ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ವಿವಿ –ಪ್ಯಾಟ್‌– ಪೂರ್ಣ ಎಣಿಕೆ ಸಾಧ್ಯವೇ? ECIಗೆ ಸುಪ್ರೀಂ ಪ್ರಶ್ನೆ
ಆಳ–ಅಗಲ: ವಿವಿ –ಪ್ಯಾಟ್‌– ಪೂರ್ಣ ಎಣಿಕೆ ಸಾಧ್ಯವೇ? ECIಗೆ ಸುಪ್ರೀಂ ಪ್ರಶ್ನೆ
ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Published 19 ಏಪ್ರಿಲ್ 2024, 0:25 IST
Last Updated 19 ಏಪ್ರಿಲ್ 2024, 0:25 IST
ಅಕ್ಷರ ಗಾತ್ರ

ಇವಿಎಂ ಮತಗಳು ಮತ್ತು ಎಲ್ಲಾ ವಿವಿ–ಪ್ಯಾಟ್‌ಗಳಲ್ಲಿನ ಮತಗಳನ್ನು ಪರಸ್ಪರ ತಾಳೆ ನೋಡಬೇಕು ಎಂದು ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ಪೂರ್ಣಗೊಳಿಸಿದೆ. ಆದರೆ ಇದೇ 16ರಂದು ನಡೆದಿದ್ದ ವಿಚಾರಣೆ ವೇಳೆ ಈ ಬಗ್ಗೆ ವಿವರಣೆ ನೀಡಿ ಎಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಆಯೋಗವೂ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಇವಿಎಂ ಮತ್ತು ವಿವಿ–ಪ್ಯಾಟ್‌ ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ವಿವರ ನೀಡಿತ್ತು. ಆದರೂ, ಗುರುವಾರದ ವಿಚಾರಣೆ ವೇಳೆ ಪೀಠವು ಆಯೋಗದ ಮುಂದೆ ಮತ್ತಷ್ಟು ಪ್ರಶ್ನೆಗಳನ್ನು ಇರಿಸಿತ್ತು.

----

‘ವಿವಿ–ಪ್ಯಾಟ್‌ ಚೀಟಿ ಎಣಿಕೆ ಕಷ್ಟ’

ಒಂದು ಕ್ಷೇತ್ರದಲ್ಲಿ ಬಳಕೆಯಾಗುವ ಎಲ್ಲಾ ವಿವಿ–ಪ್ಯಾಟ್‌ಗಳಲ್ಲಿನ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡುವುದು ಕಷ್ಟ. ಜತೆಗೆ ಆಯೋಗದ ಬಳಿ 17 ಲಕ್ಷದಷ್ಟು ವಿವಿ–ಪ್ಯಾಟ್‌ಗಳು ಮಾತ್ರ ಇವೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಈ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಇವಿಎಂಗಳು ಮತ್ತು ಎಷ್ಟು ವಿವಿ–ಪ್ಯಾಟ್‌ ಯಂತ್ರಗಳು ಬಳಕೆಯಾಗುತ್ತವೆ ಎಂಬ ಮಾಹಿತಿ ಲಭ್ಯವಿಲ್ಲ

l ಸುಪ್ರೀಂ ಕೋರ್ಟ್‌ ಪೀಠ: ಎಲ್ಲಾ ವಿವಿ–ಪ್ಯಾಟ್‌ಗಳನ್ನು ಇವಿಎಂಗಳೊಂದಿಗೆ ತಾಳೆ ಮಾಡಿ ನೋಡಲು ಇರುವ ತೊಡಕುಗಳೇನು? ಒಂದು ವಿವಿ–ಪ್ಯಾಟ್‌ನಲ್ಲಿನ ಚೀಟಿಗಳನ್ನು ಎಣಿಕೆ ಮಾಡಲು ಐದು ತಾಸು ಬೇಕು ಎಂದಿದ್ದೀರಿ. 5,000–6,000 ಚೀಟಿಗಳನ್ನು ಎಣಿಕೆ ಮಾಡಲು ಐದು ತಾಸು ಏಕೆ ಬೇಕು?

ಚುನಾವಣಾ ಆಯೋಗ: ವಿವಿ–ಪ್ಯಾಟ್‌ನಲ್ಲಿ ಚೀಟಿ ಮುದ್ರಿಸಲು ಬಳಸುವ ಕಾಗದವು ತೀರಾ ತೆಳುವಾಗಿರುತ್ತದೆ ಮತ್ತು ಕೈಗೆ ಅಂಟಿಕೊಳ್ಳುತ್ತದೆ. ಅವು ಎಣಿಕೆಗೆ ಬಳಸುವಂತಹ ಕಾಗದಗಳಲ್ಲ. ಹೀಗಾಗಿ ಅವನ್ನು ಎಣಿಕೆ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಎಲ್ಲಾ ವಿವಿ–ಪ್ಯಾಟ್‌ಗಳನ್ನು ಎಣಿಕೆ ಮಾಡುವುದು ಕಷ್ಟ.

l ಪೀಠ: ವಿವಿ–ಪ್ಯಾಟ್‌ಗಳು ಮುದ್ರಿಸುವ ಚೀಟಿಗಳಲ್ಲಿ ಒಂದು ಪ್ರತಿಯನ್ನು ಮತದಾರರಿಗೆ ನೀಡಲು ಸಾಧ್ಯವಿದೆಯೇ?

ಆಯೋಗ: ಹಾಗೆ ಮತದಾನದ ಚೀಟಿಗಳನ್ನು ಮತದಾರರಿಗೆ ನೀಡಿದರೆ ಅವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಅವು ದುರ್ಬಳಕೆಯಾಗುವ ಅಪಾಯವೂ ಇದೆ.

l ಪೀಠ: ಚುನಾವಣಾ ಆಯೋಗದ ಬಳಿ ಎಷ್ಟು ವಿವಿ–ಪ್ಯಾಟ್‌ಗಳಿವೆ?

ಆಯೋಗ: ನಮ್ಮಲ್ಲಿ ಎರಡು ಕೋಟಿ ಇವಿಎಂಗಳು ಮತ್ತು 17 ಲಕ್ಷ ವಿವಿಪ್ಯಾಟ್‌ಗಳಿವೆ.

‘ಎಸ್‌ಎಲ್‌ ಯುನಿಟ್‌ ಸೀಲ್‌ ವ್ಯವಸ್ಥೆ ಇಲ್ಲ’

ಇವಿಎಂ ವ್ಯವಸ್ಥೆಯೊಳಗೆ ಸಿಂಬಲ್‌ ಲೋಡಿಂಗ್‌ ಯುನಿಟ್‌ ಎಂಬ ಇನ್ನೊಂದು ಯಂತ್ರ/ಸಾಧನವನ್ನು ಬಳಸಲಾಗುತ್ತದೆ ಎಂಬುದನ್ನು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಉತ್ತರದಲ್ಲಿ ಬಹಿರಂಗಪಡಿಸಿದೆ. ವಿಚಾರಣೆ ವೇಳೆ ಪೀಠವು ಈ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಕೇಳಿತ್ತು. ಆಗ, ಆ ಯಂತ್ರ/ಸಾಧನಗಳು ಮತ ತಿರುಚಲು ಬಳಕೆಯಾಗುವುದನ್ನು ತಡೆಯುವ ವ್ಯವಸ್ಥೆ ಇಲ್ಲ ಎಂದು ಆಯೋಗ ಹೇಳಿದೆ.

l ಪೀಠ: ವಿವಿ–ಪ್ಯಾಟ್‌ನಲ್ಲಿ ಯಾವುದೇ ತಂತ್ರಾಂಶವಿರುವುದಿಲ್ಲವೇ?

ಆಯೋಗ: ಇಲ್ಲ. ಅದು ಒಂದು ಮುದ್ರಣ ಯಂತ್ರ ಮಾತ್ರ. ಅದರಲ್ಲಿ 4 ಎಂಬಿಯಷ್ಟು ಮೆಮೊರಿ ಚಿಪ್‌ ಇರುತ್ತದೆ. ಅಭ್ಯರ್ಥಿಗಳ ಕ್ರಮಸಂಖ್ಯೆ, ಹೆಸರು, ಪಕ್ಷದ ಚಿಹ್ನೆ ವಿವರಗಳನ್ನು ಒಳಗೊಂಡ ‘ಇಮೇಜ್‌’ಗಳನ್ನು (ಎಲೆಕ್ಟೋರಲ್‌ ಬ್ಯಾಲೆಟ್‌) ಕ್ಷೇತ್ರ ಚುನಾವಣಾ ಅಧಿಕಾರಿ ಸಿದ್ಧಪಡಿಸುತ್ತಾರೆ. ಅವನ್ನು ವಿವಿ–ಪ್ಯಾಟ್‌ ಯಂತ್ರಗಳಿಗೆ, ‘ಸಿಂಬಲ್‌ ಅಪ್‌ಲೋಡ್‌ ಯುನಿಟ್‌–ಎಸ್‌ಎಲ್‌ಯು’ ಅನ್ನು ಬಳಸಿ ಅಪ್‌ಲೋಡ್‌ ಮಾಡಲಾಗುತ್ತದೆ. 

l ಪೀಠ: ಹಾಗಿದ್ದಲ್ಲಿ ಒಂದು ಕ್ಷೇತ್ರದಲ್ಲಿ ಎಷ್ಟು ಎಸ್‌ಎಲ್‌ಯುಗಳನ್ನು ಬಳಸುತ್ತೀರಿ?

ಆಯೋಗ: ಒಂದು ಕ್ಷೇತ್ರಕ್ಕೆ ಒಂದೇ ಎಸ್‌ಎಲ್‌ಯು ಬಳಸುತ್ತೇವೆ. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಅವು ಚುನಾವಣಾ ಅಧಿಕಾರಿಯ ಬಳಿ ಇರುತ್ತವೆ. 

l ಪೀಠ: ‘ಎಲೆಕ್ಟೋರಲ್‌ ಬ್ಯಾಲೆಟ್‌’ಗಳನ್ನು ಸಿದ್ಧಪಡಿಸಿದ ನಂತರ ಎಸ್‌ಎಲ್‌ಯು ಅನ್ನು ತಿರುಚುವುದನ್ನು ತಡೆಯಲು ಯಾವುದಾದರೂ ವ್ಯವಸ್ಥೆ ನಿಮ್ಮ ಬಳಿ ಇದೆಯೇ? ಎಸ್‌ಎಲ್‌ಯು ಯಂತ್ರಗಳನ್ನು ಸೀಲ್‌ ಮಾಡಿ ಇಡುತ್ತೀರಾ?

ಆಯೋಗ: ಎಸ್‌ಎಲ್‌ಯು ಯಂತ್ರಗಳನ್ನು ಸೀಲ್‌ ಮಾಡಿ ಇಡುವ ವ್ಯವಸ್ಥೆ ಸದ್ಯಕ್ಕೆ ಇಲ್ಲ.

* ಎಸ್‌ಎಲ್‌ಯು ಯಾವ ಸ್ವರೂಪದ ಯಂತ್ರ ಎಂಬುದನ್ನು ಆಯೋಗ ವಿವರಿಸಿಲ್ಲ.

‘17ಎ ಅರ್ಜಿ ಮತ್ತು ಇವಿಎಂ ಮತಗಳ ತಾಳೆ ಇಲ್ಲ’

ಮತಗಟ್ಟೆಯೊಳಗೆ ಮತದಾನದ ಅ‌‌‌ಧಿಕಾರಿಯ ಬಳಿ ಅರ್ಜಿ ನಮೂನೆ 17ಎ ಇರುತ್ತದೆ. ಇದರಲ್ಲಿ ಪ್ರತಿ ಮತದಾರನ ವಿವರ, ಆತ ತೋರಿಸಿದ ಗುರುತಿನ ಚೀಟಿಯ ಸ್ವರೂಪ ಮತ್ತು ಸಂಖ್ಯೆ ಹಾಗೂ ಸಹಿ ಇರುತ್ತದೆ. 17ಎ ಅರ್ಜಿ ನಮೂನೆಯ ಆಧಾರದ ಮೇಲೆಯೇ ಇಂತಿಷ್ಟು ಸಮಯದಲ್ಲಿ ಇಷ್ಟು ಪ್ರಮಾಣದ ಮತದಾನ ನಡೆದಿದೆ ಎಂದು ಘೋಷಿಸಲಾಗುತ್ತದೆ.

17ಎ ಅರ್ಜಿಗಳಲ್ಲಿ ನಮೂದಾದ ಅಷ್ಟೂ ಮತದಾರರ ಸಂಖ್ಯೆಯು ಇವಿಎಂನ ‘ಕಂಟ್ರೋಲ್‌ ಯುನಿಟ್‌’ನಲ್ಲೂ ದಾಖಲಾಗುತ್ತದೆ. ಅಣಕು ಮತಗಳು ಮತ್ತು ವಿವಿಧ ಕಾರಣಗಳಿಗೆ ತಿರಸ್ಕೃತವಾದ ಮತಗಳನ್ನು ಹೊರತುಪಡಿಸಿ ಉಳಿದ ಮತಗಳ ವಿವರವನ್ನು ಅರ್ಜಿ ನಮೂನೆ 17ಸಿಯಲ್ಲಿ ನಮೂದಿಸಲಾಗುತ್ತದೆ. 17ಎ ಮತ್ತು 17ಸಿ ಅರ್ಜಿ ನಮೂನೆಗಳನ್ನು ಪರಸ್ಪರ ಹೋಲಿಸಿ ನೋಡಲಾಗುತ್ತದೆ. 17ಸಿ ಮತ್ತು ಇವಿಎಂಗಳಲ್ಲಿನ ಮತಗಳನ್ನೂ ಹೋಲಿಸಿ ನೋಡಲಾಗುತ್ತದೆ. ಆದರೆ ಎಷ್ಟು ಮತದಾರರು ಮತದಾನ ಮಾಡಿದರು ಎಂಬ ವಿವರ ಇರುವ 17ಎ ಮತ್ತು ಇವಿಎಂನಲ್ಲಿನ ಮತಗಳನ್ನು ತಾಳೆ ನೋಡುವುದಿಲ್ಲ ಎಂದು ಆಯೋಗವು ವಿವರಿಸಿದೆ.

ಸಾಲಿಸಿಟರ್ ಜನರಲ್ ಆರೋಪ ನಿರಾಕರಣೆ

ಗುರುವಾರದ ವಿಚಾರಣೆ ಇನ್ನೇನು ಮುಗಿಯುತ್ತದೆ ಎಂಬ ವೇಳೆಗೆ ಚುನಾವಣಾ ಆಯೋಗದ ಪರವಾಗಿ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ, ಅರ್ಜಿದಾರರ ವಿರುದ್ಧ ಹರಿಹಾಯ್ದರು.

‘ಈ ಮೂಲಕ ಮತದಾರನ ಆಯ್ಕೆಯನ್ನು ಲೇವಡಿ ಮಾಡಲಾಗುತ್ತಿದೆ. ವರ್ಷಗಳಿಂದ ಸುಮ್ಮನಿದ್ದು, ಚುನಾವಣೆ ಒಂದೆರಡು ದಿನ ಇದೆ ಎನ್ನುವಾಗ ಅರ್ಜಿ ಸಲ್ಲಿಸುತ್ತಾರೆ’ ಎಂದು ತುಷಾರ್‌ ಮೆಹ್ತಾ ಪೀಠದ ಎದುರು ಆರೋಪಿಸಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ‘ಈ ಅರ್ಜಿಗಳು ಒಂದು ವರ್ಷದ ಹಿಂದೆಯೇ ಸಲ್ಲಿಕೆಯಾಗಿವೆ. ಕಾರ್ಯದೊತ್ತಡದ ಕಾರಣ ನಾವೇ ಅವುಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವುಗಳನ್ನು ಚುನಾವಣೆಯ ಹೊಸ್ತಿಲಲ್ಲಿ ಸಲ್ಲಿಸಿಲ್ಲ’ ಎಂದು ವಿವರಿಸಿತು ಮತ್ತು ತುಷಾರ್ ಮೆಹ್ತಾ ಅವರ ಆರೋಪವನ್ನು ನಿರಾಕರಿಸಿತು.

‘ಎಲ್ಲವನ್ನೂ ಅನುಮಾನಿಸಬಾರದು’: ವಿವಿ–ಪ್ಯಾಟ್‌ ಯಂತ್ರದಲ್ಲಿ ಚೀಟಿ ಗೋಚರವಾಗುವ ಕಿಂಡಿಯಲ್ಲಿ ‘ಟಿಂಟ್‌’ ಹಾಕಿರುವ ಗಾಜನ್ನು ಬಳಸಲಾಗಿದೆ. ಏಳು ಸೆಕೆಂಡ್‌ ಬಲ್ಬ್‌ ಉರಿಯುವಾಗ ಮಾತ್ರ ಅದು ಕಾಣುತ್ತದೆ. ಆಮೇಲೆ ಅದು ಏನಾಯಿತು ಎಂಬುದು ಕಾಣುವುದಿಲ್ಲ. ಹೀಗಾಗಿ ಸಂಪೂರ್ಣ ಪಾರದರ್ಶಕವಾದ ಗಾಜನ್ನು ಅಳವಡಿಸಬೇಕು. ಮತ್ತು ಬಲ್ಬ್ ಸದಾ ಉರಿಯುತ್ತಿರುವಂತೆ ಯಂತ್ರವನ್ನು ಮಾರ್ಪಡಿಸಬೇಕು ಎಂದು ಎಡಿಆರ್‌ ಪರ ವಕೀಲ ಪ್ರಶಾಂತ್ ಭೂಷಣ್‌ ಪೀಠಕ್ಕೆ ಮನವಿ ಮಾಡಿದರು.

ಆದರೆ ಈ ಬಗ್ಗೆ ಪೀಠವು ಯಾವುದೇ ಚರ್ಚೆ ನಡೆಸಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರಶಾಂತ್ ಭೂಷಣ್‌ ಅವರು ಈ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿದ್ದರು. ಇದಕ್ಕೆ ಪೀಠವು, ‘ಎಲ್ಲವನ್ನೂ ಅನುಮಾನಿಸುತ್ತಾ ಇರಬಾರದು. ಯಾವುದೂ ಸರಿ ಇಲ್ಲ ಎಂದು ಅಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವದರ ಮೇಲಾದರೂ ನಂಬಿಕೆ ಇರಿಸಿಕೊಳ್ಳಬೇಕು’ ಎಂದು ಹೇಳಿತು.

‘ಬಟನ್‌ ಒತ್ತದಿದ್ದರೂ ಬಿಜೆಪಿಗೆ ಮತ’

‘ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಏ.17ಕ್ಕೆ ಅಣಕು ಮತದಾನ ನಡೆದಿತ್ತು. ಈ ಪ್ರಕ್ರಿಯೆ ವೇಳೆ ಬಿಜೆಪಿಯ ಬಟನ್‌ ಒತ್ತದಿದ್ದರೂ ವಿವಿಪ್ಯಾಟ್‌ನಲ್ಲಿ ಬಿಜೆಪಿಗೆ ಮತ ಹೋಗಿದೆ. ನಾಲ್ಕು ಇವಿಎಂಗಳಲ್ಲಿ ಇಂಥ ದೋಷ ಕಂಡುಬಂದಿದೆ’ ಎಂದು ಕೇರಳದ ‘ಮಲೆಯಾಳ ಮನೋರಮಾ’ ಪತ್ರಿಕೆ ವರದಿ ಮಾಡಿದೆ. ಎಲ್‌ಡಿಎಫ್‌ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ನಾಲ್ಕು ಇವಿಎಂಗಳನ್ನು ಬದಲಾಯಿಸು ವಂತೆಯೂ ಕೋರಿದೆ. ಸಂಬಂಧಿತ ಚುನಾವಣಾ ಅಧಿಕಾರಿಯೂ ಇದನ್ನು ದೃಢಪಡಿಸಿದ್ದಾರೆ.

ಕ್ಷೇತ್ರ ಚುನಾವಣಾ ಅಧಿಕಾರಿಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಇವಿಎಂಗಳನ್ನು ಆನ್‌ ಮಾಡುತ್ತಿದ್ದಂತೆಯೇ ನಾಲ್ಕು ಇವಿಎಂಗಳಲ್ಲಿ ದೋಷ ಕಾಣಿಸಿಕೊಂಡಿದೆ. ಎಲ್ಲ ವಿವಿಪ್ಯಾಟ್‌ಗಳಲ್ಲಿಯೂ ಮೊದಲ ಮತಪತ್ರದಲ್ಲಿ ‘ಇದನ್ನು ಏಣಿಸಬಾರದು’ ಎಂಬ ವಾಕ್ಯ ಮಾತ್ರ ಇರಬೇಕು. ಆದರೆ, ದೋಷ ಇರುವ ಈ ನಾಲ್ಕು ಇವಿಎಂಗಳಲ್ಲಿ ‘ಇದನ್ನು ಎಣಿಸಬಾರದು’ ಎಂಬ ವಾಕ್ಯದೊಂದಿಗೆ ಕ್ರಮಸಂಖ್ಯೆಯಲ್ಲಿ ಮೊದಲಿದ್ದ ಪಕ್ಷದ ಚಿಹ್ನೆಯೂ ಮುದ್ರಣವಾಗಿದೆ. ನಾನು ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದೇನೆ’ ಎಂದು ಅಧಿಕಾರಿ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 190 ಬೂತ್‌ಗಳಿವೆ ಹಾಗೂ 228 ಇವಿಎಂಗಳಿಗೆ. ಇವುಗಳಿಗೆ ಬುಧವಾರ ಅಣಕು ಮತದಾನ ನಡೆದಿದೆ. ಇವುಗಳಲ್ಲಿ 20 ಇವಿಎಂಗಳ ಅಣಕು ಮತದಾನವನ್ನು ಏಕಕಾಲದಕ್ಕೆ ನಡೆಸಲಾಗಿತ್ತು. ಈ ಇವಿಎಂಗಳಲ್ಲಿ 10 ಬಟನ್‌ಗಳು ಇದ್ದವು. ‘ಇವುಗಳಲ್ಲಿ ಮೊದಲ ಕ್ರಮಸಂಖ್ಯೆಯಲ್ಲಿ ಬಿಜೆಪಿ ಇತ್ತು. ಏಕ ಕಾಲದಲ್ಲಿ ಈ 20 ಇವಿಎಂಗಳ ಒಂದೊಂದೇ ಬಟನ್‌ಗಳನ್ನು ಒತ್ತಲಾಯಿತು. ಈ ವೇಳೆ ನಾಲ್ಕು ಇವಿಎಂಗಳಲ್ಲಿ ಎರಡು ಮತಗಳು ಬಿಜೆಪಿಗೆ ಹೋಗಿವೆ. ಬಿಜೆಪಿಯ ಬಟನ್‌ ಅನ್ನು ಒತ್ತದೇ ಇದ್ದಾಗಲೂ ಇದೇ ನಾಲ್ಕು ಇವಿಎಂಗಳಲ್ಲಿ ಒಂದು ಮತವು ಬಿಜೆಪಿಗೆ ಬಿದ್ದಿದೆ’ ಎಂದು ಯುಡಿಎಫ್‌ ಅಭ್ಯರ್ಥಿಯ ಏಜೆಂಟ್‌ ಆರೋಪಿಸಿದ್ದಾರೆ.

ಈ ಎಲ್ಲಾ ವಿಚಾರವನ್ನು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಪರ ವಕೀಲ ಪ್ರಶಾಂತ್‌ ಭೂಷಣ್‌ ಅವರು ಗುರುವಾರದ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಂಕರ್‌ ದತ್ತಾ ಅವರು ಚುನಾವಣಾ ಆಯೋಗಕ್ಕೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮೌಖಿಕ ಆದೇಶ ನೀಡಿದರು. ಮಧ್ಯಾಹ್ನದ ಊಟದ ವಿರಾಮದ ಬಳಿಕ, ಚುನಾವಣಾ ಆಯೋಗದ ಪರ ವಕೀಲ ಮನಿಂದರ್‌ ಸಿಂಗ್‌ ಅವರು, ಅಣಕು ಮತದಾನದಲ್ಲಿ ಬಿಜೆಪಿಯ ಬಟನ್‌ ಒತ್ತದಿದ್ದರೂ, ಬಿಜೆಪಿ ಮತ ಹೋಗಿದೆ ಎನ್ನುವುದು ಸುಳ್ಳು ಸುದ್ದಿ ಎಂದು ಪೀಠಕ್ಕೆ ತಿಳಿಸಿದರು. 

‘ಪತ್ರಿಕೆಯು ತಪ್ಪು ವರದಿ ಪ್ರಕಟಿಸಿದೆ. ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಇಂಥದ್ದು ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ನಾವು ವಿಸ್ತೃತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದು ಹೇಳಿದರು. ‘ತನ್ನ ಅಧಿಕಾರಿ ನೀಡಿದ ಹೇಳಿಕೆಯನ್ನೇ ಚುನಾವಣಾ ಆಯೋಗ ತಪ್ಪು ಎಂದು ನ್ಯಾಯಾಲಯಕ್ಕೆ ತಿಳಿಸಿದೆ’ ಎಂದು ‘ಮಲೆಯಾಳ ಮನೋರಮಾ’ ಪತ್ರಿಕೆಯು ವರದಿಯಲ್ಲಿ ಹೇಳಿಕೊಂಡಿದೆ.

ಇವಿಎಂಗಳಲ್ಲಿ ದೋಷ: ಆಯೋಗ ಸ್ಪಷ್ಟನೆ

ಕಾಸರಗೋಡಿನಲ್ಲಿ ಬಿಜೆಪಿಗೆ ಮತ ಬಿದ್ದ ಪ್ರಕರಣ ಸಂಬಂಧ ಗುರುವಾರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ‘ನಾಲ್ಕು ಇವಿಎಂಗಳಲ್ಲಿ ಇದ್ದ ದೋಷಗಳನ್ನು ಸರಿಪಡಿಸಲಾಗಿದೆ. ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ನಾಲ್ಕರಲ್ಲಿ ಎರಡು ಇವಿಎಂಗಳನ್ನು ಬದಲಾಯಿಸಲಾಗಿದೆ. ಅಣಕು ಮತದಾನ ಪ್ರಕ್ರಿಯೆ ನಡೆಸಿ, ಒಂದು ಇವಿಎಂ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ’ ಎಂದು ಆಯೋಗ ಹೇಳಿದೆ.

ಚುನಾವಣಾ ಅಧಿಕಾರಿಯು ಈ ಪ್ರಕರಣದ ಕುರಿತು ಕೇರಳದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದಾರೆ. ನಮ್ಮ ನಡುವೆಯೇ ನಡೆದ ತಪಾಸಣೆ ವೇಳೆಯಲ್ಲಿ ನಾಲ್ಕು ಇವಿಎಂಗಳಲ್ಲಿ ಹೆಚ್ಚುವರಿ ಮತಪತ್ರಗಳು ಮುದ್ರಣವಾಗಿವೆ. ಆಗ ಎಂಜಿನಿಯರ್‌ ಗಳನ್ನು ಸಂಪರ್ಕಿಸಲಾಯಿತು. ‘ಅಣಕು ಮತದಾನಕ್ಕೂ ಮೊದಲು, ವಿವಿಪ್ಯಾಟ್‌ನಿಂದ ಕೆಲವು ಮತಪತ್ರಗಳನ್ನು ಮುದ್ರಿಸಬೇಕಾಗುತ್ತದೆ. ಹೀಗೆ ಕೆಲವು ಮತಪತ್ರಗಳ ಮುದ್ರಣ ಪೂರ್ಣಗೊಳ್ಳುವ ಮೊದಲೇ ಇವಿಎಂಗಳನ್ನು ಅಣಕು ಮತದಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಹೀಗಾಗಿ ಅಂತಹ ದೋಷ ಸಂಭವಿಸಿದೆ’ ಎಂದು ಎಂಜಿನಿಯರ್‌ಗಳು ತಿಳಸಿದ್ದಾರೆ ಎಂದು ರಿಟರ್ನಿಂಗ್‌ ಅಧಿಕಾರಿಯು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಅಣಕು ಮತದಾನ ನಡೆಯುತ್ತಿದ್ದಂತೆಯೇ, ಅಪೂರ್ಣಗೊಂಡಿದ್ದ ಮುದ್ರಣವು ಪೂರ್ಣಗೊಂಡಿದೆ. ಹೀಗಾಗಿಯೇ ಬಿಜೆಪಿಗೆ ಮತ ಬಿದ್ದಿದೆ. ಹಲವು ಸುತ್ತುಗಳ ಅಣಕು ಮತದಾನ ಮೂಲಕ ಕೆಲವು ಇವಿಎಂಗಳ ದೋಷಗಳನ್ನು ಸರಿಪಡಿಸಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಏಜೆಂಟರಿಗೆ ಈ ಬಗ್ಗೆ ಮಾಹಿತಿ ನೀಡಿ ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದ್ದು, ‘ಇಂತಹ ದೋಷ ಸಂಭವಿಸಿ ದಾಗಲೆಲ್ಲಾ ಹೆಚ್ಚುವರಿ ಮತಗಳು ಬಿಜೆಪಿಗೇ ಏಕೆ ಹೋಗುತ್ತವೆ’ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

*****

ಆಧಾರ: ಪಿಟಿಐ, ಲೈವ್ ಲಾ, ಬಾರ್ ಆ್ಯಂಡ್ ಬೆಂಚ್ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT