ಮಂಗಳವಾರ, ನವೆಂಬರ್ 24, 2020
25 °C
70 ವರ್ಷಗಳಿಂದ ಜಿಹ್ವಾ ಪ್ರಿಯರ ಮನಗೆದ್ದ ‘ಖಣ’ಗಳ ಊರಿನ ಸಿಹಿ ತಿಂಡಿ

PV Web Exclusive | ಚಳಿಗಾಲದಲ್ಲಿ ಜಿಲೇಬಿ–ರಬಡಿಗಾಗಿ ಗುಳೇದಗುಡ್ಡಕ್ಕೆ ಬನ್ನಿ!

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಇಲ್ಲಿನ ನೇಕಾರಿಕೆ ಪಟ್ಟಣ ಗುಳೇದಗುಡ್ಡಕ್ಕೆ (ಗುಳೇಬಂದವರ ಗುಡ್ಡ) ಹಿಂದೆಲ್ಲಾ ಉದ್ಯೋಗ ಅರಸಿ, ವ್ಯಾಪಾರ–ವಹಿವಾಟಿಗೆ ಬರೀ ಹೊರಗಿನ ಜನರು ಮಾತ್ರ ವಲಸೆ ಬಂದಿಲ್ಲ. ಬದಲಿಗೆ ಏಳು ದಶಕಗಳ ಹಿಂದೆ ದೂರದ ರಾಜಸ್ತಾನದ ಅಬು ರಸ್ತೆಯ ಪ್ರಸಿದ್ಧ ಸಿಹಿ ಖಾದ್ಯ ಜಿಲೇಬಿ–ರಬಡಿ ಕೂಡ ಗುಳೇ ಬಂದಿದೆ. ತನ್ನ ವಿಶಿಷ್ಟ ಸ್ವಾದದಿಂದ ಈ ಭಾಗದ ಜನರ ಮನಗೆದ್ದಿದೆ.

ಈ ಬಾರಿಯ ಚಳಿಗಾಲದಲ್ಲಿ ನೀವು ಮಗ್ಗದ ಖಣ (ರವಿಕೆ), ಸೀರೆಗಳ ಕೊಂಡೊಕೊಳ್ಳಲು ಗುಳೇದಗುಡ್ಡಕ್ಕೆ ಬರುವಿರಾ? ಹಾಗಿದ್ದರೆ ಇಲ್ಲಿನ ಜಿಲೇಬಿ–ರಬಡಿ ಸವಿಯುವುದನ್ನು ಮರೆಯದಿರಿ. ವಿಜಯದಶಮಿಯಿಂದ ಶಿವರಾತ್ರಿ ಹಬ್ಬದವರೆಗೆ ಗುಳೇದಗುಡ್ಡದ ಮಂದಿ ಮುಂಜಾನೆಯೇ ಮೈಗಡರುವ ಶೀತಕ್ಕೆ ಮದ್ದಿನ ರೂಪದಲ್ಲಿ ಜಿಲೇಬಿ–ರಬಡಿ ಸವಿಯುತ್ತಾರೆ. ಶರದೃತುವಿನ ಸಂಧಿಕಾಲದಿಂದ ಚೈತ್ರ ಮಾಸದವರೆಗೆ ಊರಿನ ಜನರ ಬೆಳಗಿನ ಉಪಾಹಾರದ ಮೆನುವಿನಲ್ಲಿ ಸೂಸಲಾ (ಮಂಡಕ್ಕಿ)–ಬಜಿ, ಪುರಿ–ಬಾಜಿಯೊಂದಿಗೆ ಜಿಲೇಬಿ–ರಬಡಿಯೂ ಸ್ಥಾನ ಪಡೆದಿದೆ. 

ತುಪ್ಪದಲ್ಲಿ ಕರಿದ ಗರಿಗರಿಯಾದ ಬಿಸಿ ಜಿಲೇಬಿಯನ್ನು ಬೆರಳಲ್ಲಿ ಎತ್ತಿಕೊಂಡು, ಹಾಲು ಕುದಿಸಿ ಕೆನೆ ತೆಗೆದು ಸಿದ್ಧಪಡಿಸಿದ ರಬಡಿಯಲ್ಲಿ ಅದ್ದಿ ನಾಲಿಗೆ ಮೇಲೆ ಇಟ್ಟುಕೊಂಡರೆ ಅದು ಹಾಗೆಯೇ ಕರಗಿ ನೀರಾಗುವುದೇ ವಿಶೇಷ ಅನುಭೂತಿ.. ಜಿಹ್ವ ಪ್ರಿಯರಿಗಂತೂ ಇದು ಸ್ವರ್ಗಕ್ಕೆ ಮೂರೇ ಮೆಟ್ಟಿಲು...


ಗುಳೇದಗುಡ್ಡದಲ್ಲಿ ಲಕ್ಷ್ಮೀನಾರಾಯಣ ಜೋಶಿ ಅಂಗಡಿಯಲ್ಲಿ ಜಿಲೇಬಿ ಸಿದ್ಧಪಡಿಸುತ್ತಿರುವುದು

ದೂರದ ರಾಜಸ್ತಾನದ ಜೋಧಪುರದಿಂದ 70 ವರ್ಷಗಳ ಹಿಂದೆ ವ್ಯಾಪಾರಕ್ಕೆಂದು ಗುಳೇದಗುಡ್ಡಕ್ಕೆ ವಲಸೆ ಬಂದ ಮಾರವಾಡಿ ಸಮುದಾಯದ ಹಂಸರಾಜ್‌ ಜೋಶಿ, ಜಿಲೇಬಿ–ರಬಡಿ ಸಿದ್ಧಪಡಿಸಿ ಮಾರಾಟ ಮಾಡಲು ಆರಂಭಿಸಿದರು. ಅಲ್ಲಿನ ಅಬು ರಸ್ತೆಯಲ್ಲಿನ ಜನಪ್ರಿಯ ಖಾದ್ಯ ಬಹುಬೇಗನೇ ಇಲ್ಲಿನ ನೇಕಾರ ಸಮುದಾಯದವರನ್ನು ಆಕರ್ಷಿಸಿತು. ಈಗ ಜೋಶಿ ಅವರ ಕುಟುಂಬದ ಮೂರನೇ ತಲೆಮಾರು ಸೂರಜ್, ತನ್ನ‌ ಅಪ್ಪ ಲಕ್ಷ್ಮೀನಾರಾಯಣ ಜೋಶಿ ಅವರೊಂದಿಗೆ ಸೇರಿ ಈ ವಹಿವಾಟು ಮುಂದುವರೆಸಿದ್ದಾರೆ. 

ಮೈದಾಹಿಟ್ಟಿಗೆ ಅರಿಶಿನಪುಡಿ, ಮೊಸರು ಹಾಕಿ ಕಲಸಿ ಹದ ಮಾಡಿಕೊಂಡು ಬಟ್ಟೆಯಲ್ಲಿ ಸೋಸಿ ಬಾಣಲೆಯಲ್ಲಿ ಕುದಿಯುವ ತುಪ್ಪದಲ್ಲಿ ವೃತ್ತಾಕಾರದ ಚಿತ್ತಾರಗಳ ಮೂಡಿಸಿ ಚೆನ್ನಾಗಿ ಕರಿದು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ ಜಿಲೇಬಿ ಸವಿಯಲು ಸಿದ್ಧ. ಐದಾರು ತಾಸು ಹಾಲನ್ನು ಕಾಯಿಸಿ ಕೆನೆ ತೆಗೆದು ಅದನ್ನು ಪೂರ್ಣ ತಣ್ಣಗಾಗಿಸಿ ಸಕ್ಕರೆ ಪುಡಿ ಬೆರೆಸಿದರೆ ಜಿಲೇಬಿಯ ಜೋಡಿ ರಬಡಿ ಸಿದ್ಧಗೊಳ್ಳುತ್ತದೆ.

ಸಂಪೂರ್ಣ ಹಾಲಿನ ಉತ್ಪನ್ನವಾದ ರಬಡಿ ಬೇಸಿಗೆಯಲ್ಲಾದರೆ ಬೇಗನೇ ಹುಳಿ ಬರುತ್ತದೆ. ಹೀಗಾಗಿ ಚಳಿಗಾಲದ ನಾಲ್ಕು ತಿಂಗಳು ಮಾತ್ರ ಮಾಡಲಾಗುತ್ತದೆ. ಈ ಅವಧಿಯಲ್ಲಿಯಾದರೆ ರಬಡಿ ಕೆಡದಂತೆ ನಾಲ್ಕು ದಿನ ಇಡಬಹುದು. ಸುತ್ತಲೂ ಕಲ್ಲು ಇಟ್ಟು ಮಾಡಿದ ಸೌದೆ ಒಲೆಯಲ್ಲಿ  50 ಲೀಟರ್ ಹಾಲನ್ನು ಐದಾರು ತಾಸು ಕುದಿಸಿದರೆ 9 ಕೆ.ಜಿ ಕೆನೆ ಸಿಗುತ್ತದೆ. ಅದನ್ನು ಸಂಜೆಯವರೆಗೂ ತಣಿಸಿ ಸಕ್ಕರೆ ಸೇರಿಸಿದರೆ ರಬಡಿ ಸಿದ್ಧವಾಗುತ್ತದೆ. ಅದನ್ನು ಮರುದಿನ ಬೆಳಿಗ್ಗೆ ಬಳಸುತ್ತಾರೆ. ಡೇರಿ ಹಾಲಿನಲ್ಲಿ ಕೆನೆ ಸಿಗುವುದಿಲ್ಲ. ಸುತ್ತಲಿನ ಹಳ್ಳಿಗಳಿಂದ ಎಮ್ಮೆ ಹಾಲು ಕೊಂಡು ತಂದು ರಬಡಿ ಮಾಡಲು ಬಳಸುತ್ತೇವೆ ಎಂದು ಇಲ್ಲಿನ ಜೋಶಿ ಸ್ವೀಟ್ಸ್‌ನ ಮಾಲಿಕ ಲಕ್ಷ್ಮಿನಾರಾಯಣ ಜೋಶಿ ಹೇಳುತ್ತಾರೆ.


ಗುಳೇದಗುಡ್ಡದಲ್ಲಿ ಲಕ್ಷ್ಮೀನಾರಾಯಣ ಜೋಶಿ ಕುಟುಂಬದವರು ಹಾಲು ಕುದಿಸಿ ಕೆನೆ ತೆಗೆದು ರಬಡಿ ಸಿದ್ಧಪಡಿಸುವುದರಲ್ಲಿ ಮಗ್ನರಾಗಿರುವುದು

’ಜಿಲೇಬಿ ಕರಿಯಲು ಕೃಷ್ಣಾ ಹಾಗೂ ನಂದಿನಿ ತುಪ್ಪ ಬಳಸುತ್ತೇವೆ. ಜಿಲೇಬಿ ಹಿಟ್ಟಿಗೆ ಯಾವುದೇ ಕೃತಕ ಬಣ್ಣ, ರುಚಿಕಾರಕಗಳನ್ನು ಬಳಸುವುದಿಲ್ಲ. ಅರಿಶಿನ ನಂಜು ನಿವಾರಕವಾಗಿ ಬಳಕೆಯಾಗುತ್ತದೆ. ಮೊಸರು ಜಿಲೇಬಿಗೆ ವಿಶೇಷ ರುಚಿ ತಂದುಕೊಂಡುತ್ತದೆ ಎನ್ನು ತ್ತಾರೆ.

ಜಿಲೇಬಿ–ರಬಡಿ ದಿನಕ್ಕೆ 20 ಕೆ.ಜಿ ಮಾತ್ರ ಸಿದ್ಧಪಡಿಸುತ್ತಾರೆ. ಮುಂಜಾನೆ 6.30ರಿಂದ ಕೊಳ್ಳಲು ಸಿಗುವ ಈ ಖಾದ್ಯ ಬೆಳಿಗ್ಗೆ 11 ಗಂಟೆ ವೇಳೆಗೆಲ್ಲಾ ಖಾಲಿಯಾಗುತ್ತದೆ. ತುಪ್ಪದಲ್ಲಿ ಕರಿದ ಜಿಲೇಬಿ, ಹಾಲಿನಿಂದ ಸಿದ್ಧಪಡಿಸಿದ ರಬಡಿ ಸವಿದರೆ ದೇಹದಲ್ಲಿ ಉಷ್ಣಾಂಶ ಹೆಚ್ಚುತ್ತದೆ. ಹೀಗಾಗಿ ಇದು ಚಳಿಗಾಲಕ್ಕೆ ತಕ್ಕ ಖಾದ್ಯ. ಹೆಚ್ಚು ತಿಂದರೆ ನಿದ್ರೆ ಕೂಡ ಆವರಿಸಿಕೊಳ್ಳುತ್ತದೆ ಎನ್ನುತ್ತಾರೆ. 

ಜಿಲೇಬಿ–ರಬಡಿಯ ರುಚಿಗೆ ಬರೀ ಬಾಗಲಕೋಟೆ ಜಿಲ್ಲೆಯ ಜನರು ಮಾತ್ರ ಮಾರುಹೋಗಿಲ್ಲ. ಅಕ್ಕಪಕ್ಕದ ಜಿಲ್ಲೆಯವರು, ಗುಳೇದಗುಡ್ಡದವರೊಂದಿಗೆ ನೆಂಟಸ್ತನ ಮಾಡಿದವರು, ಸ್ನೇಹಿತರು, ಜವಳಿ ವ್ಯಾಪಾರಕ್ಕೆ ಸಾಮಾನ್ಯವಾಗಿ ಬಂದು ಹೋಗುವವರು ಈ ಸಿಹಿ ಖಾದ್ಯ ಸವಿದು ಕೊಂಡು ಹೋಗುತ್ತಾರೆ. ಬೆಂಗಳೂರು, ಕಲಬುರ್ಗಿ, ಮಹಾರಾಷ್ಟ್ರದ ಸೊಲ್ಲಾಪುರದಿಂದಲೂ ಗ್ರಾಹಕರು ನಿಯಮಿತವಾಗಿ ಜಿಲೇಬಿ–ರಬಡಿ ತರಿಸಿಕೊಳ್ಳುತ್ತಾರೆ. ವಾರದ ಹಿಂದೆ ದುಬೈಗೆ ತೆರಳಿದ ನಮ್ಮೂರಿನ ಉದ್ಯಮಿಯೊಬ್ಬರು ಅಲ್ಲಿನ ಸ್ನೇಹಿತರಿಗೆ ಕೊಂಡೊಯ್ದರು ಎಂದು ಲಕ್ಷ್ಮೀನಾರಾಯಣ ನೆನಪಿಸಿಕೊಳ್ಳುತ್ತಾರೆ.


ಗುಳೇದಗುಡ್ಡದಲ್ಲಿ ತಮ್ಮ ಅಂಗಡಿಯಲ್ಲಿ ಗ್ರಾಹಕರಿಗೆ ರಬಡಿ ಕಟ್ಟಿಕೊಡುತ್ತಿರುವ ಲಕ್ಷ್ಮೀನಾರಾಯಣ ಜೋಶಿ ಅವರ ಪತ್ನಿ ನವನೀತ 

’ನಮ್ಮ ಮನೆ ಬಾಗಲಕೋಟೆಯಲ್ಲಿದೆ. ಜಿಲೇಬಿ–ರಬಡಿ ಕೊಳ್ಳುವ ಸಲುವಾಗಿ ನಿನ್ನೆ ರಾತ್ರಿಯೇ ಸಂಬಂಧಿಕರ ಮನೆಗೆ ಬಂದು ಉಳಿದಿದ್ದೆನು. ನಮ್ಮ ಕುಟುಂಬದವರು ಕಳೆದ 30 ವರ್ಷಗಳಿಂದ ಇಲ್ಲಿ ಈ ಖಾದ್ಯ ಕೊಳ್ಳುತ್ತಿದ್ದೇವೆ‘ ಎಂದರು ಜಿಲೇಬಿ ಕಟ್ಟಿಸಿಕೊಳ್ಳುತ್ತಿದ್ದ ಪೂರನ್‌ ಬಾಯಿ.

ದಿನಕ್ಕೆ ಇಂತಿಷ್ಟೇ ಎಂದು ಖಾದ್ಯ ಸಿದ್ಧಪಡಿಸುವುದರಿಂದ ಗ್ರಾಹಕರ ಬೇಡಿಕೆಯಷ್ಟು ತಿನಿಸು ಸಿಗುವುದಿಲ್ಲ. ಗುಳೇದಗುಡ್ಡದ ಪುರಸಭೆ ಪಕ್ಕದಲ್ಲಿ ಜೋಶಿ ಅವರ ಅಂಗಡಿ ಇದ್ದರೆ, ಮತ್ತೊಂದು ಸಬ್‌ ಟ್ರೆಜಿರಿ ಕಚೇರಿ ಬಳಿಯ ಶ್ರೀನಿವಾಸ ಪಂಚಾರ್ಯ ಅವರ ಅಂಗಡಿ. ಈ ಎರಡು ಕಡೆ ಮಾತ್ರ ಜಿಲೇಬಿ–ರಬಡಿ ಸಿದ್ಧವಾಗುತ್ತದೆ. ಜಿಲೇಬಿ ಕೆ.ಜಿಗೆ ₹300 ಹಾಗೂ ರಬಡಿ ₹400ಕ್ಕೆ ಕೊಳ್ಳಲು ಸಿಗುತ್ತವೆ. ಮೊದಲೇ ಕರೆ ಮಾಡಿ ಮುಂಗಡ ಬೇಡಿಕೆ ಸಲ್ಲಿಸಿದರೆ ಪ್ಯಾಕ್‌ ಮಾಡಿ ಸಿದ್ಧಪಡಿಸಿಟ್ಟಿರುತ್ತಾರೆ.

ಸಂಪರ್ಕ ಸಂಖ್ಯೆ: ಸೂರಜ್ ಜೋಶಿ–94495 13971.

(ಚಿತ್ರಗಳು: ಇಂದ್ರಕುಮಾರ ದಸ್ತೇನವರ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು