ಬುಧವಾರ, ಆಗಸ್ಟ್ 10, 2022
25 °C

Explainer| ಏನಿದು ಉಕ್ರೇನ್-ರಷ್ಯಾ ಸಂಘರ್ಷ? ಭಾರತಕ್ಕೆ ಯಾಕೆ ಕಳವಳ?

ಗಿರೀಶ್ ಲಿಂಗಣ್ಣ Updated:

ಅಕ್ಷರ ಗಾತ್ರ : | |

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೋರಾಟದ ಮನಃಸ್ಥಿತಿಯಲ್ಲಿದ್ದಾರೆ. ಅವರು ಈಗ ಉಕ್ರೇನ್ ಮೇಲೆ ಹಿಡಿತ ಸಾಧಿಸುವ ಹೊಸ್ತಿಲಲ್ಲಿದ್ದಾರೆ. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಉಕ್ರೇನ್‌ಗೆ ಸದಸ್ಯತ್ವವನ್ನು ನೀಡದಂತೆ ಪುಟಿನ್ ಬೇಡಿಕೆಯನ್ನು ಜನವರಿ 26ರಂದು ಅಮೆರಿಕವು ಸಾರಾಸಗಟಾಗಿ ತಿರಸ್ಕರಿಸಿತು. ಆದರೂ, ಮಾಸ್ಕೋದೊಂದಿಗೆ ಚರ್ಚೆಗಳಿಗೆ ರಾಜತಾಂತ್ರಿಕ ಮಾರ್ಗಗಳನ್ನು ಮುಚ್ಚಿಲ್ಲ. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಸದಸ್ಯರಾದ ಉಕ್ರೇನ್, ಯುರೋಪ್, ಅಮೆರಿಕಾ ಅಥವಾ ಯಾವುದೇ ಇತರ ದೇಶವು ಈ ಹಂತದಲ್ಲಿ ಅವರ ಮನಸ್ಸನ್ನು ಅರ್ಥೈಸಿಕೊಳ್ಳಲು ಸಾಧ್ಯವೇ? 'ಇಲ್ಲ' ಎಂಬ ಉತ್ತರವು ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಿಸುತ್ತಿದೆ. ಆದರೂ, ರಕ್ತಪಾತವನ್ನು ತಪ್ಪಿಸುವ ಸಲುವಾಗಿ ಪುಟಿನ್ ಅವರನ್ನು ಸಂಧಾನಕ್ಕೆ ಒಪ್ಪಿಸಲು ಪ್ರಯತ್ನಿಸಲಾಗುತ್ತಿದೆ.

ಮಾಸ್ಕೋ ಸುಮಾರು 1,00,000 ರಷ್ಯನ್ ಸೈನಿಕರನ್ನು ಉಕ್ರೇನ್ ಗಡಿ ಪ್ರದೇಶಗಳಿಗೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಆದರೆ, ರಷ್ಯಾ ಇದನ್ನು ನಿರಾಕರಿಸಿದೆ. ಇದು ತನ್ನ ಮಿಲಿಟರಿ ತಾಲೀಮು ಎಂದು ಹೇಳಿಕೊಂಡಿದೆ. ಆದರೆ, ತನ್ನ ನಡೆಗಳಿಂದ ರಷ್ಯಾವು ಪಶ್ಚಿಮದ ರಾಷ್ಟ್ರಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ ಎನ್ನುವುದಂತೂ ಸತ್ಯ. ವಿಶ್ವ ನಾಯಕರು ಸಂಭವನೀಯ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವಾಗ, ಪುಟಿನ್ ಅವುಗಳನ್ನು ವಿರೋಧಿಸಲಿಲ್ಲ.

ರಷ್ಯಾದೊಂದಿಗೆ ಮಾತನಾಡುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು ಬುಧವಾರ ಹೇಳಿದ್ದಾರೆ. ಆದರೆ ನ್ಯಾಟೋ ಯಾವುದೇ ಸನ್ನಿವೇಶಕ್ಕೂ ಸಿದ್ಧವಾಗಿದೆ. ರಷ್ಯಾವು ಪರಿಗಣಿಸಲು ಸಿದ್ಧವಿದ್ದರೆ ಎಲ್ಲಕ್ಕಿಂತ ಮೊದಲು ರಾಜತಾಂತ್ರಿಕ ಮಾರ್ಗವನ್ನೇ ಪ್ರಯತ್ನಿಸಲು ಅಮೆರಿಕವು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಆದರೂ, ಇದರ ವಿವರಗಳನ್ನು ಗೌಪ್ಯ ಎಂದು ವರ್ಗೀಕರಿಸಲಾಗಿದೆ.

ಅಮೆರಿಕದ ನವೀಕೃತ ಕೊಡುಗೆಯು ಯುರೋಪ್‌ನಲ್ಲಿ ಕ್ಷಿಪಣಿಗಳ ಕಡಿತ, ಮಿಲಿಟರಿ ತಾಲೀಮುಗಳಲ್ಲಿ ಪಾರದರ್ಶಕತೆ ಮತ್ತು ಉಕ್ರೇನ್‌ಗೆ ಪಾಶ್ಚಿಮಾತ್ಯ ಸಹಾಯಕ್ಕೆ ಸಂಬಂಧಿಸಿದ ಷರತ್ತುಗಳನ್ನು ಅವಲಂಬಿಸಿದೆ.  ಹೊಸ ಕೊಡುಗೆಗಳ ಬಗ್ಗೆ ಪುಟಿನ್ ತಮ್ಮ ಇಂಗಿತವನ್ನು ಇನ್ನೂ ವ್ಯಕ್ತಪಡಿಸಿಲ್ಲ. ಆದರೆ, ಅವರು ಖಂಡಿತವಾಗಿಯೂ ಇಷ್ಟರಿಂದ ತೃಪ್ತರಾಗುವುದಿಲ್ಲ. ಏಕೆಂದರೆ, ಉಕ್ರೇನ್‌ಗೆ ನ್ಯಾಟೋದ ಬಾಗಿಲುಗಳನ್ನು ಮುಚ್ಚುವ ಅವರ ಪ್ರಮುಖ ಬೇಡಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ. "ನ್ಯಾಟೋದ ಬಾಗಿಲು ತೆರೆದಿದೆ, ತೆರೆದಿರುತ್ತದೆ ಮತ್ತು ಅದು ನಮ್ಮ ಬದ್ಧತೆಯಾಗಿದೆ" ಎಂದು ಹೇಳಿದಾಗ ಬ್ಲಿಂಕನ್ ಅವರ ಗುರಿ ಪಾಯಿಂಟ್ ಬ್ಲಾಂಕ್ ಆಗಿರುತ್ತದೆ.

ಮಿಖಾಯಿಲ್ ಗೋರ್ಬಚೇವ್ ಅಧ್ಯಕ್ಷರಾಗಿದ್ದಾಗ ಸೋವಿಯತ್ ಒಕ್ಕೂಟದ ವಿಘಟನೆ ಆಗಿರುವುದನ್ನು ಒಪ್ಪಿಕೊಳ್ಳುವುದಕ್ಕೆ ಕಟ್ಟಾ ರಾಷ್ಟ್ರೀಯತಾವಾದಿಯಾಗಿರುವ ಪುಟಿನ್ ಅವರಿಗೆ ಇಂದಿಗೂ ಸಾಧ್ಯವಾಗಿಲ್ಲ. ಗುಪ್ತಚರ ಅಧಿಕಾರಿಯೊಬ್ಬರು ಹಿಂದೊಮ್ಮೆ ಹೇಳಿದಂತೆ, ಪುಟಿನ್ ಅವರು 1990ರ ದಶಕದಲ್ಲಿ ಪೂರ್ವ ಯುರೋಪಿನಲ್ಲಿ ಕಮ್ಯುನಿಸ್ಟ್ ಆಡಳಿತಗಳು ಅವಸಾನಗೊಂಡಿರುವ ವಿಧಾನವನ್ನು ಪ್ರತ್ಯಕ್ಷವಾಗಿ ಕಂಡಿದ್ದರು. 1989ರಲ್ಲಿ ಜರ್ಮನಿಯಲ್ಲಿ ಬರ್ಲಿನ್ ಗೋಡೆಯ ಕುಸಿದಿರುವುದು ಮತ್ತು ಪೂರ್ವ ಯುರೋಪಿನಾದ್ಯಂತ ಕಮ್ಯುನಿಸ್ಟ್ ಆಡಳಿತಗಳು ನೆಲೆಯನ್ನು ಕಳೆದುಕೊಂಡಿರುವುದು ಅವರ ನೆನಪಿನಲ್ಲಿ ಇನ್ನೂ ಹಸಿರಾಗಿದೆ. ಉಕ್ರೇನ್ ರಷ್ಯಾದ ಭಾಗವಾಗಿದೆ ಎಂದು ಪ್ರತಿಪಾದಿಸುವ ಪ್ರಬಂಧವೊಂದನ್ನೂ ಅವರು ಬರೆದಿದ್ದಾರೆ.

ರಷ್ಯಾದ ನಕ್ಷೆಯಿಂದ ಉಕ್ರೇನ್ ಹೊರಬರುವ ಬೆಳವಣಿಗೆಯನ್ನು ಪಶ್ಚಿಮ ದೇಶಗಳು 'ಪ್ರಜಾಪ್ರಭುತ್ವೀಕರಣ' ಎಂದು ಕರೆದಿವೆ. ಆದರೆ ಕಟ್ಟಾ ಕಮ್ಯುನಿಸ್ಟರಿಗೆ ಸೋವಿಯತ್ ಒಕ್ಕೂಟದ ಒಂದು ಭಾಗವೇ ಕುಸಿದಂತಾಗಿದೆ. ಬೆಲಾರೂಸ್ ಜೊತೆಗೆ ಉಕ್ರೇನ್ ಕೂಡ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ವಿಶ್ವಸಂಸ್ಥೆಯ ಪಟ್ಟಿಯು ಪೂರ್ವ ಯುರೋಪಿನ ಭಾಗವಾಗಿ ಉಕ್ರೇನ್ ಸೇರಿದಂತೆ 10 ದೇಶಗಳನ್ನು ಗುಂಪನ್ನಾಗಿ ಮಾಡಿದೆ. ಇದನ್ನು ಅಸಹಾಯಕರಾಗಿ ಒಪ್ಪಿಕೊಳ್ಳಲು ಪುಟಿನ್ ಸಿದ್ಧರಿಲ್ಲ. ಪಶ್ಚಿಮ ಯುರೋಪ್ ಮತ್ತು ಅಮೆರಿಕದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ, ಪೂರ್ವ ಯುರೋಪಿನ ಮತ್ತು ಬಾಲ್ಟಿಕ್ ದೇಶಗಳು ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಗಳಿಸುತ್ತಿವೆ. ಆದರೆ, ರಷ್ಯಾವು ವಿಶ್ವದಲ್ಲಿ ತನ್ನ ಪ್ರಾಮುಖ್ಯವನ್ನು ಮರಳಿ ಪಡೆಯಬೇಕೆಂದು ವ್ಲಾಡಿಮಿರ್ ಬಯಸುತ್ತಾರೆ. ಏಕಶಿಲಾ ವಿಗ್ರಹದಂತಿದ್ದ ಸೋವಿಯತ್ ಒಕ್ಕೂಟದ ವಿರುದ್ಧ ಮಾಡಿದ "ಐತಿಹಾಸಿಕ ಪ್ರಮಾದಗಳನ್ನು" ರದ್ದುಗೊಳಿಸಬೇಕೆಂದು ಅವರು ಬಯಸುತ್ತಾರೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಉಕ್ರೇನ್‌ನೊಂದಿಗೆ ಅಮೆರಿಕವು ಕಾರ್ಯತಂತ್ರದ ಸಂಬಂಧ ಹೊಂದುತ್ತಿರುವುದು ಪುಟಿನ್ ಅವರ ಎದೆಯುರಿಗೆ ಕಾರಣವಾಗಿದೆ.

ಉಕ್ರೇನ್ ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮದ ಕಡೆಗೆ ಹೆಜ್ಜೆ ಹಾಕುತ್ತಿದೆ. ಆದರೂ, ಪೂರ್ವ ಉಕ್ರೇನ್‌ನ ಕೆಲವು ಭಾಗಗಳು ರಷ್ಯಾದ ಜತೆಗೆ ಬಲವಾದ ಸಂಪರ್ಕಗಳನ್ನು ಹೊಂದಿವೆ. 2014ರಲ್ಲಿ, ಉಕ್ರೇನ್‌ ಭಾಗವಾಗಿದ್ದ ಕ್ರಿಮಿಯನ್ ಪೆನಿನ್ಸುಲಾವನ್ನು ರಷ್ಯಾವು ಸ್ವಾಧೀನ ಮಾಡಿಕೊಂಡಿತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇದು ಇನ್ನೂ ಉಕ್ರೇನ್‌ ಭಾಗವಾಗಿಯೇ ಗುರುತಿಸಿಕೊಂಡಿದೆ. 

ಉಕ್ರೇನ್ ಅಧ್ಯಕ್ಷರಾಗಿದ್ದ ವಿಕ್ಟರ್ ಯಾನುಕೋವಿಕ್ ಅವರನ್ನು 2014ರಲ್ಲಿ ಯುರೋಮೈಡನ್ ನಾಗರಿಕ ಅಶಾಂತಿ ಚಳವಳಿಯ ಮೂಲಕ ಪದಚ್ಯುತಗೊಳಿಸಿರುವುದಕ್ಕೆ ಜಗತ್ತು ಸಾಕ್ಷಿಯಾಗಿದೆ. ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದದ ಚುಕ್ಕೆಗಳ ಸಾಲುಗಳಲ್ಲಿ ಸಹಿ ಹಾಕಲು ವಿಕ್ಚರ್ ಯಾನುಕೋವಿಕ್ ಅವರು ನಿರಾಕರಿಸಿದಾಗ, ಉಕ್ರೇನಿಯನ್ನರು ಬೀದಿಗಳಲ್ಲಿ ಬಂಡಾಯವೆದ್ದರು. ರಷ್ಯಾದೊಂದಿಗಿನ ವ್ಯಾಪಾರವನ್ನು ತ್ಯಾಗ ಮಾಡಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದರು. ದೇಶದ ಆರ್ಥಿಕತೆಯನ್ನು ಉನ್ನತೀಕರಿಸಲು ಯುರೋಪಿಯನ್ ಯೂನಿಯನ್ನಿನ ಆರ್ಥಿಕ ಪ್ಯಾಕೇಜ್ ತಮಗೆ ತೃಪ್ತಿ ತಂದಿಲ್ಲ ಎಂದೂ ಅವರು ಹೇಳಿದ್ದರು. ಅಂತಿಮವಾಗಿ, ಅವರು ಕಚೇರಿಯನ್ನು ತೊರೆದು ಗಡಿಪಾರಾಗಿ ರಷ್ಯಾಕ್ಕೆ ಹೋಗಬೇಕಾಯಿತು. ಹಾಗಾಗಿ, ಜನಶಕ್ತಿಯ ಸರ್ಕಾರಗಳನ್ನು ಹೇಗೆ ಉರುಳಿಸಬಹುದು ಎಂಬ ಅರಿವು ಪುಟಿನ್‌ ಅವರಿಗೆ ಇದೆ.

ನ್ಯಾಟೋ ವಿರುದ್ಧ ಆರೋಪ

ಉಕ್ರೇನ್‌ನಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಉದ್ವಿಗ್ನತೆಗೆ ನ್ಯಾಟೋದ ವಿರುದ್ಧ ಪುಟಿನ್ ಹೊಂದಿರುವ ಬಲವಾದ ಅಸಮಾಧಾನವೇ ಕಾರಣವಾಗಿದೆ. 1992ರಲ್ಲಿ ನ್ಯಾಟೋ ಜತೆಗೆ ತನ್ನ ಸಂಬಂಧವನ್ನು ಪ್ರಾರಂಭಿಸಿದ ಉಕ್ರೇನ್, ಆನಂತರ ಅದರ ಸದಸ್ಯನಾಗುವ ಯೋಜನೆಯನ್ನು ಕೈಬಿಟ್ಟಿತು. 2014ರಲ್ಲಿ ಉಕ್ರೇನ್‌ನ ಕೆಲವು ಭಾಗಗಳ ಮೇಲೆ ರಷ್ಯಾದ ಮಿಲಿಟರಿ ಆಕ್ರಮಣವಾದ ಸಂದರ್ಭದಲ್ಲಿ ಈ ಯೋಜನೆಗಳು ಬದಲಾದವು. ಪ್ರಬಲವಾದ ಸೇನಾಶಕ್ತಿಯನ್ನು ಹೊಂದಿರುವ ರಷ್ಯಾದ ವಿರುದ್ಧ ಹೋರಾಡಲು ತನಗೆ ಬೆಂಬಲ ಬೇಕೆಂಬುದು ಉಕ್ರೇನ್‌ಗೆ ತಿಳಿದಿದೆ. ರಷ್ಯಾ ಅಥವಾ ರಷ್ಯಾ-ಬೆಂಬಲಿತ ಗುಂಪುಗಳು ತನ್ನ ಪ್ರದೇಶದ ಸುಮಾರು 7% ಅನ್ನು ನಿಯಂತ್ರಿಸುತ್ತವೆ ಎಂದು ಉಕ್ರೇನ್ ಅಂದಾಜಿಸಿದೆ. "ಹೈಬ್ರಿಡ್ ಯುದ್ಧ"ವನ್ನು ವಿನ್ಯಾಸಗೊಳಿಸಿರುವ ಕಾರಣಕ್ಕೆ ಪಶ್ಚಿಮದ ದೇಶಗಳು, ಉಕ್ರೇನ್ ಮತ್ತು ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ರಷ್ಯಾವನ್ನು ದೂಷಿಸುತ್ತಿವೆ. ಒಂದು ಅಂದಾಜಿನ ಪ್ರಕಾರ, 2014ರಿಂದ ನಡೆದಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಶೀತಲ ಸಮರದಲ್ಲಿ ಸುಮಾರು 13,000 ಸಾವು-ನೋವುಗಳು ಸಂಭವಿಸಿವೆ.
ಯುರೋಪಿನ 27 ಸೇರಿದಂತೆ ಒಟ್ಟು 30 ದೇಶಗಳ ನಡುವೆ ನ್ಯಾಟೋ (NATO) ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿಯಾಗಿದೆ.

ರಾಜಕೀಯ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ತನ್ನ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ಅದರ ಮುಖ್ಯ ಉದ್ದೇಶ. ಭದ್ರತಾ ಸಮಸ್ಯೆಗಳನ್ನು ನಿಭಾಯಿಸಲು ಸಮಾಲೋಚನೆಗಳು ವಿಫಲವಾದರೆ, ಅನಂತರ ಮಿಲಿಟರಿ ಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಯಾವುದೇ ಯುರೋಪಿಯನ್ ದೇಶಕ್ಕೆ ಈ ಸದಸ್ಯತ್ವವು ಮುಕ್ತವಾಗಿದೆ. ರಷ್ಯಾವು ಹಲವು ದಶಕಗಳಿಂದ ನ್ಯಾಟೋದ ಸದಸ್ಯ ರಾಷ್ಟ್ರವಾಗಿತ್ತು. ಆದರೆ ಕ್ರಿಮಿಯಾ ಮತ್ತು ಉಕ್ರೇನ್‌ನ ಭಾಗಗಳನ್ನು ರಷ್ಯಾವು ಆಕ್ರಮಣಕಾರಿಯಾಗಿ ಸ್ವಾಧೀನಪಡಿಸಿಕೊಂಡಿದ್ದರಿಂದ 2014ರಿಂದ ನ್ಯಾಟೋ ಸಹಕಾರವನ್ನು ಸ್ಥಗಿತಗೊಳಿಸಲಾಗಿದೆ.

ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡದಂತೆ ರಷ್ಯಾ ಒತ್ತಾಯಿಸುತ್ತಿದೆ. ಆದರೆ ಉಕ್ರೇನ್‌ನ ವಿನಂತಿಯನ್ನು ಬದಿಗಿಡಲು ನ್ಯಾಟೋಗೆ ಯಾವುದೇ ಕಾರಣವಿಲ್ಲ. ಆದರೆ, ಬಾಲ್ಟಿಕ್ ಪ್ರದೇಶದಲ್ಲಿ ನ್ಯಾಟೋ ಉಪಸ್ಥಿತಿಯನ್ನು ಒಪ್ಪಿಕೊಳ್ಳಲು ವ್ಲಾಡಿಮಿರ್ ಪುಟಿನ್ ಸರ್ಕಾರ ಸಿದ್ಧವಾಗಿಲ್ಲ. ನ್ಯಾಟೋದ ಕ್ಷಿಪಣಿ ರಕ್ಷಣೆಯು ರಷ್ಯಾಕ್ಕೆ ಭದ್ರತಾ ಅಪಾಯವಾಗಿದೆ ಎಂದು ಮಾಸ್ಕೋ ವಾದಿಸುತ್ತಿದೆ. ನ್ಯಾಟೋವನ್ನು ಅಮೆರಿಕದ ಭೌಗೋಳಿಕ ರಾಜಕೀಯ ಮತ್ತು ಆಕ್ರಮಣದ ಯೋಜನೆಯಾಗಿ ಕಮ್ಯುನಿಸ್ಟರು ಪರಿಭಾವಿಸುತ್ತಾರೆ. ಉಕ್ರೇನ್‌ನಲ್ಲಿ ಪಾಶ್ಚಿಮಾತ್ಯ ಸೇನಾ ಶಿಬಿರದ ಉಪಸ್ಥಿತಿಯು ರಷ್ಯಾಕ್ಕೆ ಅವಮಾನಕಾರಿಯೆಂದು ಪುಟಿನ್ ಕಂಡುಕೊಂಡಿದ್ದಾರೆ. 

ಅಮೆರಿಕವು ಸುಮಾರು 8,000 ಸೇನಾ ಸಿಬ್ಬಂದಿಯನ್ನು ಕಟ್ಟೆಚ್ಚರದಲ್ಲಿ ಇರಿಸಿದೆ ಎಂದು ವರದಿಯಾಗಿದೆ. ಸುರಕ್ಷತೆಗಾಗಿ ಉಕ್ರೇನ್ ರಾಯಭಾರ ಕಚೇರಿಯಿಂದ ಹೊರಹೋಗುವಂತೆ ಅಲ್ಲಿರುವ ತನ್ನ ಸಿಬ್ಬಂದಿಯನ್ನೂ ಅಮೆರಿಕವು ಕೇಳಿಕೊಂಡಿದೆ. "ಮಿಲಿಟರಿ ತಾಲೀಮು" ನಡೆಸಲು ಉಕ್ರೇನ್‌ಗೆ ಸಮೀಪವಿರುವ ಬೆಲಾರೂಸ್‌ನ ಭೂಮಿಯನ್ನು ರಷ್ಯಾ ಬಳಸಿಕೊಳ್ಳುತ್ತಿದೆ. ನ್ಯಾಟೋ ನಿರ್ಧಾರಗಳು ಸಾಮೂಹಿಕವಾಗಿವೆ ಎಂಬ ಅಂಶವನ್ನು ಒಪ್ಪಿಕೊಳ್ಳಲು ಸ್ವತಃ ಪುಟಿನ್ ಸಿದ್ಧರಿಲ್ಲ. ನ್ಯಾಟೋದ ಕ್ರಮಗಳು ಈ ಪ್ರದೇಶದಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳುತ್ತಾರೆ. ಮಾಸ್ಕೋ ಮುನ್ನುಗ್ಗಲು ಬಯಸಿದರೆ, ಅದಕ್ಕೆ ಉಕ್ರೇನಿನ ಪ್ರತಿರೋಧವನ್ನು ಲೆಕ್ಕಿಸುವುದಿಲ್ಲ. ಅದನ್ನು ಹಿಮ್ಮೆಟ್ಟಿಸುವುದು ಕಷ್ಟವೂ ಅಲ್ಲ. ಉಕ್ರೇನ್ ನ್ಯಾಟೋ ಸದಸ್ಯ ರಾಷ್ಟ್ರವಲ್ಲ. ಹಾಗಾಗಿ, ಪಶ್ಚಿಮದ ದೇಶಗಳು ತಮ್ಮ ಮಿಲಿಟರಿ ಸಹಾಯವನ್ನು ಸಮರ್ಥಿಸುವುದು ಕಷ್ಟವಾಗುತ್ತದೆ.

ಡಿಸೆಂಬರ್ 2021ರಲ್ಲಿ ನ್ಯಾಟೋ ನಡೆಸಿರುವ ಆಕ್ರಮಣವನ್ನು ಪ್ರಶ್ನಿಸಿರುವ ಪುಟಿನ್, ನ್ಯಾಟೋದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರುವಂತೆ ಒತ್ತಾಯಿಸಿದ್ದರು. ಮತ್ತಷ್ಟು ವಿಸ್ತರಣೆಯ ಮೇಲೆ ನಿಷೇಧವನ್ನು ಹೇರಲು ಮತ್ತು ಪೂರ್ವ ಯುರೋಪಿನಲ್ಲಿ ಪಾಶ್ಚಿಮಾತ್ಯ ಮಿಲಿಟರಿಯ ಉಪಸ್ಥಿತಿಯನ್ನು 1997ಕ್ಕಿಂತ ಪೂರ್ವದ ಮಟ್ಟಕ್ಕೆ ತರಲು ಪುಟಿನ್ ಬಯಸಿದ್ದರು. ನ್ಯಾಟೋ ಸದಸ್ಯ ರಾಷ್ಟ್ರವಾಗಲು ಉಕ್ರೇನ್‌ಗೆ ಎಂದಿಗೂ ಅನುಮತಿ ನೀಡಲಾಗುವುದಿಲ್ಲ ಎನ್ನುವ ಬದ್ಧತೆಯನ್ನು ಅವರು ಬಯಸುತ್ತಿದ್ದಾರೆ. ಉಕ್ರೇನ್‌ನಲ್ಲಿ ನ್ಯಾಟೋ ಮಿಲಿಟರಿ ತರಬೇತಿ ಕೇಂದ್ರವನ್ನು ಸ್ಥಾಪಿಸಬಹುದು ಎಂದು ಅವರು ಶಂಕಿಸಿದ್ದಾರೆ.

ಸದಸ್ಯತ್ವ ಪಡೆಯುವುದೇ ಉಕ್ರೇನ್? ಸದ್ಯಕ್ಕೆ ಇದು ಅಸಂಭವ ಎಂದೇ ಹೇಳಬೇಕು. ಈ ವಿಷಯದ ಬಗ್ಗೆ ನ್ಯಾಟೋ ಸದಸ್ಯ ರಾಷ್ಟ್ರಗಳಲ್ಲಿ ಯಾವುದೇ ಒಮ್ಮತವಿಲ್ಲ. ವ್ಯಾಪಾರ ಹಿತಾಸಕ್ತಿಗಳನ್ನು ಒಳಗೊಂಡಂತೆ ವಿವಿಧ ಕಾರಣಗಳಿಗಾಗಿ, ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ರಷ್ಯಾದೊಂದಿಗೆ ಸಂಘರ್ಷಕ್ಕೆ ಇಳಿದಿಲ್ಲ. ನಾವು ಉಕ್ರೇನ್‌ಗೆ ಸದಸ್ಯತ್ವವನ್ನು ನೀಡಿದರೆ, ಪ್ರದೇಶದಲ್ಲಿ ಸ್ಥಿರತೆಗಿಂತ ಹೆಚ್ಚಾಗಿ ಶಾಂತಿ ಭಂಗಕ್ಕೆ ಕಾರಣವಾಗಬಹುದು. ಸದಸ್ಯತ್ವಕ್ಕಾಗಿ ಉಕ್ರೇನ್‌ನ ವಿನಂತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೊದಲು ಅಮೆರಿಕ ಅಧ್ಯಕ್ಷರು ಸಾಕಷ್ಟು ಕಾಲಾವಕಾಶವನ್ನು ತೆಗೆದುಕೊಂಡರು.

ಭಾರತದ ಕಳವಳ 

ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಶೀತಲ ಸಮರವನ್ನು ಭಾರತ ನಿರ್ಲಕ್ಷಿಸಲು ಸಾಧ್ಯವಿದೆಯೇ? ಒಂದು ವೇಳೆ ರಕ್ತದೋಕುಳಿ ನಡೆಯುವ ಸಂಭವವಿದ್ದರೆ, ಚಿಂತಿಸಲು ಭಾರತಕ್ಕೂ ಹಲವು ಕಾರಣಗಳಿವೆ. ಭಾರತವು ಅಮೆರಿಕ ಮತ್ತು ರಷ್ಯಾದ ಜೊತೆಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುತ್ತಿದೆ. ಎರಡೂ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಸಾಕಷ್ಟು ಸಕರುಗಳು ಇನ್ನಷ್ಟೇ ಪೂರೈಕೆಯಾಗಬೇಕಿವೆ. ಆಕ್ರಮಣ ನಡೆಸಲು ರಷ್ಯಾ ಮುಂದಾದಲ್ಲಿ, ಅದು ಚೀನಾದ ಸಹಾಯವನ್ನು ತೆಗೆದುಕೊಳ್ಳಬಹುದು. ರಷ್ಯಾ ಮತ್ತು ಚೀನಾ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ, ಭಾರತ-ಚೀನಾ ಸಂಬಂಧ ಸಾಕಷ್ಟು ಹಳಸಿದೆ. ಆತ್ಮನಿರ್ಭರ್ ಭಾರತ್ ಮಿಷನ್ ಅಡಿಯಲ್ಲಿ ಭಾರತವು ಚೀನಾದ ವ್ಯವಹಾರದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೆ, ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಬಗ್ಗೆ ದೀರ್ಘಕಾಲ ಮೌನವಾಗಿರಲು ಭಾರತಕ್ಕೆ ಸಾಧ್ಯವಿಲ್ಲ.

ಭಾರತದ ವಿಷಯ ಹಾಗಿರಲಿ; ಜಾಗತಿಕವಾಗಿ ಹಬ್ಬಿರುವ ಸಾಂಕ್ರಾಮಿಕ ರೋಗದ ಹಾವಳಿಯ ನಡುವೆ ಯುದ್ಧದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಆದರೆ, ತಮ್ಮ ಶಕ್ತಿಯನ್ನು ಸಾಬೀತುಪಡಿಸಲು ಭೂಪ್ರದೇಶವನ್ನು ವಿಸ್ತರಿಸುವ ಸಾಹಸಕ್ಕೆ ಮುಂದಾದರೆ, ನಮ್ಮ ಆಡಳಿತಗಾರರನ್ನು ನಿಯಂತ್ರಿಸುವುದು ಕಷ್ಟ.

ಭವಿಷ್ಯದ ಬೆಳವಣಿಗೆಗಳು ಪುಟಿನ್ ಮತ್ತು ಅಮೆರಿಕದ ನಡುವಿನ "ಕೊಡು-ಕೊಳ್ಳುವುದರ" ಮೇಲೆ ಹೆಚ್ಚು ಅವಲಂಬಿತವಾಗಿವೆ. ಇದು ನ್ಯಾಟೋ ಹಿಂದಿನ ಪ್ರೇರಕ ಶಕ್ತಿಯಾಗಿದೆ.

(ಲೇಖಕರು: ವ್ಯವಸ್ಥಾಪಕ ನಿರ್ದೇಶಕರು, ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ– ಇಂಡೋ -ಜರ್ಮನ್ ಸಂಸ್ಥೆ )

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು