ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಒಂದೇ ವರ್ಷದಲ್ಲಿ 3ನೇ ಸಲ ಚುನಾವಣೆಗೆ ಹೋಗುತ್ತಿರುವುದೇಕೆ ಇಸ್ರೇಲ್?

ಚುನಾವಣೆಗಳ ಮೇಲಾಟ| ಯಾವ ಪಕ್ಷಕ್ಕೂ ಸಿಗದ ಬಹುಮತ
Last Updated 3 ಮಾರ್ಚ್ 2020, 10:40 IST
ಅಕ್ಷರ ಗಾತ್ರ

ಜೆರುಸಲೇಂ: ಇಸ್ರೇಲ್‌ಸಂಸತ್ತಿಗೆ ಒಂದೇ ವರ್ಷದಲ್ಲಿ ಮೂರನೇ ಬಾರಿ ಚುನಾವಣೆ ಎದುರಾಗಿದೆ. ಸೋಮವಾರ ಮತದಾನವೂ ನಡೆದಿದೆ. ಬಲಪಂಥೀಯ ಲಿಕುಡ್ ಪಕ್ಷದ ಮುಂದಾಳು ನೆತಾನ್ಯಾಹು ಮತ್ತು ಇವರ ಪ್ರತಿಸ್ಪರ್ಧಿ, ಬ್ಲೂ ಅಂಡ್ ವೈಟ್ ಪಕ್ಷದ ನಾಯಕ ಬೆನ್ನಿ ಗಾಂಟ್ಸ್ ಅವರು ಈ ಬಾರಿಯಾದರೂ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದಾರೆ. ಕಳೆದ ವರ್ಷದ ಏಪ್ರಿಲ್ 9 ಹಾಗೂ ಸೆಪ್ಟೆಂಬರ್ 17ರಂದು ನಡೆದ ಎರಡು ಚುನಾವಣೆಗಳಲ್ಲಿ ಇವರಿಗೆ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ನೆತಾನ್ಯಾಹು ಅವರ ಮೇಲಿನ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ಇದೇ 17ರಂದು ನಿಗದಿಯಾಗಿದ್ದು, ಇಸ್ರೇಲ್‌ನಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ತಲೆದೋರುವ ಸಾಧ್ಯತೆಯಿದೆ. ಮೂರು ಚುನಾವಣೆಗಳ ಹಿಂದಿನ ಕಾರಣಗಳ ಮೇಲೊಂದು ನೋಟ ಇಲ್ಲಿದೆ..

ಮೊದಲ ಚುನಾವಣೆ ಘೋಷಣೆ

2015ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬೆಂಜಮಿನ್ ನೇತಾನ್ಯಾಹು ಸರ್ಕಾರಕ್ಕೆ 2018ರವರೆಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ನೆತಾನ್ಯಾಹು ಅವರು ಗಾಜಾದ ಪ್ಯಾಲೆಸ್ಟೀನ್ ಬಂಡುಕೋರರ ವಿರುದ್ಧ ಮೃದು ನಿಲುವು ಹೊಂದಿದ್ದಾರೆ ಎಂದು ಆರೋಪಿಸಿ ರಕ್ಷಣಾ ಸಚಿವ ಅವಿಗ್ಡೊರ್ ಲೀಬರ್‌ಮನ್ ಅವರು ರಾಜೀನಾಮೆ ನೀಡಿ ಸರ್ಕಾರದಿಂದ ಹೊರನಡೆದರು. ಸರ್ಕಾರ ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಯಿತು. ಸ್ಪಷ್ಟ ಬಹುಮತ ಪಡೆಯುವ ಸಲುವಾಗಿ ನೆತಾನ್ಯಾಹು2019ರ ಏಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿದರು. ಆದರೆ ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ತಡೆ ಒಡ್ಡುವ ಉದ್ದೇಶದಿಂದ ನೆತಾನ್ಯಾಹು ಅವರು ಪೂರ್ಣ ಬಹುಮತದ ಸರ್ಕಾರ ರಚನೆಗಾಗಿ ಚುನಾವಣೆಗೆ ಘೋಷಿಸಿದರು ಎಂಬ ಆರೋಪ ಕೇಳಿ ಬಂತು.

ಫಲ ಕೊಡದ ನೆತಾನ್ಯಾಹು ಯೋಜನೆ

ಏಪ್ರಿಲ್‌ನಲ್ಲಿ ನಡೆದ ಚುನಾವಣೆಯು ನೆತಾನ್ಯಾಹು ಯೋಜನೆಯನ್ನು ಬುಡಮೇಲಾಗಿಸಿತು. ಯಾವ ಪಕ್ಷಕ್ಕೂ ಸರಳ ಬಹುಮತ ದೊರೆಯಲಿಲ್ಲ. ವಾರಗಳು ಕಳೆದರೂ ಅಗತ್ಯ ಸಂಖ್ಯಾಬಲ ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ.ಪ್ರತಿಸ್ಪರ್ಧಿ, ಸೇನೆಯ ಮಾಜಿ ಮುಖ್ಯಸ್ಥ ಬೆನ್ನಿ ಗಾಂಟ್ಸ್ ಅವರಿಗೆ ಸರ್ಕಾರ ರಚಿಸಲು ಅವಕಾಶ ಇತ್ತು. ಆದರೆ ಇದಕ್ಕೆ ದಾರಿಮಾಡಿಕೊಡದೇ, ಸೆ.17ರಂದು ಮತ್ತೊಂದು ಚುನಾವಣೆಯನ್ನು ನೆತಾನ್ಯಾಹು ಘೋಷಿಸಿಬಿಟ್ಟರು.

ಎರಡನೇ ಚುನಾವಣೆಯಲ್ಲಿ ಏನಾಯಿತು?

ಸೆಪ್ಟೆಂಬರ್‌ನಲ್ಲಿ ನಡೆದ ಎರಡನೇ ಚುನಾವಣೆಯಲ್ಲಿಯೂ ನೆತನ್ಯಾಹು ಪಕ್ಷಕ್ಕೆ ಸರಳ ಬಹುಮತ ಸಿಗಲಿಲ್ಲ. ಲಿಕುಡ್ ಮತ್ತು ಗಾಂಟ್ಸ್ ನೇತೃತ್ವದ ಬ್ಲೂ ಅಂಡ್ ವೈಟ್ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನ ಗಳಿಸಿದವು. ಮಾಜಿ ರಕ್ಷಣಾ ಸಚಿವ ಲೀಬರ್‌ಮನ್ ಅವರಿಗೆ ಕಿಂಗ್ ಮೇಕರ್ ಆಗುವ ಅವಕಾಶ ಇತ್ತು. ಆದರೆ ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣ ಅವರು ಎರಡೂ ಪಕ್ಷಗಳನ್ನು ದೂರವಿರಿಸಿದರು. ಚುನಾವಣೆ ನಡೆದು ತಿಂಗಳವರೆಗೆ ಸಂಸದರ ಖರೀದಿ ಯತ್ನ ತೆರೆಮರೆಯಲ್ಲಿ ಜೋರಾಗಿ ನಡೆಯಿತಾದರೂ, ಇಬ್ಬರಿಗೂ ಅಗತ್ಯ ಸಂಖ್ಯಾಬಲ ಒಗ್ಗೂಡಿಸಲು ಆಗಲಿಲ್ಲ. ಮೂರನೇ ಚುನಾವಣೆಗೆ ಇದು ದಾರಿ ಮಾಡಿಕೊಟ್ಟಿತು.

ಮೂರನೇ ಚುನಾವಣೆ: ಯಾರಿಗೆ ಲಾಭ?

ಮೂರನೇ ಚುನಾವಣೆ ಹೊಸ್ತಿಲಲ್ಲೇ ನೆತಾನ್ಯಾಹು ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಅವರ ವಿಚಾರಣೆಯು ಇನ್ನೇನು ಆರಂಭವಾಗಲಿದೆ. ಆದರೆ ಪಟ್ಟು ಬಿಡದ ನೆತಾನ್ಯಾಹು ಚುನಾವಣೆಯಲ್ಲಿ ಗೆಲ್ಲುವ ಹವಣಿಕೆಯಲ್ಲಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಕಟಿಸಿದ್ದ ಮಧ್ಯಪ್ರಾಚ್ಯ ಶಾಂತಿ ಯೋಜನೆಯನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿದ್ದಾರೆ. ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ, ಇಸ್ರೇಲ್‌ನ ವಸಾಹತುಗಳನ್ನು ಮರಳಿ ಸೇರ್ಪಡೆಗೊಳಿಸುವ ವಾಗ್ದಾನ ನೀಡಿದ್ದಾರೆ.

ಅತ್ತ ಗಾಂಟ್ಸ್‌ ಅವರಿಗೂ ಕೆಲವು ಮಿತಿಗಳಿವೆ. ಬಲಪಂಥೀಯರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜಾಣ್ಮೆಯನ್ನು ಅವರು ತೋರಿಲ್ಲ. ಜತೆಗೆ ಇಸ್ರೇಲ್‌ನಲ್ಲಿ ಅರಬ್ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಮತಗಳೂ ಇವರಿಗೆ ನಿರ್ಣಾಯಕವಾಗಿದ್ದವು.

ಮತಗಟ್ಟೆ ಸಮೀಕ್ಷೆ

2020ರ ಚುನಾವಣೆಯಲ್ಲಿ ಸರ್ಕಾರ ರಚಿಸಲು ಲಿಕುಡ್ ಹಾಗೂ ಬ್ಲೂ ಅಂಡ್ ವೈಟ್ ಪಕ್ಷಗಳು ಸಮಬಲದ ಹೋರಾಟ ನಡೆಸಲಿವೆ ಎಂದು ಮತಗಟ್ಟೆ ಸಮಿಕ್ಷೆಗಳು ಭವಿಷ್ಯ ನುಡಿದಿವೆ. ಕೊನೆಯ ಸುತ್ತಿನ ಪ್ರಚಾರದ ವೇಳೆ ನೆತಾನ್ಯಾಹು ಅವರ ಪಕ್ಷ ಕೊಂಚ ಮುನ್ನಡೆ ಸಾಧಿಸಿದೆ ಎಂದು ವರದಿಗಳು ತಿಳಿಸಿವೆ.

120 ಸದಸ್ಯಬಲದ ಸಂಸತ್ತಿನಲ್ಲಿ ಸರ್ಕಾರ ರಚಿಸಬೇಕಾದರೆ ನೆತಾನ್ಯಾಹುಗೆ 61 ಸಂಸದರ ಬೆಂಬಲ ಬೇಕು. ಮೈತ್ರಿ ಸರ್ಕಾರ ರಚಿಸಬೇಕಾದರೆ, ಉಳಿದ ಪಕ್ಷಗಳ ಸಂಸದರನ್ನು ಅವರು ಸೆಳೆಯುವ ಅನಿವಾರ್ಯ ಎದುರಾಗಬಹುದು.

ನಾಲ್ಕನೇ ಚುನಾವಣೆ?

ಈ ಬಾರಿಯೂ ತ್ರಿಶಂಕು ಸ್ಥಿತಿ ತಲೆದೋರಿದರೆ ನಾಲ್ಕನೇ ಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಇದನ್ನು ಒಪ್ಪಲಾಗದು ಎನ್ನುತ್ತಾರೆ ಕೆಲವು ರಾಜಕೀಯ ನಾಯಕರು. ರಾಜಕೀಯ ಮೇಲಾಟ ಒಂದು ಕಡೆಯಾದರೆ, ನಿರಂತರ ಚುನಾವಣೆ
ಹಾಗೂ ಉಸ್ತುವಾರಿ ಸರ್ಕಾರಗಳಿಂದ ದೇಶದ ಅರ್ಥವ್ಯವಸ್ಥೆಯೂ ಅಪಾಯಕ್ಕೆ ಸಿಲುಕಲಿದೆ ಎಂದು
ವಿಶ್ಲೇಷಿಸಲಾಗಿದೆ.

ರಾಷ್ಟ್ರೀಯ ಏಕತೆಯ ಸರ್ಕಾರ?

ಸಮಸ್ಯೆ ಬಗೆಹರಿಸಬೇಕಾದರೆ, ನೆತಾನ್ಯಾಹು ಹಾಗೂ ಗಾಂಟ್ಸ್ ಒಟ್ಟಾಗಿ ರಾಷ್ಟ್ರೀಯ ಏಕತೆಯ ಸರ್ಕಾರ ರಚಿಸಬೇಕು ಎಂಬುದು ಹಲವು ಇಸ್ರೇಲಿಗರ ಬಯಕೆ. ಅದರೆ ಇದು ಅಸಾಧ್ಯ ಎಂದು ಗಾಂಟ್ಸ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ಪ್ರಕಟವಾಗುವ ಫಲಿತಾಂಶ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT