ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಹೌದು, ಬಂದಿದೆ ಒಟಿಟಿ ಕಾಲ!

Last Updated 7 ಜುಲೈ 2020, 2:42 IST
ಅಕ್ಷರ ಗಾತ್ರ
ADVERTISEMENT
""

ಅದು 1991ನೇ ಇಸ್ವಿಯ ಡಿಸೆಂಬರ್‌ ತಿಂಗಳು. ಮಹೇಶ್‌ ಭಟ್‌ ನಿರ್ದೇಶನದ ಸಂಜಯ್‌ ದತ್‌ ಹಾಗೂ ಪೂಜಾ ಭಟ್‌ ಅಭಿನಯದ ‘ಸಡಕ್‌’ ಚಿತ್ರ ಆಗಷ್ಟೇ ಬಿಡುಗಡೆಯಾಗಿತ್ತು. ರಾಂಚಿಯ ವೆಲ್‌ಫೇರ್‌ ಸಿನಿಮಾ ಮಂದಿರದ ಮುಂದೆ ನಾನು ಟಿಕೆಟ್‌ಗಾಗಿ ಸರದಿಯಲ್ಲಿ ನಿಂತಿದ್ದೆ. ಮೊದಲ ದಿನದ ಮೊದಲ ಷೋ ನೋಡುವ ಇರಾದೆ ನನ್ನದಾಗಿತ್ತು.

ವಿವೇಕ್‌ ಕೌಲ್‌

ಬಹುತೇಕ ಟಿಕೆಟ್‌ಗಳು ಬ್ಲ್ಯಾಕ್‌ನಲ್ಲಿ ಮಾರಾಟ ಆಗುತ್ತಿದ್ದರಿಂದ ನನ್ನ ಸರದಿ ಬರುವ ಹೊತ್ತಿಗೆ ಬಾಕ್ಸ್‌ ಆಫೀಸ್‌ ಮುಚ್ಚಿತ್ತು. ಅದು 90ರ ದಶಕ. ಆ ದಿನಗಳಲ್ಲಿ ಎಲ್ಲರಿಗೂ ಬೇಕಾದಷ್ಟು ಸಮಯ ಇರುತ್ತಿತ್ತು. ಕೆಲವು ಗಂಟೆಗಳ ಬಳಿಕ ಸೆಕೆಂಡ್‌ ಷೋ ಟಿಕೆಟ್‌ ಖರೀದಿಸಲು ನಾನು ಮತ್ತೆ ಹೋಗಿದ್ದೆ. ಬೆಳಗಿನ ಹೊತ್ತು ನಾನು ಸರದಿಯಲ್ಲಿ ನಿಂತು ಮರಳಿ ಹೋಗಿದ್ದನ್ನು ನೋಡಿದ್ದ ಕಾನ್‌ಸ್ಟೇಬಲ್‌ವೊಬ್ಬರು ನನಗೆ ಟಿಕೆಟ್‌ ದೊರಕಿಸಿಕೊಟ್ಟಿದ್ದರು.

ಅಷ್ಟೊಂದು ಕಷ್ಟಪಟ್ಟು ಟಿಕೆಟ್‌ ಖರೀದಿಸಿ, ಸಿನಿಮಾ ನೋಡಲು ಕುಳಿತಾಗ ಅಲ್ಲಿನ ಅನುಭವ ಅಸಹನೀಯವಾಗಿತ್ತು. ಫ್ಯಾನ್‌ಗಳು ತಿರುಗುತ್ತಿರಲಿಲ್ಲ. ಸೀಟುಗಳು ಕಿತ್ತುಹೋಗಿದ್ದವು. ತಿಗಣಿಗಳ ಕಾಟ ಬೇರೆ. ಸದಾಶಿವ ಅಮರಾಪೂರ್‌ಕರ್‌ ಅವರ ಪಾತ್ರವೂ ಅಷ್ಟೇನು ಹಿಡಿಸಲಿಲ್ಲ.

ಈಗ 2020ಕ್ಕೆ ಬನ್ನಿ. ಹೆಚ್ಚು ಕಡಿಮೆ 30 ವರ್ಷಗಳಾಗಿವೆ. ಆಗಿನ ಚಿತ್ರದ ಉತ್ತರಭಾಗವಾದ ಸಡಕ್‌–2 ಈಗ ಒಟಿಟಿಯಲ್ಲಿ ಇನ್ನೇನು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನಾನು ನನ್ನ ಹಾಸಿಗೆಯ ಮೇಲೆ ಆರಾಮವಾಗಿ ಕಾಲು ಚಾಚಿಕೊಂಡು, ಕಾಫಿ ಕುಡಿಯುತ್ತಾ ನೋಡಬಹುದು. ಮಲ್ಟಿಪ್ಲೆಕ್ಸ್‌ ಗಳಲ್ಲಿ ಮಾರುವ ಪಾಪ್‌ಕಾರ್ನ್‌ ಹಾಗೂ ಕಾಫಿಗಾಗಿ ನಾನು ದುಬಾರಿ ಬೆಲೆ ತೆರುವ ಅಗತ್ಯವೂ ಈಗಿಲ್ಲ. ಅಲ್ಲದೆ, ಯಾವಾಗ ಬೇಕಾದರೂ ಸಿನಿಮಾ ನೋಡಬಹುದು ಮತ್ತು ಬೇಡವೆನಿಸಿದರೆ ಅಲ್ಲಿಗೇ ನಿಲ್ಲಿಸಿಬಿಡಬಹುದು.

ಸಿನಿಮಾ ಹಾಲ್‌ನಿಂದ ಹೊರಬರುವುದಕ್ಕಿಂತ ಟಿವಿ ಆಫ್‌ ಮಾಡುವುದು ತುಂಬಾ ಸಲೀಸು. ಆದರೆ, ಇನ್ನೊಂದು ಆಯಾಮದಿಂದ ನೋಡುವುದಾದರೆ ಬಿಗ್‌ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಿದ ಅನುಭವ ಟಿವಿ ಪರದೆ ಮೇಲೆ ಸಿಗುವುದಿಲ್ಲ.

ಕೆಲವು ತಿಂಗಳುಗಳಿಂದ ಕೋವಿಡ್‌ ಎಲ್ಲೆಡೆ ಹರಡುತ್ತಿದೆ. ಅಲ್ಲದೆ, ಅದರ ತೀವ್ರತೆ ಬೇಗ ಕಡಿಮೆ ಆಗುವುದಿಲ್ಲ ಎನ್ನುವುದೂ ಸ್ಪಷ್ಟವಾಗಿದೆ. ಹಲವು ಚಿತ್ರ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಸಿನಿಮಾ ಮಾಡುವುದು ಒಂದು ತುಂಬಾ ವೆಚ್ಚದಾಯಕ ಕೆಲಸ. ಒಂದುವೇಳೆ ಸಿನಿಮಾ ಬಿಡುಗಡೆ ಆಗದಿದ್ದರೆ ನಿರ್ಮಾಪಕನಿಗೆ ತಾನು ಹೂಡಿದ ಬಂಡವಾಳವನ್ನು ಹಿಂಪಡೆಯಲು ದಾರಿಯೇ ಇರುವುದಿಲ್ಲ. ಅಲ್ಲದೆ, ಎಷ್ಟೋ ನಿರ್ಮಾಪಕರು ಸಿನಿಮಾ ಮಾಡಲು ಸಾಲವನ್ನೂ ಮಾಡಿ ದುಡ್ಡು ತಂದಿರುತ್ತಾರೆ. ಆ ಹಣವನ್ನು ಮರುಪಾವತಿ ಮಾಡಲೇಬೇಕು. ಹಾಕಿದ ಹಣ ಹಿಂದಿರುಗಿ ಬರುವುದು ತಡವಾದಷ್ಟೂ ಸಾಲದ ಹೊರೆ ಹೆಚ್ಚುತ್ತಲೇ ಹೋಗುತ್ತದೆ. ಈ ಕಾರಣಕ್ಕಾಗಿಯೇ ದೊಡ್ಡ ದೊಡ್ಡ ತಾರೆಗಳ ಚಿತ್ರಗಳೂ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಆಗುತ್ತಿವೆ.

ಒಟಿಟಿ ವೇದಿಕೆಗಳು ಸಹ ಹೊಸ ಮಾಧ್ಯಮವಾಗಿವೆ. ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಹಾತೊರೆಯುತ್ತಿರುವ ಅವುಗಳಿಗೆ, ತಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಸಿನಿಮಾ ಹಾಗೂ ಕ್ರಿಕೆಟ್‌ನ ಕಂಟೆಂಟ್‌ ಒದಗಿಸುವುದು ಸುಲಭದ ದಾರಿಯಾಗಿ ಸಿಕ್ಕಿದೆ.

1990ರ ದಶಕದಲ್ಲಿ ಖಾಸಗಿ ಮನರಂಜನಾ ಚಾನೆಲ್‌ಗಳು ಜನಪ್ರಿಯಗೊಂಡಿದ್ದು ಸಹ ಇಂತಹದ್ದೇ ಹಾದಿಯಿಂದ. ದೂರದರ್ಶನದಿಂದ ಕೇಬಲ್‌ ಟಿವಿಯತ್ತ ಜನ ಆಕರ್ಷಣೆಗೆ ಒಳಗಾಗಿದ್ದು ಅವುಗಳಲ್ಲಿ ಪ್ರಸಾರವಾಗುತ್ತಿದ್ದ ಸಿನಿಮಾ ಸಂಬಂಧಿ ಕಂಟೆಂಟ್‌ನಿಂದ. ಹೌದು, ಈ ಬೆಳವಣಿಗೆಯಿಂದ ಸಿನಿಮಾ ಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳ ಒಡೆಯರು ನಿರಾಶರಾಗಿದ್ದಾರೆ. ಏಕೆಂದರೆ, ಚಿತ್ರ ಬಿಡುಗಡೆಯಲ್ಲಿ ಅವರ ಏಕಸ್ವಾಮ್ಯಕ್ಕೆ ಏಟು ಬಿದ್ದಿದೆ.

ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಒದಗಿಸುವ ಹೊಸ ಆವಿಷ್ಕಾರಗಳಿಗೆ ಸ್ವಾಗತ. ಈಗಲೂ ವ್ಯಕ್ತಿಯೊಬ್ಬ ಚಿತ್ರಮಂದಿರದಲ್ಲೇ ಸಿನಿಮಾ ನೋಡಲು ಬಯಸಿದರೆ ಕೋವಿಡ್‌ ಬಿಕ್ಕಟ್ಟು ಕೊನೆಗೊಂಡ ಮೇಲೆ ಆತ ನೋಡಬಹುದು. ಆದರೆ, ಮನರಂಜನೆ ನಮ್ಮ ನಿತ್ಯ ಬದುಕಿನ ಅಗತ್ಯ. ಒಟಿಟಿ ವೇದಿಕೆಗಳು ಈಗ ನಮಗೆ ಅದನ್ನು ಒದಗಿಸುತ್ತಿವೆ. ಮೊದಲಾದರೆ ಇಂಟರ್ನೆಟ್‌ ಪಡೆಯುವುದು ತುಂಬಾ ದುಬಾರಿಯಾಗಿತ್ತು. ಈಗ ಅಗ್ಗದ ದರದಲ್ಲಿ ನೆಟ್‌ ಸಂಪರ್ಕ ಸಿಗುತ್ತಿರುವುದು ಒಟಿಟಿ ಬಳಕೆ ಹೆಚ್ಚಲು ನೆರವಿಗೆ ಬಂದಿದೆ.

ಒಂದೊಮ್ಮೆ ಒಟಿಟಿ ವೇದಿಕೆಗೆ ಚಿತ್ರವೊಂದು ಬಂದರೆ ಅದು ಯಾವಾಗಲೂ ಅಲ್ಲಿಯೇ ಉಳಿಯುತ್ತದೆ (ಚಿತ್ರಮಂದಿರದಲ್ಲಿ ಸಮಯ ಕಳೆದಂತೆ ಬದಲಾವಣೆ ಮಾಡುತ್ತಾರೆ). ಯಾರು, ಯಾವಾಗ ಬೇಕಾದರೂ ಆ ಚಿತ್ರವನ್ನು ಆನ್‌–ಡಿಮ್ಯಾಂಡ್‌ ನೋಡುವ ಅವಕಾಶ ಇಲ್ಲಿದೆ. ಸದ್ಯ ಒಟಿಟಿ ವೇದಿಕೆಗಳಿಗೆ ಚಂದಾ ಮಾಡಿಕೊಳ್ಳುವ ಅಗತ್ಯವಿದೆ. ಮುಂದೆ ಯಾವ ಕಂಟೆಂಟ್‌ ಬೇಕೋ ಅಷ್ಟಕ್ಕೇಪಾವತಿಸಿ ನೋಡುವ ಅವಕಾಶ ಸಿಗುವಂತಾಗಬೇಕು.

ಏನೇ ಹೇಳಿ, ಹೊಸ ಸಿನಿಮಾಗಳನ್ನು ಒಟಿಟಿ ವೇದಿಕೆಗಳಲ್ಲಿ ನೋಡುವುದು ಒಂದೊಮ್ಮೆ ಕಲ್ಪನೆಯಾಗಿತ್ತು. ಈಗ ಅದು ವಾಸ್ತವವಾಗಿ ಕಣ್ಣಮುಂದಿ ರುವುದು ಸುಳ್ಳಲ್ಲ.

ಏನಿದು ಓಟಿಟಿ?

ಒಟಿಟಿ ಅಂದರೆ ಓವರ್‌ ದಿ ಟಾಪ್‌ (ಆನ್‌ಲೈನ್‌) ವೇದಿಕೆ ಮೂಲಕ ಮನರಂಜನೆ ಒದಗಿಸುವ ಉದ್ಯಮ. ಒಟಿಟಿ ವೇದಿಕೆಗಳು, ತಾವು ಚಂದಾದಾರರನ್ನಾಗಿ ಹೊಂದಿದ ಗ್ರಾಹಕರಿಗೆ ‘ಆನ್‌ ಡಿಮ್ಯಾಂಡ್‌’ ಮನರಂಜನಾ ಕಂಟೆಂಟ್‌ಗಳನ್ನು (ಸಿನಿಮಾ/ ವೆಬ್‌ ಸರಣಿ, ಕ್ರೀಡೆ ಇತ್ಯಾದಿ) ಒದಗಿಸುತ್ತವೆ.

₹ 29.80 ಸಾವಿರ ಕೋಟಿ ಗಾತ್ರದ ಉದ್ಯಮ

ಭಾರತದಲ್ಲಿ ಒಟಿಟಿ ಉದ್ಯಮ 2025ರ ಹೊತ್ತಿಗೆ ₹ 29.80 ಸಾವಿರ ಕೋಟಿಯಷ್ಟು ದೊಡ್ಡ ಗಾತ್ರದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲಿದೆ ಎಂದು ಮೀಡಿಯಾ ಪಾರ್ಟ್‌ನರ್ಸ್‌ ಏಷ್ಯಾದ ಸಮೀಕ್ಷಾ ವರದಿ ಹೇಳುತ್ತದೆ.

ಗ್ರಾಹಕರ ಚಂದಾ ಹಾಗೂ ಜಾಹೀರಾತು ಎರಡೂ ಮೂಲಗಳಿಂದ ಒಟಿಟಿ ವೇದಿಕೆಗಳು ದೊಡ್ಡ ಆದಾಯವನ್ನೇ ಬಾಚಿಕೊಳ್ಳಲಿವೆ. ಇನ್ನು ನಾಲ್ಕು ವರ್ಷಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ದೇಶದ ಉಳಿದ ಆನ್‌ಲೈನ್‌ ಮನರಂಜನಾ ವೇದಿಕೆಗಳನ್ನು ಹಿಂದೆ ಹಾಕುವ ಸಾಧ್ಯತೆ ನಿಚ್ಚಳವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

‘ಸದ್ಯದ ಕೋವಿಡ್‌ ಬಿಕ್ಕಟ್ಟಿನ ಈ ಸನ್ನಿವೇಶದಲ್ಲಿ ಜನ ಆನ್‌ಲೈನ್‌ನಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ. ಒಟಿಟಿ ವೇದಿಕೆಗಳ ವೀಕ್ಷಕರ ಸಂಖ್ಯೆ ಈ ಅವಧಿಯಲ್ಲಿ ದುಪ್ಪಟ್ಟಾಗಿದೆ. ಕೋವಿಡ್‌ನ ತೀವ್ರತೆ ಕಡಿಮೆಯಾದರೂ ಒಟಿಟಿ ಬಳಕೆಯ ಸದ್ಯದ ಟ್ರೆಂಡ್‌ ಹೀಗೆಯೇ ಮುಂದುವರಿಯಲಿದೆ. ಒಟಿಟಿ ವೇದಿಕೆಗಳಿಗೆ ಜಾಹೀರಾತು ಸಹ ದೊಡ್ಡ ಪ್ರಮಾಣದಲ್ಲಿ ಹರಿದು ಬರಲಿದೆ’ ಎನ್ನುತ್ತಾರೆ ಜೀ5ನ ಗ್ರಾಹಕರ ಸಂಬಂಧಗಳ ವಿಭಾಗದ ಅನಿತಾ ನಯ್ಯರ್‌.

ಜನಪ್ರಿಯ ಒಟಿಟಿ ವೇದಿಕೆಗಳು

*ಅಮೆಜಾನ್‌ ಪ್ರೈಮ್‌

*ಮುಬಿ

*ವೂಟ್‌

*ಆಲ್ಟ್‌ ಬಾಲಾಜಿ

*ಬಿಗ್‌ಫ್ಲಿಕ್ಸ್‌

*ವಿಯು

*ಸೋನಿ ಲಿವ್‌

*ಇರೋಸ್‌ ನೌ

*ಜೀ5

*ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

*ನೆಟ್‌ಫ್ಲಿಕ್ಸ್‌

*ಹುಲು

*ಆಹಾ

*ಮಿಕ್ಸ್‌ ಪ್ಲೇಯರ್‌

*ಸನ್‌ ನೆಕ್ಸ್ಟ್‌

*ಹುಕ್‌

ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ/ಬಿಡುಗಡೆ ಆಗಲಿರುವ ಬಾಲಿವುಡ್ ಚಿತ್ರಗಳು

*ಗುಲಾಬೊ ಸಿತಾಬೊ

*ಚೋಕ್ಡ್‌

*ಚಿಂಟು ಕಾ ಬರ್ತ್‌ಡೇ

*ಘೂಮ್‌ಕೇತು

*ಮಿಸಸ್‌ ಸಿರಿಯಲ್‌ ಕಿಲ್ಲರ್‌

*ಮಸ್ಕಾ

*ಬಂಫಾದ್‌

*ವಾಟ್‌ ಆರ್‌ ದಿ ಆಡ್ಸ್‌

*ಅತೀತ್‌

*ಖುದಾ ಹಾಫೀಜ್‌

*ಲಕ್ಷ್ಮಿ ಬಾಂಬ್‌

*ಸಡಕ್‌ 2

*ಭುಜ್‌: ದಿ ಪ್ರೈಡ್‌ ಆಫ್‌ ಇಂಡಿಯಾ

*ಬಿಗ್‌ ಬುಲ್‌

*ದಿಲ್‌ ಬೇಚಾರ

ಅಷ್ಟೆ!

ಪ್ರಜಾವಾಣಿ Podcast

ದಿನದ ಸೂಕ್ತಿಯನ್ನು ಕೇಳಲು ಇಲ್ಲಿಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT