ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಮಸಾಲೆ ಒಂದು, ರೆಸಿಪಿ ಹಲವು

Last Updated 18 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಸುಲಭವಾಗಿ, ಸರಳವಾಗಿ, ವೇಗವಾಗಿ, ರುಚಿಕರವಾಗಿ ರೂಂನಲ್ಲಿ ಮಾಡಿಕೊಳ್ಳಬಹುದಾದ ಬ್ಯಾಚುಲರ್ಸ್‌ ಫ್ರೆಂಡ್ಲಿ, ಎಣ್ಣೆ ರಹಿತ ಖಾದ್ಯಗಳು ಇಲ್ಲಿವೆ.

ಕೆಲವೊಮ್ಮೆ ಅಡುಗೆ ಮಾಡುವುದು ಬಹಳ ಬೇಸರ ಎನ್ನಿಸುತ್ತದೆ. ಅದರಲ್ಲೂ ಬಗೆ ಬಗೆ ಅಡುಗೆ ಮಾಡುವ ಹಂಬಲವಿದ್ದರೂ ಸಮಯ ಸಾಲದೇ ಗೊಣಗುತ್ತೇವೆ. ಅಂತಹ ಸಂದರ್ಭದಲ್ಲಿ ಒಂದೇ ಮಸಾಲೆ ತಯಾರಿಸಿಕೊಂಡು ಬಗೆ ಬಗೆಯ ಸಾರುಗಳನ್ನು ತಯಾರಿಸಿಕೊಳ್ಳಬಹುದು. ತಯಾರಿಸಿದ ಮಸಾಲೆಯನ್ನು ಒಂದೆರಡು ದಿನ ಫ್ರಿಜ್ಜ್‌ನಲ್ಲಿ ಇರಿಸಿದರೆ ಅದರಿಂದಲೇ ಮೊಟ್ಟೆ, ತರಕಾರಿ ಎಲ್ಲಾ ಬಗೆಯ ಸಾರು, ಸಾಂಬಾರ್ ಮಾಡಿಕೊಳ್ಳಬಹುದು.

ಮೊಟ್ಟೆ ಸಾಂಬಾರು:

ಬೇಕಾಗುವ ಸಾಮಗ್ರಿಗಳು: ಈರುಳ್ಳಿ – 1 ದೊಡ್ಡದು, ಬೆಳ್ಳುಳ್ಳಿ– 6-7ಎಸಳು, ಶುಂಠಿ– ಸ್ವಲ್ಪ, ಹಸಿಮೆಣಸು– 4-6, ಟೊಮೆಟೊ –1 (ದೊಡ್ಡದು), ಕರಿಬೇವಿನ ಸೊಪ್ಪು– ಸ್ವಲ್ಪ, ಅರಿಸಿನ – 1/2 ಟೀ ಚಮಚ, ಸಾಸಿವೆ– 1/2 ಟೀ ಚಮಚ, ಜೀರಿಗೆ – 1/2 ಟೀ ಚಮಚ, ಕೊತ್ತಂಬರಿ – 1/2 ಟೀ ಚಮಚ, 1 ತೆಂಗಿನಕಾಯಿ (ಸಾಂಬಾರಿಗೆ ತಕ್ಕಷ್ಟು ತುರಿದ ತೆಂಗಿನಕಾಯಿ), ಹುಣಸೆಹಣ್ಣು – ಸ್ವಲ್ಪ (ಬೇಕಿದ್ದರೆ ಸೇರಿಸಬಹುದು).

ತಯಾರಿಸುವ ವಿಧಾನ: ಮೇಲೆ ತಿಳಿಸಿರುವ ಎಲ್ಲವನ್ನು ಹೆಚ್ಚಿಕೊಂಡು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

ಮೊಟ್ಟೆ ಮಸಾಲ ತಯಾರಿಸುವುದು: ಪಾತ್ರೆಯಲ್ಲಿ ಮೊಟ್ಟೆಯನ್ನು ಬೇಯಿಸಿಕೊಳ್ಳಬೇಕು. ಮಿಕ್ಸಿಯಲ್ಲಿ ರುಬ್ಬಿ ಸಿದ್ಧಪಡಿಸಿಕೊಂಡ ಮಸಾಲೆಯನ್ನು ಪಾತ್ರೆಯಲ್ಲಿ ಕುದಿಯಲು ಇಡಬೇಕು. ಸ್ವಲ್ಪ ನೀರನ್ನು ಸೇರಿಸಿಕೊಳ್ಳಬೇಕು. ಬೇಯಿಸಿದ ಇಡೀ ಮೊಟ್ಟೆಯಾದರೆ ಅದರ ಮೇಲೆ ತೆಳುವಾಗಿ ಒಂದೆರಡು ಗೆರೆಯನ್ನು ಮೂಡಿಸಿ ಕುದಿಯಲು ಇಟ್ಟ ಪದಾರ್ಥಕ್ಕೆ ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಚೆನ್ನಾಗಿ ಕುದಿ ಬಂದ ಬಳಿಕ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ತೆಳುವಾಗಿ ಹರಡಬೇಕು. ಮೊಟ್ಟೆಯನ್ನು ಎರಡು ಹೋಳಾಗಿಯೂ ಹಾಕಬಹುದು. ಈಗ ಮೊಟ್ಟೆ ಮಸಾಲ ರೆಡಿ.

ಮೊಟ್ಟೆ ಸಾರು:

ಮಿಕ್ಸಿಯಲ್ಲಿ ರುಬ್ಬಿ ಸಿದ್ಧಪಡಿಸಿಟ್ಟುಕೊಂಡ ಮಸಾಲೆಯನ್ನು ಸಣ್ಣ ಫ್ಲೇಮ್‌ನಲ್ಲಿ ಇರಿಸಿಕೊಂಡು ಬೇಯಲು ಇಡಬೇಕು. ಸ್ವಲ್ಪ ನೀರನ್ನು ಸೇರಿಸಬಹುದು. ಮೂರ್ನಾಲ್ಕು ನಿಮಿಷದ ಬಳಿಕ ಮೊಟ್ಟೆಯನ್ನು ಒಡೆದು ಅದಕ್ಕೆ ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಚೆನ್ನಾಗಿ ಕುದಿಸಬೇಕು. ತಳ ಹಿಡಿಯದಂತೆ ಆಗಾಗ ಚಮಚ/ಸೌಟಿನಲ್ಲಿ ತಿರುವುತ್ತಿರಬೇಕು. ಬಳಿಕ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ತೆಳುವಾಗಿ ಉದುರಿಸಬೇಕು. ಇಷ್ಟಾದರೆ ಮೊಟ್ಟೆ ಸಾರು ಸವಿಯಲು ಸಿದ್ಧ.

ತರಕಾರಿ ಖಾದ್ಯ: ಬೀನ್ಸ್‌, ಹಲಸಂಡೆ, ತೊಂಡೆಕಾಯಿ, ಬೀಟ್ರೂಟ್‌ ಹೀಗೆ ನಿಮಗಿಷ್ಟವಾದ ತರಕಾರಿಯನ್ನು ಸಣ್ಣಗೆ ಹೆಚ್ಚಿಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಬೇಯಿಸಬೇಕು. ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಮಿಶ್ರಮಾಡಿ, ಕುದಿಸಬೇಕು. ಬಳಿಕ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿಯನ್ನು ಉದುರಿಸಬೇಕು.

ಮನೆಗೆ ದಿಢೀರ್‌ನೆ ಅತಿಥಿಗಳು ಬಂದಾಗ ಮತ್ತು ಕಡಿಮೆ ಸಮಯದಲ್ಲಿ, ಎಣ್ಣೆ ಬಳಸದೆ ಸುಲಭದಲ್ಲಿ ತಯಾರಿಸಬಹುದಾದ ವಿವಿಧ ಬಗೆಯ ಖಾದ್ಯಗಳಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT