ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಹ್ಞಾಂ.. ಹ್ಞೂಂ.. ಔಚ್‌ಗಳಿಂದ ಬಿಡುಗಡೆ

Last Updated 18 ಜುಲೈ 2022, 20:00 IST
ಅಕ್ಷರ ಗಾತ್ರ

ಗಂಟುಗಳಲ್ಲಿ ಉತ್ಪನ್ನವಾಗುವ ಊತವು ಗಂಟುಗಳ ಚಲನೆಯನ್ನು ಸ್ಥಗಿತಗೊಳಿಸುತ್ತದೆ. ನಡೆಯುವಾಗ, ನಿಲ್ಲುವಾಗ, ಕುಳಿತಾಗ, ಕುಳಿತವರು ನಿಲ್ಲುವಾಗ ಅಸಾಧ್ಯವಾದ ನೋವು ಕಾಣಿಸಿಕೊಳ್ಳುತ್ತದೆ...

ಬುದ್ಧನೇನಾದರೂ ಈ ಕಾಲದಲ್ಲಿ ಇದ್ದಿದ್ದರೆ, ‘ಗಂಟುನೋವಿಲ್ಲದ ಮನೆಯಿಂದ ಸಾಸಿವೆ ತಾ’ ಎಂದು ಹೇಳಿದಿದ್ದರೆ, ತರಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲವೇನೋ! ಅಷ್ಟರಮಟ್ಟಿಗೆ ಪ್ರತಿಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಗಂಟುನೋವಿನಿಂದ ಬಳಲುತ್ತಿರುತ್ತಾರೆ. ಕಾರಣ ‘ಮೂಳೆಗಳ ಸವೆತ’ ಎಂದು ಒಂದೇ ಮಾತಿನಲ್ಲಿ ಹೇಳುತ್ತಾರೆ. ಇಂದು ಚಿಕ್ಕ ಮಕ್ಕಳಿಂದ ಮುದುಕರವರೆಗೂ ಗಂಟುಗಳಲ್ಲಿ ಊತ, ನೋವು, ಉರಿ, ಕಾಲು ಮಡಿಸಲು ಆಗದಂತಹ ಕಾಠಿಣ್ಯ – ಹೀಗೆ ಅನೇಕ ಲಕ್ಷಣಗಳು ಇರುತ್ತವೆ. ಇದಕ್ಕೆ ಪ್ರಮುಖ ಕಾರಣ ಇಂದಿನ ನಮ್ಮ ಜೀವನಶೈಲಿ ಮತ್ತು ಆಹಾರಕ್ರಮ.

ಚಟುವಟಿಕೆಗಳಲ್ಲಿ ಆಗುವ ಏರುಪೇರಿನಿಂದಾಗಿ ಅಥವಾ ಯಾವುದಾದರೂ ಅಪಘಾತ ಅಥವಾ ಅಭಿಘಾತ(ಪೆಟ್ಟು) ಗಳಿಂದ ಗಂಟುನೋವು ಬರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಅಪಘಾತ ಅಥವಾ ಅಭಿಘಾತಗಳಿಂದಾದ ನೋವನ್ನು ಸರಿಯಾದ ಚಿಕಿತ್ಸೆಯ ನಂತರ ದೇಹ ತನ್ನಿಂದ ತಾನೇ ಉಪಶಮನಗೊಳಿಸಿಕೊಳ್ಳುತ್ತದೆ. ಆದರೆ ಆಹಾರ ಮತ್ತು ವಿಹಾರ, ಎಂದರೆ ನಮ್ಮ ಚಟುವಟಿಕೆ ಅಥವಾ ವ್ಯಾಯಾಮಗಳ ಹೆಚ್ಚು, ಕಡಿಮೆ ಅಥವಾ ತಪ್ಪಾಗಿ ಮಾಡುವುದರಿಂದ ಉಂಟಾಗುವ ನೋವನ್ನು ಸರಿಪಡಿಸಲು ಹರಸಾಹಸವನ್ನೇ ಪಡಬೇಕು. ಸಾಮಾನ್ಯವಾಗಿ ಗಂಟುಗಳಲ್ಲಿ ಉತ್ಪನ್ನವಾಗುವ ಊತವು ಗಂಟುಗಳ ಚಲನೆಯನ್ನು ಸ್ಥಗಿತಗೊಳಿಸುತ್ತದೆ. ಆದರಿಂದ ನಡೆಯುವಾಗ, ನಿಲ್ಲುವಾಗ, ಕುಳಿತಾಗ, ಕುಳಿತವರು ನಿಲ್ಲುವಾಗ, ಅಸಾಧ್ಯವಾದ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಕಾಲುಗಳ ಚಲನೆಯು ಕಷ್ಟಕರವಾಗುತ್ತದೆ.

ಊತಕ್ಕೆ ಪ್ರಮುಖ ಕಾರಣಗಳು:

*ಸಕಾಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗದಿರುವ ಆಹಾರ. ಹೀಗಾಗಲು ಸಕಾಲದಲ್ಲಿ ಆಹಾರ ಸೇವಿಸದಿರುವುದು, ಅತಿಯಾಗಿ, ಪದೇಪದೇ, ಕೊಬ್ಬು ಹೆಚ್ಚಾಗಿರುವ ಆಹಾರಗಳ ಸೇವನೆ.

*ಓಡಾಡುತ್ತಾ ಅಥವಾ ವಾಹನ ಚಲಾಯಿಸುತ್ತಾ, ಅಥವಾ ಗಬಗಬನೆ ಆಹಾರ ಸೇವಿಸುವುದು, ಆಹಾರ ಸೇವಿಸುತ್ತಾ ಅಥವಾ ಸೇವಿಸಿದ ಕೂಡಲೆ ಒಂದೇ ಉಸಿರಿಗೆ ಓಡುವುದು ಅಥವಾ ನಡೆಯುವುದು.

*ತಿಂದ ಆಹಾರ ಜೀರ್ಣಿಸುವ ಮೊದಲೇ ವ್ಯಾಯಾಮ ಮಾಡುವುದು; ವ್ಯಾಯಾಮ ಮಾಡುವಾಗ ನಡುನಡುವೆ ನೀರು ಕುಡಿಯುವುದು. ನೀರು ಕುಡಿದರೆ ಒಳ್ಳೆಯದು ಎಂದು ಹಸಿವಾದಾಗಲೂ, ಬಾಯಾರಿಕೆ ಇಲ್ಲದಿದ್ದಾಗಲೂ ಅತಿಯಾಗಿ ನೀರು ಅಥವಾ ದ್ರವಪದಾರ್ಥಗಳನ್ನು ಸೇವಿಸುವುದು. ವ್ಯಾಯಾಮ ಮಾಡಿದ ಕೂಡಲೇ ಅತಿ ತಂಪಾದ ನೀರು ಅಥವಾ ಇತರ ದ್ರವ ಪದಾರ್ಥಗಳ ಸೇವನೆ.

*ವಿರುದ್ಧಾಹಾರಗಳಾದ ಹಾಲು + ಹಣ್ಣು (ಮಿಲ್ಕ್ ಶೇಕ್, ಅಥವಾ ಹಣ್ಣಿನ ರಸಾಯನಕ್ಕೆ ಹಾಲು ಸೇರಿಸಿ ಸೇವಿಸುವುದು, ನಿತ್ಯ ಪಂಚಾಮೃತ ಸೇವನೆ), ಹಾಲು + ಮೊಸರು ಅಥವಾ ಮಜ್ಜಿಗೆ, ಹಾಲು + ಮೊಟ್ಟೆ ಅಥವಾ ಮಾಂಸ ಅಥವಾ ಮೀನಿನ ಸೇವನೆ, ಹಾಲು + ಉಪ್ಪು ಅಥವಾ ಹುಳಿ ಬೆರೆಸಿ ಆಹಾರಸೇವನೆ.

*ಅರೆ ಮೊಸರು, ಎಂದರೆ ಬೆಳಗ್ಗೆ ಹೆಪ್ಪಿಟ್ಟು ಮಧ್ಯಾಹ್ನ ಅಥವಾ ಮಧ್ಯಾಹ್ನ ಹೆಪ್ಪಿಟ್ಟು ರಾತ್ರಿ ಸೇವಿಸುವುದು. ಪೂರ್ಣ ಹೆಪ್ಪಾಗದ ಮೊಸರನ್ನು ಸೇವಿಸುವುದು.

*ತಂಗಳು, ‘ತಂಪುಪೆಟ್ಟಗೆ’ಯಲ್ಲಿ ಇಟ್ಟು, ಹೊರತೆಗೆದು, ಮತ್ತೆ ಬಿಸಿ ಮಾಡಿ ಸೇವಿಸುವ ಆಹಾರಗಳು.

ಹೀಗೆ ತಿಳಿದೋ ಅಥವಾ ಅನುಕೂಲಕ್ಕಾಗಿಯೋ ಮಾಡುವ ಆಹಾರಕ್ರಮದ ವಿಕೃತಿಗಳ ನಿರಂತರ ಸೇವನೆಯು ಕಾಲಾಂತರದಲ್ಲಿ ಗಂಟುಗಳ ಊತಕ್ಕೆ, ಸಂಧಿಗಳ ಚಲನಸಾಮರ್ಥ್ಯಗಳ ಕುಂಠಿತಕ್ಕೆ ಕಾರಣವಾಗುತ್ತದೆ.

ಇನ್ನು ಕೆಲವರಿಗೆ ಗಂಟುಗಳಲ್ಲಿ ಊತದ ಜೊತೆಗೆ ಗಂಟುಗಳು ಬಿಸಿಯಾಗುವುದು, ಕೆಂಪಾಗುವಿಕೆ ಉಂಟಾಗುತ್ತವೆ; ನೋವು ಕೂಡ ಇರುತ್ತದೆ. ಇದಕ್ಕೆ ಮೇಲಿನ ಕಾರಣಗಳ ಜೊತೆಗೆ:

*ಆಹಾರದೊಡನೆ ಅಥವಾ ಪದೇ ಪದೇ ತಂಪಾದ ಪಾನೀಯಗಳ ಸೇವನೆ. ಅತಿಯಾದ ಮದ್ಯಪಾನ. ಮದ್ಯಪಾನದೊಡನೆ ಅಥವಾ ಪದೇ ಪದೇ ಕರಿದ ಪದಾರ್ಥಗಳ ಸೇವನೆ.

*ಹಸಿವಾದಾಗಲೂ ಆಹಾರವನ್ನು ಸೇವಿಸದೆ, ಪದೇ ಪದೇ ಕಾಫಿ ಅಥವಾ ಚಹಾದ ಸೇವನೆ.

*ಅತಿ ಖಾರ, ಹುಳಿ, ಹೆಚ್ಚು ಮಸಾಲೆ ಇರುವ ಕರಿದ ಪಾದಾರ್ಥಗಳು, ಅಜಿನೋಮೋಟೋ, ಅಸಿಟಿಕ್ ಅಮ್ಲ ಹಾಕಿ ತಯಾರಿಸಿರುವ ಆಹಾರಗಳ ನಿರಂತರ ಸೇವನೆ.

*ಹುಳಿ ಬರಿಸಿದ ಪದಾರ್ಥಗಳಾದ ದೋಸೆ, ಇಡ್ಲಿ, ಮುಂತಾದವುಗಳು, ಬ್ರೆಡ್, ಇತರೆ ಬೇಕರಿ ಪದಾರ್ಥಗಳು, ಚೀಸ್ ಪನ್ನೀರ್ ಹಾಕಿ ತಯಾರಿಸಿರುವ ಪಿಡ್ಜ, ಬರ್ಗರ್ ರೀತಿಯ ಪದಾರ್ಥಗಳ ನಿತ್ಯ ನಿರಂತರ ಸೇವನೆ.

*ವ್ಯಾಯಾಮವೇ ಇಲ್ಲದಿರುವ ಜೀವನಶೈಲಿ.

*ಡಯಟ್ ಎನ್ನುವ ಹೆಸರಿನಲ್ಲಿ ಕೇವಲ ಮೊಳಕೆಕಾಳು, ತರಕಾರಿ, ಹಣ್ಣುಗಳ ಸೇವನೆ.

*ಆಹಾರದ ನಂತರ ಖಾರದ ಕಡ್ಲೇಕಾಯಿ, ಪುರಿ, ಅಥವಾ ಅವಲಕ್ಕಿ, ಕರಿದ ಪದಾರ್ಥಗಳ ಸೇವನೆ – ಇವೂ ಗಂಟುನೋವಿಗೆ ಕಾರಣವಾಗುತ್ತವೆ.

ಇನ್ನು ಕೆಲವರಿಗೆ ಸಂದುಗಳಲ್ಲಿ ಶಬ್ದ ಬರುವುದು, ಸಂದು ಜಾರುವುದು, ಚಲನೆ ಸಾಧ್ಯವಾಗದಿರುವುದು, ಸಂದುಗಳು ಒಣಗಿದಂತಾಗುವುದು – ಈ ಸಮಸ್ಯೆಗಳು ಎದುರಾಗುತ್ತವೆ. ಇವರಿಗೆ ಸಂದುಗಳಲ್ಲಿರುವ ಜಿಡ್ಡಿನಂಶ ಒಣಗಿ ಮೂಳೆ, ಸ್ನಾಯುಗಳು ಒಂದಕ್ಕೊಂದು ಉಜ್ಜಿ ನೋವಾಗುತ್ತಿರುತ್ತದೆ. ಕೆಲವೊಮ್ಮೆ ಮಾಂಸಖಂಡ ಅಥವಾ ಸ್ನಾಯುಗಳ ಊತ, ಸೆಳೆತವೂ ಸಂದುಗಳ ನೋವು, ಚಲನೆ ಕುಂಠಿತವಾಗುವುದಕ್ಕೆ ಕಾರಣವಾಗುತ್ತವೆ.

*ಅತಿಯಾದ ಉಪವಾಸ, ಅಕಾಲದಲ್ಲಿ ಆಹಾರಸೇವನೆ, ಅಲ್ಪಾಹಾರಸೇವನೆ, ರಾತ್ರಿ ತಡವಾಗಿ ಊಟ ರಾತ್ರಿ ‘ಗುರು ಆಹಾರ’ವನ್ನೂ (heavy food), ಹಗಲು ‘ಲಘು ಆಹಾರವ’ನ್ನೂ (light food) ಸೇವಿಸುವುದು.

*ಜಿಡ್ಡಿನ ಪದಾರ್ಥಗಳನ್ನು ಸಂಪೂರ್ಣವಾಗಿ ವರ್ಜಿಸುವುದು.

*ಅಕಾಲದಲ್ಲಿ ಅತಿಯಾಗಿ ವ್ಯಾಯಾಮ ಮಾಡುವುದು. ಕೆಲವು ದಿನ ವ್ಯಾಯಮ, ಕೆಲವು ದಿನ ಅವ್ಯಾಯಮ; ಅತಿ ತಂಪಾದ ವಾತಾವರಣದಲ್ಲಿ, ಅಥವಾ ಫ್ಯಾನ್ ಹಾಕಿಕೊಂಡು ವ್ಯಾಯಾಮ ಮಾಡುವುದು. ವ್ಯಾಯಾಮ ಮಾಡಿದ ತಕ್ಷಣ ತಂಪು ಪಾನೀಯ ಅಥವಾ ಅತಿ ತಂಪಾದ ನೀರಿನ ಸೇವನೆ. ಅಥವಾ ವ್ಯಾಯಾಮ ಮಾಡಿದ ಕೂಡಲೆ ತಂಪಾದ ನೀರಿನಲ್ಲಿ ಸ್ನಾನ ಮಾಡುವುದು.

*ಮೈಗೆ ಎಣ್ಣೆ ಹಚ್ಚದೆ ಇರುವುದು. ಎಣ್ಣೆ ಹಚ್ಚದೆ ಅತಿ ಬಿಸಿ ನೀರಿನಲ್ಲಿ ಸ್ನಾನ, ಬಿಸಿಲಿನಲ್ಲಿ ಹೆಚ್ಚಾಗಿ ತಿರುಗುವುದು, ಆಹಾರ ಸೇವಿಸದೆ ಬಿಸಿಲಿನಲ್ಲಿ ತಿರುಗುವುದು.

*ಹೊಟ್ಟೆಯಲ್ಲಿ ಆಹಾರ ಜೀರ್ಣವಾಗುವ ಮೊದಲೇ ಸ್ನಾನ ಅಥವಾ ವ್ಯಾಯಾಮ ಮಾಡುವುದು.

*ರಾತ್ರಿ ನಿದ್ರೆಗೆಡುವುದು. ಹಗಲು ತಡವಾಗಿ ಏಳುವುದು.

ಈ ಮೇಲಿನ ಯಾವ ಕಾರಣದಿಂದ ನೋವುಂಟಾಗುತ್ತಿದೆ ಎಂಬುದನ್ನು ಗಮನಿಸಿ ಆ ಕಾರಣಗಳ ತ್ಯಾಗವೇ ಮೊದಲನೆಯ ಚಿಕಿತ್ಸೆ. ಬೆಳಗ್ಗೆ ಸೂರ್ಯೋದಯದ ಮೊದಲೇ ಏಳುವುದು, ಬೆವರು ಬರುವಷ್ಟು ವ್ಯಾಯಾಮ, ನಿತ್ಯ ಅಭ್ಯಂಗ, ಹದವಾದ ಬಿಸಿನೀರಿನಲ್ಲಿ ಸ್ನಾನ ಬೆಳಗಿನ ಆಹಾರಸೇವನೆಗೆ ಮೊದಲೇ ಸ್ನಾನ ಮಾಡುವುದು. ಸಕಾಲದಲ್ಲಿ ಬಿಸಿಯಾದ, ಬೇಯಿಸಿದ ಆಹಾರ, ಬಿಸಿನೀರನ್ನು ಸೇವಿಸುವುದರಿಂದ ಸಂದುನೋವನ್ನು ತಡೆಗಟ್ಟಬಹುದು. ವಿಪರೀತ ನೋವಿದ್ದವರು ಜೀರಿಗೆ, ಇಂಗು, ಕರ್ಪೂರಗಳನ್ನು ಹಾಕಿ ಬಿಸಿಮಾಡಿದ ಎಣ್ಣೆಯನ್ನು ಸಂದುಗಳಿಗೆ ಸವರುವುದರಿಂದ ಸ್ವಲ್ಪಮಟ್ಟಿಗೆ ನೋವನ್ನು ತಡೆಗಟ್ಟಬಹುದು.

ಹೀಗೆ ನಮ್ಮ ದಿನಚರಿಯಲ್ಲಿಯ ಆಹಾರ ವ್ಯತ್ಯಾಸಗಳಿಂದ ದೇಹಧಾತುಗಳ ಪೋಷಣೆಯು ವ್ಯತ್ಯಾಸವಾಗಿ, ರಕ್ತದಲ್ಲಿ ಅನೇಕ ವಿಕೃತಿಗಳು ಉತ್ಪತ್ತಿಯಾಗಿ ಸಂದುಗಳ ವಿಕೃತಿಗೆ ಕಾರಣವಾಗುತ್ತವೆ. ಇನ್ನು ಕೆಲವೊಮ್ಮೆ ಇತರೆ ರೋಗಗಳ ಪ್ರಭಾವದಿಂದ, ಎಂದರೆ ಮಧುಮೇಹ, ಹೆಂಗಸರಲ್ಲಿ ಮುಟ್ಟು ನಿಲ್ಲುವಾಗ – ಹೀಗೆ ಬೇರೆ ಬೇರೆ ರೋಗಗಳ ಕಾರಣದಿಂದ ಸಂದುನೋವು ಬರಬಹುದು. ಆಯಾಯ ರೋಗಗಳ ಚಿಕಿತ್ಸೆ ಸರಿಯಾಗಿ ಆದರೆ ಸಂದುನೋವು ಗುಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT