ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್ ಟಿಕ್ಕಾ ಮಸಾಲೆ, ಬಟರ್ ಚಿಕನ್

Last Updated 16 ಜುಲೈ 2021, 19:30 IST
ಅಕ್ಷರ ಗಾತ್ರ

ಚಿಕನ್ ಟಿಕ್ಕಾ ಮಸಾಲೆ

ಬೇಕಾಗುವ ಸಾಮಗ್ರಿಗಳು: ಟೊಮೆಟೊ – 3 (ರುಬ್ಬಿಕೊಂಡಿರುವುದು), ಹೆಚ್ಚಿದ ಈರುಳ್ಳಿ – 2, ಬೆಣ್ಣೆ – 2 ಟೇಬಲ್ ಚಮಚ, ಉಪ್ಪು (ರುಚಿಗೆ ತಕ್ಕಷ್ಟು), ಕಸೂರಿ ಮೇಥಿ – ಸ್ವಲ್ಪ, ಮೊಸರು– 2 ಟೇಬಲ್ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್– 1 ಟೇಬಲ್ ಚಮಚ, ಗರಂ ಮಸಾಲ – 1 ಚಮಚ, ಖಾರದ ಪುಡಿ – ಒಂದೂವರೆ ಚಮಚ, ಕೊತ್ತಂಬರಿ ಪುಡಿ – 1 ಚಮಚ, ಚಿಕನ್ – 1/2 ಕೆ.ಜಿ, ಕ್ರೀಮ್ – 1 ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ಚಿಕನ್‌ಗೆ ಮೊಸರು, ಉಪ್ಪು, ಖಾರದ ಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ, ಅರಿಸಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ನಿಂಬೆರಸ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅದನ್ನು ಎರಡು ಗಂಟೆ ನೆನೆಯಲು ಬಿಡಿ. ಒಂದು ಪಾತ್ರೆಯಲ್ಲಿ 2 ಟೇಬಲ್ ಚಮಚದಷ್ಟು ಎಣ್ಣೆ ಹಾಕಿ, ಒಂದರ ನಂತರ ಒಂದು ಚಿಕನ್ ತುಂಡುಗಳನ್ನು ಹಾಕಿ ಹುರಿದುಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಬೆಣ್ಣೆ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಹುರಿದುಕೊಳ್ಳಿ. ನಂತರ ರುಬ್ಬಿಕೊಂಡಿರುವ ಟೊಮೆಟೊ, ಗರಂ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹುರಿಯಿರಿ. ಐದು ನಿಮಿಷಗಳ ನಂತರ ಹುರಿದುಕೊಂಡ ಚಿಕನ್ ತುಂಡು ಹಾಗೂ ಅರ್ಧ ಗ್ಲಾಸ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯಲು ಬಿಡಿ. ಚಿಕನ್ ಬೆಂದ ನಂತರ 1 ಟೇಬಲ್ ಚಮಚ ಫ್ರೆಶ್ ಕ್ರೀಮ್ ಸೇರಿಸಿ. ಕೊನೆಯದಾಗಿ ಕಸೂರಿ ಮೇಥಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಟಿಕ್ಕಾ ಮಸಾಲೆ ರೆಡಿ.

**


ನಾಟಿ ಸ್ಟೈಲ್ ಕೋಳಿಸಾರು

ಬೇಕಾಗುವ ಸಾಮಗ್ರಿಗಳು: ಹುರಿಗಡಲೆ – 2 ಚಮಚ, ಶುಂಠಿ – 2 ಇಂಚು, ಬೆಳ್ಳುಳ್ಳಿ – 3 ಗೆಡ್ಡೆ, ಈರುಳ್ಳಿ – 2, ಕೊತ್ತಂಬರಿ ಸೊಪ್ಪು, ಕಾಳುಮೆಣಸು – 1 ಚಮಚ, ಲವಂಗ – 3, ಚಕ್ಕೆ –2, ಗಸಗಸೆ – 1 ಟೇಬಲ್ ಚಮಚ, ಹುಚ್ಚೆಳ್ಳು – 2 ಟೇಬಲ್ ಚಮಚ, ಕಾಯಿತುರಿ – 1/2 ಕಪ್, ಮಟನ್ ಸಾಂಬಾರು ಪುಡಿ –3 ಟೇಬಲ್ ಚಮಚ, ಖಾರದ ಪುಡಿ – 2 ಚಮಚ, ಎಣ್ಣೆ – 3 ಟೇಬಲ್ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಚಿಕನ್ – 2 ಕೆ.ಜಿ, ಟೊಮೆಟೊ – 1, ಅರಿಸಿನ ಪುಡಿ – 1/4 ಚಮಚ

ತಯಾರಿಸುವ ವಿಧಾನ: ಮಿಕ್ಸಿ ಜಾರಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಒಂದು ಕುಕರ್‌ನಲ್ಲಿ 3 ಟೇಬಲ್ ಚಮಚ ಎಣ್ಣೆ, ರುಬ್ಬಿದ ಮಿಶ್ರಣ ಹಾಕಿಕೊಂಡು 2 ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಿ. ನಂತರ ಚಿಕನ್, ಉಪ್ಪು, ಅರಿಸಿನ ಪುಡಿ ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ನೀರು ಆವಿಯಾಗುವವರೆಗೂ ಅದನ್ನು ಹುರಿದುಕೊಳ್ಳಿ. ಒಂದು ಚಿಕ್ಕ ಪಾತ್ರೆಯಲ್ಲಿ ಗಸಗಸೆ, ಹುಚ್ಚೆಳ್ಳು ಹಾಕಿ ಚಟಪಟ ಅಂತ ಶಬ್ದ ಬರುವವರೆಗೂ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರಿಗೆ ಸೇರಿಸಿ. ಜೊತೆಗೆ ಕಾಯಿತುರಿ, ಚಕ್ಕೆ, ಲವಂಗ, ಕಾಳುಮೆಣಸು, ಹುರಿಗಡಲೆ, ಟೊಮೆಟೊ ಹಾಕಿ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ಚಿಕನ್ ಹುರಿದ ನಂತರ ಮಟನ್ ಸಾಂಬಾರ್ ಪುಡಿ, ಖಾರದ ಪುಡಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಒಂದರಿಂದ ಎರಡು ಗ್ಲಾಸ್ ನೀರು ಹಾಕಿ. ಕುಕರ್ ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಕೂಗಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇದನ್ನು ಮುದ್ದೆ ಜೊತೆಗೆ ಸವಿಯಬಹುದು.

**


ಬಟರ್ ಚಿಕನ್

ಬೇಕಾಗುವ ಸಾಮಗ್ರಿಗಳು: ಚಿಕನ್ – 600 ಗ್ರಾಂ, ಮೊಸರು – 5 ಟೇಬಲ್ ಚಮಚ, ಕಾಳುಮೆಣಸಿನ ಪುಡಿ – 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 3 ಟೇಬಲ್ ಚಮಚ, ಅರಿಸಿನ ಪುಡಿ – 1/4 ಚಮಚ, ಸೋಂಪು – 1 ಚಮಚ, ಗೋಡಂಬಿ – 20, ಟೊಮೆಟೊ – 5, ಈರುಳ್ಳಿ – 2, ಎಣ್ಣೆ – 4 ಟೇಬಲ್ ಚಮಚ, ಬೆಣ್ಣೆ – 2 ಟೇಬಲ್ ಚಮಚ, ಚಕ್ಕೆ – 3, ಲವಂಗ – 6, ಏಲಕ್ಕಿ – 2, ಖಾರದ ಪುಡಿ – 3 ಟೇಬಲ್ ಚಮಚ, ಗರಂ ಮಸಾಲ – 1 ಟೇಬಲ್ ಚಮಚ, ಕೊತ್ತಂಬರಿ ಪುಡಿ – 2 ಟೇಬಲ್ ಚಮಚ, ಸಕ್ಕರೆ – 1 ಚಮಚ, ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಚಿಕನ್, ಮೊಸರು, ಕಾಳುಮೆಣಸಿನ ಪುಡಿ, ಅರಿಸಿನ ಪುಡಿ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಈ ಮಿಶ್ರಣವನ್ನು ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ಒಂದು ಮಿಕ್ಸಿ ಜಾರಿನಲ್ಲಿ ಸೋಂಪು, ಗೋಡಂಬಿ, ಟೊಮೆಟೊ, ಈರುಳ್ಳಿ, 2 ಟೇಬಲ್ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ 4 ಟೇಬಲ್ ಚಮಚ ಎಣ್ಣೆ, 2 ಟೇಬಲ್ ಚಮಚ ಬೆಣ್ಣೆ, ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ ಇದೆಲ್ಲವೂ ಹೊಂಬಣ್ಣ ಬರುವವರೆಗೂ ಚೆನ್ನಾಗಿ ಹುರಿದುಕೊಳ್ಳಿ. ನಂತರ ರುಬ್ಬಿಕೊಂಡಿರುವ ಮಿಶ್ರಣವನ್ನು ಸೇರಿಸಿ. ಇದನ್ನು ಮೂರು ನಿಮಿಷಗಳ ಕಾಲ ಹುರಿಯಿರಿ. ನಂತರ ಖಾರದ ಪುಡಿ, ಗರಂ ಮಸಾಲೆ, ಕೊತ್ತಂಬರಿ ಪುಡಿ ಸೇರಿಸಿಕೊಳ್ಳಿ. ಮಸಾಲೆ ಕುದಿ ಬಂದ ನಂತರ ನೆನೆಸಿಟ್ಟ ಚಿಕನ್ ಲೆಗ್ ಪೀಸ್ ಅನ್ನು ಹಾಕಿಕೊಳ್ಳಿ, ಒಂದು ಚಮಚ ಸಕ್ಕರೆ ಹಾಕಿ 15 ನಿಮಿಷಗಳ ಕಾಲ ಇದಕ್ಕೆ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಬೇಯಿಸಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ. ಇದನ್ನು ಕುಲ್ಚ, ನಾನ್, ಚಪಾತಿ, ಪೂರಿ, ಪರೋಟ ಜೊತೆಗೆ ತಿನ್ನಬಹುದು.

(ಲೇಖಕಿ: ಅನು ಸ್ವಯಂ ಕಲಿಕೆ ಯೂಟ್ಯೂಬ್‌ ಚಾನೆಲ್‌ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT