ಗುರುವಾರ , ಡಿಸೆಂಬರ್ 1, 2022
27 °C

ಕಡಿಮೆ ಕ್ಯಾಲೋರಿಯ ಹಬೆ ಕಡುಬು

ಸುಮಾ ಬಿ. Updated:

ಅಕ್ಷರ ಗಾತ್ರ : | |

‘ಕಡುಬು’ ಎಂದಾಕ್ಷಣ ಒಂದೊಂದು ಭಾಗದವರಿಗೆ ಒಂದೊಂದು ನೆನಪು. ಕಡುಬಿನ ಕವಲುಗಳು ಸಾಕಷ್ಟಿರುವುದೇ ಇದಕ್ಕೆ ಕಾರಣ. ಕರಿಗಡುಬು, ಖಾರದ ಕಡುಬು, ಸಿಹಿ ಕಡುಬು, ಶಾಯಿ ಕಡುಬು, ಕುಚ್ಚಿದ ಕಡುಬು, ಅಕ್ಕಿ ಕಡುಬು, ಉದ್ದಿನ ಕಡುಬು, ರವೆ ಕಡುಬು, ಕೊಬ್ಬರಿ ಕಡುಬು, ಕೊಟ್ಟೆ ಕಡುಬು, ಮೂಡೆ ಕಡುಬು... ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಣ್ಣೆಯಲ್ಲಿ ಕರಿದೂ ಕಡುಬು ತಯಾರಿಸಬಹುದು. ಎಣ್ಣೆ ಪದಾರ್ಥ ವರ್ಜ್ಯ ಎನ್ನುವವರು ಹಬೆಯಲ್ಲಿ ಬೇಯಿಸಿಯೂ ಸವಿಯಬಹುದು. ಆದರೆ ಕರಿಗಡುಬಿಗೂ ರವೆ ಕಡುಬಿಗೂ ವ್ಯತ್ಯಾಸ ಉಂಟು.

ಎಲೆಯ ಒಳಗೆ ಬೇಳೆ ಹೂರಣ, ಸಕ್ಕರೆ ಕೊಬ್ಬರಿಯ ಮಿಶ್ರಣ, ಖೋವಾ ಸಕ್ಕರೆಯ ಮಿಶ್ರಣ ಹೀಗೆ ತರಹೇವಾರಿಯಾಗಿ ತುಂಬಿ ಕಡುಬು ತಯಾರಿಸಬಹುದು. ಒಂದೊಂದು ಮಿಶ್ರಣವೂ ಒಂದೊಂದು ಸ್ವಾದ ನೀಡುತ್ತವೆ. ಇದನ್ನು ಮಕ್ಕಳೂ ಹೆಚ್ಚು ಇಷ್ಟಪಟ್ಟು ಸವಿಯುವರು. ಇನ್ನು ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನೇ ಕೊಡಬೇಕು ಎಂದು ಜಪ ಮಾಡುವ ಆಧುನಿಕ ಅಮ್ಮಂದಿರು ಸಕ್ಕರೆ, ಖೋವಾ ಜತೆಗೆ ಡ್ರೈಫ್ರೂಟ್ಸ್‌ ಹುಡಿಯನ್ನು ಬೆರೆಸಿ ಕಡುಬು ತಯಾರಿಸುವುದುಂಟು.

ಚಿಕ್ಕ ಮಕ್ಕಳಿಗೆ ಕಡುಬು ಒಂದು ರೀತಿ ಕುತೂಹಲದ ಮೂಟೆಯಾಗಿಯೂ ಕಾಣುತ್ತದೆ. ಒಳಭಾಗದಲ್ಲಿ ರುಚಿಯಾ ದುದನ್ನು ಅಡಗಿಸಿಟ್ಟು ಮೇಲ್ಭಾಗ ಮುಚ್ಚುವ ಈ ಖಾದ್ಯ ಮಕ್ಕಳಿಗೆ ಅಚ್ಚುಮೆಚ್ಚು. ಇನ್ನೂ ಹಲ್ಲು ಮೂಡಿರದ, ಹಾಲುಗಲ್ಲದ ಕಂದಮ್ಮಗಳ ಕೈಯಲ್ಲಿ ಕಡುಬು ಕೊಟ್ಟು ನೋಡಿ. ಸುಮಾರು ಒಂದು ತಾಸು ಒಂದು ಕಡುಬಿ ನಲ್ಲೇ ಕಾಲ ಕಳೆಯುತ್ತವೆ. ಬಾಯಿಯ ಜೊಲ್ಲಿನಿಂದ ಕಡುಬನ್ನು ಮೆತ್ತಗೆ ಮಾಡಿಕೊಳ್ಳುತ್ತಾ ಚೂರು ಚೂರೇ ಅದರ ಸ್ವಾದವನ್ನು ಸವಿಯುತ್ತಾ ಹೋಗುತ್ತದೆ. ಹೀಗಾಗಿ ಕಡುಬು ಮಕ್ಕಳ ಪಾಲಿಗೆ ಟೈಮ್‌ಪಾಸ್‌ ರೀತಿಯೂ ಒದಗಿಬರುತ್ತದೆ.

ಈ ಕರಿಗಡುಬು ಬಿಸಿ ಬಿಸಿಯಾಗಿ ಇದ್ದಾಗಲೂ ಚೆನ್ನ, ಆರಿದರೂ ಬಲು ರುಚಿ. ಬೆಲ್ಲ ಮಿಶ್ರಿತ ಬೇಳೆ ಹೂರಣ ವನ್ನು ಎಣ್ಣೆಯಲ್ಲಿ ಕರಿಯುವುದರಿಂದ ಮತ್ತೆ ಹೂರಣ ಬೇಯಿಸಿದ ಹಾಗಾಗುತ್ತದೆ. ಹಾಗಾಗಿ ಇದನ್ನು ಎರಡ ರಿಂದ ಮೂರು ದಿನ ಇಟ್ಟೂ ಸವಿಯಬಹುದು. ಆದರೆ, ಈ ಕಡುಬು ತಯಾರಿಸಲು ಹೆಚ್ಚು ಕೈಗಳು ಬೇಕು. ಎಲೆ(ಹಾಳೆ ಒತ್ತುವುದು)ಉದ್ದಲು, ಹೂರಣ ತುಂಬಲು, ಬಳಿಕ ಕರಿಯಲು ಇಬ್ಬರಿಂದ ಮೂವರು ಸೇರಿದರೆ ಬಹುಬೇಗ ತಯಾರಾಗುತ್ತವೆ. ಈಗೆಲ್ಲ ವಿಭಕ್ತ ಕುಟುಂಬಗಳೇ ಹೆಚ್ಚು. ಮೇಲಾಗಿ ಇವನ್ನೆಲ್ಲ ಮಾಡುತ್ತ ಕೂರಲು ಬಹುತೇಕರಿಗೆ ಸಮಯವೂ ಇರುವುದಿಲ್ಲ. ಹಾಗಾಗಿ ಈ ಕುಡುಬುಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಬ್ಬದ ಸಮಯದಲ್ಲಿ ಕೆಲ ಸ್ವೀಟ್‌ ಅಂಗಡಿಗಳಲ್ಲಿ ಕಡುಬು ಸಿಗುತ್ತದೆ.

ಇನ್ನು ಹಬೆ ಕಡುಬಿಗೆ ಬರೋಣ. ಹಬೆಯಲ್ಲಿ ಸಿಹಿ ಕಡುಬು, ಖಾರದ ಕಡುಬು ಎರಡನ್ನೂ ತಯಾರಿಸಬಹುದು. ಅಕ್ಕಿ ಹಿಟ್ಟಿನ ಪೇಸ್ಟ್‌ ತಯಾರಿಸಿಕೊಂಡು ಬೇಳೆ, ಕಾಯಿ ಮಿಶ್ರಿತ ಹೂರಣ ತುಂಬಿ ಹಬೆಯಲ್ಲಿ ಬೇಯಿಸಿದರೆ ಸಿಹಿ ಕಡುಬು ಸವಿಯಲು ಸಿದ್ಧವಾಗುತ್ತದೆ.

ಇನ್ನು ಫಿಟ್‌ನೆಸ್‌ ಪ್ರಿಯರಿಗೆ ಕಡಿಮೆ ಕ್ಯಾಲೊರಿಯ, ಕೊಬ್ಬು, ಕೊಲೆಸ್ಟ್ರಾಲ್‌ ಇಲ್ಲದ ಹಬೆ ಕಡುಬು ಆಪ್ತಮಿತ್ರನಂತೆ ಒದಗಿಬರುತ್ತದೆ. ಮಧುಮೇಹಿಗಳು ಸಿಹಿ ಕಡುಬಿನ ಬದಲು ಖಾರದ ಕಡುಬು ಸವಿದು ತೃಪ್ತಿ ಗೊಳ್ಳಬಹುದು. ಎಣ್ಣೆಯ ಪಸೆ ಇಲ್ಲದ, ತಯಾರಿಕೆಗೆ ಹೆಚ್ಚು ಸಾಮಗ್ರಿ ಬೇಡದ, ಆರೋಗ್ಯಪೂರ್ಣ ಕಡುಬು ಬಹುತೇಕರಿಗೆ ಇಷ್ಟದ ಬ್ರೇಕ್‌ಫಾಸ್ಟ್‌. ಅಕ್ಕಿ ರವೆ ಅಥವಾ ಅಕ್ಕಿ ಹಿಟ್ಟು ಮನೆಯಲ್ಲಿದ್ದರೆ ಧಾರಾಳವಾಗಿ ಹಬೆ ಕಡುಬನ್ನು ತಯಾರಿಸಬಹುದು. ಮಲೆನಾಡಿನ ಭಾಗದ ಮನೆಗಳಲ್ಲಿ ಹಸು ಕರು ಹಾಕಿತೆಂದರೆ ಮರುದಿನ ಗಿಣ್ಣದ ಜತೆ ಅಕ್ಕಿ ಕಡುಬು ಜತೆಯಾಗುತ್ತದೆ. ಅಲ್ಲದೆ ಹಲವರು ಮಕ್ಕಳನ್ನು ಆಕರ್ಷಿಸಲು ವಿವಿಧ ಆಕಾರಗಳಲ್ಲಿ ಕಡುಬು ತಯಾರಿಸುತ್ತಾರೆ.

ಮೋಡ ಕವಿದ ವಾತಾವರಣ, ಧಾರಾಕಾರ ಸುರಿಯುವ ಮಳೆ ಜತೆ ಹಬೆಯಲ್ಲಿ ಬೆಂದ ಬಿಸಿ ಬಿಸಿ ಕಡುಬನ್ನು ಕಾಯಿ ಚಟ್ನಿ, ಜೋನಿ ಬೆಲ್ಲದೊಂದಿಗೆ ಸವಿಯುತ್ತಿದ್ದರೆ ಉದರ ಇನ್ನಷ್ಟು ಹಿಗ್ಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು