ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕಾಳಜಿ: ಹಬ್ಬಗಳ ಸಡಗರದಲ್ಲಿ ಕೋವಿಡ್‌ ಎಚ್ಚರವಿರಲಿ

Last Updated 16 ಅಕ್ಟೋಬರ್ 2020, 1:30 IST
ಅಕ್ಷರ ಗಾತ್ರ

ಶಿವರಾತ್ರಿ, ಯುಗಾದಿ, ಪಂಚಮಿ, ರಂಜಾನ್‌, ಬಕ್ರೀದ್‌, ಭಾದ್ರಪದ ಮಾಸದಲ್ಲಿ ಬಂದ ಗಣೇಶ ಹಬ್ಬ, ಭಾವೈಕ್ಯ ಸಾರುವ ಮೊಹರಂ... ಹೀಗೆ ಹಬ್ಬಗಳು ಕೋವಿಡ್‌ ಸಂಕಟದಿಂದ ಅದ್ದೂರಿ ವಿಷಯದಲ್ಲಿ ಮಬ್ಬಾಗಿ ಹೋಗಿವೆ. ಕೇಂದ್ರ– ರಾಜ್ಯ ಸರ್ಕಾರ ವಿಧಿಸಿರುವ ಷರತ್ತು ಹಾಗೂ ನಿರ್ಬಂಧಗಳಿಂದಾಗಿ ವಿಜೃಂಭಣೆಯಿಲ್ಲದೆ ಮುಕ್ತಾಯ ಕಂಡಿವೆ.

ನಾಡಹಬ್ಬ ದಸರಾ ಬಂದಿದೆ. ನವರಾತ್ರಿ, ದುರ್ಗಾಪೂಜೆಯ ಬೆನ್ನಿಗೆ ದೀಪಾವಳಿ ನಿಂತಿದೆ. ನರಕ ಚತುರ್ದಶಿ, ದೀ‍ಪಾವಳಿ ಅಮಾವಾಸ್ಯೆ, ಬಲಿ ಪಾಡ್ಯಮಿ, ಕ್ರಿಸ್‌ಮಸ್‌ ಅಕ್ಟೋಬರ್‌ನಿಂದ ಡಿಸೆಂಬರ್‌ ಎಂದರೇನೆ ಹಬ್ಬ– ಉತ್ಸವಗಳ ಸಮಯ. ಆದರೆ, ಈ ಬಾರಿ ಹಬ್ಬಗಳ ಆಚರಣೆ ಎಂದಿನಂತಲ್ಲ. ಕೋವಿಡ್‌ ಹರಡುವಿಕೆಯ ಸರಪಣಿ ತುಂಡರಿಸುವುದು ಈ ಸಲ ಎಲ್ಲರೂ ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶ. ಹೀಗಾಗಿ, ಹಲವು ನಿರ್ಬಂಧಗಳು ಅನಿವಾರ್ಯ. ಅದ್ದೂರಿತನಕ್ಕೆ ಅವಕಾಶವಿಲ್ಲ. ಸರಳತೆಯಲ್ಲಿಯೂ ಸಂಭ್ರಮಕ್ಕೆ ಕೊರತೆ ಇಲ್ಲದಂತೆ ಆಚರಣೆಗೆ ಸಿದ್ಧರಾಗಬೇಕಿದೆ.

ಕೋವಿಡ್‌ ಸೋಂಕು ತಡೆಯುವ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದ್ದ ನೆರೆಯ ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕಿತರ ಪ್ರಮಾಣ ಏರುಗತಿಯಲ್ಲಿದೆ. ಇದಕ್ಕೆ ಓಣಂ ಸಂಭ್ರಮಾಚರಣೆಯೇ ಕಾರಣ ಇರಬೇಕು ಎಂದು ಅಂದಾಜಿಸಲಾಗಿದೆ. ಆ ಎಚ್ಚರಿಕೆಯಲ್ಲಿ, ರಾಜ್ಯದ ಜನರು ಮುಂದಿರುವ ಹಬ್ಬಗಳನ್ನು ಆಚರಿಸಬೇಕಿದೆ. ಈ ಮಧ್ಯೆ, ಸಾಂಕ್ರಾಮಿಕ ರೋಗ ಇನ್ನಷ್ಟು ಹರಡದಂತೆ, ಸೋಂಕಿನ ಸರಪಳಿ ಕತ್ತರಿಸಬೇಕಾಗಿದೆ. ಈ ಕಾರಣದಿಂದ, ಎಲ್ಲ ಸಂದರ್ಭಗಳಲ್ಲೂ ಇನ್ನೂ ಹೆಚ್ಚು ಕಟ್ಟುನಿಟ್ಟಿನ ಕ್ರಮಗಳನ್ನು ಜನರು ಪಾಲಿಸಬೇಕಾದ ಅನಿವಾರ್ಯ ಇದೆ.

ಸೋಂಕು ಹರಡದಂತೆ ಹಬ್ಬ, ಉತ್ಸವಗಳನ್ನು ಸುರಕ್ಷಿತವಾಗಿ ಆಚರಿಸಲು ಪಾಲಿಸಬೇಕಾದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿದೆ. ಕಂಟೇನ್‌ಮೆಂಟ್‌ ವಲಯವೆಂದು ಗುರುತಿಸಿದ ಪ್ರದೇಶದಿಂದ ಹೊರಗೆ, ಷರತ್ತು, ನಿರ್ಬಂಧಗಳಿಗೆ ಅನುಗುಣವಾಗಿ ಹಬ್ಬ ಆಚರಿಸಲು ಅಡ್ಡಿ ಇಲ್ಲ. ಆದರೆ, ಗುಂಪುಗೂಡಲು ಅವಕಾಶ ಇಲ್ಲ. ದೊಡ್ಡ ಬಯಲು ಪ್ರದೇಶಗಳಲ್ಲಷ್ಟೆ ಉತ್ಸವಗಳನ್ನು ನಡೆಸಬೇಕು. 60 ವರ್ಷ ದಾಟಿದವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆಯೊಳಗೆ ಇರುವುದು ಕ್ಷೇಮ. ಮಾಸ್ಕ್‌ ಧರಿಸುವುದು, ಆರು ಅಡಿ ಅಂತರ ಕಾಯ್ದುಕೊಳ್ಳುವುದು, ಆಗಾಗ ಕೈ ತೊಳೆಯುವುದು ಅಥವಾ ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ಅನ್ನದಾನ, ಸಾಮೂಹಿಕ ಭೋಜನದ ವೇಳೆ ಅಂತರ ಕಾಯ್ದುಕೊಳ್ಳಲೇ ಬೇಕು ಎನ್ನುವುದು ಕೇಂದ್ರದ ನಿರ್ದೇಶನ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡಾ ಷರತ್ತು, ನಿರ್ಬಂಧಗಳನ್ನು ವಿಧಿಸಿ ಮಾರ್ಗಸೂಚಿ ಹೊರಡಿಸಿದೆ. ಆ ನಿಯಮಗಳನ್ನು ತಪ್ಪದೆ ಪಾಲಿಸುತ್ತಲೇ ಹಬ್ಬಗಳನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು, ಧರ್ಮವೂ ಹೌದು.

ಹಾಗೆ ನೋಡಿದರೆ, ಹಬ್ಬಗಳ ಆಚರಣೆ ವಿಷಯದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನೀಡಿದ ಎಚ್ಚರಿಕೆಯ ನುಡಿಗಳು ಹೆಚ್ಚು ಅರ್ಥಪೂರ್ಣ. ‘ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದೇ ಮನೆಯಲ್ಲೇ ಕುಟುಂಬಸ್ಥರ ಜೊತೆ ನೆಮ್ಮದಿಯಿಂದ ಆಚರಿಸಿ. ‌ಧರ್ಮದ ಮೇಲಿನ ನಿಮ್ಮ ನಂಬಿಕೆ ಸಾಬೀತುಪಡಿಸಲು ಹೋಗಿ ಜೀವವನ್ನು ಅಪಾಯಕ್ಕೆ ದೂಡಬೇಡಿ. ಯಾವ ಧರ್ಮವೂ ಜೀವನವನ್ನು ಅಪಾಯಕ್ಕೆ ತಳ್ಳಿ ಹಬ್ಬ ಆಚರಿಸಿ ಎಂದು ಹೇಳುವುದಿಲ್ಲ. ಧರ್ಮ ಹಾಗೂ ದೇವರ ಮೇಲಿನ ನಂಬಿಕೆ ಸಾಬೀತುಪಡಿಸಲು ವಿಜೃಂಭಣೆಯ ಹಬ್ಬದ ಆಚರಣೆ ಅವಶ್ಯಕತೆ ಇಲ್ಲ’ ಎನ್ನುವುದು ಹರ್ಷವರ್ಧನ್ ಹಿತನುಡಿ.

ಹಬ್ಬಗಳನ್ನು ಆಚರಿಸುವಾಗ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಲ್ಲಿ ಅಸಡ್ಡೆ ತೋರಿದರೆ, ಕೊರೊನಾ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಮತ್ತು ಭಾರಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಹೀಗಾಗಿ, ಸರ್ಕಾರದ ಮಾರ್ಗಸೂಚಿ ಪಾಲನೆಯ ಜೊತೆಗೆ, ಸ್ವಯಂ ನಿಯಂತ್ರಣ ಅತೀ ಅಗತ್ಯ.

ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ನಿರ್ದೇಶನಗಳನ್ನು ಮತ್ತು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜೊತೆಗೆ, ಆರೋಗ್ಯ, ಪೊಲೀಸ್, ಅಗ್ನಿ ಶಾಮಕ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ, ಸ್ಥಳೀಯಾಡಳಿತ, ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ, ಮಾರ್ಗಸೂಚಿಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲವೂ ಎಲ್ಲರ ಹಿತಕ್ಕಾಗಿ, ಆರೋಗ್ಯದ ಸುರಕ್ಷತೆಗಾಗಿ ಎಂಬ ಎಚ್ಚರಿಕೆ ಇರಬೇಕು.

ಭಕ್ತಿ, ಶ್ರದ್ಧೆಯಿಂದ ಹಬ್ಬ ಆಚರಿಸಲು ಸರ್ಕಾರ ಅವಕಾಶ ನೀಡಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಡಳಿತದ ನಿರ್ದೇಶನ, ಆದೇಶ, ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ‘ವಿಪತ್ತು ನಿರ್ವಹಣಾ ಕಾಯ್ದೆ‍– 2005’ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನುಗಳಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಅದಕ್ಕೆ ದಾರಿ ಮಾಡಿಕೊಡದೆ, ‘ನಮ್ಮ ಆರೋಗ್ಯ, ನಮ್ಮ ಕೈಯಲ್ಲಿ’ ಎಂಬ ಮನೋಭಾವ ಎಲ್ಲರಲ್ಲಿದ್ದರೆ ಎಲ್ಲವೂ ಚೆನ್ನ.

ನಿರ್ಬಂಧಗಳ ಮಧ್ಯೆ 'ದಸರಾ'

*ಮೈಸೂರು ಬಿಟ್ಟು ಇತರೆಡೆಗಳಲ್ಲಿ ದಸರಾದಲ್ಲಿ 100ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

*ಚಾಮುಂಡಿ ಬೆಟ್ಟದಲ್ಲಿ ನಡೆಯುವ ಮೈಸೂರು ದಸರಾ ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ. ಜಂಬೂ ಸವಾರಿ ದಿನ 300 ಜನರಿಗೆ ಅವಕಾಶ

*ವ್ಯಕ್ತಿಗತ ಅಂತರ ಇಲ್ಲದೆ ನಡೆಸುವ ಕಾರ್ಯಕ್ರಮಗಳಿಗೆ ನಿಷೇಧ. ದಸರಾ ವೀಕ್ಷಣೆಗೆ ದೃಶ್ಯ ಸಂವಹನ (ವರ್ಚುವಲ್‌) ವ್ಯವಸ್ಥೆ ಕಲ್ಪಿಸಿರುವುದರಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧ

*ಮೈಸೂರು ಅರಮನೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಂದ ಗರಿಷ್ಠ 50 ಜನ ಮೀರದಂತೆ 2 ಗಂಟೆಗಳ ಕಾರ್ಯಕ್ರಮ. ಮಾಸ್ಕ್ ಬಳಸಬೇಕು, ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು

*ದಸರಾದಲ್ಲಿ ಪಾಲ್ಗೊಳ್ಳುವವರು ಕೋವಿಡ್ ತಪಾಸಣೆಗೆ ಒಳಗಾಗಿ ಪ್ರಮಾಣ ಪತ್ರ ಪಡೆಯಲೇಬೇಕು

*ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ, ಅ. 17ರಿಂದ ನ.1ರವರೆಗೆ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ನಂಜನಗೂಡು ದೇವಾಲಯಕ್ಕೆ ಪ್ರವೇಶ ನಿಷೇಧ. ಮಂಡ್ಯದಲ್ಲಿಯೂ ಸಾಕಷ್ಟು ಪ್ರವಾಸಿ ಸ್ಥಳಗಳಿರುವ ಕಾರಣ ಅಲ್ಲಿಯೂ ಸಾರ್ವಜನಿಕರಿಗೆ ನಿರ್ಬಂಧ

*ಪ್ರವಾಸಿ ತಾಣದಲ್ಲಿ 50ಕ್ಕೂ ಹೆಚ್ಚು ಜನ‌ ಸೇರುವಂತಿಲ್ಲ. ಸೇರಿದರೆ ಆ ಪ್ರವಾಸಿ ತಾಣದ ನಿರ್ವಾಹಕರ ವಿರುದ್ಧ ಕ್ರಮ. ಇತರೆ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಬಾರದಂತೆ ಚೆಕ್‌ಪೋಸ್ಟ್‌ಗಳಲ್ಲಿ ಬಂದೋಬಸ್ತ್‌.

*ದಸರಾದಲ್ಲಿ ಪಾಲ್ಗೊಳ್ಳುವ 200 ಜನರಲ್ಲಿ ಯಾರಿರಬೇಕು ಎಂಬುದನ್ನು ಜಿಲ್ಲಾಡಳಿತ ಆಯ್ಕೆ‌ ಮಾಡಲಿದೆ. 60 ವರ್ಷ ದಾಟಿದ ಹಾಗೂ 10 ವರ್ಷ ಒಳಗಿನ ಮಕ್ಕಳಿಗೆ ನಿಷೇಧ

*ಪಾಸ್ ವ್ಯವಸ್ಥೆ ಇಲ್ಲ. ರೈಲಿನ ಮೂಲಕ ಮೈಸೂರಿಗೆ ಬರುವವರಿಗೆ ತಡೆ. ಹೆಚ್ಚುವರಿ ರೈಲು ವ್ಯವಸ್ಥೆ ಇಲ್ಲ. ಜನರ ಅನಗತ್ಯ ಓಡಾಟಕ್ಕೂ ಅವಕಾಶ ಇಲ್ಲ

ಪಟಾಕಿಗೂ 'ಸೂತ್ರ'

*ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರಗಳಿಂದ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಪಟಾಕಿ ಮಾರಾಟ ಮಾಡಬಹುದು

*ಪಟಾಕಿ ಮಾರಾಟ ಮಳಿಗೆ ನ. 1ರಿಂದ 17ರವರೆಗೆ ಮಾತ್ರ ತೆರೆಯಬೇಕು

*ಪರವಾನಗಿದಾರರು ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕವಾಗಿ ಮಳಿಗೆ ತೆರೆಯಬೇಕು

*ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಮಳಿಗೆ ಸ್ಥಾಪಿಸಬೇಕು

*ಮಳಿಗೆಗಳ ಮಧ್ಯೆ 6 ಮೀಟರ್ ಅಂತರವಿರಬೇಕು. ಸರಾಗವಾಗಿ ಗಾಳಿ ಆಡುವಂತಿರಬೇಕು.

*ಪರವಾನಗಿ ಪಡೆದವರು ಮಳಿಗೆಗಳಲ್ಲಿ ಹಾಜರಿರಬೇಕು. ಪರವಾನಗಿಯನ್ನು ಪ್ರತಿ ಮಳಿಗೆಯಲ್ಲಿ ಪ್ರದರ್ಶಿಸಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು

*ಮಳಿಗೆಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇರಬೇಕು. ಕನಿಷ್ಠ 6 ಅಡಿ ಅಂತರ ಗುರುತಿಸಬೇಕು. ಮಾಸ್ಕ್‌ ಕಡ್ಡಾಯ

‘ಸಾರ್ವಜನಿಕರ ಸಹಕಾರ ಅತ್ಯಗತ್ಯ’

ಮೈಸೂರಿನಲ್ಲಿ ಆಚರಣೆಯಾಗುವ ನಾಡಹಬ್ಬ ದಸರಾ ವಿಶ್ವವಿಖ್ಯಾತ. ಬೇರೆ ಪ್ರದೇಶಗಳಲ್ಲೂ ದಸರಾ ಆಚರಣೆಯಾಗುತ್ತದೆ. ಆದರೆ, ಈ ಬಾರಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹಬ್ಬ ಆಚರಿಸಬೇಕಿದೆ. ಇದಕ್ಕಾಗಿ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳಿಗೆ ನಿಯಮ ಪಾಲನೆಯ ಹೊಣೆ ವಹಿಸಲಾಗಿದೆ. ಆದರೆ, ಸರ್ಕಾರ ಏನೇ ನಿಯಮಗಳನ್ನು ರೂಪಿಸಿದರೂ, ಅದರ ಸಮರ್ಪಕ ಪಾಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ದಸರಾ ಸರಳವಾಗಿ ಆಚರಿಸಲು ಜನರ ಸಹಕಾರ ಅಗತ್ಯ. ಜನರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ಕ್ರಮಗಳನ್ನು ಪಾಲಿಸಬೇಕು. ಈ ಬಾರಿ ವರ್ಚುವಲ್ ದಸರಾಗೆ ಒತ್ತು ನೀಡಿದ್ದು, ಆಚರಣೆಯ ದೃಶ್ಯಾವಳಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ವ್ಯವಸ್ಥೆ ಇದೆ. ಆದ್ದರಿಂದ, ಜನರು ಮನೆಯಲ್ಲೇ ಹಬ್ಬ ಆಚರಿಸುವಂತೆ ಮನವಿ ಮಾಡುತ್ತೇನೆ.

- ಡಾ.ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ

ಕೋವಿಡ್: ಹಬ್ಬಗಳ ಆಚರಣೆ ಬಗ್ಗೆ ವೈದ್ಯರ ಅಭಿಪ್ರಾಯ

‘ಸರಳ ಆಚರಣೆ ಸುರಕ್ಷಿತ’

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರುಗತಿ ಪಡೆದಿವೆ. ಈ ಸಂದರ್ಭದಲ್ಲಿ ಅದ್ದೂರಿಯಾಗಿ ಹಬ್ಬಗಳನ್ನು ಆಚರಿಸಿದಲ್ಲಿ ಇನ್ನಷ್ಟು ಅಪಾಯಕ್ಕೆ ಈಡಾಗಬೇಕಾಗುತ್ತದೆ. ಹಾಗಾಗಿ ಸರಳವಾಗಿ ಮನೆಯಲ್ಲಿಯೇ ಹಬ್ಬಗಳನ್ನು ಆಚರಿಸುವುದು ಸುರಕ್ಷಿತ. ಸಂಭ್ರಮದಲ್ಲಿ ಮೈಮರೆತರೆ ನಮ್ಮ ಜೀವಕ್ಕೇ ಅಪಾಯ ಎದುರಾಗಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಲಾಕ್‌ಡೌನ್ ಜಾರಿಯಿದ್ದಾಗ ನಿಯಂತ್ರಣದಲ್ಲಿದ್ದ ಕೋವಿಡ್‌, ಲಾಕ್‌ಡೌನ್‌ ಸಡಿಲಿಸಿದ ಬಳಿಕೆ ಏರಿಕೆ ಕಂಡಿತು. ಜನರು ಗುಂಪು ಸೇರಿದ್ದೇ ಇದಕ್ಕೆ ಪ್ರಮುಖ ಕಾರಣ. ಮತ್ತೆ ನಾವು ಈ ತಪ್ಪನ್ನು ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಸೇರಿ, ಪಟಾಕಿ ಸಿಡಿಸುವುದು ಕೂಡ ಸುರಕ್ಷಿತವಲ್ಲ. ಮನೆಯಲ್ಲಿಯೇ ಕುಳಿತು ದಸರಾ ಹಬ್ಬದ ಆಚರಣೆಗಳನ್ನು ದೃಶ್ಯ ಮಾಧ್ಯಮಗಳು ಹಾಗೂ ಆನ್‌ಲೈನ್ ವೇದಿಕೆಯ ನೆರವಿನಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಹೂವು–ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ವೇಳೆ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಗವಸು ಧರಿಸಿಯೇ ಹೊರಗಡೆ ಹೋಗಬೇಕು. ಅಂತರ ಕಾಯ್ದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು

–ಡಾ. ಸುದರ್ಶನ್ ಬಲ್ಲಾಳ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ

‘ಮನೆಯಲ್ಲಿಯೇ ಹಬ್ಬ ಮಾಡಿ’

ಕೋವಿಡ್‌ಗೆ ಈವರೆಗೂ ನಿಖರವಾದ ಔಷಧ ಸಂಶೋಧಿಸಲಾಗಿಲ್ಲ. ಹಾಗಾಗಿ ಸೋಂಕು ತಗುಲದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿವರ್ಷದಂತೆ ಈ ಬಾರಿಯೂ ಸಾರ್ವಜನಿಕವಾಗಿ ಹಬ್ಬವನ್ನು ಆಚರಿಸಿದಲ್ಲಿ ಕೊರೊನಾ ಸೋಂಕು ಹರುಡುವಿಕೆಯ ವೇಗ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯಲ್ಲಿಯೇ ಹಬ್ಬವನ್ನು ಆಚರಿಸುವುದು ಸೂಕ್ತ. ಹೊರಗಡೆ ಅನಗತ್ಯವಾಗಿ ಪ್ರಯಾಣ ಮಾಡಬಾರದು. ಮಾರುಕಟ್ಟೆಗಳಿಗೆ ವೃದ್ಧರು ತೆರಳುವುದು ಸುರಕ್ಷಿತವಲ್ಲ. ಮನೆಯ ಸದಸ್ಯರು ವೃದ್ಧರಿಗೆ ಈ ಸಂದರ್ಭದಲ್ಲಿ ಸೂಕ್ತ ರಕ್ಷಣೆಯನ್ನು ನೀಡಬೇಕು. ಪಟಾಕಿಗಳನ್ನು ಸಿಡಿಸುವುದರಿಂದ ಕೂಡ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಪರಿಸರ ಮಾಲಿನ್ಯವಾಗುವ ಜತೆಗೆ ಪಟಾಕಿಗಳ ಹೊಗೆಯಿಂದ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ

–ಡಾ.ಸಿ. ನಾಗರಾಜ್, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

ಹಬ್ಬಗಳ ಆಚರಣೆ– ಮಠಾಧೀಶರ ಸಲಹೆ

‘ಮೈಮರೆಯದಿರಿ’

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿ ಸರ್ಕಾರ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಭಕ್ತರು ಮೈಮರೆಯಬಾರದು, ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸಬೇಕು, ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಕೋವಿಡ್‌ನಿಂದ ದೇಶವನ್ನು ರಕ್ಷಿಸಲು ಸ್ವಯಂ ನಿರ್ಬಂಧ ಪಾಲನೆ ಅಗತ್ಯ. ಕೊರೊನಾ ಮುಕ್ತಿಗಾಗಿ, ಲೋಕದ ಒಳಿತಿಗಾಗಿ ದೇವರನ್ನು ಪ್ರಾರ್ಥಿಸಿ. ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಹೊಣೆ ಕೇವಲ ಸರ್ಕಾರದ ಕೆಲಸವಲ್ಲ, ಪ್ರತಿಯೊಬ್ಬರ ಕರ್ತವ್ಯ

-ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

‘ಒಟ್ಟು ಸೇರುವುದು ತಡೆಗಟ್ಟಿ’

ನವರಾತ್ರಿ ಉತ್ಸವದ ಮೂಲಕ ಕೊರೊನಾ ಅಸುರನನ್ನು ದೂರ ಇಡಬೇಕಾದರೆ ಸರ್ಕಾರ ಸೂಚಿಸಿದ ಮಾರ್ಗಸೂಚಿ ಸೂತ್ರಗಳಾದ ಮಾಸ್ಕ್ ಧಾರಣೆ, ಅಂತರ ಕಾಪಾಡುವುದು, ಸ್ಯಾನಿಟೈಸೇಷನ್ ಇತ್ಯಾದಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಹೀಗಾಗಿ ಎಲ್ಲರೂ ಈ ಬಾರಿ ತಮ್ಮ ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಆಚರಣೆಗಳನ್ನು ನೆರವೇರಿಸಿ ಸಾರ್ವಜನಿಕವಾಗಿ ಜನರು ಒಟ್ಟು ಸೇರುವುದನ್ನು ತಡೆಗಟ್ಟಬೇಕು

–ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಕ್ಷೇತ್ರ ಧರ್ಮಸ್ಥಳ

‘ಸುರಕ್ಷತಾ ಕ್ರಮ ಅನುಸರಿಸಿ’

ಈ ಬಾರಿ ಎಲ್ಲರೂ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಬೇಕು. ಸರ್ಕಾರವು ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವಷ್ಟೇ ಮಂದಿ ಪಾಲ್ಗೊಳ್ಳಬೇಕು. ಪರಂಪರಾಗತ ಸಂಪ್ರದಾಯ, ಕೈಂಕರ್ಯಗಳನ್ನು ಮಾಡಬೇಕು. ಮಾಸ್ಕ್‌ ಧಾರಣೆ, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಇವೆಲ್ಲವನ್ನು ಪಾಲಿಸಬೇಕು. ಭಕ್ತರು ಮನೆಗಳಲ್ಲೇ ಹಬ್ಬ ಆಚರಿಸಿ, ಪೂಜೆ ನೆರವೇರಿಸಬೇಕು. ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

–ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ರಂಭಾಪುರಿ ಪೀಠ, ಬಾಳೆಹೊನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT