ಗುರುವಾರ , ಅಕ್ಟೋಬರ್ 22, 2020
23 °C

ತಿಂದು ನೋಡಿ ಅಣಬೆ ಖಾದ್ಯ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಅಣಬೆ ಖಾದ್ಯಗಳು ಬಹುತೇಕರಿಗೆ ಇಷ್ಟವಾಗುತ್ತವೆ. ಕಡಿಮೆ ಕ್ಯಾಲೊರಿ ಅಂಶ ಹೊಂದಿರುವ, ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಂಶ ಹೊಂದಿರದ ಅಣಬೆ ಡಯೆಟ್ ಪ್ರಿಯರಿಗೂ ಅಚ್ಚುಮೆಚ್ಚು. ಇದರಲ್ಲಿ ಪ್ರೊಟೀನ್ ಅಂಶವು ಅಧಿಕವಿದ್ದು ಇದರ ಸೇವನೆ ಆರೋಗ್ಯಕ್ಕೂ ಉತ್ತಮ.

ಅಣಬೆ ಮತ್ತು ಮೊಟ್ಟೆ ಟೋಸ್ಟ್

ಬೇಕಾಗುವ ಸಾಮಗ್ರಿಗಳು: ಬೆಣ್ಣೆ- 2ಚಮಚ, ಬೆಳ್ಳುಳ್ಳಿ – 2ಎಸಳು, ಅಣಬೆ – 200ಗ್ರಾಂ, ಟೊಮೆಟೊ – 1, ಕಾಳುಮೆಣಸಿನ ಪುಡಿ – ಚಿಟಿಕೆ, ಮೊಟ್ಟೆ – 2, ಚೀಸ್‌

ತಯಾರಿಸುವ ವಿಧಾನ: ಬೆಣ್ಣೆಯನ್ನು ಕರಗಿಸಿ ಅದಕ್ಕೆ ಬೆಳ್ಳುಳ್ಳಿ ಹಾಗೂ ಕತ್ತರಿಸಿದ ಅಣಬೆ ಸೇರಿಸಿ ಮೆತ್ತಗಾಗುವವರೆಗೂ ಬೇಯಿಸಿ. ಟೊಮೆಟೊ ಪ್ಯೂರಿ ತಯಾರಿಸಿ ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಹಸಿವಾಸನೆ ಹೋಗುವವರೆಗೂ ಹುರಿಯಿರಿ. ಅದಕ್ಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಬದಿಗಿರಿಸಿ.

ಬೆಣ್ಣೆಗೆ ಬೇಯಿಸಿ ಚೂರು ಮಾಡಿದ 2 ಮೊಟ್ಟೆ, ಸ್ವಲ್ಪ ಹಾಲು ಸೇರಿಸಿ. ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿ. ಟೋಸ್ಟ್‌ ಮೇಲೆ ಚೂರು ಮಾಡಿದ ಮೊಟ್ಟೆಯನ್ನು ಹಾಕಿ ಅದರ ಮೇಲೆ ತಯಾರಿಸಿಟ್ಟುಕೊಂಡ ಅಣಬೆ ಮಿಶ್ರಣ ಇಡಿ. ಅದಕ್ಕೆ ಚೀಸ್ ತುರಿದು ಹಾಕಿ. ಅಧಿಕ ಉಷ್ಣಾಂಶದಲ್ಲಿ 5 ನಿಮಿಷಗಳ ಕಾಲ ಒವೆನ್‌ನಲ್ಲಿ ಇರಿಸಿ.

ಅಣಬೆ ಸೂಪ್‌

ಬೇಕಾಗುವ ಸಾಮಗ್ರಿಗಳು: ಬೆಣ್ಣೆ – 2ಚಮಚ, ಈರುಳ್ಳಿ – 1ಮಧ್ಯಮ ಗಾತ್ರದ್ದು, ಅಣಬೆ – 200ಗ್ರಾಂ, ಉಪ್ಪು– ರುಚಿಗೆ, ನೀರು, ಸೊಪ್ಪು – 1/2ಕಪ್‌, ಕಾಳುಮೆಣಸು– ಚಿಟಿಕೆ, ಪಾಸ್ತಾ ಮತ್ತು ಪಾಸ್ತಾ ಕ್ರೀಮ್‌. ಚಿಲ್ಲಿ ಸಾಸ್ – ಸ್ವಲ್ಪ‌, ಈರುಳ್ಳಿ ದಂಟು – 1/4ಕಪ್‌, ಶುಂಠಿ – 1/4 ಇಂಚು

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಅದಕ್ಕೆ ಕತ್ತರಿಸಿದ ಅಣಬೆ ಸೇರಿಸಿ 10 ನಿಮಿಷ ಬೇಯಿಸಿ. ನೀರು ಅಥವಾ ತರಕಾರಿ ಬೇಯಿಸಿದ ನೀರು ಸೇರಿಸಿ. ಉಪ್ಪು, ನಿಮ್ಮ ಆಯ್ಕೆಯ ಗಿಡಮೂಲಿಕೆಯನ್ನು ಕತ್ತರಿಸಿ ಹಾಕಿ ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ. ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ತಣ್ಣಗಾದ ಮೇಲೆ ರುಬ್ಬಿಕೊಳ್ಳಿ. ಅದನ್ನು ಪಾತ್ರೆಯೊಂದಕ್ಕೆ ಹಾಕಿ. ಅದಕ್ಕೆ ಬೇಯಿಸಿದ ಪಾಸ್ತಾ ಹಾಗೂ ಸ್ವಲ್ಪ ಕ್ರೀಮ್ ಸೇರಿಸಿ. ಅದರ ಮೇಲೆ ಚಿಲ್ಲಿ ಸಾಸ್‌, ಉದ್ದಕ್ಕೆ ತೆಳ್ಳಗೆ ಹೆಚ್ಚಿದ ಶುಂಠಿ ಹಾಗೂ ಈರುಳ್ಳಿ ದಂಟನ್ನು ಕತ್ತರಿಸಿ ಹಾಕಿ. ಮಿಶ್ರಣ ಮಾಡಿ ತಿನ್ನಲು ಕೊಡಿ.

ಅಣಬೆ ಮತ್ತು ಬಟಾಣಿ ಕರಿ

ಬೇಕಾಗುವ ಸಾಮಗ್ರಿಗಳು: ಟೊಮೆಟೊ –1, ಶುಂಠಿ– 1/2 ಇಂಚು, ಬೆಳ್ಳುಳ್ಳಿ – 4 ಎಸಳು, ಹಸಿಮೆಣಸು – 2, ಗೋಡಂಬಿ – 10, ಎಣ್ಣೆ, ಜೀರಿಗೆ – 1/4ಚಮಚ, ಹಸಿಮೆಣಸು – 3, ಉಪ್ಪು– ರುಚಿಗೆ, ಮೆಣಸಿನಪುಡಿ – 1/2 ಚಮಚ, ಬಟಾಣಿ – 1/2ಕಪ್‌, ಅಣಬೆ – 1/4 ಕೆ.ಜಿ., ಕಸೂರಿ ಮೇಥಿ – ಸ್ವಲ್ಪ

ತಯಾರಿಸುವ ವಿಧಾನ: ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಗೂ ಗೋಡಂಬಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜೀರಿಗೆ, ಕತ್ತರಿಸಿದ ಹಸಿಮೆಣಸು ಹಾಗೂ ರುಬ್ಬಿಕೊಂಡ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಉಪ್ಪು, ಮೆಣಸಿನಪುಡಿ ಹಾಗೂ ಗರಂಮಸಾಲ ಸೇರಿಸಿ. ನೆನೆಸಿಟ್ಟುಕೊಂಡ ಬಟಾಣಿ ಸೇರಿಸಿ 5 ನಿಮಿಷ ಬೇಯಿಸಿ, ಕತ್ತರಿಸಿದ ಅಣಬೆ ಸೇರಿಸಿ ಬೇಯಿಸಿ. ಅದರ ಮೇಲೆ ಕಸೂರಿಮೇಥಿ ಉದುರಿಸಿ. ಇದು ರೊಟ್ಟಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು