ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷ ಗಾದಿ ಯಾರಿಗೆ?

Last Updated 22 ಅಕ್ಟೋಬರ್ 2020, 21:00 IST
ಅಕ್ಷರ ಗಾತ್ರ
ADVERTISEMENT
""

ಅಮೆರಿಕದ ಅಧ್ಯಕ್ಷೀಯ ಚುನಾವಣೆ ದಿನೇದಿನೇ ಕುತೂಹಲ ಕೆರಳಿಸುತ್ತಿದೆ. ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಇದ್ದ ಪರಿಸ್ಥಿತಿ ಈಗ ಇಲ್ಲ. ಪ್ರತಿ ವಾರವೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ ಮತ್ತು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ ನಡುವಣ ಬಲಾಬಲದಲ್ಲಿ ಏರಿಳಿತವಾಗುತ್ತಿದೆ. ಚುನಾವಣಾ ಪ್ರಕ್ರಿಯೆ ಆರಂಭವಾದಾಗ, ಟ್ರಂಪ್‌ ಅವರಿಗೆ ಹೋಲಿಸಿದರೆ, ಬೈಡನ್‌ ಅವರ ಜನಪ್ರಿಯತೆ ಅಧಿಕವಾಗಿತ್ತು. ಈಗ ಜನಪ್ರಿಯತೆಯ ಅಂತರ ಕಡಿಮೆಯಾಗುತ್ತಿದೆ.

2016ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಅವರು ಸಾರ್ವತ್ರಿಕ ಮತಗಳಲ್ಲಿ, ತಮ್ಮ ಎದುರಾಳಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಭಾರಿ ಮುನ್ನಡೆ ಸಾಧಿಸಿದ್ದರು. ಆದರೆ ಎಲೆಕ್ಟರ್‌ (ಪ್ರತಿನಿಧಿ) ಮತದಾನದಲ್ಲಿ ಟ್ರಂಪ್ ಭಾರಿ ಮುನ್ನಡೆ ಸಾಧಿಸಿ, ಅಧ್ಯಕ್ಷ ಗಾದಿಯನ್ನು ಏರಿದ್ದರು. ಈ ಚುನಾವಣೆಯಲ್ಲೂ ಇದೇ ರೀತಿ ಆಗಬಹುದು ಎಂಬ ಅಂದಾಜು ಕೆಲವರಲ್ಲಿ ಇದೆ. ಈ ಲೆಕ್ಕಾಚಾರ ಸಂಪೂರ್ಣ ವ್ಯತಿರಿಕ್ತವಾಗಿ ಬೈಡನ್‌ ಅವರಿಗೇ ಹೆಚ್ಚು ಎಲೆಕ್ಟರ್‌ ಮತಗಳು ದೊರೆಯಬಹುದು ಎಂದು ಅಮೆರಿಕದ ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

2016ರ ಸಾರ್ವತ್ರಿಕ ಮತದಾನದಲ್ಲಿ ಟ್ರಂಪ್ ಅವರಿಗೆ ಬಂದಿದ್ದ ಮತಗಳ ಸಂಖ್ಯೆ ಕಡಿಮೆಯಿತ್ತು. ಆದರೆ 308 ಎಲೆಕ್ಟರ್‌ ಮತಗಳನ್ನು ಪಡೆಯುವ ಮೂಲಕ ಅವರು ಚುನಾವಣೆ ಗೆದ್ದಿದ್ದರು. ಈ ಚುನಾವಣೆಯಲ್ಲಿ ಟ್ರಂಪ್ ಅವರು 308 ಎಲೆಕ್ಟರ್‌ ಮತಗಳನ್ನು ಪಡೆಯುವ ಸಾಧ್ಯತೆ ಕಡಿಮೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಗೆಲುವಿಗೆ ಬೇಕಿರುವುದು 270 ಮತಗಳು ಮಾತ್ರ. ಅಷ್ಟು ಮತಗಳು ಟ್ರಂಪ್‌ಗೆ ದೊರೆಯಬಹುದು ಎಂಬ ಲೆಕ್ಕಾಚಾರವೂ ಇದೆ.

ಈಗ ಟ್ರಂಪ್ ಅವರ ಜನಪ್ರಿಯತೆ ಕಡಿಮೆಯಾಗಿದೆ. ಯಾವ ವರ್ಗದ ಮತದಾರರಲ್ಲಿ ಜನಪ್ರಿಯತೆ ಕಡಿಮೆಯಾಗಿದೆ ಎಂಬುದೂ ಸ್ಪಷ್ಟವಾಗಿದೆ. ಪದವಿಗಿಂತ ಕಡಿಮೆ ವಿದ್ಯಾರ್ಹತೆಯ ಬಿಳಿಯ ಮಹಿಳಾ ಮತದಾರರು ಮತ್ತು ಪದವಿ ಹೊಂದಿರುವ ಬಿಳಿಯ ಪುರುಷ ಮತದಾರರು2016ರ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರಂಪ್ ಪರವಾಗಿ ಮತ ಚಲಾಯಿಸಿದ್ದರು. ಎಲೆಕ್ಟರ್‌ಗಳಲ್ಲಿಯೂಈ ವರ್ಗದ ಪ್ರಾತಿನಿಧ್ಯ ಅಧಿಕವಾಗಿತ್ತು. ಹೀಗಾಗಿ ಅಂತಿಮ ಚುನಾವಣೆಯಲ್ಲಿ ಟ್ರಂಪ್‌ ಗೆಲುವು ಸುಲಭವಾಯಿತು. 2016ರ ಸಾರ್ವತ್ರಿಕ ಮತದಾನದಲ್ಲಿ ಈ ವರ್ಗದ ಮತಗಳಲ್ಲಿ ಟ್ರಂಪ್‌ ಅವರು, ಹಿಲರಿ ಅವರಿಗಿಂತ ಶೇ 37ರಷ್ಟು ಮುಂದೆ ಇದ್ದರು. ಈಗ ಬೈಡನ್‌ ವಿರುದ್ಧದ ಹೋರಾಟದಲ್ಲಿ ಟ್ರಂಪ್‌ ಅವರು ಈ ವರ್ಗದ ಮತಗಳಲ್ಲಿ ಸಾಧಿಸಿರುವ ಮುನ್ನಡೆ ಪ್ರಮಾಣ ಶೇ 11ರಷ್ಟು ಮಾತ್ರ. ಆದರೆ ಎಲೆಕ್ಟರ್‌ ಮತಗಳಲ್ಲೂ ಈ ಬದಲಾವಣೆ ಇರುತ್ತದೆಯೇ ಎಂಬುದನ್ನು ಊಹಿಸುವುದು ಕಷ್ಟ ಎಂದು ವಿಶ್ಲೇಷಕರು ಹೇಳಿದ್ದಾರೆ.

ಪದವಿ ಪಡೆಯದೇ ಇರುವ ಬಿಳಿಯ ಪುರುಷ ಮತದಾರರಲ್ಲಿ ಟ್ರಂಪ್ ಅವರ ಜನಪ್ರಿಯತೆ ಗಟ್ಟಿಯಾಗಿದೆ. ಇದು ಎಲೆಕ್ಟರಲ್‌ ಮತಗಳಲ್ಲೂ ಪ್ರತಿಬಿಂಬವಾಗುವ ಸಾಧ್ಯತೆ ಇದೆ.ಈ ಮತಗಳು ಟ್ರಂಪ್‌ ಅವರ ಗೆಲುವಿಗೆ ನೆರವಾಗುವ ಸಾಧ್ಯತೆ ಅತ್ಯಧಿಕವಾಗಿದೆ. ಆದರೆ, ಪದವಿ ಪಡೆದ ಬಿಳಿಯ ಮಹಿಳಾ ಮತದಾರರಲ್ಲಿ ನಿಲುವು ಅನಿಶ್ಚಿತವಾಗಿದೆ. ಆದರೆ ಈ ವರ್ಗವು ಬೈಡನ್‌ ಅವರನ್ನು ಬೆಂಬಲಿಸುತ್ತದೆ ಎಂದೂ ಹೇಳಲಾಗದು. ಮತದಾನ ನಡೆಯಲು ಇನ್ನೂ ಎರಡು ವಾರ ಇದೆ. ಅಷ್ಟರಲ್ಲಿ ಯಾವ ಬದಲಾವಣೆ ಸಹ ಆಗಬಹುದು. ಆದರೆ, ಈ ವರ್ಗವು ಯಾರತ್ತ ವಾಲುತ್ತದೆ ಎಂಬುದು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕವಾಗಬಹುದು ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

2016ರಲ್ಲಿ ಆದಂತೆಯೇ ಈಗಲೂ ಆಗುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗಬಹುದು. ಆಗ ಇಬ್ಬರು ಅಭ್ಯರ್ಥಿಗಳೂ, ಅಧ್ಯಕ್ಷೀಯ ಹುದ್ದೆಯಲ್ಲಿ ಅನನುಭವಿಗಳು. ಇಬ್ಬರೂ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಊಹೆ ಮಾಡಬೇಕಿತ್ತು ಅಷ್ಟೆ. ಹೀಗಾಗಿ ಸಾರ್ವತ್ರಿಕ ಮತಗಳು ಎಲೆಕ್ಟರ್‌ ಮತಗಳಾಗಿ ಪರಿವರ್ತನೆಯಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಟ್ರಂಪ್‌ ಅವರು ಅಧ್ಯಕ್ಷರಾಗಿ ನಾಲ್ಕು ವರ್ಷ ಆಡಳಿತ ನಡೆಸಿದ್ದಾರೆ. ಅವರ ಕಾರ್ಯನಿರ್ವಹಣೆ ಹೇಗಿರುತ್ತದೆ ಎಂಬುದರ ಪರಿಚಯ ಜನಕ್ಕೂ ಆಗಿದೆ, ಎಲೆಕ್ಟರ್‌ಗಳಾಗುವವರಿಗೂ ಆಗಿದೆ. ಹೀಗಾಗಿ ಸಾರ್ವತ್ರಿಕ ಮತಗಳನ್ನು ಕಳೆದ ಬಾರಿಗಿಂತ, ಈಗ ತುಸು ಗಂಭಿರವಾಗಿ ಪರಿಗಣಿಸಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT