ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ತಲೆಯ ಬೆಲೆ ಹೆಚ್ಚೆನ್ನುವ ಕನ್‌ಕಷನ್‌ ನಿಯಮ!

Last Updated 9 ಡಿಸೆಂಬರ್ 2020, 19:38 IST
ಅಕ್ಷರ ಗಾತ್ರ
ADVERTISEMENT
""
""

ಕ್ಯಾನ್‌ಬೆರಾದಲ್ಲಿ ಇತ್ತೀಚೆಗೆ ನಡೆದ ಟ್ವೆಂಟಿ–20 ಪಂದ್ಯದಲ್ಲಿ ಭಾರತದ ಆಲ್‌ರೌಂಡರ್‌ ರವೀಂದ್ರ ಜಡೇಜ ಹೆಲ್ಮೆಟ್‌ಗೆ ಬೌನ್ಸರ್‌ ತಗುಲಿದ ಮೇಲೆ, ಈ ವಿಚಾರಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳ ಸುತ್ತ ಚರ್ಚೆಗಳು ನಡೆಯುತ್ತಿವೆ.

ಜಡೇಜ ತಲೆಗೆ ಚೆಂಡು ಅಪ್ಪಳಿಸಿದಾಗ ಭಾರತ ತಂಡದ ವೈದ್ಯಕೀಯ ಸಿಬ್ಬಂದಿ ನೆರವಿಗೆ ಏಕೆ ಧಾವಿಸಲಿಲ್ಲ? ಫೀಲ್ಡ್‌ ಅಂಪೈರ್‌ಗಳು ಏಕೆ ಸೂಚನೆ ನೀಡಲಿಲ್ಲ? ಬೌಲರ್ ಮಿಚೆಲ್ ಸ್ಟಾರ್ಕ್ ಹಾಕಿದ ಶರವೇಗದ ಬೌನ್ಸರ್‌ ತಮ್ಮ ಹೆಲ್ಮೆಟ್‌ಗೆ ಅಪ್ಪಳಿಸಿದ ನಂತರವೂ ಮೂರು ಎಸೆತಗಳನ್ನು ಚೆನ್ನಾಗಿಯೇ ಆಡಿದ್ದ ಜಡೇಜಗೆ ಯಾವುದೇ ಸಮಸ್ಯೆ ಆಗಿರಲಿಲ್ಲವೇ? ಇದಕ್ಕೂ ಮುನ್ನ ಅವರು ಸ್ನಾಯುಸೆಳೆತದಿಂದ ಬಳಲಿದ್ದರು. ಆದ್ದರಿಂದ ಅವರು ಬೌಲಿಂಗ್‌ ಮಾಡಲು ಬರುವುದು ಅನುಮಾನವಿತ್ತು. ಅದಕ್ಕಾಗಿ ಚೆಂಡು ತಲೆಗೆ ಅಪ್ಪಳಿಸಿದ್ದನ್ನು ಮುಂದಿಟ್ಟುಕೊಂಡು ಭಾರತ ತಂಡವು ಕನ್‌ಕಷನ್‌ ನಿಯಮದ ಲಾಭ ಪಡೆದುಕೊಂಡಿತೆ? ಜಡೇಜಗೆ ಯಜುವೇಂದ್ರ ಚಾಹಲ್ ಸರಿ–ಸಮ (Like For Like) ಬದಲಾವಣೆ ಅಲ್ಲವೇ?

ಹೀಗೆ ಕೆಲ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗುತ್ತಿವೆ. ಆ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮೂರು ವಿಕೆಟ್ ಗಳಿಸಿ, ಭಾರತದ ಜಯಕ್ಕೆ ಕಾರಣರಾಗಿದ್ದರು. ಬಹುಶಃ ಅಂದು ವಿರಾಟ್ ಕೊಹ್ಲಿ ಬಳಗವು ಸೋತಿದ್ದರೆ, ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಇತರ ಆಟಗಾರರು ಈ ಕುರಿತು ಪ್ರಶ್ನಿಸುತ್ತಿರಲಿಲ್ಲವೇನೋ!

ಆದರೆ, ಸ್ಪಿನ್ನರ್ ಕೂಡ ಆಗಿರುವ ಜಡೇಜ ಅವರಿಗೆ ಚಾಹಲ್ ಸರಿಯಾದ ಬದಲಿ ಆಟಗಾರ ಎಂಬುದನ್ನು ಮಾಜಿ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಅನಿಲ್ ಕುಂಬ್ಳೆ ಸಮರ್ಥಿಸಿಕೊಂಡಿದ್ದಾರೆ.ಆದರೆ ‘ಬ್ಯಾಟ್ಸ್‌ಮನ್‌ಗಳಿಗಿರುವ ಬೌನ್ಸರ್‌ ಎದುರಿಸುವ ಕೌಶಲದ ಲೋಪಕ್ಕೆ ಈ ನಿಯಮ ರಕ್ಷಾಕವಚವಾಗುತ್ತಿದೆ’ ಎಂದೂ ಗಾವಸ್ಕರ್ ಟೀಕಿಸಿದ್ದಾರೆ.

ಸ್ಪಿನ್ನರ್ ಯಜುವೇಂದ್ರ ಚಾಹಲ್

ಏನಿದು ಕನ್‌ಕಷನ್‌?

ಶರವೇಗದಿಂದ ನುಗ್ಗಿಬರುವ ಲೆದರ್‌ಬಾಲ್, ಕಟ್ಟಿಗೆಯ ಮೂರು ಸ್ಟಂಪ್‌ಗಳಿಗೆ ಬಡಿಯದಂತೆ ತಡೆಯಲು ಬ್ಯಾಟ್ಸ್‌ಮನ್‌ ತನ್ನ ದೇಹವನ್ನೇ ಶರವೇಗದ ಎಸೆತಗಳಿಗೆ ಮುಂದೊಡ್ಡಿ ನಿಲ್ಲುವಂತಹ ಆಟ ಬಹುಶಃ ಕ್ರಿಕೆಟ್‌ ಮಾತ್ರ. ಪ್ರತಿ ಗಂಟೆಗೆ 140–150 ಕಿಲೋಮೀಟರ್‌ ವೇಗದಲ್ಲಿ ಸಾಗಿಬರುವ ಎಸೆತಗಳಿಂದ ಬ್ಯಾಟ್ಸ್‌ಮನ್‌ಗೆ ಅಪಾಯ ಇದ್ದೇ ಇರುತ್ತದೆ. ಅದಕ್ಕೆಂತಲೇ ಶಿರಸ್ತ್ರಾಣ, ಕೈಗವಸು, ಮಂಡಿಯೆತ್ತರದವರೆಗೆ ಪ್ಯಾಡು, ಸೆಂಟರ್ ಗಾರ್ಡು ಇತ್ಯಾದಿ ಧರಿಸುವುದು ಕಡ್ಡಾಯ.

ಆದರೂ ಅವಘಡಗಳು ಸಂಭವಿಸಿದ ಉದಾಹರಣೆಗಳು ಬಹಳಷ್ಟಿವೆ. 2014ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಸ್ಥಳೀಯ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಕುತ್ತಿಗೆಗೆ ಚೆಂಡು ಅಪ್ಪಳಿಸಿ ಮೃತಪಟ್ಟಿದ್ದರು. ಚೆಂಡು ಅವರ ಹೆಲ್ಮೆಟ್‌ ಕೆಳಗೆ, ಕುತ್ತಿಗೆಗೆ ಬಿದ್ದಿತ್ತು.

ಆಗ ಹೆಲ್ಮೆಟ್‌ನ ವಿನ್ಯಾಸ ಬದಲಿಸುವ ಕುರಿತು ಚರ್ಚೆಗಳು ನಡೆದು ಕೆಲವು ವರ್ಷಗಳ ಹಿಂದೆ ಮಾರ್ಪಾಟು ಮಾಡಲಾಗಿದೆ. ಆದರೆ ಆಗಿನಿಂದಲೂ ನಡೆದ ಇನ್ನೊಂದು ಚರ್ಚೆ– ತಲೆಗೆ ಏಟು ಬಿದ್ದ ಆಟಗಾರನನ್ನು ಪಂದ್ಯದಲ್ಲಿ ಮುಂದುವರಿಸುವುದು ಹೇಗೆ? ಆಟಗಾರನನ್ನು ಹೊರಗೆ ಕಳಿಸಿದರೆ ಆ ತಂಡಕ್ಕೆ ಆಗುವ ಹಾನಿಯನ್ನು ತುಂಬಬೇಕಲ್ಲವೇ?

ಪಂದ್ಯದ ಮಧ್ಯೆ ಆಟಗಾರನ ದೇಹದ ಬೇರೆ ಯಾವುದೇ ಭಾಗದ ಗಾಯದ ಸಮಸ್ಯೆಯಾದರೂ ಫೀಲ್ಡಿಂಗ್‌ಗೆ ಬದಲಿ ಆಟಗಾರನನ್ನು ನೀಡುವ ನಿಯಮ ಮೊದಲಿನಿಂದಲೂ ಇದೆ. ಆದರೆ, ಆತ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡುವಂತಿಲ್ಲ. ತಲೆ ಅಥವಾ ಕುತ್ತಿಗೆಯ ಭಾಗಕ್ಕೆ ಬಿದ್ದ ಏಟನ್ನು ವಿಶೇಷವಾಗಿ ಪರಿಗಣಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದಾಯಿತು. ಅದರ ಫಲವಾಗಿ ಬಂದಿದ್ದು ಕನ್‌ಕಷನ್‌ ನಿಯಮ. 2019ರ ಆಗಸ್ಟ್‌ನಲ್ಲಿ ಜಾರಿಗೆ ಬಂದಿತು.

ಐಸಿಸಿಯ ನಿಯಮದಲ್ಲಿ ಉಲ್ಲೇಖಿಸಿರುವಂತೆ, ‘ಕನ್‌ಕಷನ್‌ ಬದಲಿ ಆಟಗಾರ ಆಯ್ಕೆಯ ಮನವಿಯನ್ನು ಪಂದ್ಯದ ರೆಫರಿಯು ಪರಿಶೀಲಿಸಿ ಅನುಮೋದಿಸಬೇಕು. ಸರಿ–ಸಮ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಾಕಿ ಉಳಿದಿರುವ ಇನಿಂಗ್ಸ್ ಅಥವಾ ಪಂದ್ಯದಲ್ಲಿ ಈ ಬದಲಿ ಆಟಗಾರನು ಆತನ ತಂಡಕ್ಕೆ ಅನುಕೂಲಸಿಂಧುವಾಗಬಾರದು’ ಎಂದಿದೆ.

ಜಡೇಜ ಕೂಡ ಸ್ಪಿನ್ನರ್ ಆಗಿರುವುದರಿಂದ ಚಾಹಲ್ ಅವರಿಗೆ ಆಡಲು ಆ ಪಂದ್ಯದ ರೆಫರಿ ಡೇವಿಡ್ ಬೂನ್ ಅನುಮತಿ ನೀಡಿದ್ದರು. ಆದರೆ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಮತ್ತು ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಎತ್ತಿರುವ ಪ್ರಶ್ನೆಗಳೂ ಇಲ್ಲಿ ಗಮನಾರ್ಹ. ಆದರೆ ಅವುಗಳ ಕುರಿತು ‘ಜಾಣ ಕಿವುಡುತನ’ವನ್ನು ಸಂಬಂಧಪಟ್ಟವರು ತೋರುತ್ತಿರುವಂತೆ ಭಾಸವಾಗುತ್ತಿದೆ.

ಮೈದಾನದಲ್ಲಿ ಯಾವುದೇ ಆಟಗಾರನಿಗೆ ಪೆಟ್ಟು ಬಿದ್ದಾಗ ಧಾವಿಸುವುದು ಆಯಾ ತಂಡದ ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ. ಅದಕ್ಕೆ ಫೀಲ್ಡ್‌ ಅಂಪೈರ್‌ಗಳು ಸೂಚನೆಯನ್ನೂ ನೀಡಬೇಕು. ಆದರೆ ಜಡೇಜ ವಿಷಯದಲ್ಲಿ ಹಾಗಾಗಲಿಲ್ಲ. ಅವರ ತಲೆಗೆ ಚೆಂಡು ಬಿದ್ದಾಗ ವೈದ್ಯರು ಬರಲಿಲ್ಲ. ಆದರೆ ಅದಕ್ಕಿಂತ ಮೊದಲಿನ ಓವರ್‌ನಲ್ಲಿ ಸ್ನಾಯುಸೆಳೆತವಾದಾಗ ಫಿಸಿಯೊ ಬಂದು ಪ್ರಥಮ ಚಿಕಿತ್ಸೆ ನೀಡಿ ಹೋಗಿದ್ದರು. ಈ ವಿಷಯವನ್ನೇ ಮೂಡಿ ಮತ್ತು ಮಾಂಜ್ರೇಕರ್ ಪ್ರಶ್ನಿಸಿದ್ದರು.

ಕೊನೆಯ ಓವರ್ ಮುಗಿದ ನಂತರ ಡ್ರೆಸ್ಸಿಂಗ್ ಕೋಣೆಗೆ ಮರಳಿದ ಜಡೇಜರನ್ನು ತಪಾಸಣೆಗೊಳಪಡಿಸಲಾಯಿತು. ಆಗ ಕನ್‌ಕಷನ್‌ ಬದಲಿ ಆಟಗಾರನಿಗಾಗಿ ಮನವಿ ಸಲ್ಲಿಸಲಾಯಿತು. ಈ ನಡೆಯೇ ಆಸ್ಟ್ರೇಲಿಯಾ ಬಳಗದಲ್ಲಿ ಸಂಶಯ ಹೆಡೆಯೆತ್ತಲು ಕಾರಣವಾಗಿರಬಹುದು.

ಚರ್ಚೆಗಳು ಏನೇ ಇರಲಿ. ಈ ನಿಯಮದಿಂದಾಗಿ ಬದಲಿ ಆಟಗಾರನೊಬ್ಬ ‘ಪಂದ್ಯಶ್ರೇಷ್ಠ’ ಗೌರವ ಗಳಿಸಿದ್ದು ಮಾತ್ರ ವಿಶೇಷ!

ಬದಲಿ ರನ್ನರ್ ಇಲ್ಲ; ಕನ್‌ಕಷನ್‌ ಮಾತ್ರ ಏಕೆ?

ಬ್ಯಾಟ್ಸ್‌ಮನ್‌ ಆಡುವಾಗ ಗಾಯಗೊಂಡರೆ ನೆರವು ಓಟಗಾರನನ್ನು ನೀಡುವ ನಿಯಮವನ್ನು ಕೆಲವು ವರ್ಷಗಳ ಹಿಂದೆಯೇ ರದ್ದುಗೊಳಿಸಲಾಗಿದೆ.

ದೇಹದ ಬೇರೆ ಯಾವುದೇ ಭಾಗಕ್ಕೆ ಗಾಯವಾದರೂ ಬದಲಿ ಫೀಲ್ಡರ್‌ ಮಾತ್ರ ನೀಡಲಾಗುತ್ತದೆ. ಆದರೆ ತಲೆಗೆ ಪೆಟ್ಟು ಬಿದ್ದರೆ ಮಾತ್ರ ಬೇರೆ ನಿಯಮ ಮಾಡಿದ್ದು ಏಕೆ ಎಂಬುದೇ ಪ್ರಶ್ನೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಗಾಯಗಳಿಗೂ ಇದೇ ನಿಯಮ ಅನ್ವಯವಾದರೆ ಅಚ್ಚರಿಯೇನಿಲ್ಲ. ಆದರೆ ಯಾವುದೇ ನಿಯಮವು ದುರ್ಬಳಕೆಯಾಗದಂತೆ ಜಾಗರೂಕತೆ ವಹಿಸುವುದು ಕ್ರೀಡಾ ಸ್ಫೂರ್ತಿಯ ದೃಷ್ಟಿಯಿಂದ ಮುಖ್ಯ.

ರವೀಂದ್ರ ಜಡೇಜ ಸ್ಪಿನ್ನರ್ ಆಗಿದ್ದು, ಅವರ ಬ್ಯಾಟಿಂಗ್ ಮುಗಿದಿತ್ತು. ಆದ್ದರಿಂದ ಚಾಹಲ್ ಬೌಲಿಂಗ್ ಮಾಡಲು ಬಂದಿದ್ದು ತಪ್ಪಲ್ಲ. ಆದರೆ ಈ ವಿಷಯದಲ್ಲಿ ರೆಫರಿ ಕೆಲವು ತಿದ್ದುಪಡಿ ಮಾಡಿ ಸೂಚನೆ ನೀಡುವ ಅವಕಾಶವಿದೆ. ಉದಾಹರಣೆಗೆ, ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಒಬ್ಬ ಕನ್‌ಕಷನ್‌ಗೊಳಗಾಗುತ್ತಾನೆ. ಪ್ರವಾಸಿ ತಂಡದಲ್ಲಿ ಮತ್ತೊಬ್ಬ ಪೂರ್ಣಾವಧಿ ಬ್ಯಾಟ್ಸ್‌ಮನ್ ಇರದ ಕಾರಣ ಲಭ್ಯವಿರುವ ಆಲ್‌ರೌಂಡರ್‌ ಒಬ್ಬನನ್ನು ಕಣಕ್ಕಿಳಿಸಬಹುದು. ಆಗ ಆತ ಬ್ಯಾಟಿಂಗ್‌ ಮಾತ್ರ ಮಾಡಬೇಕು. ಬೌಲಿಂಗ್ ಮಾಡುವ ಹಾಗಿಲ್ಲವೆಂದು ರೆಫರಿ ಸೂಚಿಸಿದರೆ, ಅದನ್ನು ಪಾಲಿಸಲೇಬೇಕು. ಇದು ಬೌಲರ್‌ ವಿಷಯದಲ್ಲಿಯೂ ಅನ್ವಯಿಸುತ್ತದೆ.

ಎಲ್ಲರೂ ಲೈಕ್ ಫಾರ್ ಲೈಕ್ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಪೂರ್ಣವಾಗಿ ನಿಯಮವನ್ನು ಓದಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ. ತಲೆಗೆ ಪೆಟ್ಟು ಬಿದ್ದಾಗ ಅದರ ಪರಿಣಾಮವು ಅರ್ಧ ಗಂಟೆಯಲ್ಲಿಯೂ ಕಾಣಿಸಿಕೊಳ್ಳಬಹುದು. ಹತ್ತಾರು ಗಂಟೆಗಳ ನಂತರವೂ ಕಾಣಿಸಬಹುದು. ಆದ್ದರಿಂದಲೇ ಬದಲಿ ಆಟಗಾರರನ್ನು ಪಡೆಯಲು ಸಮಯಾವಕಾಶವನ್ನೂ ನಿಗದಿಪಡಿಸಲಾಗಿದೆ.

ಬ್ಯಾಟ್ಸ್‌ಮನ್, ಬೌಲರ್, ಫೀಲ್ಡರ್‌ ಮತ್ತು ಅಂಪೈರ್‌ಗಳಿಗೂ ಕನ್‌ಕಷನ್‌ ಅನ್ವಯಿಸುತ್ತದೆ. ಇದೀಗ ಈ ನಿಯಮವು ಸ್ಥಳೀಯ ಮತ್ತು ದೇಶಿ ಟೂರ್ನಿಗಳಲ್ಲಿಯೂ ಜಾರಿಗೆ ಬರುತ್ತಿದೆ.

–ವಿ.ಎನ್. ಕುಲಕರ್ಣಿ,ಮಾಜಿ ಅಂತರರಾಷ್ಟ್ರೀಯ ಅಂಪೈರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT