ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತನ್ಯ ಉಕ್ಕಲು ಬಾದಾಮಿ, ಬಾಳೆಹಣ್ಣು

Last Updated 14 ಮೇ 2021, 19:30 IST
ಅಕ್ಷರ ಗಾತ್ರ

ಹಗಲು ದೀರ್ಘವಾಗುತ್ತಿದೆ.. ಬಹುತೇಕರು ಮನೆಯಿಂದಲೇ, ಕೆಲವರು ಕಚೇರಿಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬಹಳಷ್ಟು ಮಂದಿಗೆ ಪ್ರೋತ್ಸಾಹ, ಚೈತನ್ಯ ನೀಡುವ ಸಹೋದ್ಯೋಗಿಗಳಿಲ್ಲ, ಕ್ಯಾಬ್‌ನಲ್ಲಿ ಮನೆಗೆ ಹೋಗುವಾಗ ಜೋಕ್‌ಗಳ ನಗೆಬುಗ್ಗೆಗಳಿಲ್ಲ, ದಿನವಿಡೀ ಚೈತನ್ಯ ಹಿಡಿದಿಟ್ಟುಕೊಳ್ಳಲು ಮನಸ್ಸಿನೊಳಗೆ ಚಿಕ್ಕ ಹೋರಾಟವೇ ನಡೆಯುತ್ತಿರುತ್ತದೆ. ಕಪ್‌ಗಳ ಮೇಲೆ ಕಪ್‌ ಕಾಫಿ ಕುಡಿದರೆ ಈ ಚೈತನ್ಯ ಬಂದಂತೆ ಒಂದು ಕ್ಷಣ ಎನಿಸಿದರೂ ತಕ್ಷಣವೇ ದೇಹ ಸೊರಗಿ ಮನಸ್ಸು ಇನ್ನಷ್ಟು ಮುದುಡುತ್ತದೆ. ಹೀಗಾಗಿ ಉತ್ಸಾಹ ಮೂಡಿಸುವ ಒಂದಿಷ್ಟು ಆಹಾರ ಸೇವನೆಯೇ ಇದಕ್ಕಿರುವ ಪರಿಹಾರ.

ನಿತ್ಯ ಮೂರು ಮುಖ್ಯ ಊಟಗಳು, ಮಧ್ಯೆ ಎರಡು ಸಲ ತಿಂಡಿ– ತಿನಿಸು; 3–4 ತಾಸಿಗೊಮ್ಮೆ ಏನನ್ನಾದರೂ ಸೇವಿಸುತ್ತಿರಬೇಕು. ಜಾಸ್ತಿ ಸಮಯ ಖಾಲಿ ಹೊಟ್ಟೆಯಲ್ಲಿದ್ದರೆ ರಕ್ತದಲ್ಲಿನ ಗ್ಲುಕೋಸ್‌ ಮಟ್ಟ ಕುಸಿದು ತಡೆಯಲಾರದಷ್ಟು ಹಸಿವೆಯಾಗಿ ಅನಾರೋಗ್ಯಕರ ಆಹಾರ ಹೊಟ್ಟೆ ಸೇರಬಹುದು. ಹೀಗಾಗಿ ಪ್ರೊಟೀನ್‌, ಆರೋಗ್ಯಕರ ಕೊಬ್ಬು, ನಾರಿನಾಂಶವಿರುವ ಆಹಾರ ಸೇವಿಸಿದರೆ ಬಹು ಹೊತ್ತಿನವರೆಗೆ ಚೈತನ್ಯ, ಶಕ್ತಿ ದೇಹದಲ್ಲಿರುತ್ತದೆ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆ ತಜ್ಞ ಡಾ. ತೇಜಸ್‌ ಟಿ.ಎಸ್‌.

ಬಾಳೆಹಣ್ಣು: ಸ್ಥಳೀಯವಾಗಿ ದೊರಕುವ ಬಾಳೆಹಣ್ಣು ಶಕ್ತಿಯ ಆಗರ. ಸೇವಿಸಿದ ತಕ್ಷಣವೇ ಚೇತನದ ಚಿಲುಮೆಯಾಗುತ್ತದೆ ನಿಮ್ಮ ದೇಹ. ನೈಸರ್ಗಿಕವಾದ ಫ್ರಕ್ಟೋಸ್‌ ಸಾಕಷ್ಟು ಕಾರ್ಬೊಹೈಡ್ರೇಟ್‌ ಅನ್ನು ಒದಗಿಸುತ್ತದೆ. ತಕ್ಷಣಕ್ಕೆ ಗ್ಲುಕೋಸ್‌ ಆಗಿ ಬದಲಾಗಿ ರಕ್ತಕ್ಕೆ ಸೇರುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಕೂಡ.

ಮೊಟ್ಟೆ: ಇದು ಪ್ರೊಟೀನ್‌ ಮೂಲ. ತರಕಾರಿ ಜೊತೆ ಸೇರಿಸಿ ಎಷ್ಟೋ ಬಗೆಯ ತಿನಿಸು ತಯಾರಿಸಬಹುದು. ಸಂಕೀರ್ಣವಾದ ಕಾರ್ಬೊಹೈಡ್ರೇಟ್‌ ಇರುವ ಮೊಟ್ಟೆಯ ಅಂಶ ನಿಧಾನವಾಗಿ ರಕ್ತಕ್ಕೆ ಸೇರಿದರೂ ಪೌಷ್ಟಿಕಾಂಶಗಳು ಹೇರಳವಾಗಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ.

ನೀರು: ನೀರು ಒಂದು ಆಹಾರವೇ ಎಂದು ಕೆಲವರು ಪ್ರಶ್ನಿಸಬಹುದು. ಆದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಆಯಾಸವಾಗುವುದು ಸಹಜ. ಅಂದರೆ ನಿರ್ಜಲೀಕರಣವಾದಾಗ ದೇಹದ ಭಾಗಗಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದೆ ಸುಸ್ತಾಗುತ್ತದೆ. ಆಗಾಗ ನೀರು ಕುಡಿಯುತ್ತಿದ್ದರೆ ದೇಹಕ್ಕೆ ಶಕ್ತಿ ತಾನಾಗೇ ದೊರಕುತ್ತದೆ. 8–10 ಲೋಟ ನೀರು ಕುಡಿಯುವುದು ಸೂಕ್ತ ಎನ್ನುತ್ತಾರೆ ಡಾ. ತೇಜಸ್‌. ಮೂತ್ರದ ಬಣ್ಣ ಗಾಢ ಹಳದಿ ಇದ್ದರೆ ನೀವು ಹೆಚ್ಚು ನೀರು ಕುಡಿಯುತ್ತಿಲ್ಲ ಎಂದೇ ಅರ್ಥ.

ಪಿಸ್ತಾ, ಬಾದಾಮಿ: ಹೆಚ್ಚು ಪ್ರೊಟೀನ್‌ ಬೇಕಾದರೆ ಪಿಸ್ತಾ ಮತ್ತು ಬಾದಾಮಿ ತಿನ್ನಿ. ಇದು ಸಸ್ಯಮೂಲದ ಪ್ರೊಟೀನ್‌ ಆಗಿದ್ದು, ದೇಹಕ್ಕೆ ಇಂಧನದಂತೆ ಕೆಲಸ ಮಾಡುತ್ತವೆ. ಹಾಗೆಯೇ ನಾರಿನಾಂಶವೂ ಲಭ್ಯವಾಗುತ್ತದೆ. ಜೊತೆಗೆ ಒಳ್ಳೆಯ ಕೊಬ್ಬಿನಾಂಶ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT