ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ಪಾನೀಯಗಳು ದೇಹಕ್ಕೂ ತಂಪು, ಆರೋಗ್ಯಕ್ಕೂ ಪೂರಕ

Published 12 ಮೇ 2023, 20:34 IST
Last Updated 12 ಮೇ 2023, 20:34 IST
ಅಕ್ಷರ ಗಾತ್ರ

ಒಂದೆರಡು ಹದ ಬೇಸಿಗೆ ಮಳೆಯಾದರೂ, ವಾತಾವರಣವಿನ್ನೂ ತಂಪಾಗಿಲ್ಲ. ಬಿಸಿಲ ಬೇಗೆಯೂ ಕಡಿಮೆಯಾಗಿಲ್ಲ. ಮಧ್ಯಾಹ್ನದ ವೇಳೆಗೆ ಬಾಯಾರಿಕೆ ಹೆಚ್ಚಾಗಿ, ದೇಹ ಬಳಲುತ್ತದೆ. ಏನಾದರೂ ತಂಪಾದ ಪಾನೀಯ ಬೇಕೆನಿಸುತ್ತದೆ, ಅಲ್ಲವೇ ? ಅದಕ್ಕಾಗಿಯೇ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಒಂದಿಷ್ಟು ಪಾನೀಯಗಳ ರೆಸಿಪಿಗಳನ್ನು ಪರಿಚಯಿಸಿದ್ದಾರೆ ಆಯುರ್ವೇದ ವೈದ್ಯೆ ಡಾ. ವಸುಂಧರಾ ಭೂಪತಿಯವರು.

ಖರ್ಜೂರಾದಿ ಮಂಥ

ಖರ್ಜೂರ, ದಾಳಿಂಬೆ, ಒಣದ್ರಾಕ್ಷಿ, ನೆಲ್ಲಿಕಾಯಿ ಪುಡಿ, ಹುಣಸೆಹಣ್ಣು ಎಲ್ಲವೂ ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಇವೆಲ್ಲವೂ ಒಂದು ಭಾಗವಾದರೆ, ಇದಕ್ಕೆ 4 ಭಾಗ ನೀರನ್ನು ಹಾಕಿ ನೆನಸಬೇಕು. ಚೆನ್ನಾಗಿ ನೆನದ ಮೇಲೆ ಎಲ್ಲವನ್ನೂ ರುಬ್ಬಿ(ಮಿಕ್ಸಿಯಲ್ಲಿ ಹಾಕಬಹುದು), ನಂತರ ಶೋಧಿಸಿದರೆ ಪಾನೀಯ ಸಿದ್ದ. ಈ ಪಾನೀಯ ದೇಹದ ದಣಿವನ್ನು ನಿವಾರಿಸುವ ಜೊತೆಗೆ, ಬಿಸಿಲಿನಿಂದ ಬರುವ ತಲೆಸುತ್ತು ನಿಯಂತ್ರಣಕ್ಕೂ ಸಹಕಾರಿ.

ಜೀರ್ಣಕರ ಪಾನೀಯ

ಒಂದು ಕಪ್ ಹೆಸರು ಬೇಳೆಯನ್ನು ಬೇಯಿಸಿ ಕಟ್ಟು (ಮೇಲಿನ ತಿಳಿ) ತೆಗೆದಿಟ್ಟುಕೊಳ್ಳಿ. ಎರಡು ಲೋಟ ಕಟ್ಟು ಬರುವಷ್ಟು ಬೇಳೆ ಬೇಯಿಸಿಕೊಳ್ಳಿ. ಎರಡು ಲೋಟ ಹೆಸರುಬೇಳೆ ಕಟ್ಟಿಗೆ ಎರಡು ಲೋಟ ಮಜ್ಜಿಗೆ ಬೆರೆಸಿ. ಈ ಮಿಶ್ರಣಕ್ಕೆ ಸ್ವಲ್ಪ ಕೊತ್ತಂಬರಿ, ಚೂರು ಶುಂಟಿ ಚಿಟಿಕೆ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ವಿಶೇಷ ಪಾನೀಯ ಸಿದ್ಧವಾಯಿತು. ಈ ಪಾನೀಯ, ದೇಹಕ್ಕೆ ಶಕ್ತಿ ನೀಡುವ ಜೊತೆಗೆ, ಆಹಾರವನ್ನು ಸುಲಭ ಜೀರ್ಣವಾಗಲು ಸಹಾಯ ಮಾಡುತ್ತದೆ. ಅದಕ್ಕೆ ಇದನ್ನು ಜೀರ್ಣಕರ ಪಾನೀಯ ಎನ್ನುತ್ತಾರೆ.

ಲಾವಂಚದ ಪಾನೀಯ

ಎಂಟರಿಂದ ಹತ್ತು ಲಾವಂಚದ ಬೇರುಗಳನ್ನು ಚೆನ್ನಾಗಿ ತೊಳೆದು ಅರ್ಧ ಲೀಟರ್ ನೀರಿನಲ್ಲಿ ಎರಡು ಗಂಟೆ ನೆನೆಸಬೇಕು. ಆ ನೀರನ್ನು ಶೋಧಿಸಿ. ಅದಕ್ಕೆ ಅರ್ಧಕಪ್ ಬೆಲ್ಲ, ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಬೇಕು. ಲಾವಂಚ ಪಾನೀಯ ಸಿದ್ದ. ಇದು ದೇಹಕ್ಕೆ ತಂಪು ನೀಡುವ ಜೊತೆಗೆ, ರಕ್ತಶುದ್ದಿ ಮಾಡುತ್ತದೆ.‌

ಪುದೀನ ಜ್ಯೂಸ್

ಐದಾರು ಪುದೀನ ಎಲೆಗಳನ್ನು ಸ್ವಚ್ಛವಾಗಿ ತೊಳೆದು, ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅದಕ್ಕೆ ಸಾಕಷ್ಟು ನೀರು ಹಾಕಿ, ಬೆಲ್ಲ ಬೆರೆಸಬೇಕು. ಜೊತೆಗೆ ಚಿಟಿಕೆ ಏಲಕ್ಕಿ ಪುಡಿ ಬೆರೆಸಿದರೆ, ಇನ್ನೂ ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಪಾನೀಯ ಸೇವಿಸಿದರೆ, ಅಜೀರ್ಣ, ಎದೆಯುರಿಯಂತಹವು ಬಾಧಿಸುವುದಿಲ್ಲ.

ದಾಸವಾಳ ಎಲೆಯ ಜ್ಯೂಸ್‌

ಐದಾರು ದಾಸವಾಳದ ಎಲೆಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ. ನಂತರ ಅದನ್ನು ರುಬ್ಬಿಕೊಂಡು, ರಸ ತೆಗೆದುಕೊಳ್ಳಿ. ಆ ರಸಕ್ಕೆ ಬೆಲ್ಲ, ನೀರು ಬೆರೆಸಿ ಪಾನೀಯ ತಯಾರಿಸಿ .

ದಾಸವಾಳ ಹೂವಿನ ಷರಬತ್‌

ಐದು ಅಥವಾ ಆರು ದಾಸವಾಳದ ಹೂವುಗಳನ್ನು ರುಬ್ಬಿ ರಸ ತೆಗೆದು ಅದಕ್ಕೆ ನೀರು, ಬೆಲ್ಲ ಬೆರೆಸಿದರೆ ಷರಬತ್ತು ರೆಡಿ.

ಇನ್ನೂ ಒಂದು ವಿಧಾನದಲ್ಲಿ ಷರಬತ್ತು ಮಾಡಬಹುದು. ಅದು ಹೀಗಿದೆ; ಒಂದು ಲೋಟ ಸಕ್ಕರೆಗೆ ನೀರು ಬೆರೆಸಿ, ಸಕ್ಕರೆ ಪಾಕ ತಯಾರಿಸಿಟ್ಟುಕೊಳ್ಳಿ. ಅದಕ್ಕೆ ಒಂದು ಬಟ್ಟಲು ದಾಸವಾಳದ ಹೂವಿನ ರಸ ಬೆರೆಸಿ. ಅದನ್ನು ಒಲೆಯ ಮೇಲಿಟ್ಟು ನೀರಿನಂಶ ಹೋಗುವವರೆಗೂ ಕಾಯಿಸಿ. ನಂತರ ಇಳಿಸಿ, ಶೋಧಿಸಿ. ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಿ. ನಿಮಗೆ ಬೇಕೆನಿಸಿದಾಗ ಎರಡು ಚಮಚ ರಸಕ್ಕೆ ಒಂದು ಲೋಟ ನೀರು ಬೆರೆಸಿ ಕುಡಿಯಬಹುದು. ಚೀನಾ ಮತ್ತು ಜಪಾನ್ ದೇಶಗಳಲ್ಲಿ ಅತಿಥಿಗಳ ಸತ್ಕಾರಕ್ಕೆ ಇದೇ ಪಾನೀಯ ಬಳಸುತ್ತಾರೆ.

‘ಮಧುಮೇಹ’ವಿರುವವರಿಗೆ ಪಾನೀಯಗಳು

ಮಧುಮೇಹ ಅಥವಾ ಸಕ್ಕರೆಕಾಯಿಲೆಯಿಂದ ಬಳಲುವವರಿಗೆ ಜ್ಯೂಸ್ ಅಪಥ್ಯ. ಆದರೆ, ಸಕ್ಕರೆ ರಹಿತ, ಸಿಟ್ರಿಕ್ ಅಂಶವಿರವ ಹಾಗೂ ಪ್ರೊಟೀನ್, ವಿಟಮಿನ್‌ ಅಂಶಗಳಿರುವ ಜ್ಯೂಸ್‌ಗಳನ್ನು ತಯಾರಿಸಿ ಕುಡಿಯಬಹುದಲ್ಲವಾ ? ಹಾಗಾದರೆ, ಮಧುಮೇಹಿಗಳು ಯಾವ ತರಹದ ಪಾನೀಯಗಳನ್ನು ಕುಡಿಯಬಹುದು? ಇಲ್ಲಿದೆ ಮಾಹಿತಿ.

  • ಕಿತ್ತಲೆ ಹಣ್ಣಿನ ರಸ ಮತ್ತು ಮೋಸಂಬಿ ರಸಕ್ಕೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯಬಹುದು.

  • ಮಜ್ಜಿಗೆಗೆ ಮೋಸಂಬಿ ರಸ ಮತ್ತು ಸೌತೆಕಾಯಿ ರಸ ಬೆರೆಸಿ ಕುಡಿಯಬಹುದು.

  • ಹೆಸರುಬೇಳೆ ಬೇಯಿಸಿ ಕಟ್ಟು(ಮೇಲಿನ ತಿಳಿ) ತೆಗೆದು, ಅದಕ್ಕೆ ಮಜ್ಜಿಗೆ, ಸ್ವಲ್ಪ ಉಪ್ಪು ಬೆರೆಸಿ ಕುಡಿಯಬಹುದು.

  • ಅರ್ಧಲೋಟ ಸೌತೆಕಾಯಿ ರಸ, ಪುದಿನಾ ರಸ(ಎರಡು ಚಮಚ), ಒಂದು ಚಮಚ ನಿಂಬೆರಸ, ಚಿಟಿಕೆ ಜೀರಿಗೆ ಪುಡಿ, ಚಿಟಿಕೆ ಉಪ್ಪು ಬೆರೆಸಿ ಕುಡಿಯಬಹುದು.

  • ಕಿತ್ತಲೆಹಣ್ಣಿನ ರಸ, ಇಲ್ಲವೇ ಮೋಸಂಬಿ ರಸಕ್ಕೆ ತಲಾ ಒಂದು ಚಿಟಿಕೆಯಷ್ಟು ಹುರಿದ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ನ್ನು ಬೆರೆಸಿ ಕುಡಿಯಬಹುದು.

  • ಕಾಲು ಲೋಟ ಕರಬೂಜ ಹಣ್ಣಿನ ರಸಕ್ಕೆ, ಅರ್ಧ ಲೋಟ ಸೌತೆಕಾಯಿ ರಸವನ್ನು ಬೆರೆಸಿ ಕುಡಿಯಬಹುದು.

  • ಮಾವಿನ ಕಾಯಿಯನ್ನು ಕುಕ್ಕರ್‌ನಲ್ಲಿ ಬೇಯಿಸಿ, ಮಿಕ್ಸಿಗೆ ಹಾಕಿ ರುಬ್ಬಿ. ಅದಕ್ಕೆ ನೀರು ಬೆರೆಸಿ, ಉಪ್ಪು, ಏಲಕ್ಕಿ, ಶುಂಠಿ ಹಾಕಿ ಕುಡಿಯಬಹುದು.

  • ಮಾವಿನ ಕಾಯಿ ತುರಿದು ಮಿಕ್ಸಿಗೆ ಹಾಕಿ ರುಬ್ಬಿ ತೆಗೆಯಬೇಕು. ಆ ರಸಕ್ಕೆ ಮೋಸಂಬಿ ರಸ, ಚಿಟಿಕಇ ಶುಂಠಿ ಬೆರೆಸಿ ಕುಡಿಯಬಹುದು.

  • ನಿಂಬೆಹಣ್ಣಿನ ರಸಕ್ಕೆ ನೀರು ಹಾಕಿ ಶುಂಠಿ, ಮೆಣಸು, ಚಿಟಿಕೆ ಜೀರಿಗೆ ಪುಡಿ, ಚಿಟಿಕೆ ಉಪ್ಪು ಬೆರೆಸಿ ಕುಡಿಯಬಹುದು.

  • ಅರ್ಧ ಬಟ್ಟಲು ಹೆಸರು ಕಾಳನ್ನು ಮೂರ್ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ನೀರು, ಉಪ್ಪು, ಶುಂಠಿ, ಜೀರಿಗೆ ಪುಡಿ ಬೆರೆಸಿ ಕುಡಿಯಬೇಕು. ಇದಕ್ಕೆ ಮಜ್ಜಿಗೆಯನ್ನು ಬೆರೆಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT