ಗುರುವಾರ , ಜೂನ್ 17, 2021
21 °C

10,000 ಉದ್ಯೋಗ ಕಡಿತಕ್ಕೆ ಪಾರ್ಲೆ ಚಿಂತನೆ; ಕಂಪನಿಯಲ್ಲಿರುವುದು 4,480 ಸಿಬ್ಬಂದಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆ ಮಾತಾಗಿರುವ ಪಾರ್ಲೆ–ಜಿ ಬಿಸ್ಕತ್  ತಯಾರಿಸುವ ಪಾರ್ಲೆ ಪ್ರಾಡಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌, 8-10 ಸಾವಿರ ಉದ್ಯೋಗ ಕಡಿತ ಮಾಡಲು ಚಿಂತನೆ ನಡೆಸುತ್ತಿದೆ. ಈ ಸುದ್ದಿಯ ಬೆನ್ನಲ್ಲೇ  ಪಾರ್ಲೆ ಕಂಪನಿಯಲ್ಲಿ ಅಷ್ಟೊಂದು ಸಿಬ್ಬಂದಿಗಳು ಇಲ್ಲ ಎಂದು ಕೆಲವು ನೆಟ್ಟಿಗರು ವಾದಿಸುತ್ತಿದ್ದು, #ApniAkalLagao  ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

‘ಜಿಎಸ್‌ಟಿ ಜಾರಿಗೆ ಬಂದ ನಂತರ ಬಿಸ್ಕತ್ ಬೇಡಿಕೆ ಗಮನಾರ್ಹವಾಗಿ ಕುಸಿತ ಕಂಡಿದೆ. ಆರಂಭದಲ್ಲಿ ಶೇ 18ರಷ್ಟಿದ್ದ ದುಬಾರಿ ತೆರಿಗೆ ಕಾರಣಕ್ಕೆ ಪ್ರತಿ ಪ್ಯಾಕ್‌ನಲ್ಲಿ ಬಿಸ್ಕತ್ ಸಂಖ್ಯೆಯನ್ನು ಕಡಿಮೆ ಮಾಡಬೇಕಾಯಿತು. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಕಡಿಮೆ ಆದಾಯದ ಗ್ರಾಹಕರಿಂದ ಗಮನಾರ್ಹ ಪ್ರಮಾಣದಲ್ಲಿ ಬೇಡಿಕೆ ಕುಸಿಯಲಾರಂಭಿಸಿತು. ಬಿಸ್ಕಿಟ್‌ ವಹಿವಾಟು ಪ್ರಗತಿಯು ಈಗ ಶೇ 2.5ಕ್ಕೆ ಇಳಿದಿದೆ. 

ಇದನ್ನೂ ಓದಿಪಾರ್ಲೆ–ಜಿಗೆ ಜಿಎಸ್‌ಟಿ ಹೊಡೆತ: 10 ಸಾವಿರ ಉದ್ಯೋಗ ಕಡಿತ?

ಗ್ರಾಮೀಣ ಪ್ರದೇಶದಲ್ಲಿ ಬಿಸ್ಕತ್ ಬೇಡಿಕೆಯು ಗಮನಾರ್ಹ ಕುಸಿತ ಕಂಡಿರುವುದು ಮತ್ತು ದೇಶಿ ಆರ್ಥಿಕತೆ ಮಂದ ಗತಿಯಲ್ಲಿರುವ ಕಾರಣಕ್ಕೆ ತಯಾರಿಕೆ ಕಡಿತಗೊಳಿಸಬೇಕಾಗಿದೆ. ಇದರಿಂದಾಗಿ ಮುಂದಿನ ಒಂದು ವರ್ಷದಲ್ಲಿ  8 ಸಾವಿರದಿಂದ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ’ ಎಂದು ಕಂಪನಿಯ ಬಿಸ್ಕತ್ ಮಾರಾಟ ವಿಭಾಗದ ಮುಖ್ಯಸ್ಥ ಮಯಾಂಕ್ ಶಾ ಹೇಳಿದ್ದರು.

ಪಾರ್ಲೆ ಕಂಪನಿ ಉದ್ಯೋಗ ಕಡಿತ ಮಾಡುತ್ತಿರುವುದರ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಲವಾರು ನೆಟ್ಟಿಗರು ಇದೊಂದು ಸುಳ್ಳು ಸುದ್ದಿ ಎಂದು ವಾದ ಮಾಡುತ್ತಿದ್ದಾರೆ.

ಆದಾಗ್ಯೂ, ಕೆಲವು ನೆಟ್ಟಿಗರು ಪಾರ್ಲೆ ಕಂಪನಿ 2018ರ ಆರ್ಥಿಕ ವರ್ಷದ ಅಂತ್ಯದಲ್ಲಿ ಶೇ. 21ರಷ್ಟು ಲಾಭ ಕಂಡುಕೊಂಡಿದೆ ಎಂದು ಉಲ್ಲೇಖಿಸಿರುವ ಸುದ್ದಿಯ ಲಿಂಕ್ ನೀಡಿ  ಪಾರ್ಲೆ ಉದ್ಯೋಗ ಕಡಿತ ಸುದ್ದಿ ಸುಳ್ಳು ಎನ್ನುತ್ತಿದ್ದಾರೆ.

 ಏತನ್ಮಧ್ಯೆ, ಪಾರ್ಲೆ ಕಂಪನಿಯಲ್ಲಿ 4,480 ನೌಕರರು ಮಾತ್ರ ಇದ್ದಾರೆ. ಹೀಗಿರುವಾಗ 8- 10 ಸಾವಿರ ಉದ್ಯೋಗ ಕಡಿತ ಹೇಗೆ ಸಾಧ್ಯ ಎಂದು ಬಿಜೆಪಿ ಯುವ ನಾಯಕಿ ಚಾರು ಪ್ರಗ್ಯಾ ಟ್ವೀಟಿಸಿದ್ದರು.

ಅಂದಹಾಗೆ ಪ್ರಗ್ಯಾ ಅವರು  ಟ್ವೀಟ್  ಮಾಡಿದ್ದು ಬ್ರಿಟಾನಿಯಾ ಇಂಕ್‌ನ ಸ್ಕ್ರೀನ್ ಶಾಟ್. ಪಾರ್ಲೆ ಕಂಪನಿಯದ್ದು ಅಲ್ಲ.  ಚಾರು ಪ್ರಗ್ಯಾ ಅವರ ಈ ಟ್ವೀಟ್  3,000ಕ್ಕಿಂತಲೂ ಹೆಚ್ಚು ಬಾರಿ ರಿಟ್ವೀಟ್ ಆಗಿದ್ದು 5,000 ಕ್ಕಿಂತಲೂ ಹೆಚ್ಚು ಲೈಕ್ ಗಿಟ್ಟಿಸಿಕೊಂಡಿತ್ತು. ಪ್ರಗ್ಯಾ ಅವರು ಟ್ವೀಟ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಅಳಿಸಿದ್ದಾರೆ.

 ಬ್ರಿಟಾನಿಯಾದ ವಾರ್ಷಿಕ ವರದಿಯಲ್ಲಿ ಅಲ್ಲಿರುವ ನೌಕರರ ಸಂಖ್ಯೆಯನ್ನು ನೀಡಲಾಗಿದೆ.

ಫ್ಯಾಕ್ಟ್‌ಚೆಕ್

ಚಾರು ಪ್ರಗ್ಯಾ ಅವರ ಟ್ವೀಟ್‌ನಲ್ಲಿ ಉಲ್ಲೇಖಿಸಿದ ವಿಷಯದ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ. 

ಪಾರ್ಲೆ ಹೇಳಿದ್ದೇನು?
ಸಿಎನ್‌ಬಿಸಿ- ಟಿವಿ 18ಗೆ ಮಯಾಂಕ್ ಶಾ ಅವರು ಟೆಲಿಫೋನಿಕ್ ಸಂದರ್ಶನ ನೀಡಿದ್ದರು.  ಈ ಸಂದರ್ಶನದಲ್ಲಿ ಶಾ ಹೇಳಿದ್ದು- ಪಾರ್ಲೆಯಲ್ಲಿ  ಸರಿಸುಮಾರು 1 ಲಕ್ಷ ನೌಕರರಿದ್ದಾರೆ.  ಪೂರ್ಣಾವಧಿ ಮತ್ತು ಗುತ್ತಿಗೆ ಸೇರಿದಂತೆ ಒಟ್ಟಾರೆ ಸಿಬ್ಬಂದಿ ಸಂಖ್ಯೆ 1 ಲಕ್ಷ ಇದೆ.ಪಾರ್ಲೆ ಕಂಪನಿಯ 10 ತಯಾರಿಕಾ ಘಟಕಗಳಿವೆ. ಭಾರತದಾದ್ಯಂತ 125 ಗುತ್ತಿಗೆ ತಯಾರಿಕಾ ಘಟಕಗಳಿವೆ. 

 ಪಾರ್ಲೆಯಲ್ಲಿ  1 ಲಕ್ಷ ಸಿಬ್ಬಂದಿಗಳು ಇದ್ದಾರೆ ಎಂದು ರಾಯಿಟರ್ಸ್ ಮತ್ತು ಎಕನಾಮಿಕ್ಸ್ ಟೈಮ್ಸ್ ವರದಿಯಲ್ಲಿದೆ.

ಜಿಎಸ್‌ಟಿ ಮತ್ತು  ದೇಶಿ ಆರ್ಥಿಕತೆ ಮಂದ ಗತಿಯಿಂದಿರುವ  ಕಾರಣ 8,000- 10000 ಸಿಬ್ಬಂದಿಗಳನ್ನು ಕಡಿತಗೊಳಿಸಲಾಗುವುದು ಎಂದು ಸಂದರ್ಶನದಲ್ಲಿ ಶಾ ಹೇಳಿದ್ದರು.

‘ಗ್ರಾಹಕರು ಬೆಲೆ ಬಗ್ಗೆ ಹೆಚ್ಚು ಸೂಕ್ಷ್ಮ ನಿಲುವು ತಳೆದಿರುತ್ತಾರೆ. ನಿರ್ದಿಷ್ಟ ಬೆಲೆಗೆ ತಮಗೆ ಎಷ್ಟು ಬಿಸ್ಕತ್ ದೊರೆಯಲಿವೆ ಎನ್ನುವುದನ್ನು ಅವರು ಲೆಕ್ಕ ಹಾಕುತ್ತಾರೆ. ಕಂಪನಿಯ ವರಮಾನದಲ್ಲಿ ಅರ್ಧದಷ್ಟು ಕೊಡುಗೆ ನೀಡುವ ಗ್ರಾಮೀಣ ಪ್ರದೇಶದ ಗ್ರಾಹಕರಿಂದ ಬೇಡಿಕೆ ಕುಸಿದಿರುವುದು ಕಂಪನಿಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ವಾಹನ ಮತ್ತು ಬಿಡಿಭಾಗ ತಯಾರಿಕೆ ಉದ್ದಿಮೆಯಲ್ಲಿನ ಉದ್ಯೋಗ ನಷ್ಟವು ಬಿಸ್ಕತ್‌ನಂತಹ ದಿನಬಳಕೆಯ ಸರಕುಗಳ ಬೇಡಿಕೆ ಇನ್ನಷ್ಟು ಕುಸಿಯಲು ಕಾರಣವಾಗಲಿದೆ’ ಎಂದಿದ್ದರು ಶಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು