ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣದ ಬಿಆರ್‌ ಕೊಪ್ಪಲು ಜೈಭುವನೇಶ್ವರಿ ಮಿಲ್ಟ್ರಿ ಹೋಟೆಲ್ ಜಗದ್ವಿಖ್ಯಾತ!

Last Updated 16 ಅಕ್ಟೋಬರ್ 2020, 2:54 IST
ಅಕ್ಷರ ಗಾತ್ರ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಓಡಾಡುವ ಮಾಂಸಾಹಾರಪ್ರಿಯರ ಪೈಕಿ ಶ್ರೀರಂಗಪಟ್ಟಣ ಸಮೀಪದ ಬಾಬುರಾಯನಕೊಪ್ಪಲು ಬಾಡೂಟ ಸವಿಯದೇ ಇರುವವರು ವಿರಳ. ಈ ಊರಿನಲ್ಲಿ ನಾಲ್ಕಾರು ಮಾಂಸಾಹಾರಿ ಹೋಟೆಲ್‌ಗಳು ಇದ್ದರೂ ಸಾಧಾರಣ ಕಲ್ನಾರ್ ಸೀಟಿನ ‘ಜೈ ಭುವನೇಶ್ವರಿ ಮಿಲ್ಟ್ರಿ ಹೋಟೆಲ್’ನ ಖ್ಯಾತಿ ವಿದೇಶದವರೆಗೂ ಹಬ್ಬಿದೆ.

ಸಾಧಾರಣ ಎನಿಸುವ ಈ ಹಳ್ಳಿಹೋಟೆಲ್‌ನಲ್ಲಿ ಅಪ್ಪಟ ದೇಸಿ ರುಚಿಯ ಬಗೆ ಬಗೆ ಮಾಂಸದ ತಿನಿಸುಗಳು ಸಿಗುತ್ತವೆ. ತಲೆಮಾಂಸ, ಕಾಲು ಸೂಪ್, ಬೋಟಿ, ಕೈಮಾ, ನಾಟಿಕೋಳಿ ಮಾಂಸ, ಬ್ರೈನ್, ಮಟನ್ ಚಾಪ್ಸ್, ಚಿಕನ್ ಪಲಾವ್, ಲಿವರ್ – ಹೀಗೆ ವೈವಿಧ್ಯಮಯ ಮಾಂಸಾಹಾರಕ್ಕೆ ಈ ಹೋಟೆಲ್ ಹೆಸರುವಾಸಿ. ಇಲ್ಲಿ ಬರುವವರಲ್ಲಿ ಬಹುತೇಕರು ಮಾಂಸದ ಸಾರಿನ ಜತೆಗೆ ರಾಗಿಮುದ್ದೆ ತಿಂದೇ ಹೋಗುತ್ತಾರೆ.

ಬೆಳಿಗ್ಗೆ ಎಂಟಕ್ಕೆ ಬಂದರೆ ಹಬೆಯಾಡುವ ಕಾಲುಸೂಪ್ ಮತ್ತು ತಟ್ಟೆ ಇಡ್ಲಿ ರೆಡಿ ಇರುತ್ತದೆ. ವಾರದ ಎಲ್ಲ ದಿನವೂ ಈ ಹೋಟೆಲ್‌ನಲ್ಲಿ ಮಾಂಸದೂಟ ಸಿಗುತ್ತದೆ. ಭಾನುವಾರ ಗ್ರಾಹಕರು ಕಾಯಬೇಕಾದ ಸ್ಥಿತಿ. ನಗರವಾಸಿಗಳು ಈ ಹೋಟೆಲ್‌ಗೆ ಕುಟುಂಬ ಸಹಿತ ಬಂದು ತಮಗೆ ಇಷ್ಟವಾದ ಬಾಡೂಟವನ್ನು ಸವಿಯುತ್ತಾರೆ.

ಬಾಬುರಾಯನಕೊಪ್ಪಲು ಗ್ರಾಮದವರೇ ಆದ ಸಣ್ಣೇಗೌಡ 40 ವರ್ಷಗಳ ಹಿಂದೆ ಆರಂಭಿಸಿದ ಜೈ ಭುವನೇಶ್ವರಿ ಮಿಲ್ಟ್ರಿ ಹೋಟೆಲ್ ಮೊದಲು ಗುಡಿಸಲಿನಲ್ಲಿ ನಡೆಯುತ್ತಿತ್ತು. ಗೌಡರ ಮಕ್ಕಳು ಹೋಟೆಲ್‌ ಉದ್ಯಮಕ್ಕೆ ಕೈ ಜೋಡಿಸಿದ ಬಳಿಕಹುಲ್ಲಿನ ಸೂರಿನ ಜಾಗದಲ್ಲಿ ಷೀಟುಗಳು ಬಂದಿರುವುದು ಬಿಟ್ಟರೆ ಬೇರೇನೂ ಬದಲಾಗಿಲ್ಲ. ಇಂದಿಗೂ ಸೌದೆ ಬಳಸಿ ಮಣ್ಣಿನ ಒಲೆಯಲ್ಲಿ ಮಾಂಸದ ಅಡುಗೆ ತಯಾರಿಸುವುದು ಈ ಹೋಟೆಲ್ ವಿಶೇಷ.

‘ನಮ್ಮ ಹೋಟೆಲ್‌ನಲ್ಲಿ ಮಾಂಸ, ಮಸಾಲೆ ಎಲ್ಲವೂ ತಾಜಾ ಆಗಿರುವುದನ್ನೇ ಬಳಸುತ್ತೇವೆ. ಸ್ಥಳೀಯವಾಗಿ ಸಿಗುವ ಕುರಿ–ಮೇಕೆಗಳ ಮಾಂಸ ತರುತ್ತೇವೆ. ಒಮ್ಮೆ ಇಲ್ಲಿ ಬಂದು ಉಂಡುಹೋದವರು ಮತ್ತೆ ಬರುವಾಗ ಸ್ನೇಹಿತರು, ಬಂಧುಗಳನ್ನೂ ಕರೆತರುತ್ತಾರೆ’ ಎಂದು 20 ವರ್ಷಗಳಿಂದ ಇಲ್ಲಿ ಅಡುಗೆ ತಯಾರಿಸುವ ರಾಜಣ್ಣ ಹೇಳುತ್ತಾರೆ.

ಜೈ ಭುವನೇಶ್ವರಿ ಹೋಟೆಲ್‌ನಲ್ಲಿ ರಾಜಕುಮಾರ್, ಪ್ರಭಾಕರ್, ಅಂಬರೀಷ್, ದರ್ಶನ್, ಸುದೀಪ್, ದೊಡ್ಡಣ್ಣ, ಅರ್ಜುನ್ ಸರ್ಜಾ, ವಿನೋದ್‌ರಾಜ್, ಲೀಲಾವತಿ, ಪ್ರೇಮಾ, ಶಶಿಕುಮಾರ್ ಸೇರಿದಂತೆ ಅನೇಕ ಕಲಾವಿದರು ಈ ಹೋಟೆಲ್‌ನಲ್ಲಿ ರುಚಿ ನೋಡಿದ್ದಾರೆ. ಎಸ್. ಬಂಗಾರಪ್ಪ, ಕುಮಾರ್ ಬಂಗಾರಪ್ಪನವರೂ ಇಲ್ಲಿ ಬಾಡೂಟ ಸವಿದಿದ್ದಾರೆ. ವಿದೇಶಿಯರೂ ಇಲ್ಲಿಗೆ ಬರುವುದುಂಟು.

‘ಇಸ್ತ್ರಿಎಲೆ ಮೇಲೆ ಕಡಿಮೆ ಬೆಲೆಗೆ, ಮನೆ ರುಚಿಯ ಮಾಂಸದ ಊಟ ಬಡಿಸುತ್ತಿದ್ದುದರಿಂದ ದೂರದ ಊರುಗಳಲ್ಲೂ ಈ ಹೋಟೆಲ್ ಪ್ರಸಿದ್ಧಿಯಾಗಿದೆ. ಪ್ರತಿ ದಿನ ನೂರಾರು ಮಂದಿ ಇಲ್ಲಿಗೆ ಬಂದು ತಮಗಿಷ್ಟವಾದ ಮಾಂಸದೂಟ ಕೇಳಿ ತಿಂದುಹೋಗುತ್ತಾರೆ’ ಎನ್ನುತ್ತಾರೆ ಹೋಟೆಲ್ ಸಂಸ್ಥಾಪಕ ಸಣ್ಣೇಗೌಡರ ಮಗ ಬಿ.ಎಸ್. ವಾಸು.

(2019ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT