ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಬಾಗಿಲು ಮುಚ್ಚಿದ ಕಾಫಿ ಡೇ ಲಾಂಜ್‌

ಇನ್ನೆಲ್ಲಿ ಸಿಸಿಡಿ ಲಾಂಜ್‌ ಕಾಫಿ ಘಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಪ್ರಮುಖ ಆಕರ್ಷಣೆಯಾದ ಮಹಾತ್ಮ ಗಾಂಧಿ ರಸ್ತೆಯಲ್ಲಿ ದಶಕಗಳ ಕಾಲ ಕಾಫಿಯ ಪರಿಮಳ ಪಸರಿಸಿದ್ದ ಕೆಫೆ ಕಾಫಿ ಡೇ (ಸಿಸಿಡಿ)ಯ ಮತ್ತೊಂದು ಮಳಿಗೆ ಬೀಗ ಹಾಕಿದೆ.

ದಶಕಗಳ ಕಾಲ ಎಂ.ಜಿ. ರಸ್ತೆಯ ಸ್ಪೆನ್ಸರ್‌ ಬಿಲ್ಡಿಂಗ್‌ನಲ್ಲಿ ರುಚಿ ರುಚಿ ಕಾಫಿ ಪೂರೈಸುತ್ತಿದ್ದ ಕಾಫಿ ಅಡ್ಡಾ ‘ದ ಲಾಂಜ್‌’ ತನ್ನ ವ್ಯಾಪಾರ ನಿಲ್ಲಿಸಿದೆ. ಅಲ್ಲಿ ಇನ್ನು ಮುಂದೆ  ಗಾರ್ಲಿಕ್‌ ಬ್ರೆಡ್‌, ಸಮೋಸಾ ಮತ್ತು ಕಾಫಿಯ ಪರಿಮಳ ಇರುವುದಿಲ್ಲ.

ಕರುನಾಡಿನ ಕಾಫಿಗೆ ಜಾಗತಿಕ ಮನ್ನಣೆ ದೊರೆಕಿಸಿಕೊಟ್ಟ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೆಗ್ಡೆ ಸಾವಿನ ನಂತರ ಕೆಫೆ ಕಾಫಿ ಡೇ ಮಳಿಗೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಆ ಸಾಲಿಗೆ ಎಂ.ಜಿ. ರಸ್ತೆಯ ‘ದ ಲಾಂಜ್‌’ ಹೊಸದಾಗಿ ಸೇರಿತು. ಹೊಂಗನಿಸಿನ ಅದೆಷ್ಟೋ ಯುವ ಮನಸುಗಳಿಗೆ ‘ದ ಲಾಂಜ್‌’ ಪ್ರಮುಖ ಹ್ಯಾಂಗ್‌ ಔಟ್‌ ತಾಣವಾಗಿತ್ತು. ಒಂದು ಕಪ್‌ ಬಿಳಿ ನೊರೆಯ ಕಾಫಿಯ ನೆಪದಲ್ಲಿ ಇಲ್ಲಿ ಅರಳಿದ ಪ್ರೀತಿಗೆ ಲೆಕ್ಕವಿಲ್ಲ. ಕೆಂಪು ಛತ್ರಿಯ ಕೆಳಗೆ ಬೆಸೆದುಕೊಂಡ ಹೃದಯಗಳು ಅದೆಷ್ಟೋ!

ಹರಟೆಮಲ್ಲರ ಹರಟೆಕಟ್ಟೆಯಾಗಿ, ಪ್ರೇಮಿಗಳ ಸಂಧಿಸುವ ತಾಣವಾಗಿ, ಪಡ್ಡೆ ಹುಡುಗರ ಅಡ್ಡಾವಾಗಿದ್ದ ಲಾಂಜ್‌ ಗ್ರಾಹಕರ ಕೊರತೆಯಿಂದ ಜೀವಕಳೆ ಕಳೆದುಕೊಂಡು ಎಷ್ಟೋ ದಿನಗಳಾಗಿದ್ದವು. ನಷ್ಟದಲ್ಲಿ ಮುಂದುವರಿದಿದ್ದ ಲಾಂಜ್‌ ಕಣ್ಮುಚ್ಚಲು ದಿನಗಣನೆ ನಡೆದಿತ್ತು ಅಷ್ಟೇ...

ಕೆಲವು ವಾರಗಳ ಹಿಂದೆ ವಹಿವಾಟು ನಿಲ್ಲಿಸಿದ್ದ ಲಾಂಜ್‌ ಈಗ ಸಂಪೂರ್ಣವಾಗಿ ಬಾಗಿಲು ಮುಚ್ಚಿದೆ. ಕೆಂಪು ಛತ್ರಿಗಳು ಮತ್ತು ಕಾಫಿ ಬಣ್ಣದ ಬೆತ್ತದ ಕುರ್ಚಿಗಳು ಮೂಲೆ ಸೇರಿವೆ. ಸರ್ಕಸ್‌ ಬಿಳಿ ಡೇರೆ ಹೋಲುತ್ತಿದ್ದ ಆಕರ್ಷಕ ಬಿಳಿ ಗೋಪುರಗಳ ಪರಗೋಲಾ ಕೆಳಗಿಳಿದಿದೆ. ಮೊನ್ನೆ ಕಾರ್ಮಿಕರಿಬ್ಬರು ದೈತ್ಯಾಕಾರದ ಕಬ್ಬಿಣದ ಕಂಬಗಳನ್ನು ಕಳಚಿ ಕೆಳಗಿಳಿಸುತ್ತಿದ್ದರು.

1996ರಲ್ಲಿ ಬ್ರಿಗೇಡ್ ರಸ್ತೆಯಲ್ಲಿ ಆರಂಭವಾದ ಮೊದಲ ಕೆಫೆ ಕಾಫಿ ಡೇ ಮಳಿಗೆಯ ಜನಪ್ರಿಯತೆ ಬೆನ್ನಲ್ಲೇ ಶುರುವಾದ ಎಂ.ಜಿ. ರಸ್ತೆಯ ‘ದ ಲಾಂಜ್‌’ ಗ್ರಾಹಕರಿಗೆ ಅಚ್ಚುಮೆಚ್ಚಿನ ತಾಣವಾಗಿತ್ತು. ಬಾರ್ಟನ್‌ ಸೆಂಟರ್‌ನಲ್ಲಿ ಮತ್ತೊಂದು ಸಿಸಿಡಿ ಮಳಿಗೆ ಆರಂಭವಾಯಿತು. ಮುಂದೆ ಚರ್ಚ್‌ಸ್ಟ್ರೀಟ್‌ನಲ್ಲಿ ಹಲವು ಐಷಾರಾಮಿ ಹೋಟೆಲ್‌ ತಲೆ ಎತ್ತಿದವು. ಸ್ಟಾರ್‌ಬಕ್ಸ್‌ ಮಳಿಗೆಯೂ ತೆರೆಯಿತು. ಗ್ರಾಹಕರೆಲ್ಲ ಅತ್ತ ಹೆಜ್ಜೆ ಹಾಕತೊಡಗಿದರು. ‘ಒಂದು ಕಾಲದಲ್ಲಿ ಕುಳಿತುಕೊಳ್ಳಲು ಮೋಸ್ಟ್‌ ಹ್ಯಾಪನಿಂಗ್‌ ಪ್ಲೇಸ್‌ ಎಂಬ ಹೆಗ್ಗಳಿಕೆ ಪಡೆದಿದ್ದ ಲಾಂಜ್‌ನಲ್ಲಿ ಗ್ರಾಹಕರ ಸಂಖ್ಯೆ ಕ್ಷೀಣಿಸತೊಡಗಿತು’ ಎನ್ನುತ್ತಾರೆ ಇಲ್ಲಿಯ ಸಿಬ್ಬಂದಿ.

ಕಮರ್ಷಿಯಲ್ ಪ್ರದೇಶಗಳಲ್ಲಿ ‘ಕೆಫೆ ಕಾಫಿ ಡೇ’ ಇಲ್ಲದ ಜಾಗವೇ ಇಲ್ಲ ಎಂಬ ಮಾತು ಅರ್ಥ ಕಳೆದುಕೊಳ್ಳುತ್ತಿದೆ. ‘ಎ ಲಾಟ್‌ ಕ್ಯಾನ್‌ ಹ್ಯಾಪನ್‌ ಓವರ್‌ ಕಪ್‌ ಆಫ್‌ ಕಾಫಿ’ ಟ್ಯಾಗ್‌ಲೈನ್‌ ಕೂಡ ಮಸುಕಾಗುತ್ತಿದೆ. ಲಾಂಜ್‌ ಜತೆ ನಗರದ ಜನತೆಯ ಸುಂದರ ಪಯಣವೊಂದು ಕೊನೆಗೊಂಡಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು