ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆಯ ಕಾಫಿ ನಿಪ್ಪಟ್ಟಿನ ಜೊತೆ

Last Updated 23 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಗೋಧಿ ನಿಪ್ಪಟ್ಟು ಮಸಾಲೆ

ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು - 1 ಬಟ್ಟಲು, ಬಾಂಬೆರವೆ – 1/2 ಬಟ್ಟಲು, ಈರುಳ್ಳಿ - 1, ಖಾರದಪುಡಿ – 1/2 ಚಮಚ, ಜೀರಿಗೆ, ಓಮದಕಾಳು, ಕೊತ್ತಂಬರಿಸೊಪ್ಪು, ಕಾಯಿತುರಿ, ಕ್ಯಾರೆಟ್‌ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಗೋಧಿಹಿಟ್ಟು ಮತ್ತು ಬಾಂಬೆರವೆಗೆ ಉಪ್ಪು, ಖಾರದಪುಡಿ, ಜೀರಿಗೆ, ಓಮದಕಾಳು ಸೇರಿಸಿ ನೀರು ಹಾಕಿ ಗಟ್ಟಿಯಾಗಿ ಪೂರಿ ಹಿಟ್ಟಿನಂತೆ ಕಲೆಸಬೇಕು. ಇದರಿಂದ ದೊಡ್ಡದಾದ ಚಪಾತಿಯನ್ನು ಮಾಡಿ ಚಾಕುವಿನ ಸಹಾಯದಿಂದ ಅಲ್ಲಲ್ಲಿ ಚುಚ್ಚಿ ತೂತು ಮಾಡಬೇಕು. ಈ ಚಪಾತಿಯನ್ನು ಉದ್ದಕ್ಕೆ ಮತ್ತು ಅಡ್ಡಕ್ಕೆ ಕತ್ತರಿಸಿ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಗರಿಗರಿಯಾಗುವಂತೆ ಮಂದ ಉರಿಯಲ್ಲಿ ಕರಿಯಬೇಕು.ಕರಿದ ತುಂಡುಗಳನ್ನು ಪ್ಲೇಟಿಗೆ ಹಾಕಿ ಅದರ ಮೇಲೆ ಉಪ್ಪು ಮತ್ತು ಗರಂಮಸಾಲೆ ಬೆರೆಸಿದ ಈರುಳ್ಳಿ ತುಂಡುಗಳು, ಕಾಯಿತುರಿ, ಕ್ಯಾರೆಟ್‌ತುರಿ ಮತ್ತು ಕೊತ್ತಂಬರಿಸೊಪ್ಪು ಹಾಕಿದರೆ ರುಚಿಕರ ಮಸಾಲೆ ನಿಪ್ಪಟ್ಟು ತಿನ್ನಲು ರೆಡಿ.

ಎರೆಯಪ್ಪ

ಬೇಕಾಗುವ ಸಾಮಗ್ರಿಗಳು: ದೋಸೆ ಅಕ್ಕಿ - 1 ಲೋಟ, ಉದ್ದಿನಬೇಳೆ – 1/4 ಲೋಟ, ಮೆಂತ್ಯ - 1 ಚಮಚ, ಬೆಲ್ಲದಪುಡಿ – 1/2 ಲೋಟ, ಅವಲಕ್ಕಿ - 1 ಹಿಡಿ, ಕಾಯಿತುರಿ – 1/2 ಲೋಟ, ಪಚ್ಚೆ ಬಾಳೆಹಣ್ಣು - 1 ದೊಡ್ಡದು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ : ಅಕ್ಕಿ, ಉದ್ದಿನಬೇಳೆ, ಮೆಂತ್ಯದ ಕಾಳುಗಳನ್ನು ಎರಡು ಮೂರು ಗಂಟೆ ನೆನೆಸಿ. ಅವಲಕ್ಕಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನೀರು ಸ್ವಲ್ಪ ಸ್ವಲ್ಪವೇ ಹಾಕಿ ಹಿಟ್ಟು ಅರ್ಧ ನುಣ್ಣಗೆ ಆದಾಗ ಬೆಲ್ಲ ಹಾಕಿ ಮತ್ತಷ್ಟು ರುಬ್ಬಿ. ಹಿಟ್ಟು ಮಂದವಾಗಿರಬೇಕು. ಉಪ್ಪು ಸೇರಿಸಿ ಒಂದು ಗಂಟೆ ಮುಚ್ಚಿ ಇಡಬೇಕು. ಬಳಿಕ ಅದಕ್ಕೆ ಒಂದು ಬಾಳೆಹಣ್ಣು ಕಿವುಚಿ ಹಾಕಿ ಕಾಯಿತುರಿ ಸೇರಿಸಿ ಚೆನ್ನಾಗಿ ಕಲೆಸಿ ಕಾದ ಎಣ್ಣೆಯಲ್ಲಿ ಸಣ್ಣ ಸೌಟಿನಿಂದ ಒಂದು ಸೌಟು ಹಿಟ್ಟು ಹಾಕಿ ಪೂರಿಯಂತೆ ಕರಿಯುವುದು. ಗಾಢ ಬಣ್ಣ ಬಂದಾಗ ತೆಗೆಯುವುದು. ಇದು ಸಂಜೆಯ ತಿಂಡಿಗೆ ಅಥವಾ ಹಬ್ಬದ ದಿನ ಊಟದ ಹೊತ್ತಿಗೆ ಬಳಸಬಹುದು.

ಆಲೂ ದೊಣ್ಣೆಮೆಣಸಿಕಾಯಿ ಬೋಂಡ

ಬೇಕಾಗುವ ಸಾಮಗ್ರಿಗಳು: ದೊಡ್ದ ದೊಣ್ಣೆಮೆಣಸಿನಕಾಯಿ - 1, ಆಲೂಗೆಡ್ಡೆ - 2, ಹಸಿಮೆಣಸಿನಕಾಯಿ - 2, ಖಾರದಪುಡಿ – 1/2 ಚಮಚ, ಕಡಲೆಹಿಟ್ಟು - 2 ಬಟ್ಟಲು, ಓಮದಕಾಳು – 1/4 ಚಮಚ, ಗರಂಮಸಾಲ – 1/4 ಚಮಚ, ಕೊತ್ತಂಬರಿಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ದೊಣ್ಣೆಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಿ ಉಪ್ಪು ಸವರಿ ಇಡುವುದು. ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಬೋಂಡಕ್ಕೆ ಬೇಕಾದಂತೆ ಮಂದವಾಗಿ ಕಲೆಸಿ ಇಡುವುದು. ಅದಕ್ಕೆ ಓಮದಕಾಳು, ಉಪ್ಪು, ಖಾರಪುಡಿ ಬೆರೆಸಬೇಕು. ಆಲೂಗೆಡ್ಡೆಗಳನ್ನು ಬೇಯಿಸಿ ಚೆನ್ನಾಗಿ ಹಿಚುಕಿ ಉಪ್ಪು, ಗರಂಮಸಾಲೆ, ಹಸಿಮೆಣಸಿನಕಾಯಿ ತುಂಡುಗಳು, ಕೊತ್ತಂಬರಿಸೊಪ್ಪು ಬೆರೆಸಿ ದೊಣ್ಣೆಮೆಣಸಿನಕಾಯಿಯ ಒಳಗಿನ ಭಾಗಕ್ಕೆ ಉದ್ದಕ್ಕೆ ಹಚ್ಚಬೇಕು. ಪಲ್ಯ ಹಚ್ಚಿದ ಹೋಳುಗಳನ್ನು ಕಡಲೆಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ ಕಾದ ಎಣ್ಣೆಯಲ್ಲಿ ಬಿಡಬೇಕು. ಇದನ್ನು ಎರಡು ಮೂರು ನಿಮಿಷಗಳ ಕಾಲ ಮಗುಚಿ ಹಾಕದೇ ಮಂದ ಉರಿಯಲ್ಲಿ ನಿಧಾನಕ್ಕೆ ಬೇಯಿಸಬೇಕು.

ಶೇಂಗಾ ಎಳ್ಳು ಚಿಕ್ಕಿ

ಬೇಕಾಗುವ ಸಾಮಗ್ರಿಗಳು: ನೆಲಗಡಲೆ ಬೀಜ (ಶೇಂಗಾ) - 2 ಬಟ್ಟಲು, ಎಳ್ಳು - 1 ಬಟ್ಟಲು, ಒಣ ಕೊಬ್ಬರಿ - 1/2 ಬಟ್ಟಲು, ಪುಡಿಮಾಡಿದ ಬೆಲ್ಲ - 3 ಬಟ್ಟಲು, ಏಲಕ್ಕಿ ಸ್ವಲ್ಪ.

ತಯಾರಿಸುವ ವಿಧಾನ : ಶೇಂಗಾಬೀಜಗಳನ್ನು ಹುರಿದು ಸಿಪ್ಪೆ ತೆಗೆದು ಕುಟ್ಟಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬೇಕು. ಒಣ ಕೊಬ್ಬರಿ ತುಂಡು ಮಾಡಿ ಏಲಕ್ಕಿ ಸೇರಿಸಿ ಪುಡಿ ಮಾಡುವುದು. ಬಾಲ್ದಿ ಬೆಲ್ಲ ಅಥವಾ ಕೊಲ್ಹಾಪುರಿ ಬೆಲ್ಲ ಜಿಗಿ ಇರುತ್ತದೆ. ಇದನ್ನು ಬಾಣಲೆಗೆ ಹಾಕಿ ಒಂದೆರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿ ಹುರಿದ ಎಳ್ಳು, ಶೇಂಗಾ, ಕೊಬ್ಬರಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ ಕೂಡಲೆ ತುಪ್ಪ ಸವರಿದ ತಟ್ಟೆಗೆ ಹಾಕಿ ಸ್ವಲ್ಪ ಆರಿದ ಮೇಲೆ ಚೌಕಾಕಾರಕ್ಕೆ ಕತ್ತರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT