ದೊಡ್ಡ ಬಾಣಲೆ, ಉದ್ದನೆ ಸ್ಟೀಲ್ ಚಮಚ, ಅವೆರಡರ ಜುಗಲ್ಬಂದಿಯಲ್ಲಿ ಹೊರಹೊಮ್ಮುವ ‘ಕಟ್ ಕಟ್’ ಸದ್ದು, ಆ ಸದ್ದು ಸಣ್ಣದಾಗುತ್ತಲೇ ಅಪ್ಪ– ಮಗನ ಜೋಡಿಯಲ್ಲಿ ತಯಾರಾಗಿ ಸುತ್ತಲಿನವರ ನಾಲಿಗೆಯ ರುಚಿಮೊಗ್ಗುಗಳನ್ನು ಅರಳಿಸುವ ರಸಪಾಕ... ಹೀಗೆ ಸಾಂಪ್ರದಾಯಿಕ ಹಾಗೂ ಮದುವೆಮನೆ ಶೈಲಿಯ ಅಡುಗೆಗಳನ್ನು ಹೇಳಿಕೊಡುತ್ತಾರೆ ರಂಗನಾಥ್ ಐಯ್ಯಂಗಾರ್ ಹಾಗೂ ವಿನಯ್ ಶ್ರೀನಿವಾಸ್ದ್ವಯರು.

ಮದುವೆ ಮನೆಯಲ್ಲಿ ಮಾಡುವ ಅಡುಗೆಯ ಗಮ್ಮತ್ತೇ ಬೇರೆ. ಮನೆಯಲ್ಲಿ ಎಷ್ಟೇ ಪ್ರಯತ್ನಿಸಿದರೂ ಆ ರುಚಿ ಬಾರದು. ಅಲ್ಲಿ ತಯಾರಾಗುವ ಬೆಳಗಿನ ತಿಂಡಿಗಳು, ಕೋಸಂಬರಿ, ಪಲ್ಯ, ಸಿಹಿ ಖಾದ್ಯಗಳು, ಮಜ್ಜಿಗೆಹುಳಿ, ರಸಂ ಹೀಗೆ... ಇವುಗಳ ಸ್ವಾದ ಮನೆಯ ಪುಟ್ಟ ಅಡುಗೆ ಕೋಣೆಯಲ್ಲಿ ಸಿಗುವುದು ದುರ್ಲಭ. ದೊಡ್ಡ ಪ್ರಮಾಣದಲ್ಲಿ ಮಾಡುವುದರಿಂದ ಅಲ್ಲಿ ರುಚಿ ಹೆಚ್ಚು ಎಂದು ಭಾವಿಸುವವರೇ ಹೆಚ್ಚು ಮಂದಿ. ಈ ಮಾತನ್ನು ಅಲ್ಲಗಳೆಯುವ ಅಪ್ಪ– ಮಗ, ಅದೇ ಸ್ವಾದವನ್ನು ಸಣ್ಣ ಪ್ರಮಾಣದಲ್ಲೂ ಮಾಡಿ ತೋರಿಸಿ ಖಾತರಿಪಡಿಸುತ್ತಾರೆ.

ಬೆಂಗಳೂರಿನಲ್ಲಿರುವ ಆರ್ವಿಆರ್ ಕೇಟರಿಂಗ್ ಮೂಲಕ ಸಮಾರಂಭಗಳಲ್ಲಿ ತಮ್ಮ ಕೈರುಚಿ ಉಣಬಡಿಸುವ ರಂಗನಾಥ್ ಅವರಿಗೆ ಮಗ ವಿನಯ್ ಸಾಥ್ ನೀಡುತ್ತಿದ್ದಾರೆ. ‘ಕಲರ್ ಟಾಕೀಸ್’ ಯೂಟ್ಯೂಬ್ ಚಾನೆಲ್ ಮೂಲಕವೂ ತಿನಿಸುಪ್ರಿಯರಿಗೆ ತಮ್ಮ ಪಾಕ ಪ್ರಾವೀಣ್ಯದ ರುಚಿ ಹತ್ತಿಸಿದ್ದಾರೆ. ಬ್ರಾಹ್ಮಣ ಶೈಲಿಯ ಸಾಂಪ್ರದಾಯಿಕ ಅಡುಗೆಗಳು, ದೊಡ್ಡ ಸಮಾರಂಭಗಳಲ್ಲಿ ಮಾಡುವ ಅಡುಗೆಗಳ ಗುಟ್ಟುಗಳನ್ನು ಸರಳ ವಿಧಾನದಲ್ಲಿ ನಮ್ಮ ಮುಂದೆ ಬಿಚ್ಚಿಡುತ್ತಾರೆ. ನಾಲ್ಕೈದು ಸಾವಿರ ಜನರಿಗಾಗುವಂತೆ ತಯಾರಿಸುವ ಅಡುಗೆಗಳನ್ನು ಕೇವಲ ಇಬ್ಬರು– ಮೂವರಿಗಾಗುವಷ್ಟು ಅಳತೆಯಲ್ಲಿ ಹೇಳಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವ ಈ ಜೋಡಿಯ ಅಡುಗೆ ತಯಾರಿ ಒಂದು ರೀತಿ ಜುಗಲ್ಬಂದಿಯಂತೆ. ನಗುಮೊಗದಿಂದಲೇ ಬಹುತೇಕರನ್ನು ಸೆಳೆಯುವ ವಿನಯ್ ತಮ್ಮ ಅಜ್ಜಿ, ಅಪ್ಪ, ಅಮ್ಮನಿಂದ ಕಲಿತು, ಪ್ರಯೋಗಿಸಿದ ಪಾಕಗಳೂ ಸೇರಿದಂತೆ ಈವರೆಗೆ 600ಕ್ಕೂ ಹೆಚ್ಚು ಖಾದ್ಯಗಳನ್ನು ಖಾಸಗಿ ವಾಹಿನಿಗಳಲ್ಲಿ, ಯೂಟ್ಯೂಬ್ ಅಂಗಳದಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಬಿಗುಮಾನವಿಲ್ಲದೆ ಸ್ನೇಹಿತರಂತೆ ಅಕ್ಕಪಕ್ಕ ಕುಳಿತು, ಪರಸ್ಪರ ಮೆಚ್ಚುಗೆ ಸೂಚಿಸುತ್ತಾ ಅವರು ಹೇಳಿಕೊಟ್ಟಿರುವ ಕೋಡುಬಳೆ ರೆಸಿಪಿಯಂತೂ ಬಹುತೇಕರ ಮನೆಮಾತಾಗಿದೆ. ಎಷ್ಟೇ ಸಣ್ಣ ಪ್ರಮಾಣದ ಅಡುಗೆಯಾದರೂ ಅವರು ಬಳಸುವ ದೊಡ್ಡ ಬಾಣಲೆ ಅವರ ಅಡುಗೆಮನೆಗೊಂದು ಕಲಶವಿದ್ದಂತೆ. ವೀಕ್ಷಕ ವಲಯದಿಂದ ಆ ಬಾಣಲೆಗೂ ಮೆಚ್ಚುಗೆ, ಪ್ರತಿಕ್ರಿಯೆಗಳು ಬಂದಿವೆ.

ಯಾವ ಅಡುಗೆಯನ್ನಾದರೂ ಸರಿ ಮನಸಾರೆ ಮಾಡಿದರೆ ಅದು ಖಂಡಿತಾ ರುಚಿಯಾಗಿ ಬರುತ್ತದೆ. ಕರ್ನಾಟಕದ ಎಲ್ಲ ಖಾದ್ಯಗಳೂ ‘ಕಲೆ’ ಇದ್ದಂತೆ. ಕಲೆಯನ್ನು ಒಲಿಸಿಕೊಳ್ಳಲು ಹೇಗೆ ಶ್ರದ್ಧೆ ಅಗತ್ಯವೋ ಹಾಗೇ ನಮ್ಮ ಸಾಂಪ್ರದಾಯಿಕ ಖಾದ್ಯಗಳು ಕರಗತವಾಗಲೂ ಶ್ರದ್ಧೆ ಇರಬೇಕು.
– ವಿನಯ್ ಶ್ರೀನಿವಾಸ್ ಕೆ.ಆರ್.

ಮೇಲುಕೋಟೆ ಪುಳಿಯೋಗರೆ ಪುಡಿ, ಶಾವಿಗೆ ಕೇಸರಿಬಾತ್, ಬೂದುಗುಂಬಳಕಾಯಿ ಹಲ್ವಾ, ವಿವಿಧ ಬಗೆಯ ಮಜ್ಜಿಗೆಹುಳಿ, ಹುಳಿದೊವ್ವೆ, ಕಜ್ಜಾಯ, ಮೋತಿಚೂರು ಲಡ್ಡು, ಚಿರೋಟಿ, ಶಾವಿಗೆ ಇಡ್ಲಿ, ದೇವಸ್ಥಾನ ಶೈಲಿಯ ಸಾಂಬಾರ್, ರಸಮಲೈ, ಜಿಲೇಬಿ ರಬ್ಡಿ, ಬಾದುಷಾ ಹೀಗೆ ಅವರ ಪಾಕ ವೈವಿಧ್ಯದ ಪಾಠಗಳ ಪಟ್ಟಿ ಬೆಳೆಯುತ್ತದೆ.

ಕೇಳಿದ್ದೀರಾ ‘ಕತುಹಾಸ’?

ಕ– ಕಡಲೆಹಿಟ್ಟು ತು– ತುಪ್ಪ ಹಾ– ಹಾಲು ಸ– ಸಕ್ಕರೆ... ಕತುಹಾಸ ಎಂಬ ಸಿಹಿ ಖಾದ್ಯದ ವಿಸ್ತೃತ ರೂಪ ಇದು! ಈ ಖಾದ್ಯ ವಿನಯ್ ಅವರ ಮುತ್ತಜ್ಜಿ ಕಾಲದ್ದಂತೆ. ಹಳೆ ಪುಸ್ತಕದಲ್ಲಿ ಬರೆದಿಟ್ಟಿದ್ದನ್ನು ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಏನೆಲ್ಲ ಬೇಕು?

ಒಂದು ಕಪ್ ಕಡಲೆಹಿಟ್ಟು ಎರಡು ಕಪ್ ತುಪ್ಪ ಮೂರು ಕಪ್ ಹಾಲು ನಾಲ್ಕು ಕಪ್ ಸಕ್ಕರೆ (ಸಕ್ಕರೆ ಬದಲು ಬೆಲ್ಲವನ್ನೂ ಬಳಸಬಹುದು)

ಹೀಗೆ ಮಾಡಿ

ತುಪ್ಪವನ್ನು ಬಾಣಲೆಗೆ ಹಾಕಬೇಕು. ಅದಕ್ಕೆ ಕಡಲೆಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ನಂತರ ಹಾಲನ್ನು ಹಾಕಿ ಬಳಿಕ ಸಕ್ಕರೆ ಸೇರಿಸಿ ಮಿಶ್ರಣ ಮಾಡಿಕೊಂಡು ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಿರಬೇಕು. 15– 20 ನಿಮಿಷ ಅದು ಕುದಿದು ಕೋವಾ ಹದಕ್ಕೆ ಬರುತ್ತದೆ. ಆಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟು ಮಾಡಿಕೊಳ್ಳಬೇಕು. ಸ್ವಲ್ಪ ತಣಿದಾದ ಬಳಿಕ ಬೇಕಾದ ಶೈಲಿಯಲ್ಲಿ ಕತ್ತರಿಸಿದರೆ ‘ಕತುಹಾಸ’ ಸವಿಯಲು ಸಿದ್ಧ.

ವಿನಯ್ ಟಿಪ್ಸ್

ಮಜ್ಜಿಗೆಹುಳಿ ಮಂದವಾಗಿ ಬರಲು ತೊಗರಿಬೇಳೆ ಹಾಗೂ ಅದರ ಅರ್ಧದಷ್ಟು ಕಡಲೆಬೇಳೆಯನ್ನು ಮಸಾಲೆಯೊಂದಿಗೆ ರುಬ್ಬಿಕೊಳ್ಳಬೇಕು.

ಬಾದುಷಾ ಮಾಡುವಾಗ ಅದು ಕ್ರಿಸ್ಪಿ ಹಾಗೂ ಮೃದು ಆಗಲು ಸೋಡಾ ಅಥವಾ ಡಾಲ್ಡಾ ಬದಲು ತುಪ್ಪ ಬಳಸಿ.

ರಸಂ ಮಾಡುವಾಗ ಮಸಾಲೆ ಪದಾರ್ಥಗಳನ್ನು ಹಸಿಯಾಗಿ ಬಳಸುವ ಬದಲು ಹುರಿದು ರುಬ್ಬಿಕೊಂಡರೆ ಎದೆ ಉರಿ ಬಾರದು.

ಮಜ್ಜಿಗೆಹುಳಿ ನಾಲ್ಕೈದು ಗಂಟೆ ಕಾಲ ಹುಳಿ ಬಾರದೇ ಇರಬೇಕೆಂದರೆ ಸ್ವಲ್ಪ ಬೆಲ್ಲ ಹಾಕಬೇಕು.

ಮಸಾಲೆದೋಸೆ ಸ್ವಾದ ಹೆಚ್ಚಲು ಕ್ರಿಸ್ಪಿ ಹಾಗೂ ಮೃದುವಾಗಲು ದೋಸೆ ಅಕ್ಕಿ ಹಾಗೂ ಕೆಂಪಕ್ಕಿಯನ್ನು 50–50 ಅಳತೆಯಲ್ಲಿ ಬಳಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.