ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಸಂತ್ರಸ್ತರೇ ಎಚ್ಚರವಾಗಿರಿ

Last Updated 20 ಜೂನ್ 2022, 19:45 IST
ಅಕ್ಷರ ಗಾತ್ರ

ಜೂನ್‌ ತಿಂಗಳ ಮೊದಲ ಭಾನುವಾರ (ಜೂನ್‌ 5) ವಿಶ್ವದಾದ್ಯಂತ ಕ್ಯಾನ್ಸರ್‌ ಸಂತ್ರಸ್ತರ ದಿನವೆಂದು ಆಚರಿಸಲಾಯಿತು. ಕ್ಯಾನ್ಸರ್‌ ಸಂತ್ರಸ್ತರು ಎಂದರೆ ಕ್ಯಾನ್ಸರ್‌ ಬಂಧನದಿಂದ ಹೊರಬಂದವರು, ಕ್ಯಾನ್ಸರ್‌ನಿಂದ ಮುಕ್ತಗೊಂಡವರು ಎಂದರ್ಥ.

ಕ್ಯಾನ್ಸರ್‌ ಸಂತ್ರಸ್ತರು ಎರಡು ಬಗೆಯಲ್ಲಿ ಕಾಣಸಿಗುತ್ತಾರೆ. ಒಂದು ಬಗೆಯವರು ಹೇಗೆಂದರೆ, ಕ್ಯಾನ್ಸರ್‌ನಿಂದ ಮುಕ್ತಗೊಂಡು ಸಹಜ ಜೀವನಕ್ಕೆ ಮರಳಿದರೂ ತಮಗೆ ಕ್ಯಾನ್ಸರ್‌ ಆಗಿತ್ತು ಎನ್ನುವುದನ್ನು ಎಲ್ಲಿಯೂ ತೋರಿಸಿಕೊಳ್ಳಲು ಬಯಸುವುದಿಲ್ಲ. ಅಸಲಿಗೆ ಅಂಥವರಲ್ಲಿ ಸಾಧಕರೂ ಇರುತ್ತಾರೆ. ಆದರೂ ತಮ್ಮ ಕ್ಯಾನ್ಸರ್‌ ದಿನಗಳನ್ನು ಮುಚ್ಚಿಡಲು ಬಯಸುತ್ತಾರೆ. ಇಂಥ ಮನೋಭಾವ ಯಾಕೆ ಎನ್ನುವುದು ಪ್ರಶ್ನಾರ್ಥಕ.

ಇನ್ನೊಂದು ಬಗೆಯ ಕ್ಯಾನ್ಸರ್‌ ಸಂತ್ರಸ್ತರು ಎಂದರೆ ಅವರು ಕ್ಯಾನ್ಸರ್‌ನಿಂದ ಗುಣಮುಖರಾದ ಮೇಲೆ ಕ್ಯಾನ್ಸರ್ ರೋಗಿಗಳಿಗೆ ದಾರಿದೀಪವಾಗುತ್ತಾರೆ. ಕ್ಯಾನ್ಸರ್‌ ರೋಗಿಗಳ ಪಾಲಿಗೆ ಮಾದರಿಯಾಗುತ್ತಾರೆ. ಅಂಥ ಅದೆಷ್ಟೋ ಸೆಲೆಬ್ರಿಟಿಗಳು ಅಲ್ಲಲ್ಲಿ ಕಾಣಸಿಗುತ್ತಾರೆ. ಅಂಥವರು ತಮಗೆ ಕ್ಯಾನ್ಸರ್‌ ಬಾಧಿಸಿತ್ತು ಎಂಬುದನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಅದರಿಂದ ಹೇಗೆ ಹೊರಬಂದೆವು ಎನ್ನುವುದನ್ನೂ ಮುಲಾಜಿಲ್ಲದೆ ವ್ಯಕ್ತಪಡಿಸುತ್ತಾರೆ. ಇಂಥವರು ಕ್ಯಾನ್ಸರ್‌ ರೋಗಿಗಳ ಪಾಲಿಗೆ ನಿಜಕ್ಕೂ ಆಶಾಕಿರಣವಾಗಿರುತ್ತಾರೆ.

ಕ್ಯಾನ್ಸರ್‌ ಸಂತ್ರಸ್ತರ ದಿನಾಚರಣೆ ಜೂನ್‌ ಮೊದಲ ಭಾನುವಾರವೊಂದಕ್ಕಷ್ಟೇ ಸೀಮಿತವಾಗಬಾರದು. ಅದು ಅನವರತವಾಗಿರುವುದು ಇಂದಿನ ಅಗತ್ಯ ಕೂಡ. ಮೊದಲೆಲ್ಲ ಕ್ಯಾನ್ಸರ್‌ ಅಂದರೆ ಸಾವು ಎನ್ನುವ ಭಯವಿತ್ತು. ಆದರೆ ಇಂದು ಆ ಭಯ ಮತ್ತು ಕ್ಯಾನ್ಸರ್‌ನ ರೋಗಿ ನಡುವೆ ಅಂತರ ಹೆಚ್ಚಾಗಿ ಬದುಕುವ ಭರವಸೆ ಮೂಡುತ್ತಿದೆ. ಆ ಭರವಸೆ ಹೀಗೆ ಮುಂದುವರಿದಲ್ಲಿ ಕ್ಯಾನ್ಸರ್‌ ರೋಗಿಗಳ ಸಾವಿನ ಪ್ರಮಾಣವೂ ಕಡಿಮೆಯಾಗಲಿದೆ.

ಬದಲಾದ ಜೀವನಶೈಲಿ, ಆಹಾರಕ್ರಮ, ವ್ಯಾಯಾಮರಹಿತ ಜೀವನ, ಕಲುಷಿತ ವಾತಾವರಣ, ಕಲಬೆರಕೆ ಆಹಾರಪದಾರ್ಥ – ಇವೆಲ್ಲವೂ ದಿನದಿಂದ ದಿನಕ್ಕೆ ಬಹುಬಗೆಯ ಕ್ಯಾನ್ಸರ್‌ಗಳು ಹೆಚ್ಚಲು ಕಾರಣವಾಗುತ್ತಿವೆ. ಒಮ್ಮೆ ಕ್ಯಾನ್ಸರ್‌ ಬಂದು ಗುಣಮುಖರಾದ ಮೇಲೂ ಮತ್ತೆ ಮರುಕಳಿಸದು ಎಂದು ಹೇಳಲಾಗದು. ಹಾಗೆ ಮರುಕಳಿಸದಿರುವಂತೆ ಕ್ಯಾನ್ಸರ್‌ ಸಂತ್ರಸ್ತರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯ. ಅದಕ್ಕೆ ಕ್ಯಾನ್ಸರ್‌ ಸಂತ್ರಸ್ತರು ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸುವುದು ಅಗತ್ಯ.

ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ನೀಡುವ ಸರ್ಜರಿ, ಕಿಮೊಥೆರಪಿ, ರೆಡಿಯೇಷನ್‌ ಅಡ್ಡಪರಿಣಾಮಗಳಿಂದ ಅಕ್ಷರಶಃ ಜರ್ಜರಿತವಾಗುವ ದೇಹ, ಮನಸ್ಸಿಗೆ ಚೈತನ್ಯ ನೀಡುವತ್ತ ವಿಶೇಷ ಗಮನ ಹರಿಸಲೇಬೇಕು. ಕ್ಯಾನ್ಸರ್‌ ಚಿಕಿತ್ಸೆ ನಂತರ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುವುದು ಸಹಜ. ಎಲುಬಿನ ಸಾಂದ್ರತೆ ಕಳೆದುಕೊಳ್ಳುವುದು, ಕ್ಯಾಲ್ಸಿಯಂ ಕೊರತೆ, ಹಾರ್ಮೊನ್‌ ಏರುಪೇರು – ಇವೆಲ್ಲವುಗಳನ್ನು ಮತ್ತೆ ತಹಃಬದಿಗೆ ತಂದುಕೊಳ್ಳಲು ಪಣತೊಡಬೇಕು. ಅದಕ್ಕಾಗಿ ವೈದ್ಯರು ಕೊಡುವ ಮುಷ್ಟಿಗಟ್ಟಲೆ ಗುಳಿಗೆಗಳನ್ನು ನುಂಗುವ ಬದಲು ಪ್ರಾಕೃತಿಕವಾಗಿ ಲಭ್ಯ ಮಾರ್ಗಗಳನ್ನು ಅನುಸರಿಸುವುದು ಉತ್ತಮ.

ಮಾಡಬೇಕಾದದಿಷ್ಟೆ: ಬೆಳಿಗ್ಗೆ ಎದ್ದ ಕೂಡಲೆ ಶೌಚ ಮುಗಿಸಿ, ಹಲ್ಲುಜ್ಜಿದ ನಂತರ ಬೆಚ್ಚಗಿನ ನೀರಿಗೆ ಅರ್ಧ ಲಿಂಬು ಹಿಂಡಿ ಕುಡಿದು, ಡ್ರೈಫ್ರುಟ್ಸ್‌ ತಿಂದು ಎಳೆಬಿಸಿಲಲ್ಲಿ ಒಂದು ಅರ್ಧ ತಾಸು ಅಡ್ಡಾಡಿದರೆ ಎಳೆ ಬಿಸಿಲಿನಿಂದ ವಿಟಾಮಿನ್‌ ಡಿ ನಮಗೆ ಸುಲಭವಾಗಿ ದಕ್ಕಲಿದೆ. ನಂತರ ಸ್ವಲ್ಪ ಹೊತ್ತು ಲಘು ವ್ಯಾಯಾಮ, ಪ್ರಾಣಾಯಾಮ, ಯೋಗ ಹಾಗೂ ಕನಿಷ್ಠ ಐದು ನಿಮಿಷದ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಹೇಗಿರಬೇಕೆಂದರೆ ಇವತ್ತು ಮಾಡಿ, ನಾಳೆ ಬಿಟ್ಟು, ಮುಂದೆ ಯಾವಾಗಲಾದರೂ ಮಾಡಿದರಾಯ್ತು ಅನ್ನುವಂತಿರಬಾರದು. ಊಟ, ನಿದ್ದೆಯಂತೆ ಯೋಗ, ಧ್ಯಾನ, ನಡಿಗೆಗೆ ನಾವು ಆಡಿಕ್ಟ್‌ ಆಗಬೇಕು. ಧ್ಯಾನದಿಂದ ಮನಸ್ಸಿನ ಚಾಂಚಲ್ಯ ದೂರವಾಗಿ, ಮನದಲ್ಲಿ ಸಕಾರಾತ್ಮಕ ಭಾವ ಮೂಡಲಿದೆ. ನಡಿಗೆಯಿಂದ ದೇಹ–ಮನಸ್ಸುಗಳು ಉಲ್ಲಸಿತಗೊಳ್ಳಲಿವೆ. ಯೋಗದಿಂದ ಆರೋಗ್ಯ ವೃದ್ಧಿಸಲಿದೆ. ಪ್ರಾಣಾಯಾಮ ಅಗತ್ಯ ಆಮ್ಲಜನಕವನ್ನು ಪೂರೈಸುತ್ತದೆ. ಮನಸ್ಸು ಯಾವಾಗ ಭಯದಿಂದ ದೂರವಿರಲಿದೆಯೋ ಆಗ ದೇಹ, ಮನಸ್ಸು ಎರಡೂ ಸ್ವಸ್ಥ, ಸುಂದರವಾಗಿರಬಲ್ಲದು.

ಧ್ಯಾನ ಮಾಡುವಾಗ ನಮ್ಮ ಮನಸ್ಸು ಹೇಗಿರಬೇಕೆಂದರೆ ಮುತ್ತುಗದ ಬೀಜ ಗಾಳಿಯಲ್ಲಿ ಹೇಗೆ ತೇಲಲಿದೆಯೋ ಹಾಗಿರಬೇಕು. ನಿರ್ಮಲ ನೀರಿನ ತೊರೆಯ ಹರಿವಿನಂತಿರಲಿ. ಮನಸ್ಸನ್ನು ಆಗಾಗಾ ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಇದು ಸಾಧ್ಯ. ಆದಷ್ಟು ಸಂತಸದಾಯಕವಾಗಿರಲಿ. ಅದಕ್ಕಾಗಿ ಮನದಲ್ಲಿ ಸಕಾರಾತ್ಮಕ ಭಾವವಿರಲಿ. ಚಿಂತೆ ಬದಲು ಚಿಂತನೆಗಳೇ ತುಂಬಿರಲಿದೆ. ಚಿಂತನೆಗಳಿಂದ ಮನಸ್ಸು ಚೈತನ್ಯಪೂರ್ಣವಾಗಲಿದೆ. ಯಾವಾಗ ಮನಸ್ಸು ಚೇತೋಹಾರಿಯಾಗಿರುವುದೋ ಆಗ ದೇಹ ಕೂಡ ಚೈತನ್ಯದಾಯಕವಾಗಲಿದೆ. ಮನಸ್ಸು, ದೇಹಕ್ಕೆ ಚೈತನ್ಯ ತುಂಬಲು ವಿಶ್ವ ಯೋಗದಿನದಂದು ಮುನ್ನುಡಿ ಬರೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT