‘ಮನೆದೇವ್ರ ಪೂಜೆಗೆ ಹೊರಟಿದ್ದೇವೆ ಡಾಕ್ಟ್ರೇ.. ಅದೇ ಸಮಯಕ್ಕೆ ಮುಟ್ಟಿನ ದಿನ ಬರತ್ತೆ. ಮುಂದೆ ಹೋಗಕ್ಕೆ ಮಾತ್ರೆ ಬರೆದುಕೊಡಿ’ ಎಂದೋ ‘ಮುಂದಿನ ವಾರ ನಮ್ಮಕ್ಕನ ಮಗಳ ಮದುವೆ. ಆಗಲೇ ಪಾಳಿ ಬಂದು ಬಿಡ್ತದೋ ಏನೋ..!’ ಎಂಬ ಅಳಲಲ್ಲಿಯೋ ಅನೇಕ ಮಹಿಳೆಯರು ವೈದ್ಯರ ಸಲಹೆಗೆ ಬರುವುದುಂಟು. ತಾವಾಗಿಯೇ ಔಷಧ ಅಂಗಡಿಗಳಿಂದ ಗುಳಿಗೆ ತೆಗೆದುಕೊಂಡು ತೊಂದರೆಗೊಳಗಾಗುವುದೂ ಇದೆ. ಈ ನಿಟ್ಟಿನಲ್ಲಿ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು, ತಪ್ಪು ತಿಳಿವಳಿಕೆಗಳು, ಪರಿಹಾರಗಳು ಇಲ್ಲಿವೆ.
ಮುಟ್ಟನ್ನು ಮುಂದೂಡುವ ಮಾತ್ರೆ ಸೇವಿಸಬಹುದೇ?
ಅಪರೂಪಕ್ಕೆ, ಅನಿವಾರ್ಯವಾದಾಗ, ವೈದ್ಯರ ಸಲಹೆಯ ಮೇರೆಗೆ, ಸುರಕ್ಷಿತ ಡೋಸೇಜ್‌ನಲ್ಲಿ ಸೇವಿಸಬಹುದು. ಆದರೆ ಅದೇ ರೂಢಿಯಾಗದಿರಲಿ.
ಯಾವೆಲ್ಲ ಔಷಧಗಳು ಲಭ್ಯವಿವೆ?
ನಾರೆಥಿಸ್ಟೀರೋನ್ ಎಂಬ ಔಷಧ ಮೂರು ಹೊತ್ತಿಗೆ 5 ಮಿಲಿ ಗ್ರಾಂ ಡೋಸ್‌ನಲ್ಲಿ ಪರಿಣಾಮಕಾರಿ ಹಾಗೂ ಕಡಿಮೆ ಅಡ್ಡ ಪರಿಣಾಮಗಳೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಮುಟ್ಟು ಬರಬಹುದಾದ ಮೂರರಿಂದ ಐದು ದಿನಗಳ ಮೊದಲಿಂದ ಪ್ರಾರಂಭಿಸಬೇಕು ಹಾಗೂ ನಿಲ್ಲಿಸಿದ ಒಂದು ವಾರದೊಳಗೆ ಸ್ರಾವ ಕಾಣಿಸುವುದು. ಮೆಡ್ರೊಕ್ಸಿಪ್ರೊಜೆಸ್ಟಿರೋನ್ ಎಸಿಟೇಟ್ 10 ಮಿಲಿ ಗ್ರಾಂ ಡೋಸ್‌ನಲ್ಲಿ ದಿನಕ್ಕೆ ಎರಡು ಹೊತ್ತು ಅಪೇಕ್ಷಿತ ದಿನದವರೆಗೆ ಸೇವಿಸಬಹುದು. ಗರ್ಭನಿರೋಧಕ ಗುಳಿಗೆಗಳನ್ನೂ ಈ ಉದ್ದೇಶಕ್ಕೆ ಬಳಸಬಹುದು
ಈ ಯಾವುದೇ ಔಷಧವನ್ನಾದರೂ ವೈದ್ಯರ ಸಲಹೆಯ ಮೇರೆಗೇ ಬಳಸಬೇಕಲ್ಲದೇ ಸ್ವಯಂ ವೈದ್ಯ ಸರ್ವಥಾ ಸಲ್ಲದು.
ಇವುಗಳಿಂದ ಅಡ್ಡಪರಿಣಾಮಗಳಿಲ್ಲವೇ?
ಮಾನಸಿಕ ಸ್ಥಿತಿಯಲ್ಲಿ ಏರಿಳಿತಗಳು, ಮೊಡವೆ, ಚರ್ಮದ ತೊಂದರೆಗಳು, ಮೈ ಭಾರವೆನ್ನಿಸುವುದು ಇವೇ ಮುಂತಾದ ಸಣ್ಣಪುಟ್ಟ ತೊಂದರೆಗಳಾಗಬಹುದು. ಕೆಲವೊಮ್ಮೆ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯಂತಹ ತೀವ್ರ ಪರಿಣಾಮಗಳೂ ಆಗಬಹುದು. ಅನಿಯಮಿತ ಮಾಸಿಕ ಸ್ರಾವ ಇರುವವರಲ್ಲಿ, ಶೇ 10ರಷ್ಟು ಮಹಿಳೆಯರಲ್ಲಿ ಒಂದೆರಡು ಮಾತ್ರೆಗಳಲ್ಲಿಯೇ ಸ್ರಾವ ಆರಂಭವಾಗಿಬಿಡಬಹುದು.
ಬೇರೆಯವರಿಗೆ ಸಲಹೆ ಮಾಡಿದ ಮಾತ್ರೆಗಳನ್ನು ನಾವಾಗಿಯೇ ಸೇವಿಸುವುದು ಈ ಕಾರಣಕ್ಕಾಗಿ ಸೂಕ್ತವಲ್ಲ. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿಯಾದುದು. ಅಂತೆಯೇ ಪದೇ ಪದೇ ಸೇವನೆ ಮಾಡುವುದರಿಂದ ಹಾರ್ಮೋನ್‌ಗಳ ವ್ಯತ್ಯಾಸವಾಗಬಹುದು. ತೀವ್ರ ಪರಿಣಾಮಗಳಾಗಬಹುದು.
ಹೆಣ್ಣುಮಕ್ಕಳು ಆಟೋಟಗಳಲ್ಲಿ ಭಾಗವಹಿಸುವಾಗ ಅಪರೂಪಕ್ಕೆ ಸೇವನೆ ಮಾಡಿದರೆ ಮುಂದೆ ಸಂತಾನೋತ್ಪತ್ತಿಗೆ ಅಡ್ಡಿಯಾದೀತೇ?
ಮುಂದೆ ಮಕ್ಕಳಾಗಲು ತೊಂದರೆಯಾಗುವ ಬಗ್ಗೆ ಯಾವುದೇ ಪುರಾವೆ ಅಥವಾ ಅಧ್ಯಯನಗಳಿಲ್ಲ..
ಇದನ್ನೂ ಓದಿ: ಎಚ್ಐವಿ: ರೋಗನಿರೋಧಕ ಶಕ್ತಿಗೆ ಸಮತೋಲಿತ ಆಹಾರ
ಎದೆಹಾಲು ಕುಡಿಸುವ ತಾಯಂದಿರು ಸೇವಿಸಬಹುದೇ?
ಮೇಲೆ ತಿಳಿಸಿದ ಪ್ರಮಾಣದಲ್ಲಿ ವೈದ್ಯರ ಸಲಹೆಯೊಂದಿಗೆ ಸೇವಿಸಿದಾಗ ಶಿಶುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಈ ಸಮಯದಲ್ಲಿ ಎದೆಹಾಲಿನ ಉತ್ಪತ್ತಿ ಕಡಿಮೆಯಾದ ಉದಾಹರಣೆಗಳಿವೆ.
ಯಾರಾದರೂ ಈ ಬಗೆಯ ಗುಳಿಗೆಗಳನ್ನು ಸೇವಿಸಲೇಬಾರದೆಂದಿದೆಯೇ?
* ಗರ್ಭಿಣಿಯಾಗಿರುವ ಸಾಧ್ಯತೆಯಿದ್ದಲ್ಲಿ
* ಯಕೃತ್ತಿನ ತೊಂದರೆಯಿದ್ದಲ್ಲಿ
* ತುಂಬ ಬೊಜ್ಜಿರುವವರು
* ಈ ಹಿಂದೆ ರಕ್ತ ಹೆಪ್ಪುಗಟ್ಟುವ ತೊಂದರೆ ಇದ್ದವರು
* ಕುಟುಂಬದಲ್ಲಿ ಈ ಬಗೆಯ ತೊಂದರೆ ಇದ್ದವರು
* ಓಡಾಡಲು ಸಾಧ್ಯವಾಗದ/ ಗಾಲಿಕುರ್ಚಿಗಳಲ್ಲಿ ಇರುವಂಥವರು
* ಥ್ರೋಂಬೊಫಿಲಿಯಾದಂತಹ ರೋಗಪೀಡಿತರು
* ಮುಟ್ಟನ್ನು ಮುಂದೂಡುವ ಗುಳಿಗೆಗಳಿಂದ ದೂರವಿರುವುದು ಉತ್ತಮ.
* ಮಾತ್ರೆಗಳು ಹೇಗೆ ಕೆಲಸ ಮಾಡುತ್ತವೆ?
ಗರ್ಭಕೋಶದ ಒಳಪದರದಲ್ಲಿ ಈಸ್ಟ್ರೋಜನ್ ರಿಸೆಪ್ಟರ್‌ಗಳನ್ನು ಕಡಿಮೆ ಮಾಡುವುದರಿಂದ ಸ್ರಾವವಾಗುವುದನ್ನು ತಡೆಯುತ್ತವೆ.
ಮಾತ್ರೆಗಳಿಗೆ ಪರ್ಯಾಯವಿಲ್ಲವೇ?
ಗರ್ಭಕೋಶದ ಕೊರಳಿಗೆ ತೊಡಿಸುವಂತಹ ಮೆನುಸ್ಟ್ರುವಲ್ ಕಪ್ ಬಳಕೆ ರೂಢಿಸಿಕೊಂಡರೆ ಪ್ರಯಾಣಕ್ಕೆ, ಆಟೋಟಗಳಿಗೆ ಅಂತಹ ಅಡ್ಡಿಯಾಗುವುದಿಲ್ಲ.
ಮುಟ್ಟನ್ನು ಮುಂದೂಡುವ ಬದಲು ಮೊದಲೇ ಆಗುವಂತೆ ಮಾಡಬಹುದೇ?
ಇದಕ್ಕೆ ಪ್ರತ್ಯೇಕ ಮಾತ್ರೆಗಳಿಲ್ಲ. ಅದರ ಬದಲು ಹಿಂದಿನ ಮಾಸಿಕ ಚಕ್ರದಲ್ಲಿ ಮೊದಲೇ ಹತ್ತು ದಿನ ಪ್ರೊಜೆಸ್ಟೋಜನ್ ಮಾತ್ರೆಗಳನ್ನು ನೀಡಿ ನಿಲ್ಲಿಸಿ ಮೊದಲೇ ಮುಟ್ಟು ಬರುವಂತೆ ಮಾಡಬಹುದಷ್ಟೇ.
(ಲೇಖಕಿ ತಜ್ಞ ವೈದ್ಯೆ, ತಾಲ್ಲೂಕು ಆಸ್ಪತ್ರೆ, ಯಲ್ಲಾಪುರ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.