ಶುಕ್ರವಾರ, ಡಿಸೆಂಬರ್ 4, 2020
24 °C
ಇಂದು ಆಯುರ್ವೇದ ದಿನ

PV Web Exclusive| ಆಯುರ್ವೇದ: ಪ್ರಾಚೀನ ಭಾರತದ ಪರಿಪೂರ್ಣ ವೈದ್ಯ ವಿಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವನದಲ್ಲಿ ಆಹಾರ, ನೀರು, ನಿದ್ರೆ, ಬಟ್ಟೆ, ವಸತಿ ಪ್ರತಿಯೊಬ್ಬರಿಗೂ ಅನಿವಾರ್ಯ. ವಿದ್ಯೆ, ಕೀರ್ತಿ, ಯಶಸ್ಸು, ಹಣ, ಅಧಿಕಾರಗಳೆಲ್ಲವೂ ಮನುಷ್ಯನ ಬಯಕೆ. ಇವೆಲ್ಲವನ್ನು ಮೀರಿದ ಅಪೂರ್ವವಾದ ಯಶಸ್ಸನ್ನು ಗಳಿಸುವುದು ವ್ಯಕ್ತಿಯ ಗುರಿ. ಈ ಯಶಸ್ಸು ಸಾಧನೆಯ ಮೂಲ ಶರೀರ ‘ಶರೀರಂ ಆದ್ಯಂ ಖಲು ಧರ್ಮ ಸಾಧನಂ’. ಶರೀರ ಧರ್ಮ ಸಾಧನೆಗೆ ಇದೇ ಮೂಲತತ್ವ. ಇದಕ್ಕೆ ಬೇಕಾದದ್ದು ಶರೀರ ಮತ್ತು ಮನಸ್ಸಿನ ಪ್ರಾಕೃತಿಕ ಸಮನ್ವಯ. ಅದುವೇ ಆರೋಗ್ಯ.

ಆಯುರ್ವೇದವು ಆರೋಗ್ಯ ಪಾಲನೆ, ಪೋಷಣೆ, ರಕ್ಷಣೆಗಳನ್ನು ತನ್ನ ಉದಾತ್ತ ಧ್ಯೇಯವಾಗಿಟ್ಟುಕೊಂಡ ಪ್ರಾಚೀನ ಭಾರತದ ಪರಿಪೂರ್ಣ ವೈದ್ಯವಿಜ್ಞಾನ. ಆರೋಗ್ಯದ ಜೊತೆಗೆ ಬದುಕಿಗೊಂದು ದಿನಚರಿ, ವ್ಯಕ್ತಿತ್ವಕ್ಕೊಂದು ಸಂಸ್ಕಾರ, ಜೀವನಕ್ಕೊಂದು ಅರ್ಥ ನೀಡುವ ವಿಜ್ಞಾನ.

ಆಯುರ್ವೇದದ ಬೇರು ಹಳೆಯದಾದರೂ ಇದರ ಉಪಯೋಗ ಹೊಸ ಚಿಗುರಿನಂತೆ ನಿತ್ಯ ಪ್ರಸ್ತುತ. ಬದುಕಿನ ಬೆಳಗಿನಿಂದ ಹಿಡಿದು ಮೋಕ್ಷಪ್ರಾಪ್ತಿಯವರೆಗಿನ ಜೀವನದ ಪ್ರತಿಯೊಂದು ಹಂತಗಳನ್ನೂ, ಶರೀರ ಮತ್ತು ಮನಸ್ಸಿನ ಅಗತ್ಯಗಳನ್ನು ಕಾಲಕಾಲಕ್ಕೆ ಬೇಕಾದ ಆಹಾರ-ವಿಹಾರಗಳನ್ನು ತಿಳಿಸುವ ವೈಜ್ಞಾನಿಕ ಹೊತ್ತಗೆ.

‘ಯುಗೇ ಯುಗೇ ಧರ್ಮಪಾದಃಕ್ರಮೇಣ ಅನೇನಹೀಯತೇ| (ಚರಕಸಂಹಿತಾ)

ತ್ರೇತಾಯುಗದಿಂದ ಕಲಿಯುಗದವರೆಗೆ ಧರ್ಮವು ಕ್ಷೀಣಿಸುತ್ತಾ ರೋಗಕ್ಕೆ ನಾಂದಿಯಾಯಿತು. ಸತ್ಯಯುಗದ ಅಂತ್ಯದಲ್ಲಿ ಪ್ರಾರಂಭಗೊಂಡ ಲೋಭ, ತ್ರೇತಾಯುಗದಲ್ಲಿ ಲೋಭದಿಂದ ಉಂಟಾದ ಅಭಿದ್ರೋಹ, ತದನಂತರದಲ್ಲಿ ಕಾಣಿಸಿಕೊಂಡ ಕಾಮ, ಕ್ರೋಧ, ಮಾನ, ದ್ವೇಷ, ಶೋಕ, ಚಿಂತೆ, ಉದ್ವೇಗ ಇತ್ಯಾದಿಗಳಿಂದ ಧರ್ಮವು ಕುಂಠಿತಗೊಳ್ಳಲು ಆರಂಭಿಸಿತು. ದ್ವಾಪರದಲ್ಲಿ ಧರ್ಮವು ಮತ್ತಷ್ಟು ಕುಂದಿ, ಜ್ವರಾದಿ ರೋಗೋತ್ಪತ್ತಿಗೆ ಕಾರಣೀಭೂತವೆನಿಸಿತು. ಕಲಿಯುಗವು ರೋಗಗಳ ಉಲ್ಬಣಾವಸ್ಥೆಗೆ ಸಾಕ್ಷಿಯಾಯಿತು.

ಲೋಕದಲ್ಲಿ ಜನರು ಹಿತವಲ್ಲದ ಆಹಾರ ವಿಹಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಆಯುಷ್ಯವು ಕ್ಷೀಣವಾಗುವುದರೊಂದಿಗೆ ಆರೋಗ್ಯವೂ ಕ್ಷೀಣವಾಗಲು ಅವಕಾಶ ಮಾಡಿಕೊಟ್ಟು, ಅನೇಕ ರೋಗಗಳ ಉತ್ಪತ್ತಿಗೆ ನಾಂದಿ ಹಾಡಿದರು.
ಇವುಗಳು ಜನಸಾಮಾನ್ಯರಿಗಷ್ಟೇ ಸೀಮಿತಗೊಳ್ಳದೇ ಮಹರ್ಷಿಗಳ ತಪಸ್ಸು, ಉಪವಾಸ, ಅಧ್ಯಯನ, ಬ್ರಹ್ಮಚರ್ಯೆ, ವ್ರತ, ಆಯುಷ್ಯಗಳಿಗೆ ವಿಘ್ನವನ್ನುಂಟುಮಾಡಲು ಪ್ರಾರಂಭಿಸಿದವು. ರೋಗಕ್ಕೆ ನಮ್ಮಆರೋಗ್ಯ, ಶ್ರೇಯಸ್ಸು ಮಾತ್ರವಲ್ಲದೇ, ಜೀವಿತವನ್ನೂ ಅಪಹರಿಸುವ ಸಾಮರ್ಥ್ಯವಿದೆ ಎಂಬುದನ್ನು ಮನಗಂಡ ಋಷಿ ಮಹೋತ್ತಮರು ಹಿಮಾಲಯದ ತಪ್ಪಲಿನಲ್ಲಿ ಇದರ ಪರಿಹಾರದ ಬಗ್ಗೆ ವಿಮರ್ಶಿಸಿ ಆಚಾರ್ಯ ಭರದ್ವಾಜರನ್ನು ಇಂದ್ರನಲ್ಲಿಗೆ ಕಳುಹಿದಾಗ, ಇಂದ್ರನು ಶಾಶ್ವತವು, ಪುಣ್ಯತಮವೂ ಆದ ಆಯುರ್ವೇದ ಜ್ಞಾನವನ್ನು ಹೇತು(ಕಾರಣ), ಲಿಂಗ (ಲಕ್ಷಣ), ಹಾಗೂ ಔಷಧಗಳೆಂಬ ಮೂರು ಅಮೂಲ್ಯ ಸೂತ್ರಗಳಾಗಿ ವಿವರಿಸಿದನು. ಈ ತ್ರಿಸ್ಕಂಧಗಳನ್ನು ಕ್ಷಿಪ್ರವಾಗಿ ಅರ್ಥೈಸಿಕೊಂಡ ಭರದ್ವಾಜ ಮಹರ್ಷಿಗಳು ಸವಿಸ್ತಾರವಾಗಿ ಆತ್ರೇಯಾದಿ ಋಷಿಗಳಿಗೆ ಅರುಹಿದರು. ತನ್ಮೂಲಕ ವಿವಿಧ ಶಿಷ್ಯರು ಆಯುರ್ವೇದ ಜ್ಞಾನವನ್ನು ಪಡೆಯುವಂತಾಯಿತು ಎಂಬುದು ನಂಬಿಕೆ.

‘ಧರ್ಮಾರ್ಥಂ ನಅರ್ಥ ಕಾಮಾರ್ಥಂ ಆಯುರ್ವೇದೋ ಮಹರ್ಷಿಭಿಃ| ಪ್ರಕಾಶಿತೋ ಧರ್ಮ ಪರೈಃ ಇಚ್ಛದ್ಭಿಃ ಸ್ಥಾನಮಕ್ಷರಮ್’ (ಚರಕಸಂಹಿತಾ)

ಈ ರೀತಿ ಧರ್ಮವೇ ಪ್ರಧಾನವಾಗಿ ಮೋಕ್ಷ ಪ್ರಾಪ್ತಿಗಾಗಿ ಧರ್ಮಪರರಾದ ಮಹರ್ಷಿಗಳಿಂದ ಉಗಮವಾದ ವಿದ್ಯೆಯೇ ಆಯರ್ವೇದ. ಸತ್ಯಯುಗದಲ್ಲಿ ಒಂದು ವ್ಯಕ್ತಿಯ ಆಯುಷ್ಯವು 400 ವರ್ಷಗಳಾಗಿದ್ದವು. ಪ್ರತಿಯುಗದಲ್ಲೂ ನಾಲ್ಕನೇ ಒಂದಂಶ ಕಡಿಮೆಯಾಗುತ್ತಾ ಕಲಿಯುಗದಲ್ಲಿ ನೂರು ವರ್ಷಗಳಾಯಿತು. ಆಯುಷ್ಯದ ಬಗೆಗಿನ ಜ್ಞಾನ, ಅದರ ರಕ್ಷಣೆ ಮತ್ತು ಪಾಲನೆಗಾಗಿ ಜನ್ಮ ತಳೆದ ವಿದ್ಯೆಯೇ ಆಯುರ್ವೇದ. ಸುಶ್ರುತಾಚಾರ್ಯರು ಆಯುರ್ವೇದವನ್ನು ಈ ರೀತಿಯಾಗಿ ವ್ಯಾಖ್ಯಾನಿಸುತ್ತಾರೆ. ‘ಆಯುರಸ್ಮಿನ್ವಿದ್ಯತೇ, ಅನೇನ ವಾಆಯುರ್ವಿಂದಂತಿ ಇತಿ ಆಯುರ್ವೇದ:’ ಉತ್ತಮ ಆಯುವಿನ ಪ್ರಾಪ್ತಿಗಾಗಿ ಉಗಮಿಸಿದ ಆಯುರ್ವೇದವು ಅಷ್ಟ ಅಂಗಗಳನ್ನು ಹೊಂದಿದೆ. ಅವುಗಳೇ ‘ಕಾಯ ಬಾಲಗ್ರಹ ಊಧ್ರ್ವಾಂಗ ಶಲ್ಯದಂಷ್ಟ್ರಾ ಜರಾವೃಷಾನ್| ಅಷ್ಟೌ ಅಂಗಾನಿ...‘ (ಅಷ್ಟಾಂಗ ಹೃದಯ) ಕಾಯ ಚಿಕಿತ್ಸೆ, ಬಾಲ ರೋಗ ಚಿಕಿತ್ಸೆ, ಗ್ರಹರೋಗ ಚಿಕಿತ್ಸೆ, ಊಧ್ರ್ವಾಂಗ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ವಿಷ ಚಿಕಿತ್ಸೆ, ರಸಾಯನ ಹಾಗೂ ವಾಜೀಕರಣ ತಂತ್ರ. ಶಾರೀರಿಕ ಚಿಕಿತ್ಸೆಯಲ್ಲಿ ಚರಕ ಸಂಹಿತೆಯು ಪ್ರಧಾನವಾದರೆ, ಶಸ್ತ್ರಚಿಕಿತ್ಸೆಯಲ್ಲಿ ಸುಶ್ರುತ ಸಂಹಿತೆಯು ಪ್ರಾಧಾನ್ಯತೆಯನ್ನು ಪಡೆದಿದೆ. ಬಾಲರೋಗ (ಕೌಮಾರ ಭೃತ್ಯ) ದಲ್ಲಿ ಕಾಶ್ಯಪ ಸಂಹಿತೆಯು ಪ್ರಾಮುಖ್ಯವೆನಿಸಿದೆ.
ಸ್ವಾಸ್ಥ್ಯಮಯ ಬದುಕಿಗೆ ಅಧಿಕ ಒತ್ತು ಕೊಟ್ಟಿರುವ ಆಯುರ್ವೇದದಲ್ಲಿ ಆಚಾರ್ಯ ಚರಕರು ಶರೀರದ ಪ್ರಾಕೃತ ಕರ್ಮಗಳನ್ನು ಸುಸ್ಥಿತಿಯಲ್ಲಿಡುವ ಜೀವಧಾತುಗಳ ಸಾಮ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ.

‘ಸ್ವರವರ್ಣಯೋಗಃ, ಶರೀರೋಪಚಯಃ, ಬಲವೃದ್ಧಿಃ, ಅಭ್ಯವಹಾರ್ಯ ಅಭಿಲಾಷಃ, ರುಚಿರಾಹಾರ ಕಾಲೇ...” (ಚರಕಸಂಹಿತಾ) ಉತ್ತಮ ಸ್ವರ, ವರ್ಣ, ಮಾಂಸ ಇತ್ಯಾದಿ ಧಾತುಗಳ ದೃಢತೆ, ಪ್ರವರಬಲ, ಸಮಯಾನುಸಾರ ಆಹಾರ ಸೇವೆಯ ಇಚ್ಛೆ ಸೇವಿಸಿದ ಆಹಾರದ ಸರಿಯಾದ ಪಚನ ಕ್ರಿಯೆ, ಸುಖವಾದ ನಿದ್ರೆ, ಸುಖ ಸ್ವಪ್ನ, ಮಲಮೂತ್ರ, ವೀರ್ಯಾದಿ ವೇಗಗಳ ವಿಸರ್ಜನೆ, ಕೇವಲ ಶಾರೀರಿಕವಾಗಿ ಮಾತ್ರವಲ್ಲದೇ, ಮನಸ್ಸು, ಬುದ್ಧಿ, ಇಂದ್ರಿಯಗಳ ಸ್ವಾಸ್ಥ್ಯವನ್ನು ಹೊಂದಿರುವುದು ಧಾತುಗಳ ಸಮಾವಸ್ಥೆಯ ಲಕ್ಷಣವೆನಿಸಿದೆ.
ಸುಶ್ರುತಾಚಾರ್ಯರು ಸ್ವಸ್ಥ ಪುರುಷನ ಲಕ್ಷಣವನ್ನು ‘ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಃ| ಪ್ರಸನ್ನ ಆತ್ಮ ಇಂದ್ರಿಯಮನಾಃ ಸ್ವಸ್ಥ ಇತ್ಯಭಿದೀಯತೆ’ ಎಂದು ವಿವರಿಸುತ್ತಾರೆ. ವ್ಯಕ್ತಿಯ ಸ್ವಾಸ್ಥ್ಯವು ದೇಹದಲ್ಲಿರುವ ದೋಷ, ಜಾಠರಾಗ್ನಿ, ಧಾತು ಹಾಗೂ ಮಲಗಳ ಮೇಲೆ ಆಧರಿತವಾಗಿದ್ದು, ಅವುಗಳ ಸಾಮ್ಯಾವಸ್ಥೆ ಮತ್ತು ಆತ್ಮ, ಮನ ಹಾಗೂ ಇಂದ್ರಿಯಗಳ ಪ್ರಸನ್ನತೆಯನ್ನು ಸ್ವಾಸ್ಥ್ಯವೆಂದು ಬಣ್ಣಿಸಿದ್ದಾರೆ.

ಆಯುರ್ವೇದದಲ್ಲಿ ಅನಾರೋಗ್ಯದ ಕಾರಣವನ್ನು ವಿಶದವಾಗಿ ವಿವರಿಸಲಾಗಿದೆ. ರೇಷ್ಮೆ ಹುಳವು ತನ್ನ ಗೃಹ (ಕೋಶ)ವನ್ನು ಕಟ್ಟಿಕೊಳ್ಳುವ ಆಸೆಯಲ್ಲಿ ಹೆಣೆಯುವ ತಂತುಗಳು ಹೇಗೆ ಅದರ ನಾಶಕ್ಕೆ ಕಾರಣವಾಗುತ್ತವೆಯೋ, ಅಂತೆಯೇ ಮಾನವನಲ್ಲಿ ಹುದುಗಿರುವ ಆಸೆಗಳೂ ಕೂಡಾ. ‘ಆಸೆಯೇ ದುಃಖಕ್ಕೆ ಮೂಲ’ ಎಂಬ ನುಡಿಯಂತೆ, ಶಾರೀರಿಕ ಅಥವಾ ಮಾನಸಿಕ ದುಃಖವನ್ನು ಹೊತ್ತು ತರುವ ಸಾಮರ್ಥ್ಯವನ್ನು ಹೊಂದಿರುವ ಆಸೆಯ ಬೆನ್ನತ್ತಿ ಹೋದಲ್ಲಿ ದುಃಖ ನಿಶ್ಚಿತ ಎಂಬ ಎಚ್ಚರಿಕೆಯ ಕರೆಯನ್ನು ಆಯುರ್ವೇದವು ನೀಡಿದೆ. ವಿವಿಧ ಇಚ್ಛೆಗಳ ಮೋಹಕ್ಕೆ ಬಿದ್ದ ವ್ಯಕ್ತಿಯು ತನ್ನ ಆಹಾರ- ವಿಹಾರಗಳನ್ನು ಸರಿಯಾಗಿ ವಿಚಾರ ಮಾಡದೇ ಸೇವಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಾನೆ.

ಎಲ್ಲಾ ತರಹದ ವೇದನೆಗೆ ಮುಖ್ಯ ಕಾರಣವೆಂದರೆ ಧೀ(ಬುದ್ಧಿ), ಧೃತಿ (ಸ್ವನಿಯಂತ್ರಣ), ಸ್ಮರಣ ಶಕ್ತಿಯ ವಿನಾಶ ಹಾಗೂ ತನ್ಮೂಲಕ ತದ್ರಹಿತನಾಗಿ(ಧೀ, ಧೃತಿ, ಸ್ಮೃತಿ) ಅಶುಭ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು. ಇದನ್ನೇ ಆಯುರ್ವೇದದಲ್ಲಿ ಪ್ರಜ್ಞಾಪರಾಧ ಎಂದು ಸಾರಿದ್ದಾರೆ. ಅಕಲ್ಯಾಣಕಾರಕವೂ, ಅಶುಭವೂ ಎನಿಸಿರುವ ಕಾರ್ಯಗಳಲ್ಲಿ ಪ್ರವೃತ್ತರಾಗುವುದು ಪ್ರಜ್ಞಾಪರಾಧದ ಮುಖ್ಯ ಲಕ್ಷಣವಾಗಿದೆ. ಮಾತ್ರವಲ್ಲದೇ, ತನ್ನಸಾಮರ್ಥ್ಯವನ್ನು ಮೀರಿದ ಕೆಲಸಗಳಲ್ಲಿ ತೊಡಗುವಿಕೆ, ಅತಿಯಾದ ಸ್ತ್ರೀಸಂಗ, ಬಾರದೇ ಇರುವ ಇಂದ್ರಿಯ ವೇಗಗಳ ಪ್ರಚೋದನೆ, ಪ್ರವೃತ್ತ ವೇಗಗಳ ತಡೆಗಟ್ಟುವಿಕೆ, ಉತ್ತಮ ಸಂಸ್ಕಾರಗಳಾದ ಆಚಾರ, ವಿನಯ, ಪೂಜ್ಯರಿಗೆ, ಗುರು-ಹಿರಿಯರಿಗೆ ಗೌರವ ನಿಡುವುದು ಇತ್ಯಾದಿಗಳ ಕೊರತೆ, ಅಹಿತಕರವಾದ ಕರ್ಮಗಳಿಗೆ ಇಂದ್ರಿಯಗಳ ಪ್ರಚೋದನೆ, ಸದಾಚಾರ-ವಿಚಾರಗಳಿಂದ ದೂರ ಉಳಿಯುವಿಕೆ, ಮನೋ ಆಘಾತಕರ ವಿಷಯಗಳಾದ ಈರ್ಷ್ಯೆ, ಭಯ, ಕ್ರೊಧ, ಲೋಭ, ಮೋಹ, ಮದ, ಭ್ರಮೆ ಇತ್ಯಾದಿಗಳಿಂದ ಶರೀರದ ದೋಷಗಳಾದ ವಾತ, ಪಿತ್ತ, ಕಫಗಳೆಂಬ ಆಧಾರ ಸ್ತಂಭಗಳು, ಮನೋ ದೋಷಗಳಾದ ರಜಸ್ಸು ಮತ್ತು ತಮಸ್ಸು ಅಧಿಕಗೊಂಡು ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಸ್ವಾಸ್ಥ್ಯವನ್ನು ಕಳೆದುಕೊಂಡು ತನ್ಮೂಲಕ ಅನಾರೋಗ್ಯದ ಹಂತವನ್ನು ವ್ಯಕ್ತಿಯು ತಲುಪುತ್ತಾನೆ.

ಚರಕಸಂಹಿತೆಯು ‘ಬಲಾಧಿಷ್ಠಾನಮಾರೋಗ್ಯಮ್’, ಅಂದರೆ ಆರೋಗ್ಯವು ಬಲದ ಅಧೀನದಲ್ಲಿದ್ದಂತೆ. ಯಾವಾತನು ದೈಹಿಕ ಹಾಗೂ ಮಾನಸಿಕ ಬಲವನ್ನು ಹೊಂದಿರುತ್ತಾನೋ ಆತ ರೋಗವೆಂಬ ಪಾಶದಲ್ಲಿ ಬಂಧಿಯಾಗುವುದಿಲ್ಲ. ಶಾಸ್ತ್ರವು ಶಾರೀರಿಕ ಬಲವು ಕುಂದಿದಾಗ ಜ್ವರ, ವಾಂತಿ, ಅತಿಸಾರ, ಕುಷ್ಟ, ಉದರ, ಅನೇಕ ವಾತವ್ಯಾಧಿ, ಕಾಮಾಲೆ ಇತ್ಯಾದಿಗಳು ಹಾಗೂ ಮಾನಸಿಕ ಬಲದ ಕೊರತೆಯಿಂದ ಉನ್ಮಾದ, ಅಪಸ್ಮಾರ ಇತ್ಯಾದಿ ವ್ಯಾಧಿಗಳು ನಮ್ಮನ್ನು ಕಾಡುತ್ತವೆ ಎನ್ನುವ ಪರಿಕಲ್ಪನೆ ಮೂಡಿಸುತ್ತದೆ.

ಆಚಾರ್ಯ ವಾಗ್ಬಟರು ‘ಕಾಲಾರ್ಥ ಕರ್ಮಣಾಂಯೋಗೋಹೀನಮಿಥ್ಯ ಅತಿಮಾತ್ರಕಃ’ ಸಮ್ಯಗ್ಯೋಗಶ್ಚ ವಿಜ್ಞೇಯೋರೋಗಾರೋಗ್ಯೈಕ ಕಾರಣಮ್” ಎಂದು ರೋಗ, ಅರೋಗದ ಕಾರಣವನ್ನು ತಿಳಿಸಿ ಕೊಟ್ಟಿದ್ದಾರೆ. ಆಹಾರ-ವಿಹಾರ-ವಿಚಾರಗಳಲ್ಲಿ ಉಂಟಾಗುವ ಕೊರತೆಯು ರೋಗಗಳಿಗೆ ನಮ್ಮನ್ನು ಎಡೆಮಾಡಿಕೊಡುವಂತೆ, ಕಾಲದಲ್ಲಿ ಉಂಟಾಗುವ ವೈಪರೀತ್ಯವೂ ರೋಗಕ್ಕೆ ಕಾರಣವಾಗಬಲ್ಲದು ಎಂಬ ಮಹತ್ವದ ಅಂಶವನ್ನು ಆಯುರ್ವೇದವು ತಿಳಿಸಿದೆ. ಸೂರ್ಯನ ತಾಪಮಾನದಲ್ಲಿ ಆಗುವ ಬದಲಾವಣೆಗಳು, ವರ್ಷಧಾರೆಯಲ್ಲಿ ಉಂಟಾಗುವ ವ್ಯತ್ಯಯಗಳು, (ಬೇಸಿಗೆಯಲ್ಲಿ ಕಾಣ ಸಿಗುವ ಮಳೆ, ಚಳಿಗಾಲದಲ್ಲಿ ಅಧಿಕ ತಾಪಮಾನ ಇತ್ಯಾದಿ) ನಮ್ಮಲ್ಲಿ ಅನೇಕ ರೋಗಗಳನ್ನು ತಂದೊಡ್ಡಬಲ್ಲದು.

‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಮ್ ಆತುರಸ್ಯ ವಿಕಾರ ಪ್ರಶಮನಂಚ’ (ಚರಕ ಸಂಹಿತಾ) ಎಂಬುದು ಆಯುರ್ವೇದದ ಮೂಲ ಉದ್ದೇಶವಾಗಿದೆ. ಆಯುರ್ವೇದ ಶಾಸ್ತ್ರವು ಕೇವಲ ರೋಗಗಳಿಗೆ ಚಿಕಿತ್ಸೆಯನ್ನು ತಿಳಿಸುವುದು ಮಾತ್ರವಲ್ಲ, ಸ್ವಸ್ಥ ನಸ್ವಾಸ್ಥ್ಯ ರಕ್ಷಣೆಯ ಮಾರ್ಗಗಳನ್ನು ವಿವರಿಸಿದೆ.

‘ಸ್ವಸ್ಥಸ್ಯ ಊರ್ಜಸ್ಕರಂಯತ್ತು ತದ್ವಂಷ್ಯಂತದ್ರಸಾಯನಮ್’ (ಚರಕ ಸಂಹಿತಾ) ಸ್ವಸ್ಥರಲ್ಲಿ ಸ್ವಾಸ್ಥ್ಯವನ್ನು ಹೆಚ್ಚಿಸುವ ಎರಡು ಪ್ರಮುಖ ವಿಧಾನಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಅವುಗಳೇ ವೃಷ್ಯ (ವಾಜೀಕರಣ) ಮತ್ತು ರಸಾಯನ ಚಿಕಿತ್ಸಾ ವಿಭಾಗಗಳಾಗಿವೆ. ಇವುಗಳು ಸ್ವಾಸ್ಥ್ಯರಕ್ಷಣೆಯಲ್ಲಿ ಪ್ರಾಧಾನ್ಯತೆಯನ್ನು ಹೊಂದಿದ್ದು, ರೋಗ ಶಮನದಲ್ಲಿಯೂ ಸಹಕಾರಿಯಾಗುತ್ತವೆ.

ಆಯುರ್ವೇದದ ಅಷ್ಟ ಅಂಗಗಳಲ್ಲಿ ಒಂದಾದ ವಾಜೀಕರಣ ತಂತ್ರವು ಉತ್ತಮ ಪೀಳಿಗೆಯನ್ನು ಸಮಾಜಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಶಾಸ್ತ್ರವು ಗರ್ಭವನ್ನು ಧರಿಸುವ ಮೊದಲು ಅನುಸರಿಸ ಬೇಕಾದ ಕ್ರಮಗಳಿಗೆ ಹೆಚ್ಚಿನ ಒತ್ತನ್ನು ಕೊಡುವುದರ ಮೂಲಕ ಆರೋಗ್ಯವಂತ ಶಿಶುವಿನ ಜನನಕ್ಕೆ ಅಡಿಪಾಯ ನೀಡುತ್ತದೆ. ಸ್ತ್ರೀಪುರುಷರ ಸಂಯೋಗಕ್ಕಿಂತ ಮೊದಲು ನಡೆಸುವ ವಮನ(ದೋಷಹರ ದ್ರವ್ಯಗಳನ್ನು ಬಳಸಿ ವಾಂತಿ ಮಾಡಿಸುವ ಚಿಕಿತ್ಸೆ), ವಿರೇಚನ ಇತ್ಯಾದಿ ಶೋಧನ ಕರ್ಮಗಳು ದೇಹವನ್ನು ಶುದ್ಧಿಗೊಳಿಸುವ ಮೂಲಕ ಆರೋಗ್ಯವಂತ ಗರ್ಭವನ್ನು ಧರಿಸಲು ಅಣಿಯಾಗಿಸುತ್ತದೆ. ಸ್ತ್ರೀಯರಲ್ಲಿ ಗರ್ಭಧಾರಣೆಯ ನಂತರ ಪ್ರತಿಯೊಂದು ಮಾಸದಲ್ಲೂ ಅನುಸರಿಸಲು ತಿಳಿಸಿರುವ ಗರ್ಭಿಣಿ ಪರಿಚಾರಣೆಯು ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದರೊಂದಿಗೆ, ಗರ್ಭದ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.

ಜನ್ಮದಾರಭ್ಯದಿಂದ ಪ್ರಾರಂಭಿಸುವ ರಸಾಯನ ಚಿಕಿತ್ಸೆಯು ಸ್ಮತಿ, ಮೇಧಾ (ಬುದ್ಧಿ) ಶಕ್ತಿ, ಆರೋಗ್ಯ, ತಾರುಣ್ಯ, ವರ್ಣ, ಪ್ರಭೆ, ದೈಹಿಕ ಹಾಗೂ ಇಂದ್ರಿಯ ಬಲ, ವಾಕ್ಚಾತುರ್ಯ, ಕಾಂತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಜರಾ (ವಾರ್ಧಕ್ಯ), ದೌರ್ಬಲ್ಯ, ರೋಗವನ್ನು ದೂರವಿರಿಸುವುದಲ್ಲದೇ, ಆರೋಗ್ಯವಂತ ದೀರ್ಘಾಯುಷ್ಯ ಪ್ರಾಪ್ತಿಗೆ ಬುನಾದಿಯಾಗಬಲ್ಲದು. ಮೇಧ್ಯ ರಸಾಯನ ದ್ರವ್ಯಗಳಾದ ಬ್ರಾಹ್ಮೀ, ಮಂಡೂಕಪರ್ಣೀ, ಶಂಖಪುಷ್ಪೀ ಇತ್ಯಾದಿಗಳು ಆಯುಪ್ರದಾಯಿನೀ ಮಾತ್ರವಲ್ಲದೇ ರೋಗನಾಶನವೂ ಆಗಿವೆ.
ಆಹಾರ ಅಥವಾ ಔಷಧಿರೂಪದಲ್ಲಿ ಸೇವಿಸುವ ರಸಾಯನ ದ್ರವ್ಯಗಳ ಹೊರತಾಗಿ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಆಚಾರ ರಸಾಯನವು ಪ್ರಧಾನವೆನಿಸಿದೆ. ಸತ್ಯದ ನುಡಿಯುವಿಕೆ, ಕ್ರೋಧ, ಮದ್ಯ-ಮೈಥುನಗಳಿಂದ ನಿವೃತ್ತಿ, ಅಹಿಂಸೆ, ಪ್ರಿಯವಾದ ನುಡಿಗಳನ್ನಾಡುವುದು, ನಿತ್ಯವೂ ಜಪ ಶೌಚಗಳಲ್ಲಿ ನಿರತರಾಗುವುದು, ದಾನ ಕರ್ಮ, ದೇವ, ಗೋ, ಬಾಹ್ಮಣ, ಆಚಾರ್ಯ, ಗುರು, ವೃದ್ಧರನ್ನು ಗೌರವಿಸುವುದು, ಪ್ರತಿದಿನ ಸರಿಯಾದ ನಿದ್ರೆ, ಕ್ಷೀರ, ಘೃತ ಸೇವನೆ ಇತ್ಯಾದಿಗಳು ಸಾತ್ವಿಕ ಗುಣೋದ್ದೀಪನವನ್ನು ಮಾಡುವ ಮೂಲಕ ನಮ್ಮನ್ನು ರಜಸ್ಸು ಹಾಗೂ ತಮಸ್ಸು ಎಂಬ ದೋಷಗಳಿಂದ ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಗುತ್ತದೆ.

ವ್ಯಕ್ತಿಯ ಆರೋಗ್ಯವನ್ನು ಕಾಪಾಡುವಲ್ಲಿ ಆಹಾರ, ನಿದ್ರಾ, ಬ್ರಹ್ಮಚರ್ಯ ಎಂಬ ಮೂರು ಉಪಸ್ತಂಭಗಳು ಪ್ರಮುಖ ಪಾತ್ರವನ್ನುವಹಿಸುತ್ತದೆ. ಆಹಾರವು ಕೇವಲ ಹಸಿವು ನೀಗಿಸಲು ಮತ್ತು ಶರೀರದ ಬೆಳವಣಿಗೆಗೆ ಮಾತ್ರ ಮೀಸಲಾಗದೇ ನಮ್ಮ ಆರೋಗ್ಯವನ್ನು ರಕ್ಷಿಸುವಲ್ಲಿ ಪಾತ್ರವನ್ನು ವಹಿಸುವುದರಿಂದ ಆಹಾರದ ವಿಧಗಳು, ತಯಾರಿಕಾ ವಿಧಾನ, ಸೇವನಾ ಕ್ರಮಗಳ ಕುರಿತು ತಿಳಿವಳಿಕೆಯನ್ನು ಹೊಂದುವುದು ಅತ್ಯಗತ್ಯ. ಚರಕ ಸಂಹಿತೆಯಲ್ಲಿ ನಿತ್ಯಸೇವನೆಗೆ ಯೋಗ್ಯ ದ್ರವ್ಯಗಳಾಗಿ ‘ಷಷ್ಟಿಕಾಶಾಲಿ ಮುದ್ಗಾಂಶ್ಚ ಸೈಂಧವಾಮಲ ಕೇಯವಾನ್| ಆಂತರೀಕ್ಷಂ ಪಯಃಸರ್ಪಿಃ ಜಾಂಗಲಮ್ಮಧುಚ ಅಭ್ಯಸೇತ್’ ಅರ್ಥಾತ್‌ ತ್ವಷ್ಟಿಕಾಶಾಲಿ, ಹೆಸರು ಕಾಳು, ಸೈಂಧವ ಲವಣ, ನೆಲ್ಲಿಕಾಯಿ, ಬಾರ್ಲಿ, ಅಂತರಿಕ್ಷ (ಮಳೆ) ಜಲ, ಹಾಲು, ತುಪ್ಪ, ಜೌಗುಪ್ರದೇಶದ ಮಾಂಸ ರಸ ಹಾಗೂ ಜೇನು ತುಪ್ಪವನ್ನು ವಿವರಿಸಲಾಗಿದೆ.

ಆಚಾರ್ಯ ವಾಗ್ಭಟರು ಉತ್ತಮ ಆರೋಗ್ಯಕ್ಕಾಗಿ ಮೂರು ಸರಳ ಸೂತ್ರಗಳನ್ನು ಅರುಹಿದ್ದಾರೆ. ‘ಹಿತಭುಕ್, ಮಿತಭುಕ್, ಋತುಭುಕ್’ ಅರ್ಥಾತ್‌ ತಮ್ಮ ಆಹಾರ ಸೇವನೆಯು ಹಿತವಾಗಿರಲಿ, ಮಿತವಾಗಿರಲಿ, ಋತುವಿಗನುಸಾರವಾಗಿರಲಿ ಎಂದು.
‘ನಗರೀ ನಗರಸ್ಯೈವರಥ ಸ್ಯೈವರಥೀಯಥಾ| ಸ್ವಶರೀರಸ್ಯ ಮೇಧಾವೀಕೃತ್ಯೇಷು ಅವಹಿತೋಭವೇತ್’(ಚರಕ ಸಂಹಿತಾ) ರಾಜ್ಯವನ್ನು ರಾಜನು ಕಾಪಾಡುವಂತೆ, ಸಾರಥಿಯು ರಥವನ್ನು ಪಾಲನೆ ಮಾಡುವಂತೆ ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಜೀವನ ಶೈಲಿಯ ಮೂಲಕ ತನ್ನ ಆರೋಗ್ಯವನ್ನು ರಕ್ಷಿಸುವುದು ಅತ್ಯಗತ್ಯ. ದಿನವೂ ಪಾಲಿಸ ಬೇಕಾದ ದಿನಚರ್ಯೆ, ಋತುವಿಗನುಸಾರವಾಗಿ ಅಳವಡಿಸಬೇಕಾದ ಋತುಚರ್ಯೆಗಳು ವ್ಯಕ್ತಿಯನ್ನು ಸ್ವಾಸ್ಥ್ಯದಿಂದಿರಿಸುತ್ತವೆ. ಋತುವಿಗೆ ತಕ್ಕಂತೆ ಶರೀರದಲ್ಲಿ ಉಂಟಾಗುವ ದೋಷಗಳ ವೈಪರೀತ್ಯಕ್ಕೆ ಅನುಸರಿಸುವ ವಮನ, ವಿರೇಚನ, ನಸ್ಯ ಇತ್ಯಾದಿ ಶೋಧನ ಕರ್ಮಗಳು, ಆಹಾರ-ವಿಹಾರಗಳು ನಮ್ಮ ಆರೋಗ್ಯವನ್ನು ಕಾಪಾಡಲು ಸಹಾಯಕವಾಗುತ್ತವೆ. ಋತುವಿಗನುಸಾರವಾದ ಜೀವನಶೈಲಿಯಿಂದ ಶೀತ, ಕೆಮ್ಮಿನಿಂದ ಹಿಡಿದು, ಕ್ಯಾನ್ಸರ್‌ನಂತಹ ಭಯಾನಕ ರೋಗಗಳು ಬರುವುದನ್ನು ತಡೆಗಟ್ಟಲು ಸಾಧ್ಯ.

ಆಯುರ್ವೇದದಲ್ಲಿ ರೋಗಗಳ ಪ್ರಶಮನಕ್ಕಾಗಿ ಚಿಕಿತ್ಸೆಯನ್ನು ದೈವವ್ಯಪಾಶ್ರಯ, ಯುಕ್ತಿವ್ಯಪಾಶ್ರಯ ಹಾಗೂ ಸತ್ವಾವ ಜಯ ವೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ದೈವವ್ಯಪಾಶ್ರಯವು ಮಂತ್ರ, ರತ್ನ ಅಥವಾ ಮಣಿ ಧಾರಣೆ, ಮಂಗಲಕರ್ಮ, ಬಲಿ, ಉಪಹಾರ, ಹೋಮ, ನಿಯಮ, ಪ್ರಾಯಶ್ಚಿತ್ತ, ಉಪವಾಸಾದಿಗಳನ್ನೊಳಗೊಂಡರೆ, ಯುಕ್ತಿವ್ಯಪಾಶ್ರಯವು ಆಹಾರ ಮತ್ತು ಔಷಧ ಪ್ರಯೋಗಗಳನ್ನು ತಿಳಿಸಿದೆ. ಸತ್ವಾವಜಯವೆಂದರೆ, ಜ್ಞಾನ, ವಿಜ್ಞಾನ, ಧೈರ್ಯ, ಸ್ಮೃತಿ, ಸಮಾಧಿಗಳ ಮೂಲಕ ಅಹಿತವಾದ ಇಂದ್ರಿಯಾರ್ಥಗಳ ಮೇಲೆ ಮನೋನಿಗ್ರಹವನ್ನು ಸಾಧಿಸುವುದು.
‘ಶೋಧನಂ ಶಮನಂ ಚೇತಿ ಸಮಾಸಾದೌಷಧಮ್ದ್ವಿಧಾ‘ (ಅಷ್ಥಾಂಗ ಹೃದಯ) ಶೋಧನ ಹಾಗೂ ಶಮನ ವೆಂಬ ಎರಡು ವಿಧಗಳು ಶಾರೀರಿಕ ರೋಗ ನಿವಾರಣೆಗೆ ಬಳಸುವ ವಿಧಾನಗಳಾಗಿವೆ. ಇವುಗಳಲ್ಲದೇ, ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರ ಕರ್ಮ, ಕ್ಷಾರ ಕರ್ಮ, ಅಗ್ನಿ ಕರ್ಮ, ರಕ್ತ ಮೋಕ್ಷಣಗಳೆಂಬ ವಿಧಾನಗಳು, ವ್ರಣ (ಗಾಯ)ಗಳಲ್ಲಿ ಅರವತ್ತು ಉಪಕ್ರಮಗಳನ್ನು ಬಳಸಲಾಗುತ್ತದೆ.
ಚರಕಾಚಾರ್ಯರು ‘ತ್ಯಾಗಃ ಸರ್ವೋಪಧಾನಾಂಚ ಸರ್ವದುಃಖ ವ್ಯಪೋಹಕಃ’  ಅರ್ಥಾತ್‌ ಸಕಲ ದುಃಖಗಳಿಗೆ ಮೂಲಕಾರಣವಾದಂತಹ ಉಪಧಾ ಅಥವಾ ತೃಷ್ಣಾ (ಆಸೆ) ತ್ಯಾಗವನ್ನು ಮಾಡುವುದರಿಂದ ಸರ್ವದುಃಖ ನಿವಾರಣೆಯು ಸಾಧ್ಯ ಎಂದಿದ್ದಾರೆ. ಅಲ್ಲದೇ ‘ಪ್ರವೃತ್ತಿಃ ದುಃಖಂ ನಿವೃತ್ತಿಃ ಸುಖಂ’ ದುಃಖ ಪ್ರವೃತ್ತಿಗೆ ಕಾರಣೀಭೂತವಾದ ಮೋಹ, ಇಚ್ಛೆ, ದ್ವೇಷದಿಂದ ನಿವೃತ್ತಿ ಹೊಂದುವುದರಿಂದ ಸುಖವು ಲಭಿಸುತ್ತದೆ ಎಂಬ ಸಂದೇಶವನ್ನು ಸಾರಿದ್ದಾರೆ.
‘ಆಯುಷ್ಯಂ ಭೋಜನಂ ಜೀರ್ಣೇವೇಗಾನಾಂಚ ಅವಿಧಾರಣಮ್| ಬ್ರಹ್ಮಚರ್ಯಂ ಅಹಿಂಸಾಚ ಸಾಹಸಾನಾಂಚ ವರ್ಜನಮ್’ ಮೊದಲು ಸೇವಿಸಿದ ಆಹಾರ ಜೀರ್ಣವಾದ ನಂತರ ಪುನಃ ಆಹಾರ ಸೇವನೆ, ಶರೀರದ ಪ್ರಾಕೃತಮಲ-ಮೂತ್ರಾದಿ ವೇಗಗಳನ್ನು ಸಮಯಾನುಸಾರ ಹೊರಹಾಕುವಿಕೆ, ಬ್ರಹ್ಮಚರ್ಯ ಪಾಲನೆ ಅರ್ಥಾತ್ ಇಂದ್ರಿಯ ಸಂಯಮ ಹಾಗೂ ಆರೋಗ್ಯ-ರೋಗದ ಪರಿಪೂರ್ಣ ಜ್ಞಾನ ಮತ್ತು ಶಾರೀರಿಕ ಬಲಕ್ಕೆ ಅನುಗುಣವಾಗಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಆರೋಗ್ಯ ರಕ್ಷಣೆಯ ಸರಳ ಸೂತ್ರವನ್ನು ಆಚಾರ್ಯ ಸುಶ್ರುತರು ತಿಳಿಸಿದ್ದಾರೆ.

ಸರ್ವರೋಗ ಪ್ರತಿರೋಧಕ ಸದಾಚಾರವಾಗಿ ಅನುಸರಿಸಬೇಕಾದ ಸೂತ್ರವನ್ನು ಆಚಾರ್ಯ ಚರಕರು ಹೀಗೆ ಬಣ್ಣಿಸುತ್ತಾರೆ-ಯಾವಾತನು ಹಿತವಾದ ಆಹಾರ, ವಿಹಾರ ಸೇವನೆಯನ್ನು ಮಾಡುತ್ತಾನೋ, ಸರಿಯಾಗಿ ಚಿಂತಿಸಿ ಕಾರ್ಯಕ್ಕೆ ಮುಂದಡಿಯಿಡುತ್ತಾನೋ, ಇಂದ್ರಿಯಾರ್ಥ ಭೋಗಗಳಲ್ಲಿ ಆಸಕ್ತಿಯನ್ನು ಹೊಂದಿಲ್ಲದೇ, ದಾನ ಕರ್ಮಗಳಲ್ಲಿ ನಿರತ, ಎಲ್ಲರನ್ನೂ ಸಮಾನ ಭಾವದಿಂದ ಕಾಣುವಾತ, ಸತ್ಯವಂತ, ಕ್ಷಮಾಶೀಲನಾದವನು ಯಾವುದೇ ರೋಗಕ್ಕೆ ತುತ್ತಾಗುವುದಿಲ್ಲ. ಆತನ ಮತಿ (ಬುದ್ಧಿ), ವಚನ, ಕರ್ಮಗಳು ಸುಖಪ್ರದವಾಗಿದ್ದು, ಮನೋನಿಗ್ರಹವನ್ನು ಹೊಂದಿದ್ದು, ನಿರ್ಮಲ ಬುದ್ಧಿಯನ್ನು ಹೊಂದಿರುವಾತ, ಜ್ಞಾನೋಪಾಸಕ ಎನಿಸಿರುವಾತ, ಯೋಗ, ತಪಸ್ಸಿನಲ್ಲಿ ನಿರತನಾಗಿರುವವನು ಸದಾಕಾಲ ನಿರಾಮಯ ಬದುಕನ್ನು ಬದುಕಲು ಸಾಧ್ಯ.

‘ನಹಿ ಜೀವಿತದಾನಾದ್ಧಿ ದಾನಮನ್ಯದ್ವಿಶಿಷ್ಯತೇ’ ಅರ್ಥಾತ್‌ ಜೀವದಾನ ಅಂದರೆ ಆರೋಗ್ಯ ದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಂದಿದ್ದಾರೆ ಆಚಾರ್ಯ ಚರಕರು. ‘ಪರೋಭೂತ ದಯಾಧರ್ಮ ಇತಿಮತ್ವಾಚಿಕಿತ್ಸ ಯಾವರ್ತತೆಯಃ ಸಸಿದ್ದಾರ್ಥಃ ಸುಖಮ್ ಅತ್ಯಂತಮ್ ಅಶ್ನುತೆ’ (ಚರಕ ಸಂಹಿತಾ) ಅನುಕಂಪದ ಆರೈಕೆಯನ್ನೇ ಶ್ರೇಷ್ಠ ಧರ್ಮವಾಗಿಟ್ಟುಕೊಂಡು ರೋಗಿಗಳ ಆರೋಗ್ಯವನ್ನು ಕಾಪಾಡುವಲ್ಲಿ ನಿರಂತರ ಪ್ರಯತ್ನ ಮಾಡುವುದರ ಮೂಲಕ ಅವರ ಮೋಕ್ಷ ಮಾರ್ಗಕ್ಕೆ ಸಹಕರಿಸುವ ದೃಷ್ಟಿಯಲ್ಲಿ ಚಿಕಿತ್ಸೆಯಲ್ಲಿ ಪ್ರವೃತ್ತನಾದರೆ ಆ ವೈದ್ಯನು ಇಹ-ಪರದಲ್ಲಿ ಸುಖ-ಶಾಂತಿಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾನೆ ಎಂದು ತಿಳಿ ಹೇಳಿದ ದೇಶಕಂಡ ಪ್ರಾಚೀನ ವೈದ್ಯಶಾಸ್ತ್ರದ ಪಿತಾಮಹ ಚರಕರು ವೈದ್ಯ ವೃತ್ತಿಗೆ ಇಂದಿಗೂ ದಾರಿದೀಪವಾಗಿದ್ದಾರೆ.

–ಡಾ.ನಾಗರಾಜ್ 
ಪ್ರಾಧ್ಯಾಪಕರು ಮತ್ತು ಸಹ ಅಧೀಕ್ಷಕರು ಸ್ನಾತಕೋತ್ತರ ವಿಭಾಗ
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ, ಉಡುಪಿ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು