ಮಂಗಳವಾರ, ಫೆಬ್ರವರಿ 25, 2020
19 °C

ಮಧುಮೇಹಿಗಳು ಹಣ್ಣು ತಿನ್ನಬಹುದೇ?

ಡಾ.ಟಿ.ಎಸ್‌.ತೇಜಸ್‌ Updated:

ಅಕ್ಷರ ಗಾತ್ರ : | |

Prajavani

ಮಧುಮೇಹಿಗಳು ಹಣ್ಣು ತಿನ್ನಬಾರದು ಎಂಬ ತಪ್ಪು ನಂಬಿಕೆ ಹಲವರಲ್ಲಿದೆ. ಇದಕ್ಕೆ ಕಾರಣ ಹಣ್ಣುಗಳಲ್ಲಿ ಸಿಹಿ ಅಂಶ ಇರುವುದು. ಆದರೆ ಹಣ್ಣುಗಳಲ್ಲಿರುವ ಕಾರ್ಬೊಹೈಡ್ರೇಟ್ ಪ್ರಮಾಣವನ್ನು ಅರಿತುಕೊಂಡರೆ ಎಷ್ಟು ತಿನ್ನಬೇಕು ಎಂಬುದನ್ನು ರೋಗಿಗಳೇ ನಿರ್ಧರಿಸಬಹುದು. 

ಮಧುಮೇಹ ಇರುವವರಿಗೆ ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವುದೇ ಚಿಂತೆ. ಅದರಲ್ಲೂ ಅವರು ಸೇವಿಸುವ ಕಾರ್ಬೊಹೈಡ್ರೇಟ್ಸ್‌ ರಕ್ತದಲ್ಲಿರುವ ಗ್ಲೂಕೋಸ್‌ ಮಟ್ಟದ ಮೇಲೆ ನೇರ ಪರಿಣಾಮ ಬೀರುವುದರಿಂದ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಯಾವುದೇ ನಾರಿನಂಶ ಅಥವಾ ಸ್ವಲ್ಪ ನಾರಿನಂಶವಿರುವ ಕಾರ್ಬ್‌ ಉದಾಹರಣೆಗೆ ಬ್ರೆಡ್‌, ಪಾಸ್ತಾ ಅಂತಹ ತಿನಿಸುಗಳನ್ನು ನೀವು ಸೇವಿಸಿದ ಎರಡು ತಾಸಿನ ನಂತರ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷಿಸಿ ನೋಡಿ, ಅದು ಸರ‍್ರನೆ ಮೇಲೇರಿರುತ್ತದೆ. ಹಾಗಾದರೆ ಹಣ್ಣು ತಿನ್ನಬಹುದೇ ಎಂಬುದು ಮಧುಮೇಹಿಗಳ ಪ್ರಶ್ನೆ.

ಹಣ್ಣುಗಳು ವಿಟಮಿನ್‌, ಖನಿಜಾಂಶ ಹಾಗೂ ನಾರಿನ ಆಗರ. ಆದರೆ ಅದರಲ್ಲಿರುವ ನೈಸರ್ಗಿಕ ಸಕ್ಕರೆ ಹಣ್ಣುಗಳನ್ನು ಕೂಡ ಕಾರ್ಬೊಹೈಡ್ರೇಟ್‌ ವರ್ಗಕ್ಕೆ ಸೇರಿಸುತ್ತದೆ. ಹೀಗಾಗಿಯೇ ಬಹುತೇಕ ಮಧುಮೇಹಿಗಳು ಹಣ್ಣಿನಿಂದ ದೂರವೇ ಉಳಿದು ಬಿಡುತ್ತಾರೆ. ಹೀಗೆ ಮಾಡುವುದು ತರವಲ್ಲ. ನಿತ್ಯ ನೀವು ತಿನ್ನುವ ಹಣ್ಣಿನ ಚೂರುಗಳ ಪ್ರಮಾಣ, ವೈವಿಧ್ಯ, ಒಂದೇ ಬಾರಿ ತಿನ್ನುವ ರೀತಿ ಇವುಗಳನ್ನೆಲ್ಲ ನಿಯಂತ್ರಿಸಿದರೆ ಯಾವುದೇ ತೊಂದರೆಯಿಲ್ಲ. ಜೊತೆಗೆ ನಿಮ್ಮ ದೇಹವನ್ನು ಸೇರುವ ಕಾರ್ಬೊಹೈಡ್ರೇಟ್‌ ಪ್ರಮಾಣವನ್ನು ಲೆಕ್ಕ ಹಾಕುವ ರೀತಿ ತಿಳಿದುಕೊಂಡರೆ ಖಂಡಿತ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು.

ಸರಳ ಪ್ರೊಟೀನ್‌, ಇಡಿ ಧಾನ್ಯ, ತರಕಾರಿ ಮತ್ತು ಹಣ್ಣಿರುವ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವಾಗ ಒಂದು ಸಲ ಎಷ್ಟು ಕಾರ್ಬ್‌ ತಿನ್ನಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಜೊತೆಗೆ ಕ್ಯಾಲೊರಿ ಹಾಗೂ ಕೊಬ್ಬು ಕೂಡ ನಿಗಾ ಪಟ್ಟಿಯಲ್ಲಿ ಬರುತ್ತದೆ. ಆದರೆ ಕಾರ್ಬ್‌ ತಿನ್ನುವಾಗ ಮಾತ್ರ ಡಯಟ್‌ ಅನುಸರಿಸುವುದು ಕಡ್ಡಾಯ. ಅಂದರೆ ನಿತ್ಯ ಅದೇ ಸಮಯದಲ್ಲಿ, ಅದೇ ಮೊತ್ತದ ಕಾರ್ಬ್‌ ಇರಲಿ. ಅಂದರೆ ಊಟದಲ್ಲಿ 50 ಗ್ರಾಂ ಕಾರ್ಬ್‌ ಇರಲಿ ಎಂದು ವೈದ್ಯರು ಶಿಫಾರಸು ಮಾಡಿದರೆ, ನಿತ್ಯ ಊಟದಲ್ಲಿ ಅಷ್ಟೇ ಪ್ರಮಾಣದ ಕಾರ್ಬ್‌ ನಿಮ್ಮ ಹೊಟ್ಟೆ ಸೇರಬೇಕು. ಆದರೆ ಆಹಾರದಲ್ಲಿ ವೈವಿಧ್ಯತೆ ಇರಲಿ.

ಆರೋಗ್ಯಕರ ಡಯಟ್‌ನಲ್ಲಿ ಹಣ್ಣುಗಳು ಸೇರಿರುತ್ತವೆ. ವಿಟಮಿನ್‌, ನಾರಿನಂಶ, ಖನಿಜಾಂಶಗಳ ಜೊತೆಗೆ ಆ್ಯಂಟಿಆಕ್ಸಿಡೆಂಟ್‌ ಇರುವ ಹಣ್ಣುಗಳು ಕಡಿಮೆ ಕ್ಯಾಲೊರಿಯುಕ್ತ ಆಹಾರ. ಕೊಬ್ಬುರಹಿತ ಎನ್ನಬಹುದು. ನಿತ್ಯ ಮೂರು ಬಾರಿ ಹಣ್ಣು ಸೇವಿಸಬಹುದು. ಹಣ್ಣಿನ ಹೋಳುಗಳ ಜೊತೆ ಸಣ್ಣ ಪ್ರಮಾಣದಲ್ಲಿ ಪ್ರೊಟೀನ್‌ ಸೇರಿಸಿಕೊಂಡು ತಿನ್ನಬಹುದು. ಅಂದರೆ ಬಾದಾಮಿ, ಕೆನೆರಹಿತ ಮೊಸರು.. ಹೀಗೆ. ಆದರೆ ಹಣ್ಣಿನ ರಸ ಕುಡಿಯಬೇಡಿ. ಹಾಗೆಯೇ ಕೆಲವು ಹಣ್ಣುಗಳು ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ ಏರಿಸುವುದರಿಂದ ಅವುಗಳನ್ನು ತಿನ್ನದಿರುವುದು ಒಳಿತು.

ಹಣ್ಣು ಮತ್ತು ಕಾರ್ಬ್‌: ಸೇಬು– ಮೂರು ಚೂರು (ಕಾರ್ಬ್‌– 30 ಗ್ರಾಂ), ಬಾಳೆಹಣ್ಣು- ಮಧ್ಯಮ ಗಾತ್ರದ ಒಂದು ಹಣ್ಣು (27 ಗ್ರಾಂ), ಕಲ್ಲಂಗಡಿ– ಒಂದು ಚೂರು (22 ಗ್ರಾಂ), ಕಿತ್ತಳೆ ಮೂರು ತೊಳೆ (22 ಗ್ರಾಂ), ದ್ರಾಕ್ಷಿ – 1 ಕಪ್‌ (16 ಗ್ರಾಂ), ಅನಾನಸ್‌ ಮೂರು ಚೂರು (11 ಗ್ರಾಂ)

ಮಾವಿನ ಹಣ್ಣು, ಹಲಸಿನ ಹಣ್ಣು, ಸೀತಾಫಲ ಅಪರೂಪಕ್ಕೊಮ್ಮೆ ತಿನ್ನಬಹುದು. ಆದರೆ ಆಗ
ಕಾರ್ಬ್‌ ಕಡಿಮೆ ಇರುವ ಆಹಾರವನ್ನು ತಿನ್ನಬೇಕು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು