ಗುರುವಾರ , ಅಕ್ಟೋಬರ್ 1, 2020
20 °C

ಸಿಹಿಯ ಜೊತೆ ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡಲೆಬೇಳೆ ಪಾಯಸ

ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ – 1ಕಪ್‌ (2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ), ಸಾಬುದಾನಿ – 1/2ಕ ಪ್‌, ಬೆಲ್ಲದ ಪುಡಿ – ರುಚಿಗೆ ತಕ್ಕಷ್ಟು, ಉಪ್ಪು – ರುಚಿಗೆ, ಗೋಡಂಬಿ – 10, ಗಟ್ಟಿ ತೆಂಗಿನಹಾಲು – 2 ಕಪ್, ಏಲಕ್ಕಿ ಹಾಗೂ ಜಾಯಿಕಾಯಿಪುಡಿ – 1/2 ಟೀ ಚಮಚ, ಹಸಿ ಕೊಬ್ಬರಿ ತೆಳುವಾಗಿ ಕತ್ತರಿಸಿದ ತುಂಡು – ಸ್ವಲ್ಪ.  

ತಯಾರಿಸುವ ವಿಧಾನ: ಸಾಬುದಾನಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಸಿ,  ಪಾತ್ರೆಯಲ್ಲಿ ಒಂದು ಕಪ್ ನೀರು ಸೇರಿಸಿ ಮೃದುವಾಗಿ ಬೇಯಿಸಿಕೊಳ್ಳಿ. ಕಡಲೆಬೇಳೆಯನ್ನು ಕುಕ್ಕರ್‌ನಲ್ಲಿ ಅದು ಮುಳುಗುವಷ್ಟು ನೀರನ್ನು ಹಾಕಿ ಮೂರರಿಂದ ನಾಲ್ಕು ವಿಷಲ್ ಬರುವವರೆಗೆ ಬೇಯಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೇಯಿಸಿದ ಸಾಬುದಾನಿ, ಕಡಲೆಬೇಳೆ, ಬೆಲ್ಲದ ಪುಡಿ, ಗೋಡಂಬಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಕುದಿ ಬಂದಾಗ ಕಾಯಿಹಾಲನ್ನು ಸೇರಿಸಿ ಮತ್ತೊಮ್ಮೆ ಕುದಿಸಿ. ಕುದಿಯುತ್ತಿರುವ ಪಾಯಸಕ್ಕೆ ಏಲಕ್ಕಿಪುಡಿ, ಜಾಯಿಕಾಯಿಪುಡಿ ಮತ್ತು ಚಿಕ್ಕದಾಗಿ ತೆಳುವಾಗಿ ಕತ್ತರಿಸಿದ ಹಸಿ ಕೊಬ್ಬರಿ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿ. 

ಮಿಶ್ರ ತರಕಾರಿ ಹಲ್ವಾ

ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್‌ ತುರಿ – 1/2 ಕಪ್‌, ಸೋರೆಕಾಯಿ ತುರಿ – 1/2 ಕಪ್‌, ಬೀಟ್‌ರೂಟ್‌ ತುರಿ – 1/2 ಕಪ್‌, ಸಿಹಿಗುಂಬಳ ತುರಿ – 1/2 ಕಪ್‌, ಬೂದುಗುಂಬಳ ತುರಿ – 1/2 ಕಪ್‌, ತುಪ್ಪ – 1 ಟೇಬಲ್ ಚಮಚ, ಹಾಲು – 1/2 ಲೀಟರ್‌, ಕೋವಾ – 100 ಗ್ರಾಂ, ಕಂಡೆನ್ಸ್ಡ್‌ ಮಿಲ್ಕ್ – 200 ಗ್ರಾಂ, ಸಕ್ಕರೆ – ಮುಕ್ಕಾಲು ಕಪ್‌, ಗೋಡಂಬಿ – ಸ್ವಲ್ಪ, ದ್ರಾಕ್ಷಿ – ಸ್ವಲ್ಪ, ಕತ್ತರಿಸಿದ ಬಾದಾಮಿ – ಸ್ವಲ್ಪ, ಏಲಕ್ಕಿ ಪುಡಿ – 1/2 ಟೀ ಚಮಚ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಎರಡು ಟೇಬಲ್ ಚಮಚ ತುಪ್ಪವನ್ನು ಹಾಕಿ ಮೇಲೆ ತಿಳಿಸಿರುವ ತರಕಾರಿಗಳ ತುರಿಯನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿಕೊಳ್ಳಿ. ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ. ಹಾಲು ತರಕಾರಿಗಳೊಂದಿಗೆ ಗಟ್ಟಿಯಾಗುತ್ತಾ ಬರುವಾಗ ಕೋವಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆಯನ್ನು ಸೇರಿಸಿ. ಸಕ್ಕರೆಯು ಕರಗಿದ ನಂತರ ಕಂಡೆನ್ಸ್ ಮಿಲ್ಕ್ ಹಾಕಿ ಮಿಶ್ರಣ ಮಾಡಿ. ಹಲ್ವಾ ಗಟ್ಟಿಯಾಗುತ್ತ ಬರುವಾಗ ಎರಡು ಟೇಬಲ್ ಚಮಚ ತುಪ್ಪದಲ್ಲಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಹಲ್ವಾಕ್ಕೆ ಸೇರಿಸಿ. ಕೊನೆಯಲ್ಲಿ ಬಾದಾಮಿ ಚೂರುಗಳನ್ನು ಹಾಕಿ ಅಲಂಕರಿಸಿ.

ಕ್ಯಾರೆಟ್ ಫಿರ್ನಿ

ಬೇಕಾಗುವ ಸಾಮಗ್ರಿಗಳು: ಹಾಲು– ಅರ್ಧ ಲೀಟರ್‌, ಕ್ಯಾರೆಟ್ ತುರಿ – 1 ಕಪ್, ಸಕ್ಕರೆ – 1/2 ಕಪ್, ಚಿರೋಟಿ ರವೆ(ಸಣ್ಣ ರವೆ) – 2 ಟೇಬಲ್ ಚಮಚ, ಗೋಡಂಬಿ ಪುಡಿ – 2 ಟೇಬಲ್ ಚಮಚ (ಗೋಡಂಬಿಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ), ಕೇಸರಿದಳಗಳು ಸ್ವಲ್ಪ (ಎರಡು ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ). ಅಲಂಕಾರಕ್ಕೆ ಪಿಸ್ತಾ, ಬಾದಾಮಿ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಕ್ಯಾರೆಟ್ ತುರಿಯನ್ನು ಹಾಲಿಗೆ ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗುವವರೆಗೆ ಕಲಕುತ್ತಿರಿ. ರವೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಕುದಿಯುತ್ತಿರುವ ಮಿಶ್ರಣಕ್ಕೆ ನಿಧಾನವಾಗಿ ಗಂಟುಗಳಾಗದಂತೆ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವು ಸ್ವಲ್ಪ ದಪ್ಪವಾಗುತ್ತಾ ಬರುವಾಗ ಹುರಿದುಕೊಂಡ ಗೋಡಂಬಿಯನ್ನು ಸೇರಿಸಿ ಗಟ್ಟಿಯಾಗುವವರೆಗೆ ಕುದಿಸಿ. ನಂತರ ಹಾಲಿನಲ್ಲಿ ನೆನೆಸಿಟ್ಟ ಕೇಸರಿಯನ್ನು ಹಾಕಿ ಮಿಶ್ರಣ ಮಾಡಿ. ತಯಾರಿಸಿದ ಫಿರ್ನಿಯನ್ನು ಚಿಕ್ಕ ಕಪ್‌ಗಳಲ್ಲಿ ಹಾಕಿ ಬಾದಾಮಿ ಮತ್ತು ಪಿಸ್ತಾದಿಂದ ಅಲಂಕರಿಸಿ ತಣ್ಣಗೆ ಬಡಿಸಿರಿ.

ಸೇಬು ಹಣ್ಣಿನ ಹೋಳಿಗೆ

ಬೇಕಾಗುವ ಸಾಮಗ್ರಿಗಳು: ಸೇಬುಹಣ್ಣು – 2, ಸಕ್ಕರೆ – 1/2 ಕಪ್‌, ಕೋವಾ – 200 ಗ್ರಾಂ, ಏಲಕ್ಕಿಪುಡಿ – 1/2 ಟೀ ಚಮಚ, ಮೈದಾಹಿಟ್ಟು – 250 ಗ್ರಾಂ, ನೀರು– ಬೇಕಾದಷ್ಟು, ಅರಿಸಿನ ಪುಡಿ – 1/4 ಟೀ ಚಮಚ, ತುಪ್ಪ –2 ಟೀ ಚಮಚ, ಉಪ್ಪು – 1/4 ಟೀ ಚಮಚ, ಹೋಳಿಗೆ ಬೇಯಿಸಲು ತುಪ್ಪ ಅಥವಾ ಎಣ್ಣೆ.

ತಯಾರಿಸುವ ವಿಧಾನ: ಹೂರಣ ತಯಾರಿಸಲು: ಸೇಬುಹಣ್ಣನ್ನು ತುರಿದಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಬಿಸಿಯಾದ ತುಪ್ಪಕ್ಕೆ ಸೇಬು ತುರಿ ಸೇರಿಸಿ ಬಾಡಿಸಿಕೊಳ್ಳಿ. ನಂತರ ಸಕ್ಕರೆ ಸೇರಿಸಿ. ಸಕ್ಕರೆ ಕರಗಿ ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿ ಸೇರಿಸಿ. ಪುಡಿ ಮಾಡಿಕೊಂಡ ಕೋವಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಗಟ್ಟಿಯಾಗುತ್ತಾ ಉಂಡೆ ಮಾಡುವ ಹದ ಬಂದಾಗ ಒಲೆಯಿಂದ ಇಳಿಸಿ, ತಟ್ಟೆಗೆ ಹಾಕಿ ಆರಲು ಬಿಡಿ. ಆರಿದ ನಂತರ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿಡಿ.

ಕಣಕ ತಯಾರಿಸುವುದು: ಒಂದು ಬೌಲ್‌ನಲ್ಲಿ ಮೈದಾಹಿಟ್ಟನ್ನು ಹಾಕಿ ಅದಕ್ಕೆ ಅರಿಸಿನ, ‌ಒಂದು ಟೀ ಚಮಚ ತುಪ್ಪ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿಗಿಂತಲೂ ಮೃದುವಾಗಿ ಕಲೆಸಿಕೊಳ್ಳಿ. ನಂತರ ಕಲೆಸಿದ ಹಿಟ್ಟಿನ ಸುತ್ತಲೂ ಒಂದು ಟೀ ಚಮಚ ತುಪ್ಪವನ್ನು ಸವರಿ ಅದನ್ನು ಒಂದರಿಂದ ಎರಡು ಗಂಟೆಗಳ ಮುಚ್ಚಿಡಿ. ಈಗ ತಯಾರಿಸಿದ ಹೂರಣದ ಗಾತ್ರದಷ್ಟೇ ಕಣಕವನ್ನು ತೆಗೆದುಕೊಳ್ಳಿ. ಕಣಕವನ್ನು ಚಪ್ಪಟೆ ಮಾಡಿ ಅದರೊಳಗೆ ಹೂರಣವನ್ನು ಹಾಕಿ ಮುಚ್ಚಿ ಲಟ್ಟಿಸಿಕೊಳ್ಳಿ. ತವಾ ಬಿಸಿಯಾದ ಮೇಲೆ ತುಪ್ಪ ಅಥವಾ ಎಣ್ಣೆ ಸವರಿ ಹೋಳಿಗೆಯನ್ನು ಎರಡೂ ಕಡೆ ಬೇಯಿಸಿಕೊಳ್ಳಿ. ರುಚಿಕರವಾದ ಹೋಳಿಗೆಯನ್ನು ತುಪ್ಪ, ಹಾಲಿನೊಂದಿಗೆ ಸವಿಯಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು