ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಲೋಕಕ್ಕೆ ಅಚ್ಚರಿ ತಂದ ಸಾಸನೂರ ಗ್ರಾಮದ ಮಹಿಳೆಯರ ಆಹಾರಶೈಲಿ!

ಚಹಾ, ಬೆಲ್ಲದ ಹಿಟ್ಟಿನುಂಡೆಯೇ ಆಹಾರ
Last Updated 23 ಫೆಬ್ರುವರಿ 2020, 6:40 IST
ಅಕ್ಷರ ಗಾತ್ರ

ತಾಳಿಕೋಟೆ: ಪ್ರೀತಿಯ ಮಗನ ಅಗಲಿಕೆಯ ನೋವಲ್ಲಿ ಆಹಾರ ಬಿಟ್ಟು ಬರೀ ಚಹಾ ಕುಡಿದೇ 14 ವರ್ಷಗಳಿಂದ ಬದುಕು ಸವೆಸುತ್ತಿದ್ದಾರೆ ಹಿರಿಯ ಜೀವ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ಸಾಸನೂರ ಗ್ರಾಮದ ಶಾಂತಮ್ಮ ಬಸವಂತ್ರಾಯಗೌಡ ಬಿರಾದಾರ.

75 ವರ್ಷದ ಶಾಂತಮ್ಮ ಅವರಿಗೆ ಸಾಲು ಸಾಲು ನಾಲ್ಕು ಹೆಣ್ಣುಮಕ್ಕಳು. ಆದರೆ, ಗಂಡು ಮಗುವಿನ ಬಯಕೆ ಆಕೆಯನ್ನು ಕಾಡಿಸಿತ್ತು. ದೇವರಿಗೆ ಹೊತ್ತ ಹರಕೆಯ ಫಲವೆಂಬಂತೆ ಹುಟ್ಟಿದ ಮಗ ಶಿವನಗೌಡ ಕಣ್ಣು ಕುಕ್ಕುವಂತಿದ್ದ. ಮೈ ತುಂಬಿಕೊಂಡು ಜೋಳದ ಚೀಲಗಳನ್ನು ಅನಾಯಾಸವಾಗಿ ಎತ್ತುವ ಶಕ್ತಿ, ಸಾಮರ್ಥ್ಯ ಆತನಲ್ಲಿತ್ತು.

ಪ್ರೀತಿಯ ಮಗನಿಗೆ ತನ್ನ ಮಗಳ ಮಗಳನ್ನೇ ಸೊಸೆಯನ್ನಾಗಿಸಿ ಮನೆ ತುಂಬಿಸಿಕೊಂಡ ಶಾಂತಮ್ಮನ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಅನಾರೋಗ್ಯಕ್ಕೆ ತುತ್ತಾದ 25 ವರ್ಷದ ಮಗ ಮೃತನಾದಾಗ ಶಾಂತಮ್ಮನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಮಗ ಶಿವನೊಡಲು ಸೇರಿದ ದಿನಗಳಿಂದ ತುತ್ತು ಅನ್ನ ಒಡಲು ಸೇರಲು ಜಪ್ಪಯ್ಯ ಅಂದ್ರೂ ಒಪ್ಪಲಿಲ್ಲವಂತೆ. ಜೀವಕ್ಕೆ ತೊಂದರೆ ಆಗಬಾರದು ಎಂದು ಬಳಗದವರೆಲ್ಲರ ಒತ್ತಾಯಕ್ಕೆ ಕುಡಿಸಿದ ಚಹಾವೇ ಕಳೆದ 14 ವರ್ಷಗಳಿಂದ ಅವಳ ಆಹಾರವಾಗಿದೆ. ವೈದ್ಯರ ಬಳಿ ಹೋಗಿ ಬಂದಿದ್ದಾರೆ. ಜೀವಕ್ಕೇನೂ ಅಪಾಯವಿಲ್ಲ ಎಂದಿದ್ದಾರೆ ಎಂಬುದು ಸಂಗಮೇಶ ದೇಸಾಯಿ ಅವರ ವಿವರಣೆ.

ಇದ್ದ ಊರಲ್ಲಿಯೇ ಮಗಳಾದ ಶಿವಮ್ಮನನ್ನು ಕೊಟ್ಟಿದ್ದರೂ ಅವಳ ಜೊತೆ ಇರಲು ಬಯಸದೇ ಒಂಟಿಯಾಗಿ ಊರಹೊರಗೆ ಸನ್ಯಾಸಿನಿಯಂತೆ ದೇವರ ಸ್ಮರಣೆಯಲ್ಲಿ ದಿನದೂಡುತ್ತಿದೆ ಶಾಂತಮ್ಮ.

ಇನ್ನು ಇದೇ ಗ್ರಾಮದ ಮಲ್ಲಮ್ಮ ಬೂದಿಹಾಳ ಎಂಬುವವರು ಹುಟ್ಟಿದ ಎರಡನೇ ವರ್ಷದಿಂದಲೇ ಊಟ ಮಾಡದೇ ದಿನಕ್ಕೆ ಒಂದು ಬಾರಿ ಬೆಲ್ಲದ ಹಿಟ್ಟಿನುಂಡೆ ತಿಂದು 35 ವರ್ಷಗಳಿಂದ ಸಾಮಾನ್ಯರಂತೆ ಬದುಕುತ್ತಿದ್ದಾರೆ.

ಮಲ್ಲಮ್ಮ

ಹುಟ್ಟಿದಾಗ ತಾಯಿಯ ಎದೆ ಹಾಲು ಕುಡಿದು ಬೆಳೆದಳು. ವೈದ್ಯರು ನೀಡಿದ ಸಲಹೆಯಂತೆ ಎರಡನೇ ವರ್ಷದಲ್ಲಿ ಹಾಲು ಬಿಡಿಸಿ ಊಟ ಮಾಡಿಸಲು ಹೋದಾಗ ತಿಂದ ಊಟವೆಲ್ಲಾ ವಾಂತಿಯಾಗತೊಡಗಿತು. ವೈದ್ಯರ ಚಿಕಿತ್ಸೆಯೂ ಫಲ ನೀಡಲಿಲ್ಲ. ಜೋಳದ ಹಿಟ್ಟಿನಲ್ಲಿ ಬೆಲ್ಲ ಬೆರೆಸಿ ತಿನ್ನಿಸಿ ಎಂಬ ಹಿರಿಯರೊಬ್ಬರ ಸಲಹೆ ಮೇರೆಗೆ ತಾಯಿ ಬಸಲಿಂಗಮ್ಮ ಪ್ರಯತ್ನ ಮಾಡಿದರು. ಅದು ಫಲ ನೀಡಿತು. ಅಂದಿನಿಂದ ಇಂದಿನವರೆಗೂ ನಿತ್ಯ ಒಂದು ಬಾರಿ ಮಾತ್ರ ಪುಟ್ಟ ಬೆಲ್ಲ ಬೆರೆಸಿದ ಹಿಟ್ಟಿನುಂಡೆ ಮಾತ್ರ ತಿನ್ನುತ್ತಿದ್ದಾರೆ. ಜತೆಗೆ ಎರಡು ಬಾರಿ ಚಹಾ ಸೇವಿಸುತ್ತಾರೆ. ಯಾವುದೇ ಅನಾರೋಗ್ಯ ಕಾಡಿಲ್ಲ ಎಂದು ಅವರ ಕುಟುಂಬದವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT