ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆಯ ತಿನಿಸಿಗೆ ಚಿಕನ್‌ ಬರ್ಗರ್‌, ಚೀಸ್‌ ಬಾಲ್‌

Last Updated 16 ಮೇ 2020, 1:18 IST
ಅಕ್ಷರ ಗಾತ್ರ

ಸಸ್ಯಾಹಾರಿಗಳು ಮಾತ್ರವಲ್ಲ, ಮಾಂಸಾಹಾರಿಗಳು ಕೂಡ ವೈವಿಧ್ಯಮಯ ತಿಂಡಿಯನ್ನು ತಯಾರಿಸಿ ಸಂಜೆಯ ಕಾಫಿಯ ಜೊತೆ ಸವಿಯಬಹುದು. ಕೋಳಿಯ ಮಾಂಸದಿಂದ ಕೂಡ ಬಗೆಬಗೆಯ ತಿನಿಸುಗಳನ್ನು ತಯಾರಿಸುವುದು ಸುಲಭ. ಉಪಾಹಾರಗೃಹಗಳಿಗೆ ಭೇಟಿ ನೀಡಿದಾಗ ಬಾಯಲ್ಲಿ ನೀರೂರಿಸಿಕೊಂಡು ತಿನ್ನುತ್ತಿದ್ದ ಬರ್ಗರ್, ರೋಲ್‌ಗಳನ್ನು ಮನೆಯಲ್ಲಿಯೇ ತಯಾರಿಸಿ ತಿಂದು ನಾಲಿಗೆಯ ಚಪಲ ತಣಿಸಿಕೊಳ್ಳಬಹುದು.

ಚಿಕನ್ ಮಿನಿ ಬರ್ಗರ್‌

ಬೇಕಾಗುವ ಸಾಮಗ್ರಿಗಳು: ಮೂಳೆ ಹಾಗೂ ಚರ್ಮ ರಹಿತ ಚಿಕನ್ ತುಂಡುಗಳು – 2 (ದೊಡ್ಡದು), ಈರುಳ್ಳಿ – 1 ಮಧ್ಯಮ ಗಾತ್ರದ್ದು (ಸಣ್ಣದಾಗಿ ಹೆಚ್ಚಿಕೊಂಡಿದ್ದು), ಟೊಮೆಟೊ ಕೆಚಪ್‌ – 2 ಟೇಬಲ್‌ ಚಮಚ, ಬ್ರೆಡ್ ಪುಡಿ – 1/4 ಕಪ್‌, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ರುಚಿಗೆ, ಎಣ್ಣೆ – ಕರಿಯಲು, ಚಿಕ್ಕ ಬರ್ಗರ್‌ ಬನ್ – 4 ರಿಂದ 6 (ನಿಮ್ಮ ಆಯ್ಕೆ)

ತಯಾರಿಸುವ ವಿಧಾನ: ಚಿಕನ್ ತುಂಡುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಗೂ ಚಿಕನ್‌ ತುಂಡುಗಳನ್ನು ಹಾಕಿ. ಅದಕ್ಕೆ ಕೆಚಪ್‌, ಉಪ್ಪು, ಕಾಳುಮೆಣಸಿನ ಪುಡಿ ಹಾಗೂ 1 ಟೇಬಲ್ ಚಮಚ ಬ್ರೆಡ್‌ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣದಿಂದ 10 ರಿಂದ 12 ಬರ್ಗರ್‌ ಮಾಡಿಕೊಳ್ಳಿ. ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ. ಉಳಿದ ಬ್ರೆಡ್‌ ಪುಡಿಯಲ್ಲಿ ಬರ್ಗರ್‌ ಅನ್ನು ಅದ್ದಿಕೊಳ್ಳಿ. ಎಣ್ಣೆ ಕಾದ ಮೇಲೆ ಬರ್ಗರ್‌ ಅನ್ನು ಎರಡೂ ಕಡೆ 3 ರಿಂದ 4 ನಿಮಿಷ ಕರಿಯಿರಿ. ಬರ್ಗರ್ ಬನ್ ಅನ್ನು ಎರಡು ತುಂಡುಗಳನ್ನಾಗಿ ಮಾಡಿಕೊಳ್ಳಿ. ಒಂದು ಭಾಗದ ಬನ್ ಮೇಲೆ ಕರಿದುಕೊಂಡ ಬರ್ಗರ್ ಅನ್ನು ಇರಿಸಿ, ಇನ್ನೊಂದಕ್ಕೆ ನಿಮಗೆ ಬೇಕಾದ ಹಾಗೆ ಅಲಂಕರಿಸಿಕೊಂಡು ಬರ್ಗರ್‌ ಅನ್ನು ಅದರಿಂದ ಮುಚ್ಚಿ. ಬರ್ಗರ್ ಬಿಸಿ ಇದ್ದಾಗಲೇ ತಿನ್ನಲು ಕೊಡಿ.

ಚಿಕನ್ ಚೀಸ್ ಬಾಲ್

ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಕತ್ತರಿಸಿಕೊಂಡ ಚಿಕನ್‌ – 250 ಗ್ರಾಂ (ಮೂಳೆ ಹಾಗೂ ಚರ್ಮ ರಹಿತವಾದದ್ದು), ಚೀಸ್‌ – 1/4 ಕಪ್ (ಚೆನ್ನಾಗಿ ತುರಿದುಕೊಂಡಿದ್ದು), ಮೊಟ್ಟೆ – 1, ಈರುಳ್ಳಿ – 1 ಮಧ್ಯಮ ಗಾತ್ರದ್ದು (ಸಣ್ಣದಾಗಿ ಹೆಚ್ಚಿಕೊಂಡಿದ್ದು), ಬೆಳ್ಳುಳ್ಳಿ – 1 ಎಸಳು (ಜಜ್ಜಿಕೊಂಡಿದ್ದು), ‍ಪುದಿನಾ – 1/2 ಟೀ ಚಮಚ, ಕೊತ್ತಂಬರಿ ಸೊಪ್ಪು – 1/2 ಟೀ ಚಮಚ (ಹೆಚ್ಚಿಕೊಂಡಿದ್ದು), ಬ್ರೆಡ್‌ ಪುಡಿ – 1ಕಪ್‌, ಮೈದಾಹಿಟ್ಟು – 4 ಟೇಬಲ್ ಚಮಚ, ಉಪ್ಪು – ರುಚಿಗೆ, ಕಾಳುಮೆಣಸಿನಪುಡಿ – ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಮೈದಾಹಿಟ್ಟು, ಬ್ರೆಡ್‌ಪುಡಿ, ಚೀಸ್ ಹಾಗೂ ಎಣ್ಣೆ ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಪಾತ್ರೆಯೊಂದರಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಅದನ್ನು ಕೈಯಲ್ಲೇ ತಟ್ಟಿಕೊಳ್ಳಿ. ಅದರ ಮೇಲೆ ಹೆಚ್ಚಿಕೊಂಡ ಚೀಸ್ ಇಟ್ಟು ಮತ್ತೆ ಉಂಡೆ ಮಾಡಿಕೊಳ್ಳಿ. ಮೈದಾಹಿಟ್ಟಿಗೆ ನೀರು ಸೇರಿಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಪಾತ್ರೆಯೊಂದರಲ್ಲಿ ಎಣ್ಣೆ ಕಾಯಲು ಇಡಿ. ಮೈದಾಹಿಟ್ಟಿನ ಪೇಸ್ಟ್‌ನಲ್ಲಿ ಉಂಡೆಗಳನ್ನು ಅದ್ದಿ, ನಂತರ ಬ್ರೆಡ್‌ ಪುಡಿಯಲ್ಲಿ ಉಂಡೆಗಳನ್ನು ಉರುಳಾಡಿಸಿ. ಆ ಉಂಡೆಯನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ. ಟಿಶ್ಯೂ ಪೇಪರ್‌ ಮೇಲೆ ಹರಡಿ. ಇದು ಎಣ್ಣೆಯನ್ನು ಹೀರಿಕೊಳ್ಳುತ್ತದೆ.

ಚಿಕನ್ ಮತ್ತು ಸಾಲ್ಸಾ ರೋಲ್‌

ಬೇಕಾಗುವ ಸಾಮಗ್ರಿಗಳು: ಚಿಕನ್ ತುಂಡು – 2ಕಪ್‌ (ಮೂಳೆ ಹಾಗೂ ಚರ್ಮ ರಹಿತ ಚಿಕನ್ ತುಂಡುಗಳನ್ನು ಬೇಯಿಸಿ ಸಣ್ಣದಾಗಿ ಹೆಚ್ಚಿಕೊಂಡಿದ್ದು), ಸ್ವೀಟ್‌ ಕಾರ್ನ್‌ – 250 ಗ್ರಾಂ (ಬೇಯಿಸಿಕೊಂಡಿದ್ದು), ಕೆಂಪು ದೊಣ್ಣೆಮೆಣಸು – 1/2 ಕಪ್ (ಹೆಚ್ಚಿಕೊಂಡಿದ್ದು), ಚೀಸ್‌ – 1/2 ಕಪ್‌ (ತುರಿದುಕೊಂಡಿದ್ದು), ಟೊಮೆಟೊ ಸಾಲ್ಸಾ – 1/4 ಕಪ್‌ (ತಯಾರಿಸಿಟ್ಟುಕೊಂಡಿರಬೇಕು), ನಿಂಬೆರಸ – 2 ಟೇಬಲ್ ಚಮಚ
ಚಪಾತಿ ಅಥವಾ ಖಾಲಿ ರೊಟ್ಟಿ – 4ರಿಂದ 5, ಕೊತ್ತಂಬರಿ ಸೊಪ್ಪು – ಅಗತ್ಯಕ್ಕೆ ತಕ್ಕಂತೆ, ಬಟಾಣಿಕಾಳು – 1/2 ಕಪ್‌ (ಬೇಯಿಸಿದ್ದು), ಉಪ್ಪು – ರುಚಿಗೆ ತಕ್ಕಷ್ಟು, ಕಾಳುಮೆಣಸಿನಪುಡಿ – ಸ್ವಲ್ಪ

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಬಟಾಣಿಕಾಳು ಹಾಗೂ ನಿಂಬೆರಸ ಸೇರಿಸಿ. ಅದರ ಮೇಲೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಹರಡಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ದೊಣ್ಣೆಮೆಣಸಿನಕಾಯಿಯನ್ನು ಕಪ್ಪಾಗುವವರೆಗೂ ಗ್ಯಾಸ್‌ ಮೇಲೆ ಬಿಸಿಮಾಡಿ. ಚಪಾತಿ ಅಥವಾ ರೊಟ್ಟಿಯನ್ನು ಬಿಸಿ ಮಾಡಿಕೊಂಡು ಅಗಲವಾದ ಪಾತ್ರೆಯ ಮೇಲೆ ಇಡಿ. ಬಟಾಣಿಕಾಳಿನ ಮಿಶ್ರಣವನ್ನು ಅದರ ಮೇಲೆ ಹರಡಿ. ಅದರ ಮೇಲೆ ಕೊತ್ತಂಬರಿಸೊಪ್ಪು, ಚಿಕನ್‌, ದೊಣ್ಣೆಮೆಣಸು ಹಾಗೂ ಸ್ವೀಟ್‌ ಕಾರ್ನ್ ಹಾಕಿ, ನಂತರ ಚೀಸ್ ಹಾಗೂ ಟೊಮೆಟೊ ಸಾಲ್ಸಾವನ್ನು ಅದರ ಮೇಲೆ ಹರಡಿ. ನಂತರ ಅದನ್ನು ರೋಲ್‌ ಮಾಡಿ. ಒಂದು ಕಡೆ ಸಂಪೂರ್ಣವಾಗಿ ಮುಚ್ಚಿ. ರೋಲ್ ಪೇಪರ್ ಸುತ್ತಿ ತಿನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT