ನಡುಗುವ ಚಳಿಯಲ್ಲಿ ಅಮ್ಮನ ಬೆಚ್ಚನೆ ಆರೈಕೆ

‘ಬಾರ್ ಬಾರ್ ಆತಿ ಹೈ ಮುಝ್ಕೋ ಮಧುರ್ ಯಾದ್ ಬಚ್ಪನ್ ತೇರಿ...’ ಹಿಂದಿ ಕವಯತ್ರಿ ಸುಭದ್ರಾ ಕುಮಾರಿ ಚೌಹಾನ್ ಅವರು ಬಾಲ್ಯದ ಕುರಿತು ಬರೆದ ಕವನದಷ್ಟೇ ಸುಂದರವಾಗಿತ್ತು ನನ್ನ ಬಾಲ್ಯ. ಅದರಲ್ಲೂ ಮಳೆಗಾಲದ ಬಾಲ್ಯದ ನೆನಪುಗಳಂತೂ ಮಧುರವಾಗಿತ್ತು.
ಶಾಲೆಯಿಂದ ವಾಪಸ್ ಬರುವಾಗ ಮಳೆಯಲ್ಲಿ ನೆನೆದರೆ ನಮ್ಮಮ್ಮ ಸೀಮೆಎಣ್ಣೆ ಸ್ಟೌ ಮೇಲೆ ಹಂಚಿಟ್ಟು ದಪ್ಪ ಬಟ್ಟೆ ಕಾಯಿಸಿ, ನಮ್ಮ ತಲೆಕೂದಲು ಒಣಗಿಸುವುದು, ನಮ್ಮ ಅಂಗೈ ಅಂಗಾಲುಗಳಿಗೆ ಶಾಖ ಕೊಡುವುದು ಮಾಡುತ್ತಿದ್ದರು. ಚಳಿಯಿಂದ ನಾವು ಸುಧಾರಿಸಿಕೊಂಡ ಮೇಲೆಯೇ ತಾಯಿಯ ಮುಖದಲ್ಲಿ ಸಮಾಧಾನದ ಭಾವ ಕಾಣುತ್ತಿತ್ತು.
ಕಾಲೇಜು ಮುಗಿಸಿ ಆಯುರ್ವೇದ ವೈದ್ಯಕೀಯ ಕಲಿಕೆಗಾಗಿ ಬಳ್ಳಾರಿಗೆ ಹೋದೆ. ಆ ಜಿಲ್ಲೆ ಬಿಸಿಲಿಗೆ ಪ್ರಸಿದ್ಧಿ. ಆದರೆ, ನಾನು ಹೋದ ಆ ವರ್ಷವೇ ಪ್ರವಾಸಕ್ಕೆ ಹೋಗುವ ಸಮಯದಲ್ಲಿ ಸುರಿದ ಮಳೆಯನ್ನು ಮರೆಯಲು ಸಾಧ್ಯವೇ ಇಲ್ಲ. ಅಂಥ ಮಳೆಯಲ್ಲೇ ನಾವು ಪ್ರವಾಸಕ್ಕೆ ಹೋದೆವು.
ನನ್ನ ಇಂಟರ್ನ್ಶಿಪ್ ಅವಧಿಯಲ್ಲಿ ಅಣ್ಣ ನನಗೆ ಸ್ಕೂಟಿ ಕೊಡಿಸಿದ್ದ. ಅದೇ ಸ್ಕೂಟಿಯಲ್ಲಿ ಅಣ್ಣನ ನಿಶ್ಚಿತಾರ್ಥಕ್ಕೆ ಬಟ್ಟೆ ಖರೀದಿಗಾಗಿ ನಾನು, ಅಮ್ಮ 40ಕಿ.ಮೀ. ದೂರದ ಊರಿಗೆ ಹೋಗಿ ವಾಪಸ್ ಬರುವಾಗ ಸುರಿದ ಗುಡುಗು–ಸಿಡಿಲಿನ ಮಳೆಯಂತೂ ಭಯ ಹುಟ್ಟಿಸಿತ್ತು. ಅಂಥಾ ಮಳೆಯಲ್ಲಿ ಅದು ಹೇಗೆ ಗಾಡಿ ಓಡಿಸಿದೆನೋ ಆ ದೇವರಿಗೇ ಗೊತ್ತು. ಅಂತೂ ಇಬ್ಬರೂ ಮನೆಗೆ ಸುರಕ್ಷಿತವಾಗಿ ತಲುಪಿದ್ದಾಯಿತು.
ಈಗ ಕಾಲ ಬದಲಾಗಿದೆ. ಮಳೆಯಲ್ಲಿ ನೆನೆಯುವ ಪ್ರಸಂಗವೇ ಇಲ್ಲ. ಈಗ ಕಾರಿಗೆ ಬಡ್ತಿ ಸಿಕ್ಕಿದೆ. ಮಳೆಯಿಂದ ಕೂದಲು ಒದ್ದೆಯಾದರೂ ಹೇರ್ ಡ್ರೈಯರ್ ಇದೆ. ಅಮ್ಮನ ಆ ಆರೈಕೆಯೂ, ಅಮ್ಮನೂ ಈಗಿಲ್ಲ.
-ಡಾ.ಅಪರ್ಣಾ ಬಿ.ವಿ., ಭಾಲ್ಕಿ, ಬೀದರ
***
ಹುಚ್ಚು ಮಳೆಯ ಸವಿ ನೆನಪು...
ಹಿಂದೆಲ್ಲಾ ಕೊಡಗಿನಲ್ಲಿ ಮಳೆಯೆಂದರೆ ಮೂರು ತಿಂಗಳು ಸಜೆ. ಶಾಲಾ ಮಕ್ಕಳಿಗೋ ಅಷ್ಟೇ ಸಮೃದ್ಧ ರಜೆ. ಆ ಅವಧಿಯಲ್ಲಿ ಜೀವನ ನಿರ್ವಹಣೆಗೆ ಬೇಕಾದ ದವಸ–ಧಾನ್ಯ, ಸೌದೆ, ಇತ್ಯಾದಿ ಅವಶ್ಯಕ ಸಾಮಾಗ್ರಿಗಳನ್ನು ಅವಧಿಗೆ ಮುನ್ನವೇ ಸಂಗ್ರಹಿಸಲಾಗುತ್ತಿತ್ತು.
ಅಡುಗೆ ಮನೆಗೆ ಗ್ಯಾಸ್ ಸಿಲಿಂಡರ್ ಒಲೆ ಅಂಬೆಗಾಲಿಡುತ್ತಿದ್ದ ಕಾಲವದು. ಹಾಗಾಗಿ, ಸೌದೆಯದ್ದೇ ಬೆಂಕಿಯ ಜಾಲ. ದಿನದ ಇಪ್ಪತ್ತನಾಲ್ಕು ಗಂಟೆಯೂ ಬಿಸಿನೀರು ಸಿಗುತ್ತಿತ್ತು. ಇದರ ಜತೆಗೆ ಆಗಾಗ ಕೊಡಗಿನ ಬಿಸಿಬಿಸಿ ಕಾಫಿ ಹೀರುತ್ತಿದ್ದರೆ ಕಾಲ ಸರಿದದ್ದೇ ಗೊತ್ತಾಗುತ್ತಿರಲಿಲ್ಲ.
ನಮ್ಮನೆಯಿಂದ ಕಿಲೋಮೀಟರ್ಗಳಷ್ಟು ದೂರದ ದಿಣ್ಣೆಯ ಮೇಲೆ ಶಾಲೆಯಿತ್ತು. ಅದನ್ನು ತಲುಪಲು ಹಲವು ಬತ್ತದ ಗದ್ದೆಗಳ ಬದುಗಳ ಮೇಲಿನ ಸರ್ಕಸ್ ರೀತಿಯಲ್ಲಿ ನಡೆದು ಕೊಂಡು ಹೋಗಬೇಕಾಗಿತ್ತು. ಅಪ್ಪಿತಪ್ಪಿ ಜಾರಿ ಕೆಳಗೆ ಬಿದ್ದರೆ ನಾಟಿ ಮಾಡಿದ ಗದ್ದೆಯೊಳಗೆ ಕೆಂಪುನೀರಿನಲ್ಲಿ ಪುಕ್ಕಟೆ ಜಲಕ್ರೀಡೆ ಆಡಬೇಕಾಗುತ್ತಿತ್ತು!
ಇಸ್ತ್ರೀ ಮಾಡಿದ ಸಮವಸ್ತ್ರದ ಮೇಲೆ ಕೆಸರು ರಾಚಿದ ಕಲೆ, ತಲೆ ಮೇಲೆ ಹಿಡಿದ ಕಪ್ಪು ಛತ್ರಿ. ಇದರ ನಡುವೆ ಜೋರಾಗಿ ಗಾಳಿ ಬೀಸಿದರೆ ನಮ್ಮ ಆಕಾರ ಚಿತ್ರವಿಚಿತ್ರವಾಗಿ ಬಿಡುತ್ತಿತ್ತು!.
ಇದೇ ಅವತಾರದಲ್ಲಿ ಶಾಲೆಗೆ ಹೋದರೆ, ದೈಹಿಕ ಶಿಕ್ಷಕರ ಹಸಿ ಬೆತ್ತದಿಂದ ಬೆನ್ನ ಮೇಲೆ ಮೂಡಿದ ಕೆಂಪು ಬಣ್ಣದ ಚಿತ್ತಾರದ ಗೆರೆಗಳು.
ಏಟಿಗೆ ಅಂಜಿ ಮನೆಗೆ ಮರಳಿದರೆ ಅಲ್ಲಿ ಅಪ್ಪನಿಂದ ಬೈಗುಳಗಳ ಸುರಿಮಳೆ. ಮನೆಯ ನಾಲ್ಕು ಗೋಡೆಗಳ ನಡುವೆ ನಾನು ಫುಟ್ಬಾಲ್ ಆಗಿರುತ್ತಿದ್ದೆ. ಇದರ ನಡುವೆಯೇ ಅಮ್ಮ–ಅಜ್ಜಿಯ ಪ್ರೀತಿಯ ಆಲಿಂಗನ, ಆರೈಕೆ, ಸಾಂತ್ವನ. ಹುಚ್ಚೆದ್ದು ಹುಯ್ಯುತ್ತಿದ್ದ ಮಳೆಗೆ ನನ್ನಿಂದ ಹಿಡಿಶಾಪ!. ಮಳೆಯೆಂದರೆ ಒಂದೆಡೆ ಸಂತಸ, ಮತ್ತೊಂದೆಡೆ ದುಃಖವಾಗುತ್ತಿತ್ತು ಆಗ.ಆದರೆ, ಅಂಥ ಮಳೆಯೇ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಇದೆಲ್ಲವೂ ನೆನಪಿನಲ್ಲುಳಿದ ಚಿತ್ತಾರ.
–ಎಸ್.ಎನ್. ನಟೇಶ್ ಬಾಬು, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.