ಗುರುವಾರ , ಮೇ 28, 2020
27 °C
ಸೆಲೆಬ್ರಿಟಿ ಅಡುಗೆ: ಸೋನುಗೌಡ

ಅಮ್ಮನಿಗೆ ಸಾರು ಹೇಳಿಕೊಟ್ಟಿದ್ದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡುಗೆ ಎಂದ ಕೂಡಲೇ ಭಯ ಆಗುತ್ತೆ. ಬಹುಶಃ 7ನೇ ತರಗತಿಯಲ್ಲಿದ್ದಾಗ ಅನ್ಸುತ್ತೆ. ಮ್ಯಾಗಿ ಎಂದರೆ ತುಂಬಾ ಇಷ್ಟ ಇತ್ತು. ಹೀಗಾಗಿ ಮ್ಯಾಗಿ ಮಾಡಲು ಹೋಗಿ ಬಿಸಿ ನೀರನ್ನು ಕೈ ಮೇಲೆ ಹಾಕಿಕೊಂಡು, ಕೈ ಸುಟ್ಟುಕೊಂಡಿದ್ದೆ. ಇದರಿಂದ ಅಡುಗೆ ಮಾಡುವ ಕಾಳಜಿಯೇ ಕಳೆದುಕೊಂಡೆ. ಇದರಿಂದ ಕೆಲವು ವರ್ಷ ಅಡುಗೆ ಮನೆಯ ಕಡೆಗೆ ಹೋಗಲೇ ಇಲ್ಲ.

ನಂತರ, 10ನೇ ತರಗತಿಯಲ್ಲಿ ಇದ್ದಾಗ ಮತ್ತೆ ಅಡುಗೆ ಮನೆಗೆ ಹೋಗಿದ್ದೆ. ಆ ದಿನ ನಮ್ಮ ತಾಯಿ ಒಲೆಯಲ್ಲಿ ಎಣ್ಣೆ ತುಂಬಿರುವ ಬಾಣಲಿ ಇಟ್ಟಿದ್ದರು. ಎಣ್ಣೆ ಚೆನ್ನಾಗಿ ಕಾದಿತ್ತು. ನನಗೆ ಆ ವಿಷಯ ಗೊತ್ತಿರಲಿಲ್ಲ ಹುಡುಗಾಟದಲ್ಲಿ ಎಣ್ಣೆಗೆ ನೀರು ಹಾಕಿದೆ. ನೀರು ಹಾಕಿದ ಕೂಡಲೇ ಬಾಣಲಿಯೆಲ್ಲ ಧಗಧಗನೆ ಉರಿಯಲು ಆರಂಭಿಸಿತು ಕೆಲವೇ ನಿಮಿಷಗಳಲ್ಲಿ ಮನೆಯೆಲ್ಲಾ ಹೊಗೆ ಆವರಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಯಿತು. ಆ ಘಟನೆ ನೆನೆಸಿಕೊಂಡರೆ ಈಗಲೂ ಭಯವಾಗುತ್ತೆ. ಅಂದೇ ನಿರ್ಧರಿಸಿಬಿಟ್ಟಿದ್ದೆ ಅಡುಗೆ ಮನೆಗೆ ಕಾಲು ಇಡಬಾರದು ಎಂದು!

ನಮ್ಮ ತಂದೆ ಕನ್ನಡದವರು, ತಾಯಿ ಮರಾಠಿ. ಮನೆಯಲ್ಲಿ ಹೆಚ್ಚಾಗಿ ಮರಾಠಿ ಶೈಲಿಯ ಅಡುಗೆಗಳೇ ಮಾಡುತ್ತಿದ್ದರು. ಒಮ್ಮೆ ನಮ್ಮ ತಂದೆಯವರ ಗ್ರಾಮಕ್ಕೆ ಹೋಗಿದ್ದಾಗ ಅವರು ಚಿಕನ್ ಸಾರು ಮಾಡಿದ್ದರು. ಆ ಸಾರಿನ ರುಚಿ ನನಗೆ ತುಂಬಾ ಇಷ್ಟವಾಯಿತು. ಅ ಸಾರಿನ ರುಚಿಯನ್ನು ಮತ್ತೆ ಮತ್ತೆ ಸವಿಯಬೇಕು ಎನಿಸಿತು. ಈ ಬಗ್ಗೆ ನಮ್ಮ ಆಂಟಿ ಬಳಿ ಚರ್ಚಿಸಿ ತಯಾರಿಸುವ ವಿಧಾನವನ್ನು ತಿಳಿದುಕೊಂಡೆ. 

ವಿಧಾನವನ್ನು ವಿವರವಾಗಿ ಬರೆದಿಟ್ಟುಕೊಂಡ ನಂತರ, ಮನೆಯಲ್ಲೇ ಮಾಡಿ ಚಿಕನ್ ಸಾರು ಹೇಗೆ ತಯಾರಿಸಬೇಕೆಂದು ನಮ್ಮ ತಾಯಿಗೆ ತಿಳಿಸಿಕೊಟ್ಟಿದ್ದೆ. ನಾನು ಮಾಡಿದ ಆ ಸಾರನ್ನು ಮನೆಮಂದಿಯೆಲ್ಲಾ ಇಷ್ಟಪಟ್ಟು ತಿಂದರು ಅದೇ ಖುಷಿ. ಸಾರು ತಯಾರಿಸುವುದನ್ನು ಕಲಿತುಕೊಂಡ ಮೇಲೆ, ಮನೆಯಲ್ಲಿ ಗೌಡರ ಶೈಲಿಯ ಮುದ್ದೆ, ಸಾರು ಇತ್ಯಾದಿ ಊಟಗಳನ್ನು ತಯಾರಿಸುವುದು ಆರಂಭವಾಯಿತು. ಯಾವ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು. ಇತ್ಯಾದಿ ವಿವರಗಳೆಲ್ಲಾ ಈಗ ಚೆನ್ನಾಗಿ ಗೊತ್ತಿದೆ. ಕೆಲವು ಬಗೆಯ ಪೇಸ್ಟ್ರಿಗಳು, ಐದು ನಿಮಿಷದಲ್ಲಿ ಮಾಡುವ ಬೇಕಿಂಗ್ ಖಾದ್ಯಗಳನ್ನು ಚೆನ್ನಾಗಿಯೇ ಮಾಡುತ್ತೇನೆ. 

ಮೊದಲು ಚಪಾತಿ ಲಟ್ಟಿಸುವುದಕ್ಕೆ ಬರುತ್ತಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ವೃತ್ತಾಕಾರದಲ್ಲಿ ತಯಾರಿಸಲು ಆಗುತ್ತಿರಲಿಲ್ಲ. ತಿಳಿದವರೊಬ್ಬರು ಅದನ್ನು ವೃತ್ತಾಕಾರದಲ್ಲಿ ತಯಾರಿಸುವ ತಂತ್ರದ ಬಗ್ಗೆ ತಿಳಿಸಿಕೊಟ್ಟರು. ಸ್ವಲ್ಪ ನಿಧಾನವಾದರೂ ಚಪಾತಿ ಚೆನ್ನಾಗಿ ಮಾಡುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರಾನ್ನ ಚೆನ್ನಾಗಿ ಮಾಡುತ್ತೇನೆ. ನಾನು ತಯಾರಿಸುವ ಅಡುಗೆಗಳೆಂದರೆ ನಮ್ಮ ಅಪ್ಪನಿಗೆ ತುಂಬಾ ಇಷ್ಟ. ಮನೆಮಂದಿಯೆಲ್ಲಾ ನಾನು ಮಾಡುವ ಚಿಕನ್ ಸಾರನ್ನು ಹೆಚ್ಚು ಇಷ್ಟಪಡುತ್ತಾರೆ. 

ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಪಥ್ಯಾಹಾರಕ್ಕೆ ಹೆಚ್ಚು ಒತ್ತು ಕೊಡಬೇಕು. ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದರೆ, ಯಾವುದೇ ಸಮಸ್ಯೆಯಿಲ್ಲ ಆದರೆ, ದೂರದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯುವಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ‘ಫಾರ್ಚೂನರ್‌’ ಚಿತ್ರದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಊಟ ಇಲ್ಲದೆ ಇಡೀ ಚಿತ್ರತಂಡ ಸಮಸ್ಯೆ ಎದುರಿಸಿತ್ತು. ಆಗ ಪ್ರೊಡಕ್ಷನ್ ತಂಡದವರೇ ಇರುವ ಸಾಮಗ್ರಿಗಳನ್ನೇ ಬಳಸಿ ಅಡುಗೆ ಮಾಡಿದ್ದರು. ನಾನೂ ಅವರೊಂದಿಗೆ ಕೈ ಜೋಡಿಸಿ, ಚಪಾತಿ ಮಾಡಿದ್ದೆ. ಅದು ಖುಷಿಯ ಕ್ಷಣ.

ಚಿಕನ್ ಸಾರು ಮಾಡುವುದು ಹೇಗೆ?

ಮೊದಲು ಈರುಳ್ಳಿ, ಬೆಳ್ಳುಳ್ಳಿಯನ್ನು ಉರಿದಿಟ್ಟುಕೊಳ್ಳಬೇಕು, ನಂತರ ಒಂದು ಬಾಣಲಿ ತೆಗೆದುಕೊಂಡು, ಶುಂಠಿ, ಮೆಣಸು, ಜೀರಿಗೆ, ಲವಂಗ, ದಾಲ್ಚಿನ್ನಿ ಹೀಗೆ ಮಸಾಲೆ ಪದಾರ್ಥಗಳನ್ನೆಲ್ಲಾ ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿಕೊಂಡು, ಅದಕ್ಕೆ ಸ್ವಲ್ಪ ಧನಿಯಾಪುಡಿ, ಸ್ವಲ್ಪ ಕಾರದ ಪುಡಿ ಹಾಕಿ ಉರಿದುಕೊಳ್ಳಬೇಕು. ಕಾರದಪುಡಿ ವಾಸನೆ ಹೋಗುವ ಹಾಗೆ ಉರಿದಿಟ್ಟುಕೊಳ್ಳಬೇಕು. ಈ ಮೊದಲು ಉರಿದಿಟ್ಟುಕೊಂಡ, ಈರುಳ್ಳಿ–ಬೆಳ್ಳುಳ್ಳಿಯನ್ನು ಮಿಕ್ಸ್‌ರ್‌ಗೆ ಹಾಕಿ ರುಬ್ಬಿಕೊಳ್ಳಬೇಕು.

ನಂತರ ಈ ಮಸಾಲೆ ಪದಾರ್ಥಗಳನ್ನು ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವ ಮುನ್ನ ಒಂದೇ ಒಂದು ಟ್ಯೊಮೆಟೊ ಹಣ್ಣನ್ನು ಜಾರ್‌ಗೆ ಹಾಕಿಕೊಂಡು ರುಬ್ಬಿಕೊಂಡಾಗ ಮಸಾಲೆ ತಯಾರಾಗುತ್ತದೆ.

ನಂತರ ಬಾಣಲಿ ಅಥವಾ ಪಾತ್ರೆಯಿಟ್ಟು, ಅದಕ್ಕೆ ಒಂದು ಅಥವಾ ಎರಡು ಸ್ಪೂನ್‌ ಎಣ್ಣೆ ಹಾಕಿ, ರುಬ್ಬಿಟ್ಟುಕೊಂಡ ಈರುಳ್ಳಿ– ಬೆಳ್ಳುಳ್ಳಿ ಮಿಶ್ರಣವನ್ನು ವಾಸನೆ ಬಿಡುವ ಹಾಗೆ ಉರಿದುಕೊಳ್ಳಬೇಕು. ನಂತರ ಮಸಾಲೆಯನ್ನು ಅದಕ್ಕೆ ಹಾಕಿ ಬೇಯಿಸಬೇಕು. ಮಾಸಲೆ ವಾಸನೆ ಕಡಿಮೆಯಾಗುತ್ತಿದ್ದಂತಯೇ ತೊಳೆದಿಟ್ಟುಕೊಂಡ ಕೋಳಿ ಮಾಂಸವನ್ನು ಅದಕ್ಕೆ ಹಾಕಬೇಕು. ನಂತರ ಕಾಯಿ ತುರಿಯನ್ನು ಬಿಸಿ ನೀರಿಗೆ ಹಾಕಿದಾಗ ಕಾಯಿ ಹಾಲಾಗುತ್ತದೆ. ಆ ಹಾಲನ್ನು ಕುಡಲೇ ಮಾಸಲೆಗೆ ಹಾಕಬೇಕು. ಬ್ಯಾಡಗಿ ಮೆಣಸಿನಕಾಯಿ ಹಾಕಿದರೆ, ಸಾರು ಕಿತ್ತಳೆ ಬಣ್ಣದಲ್ಲಿರುತ್ತದೆ. ಈ ರೀತಿ ಮಸಾಲೆಗೆ ಹಾಕಿದ ನಂತರ, 15 ನಿಮಿಷ ಕುದಿಸಿದರೆ ಚಿಕನ್ ಸಾರು ರೆಡಿ. ಅರ್ಧ ಕೆ.ಜಿ ಮಾಂಸಕ್ಕೆ ಒಂದು ಕಾಯಿ ತುರಿ ಹಾಕಬೇಕು. ಅರ್ಧ ಲೀಟರ್‌ ವರೆಗೆ ನೀರು ಹಾಕಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು