ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ತೆರೆದು ನೋಡು ಒಂಟಿಯಲ್ಲ ನೀ...

Published 24 ಜುಲೈ 2023, 23:31 IST
Last Updated 24 ಜುಲೈ 2023, 23:31 IST
ಅಕ್ಷರ ಗಾತ್ರ

–ಸುಷ್ಮಾ ಸವಸುದ್ದಿ

ಜೀವನ ಒಂದು ಕಾಲಘಟ್ಟಕ್ಕೆ ತಲುಪಿದಾಗ, ಇದ್ದಕ್ಕಿದ್ದಂತೆ ಇಂತಹ ಒಂಟಿತನ ಆವರಿಸಿ ಜೀವನ ವ್ಯರ್ಥ ಅನ್ನಿಸುತ್ತದೆ. ಶಿಕ್ಷಣ, ವೃತ್ತಿ ಕಾರಣಕ್ಕೆ ದೂರದೂರಿಗೆ ಹೋಗಿ ನೆಲೆಸಿದವರಿಗೆ ಇದು ಪದೇ ಪದೇ ಅನುಭೂತಿಗೆ ಬರುತ್ತದೆ. ‘ಜೀವನಪೂರ್ತಿ ಜೊತೆಗಿರುವೆ’ ಎಂದು ನೂರಾರು ಆಣೆ, ಪ್ರಮಾಣ ಮಾಡಿದವರು ದೂರವಾದಾಗ, ಸಂತಸ- ನೋವುಗಳನ್ನು ಹಂಚಿಕೊಳ್ಳಲು ಯಾರೂ ಸೂಕ್ತ ವ್ಯಕ್ತಿಗಳು ಸಿಗದಿದ್ದಾಗ ಒಬ್ಬಂಟಿತನ ಕಾಡುತ್ತದೆ. ಜೀವನೋತ್ಸಾಹವನ್ನೆಲ್ಲ ನುಂಗಿ ಬಿಡುತ್ತದೆ. ಇಂತಹ ಖಿನ್ನತೆಗಳು ತೀರಾ ಅಪಾಯ. ಆತ್ಮಹತ್ಯೆಗೂ ಪ್ರಚೋದಿಸಬಹುದು.

ಈ ಒಂಟಿತನ ಎಂದರೆ, ‘ನಮಗಾಗಿ ನಮ್ಮವರೆಂದು ಯಾರೂ ಇಲ್ಲ ಎನ್ನುವುದಲ್ಲ. ಯಾರೂ ಇಲ್ಲ ಎಂಬ ಭಾವ ಮೂಡುವಂತದ್ದು’. ಸರಳವಾಗಿ ಹೇಳುವುದಾದರೆ, ಅತಿಯಾಗಿ ನಂಬಿದವರು ದೂರವಾಗುವುದು, ನಮ್ಮವರು ಎಂದುಕೊಂಡವರ ತಿರಸ್ಕಾರ ಅಥವಾ ಅವರ ನಡುವಳಿಕೆಯಲ್ಲಾದ ವ್ಯತ್ಯಾಸ ಇರಬಹುದು. ಯಾವ ವಯಸ್ಸಿನಲ್ಲಾದರೂ, ಜೀವನದ ಯಾವ ಹಂತದಲ್ಲಾದರೂ ಈ ತರದ ಒಂಟಿತನ ನುಸುಳಿ ಬಿಡಬಹುದು.

ಅಪ್ಪ–ಅಮ್ಮನ ಕೆಲಸದ ಮಧ್ಯ ನಿರ್ಲಕ್ಷಕ್ಕೊಳಗಾದ ಮಗು, ತನ್ನಲ್ಲಿರುವ ಯಾವುದೋ ಒಂದು ಕೊರತೆಯಿಂದ ಸಮಾಜ ತನ್ನನ್ನು ತಿರಸ್ಕರಿಸುತ್ತಿದೆ ಎಂಬ ಭಾವ. ಪ್ರೀತಿ ಪಾತ್ರರೊಬ್ಬರು ದೂರವಾದರು ಎಂಬ ನೋವು, ಸಂಗಾತಿಯನ್ನು ಕಳೆದುಕೊಂಡಾಗ, ಓದು– ದುಡಿಮೆಯ ನೆಪದಲ್ಲಿ ತಮ್ಮವರನ್ನು ಬಿಟ್ಟು ಬದುಕು ದೂಕುತಿರುವಾಗ, ಜೀವನದುದ್ದಕ್ಕೂ ಓಡಿಯೂ ಸೋಲುಂಡಾಗ, ಮಕ್ಕಳು ತಮ್ಮ ತಮ್ಮ ಜೀವನ ದಾರಿಯಲ್ಲಿ ಹೆತ್ತವರನ್ನು ಮರೆತು ಓಡುತ್ತಿರುವಾಗ ಇಳಿವಯಸ್ಸಿನ ಹೆತ್ತವರಲ್ಲಿ ಉಂಟಾಗುವ ಜಿಗುಪ್ಸೆ...ಹೀಗೆ ಅನೇಕ ಸಂಗತಿಗಳು ಒಂಟಿತನಕ್ಕೆ ದೂಡುತ್ತವೆ.

‘ನಮಗೆ ಯಾರೂ ಇಲ್ಲ ಅಥವಾ ನಾನು ಯಾರೊಂದಿಗೂ ಸೇರಲು ಅರ್ಹವಲ್ಲ’ ಎಂಬ ಭಾವ ಮೂಡಿದರಂತೂ ಪರಿಸ್ಥಿತಿ ಕೈಮೀರಿತೆಂದೇ ಅರ್ಥ. ಸುತ್ತಮುತ್ತಲಿನ ಪ್ರಕೃತಿ, ಆಗು–ಹೋಗುಗಳು ಕಣ್ಣಿಗೆ ಕಾಣುವುದೇ ಇಲ್ಲ. ಮನಸ್ಸು ಯಾರನ್ನೂ ಮಾತನಾಡಿಸಲು, ಇತರರೊಂದಿಗೆ ಬೆರೆಯಲು ಇಚ್ಛಿಸುವುದಿಲ್ಲ. ಒಬ್ಬರೇ ಕಳೆದು ಹೋದದ್ದನ್ನೇ ಕೆದರತೊಡಗಿದರೆ, ನೋವು ಗಾಢವಾಗುತ್ತದೆ ಹೊರತು ಯಾವ ಪ್ರಯೋಜನವೂ ಆಗುವುದಿಲ್ಲ.

ಹಾಗಿದ್ದರೆ, ಈ ಒಂಟಿತನ ಮೀರುವುದು ಹೇಗೆ?

ಏಕಾಂತಕ್ಕಿಂತ ಉತ್ತಮ ಸಂಗಾತಿ ಬೇಕೆ?

ಒಂಟಿತನವನ್ನು ಗೆಲ್ಲುವ ಉತ್ತಮ ದಾರಿಯೆಂದರೇ ಆ ಒಬ್ಬಂಟಿತನವನ್ನು ಏಕಾಂತವನ್ನಾಗಿ ಪರಿವರ್ತಿಸುವುದು. ಹೌದು ಏಕಾಂತ ಕೊಡುವ ಸುಖವನ್ನು, ಒಬ್ಬಂಟಿತನ ಕೊಡುವ ನೋವನ್ನು ಬೇರೆ ಯಾವುದು ನೀಡಲಾಗದು. ಏಕಾಂತ ಮತ್ತು ಒಂಟಿತನ ಎರಡರಲ್ಲೂ ಇರುವವರು ನಾವೊಬ್ಬರೇ ಆದರೂ ಅವುಗಳ ಭಾವ, ಪರಿಣಾಮ ಬೇರೆಯೇ..

ಒಂಟಿತನ ಖಿನ್ನತೆಯ ಪರಮಾವಧಿಯಾದರೇ ಏಕಾಂತ ಸ್ವಾತಂತ್ರ್ಯದ ಪರಮಾವಧಿ. ನಮ್ಮ ಸಾಂಗತ್ಯವನ್ನು ಸ್ವತಃ ನಾವೇ ಸಂಭ್ರಮಿಸಬೇಕು. ಅದಕ್ಕೆ ವಿವೇಕಾನಂದರು ಹೇಳಿದ್ದು: ‘ದಿನಕ್ಕೆ ಸ್ವಲ್ಪ ಹೊತ್ತು ಆದರೂ ನಿಮ್ಮೊಂದಿಗೆ ನೀವು ಮಾತನಾಡಿ. ಇಲ್ಲದಿದ್ದರೆ, ಜಗತ್ತಿನ ಅದ್ಭುತ ವ್ಯಕ್ತಿಯೊಂದಿಗಿನ ಸಂಪರ್ಕದಿಂದ ವಂಚಿತರಾಗುತ್ತಿರಿ’. ನಮ್ಮ ಚೆಂದದ ಕಲ್ಪನೆ, ನಮ್ಮನ್ನು ನಿಜವಾಗಿ ಬದುಕಿಸುವ ನಮ್ಮ ಕನಸುಗಳೊಂದಿಗೆ ಸ್ವಲ್ಪ ಹೊತ್ತು ಮಾತನಾಡಿ. ಆನಂದಿಸಿ.

ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ

ನಾವಿಂದು ಏನಾಗಿದ್ದೇವೋ ಅದರಲ್ಲಿ ನಮ್ಮ ಹವ್ಯಾಸಗಳ ಪಾಲಿದೆ. ನಮ್ಮ ಹವ್ಯಾಸಗಳು ನಮ್ಮನ್ನು ಪ್ರತಿಬಿಂಬಿಸುತ್ತವೆ ಎಂದರೇ ತಪ್ಪಾಗಲಾರದು. ಓದು, ಬರಹ, ಹಾಡು ಕೇಳುವುದು, ಕೈತೋಟ ಮಾಡುವುದು ಇಂತಹ ಸಕಾರಾತ್ಮಕ ಹವ್ಯಾಸಗಳು ಮನಸ್ಸಿಗೆ ಮುದ ನೀಡುತ್ತವೆಯಲ್ಲದೇ, ನಮ್ಮ ವ್ಯಕ್ತಿತ್ವ ವಿಕಸನಕ್ಕೂ ಉತ್ತಮ ದಾರಿ ಮಾಡಿಕೊಡುತ್ತವೆ. ಪುಸ್ತಕಕ್ಕಿಂತ ಮತ್ತೊಂದು ಉತ್ತಮ ಸಂಗಾತಿ ಇರಲು ಸಾಧ್ಯವಿಲ್ಲ. ಓದು ನಮ್ಮ ಒಂಟಿತನಕ್ಕೆ ಮದ್ದಾಗಬಹುದು. ಹಾಡಿನ ಯಾವುದೊ ಒಂದು ಸಾಲು ಆಪ್ತ ಎನ್ನಿಸಬಹುದು. ಓದಿದ ಕಥೆ, ಬಿಡಿಸಿದ ಚಿತ್ರ ನಮ್ಮೊಳಗೊಂದು ಹೊಸತನ ಹುಟ್ಟಿಸಬಹುದು. ಜೀವನುತ್ಸಾಹ ಚಿಗುರಬಹುದು.

ಪೆಟ್‌ಗಳಿಗೆ ಪೆಟ್‌ ಆಗಿ

ಕೆಲವರಿಗೆ ಸಾಕುಪ್ರಾಣಿಗಳು ತಮ್ಮ ಅಗತ್ಯವನ್ನು ಪೂರೈಸುವ ಜೀವಗಳಾದರೇ, ಅದೇಷ್ಟೊ ಜನರಿಗೆ ಅವು ಬದುಕಿನ ಭಾಗವಾಗಿ, ಅವರೆಲ್ಲ ಭಾವಗಳಲ್ಲಿ ಪಾಲುದಾರರದಾಗುವ ಒಡನಾಡಿಗಳೇ ಆಗಿರುತ್ತವೆ. ಬೆಕ್ಕು, ನಾಯಿ, ಹಸುಗಳಂತಹ ಸಾಕು ಪ್ರಾಣಿಗಳು ನೀಡುವ ನಿಷ್ಕಲ್ಮಶ, ಪ್ರತಿಫಲಾಪೇಕ್ಷೆ ಬಯಸದ ಪ್ರೀತಿ ನಮ್ಮನ್ನೆಂದೂ ಒಂಟಿತನಕ್ಕೆ ದೂಕಲಾರವು. ಮನೆಯಲ್ಲಿ ಒಂಟಿಯಾಗಿ ಇರುವವರು ಪೆಟ್‌ಗಳ ಪೆಟ್‌ ಆಗಿ, ಅವುಗಳ ಪ್ರೀತಿಗೆ ಮಾರುಹೋಗುವುದು ಉಚಿತ.

ಹಂಚಿ ಹಗುರಾಗಿ

ನಮ್ಮ ಖುಷಿ, ನೋವುಗಳನ್ನು ಕೇಳುವ, ಕೇಳಲು ಹಾತೊರೆಯುವ ಜೀವಗಳು ನಮ್ಮ ಕುಟುಂಬ, ಗೆಳೆಯರ ಬಳಗದಲ್ಲಿ ಇರುತ್ತವೆ. ನಾವೇ ನಮ್ಮ ಜಂಜಾಟ, ಒತ್ತಡ, ನೋವುಗಳ ಮಧ್ಯ ನಮಗರಿವಿಲ್ಲದೇ ಅವರನ್ನು ನಿರ್ಲಕ್ಷಿಸುತ್ತೇವೆ. ಅವರಿಗೆಲ್ಲ ಆಗಾಗ ಕರೆ ಮಾಡಿ ಮಾತನಾಡಿ, ಅವರ ಕುಶಲ ಕ್ಷೇಮವನ್ನೂ ವಿಚಾರಿಸಿ, ನಿಮ್ಮ ನಿತ್ಯದ ಆಗು–ಹೋಗುಗಳ ಕುರಿತು ಹೇಳುವುದು, ಹರಟುವುದು, ನೆನಪುಗಳ ಮೆಲುಕು ಹಾಕುತ್ತಿರಬೇಕು. ಇದರಿಂದ ನಮಗಾಗಿ ಮಿಡಿಯುವ ಜೀವಗಳೂ ಇವೆ ಎಂಬ ಭಾವ ನಮಗೆ ಹೊಸ ಚೈತನ್ಯ ತುಂಬುತ್ತದೆ.

‘ನೋವು, ಒತ್ತಡ, ಹಿಂಜರಿಕೆ, ಖಿನ್ನತೆಗಳು ಕಾಡುತ್ತಿದ್ದರೇ ಆತ್ಮೀಯರ ಹತ್ತಿರ ಹಂಚಿಕೊಳ್ಳುವುದು ಸೂಕ್ತ. ಇತರರಿಗೆ ಹೇಳಲು ಆಗದಿದ್ದಾಗ ಅಥವಾ ಹೇಳಿಕೊಳ್ಳಲು ಸೂಕ್ತ ಮನಸ್ಸು ಸಿಗದಿದ್ದಾಗ, ನಿಮ್ಮ ಭಾವನೆಗಳನ್ನೆಲ್ಲ ಬರೆದು ತೆಗೆಯಿರಿ. ಸಮಾಧಾನವಾದ ಬಳಿಕ ಬರೆದದ್ದನ್ನು ಹರಿದು ಎಸೆದುಬಿಡಿ. ಮನಸ್ಸಿನ ಭಾವಗಳು ಹಂಚಿ ಹೊರ ಹೋದಷ್ಟು ಮನಸ್ಸು ಹಗುರಾಗುವುದು’ ಎನ್ನುತ್ತಾರೆ ಮನೋವೈದ್ಯೆ ಲಕ್ಷ್ಮಿದೇವಿ.

ಮನುಷ್ಯ ಹುಟ್ಟ ಒಂಟಿ. ಬರುವಾಗಲೂ... ಹೋಗುವಾಗಲೂ... ಆದರೆ ಬಂದು ಹೋಗುವ ಮಧ್ಯ ಇರುವ ಈ ಬದುಕಿನಲ್ಲಿ ಮಾತ್ರ ಆತ ಈ ಒಂಟಿತನವನ್ನು ತಾಳಲಾರ. ಬರುವ ಮೊದಲಿನ ಕಥೆ, ಹೋದ ಮೇಲಿನ ಕಥೆ ನಮ್ಮ ಕಲ್ಪನೆ ಮತ್ತು ಜ್ಞಾನದ ವ್ಯಾಪ್ತಿಯನ್ನು ಮೀರಿದ್ದು. ಮಧ್ಯದ ಬದುಕು ಮಾತ್ರ ನಮ್ಮ ಕೈಯಲ್ಲಿರುವುದು. ಇದನ್ನೂ ಅವರಿಲ್ಲ, ಇವರಿಲ್ಲ ಎನ್ನುವ ನೆಪವೊಡ್ಡಿ ಹಾಳು ಮಾಡಿಕೊಳ್ಳುವುದು ಬೇಡ. ಮನದ ಕಣ್ತೆರೆದು ನೋಡಿದರೆ ಬೀಸುವ ತಂಗಾಳಿ, ಹಾಡುವ ಕೋಗಿಲೆ, ಸುರಿವ ಮಳೆ, ಸುಡುವ ಭಾಸ್ಕರ ಎಲ್ಲವೂ ನಿನ್ನ ಸಾಂಗತ್ಯಕ್ಕೆ ಹಾತೊರೆಯುತ್ತಿವೆ. ಕೈಚಾಚಿ ತಬ್ಬಿಕೊಳ್ಳಬೇಕಷ್ಟೇ. ಕಣ್ತೆರೆದು ನೋಡು ಒಂಟಿ ಅಲ್ಲ ನೀ ಪ್ರಕೃತಿಯೊಂದಿಗೆ ಜಂಟಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT