ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಾದಶಿ ದ್ವಾಸಿ.. ನೂರಾಎಂಟು ಆಸಿ

Published 4 ಮೇ 2024, 0:19 IST
Last Updated 4 ಮೇ 2024, 0:19 IST
ಅಕ್ಷರ ಗಾತ್ರ

ದ್ವಾದಶಿ ದಾಸಿ ಎದ್ದೂಏನು? ದ್ವಾದಶಿ ದ್ವಾಸಿ ತಿನ್ನಬಾರಲೆ ಹೇಸಿ, ದ್ವಾದಶಿ ದ್ವಾಸಿ ಪಾಕದ ಗತೆ ಜಿಡ್ಡದ. ಹಿಂಗ ದ್ವಾದಶಿ ದ್ವಾಸಿ ನಮ್ಕಡೆ ಮಾತುಮಾತಿನಾಗ ಹತ್ತು ಹನ್ನೆರಡು ಸಲೆ ಬರ್ತದ.

ಅಡಗಿ ಮಾಡಾಕ ಬರ್ತದೇನಬೆ ಅಂತ ಕನ್ಯಾನೋಡಾಕ ಬಂದೋರೆನರೆ ಕೇಳಿದ್ರ, ಅಗ್ದಿ ದ್ವಾದಶಿ ದ್ವಾಸಿ ಹೂ ಎತ್ತಿದ್ಹಂಗ ಮಾಡ್ತಾಳ್ರಿ ಅಂತ ಅದನ್ನ ಒಂದು ಹೆಗ್ಗಳಕಿ ಮಾಡಿ ಹೇಳ್ತಾರ. ದ್ವಾದಶಿ ದ್ವಾಸಿ, ನೂರಾಎಂಟು ಆಸಿ ಅಂತೆಲ್ಲ ಆಡ್ಕೊಂತಾರ. ಅಂದ್ರ ದ್ವಾಸಿ ತಿನ್ನಾಕಂತ ದ್ವಾದಶಿತನಾ ಕಾಯ್ತಿದ್ರಂತ. ಏಕಾದಶಿ ಉಪವಾಸ ಮಾಡ್ತಿದ್ರಂತ. ಹಸಿವಾದಾಗ ದ್ವಾಸಿ ಜೊತಿಗೆ ಏನೆಲ್ಲ ತಿನ್ನಬೇಕು ಅಂತ ಮನಸಿನಾಗೆ ಲೆಕ್ಕಾ ಹಾಕೋರಿಗೆ ನೋಡಿನೆ ಈ ಮಾತು ಆಡ್ತಿದ್ರು.

ದ್ವಾದಶಿಗೆ ಮಾಡೂದ್ರಿಂದನೆ ಹಿಂಗ ಹನ್ನೆರಡು ನಮೂನಿ ಹಂಗಸಾಕ ಬರ್ತದ ಅಂತ ನನ್ನ ನಂಬಿಕಿ. ಇಷ್ಟಕ್ಕೂ ಭಾಳ ಮಂದಿಗೆ ಈ ದ್ವಾದಶಿ ದ್ವಾಸಿ ಕತಿ ಗೊತ್ತಿರಲಿಕ್ಕಿಲ್ಲ. ಏಕಾದಶಿ ಉಪವಾಸ ಮಾಡಿದ ಮ್ಯಾಲೆ ದ್ವಾದಶಿಗೆ ವಿಶೇಷವಾಗಿ ಈ ದೀಪಾವಳಿ ದ್ವಾದಶಿಗೆ, ಯುಗಾದಿ ಮುಂದಿನ ದ್ವಾದಶಿಗೆ ಈ ದ್ವಾಸಿ ಮಾಡ್ತಾರ. ಅದೇ ಅಕ್ಕಿ ದೋಸೆ ಇದ್ದಂಗ ನಮ್ದು ಗೋದಿ ದ್ವಾಸಿ.

ಗೋದಿಹಿಟ್ಟನ್ನ ಗಂಟಿಲ್ಲದೆ, ಕಲಿಸಿಕೊಂಡು ದೋಸೆ ಹಿಟ್ಟಿನ ಹದಕ್ಕ ತರಬೇಕು. ಹುದುಗು ಬರಲಿ ಅಂತ ಒಲಿ ಹಿಂದ ಇಡ್ತಿದ್ರು. ಎದ್ಕೂಡಲೆ ದೋಸೆ ಹಿಟ್ಟು ಕಲಿಸಿ, ಒಲಿ ಹಿಂದ ಇಟ್ರ, ಉಳ್ಳಾಗಡ್ಡಿ ಪಲ್ಯೆ, ಸಕ್ಕರಿ ಪಾಕ ಆಗೂತನಾನೂ ಒಲಿ ಕಾವು ಹೀರಕೊಂತಿತ್ತು. ಹಿಟ್ಟು ನೆನಿಯೂದ್ರೊಳಗ ಒಂಚೂರು ನೀರು ಹೀರಕೊಂಡ್ರ ಹುಳಿ ಮಜ್ಜಿಗಿ ಇಲ್ಲಾಂದ್ರ ಮೊಸರು ಕಲಿಸಿ, ಅದಕ್ಕ ಜೀರಗಿ ಅಂಗೈಯ್ಯಾಗ ಹೊಸದು ಹಾಕ್ತಿದ್ರು. ಈ ಹಿಟ್ಟು ಸೌಟಿನಿಂದ ಹಾಕಿದ ಕೂಡಲೆ ಸವರಬೇಕು. ಇಲ್ಲಾಂದ್ರ ಸೌಟಿನ ಕೂಡ ಎದ್ದು ಬರ್ತದ. ಕೈ ಬಿಡಲಾರದ ಕೂಸಿನ್ಹಂಗ. ಅದಕ್ಕ ದುಂಡಕ್ಕ ಹಿಟ್ಟು ಹುಯ್ಕೊಂತ, ಸವರಕೊಂತ ಬರಬೇಕು. ಆಮೇಲೆ ಜರಡಿಪಾತ್ರಿ ಮುಚ್ಚಿಡಬೇಕು. ಹಬಿಯೊಳಗ ಬೇಯಲಿ ಅಂತ. ಆದ್ರ ಗಾಳಿನೂ ಆಡಬೇಕು. ಇಲ್ಲಾಂದ್ರ ನಮ್ಮ ಗೋದಿ ದ್ವಾಸಿ, ಹಂಚಿಗಂಟಿ ಕುಂದರ್ತಾವ. ಏಳಾಕ ಒಲ್ಲೆ ಅಂತಾವ. ಅದಕ್ಕೇ ದಂಡಿಗುಂಟ ಎಣ್ಣಿಬಿಡ್ತಾರ. ಆ ಎಣ್ಣಿ ಕಮರು ಮನೀತುಂಬಾ ದ್ವಾಸಿ ಆಯ್ತು ಬರ್‍ರಿ ಅಂತ ಕರೀತದ.

ಈ ದ್ವಾದಶಿ ದ್ವಾಸಿ ತಿನ್ನಾಕ ಸಕ್ಕರಿ ಪಾಕ ಒಂದು ಮಾಡಿರ್ತಾರ. ಸಕ್ಕರಿ ತೊಯ್ಯುವಷ್ಟೇ ನೀರು ಹಾಕಿ, ಒಂದೆರಡು ಏಲಕ್ಕಿ ಫಳಕು ಹಾಕಿ, ಆ ಪಾಕ ಸಿದ್ಧ ಆಗಿರ್ತದ. ಅದರ ಕೂಡ ಮಂದಮಂದ ರುಚಿ ಇರುವ ಗೋದಿ ದ್ವಾಸಿ ತಿನ್ನಬೇಕಂತ. ಮೊದಲ ದ್ವಾಸಿ ಮಾತ್ರ ಸಕ್ಕರಿ ಪಾಕದ ಕೂಡೆ ತಿನ್ನಬೇಕು. ಯುಗಾದಿಯೊಳಗ ಇದು ಸ್ವಲ್ಪ ಸರಳ ಇರ್ತದ. ಶೀಕರಣಿ ಕೂಡ ತಿನ್ನಬೇಕು. ಎರಡನೆದ್ದು ಮೂರನೆದ್ದು ಮಾತ್ರ ನಿಮ್ಮ ಫರ್ಮಾಯಿಷಿ ಮ್ಯಾಗ ತಿನ್ನ ಬಹುದು. ಬೆಣ್ಣಿ ಗುರೆಳ್ಳು ಹಿಂಡಿ, ಬೆಣ್ಣಿ, ಕೊಬ್ಬರಿ ಹಿಂಡಿ, ತುಪ್ಪ, ಸೇಂಗಾದ ಹಿಂಡಿ, ಹಿಂಗ ಒಟ್ಟ ಖಾರಖಾರ ಬಯಸೋರಿಗೆ ಈ ಹಿಂಡಿನ್ನ ಹಂಚಿನ ಮ್ಯಾಲೆ ದ್ವಾಸಿ ಇದ್ದಾಗಲೇ ಹಾಕಿ ಸವರಿ ಕೊಡ್ತಾರ. ಕರಿಚಟ್ನಿ ಅಥವಾ ಕಲ್ಲನ್‌ಚಟ್ನಿನೂ ಮಾಡ್ತಾರ. ಅದರ ಸುದ್ದಿನೇ ಬ್ಯಾರೆ ಬಿಡ್ರಿ.

ಚಪಾತಿಗಿಂತಲೂ ಮೆತ್ಗ ಇರುವ ಈ ದ್ವಾಸಿನ್ನ ನನ್ನ ಮಗಳು ಅರ್ನಿ ಚದ್ವಾಸಿ ಅಂತ ಕರೀತಾಳ. ಗೋದಿ ಜೀರ್ಣ ಆಗೂದಿಲ್ಲ ಅನ್ನುವ ಹಿರೀಕರು, ಹಲ್ಲಿರಲಾರದೆ ವಸಡೀಲೆ ತಿನ್ನುವ ಅಜ್ಜ ಅಜ್ಜಿಗೂ ಈ ಗೋದಿ ದ್ವಾಸಿ ಅಂದ್ರ ಭಾರಿ ಪಸಂದ್‌ ಮತ್ತ.

ಉಳದ ದಿನದಾಗ ಭಾಳ ಮಂದಿ ಇದ್ರಂದ್ರ, ಮಧ್ಯಾಹ್ನದ ತನ ಅಡಗಿ ಮನಿ ಕಡೆ ಯಾರೂ ಸುಳೀಬಾರದು ಅಂದ್ರ, ಸಂಜೀ ಅಡಗಿಗೆ ಪಲ್ಯೆ ಮಾಡಾಕ ಬ್ಯಾಸರಾಗಿದ್ರ ಈ ಗೋದಿ ದ್ವಾಸಿ ಅಂತಿಮ ಆಯ್ಕೆ ಆಗಿರ್ತದ. ಅವಾಗ ಇದ್ದಕ್ಕೇ ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ, ಜೀರಗಿ, ಉಪ್ಪು ಕೊತ್ತಂಬರಿ ಸೊಪ್ಪು ಎಲ್ಲಾ ಸಣ್ಣಗೆ ಹೆಚ್ಚಿ, ಕೊಚ್ಚಿ ಹಾಕಿ ಮಾಡ್ತಾರ. ಜೊತಿಗೆ ಬೆಣ್ಣಿ ಅಥವಾ ತುಪ್ಪ ಇದ್ರ ಮುಗೀತು.

ಈ ದ್ವಾಸಿನೂ ಪಾಪ.. ಅಗ್ದಿ ನಮ್ಮ ಜೀವನ ಇದ್ದಂಗ. ಮೊದಲು ಹಿಟ್ಟಿನ ಕೂಡ ಬೆರೀತದ. ಯಾವುದೇ ತಕರಾರು ಇಲ್ದೆ, ತಕರಾರಿದ್ರ, ನಾವು ಹಣಿಗೆ ಗಂಟು ಹಾಕಿದ್ಹಂಗ ತಾನೂ ಗಂಟುಗಂಟಾಗ್ತದ. ಅದಕ್ಕೇ ಹಿಟ್ಟನ್ನ ನದಿನೀರಿನ ಸುಳಿವು ತಿರುವಿದ್ಹಂಗ ಸೌಟಿಲೆ ತಿರಗಸಬೇಕು. ಹಂಚಿಗೆ ಹಾಕಿದಾಗ ಅಗ್ದಿ ಕಾಳಜಿ ಇರುವ ಪ್ರೀತಿ ಕೊಡಬೇಕು. ಚೂರು ಹೆಚ್ಚಾದ್ರ ಹೊತ್ತತದ. ಹಂಚಿಗೆ ಹತ್ತತದ. ಚೂರು ಕಡಿಮಿ ಆದ್ರ ಮ್ಯಾಲೇಳೂದೆ ಇಲ್ಲ ಅಂತದ. ಆದ್ರ ಫಾಲ್‌ ಇನ್‌ ಲವ್‌ ಅಂತ ಗೊತ್ತಿರಬೇಕು ಇದಕ್ಕ.. ಪ್ರೀತಿಲೆ ಎಣ್ಣಿ ಸವರಿ, ಬೆಣ್ಣಿ ಸವರಿ, ತುಸುತುಸು ಕಾವು ಕೊಟ್ಗೊಂತ ಇದ್ರ ಹರೀಲಾರದೆ ಹಂಚಿನಿಂದ ಏಳ್ತದ.

ಅಗ್ದಿ ನಮ್ಮ ಹೆಣ್ಮಕ್ಕಳ ಅಭಿಮಾನ ಇದ್ದಂಗ. ನೀನೆ ತಾಯಿ ಎಲ್ಲಾ ಅಂದ್ರ ಸಾಕು, ಸಕಲ ತಪ್ಪುಗಳನ್ನೂ ಹೊಟ್ಯಾಗ ಹಾಕ್ಕೊತ್ತಾರಲ್ಲ ಹಂಗ. ಬೆರೆಸಿದ್ದೆಲ್ಲ ತನ್ನೊಳಗ ಇಟ್ಕೊಂಡು, ಬದುಕು ರುಚಿಕಟ್ಟಾಗಿಸುವಂಥ ಗುಣ ನಮ್ಮ ದ್ವಾದಶಿ ದ್ವಾಸಿಯೊಳಗದ. ದ್ವಾದಶ ಗುಣ ಅಂತಾರಲ್ಲ ಹಂಗ ದ್ವಾದಶ ರುಚಿಗೆಲ್ಲ ಸೈ ಅಂತದ ಈ ಸಿಹಿಸವಿ ದ್ವಾಸಿ.

ಬಾಯಿ ಸಿಹಿಯಾಗಿಸುವ ಸಕ್ಕರೆ ಪಾಕ
ಬಾಯಿ ಸಿಹಿಯಾಗಿಸುವ ಸಕ್ಕರೆ ಪಾಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT