ಗುರುವಾರ , ಜನವರಿ 20, 2022
15 °C
ಕೋವಿಡ್‌ ಕಾಲದ ಹೊಸ ಟ್ರೆಂಡ್‌

ಬ್ಯಾಕ್ಟೀರಿಯಾ ಮುಕ್ತ ಅಡುಗೆ ಮನೆ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಮನೆ ಕಟ್ಟುವಾಗ ಅಡುಗೆ ಮನೆಯ ಬಗ್ಗೆ ಕಾಳಜಿ ವಹಿಸುತ್ತಿದ್ದೀರಾ? ನಿಮ್ಮ ಅಭಿರುಚಿ, ಅನುಕೂಲ, ಬಜೆಟ್‌ಗೆ ತಕ್ಕಂತಹ ವಿನ್ಯಾಸ ಮಾಡಿಸಿ.

ಬೆಂಗಳೂರಿನ ರಜನಿ ಮತ್ತು ಪದ್ಮನಾಭ ರಾವ್‌ ದಂಪತಿ ಕೋವಿಡ್‌ನ ಈ ದಿನಗಳಲ್ಲೇ ತಮ್ಮ ಅಡುಗೆಮನೆಯನ್ನು ಮರುವಿನ್ಯಾಸ ಮಾಡಿಸಿದ್ದಾರೆ. ಅಂದಚೆಂದಕ್ಕಿಂತ ಅವರು ಆದ್ಯತೆ ನೀಡಿದ್ದು ಸ್ವಚ್ಛಗೊಳಿಸಲು ಸುಲಭವಾದ ಅಡುಗೆಮನೆಯನ್ನು. ಕಿಚನ್‌ ಕಟ್ಟೆ, ಕ್ಯಾಬಿನೆಟ್‌, ವಾಷ್‌ ಬೇಸಿನ್‌ ಎಲ್ಲವನ್ನೂ ಶುದ್ಧಗೊಳಿಸಲು ಅನುಕೂಲವಾಗುವಂತೆ ಒಳಾಂಗಣ ವಿನ್ಯಾಸಕರೂ ಸಿದ್ಧಪಡಿಸಿಕೊಟ್ಟಿರುವುದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವ ರಾವ್‌ ದಂಪತಿಗೆ ಖುಷಿ ಕೊಟ್ಟಿದೆ.

ಹೌದು, ಭಾರತೀಯ ಅಡುಗೆ ಮನೆಯ ವಿನ್ಯಾಸ ಹಾಗೂ ಶೈಲಿಯ ಬದಲಾವಣೆಗೂ ಕೋವಿಡ್‌ -19 ಪಿಡುಗು ನಾಂದಿ ಹಾಡಿದೆ. ಅಡುಗೆ ಮನೆಯನ್ನು ಸ್ವಚ್ಛವಾಗಿರಿಸಲು ಹಾಗೂ ಸೋಂಕು ಮುಕ್ತವಾಗಿರಿಸಲು ಗೃಹಿಣಿಯರು ಹೆಚ್ಚು ಕಾಳಜಿ ವಹಿಸುತ್ತಿರುವುದು ಈಗಿನ ಬೆಳವಣಿಗೆ. ಇದೇ ಸಮಯದಲ್ಲಿ ವಿನ್ಯಾಸಕಾರರೂ ಕೂಡ ಸುಲಭವಾಗಿ ಸ್ವಚ್ಛಗೊಳಿಸಲು ಅನುಕೂಲವಾಗುವ ವಿನ್ಯಾಸಗಳನ್ನೇ ಪರಿಚಯಿಸಿದ್ದಾರೆ.

ಪ್ರಸಕ್ತ ವರ್ಷ ಪರಿಚಯಗೊಂಡ ಅಡುಗೆ ಮನೆಯ ಪ್ರಮುಖ ವಿನ್ಯಾಸಗಳು ಹೀಗಿವೆ.

ಬ್ಯಾಕ್ಟೀರಿಯಾ ಮುಕ್ತ ಮೇಲ್ಮೈ: ಅಡುಗೆಮನೆಯನ್ನು ಪದೇ ಪದೇ ಸ್ವಚ್ಛ ಮಾಡುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿ ಸುಲಭವಾಗಿ ಸ್ವಚ್ಛ ಮಾಡಲು ಅನುಕೂಲವಾಗುವಂತಹ ನುಣುಪು ಮೇಲ್ಮೈ ಗ್ರಾನೈಟ್‌, ಕಿಚನ್‌ ಕ್ಯಾಬಿನೆಟ್‌, ಹಿಡಿಕೆಗಳು, ವಾಷ್‌ ಬೇಸಿನ್‌ಗಳನ್ನು ಅಳವಡಿಸುವುದಕ್ಕೆ ಬೇಡಿಕೆ ಬಂದಿದೆ. ಸುಲಭವಾಗಿ ಸ್ಯಾನಿಟೈಸ್‌ ಮಾಡಬಹುದು ಮತ್ತು ಈ ಜಾಗವನ್ನು ಬ್ಯಾಕ್ಟೀರಿಯಾ ಮುಕ್ತಗೊಳಿಸಬಹುದು ಎಂಬ ಉದ್ದೇಶ ಈ ಪರಿಕಲ್ಪನೆಯ ಹಿಂದಿದೆ.

ಹಣ್ಣು , ತರಕಾರಿಗೆ ಪ್ರತ್ಯೇಕ ಸ್ಥಳ: ಮಾರುಕಟ್ಟೆಯಿಂದ ತಂದ ಹಣ್ಣು- ತರಕಾರಿಯನ್ನು ಫ್ರಿಜ್‌ನೊಳಗೋ ಅಥವಾ ಮರದ ಬುಟ್ಟಿಗಳಲ್ಲೋ ನೇರವಾಗಿ ಇಡುವ ಬದಲು ಸ್ವಲ್ಪ ಹೊತ್ತು ಗಾಳಿಯಾಡುವ ಮುಕ್ತ ಪ್ರದೇಶದಲ್ಲಿ ಇಡುವ ವ್ಯವಸ್ಥೆಗೆ ಬೇಡಿಕೆ ಬಂದಿದೆ. ವೈರಸ್‌ ಸೋಂಕು, ಬ್ಯಾಕ್ಟೀರಿಯಾ ಇದ್ದರೆ ಅದರ ತೀವ್ರತೆ ಕಡಿಮೆ ಮಾಡುವ ಕಾಳಜಿ ಇದರ ಹಿಂದಿದೆ. ಇದು ತಕ್ಷಣಕ್ಕೆ ಮಕ್ಕಳ ಕೈಗೆಟಕದಂತೆಯೂ ಇರಬೇಕು. ಮಾತ್ರವಲ್ಲ, ಹಣ್ಣು ಮತ್ತು ತರಕಾರಿಗಳನ್ನು ತೊಳೆದಿಡಲು ಅಡುಗೆ ಮನೆಯಿಂದ ಸ್ವಲ್ಪ ಅಂತರವಿರುವ ಜಾಗವನ್ನು ಜನ ಬಯಸುತ್ತಿದ್ದಾರೆ ಎನ್ನುತ್ತಾರೆ ವಿನ್ಯಾಸಕರು.  

ಸ್ಥಳಾವಕಾಶ ವಿಸ್ತರಣೆ: ಲಾಕ್‌ಡೌನ್‌ ಬಂದಾಗ ಹಲವು ದಿನಗಳಿಗೆ ಬೇಕಾಗುವಷ್ಟು ದಿನಸಿಗಳನ್ನು ತಂದು ಸಂಗ್ರಹಿಸಿಟ್ಟುಕೊಳ್ಳುವ ಕ್ರಮ ಶುರುವಾಯಿತು. ಪುಟ್ಟ ಮನೆಗಳಲ್ಲಿರುವವರು ಸಂಗ್ರಹ ಸ್ಥಳದ ಅಭಾವದಿಂದ ಪರದಾಡಬೇಕಾಯಿತು. ಈಗ ಬಂದಿರುವುದೇ ಅಡುಗೆ ಮನೆಯ ಸ್ಥಳಾವಕಾಶ ವಿಸ್ತರಿಸುವ ಟ್ರೆಂಡ್‌. ಮೂಲೆ ಭಾಗ (ಕಾರ್ನರ್‌ ಪ್ಲೇಸ್‌)ದಲ್ಲಿ ಸಂಗ್ರಹ ಸ್ಥಳಗಳು, ವಿಶೇಷ ಕ್ಯಾಬಿನೆಟ್‌, ರ‍್ಯಾಕ್‌ ಅಳವಡಿಸಿ ಸ್ಥಳ ವಿಸ್ತರಣೆಯ ಪರಿಪಾಠ ಆರಂಭವಾಗಿದೆ. ಹೀಗಾದಾಗ ಅಡುಗೆಮನೆ ದೊಡ್ಡದಾಗಿ ಕಾಣಿಸುತ್ತದೆ. ಸಂಗ್ರಹಾಗಾರವಾಗಿಯೂ ಬಳಕೆಯಾಗುತ್ತದೆ ಎಂಬುದು ವಿನ್ಯಾಸಕರು ಮತ್ತು ಮನೆ ಕಟ್ಟುವವರ ಆಲೋಚನೆ. 

ಮುಕ್ತ ವಿನ್ಯಾಸ: ಲಾಕ್‌ಡೌನ್‌ ನಂತರ ಕೂಡ ಹೆಚ್ಚಿನ ಸಮಯ ಮನೆಯಲ್ಲೇ ಕಳೆಯುವಂತಾಗಿದೆ. ಜತೆಗೆ ಮನೆಯಿಂದಲೇ ಕೆಲಸ ಎಂಬ ಪರಿಕಲ್ಪನೆಯೂ ಬಂತಲ್ಲ. ಹೀಗಾಗಿ ಅಡುಗೆ ಮನೆ, ಹಾಲ್‌ ನಡುವಿನ ಓಡಾಟ ಹೆಚ್ಚಾಗಿದೆ. ಆಗ ಜನಪ್ರಿಯವಾಗಿದ್ದು ಮುಕ್ತ ವಿನ್ಯಾಸ (ಓಪನ್‌ ಡಿಸೈನ್‌). ಹಾಲ್‌ಗೆ ತೆರೆದ ಅಡುಗೆ ಮನೆಯಿದ್ದರೆ ವಿನ್ಯಾಸವನ್ನು ಬೇಕಾದಂತೆ ರೂಪಿಸಬಹುದು. ಮಾತ್ರವಲ್ಲ, ಆಗಾಗ ಅಗತ್ಯ ಮತ್ತು ಅಭಿರುಚಿಗೆ ತಕ್ಕಂತೆ ಬದಲಿಸಿಕೊಳ್ಳಲೂಬಹುದು. ಡೈನಿಂಗ್‌ ಹಾಲ್‌ ಆಗಿಯೂ ಪರಿವರ್ತಿಸಿಕೊಳ್ಳಬಹುದು. ಕಿಚನ್‌ ಕ್ಯಾಬಿನೆಟ್‌, ಸಂಗ್ರಹ ಪೆಟ್ಟಿಗೆಗಳು, ಮಿಕ್ಸಿ, ಓವೆನ್‌ನಂತಹ ಗ್ಯಾಜೆಟ್‌ಗಳು, ಪಾತ್ರೆಗಳು ತಕ್ಷಣಕ್ಕೆ ಕೈಗೆಟಕುವಂತೆ, ಅಗತ್ಯವಿಲ್ಲದಿದ್ದಾಗ ಪೂರ್ಣ ಮರೆಯಾಗಿ ಖಾಲಿ ಹಾಲ್‌ನಂತೆ ಕಾಣುವ ಪರಿಕಲ್ಪನೆಯಿದು. 

ಡಿಷ್‌ ವಾಷರ್‌ಗೆ ಬೇಡಿಕೆ
ಸೋಂಕಿನ ಭಯ ಅದರಲ್ಲೂ ನಗರವಾಸಿಗಳಲ್ಲಿ ಎಷ್ಟು ಆವರಿಸಿದೆಯೆಂದರೆ ಪಾತ್ರೆ ತೊಳೆಯಲೂ ಆತಂಕ ಪಡುವವರಿದ್ದಾರೆ ಅಥವಾ ಅದಕ್ಕಾಗಿ ಕೆಲಸದವರು ಹೊರಗಿನಿಂದ ಬರಬೇಕಲ್ಲವೇ, ಅವರಲ್ಲೇನಾದರೂ ಸೋಂಕಿದ್ದರೆ.. ಎಂಬ ಭಯವೂ ಬಹುತೇಕರನ್ನು ಕಾಡುತ್ತಿದೆ. ಹೀಗಾಗಿ ಪಾತ್ರೆ ತೊಳೆಯುವ ಯಂತ್ರಕ್ಕೆ (ಡಿಷ್‌ ವಾಷರ್‌) ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈ ವಲಯದ ಮೂಲಗಳ ಪ್ರಕಾರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಡಿಷ್‌ ವಾಷರ್‌ಗಳಿಗೆ ಬೇಡಿಕೆ ಶೇ 250ರಷ್ಟು ಹೆಚ್ಚಾಗಿದೆಯಂತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು