆ ಮತ್ತು ಹಿಂಸಾಚಾರವು ಸಾಮಾನ್ಯ ಎಂಬಂತಾಗಿದೆ. ಅಲ್ಲಿನ ರಾಜ್ಯಗಳ ಆಡಳಿತ ಯಂತ್ರಗಳು ಈ ಆಂತರಿಕ ಪ್ರಕ್ಷುಬ್ಧ ಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಹೀಗಾಗಿ ಪ್ರಕ್ಷುಬ್ಧ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸೇನೆಯ ಅಧಿಕಾರಿಗಳಿಗೆ ಈ ಕಾಯ್ದೆಯ 4ನೇ ಸೆಕ್ಷನ್‌ ಅಡಿ ವಿಶೇಷ ಅಧಿಕಾರವನ್ನು ನೀಡಲಾಗುತ್ತದೆ. ಸೇನೆಯ ಅಧಿಕಾರಿಗಳಿಗೆ ವಿಶೇಷ ಅಧಿಕಾರದ ಜತೆಗೆ ನೀಡಲಾಗಿರುವ ನಿಬಂಧನೆಗಳನ್ನು ಕಾಯ್ದೆಯ 5ನೇ ಸೆಕ್ಷನ್‌ ಅಡಿ ವಿವರಿಸಲಾಗಿದೆ’ ಎಂದು ಆಫ್‌ಸ್ಪ ಕಾಯ್ದೆಯ ಪೀಠಿಕೆಯಲ್ಲಿ ವಿವರಿಸಲಾಗಿದೆ.

ಈ ಕಾಯ್ದೆಯನ್ನು ಜಾರಿಗೆ ತಂದಾಗ ಅಸ್ಸಾಂ ಮತ್ತು ಮಣಿಪುರವನ್ನು ಮಾತ್ರ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾಗಿತ್ತು. ನಂತರದ ವರ್ಷಗಳಲ್ಲಿ ಈಶಾನ್ಯ ಭಾರತದ ಎಲ್ಲಾ ರಾಜ್ಯಗಳನ್ನು ಹಂತಹಂತವಾಗಿ, ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾಗಿತ್ತು. ಈಚಿನ ವರ್ಷಗಳಲ್ಲಿ ಕೆಲವು ರಾಜ್ಯಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ವಿಶೇಷಾಧಿಕಾರ

ಸಶಸ್ತ್ರ ಪಡೆಯ ತುಕಡಿಗಳ ಮುಖ್ಯಸ್ಥ ಅಥವಾ ವಾರಂಟ್ ಅಧಿಕಾರಿ ಅಥವಾ ತುಕಡಿ ಮುಖ್ಯಸ್ಥನ ಅಧೀನ ಅಧಿಕಾರಿ ಅಥವಾ ಅದೇ ರ‍್ಯಾಂಕ್‌ನ ಬೇರೆ ಅಧಿಕಾರಿಗಳಿಗೆ, ಈ ಅಧಿಕಾರಗಳು ಅನ್ವಯವಾಗುತ್ತದೆ.

1. ಈ ಕಾಯ್ದೆ ಅಡಿ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾದ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಅಗತ್ಯ ಎನಿಸಿದರೆ ಸೇನಾಧಿಕಾರಿ ಅಥವಾ ಸೈನಿಕರು ಎಚ್ಚರಿಕೆ ನೀಡಿ, ನಂತರ ಗುಂಡು ಹಾರಿಸಬಹುದು. ಗುಂಡು ಹಾರಿಸಿದ್ದರ ಪರಿಣಾಮ ಸಾವು ಸಂಭವಿಸುವ ಸಾಧ್ಯತೆ ಇದ್ದರೂ, ಗುಂಡು ಹಾರಿಸಬಹುದು. ಘೋಷಿತ ಪ್ರದೇಶದಲ್ಲಿನ ಯಾವುದೇ ವ್ಯಕ್ತಿಯು ಕಾನೂನನ್ನು ಉಲ್ಲಂಘಿಸಿದಾಗ ಅಥವಾ ಆ ಕ್ಷಣದಲ್ಲಿ ಜಾರಿಯಲ್ಲಿರುವ ಆದೇಶವನ್ನು ಉಲ್ಲಂಘಿಸಿದಾಗ ಇದು ಅನ್ವಯವಾಗುತ್ತದೆ. ಶಸ್ತ್ರಗಳನ್ನು ಸಾಗಿಸುವಾಗ ಅಥವಾ ಶಸ್ತ್ರಾಸ್ತ್ರವಾಗಿ ಬಳಸಬಹುದಾದ ವಸ್ತುಗಳನ್ನು ಸಾಗಿಸುವಾಗ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸುವಾಗಲೂ ಈ ಅಧಿಕಾರ ಅನ್ವಯವಾಗುತ್ತದೆ

2. ಮೇಲ್ನೋಟಕ್ಕೆ ಅಪರಾಧ ಎಂದು ಕಾಣಿಸುವ ಕೃತ್ಯ ಎಸಗಿರುವ ಅಥವಾ ಅಂತಹ ಕೃತ್ಯ ಎಸಗಿದ್ದಾನೆ ಎಂಬ ಶಂಕಿತ ವ್ಯಕ್ತಿಯನ್ನು ವಾರಂಟ್‌ ಇಲ್ಲದೆ ಬಂಧಿಸಬಹುದು. ಒಬ್ಬ ವ್ಯಕ್ತಿಯು ಇಂತಹ ಕೃತ್ಯ ಎಸಗಲಿದ್ದಾನೆ ಎಂಬ ಸೂಚನೆ ಸಿಕ್ಕಾಗಲೂ ಆ ವ್ಯಕ್ತಿಯನ್ನು ವಾರಂಟ್‌ ಇಲ್ಲದೆ ಬಂಧಿಸಬಹುದು. ಬಂಧನದ ವೇಳೆ ಅಗತ್ಯವಿದ್ದರೆ ಬಲವನ್ನು ಪ್ರಯೋಗಿಸಬಹುದು

3. ತಲೆಮರೆಸಿಕೊಂಡ ವ್ಯಕ್ತಿಯನ್ನು ಹುಡುಕಲು ಅಥವಾ ಕಳ್ಳತನ ಮಾಡಲಾದ ಸ್ವತ್ತನ್ನು ವಶಪಡಿಸಿಕೊಳ್ಳಲು ಅಥವಾ ಕಾನೂನುಬಾಹಿರವಾಗಿ ಇರಿಸಿಕೊಳ್ಳಲಾದ ಶಸ್ತ್ರ, ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲು ಸೇನಾಧಿಕಾರಿಗಳು ಯಾವುದೇ ಸ್ಥಿರಾಸ್ತಿಯನ್ನು ವಾರಂಟ್‌ ಇಲ್ಲದೆ ಪ್ರವೇಶಿಸಬಹುದು ಮತ್ತು ಅಲ್ಲಿ ಶೋಧಕಾರ್ಯ ನಡೆಸಬಹುದು. ಇಂತಹ ಕಾರ್ಯಾಚರಣೆ ವೇಳೆ ಅಗತ್ಯಬಿದ್ದರೆ ಬಲವನ್ನು ಪ್ರಯೋಗಿಸಬಹುದು

ಏನು ಮಾಡಿದರೂ ಕ್ರಮ ತೆಗೆದುಕೊಳ್ಳುವಂತಿಲ್ಲ

ಈ ಕಾಯ್ದೆಯ ಅಡಿ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾದ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಾಗ ಸೇನೆಯ ಯಾವುದೇ ರ‍್ಯಾಂಕ್‌ನ ಅಧಿಕಾರಿಗಳು ನಡೆಸುವ, ಯಾವುದೇ ಕೃತ್ಯದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದನ್ನು ಈ ಕಾಯ್ದೆಯು ನಿರ್ಬಂಧಿಸುತ್ತದೆ. ‘ಈ ಕಾಯ್ದೆ ಅಡಿ ನೀಡಲಾದ ಅಧಿಕಾರವನ್ನು ಚಲಾಯಿಸುವಾಗ ಸೇನೆಯ ಯಾವುದೇ ವ್ಯಕ್ತಿಯು ಎಸಗುವ ಯಾವುದೇ ಕೃತ್ಯದ ವಿರುದ್ಧ ವಿಚಾರಣೆ, ಪ್ರಕರಣ, ಕಾನೂನು ಪ್ರಕ್ರಿಯೆ ಆರಂಭಿಸಬಾರದು’ ಎಂದು ಕಾಯ್ದೆಯ 6ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

‘ಈ ಕಾಯ್ದೆ ಅಡಿ ಸೇನಾಧಿಕಾರಿಗಳು ತಾವು ಬಂಧಿಸಿದ ವ್ಯಕ್ತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣವೇ ಹಸ್ತಾಂತರಿಸಬೇಕು’ ಎಂದು ಈ ಕಾಯ್ದೆಯ 5ನೇ ಸೆಕ್ಸನ್‌ನಲ್ಲಿ ವಿವರಿಸಲಾಗಿದೆ.

ತಕರಾರು ಮತ್ತು ಸೇನೆಯ ಸಮರ್ಥನೆ

ಈ ಕಾಯ್ದೆಯ ಅಡಿ ನೀಡಲಾಗಿರುವ ವಿಶೇಷಾಧಿಕಾರವನ್ನು ‘ಕೊಲ್ಲುವ ಪರವಾನಗಿ’ ಎಂದು ಈಶಾನ್ಯ ಭಾರತದ ಜನರು ಕರೆಯುತ್ತಾರೆ. ‘ಈ ಕಾಯ್ದೆ ಅಡಿ ಕಾರ್ಯನಿರ್ವಹಿಸುವ ಸೈನಿಕರು, ಸೇನಾಧಿಕಾರಿಗಳು ಎಸಗುವ ಯಾವುದೇ ಕೃತ್ಯಕ್ಕೂ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸೈನಿಕರು ಇಲ್ಲಿ ಮನಬಂದಂತೆ ವರ್ತಿಸುತ್ತಾರೆ. ಅಮಾಯಕರನ್ನು ಕೊಲ್ಲುತ್ತಾರೆ. ಅತ್ಯಾಚಾರ ಎಸಗುತ್ತಾರೆ. ಹೀಗೆ ಈ ಕಾಯ್ದೆ ದುರ್ಬಳಕೆಯಾಗುತ್ತಿದೆ. ಹೀಗಾಗಿ ಕಾಯ್ದೆಯನ್ನು ವಾಪಸ್ ಪಡೆಯಬೇಕು’ ಎಂಬುದು ಈಶಾನ್ಯ ಭಾರತದ ರಾಜ್ಯಗಳ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಜನರ ಆಗ್ರಹ. ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಮಣಿಪುರದ ಇರೋಮ್ ಶರ್ಮಿಳಾ ಚಾನು ಅವರು16 ವರ್ಷ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಕಾಯ್ದೆಯ ವಿರುದ್ಧ ಆಗಾಗ ಹೋರಾಟಗಳು ನಡೆಯುತ್ತಲೇ ಇವೆ.

ಸೇನೆಗೆ ಈ ವಿಶೇಷ ಅಧಿಕಾರದ ಅಗತ್ಯವಿದೆ ಎಂದು ಸೇನೆಯು ಹಲವು ಬಾರಿ ಸಮರ್ಥಿಸಿಕೊಂಡಿದೆ. ಭಾನುವಾರವೂ ಸಹ, ‘ಈ ರಾಜ್ಯಗಳಲ್ಲಿ, ಗಡಿಯಾಚೆಯಿಂದ ಬೆಂಬಲ ಹೊಂದಿರುವ ಉಗ್ರರು ಸೃಷ್ಟಿಸುವ ಸನ್ನಿವೇಶಗಳನ್ನು ಎದುರಿಸಲು ವಿಶೇಷ ಅಧಿಕಾರ ಸೇನೆಗೆ ಬೇಕೇಬೇಕು’ ಎಂದು ಸೇನೆಯು ಹೇಳಿತ್ತು.

ಈಶಾನ್ಯ ರಾಜ್ಯಗಳಲ್ಲಿ ಆಫ್‌ಸ್ಪ ಹೆಜ್ಜೆಗುರುತು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958 ಈಶಾನ್ಯ ಭಾಗದಲ್ಲಿ ಅಸ್ತಿತ್ವದಲ್ಲಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂ ರಾಜ್ಯಗಳು ಇದರ ವ್ಯಾಪ್ತಿಯಲ್ಲಿವೆ. ಅರುಣಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಕೇಂದ್ರೀಯ ಪಡೆಗಳು ಕಣ್ಗಾವಲು ಇಟ್ಟಿವೆ. ತ್ರಿಪುರಾ ಮತ್ತು ಮೇಘಾಲಯದಲ್ಲಿ ಇದನ್ನು ವಾಪಸ್ ಪಡೆಯಲಾಗಿದೆ

ಮೇಘಾಲಯ

*ಮೇಘಾಲಯವನ್ನು ಸಂಪೂರ್ಣವಾಗಿ ಆಫ್‌ಸ್ಪ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ2018ರ ಏಪ್ರಿಲ್‌ನಲ್ಲಿ ಘೋಷಿಸಿತ್ತು

*ಮೇಘಾಲಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹತೋಟಿಯಲ್ಲಿದೆ ಎಂಬ ಕಾರಣಕ್ಕೆ ಕಾಯ್ದೆಯನ್ನು ವಾಪಸ್‌ ಪಡೆಯಲಾಗಿದೆ

*ಉಲ್ಫಾ ಮೊದಲಾದ ಅಸ್ಸಾಂ ಮೂಲದ ಬಂಡುಕೋರ ಸಂಘಟನೆಗಳ ಉಪಟಳ ಹೆಚ್ಚಿದ್ದರಿಂದ 1991ರಲ್ಲಿ ರಾಜ್ಯದಲ್ಲಿ ಆಫ್‌ಸ್ಪಾ ತರಲಾಗಿತ್ತು

ತ್ರಿಪುರಾ

*ನ್ಯಾಷನಲ್ ಲಿಬರೇಷನ್ ಫ್ರಂಟ್‌ನಿಂದ ಅಪಹರಣ ಹಾಗೂ ಹತ್ಯೆಗಳು ನಿರಂತರವಾಗಿ ನಡೆದಿದ್ದರಿಂದ 1997ರ ಫೆಬ್ರುವರಿಯಲ್ಲಿ ತ್ರಿಪುರಾ ರಾಜ್ಯದ ಮೇಲೆ ಆಫ್‌ಸ್ಪ ಹೇರಲಾಗಿತ್ತು

*ಆರಂಭದಲ್ಲಿ 42 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೇಂದ್ರೀಯ ಪಡೆಗಳು ಕಣ್ಗಾವಲು ಹಾಕಿದ್ದವು. ಬಳಿಕ 26 ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಇಳಿಸಲಾಗಿತ್ತು

*18 ವರ್ಷಗಳ ಬಳಿಕ,2015ರಲ್ಲಿ ಕಾಯ್ದೆ ವಾಪಸ್ ಪಡೆಯಲಾಯಿತು

ಅರುಣಾಚಲ ಪ್ರದೇಶ

*ಚಾಂಗ್‌ಲಾಂಗ್, ಲಾಂಗ್‌ಡಿಂಗ್ ಮತ್ತು ತಿರಪ್ ಜಿಲ್ಲೆಗಳಲ್ಲಿ ಕಾಯ್ದೆಯನ್ನು ಆರು ತಿಂಗಳವರೆಗೆ ವಿಸ್ತರಿಸಿ 2021ರ ಅಕ್ಟೋಬರ್ 1ರಂದು ಆದೇಶ ಹೊರಡಿಸಲಾಗಿತ್ತು. 2022ರ ಮಾರ್ಚ್ 31ರವರೆಗೆ ಇದು ಜಾರಿಯಲ್ಲಿರಲಿದೆ

*1991ರಲ್ಲಿ ಕಾಯ್ದೆಯನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದ್ದ ಕೇಂದ್ರದ ನಿರ್ಧಾರ ಖಂಡಿಸಿ ಪ್ರತಿಭಟನೆಗಳು ನಡೆದಿದ್ದರಿಂದ, ಕಾಯ್ದೆಯ ವ್ಯಾಪ್ತಿಯನ್ನು ಮೂರು ಜಿಲ್ಲೆಗಳಿಗೆ ಸೀಮಿತ ಮಾಡಲಾಗಿತ್ತು

*ಈ ಭಾಗಗಳಲ್ಲಿ ಬಂಡುಕೋರರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಕಾರಣವನ್ನು ಕೇಂದ್ರ ಸರ್ಕಾರ ನೀಡಿದೆ‌. ನ್ಯಾಷನಲ್‌ ಡೆಮಾಕ್ರಾಟಿಕ್ ಫ್ರಂಟ್‌ ಆಫ್ ಬೊರೊಲ್ಯಾಂಡ್, ಉಲ್ಫಾ, ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಸಂಘಟನೆಗಳು ಈ ಭಾಗದಲ್ಲಿ ಸಕ್ರಿಯವಾಗಿವೆ

*ಲೋಹಿತ್ ಜಿಲ್ಲೆಯ ಸನ್‌ಪುರ ಪೊಲೀಸ್ ಠಾಣೆ, ದಿಬಾಂಗ್ ಜಿಲ್ಲೆಯ ರೋಯಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಈ ಭಾಗದಲ್ಲಿ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ

ನಾಗಾಲ್ಯಾಂಡ್

*ನಾಗಾಲ್ಯಾಂಡ್‌ನಲ್ಲಿ 2021ರ ಡಿಸೆಂಬರ್ 31ರವರೆಗೂ ಆಫ್‌ಸ್ಪ ಅಸ್ತಿತ್ವದಲ್ಲಿದೆ. ಆರು ತಿಂಗಳ ಅವಧಿಗೆ ಇದನ್ನು ವಿಸ್ತರಿಸಲಾಗಿತ್ತು

*1963ರಲ್ಲಿ ನಾಗಾಲ್ಯಾಂಡ್‌ ರಾಜ್ಯ ಅಸ್ತಿತ್ವಕ್ಕೆ ಬರುವ ಮುನ್ನ, ಅಸ್ಸಾಂಗೆ ಒಳಪಟ್ಟಿದ್ದ ನಾಗಾ ಹಿಲ್ಸ್‌ ವ್ಯಾಪ್ತಿಯಲ್ಲಿಈ ಕಾಯ್ದೆ ಜಾರಿಯಲ್ಲಿತ್ತು

*ನಾಗಾ ಬಂಡುಕೋರರಿಂದ ಎದುರಾಗಿದ್ದ ಚಟುವಟಿಕೆಗಳನ್ನು ನಿಗ್ರಹಿಸಲು ಸಶಸ್ತ್ರಪಡೆಗಳನ್ನು ನಿಯೋಜಿಸಲಾಗಿತ್ತು

*2015ರಲ್ಲಿ ಕೇಂದ್ರ ಸರ್ಕಾರದ ಜೊತೆ ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ ನಡುವೆ (ಎನ್‌ಎಸ್‌ಸಿಎನ್) ಒಪ್ಪಂದವಾಗಿತ್ತು. ಆದರೆ ಎನ್‌ಎಸ್‌ಸಿಎನ್–ಐಎಂ ಸಂಘಟನೆಯ ಮುಖ್ಯಸ್ಥ ಟಿ.ಮುಯಿವಾಹ್ ಅವರು ನಾಗಾಲ್ಯಾಂಡ್‌ಗೆ ಪ್ರತ್ಯೇಕ ಸಂವಿಧಾನ ಮತ್ತು ಧ್ವಜ ಬೇಕು ಎಂಬ ಬೇಡಿಕೆಯಿಟ್ಟಿದ್ದರಿಂದ ಸಂಘರ್ಷ ಮುಂದುವರಿದಿದೆ

ಅಸ್ಸಾಂ

*1958ರಲ್ಲಿ ಆಫ್‌ಸ್ಪ ಕಾಯ್ದೆಯನ್ನು ಅಸ್ಸಾಂನಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಗಿತ್ತು.ಉಲ್ಫಾ, ಎನ್‌ಡಿಎಫ್‌ಬಿ ಮೊದಲಾದ ಸಂಘಟನೆಗಳು ಬಂಡುಕೋರ ಚಟುವಟಿಕೆ ನಡೆಸುತ್ತಿವೆ ಎಂಬ ಕಾರಣಕ್ಕೆ ಜಾರಿ ಮಾಡಲಾಗಿತ್ತು

*1990ರಲ್ಲಿ ಅಸ್ಸಾಂನಲ್ಲಿ ಆಫ್‌ಸ್ಪ ಮರು ಜಾರಿಯಾಯಿತು. ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ, ಪ್ರತೀ ಆರು ತಿಂಗಳಿಗೊಮ್ಮೆ ಇದನ್ನು ವಿಸ್ತರಿಸಲಾಗುತ್ತದೆ

*ಈ ಬಾರಿ ಅವಧಿ ವಿಸ್ತರಣೆಗೆ ನಿಖರ ಕಾರಣವನ್ನು ಸರ್ಕಾರ ನೀಡಿಲ್ಲ. ಕಾಯ್ದೆ ವಾಪಸ್ ಪಡೆಯುವಂತೆ ಮಾನವ ಹಕ್ಕು ಕಾರ್ಯಕರ್ತರು ಆಗ್ರಹಿಸಿದ್ದಾರೆ

ಮಣಿಪುರ

*ಇಂಫಾಲ ಪುರಸಭೆ ಪ್ರದೇಶವನ್ನು ಹೊರತುಪಡಿಸಿ ಇಡೀ ಮೇಘಾಲಯ ರಾಜ್ಯವನ್ನು ಪ್ರಕ್ಷುಬ್ಧ ಪ್ರದೇಶ ಎಂದು ಘೋಷಿಸಿ ಆಫ್‌ಸ್ಪ ಹೇರಲಾಗಿದೆ

*2020ರ ಡಿಸೆಂಬರ್‌ 1ರಂದು ಒಂದು ವರ್ಷದ ಅವಧಿಗೆ ಕಾಯ್ದೆಯ ಅವಧಿಯನ್ನು ವಿಸ್ತರಿಸಲಾಗಿತ್ತು

*ರಾಜ್ಯದಲ್ಲಿ ವಿವಿಧ ಬಂಡುಕೋರ ಸಂಘಟನೆಗಳು ಸಕ್ರಿಯವಾಗಿವೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT