ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact check | ಅಮಿತ್‌ ಶಾಗೆ ಎಲುಬಿನ ಕ್ಯಾನ್ಸರ್‌; ಟ್ವೀಟ್‌ ವೈರಲ್‌ 

Last Updated 9 ಮೇ 2020, 12:15 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರದ್ದು ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗಿದೆ. ಹಿಂದಿಯಲ್ಲಿರುವ ಟ್ವೀಟ್‌ ಸ್ಕ್ರೀನ್‌ಶಾಟ್‌ ಪ್ರಕಾರ, ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಮಿತ್‌ ಶಾ ಶೀಘ್ರ ಗುಣಮುಖರಾಗಲು ಮುಸ್ಲಿಂ ಸಮುದಾಯದ ಆಶೀರ್ವಾದ ಕೋರಿದ್ದಾರೆ. ಕೋವಿಡ್–19 ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಮಿತ್‌ ಶಾಹೆಚ್ಚು ಕಾಣಿಸಿಕೊಳ್ಳದಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಈ ಚಿತ್ರ ಹರಿದಾಡುತ್ತಿದೆ.

ವೈರಲ್‌ ಆಗಿರುವ ಚಿತ್ರದಲ್ಲಿರುವ ಬರಹ ಹೀಗಿದೆ; 'ನನ್ನ ದೇಶ ಬಾಂಧವರೇ, ನಾನು ತೆಗೆದುಕೊಳ್ಳುವ ಪ್ರತಿಯೊಂದು ಕ್ರಮಗಳು ದೇಶದ ಒಳಿತಿಗಾಗಿ. ನಾನು ಯಾವುದೇ ಜಾತಿ ಅಥವಾ ಧರ್ಮದ ಯಾವುದೇ ‌ವ್ಯಕ್ತಿಯನ್ನು ದ್ವೇಷಿಸುವುದಿಲ್ಲ. ಕಳೆದ ಕೆಲವು ದಿನಗಳಿಂದ ಆರೋಗ್ಯದ ಏರುಪೇರಿನಿಂದಾಗಿ ದೇಶದ ಜನರ ಸೇವೆ ಮಾಡಲು ಸಾಧ್ಯವಾಗಿಲ್ಲ. ನನ್ನ ಗಂಟಲಿನ ಹಿಂಬದಿಯಲ್ಲಿ ಎಲುಬಿನ ಕ್ಯಾನ್ಸರ್‌ ಇರುವ ಬಗ್ಗೆಹಂಚಿಕೊಳ್ಳಲು ದುಃಖವಾಗುತ್ತಿದೆ. ಪವಿತ್ರ ರಂಜಾನ್‌ ತಿಂಗಳಿನಲ್ಲಿ ಮುಸ್ಲಿಂ ಸಮುದಾಯ ಸಹ ನನ್ನ ಶೀಘ್ರ ಗುಣಮುಖಕ್ಕಾಗಿ ಪ್ರಾರ್ಥಿಸುತ್ತಾರೆಂದು ಭರವಸೆ ಇದೆ'.

ಈ ಟ್ವೀಟ್‌ ಅಧಿಕೃತವಾದುದಲ್ಲ, ಇದೊಂದು ಫೇಕ್‌ ಟ್ವಿಟರ್‌ ಸ್ಕ್ರೀನ್‌ಶಾಟ್‌ ಎಂಬುದನ್ನು ಗುರುತಿಸಬಹುದಾಗಿದೆ.

ಗೃಹ ಸಚಿವ ಅಮಿತ್‌ ಶಾ ಶನಿವಾರ ಪ್ರತಿಕ್ರಿಯಿಸಿದ್ದು, 'ನಾನು ಸಂಪೂರ್ಣ ಆರೋಗ್ಯದಿಂದ ಇದ್ದೇನೆ ಹಾಗೂ ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ' ಎಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಆರೋಗ್ಯದ ಸಂಬಂಧ ಊಹಾಪೋಹಗಳು ಹರಡಿವೆ, ನಾನು ಚೆನ್ನಾಗಿದ್ದೇನೆ ಎಂದು ಅಮಿತ್‌ ಶಾ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಲಾಗಿದೆ.

ಸುಳ್ಳು ಟ್ವೀಟ್‌ ಗುರುತು ಪತ್ತೆ:

* ವೈರಲ್‌ ಆಗಿರುವ ಟ್ವೀಟ್‌, ಅಧಿಕೃತ ಟ್ವೀಟ್‌ ರೀತಿಯಲ್ಲಿ ಸೃಷ್ಟಿಸಲಾಗಿದೆ. ಮೊಬೈಲ್‌ನಲ್ಲಿ ಅಧಿಕೃತ ಟ್ವೀಟ್‌ನಂತೆಯೇ ಕಾಣಿಸುವಂತೆ ಸಿದ್ಧಪಡಿಸಲಾಗಿದೆ. ಆಲ್ಟ್‌ ನ್ಯೂಸ್‌, ಅಮಿತ್‌ ಶಾ ಅವರ ಇತ್ತೀಚಿನ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಹಾಗೂ ವೈರಲ್‌ ಆಗಿರುವ ಚಿತ್ರವನ್ನು ಹೊಂದಿಸಿ ನೋಡಿದೆ. ವೈರಲ್‌ ಆಗಿರುವ ಟ್ವೀಟ್‌ನಲ್ಲಿ ಅಕ್ಷರಗಳು ಡಿಸ್‌ಪ್ಲೇ ಚಿತ್ರದ ಮೇಲೆ ಹಾಗೂ ಎಡ ಭಾಗಕ್ಕೆ ಹೆಚ್ಚು ಹರಡಿದೆ. ಟ್ವಿಟರ್‌ನಲ್ಲಿರುವ ಸಾಲು ಹೊಂದಾಣಿಕೆ ಇಲ್ಲಿಲ್ಲ.

* ಟ್ವಿಟರ್‌ ಪ್ರಸ್ತುತ ನೀಡಿರುವ 280 ಅಕ್ಷರ ಮಿತಿಯೊಳಗೆ ಈ ಟ್ವೀಟ್‌ ಇಲ್ಲ. ವೈರಲ್‌ ಟ್ವೀಟ್‌ನಲ್ಲಿರುವ ಸಾಲುಗಳು 149 ಹೆಚ್ಚುವರಿ ಅಕ್ಷರಗಳನ್ನು ಹೊಂದಿರುವುದು ಆಲ್ಟ್‌ ನ್ಯೂಸ್‌ ಪರಿಶೀಲನೆಯಿಂದ ತಿಳಿದು ಬಂದಿದೆ.

* ಬಹಳಷ್ಟು ಅಕ್ಷರ ಹಾಗೂ ವ್ಯಾಕರಣ ತಪ್ಪುಗಳನ್ನು ಗುರುತಿಸಬಹುದಾಗಿದೆ. ಅಗತ್ಯವಿರದ ಕಡೆಯಲ್ಲಿ ಅಲ್ಪ ವಿರಾಮ ಹಾಗೂ ಕೊನೆಯಲ್ಲಿ ಮಾತ್ರ ಪೂರ್ಣ ವಿರಾಮ ಬಳಸಲಾಗಿದೆ. ಇಡೀ ಒಂದು ಪ್ಯಾರ ಒಂದು ವಾಕ್ಯದಂತಿದೆ. ‘जाति’ (ಜಾತಿ) ಅಕ್ಷರ ತಪ್ಪಾಗಿ ‘जाती’ ಎಂದು ಬಳಸಲಾಗಿದೆ. ‘स्वास्थ्य’ (ಆರೋಗ್ಯ) ‘स्वास्थ’, ‘मैं’ (ನಾನು) ‘में’ ಆಗಿ ಹಾಗೂ ‘और जल्द’ (ಹಾಗೂ ಶೀಘ್ರ) ಎಂಬುದು ‘औरजल्द’ ಆಗಿದೆ.

ಅಮಿತ್‌ ಶಾ ಅವರ ಟ್ವಿಟರ್‌ ಖಾತೆಯಲ್ಲಿ ವೈರಲ್‌‌ ಆಗಿರುವ ಈ ಟ್ವೀಟ್‌ ಕಂಡು ಬಂದಿಲ್ಲ. ಟ್ವೀಟ್‌ ಡಿಲೀಟ್‌ ಆಗಿರುವ ಬಗ್ಗೆಯೂ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ. ಹಿಂದೆ ಅಮಿತ್‌ ಶಾ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಚಿತ್ರಗಳು ವೈರಲ್‌ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT