ಗುರುವಾರ , ಏಪ್ರಿಲ್ 2, 2020
19 °C

ಯುಗಾದಿ ಊಟಕ್ಕೆ ಅವಲಕ್ಕಿ ಹೋಳಿಗೆ, ಒತ್ತು ಶ್ಯಾವಿಗೆ ಪಾಯಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅವಲಕ್ಕಿ ಹೋಳಿಗೆ

ಬೇಕಾಗುವ ಸಾಮಗ್ರಿಗಳು: ಕಣಕಕ್ಕೆ– ಮೈದಾ ಹಿಟ್ಟು– 1 ಕಪ್‌, ಗೋಧಿ ಹಿಟ್ಟು– ಅರ್ಧ ಕಪ್‌, ಎಣ್ಣೆ– 2 ಟೀ ಚಮಚ, ಚಿಟಿಕೆ ಅರಿಸಿನ. ಸ್ವಲ್ಪ ನೀರು.

ಹೂರಣಕ್ಕೆ– ದಪ್ಪ ಅವಲಕ್ಕಿ– 1 ಕಪ್‌, ಬೆಲ್ಲ– 1 ಕಪ್‌, ಚಿರೋಟಿ ರವೆ– 2 ಟೀ ಚಮಚ, ಏಲಕ್ಕಿ ಪುಡಿ– 1 ಟೀ ಚಮಚ.

ತಯಾರಿಸುವ ವಿಧಾನ: ಮೊದಲು ಮೈದಾ ಹಾಗೂ ಗೋಧಿಹಿಟ್ಟನ್ನು ಮಿಶ್ರ ಮಾಡಿ. ಇದಕ್ಕೆ ಒಂದು ಟೀ ಚಮಚ ಎಣ್ಣೆ ಹಾಕಿ ಕಲೆಸಿ. ನಂತರ ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿಕೊಂಡು ಚೆನ್ನಾಗಿ ಒತ್ತಿ ಒತ್ತಿ ಕಲೆಸಿ. ಪುನಃ ಒಂದು ಟೀ ಚಮಚ ಎಣ್ಣೆ ಹಾಕಿ ಕಲೆಸಿ ಒದ್ದೆ ಬಟ್ಟೆಯಿಂದ ಮುಚ್ಚಿ. ದಪ್ಪ ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ತಾಸು ನೆನೆಹಾಕಿ. ನೀರನ್ನು ಬಸಿದು, ಮಿಕ್ಸಿಯಲ್ಲಿ ನೀರು ಹಾಕದೆ ನಯವಾಗಿ ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ರುಬ್ಬಿದ ಅವಲಕ್ಕಿಗೆ ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಿ. ಇದು ಗಟ್ಟಿಯಾಗುತ್ತ ಬಂದ ಹಾಗೆ 2 ಟೀ ಚಮಚ ಚಿರೋಟಿ ರವೆ ಸೇರಿಸಿ. ತಣ್ಣಗಾದ ನಂತರ ಈ ಹೂರಣದ ಉಂಡೆಯನ್ನು ಮಾಡಿ, ಕಣಕದೊಳಗೆ ಸೇರಿಸಿ ಲಟ್ಟಿಸಿ. ಹೋಳಿಗೆಯನ್ನು ತವಾದ ಮೇಲೆ ತುಪ್ಪ ಹಾಕಿ ಬೇಯಿಸಿ.

***

ಮಾವಿನಕಾಯಿ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು: ಅನ್ನ– 3 ಕಪ್‌, ಸಣ್ಣಗೆ ಹೆಚ್ಚಿದ ಒಂದು ಮಾವಿನಕಾಯಿ, ತೆಂಗಿನಕಾಯಿ ತುರಿ– ಅರ್ಧ ಕಪ್‌, ಸಾಸಿವೆ– ಅರ್ಧ ಟೀ ಚಮಚ, ಕೆಂಪಗೆ ಹುರಿದ ಮೆಂತ್ಯೆ– ಅರ್ಧ ಟೀ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು– ಅರ್ಧ ಕಪ್‌, ಹಸಿ ಮೆಣಸಿನಕಾಯಿ– 4–6, ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ: ಸಾಸಿವೆ ಸ್ವಲ್ಪ, ಇಂಗು ಸ್ವಲ್ಪ, ಕಡಲೆಬೇಳೆ ಮತ್ತು ಉದ್ದಿನಬೇಳೆ– ಅರ್ಧ ಟೀ ಚಮಚ, ಶೇಂಗಾ– ಕಾಲು ಕಪ್‌, ಕರಿಬೇವು, ಎಣ್ಣೆ– 3 ಟೀ ಚಮಚ.

ತಯಾರಿಸುವ ವಿಧಾನ: ಒಗ್ಗರಣೆ ಸಾಮಗ್ರಿ ಬಿಟ್ಟು ಉಳಿದೆಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಒಗ್ಗರಣೆ ಸಾಮಗ್ರಿ ಹಾಕಿ. ಎಲ್ಲವೂ ಕಂದು ಬಣ್ಣ ಬಂದ ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಅನ್ನಕ್ಕೆ ಸೇರಿಸಿ ಮಿಶ್ರ ಮಾಡಿ. ಮಾವಿನಕಾಯಿ ಹುಳಿಯಾಗಿದ್ದರೆ ಸ್ವಲ್ಪ ಬೆಲ್ಲ ಸೇರಿಸಿ.

***

ಒತ್ತು ಶ್ಯಾವಿಗೆ ಪಾಯಸ

ಬೇಕಾಗುವ ಸಾಮಗ್ರಿಗಳು: ಶ್ಯಾವಿಗೆಗೆ– ಅಕ್ಕಿ– ಮುಕ್ಕಾಲು ಕಪ್‌, ನೀರು– ಅರ್ಧ ಕಪ್‌, ಉಪ್ಪು ಸ್ವಲ್ಪ.

ಪಾಯಸಕ್ಕೆ– ಹಾಲು– 3 ಕಪ್‌, ಬೆಲ್ಲ– ಅರ್ಧ ಕಪ್‌, ತುಪ್ಪ– 2 ಟೀ ಚಮಚ, ಒಣ ದ್ರಾಕ್ಷಿ ಮತ್ತು ಗೋಡಂಬಿ, ಏಲಕ್ಕಿ ಪುಡಿ ಸ್ವಲ್ಪ.

ತಯಾರಿಸುವ ವಿಧಾನ: ಅಕ್ಕಿಯನ್ನು ಎರಡು ತಾಸು ನೆನೆ ಹಾಕಿ. (ಅಕ್ಕಿ ಹಿಟ್ಟನ್ನೂ ಬಳಸಬಹುದು). ಇದನ್ನು ನಯವಾಗಿ ರುಬ್ಬಿ ನೀರು ಸೇರಿಸಿ. ಉಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ. ಹಿಟ್ಟು ಗಟ್ಟಿಯಾದ ನಂತರ ಇದನ್ನು 8– 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ನಂತರ ಇದನ್ನು ಶ್ಯಾವಿಗೆ ಒರಳಲ್ಲಿ ಹಾಕಿ ಒತ್ತಿ.

ಈ ಶ್ಯಾವಿಗೆಯನ್ನು ಹಾಲಿಗೆ ಹಾಕಿ 10– 15 ನಿಮಿಷ ಬೇಯಿಸಿ. ನಂತರ ಬೆಲ್ಲ ಸೇರಿಸಿ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ತುಪ್ಪ ಹಾಕಿ.

***

ರವೆ– ಮೊಸರು ಆಂಬೊಡೆ

ಬೇಕಾಗುವ ಸಾಮಗ್ರಿಗಳು: ಚಿರೋಟಿ ರವೆ– 1 ಕಪ್‌, ಮೊಸರು– ಮುಕ್ಕಾಲು ಕಪ್‌, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ– 2 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು– ಕಾಲು ಕಪ್‌, ಹೆಚ್ಚಿದ ಶುಂಠಿ– ಅರ್ಧ ಟೀ ಚಮಚ, ಓಂಕಾಳು– 1 ಟೀ ಚಮಚ, ಇಂಗು– ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಎಣ್ಣೆಯನ್ನು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಮಿಶ್ರ ಮಾಡಿ 15 ನಿಮಿಷ ಬಿಡಿ. ಇದನ್ನು ಆಂಬೊಡೆ ಆಕಾರದಲ್ಲಿ ತಟ್ಟಿ ಹೊಂಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಆಂಬೊಡೆಯನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿದರೆ ರುಚಿ ಹೆಚ್ಚು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು